ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 172
ಸಾರ
ಮರುದಿನ ಅರ್ಜುನನು ದಿವ್ಯಾಸ್ತ್ರಗಳನ್ನು ತೋರಿಸಲು ತೊಡಗಿದಾಗ, ಬ್ರಹ್ಮಾದಿ ದೇವತೆಗಳು ಅವನನ್ನು ತಡೆದುದು (1-24).
03172001 ವೈಶಂಪಾಯನ ಉವಾಚ।
03172001a ತಸ್ಯಾಂ ರಜನ್ಯಾಂ ವ್ಯುಷ್ಟಾಯಾಂ ಧರ್ಮರಾಜೋ ಯುಧಿಷ್ಠಿರಃ।
03172001c ಉತ್ಥಾಯಾವಶ್ಯಕಾರ್ಯಾಣಿ ಕೃತವಾನ್ ಭ್ರಾತೃಭಿಃ ಸಹ।।
ವೈಶಂಪಾಯನನು ಹೇಳಿದನು: “ಆ ರಾತ್ರಿಯು ಕಳೆದ ಮೇಲೆ ಧರ್ಮರಾಜ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಎದ್ದು ಅವಶ್ಯ ಕಾರ್ಯಗಳನ್ನು ಪೂರೈಸಿದನು.
03172002a ತತಃ ಸಂಚೋದಯಾಮಾಸ ಸೋಽರ್ಜುನಂ ಭ್ರಾತೃನಂದನಂ।
03172002c ದರ್ಶಯಾಸ್ತ್ರಾಣಿ ಕೌಂತೇಯ ಯೈರ್ಜಿತಾ ದಾನವಾಸ್ತ್ವಯಾ।।
ನಂತರ ಅವನು ತನ್ನ ಪ್ರೀತಿಯ ತಮ್ಮ ಅರ್ಜುನನಿಗೆ ಸೂಚಿಸಿದನು: “ಕೌಂತೇಯ! ಯಾವ ಅಸ್ತ್ರಗಳಿಂದ ಆ ದಾನವರನ್ನು ಜಯಿಸಿದೆಯೋ ಆ ಅಸ್ತ್ರಗಳನ್ನು ತೋರಿಸು!”
03172003a ತತೋ ಧನಂಜಯೋ ರಾಜನ್ದೇವೈರ್ದತ್ತಾನಿ ಪಾಂಡವಃ।
03172003c ಅಸ್ತ್ರಾಣಿ ತಾನಿ ದಿವ್ಯಾನಿ ದರ್ಶಯಾಮಾಸ ಭಾರತ।।
ಭಾರತ! ರಾಜನ್! ಆಗ ಪಾಂಡವ ಧನಂಜಯನು ದೈವದತ್ತವಾದ ಆ ದಿವ್ಯಾಸ್ತ್ರಗಳನ್ನು ತೋರಿಸಿದನು.
03172004a ಯಥಾನ್ಯಾಯಂ ಮಹಾತೇಜಾಃ ಶೌಚಂ ಪರಮಮಾಸ್ಥಿತಃ।
03172004c ಗಿರಿಕೂಬರಂ ಪಾದಪಾಂಗಂ ಶುಭವೇಣು ತ್ರಿವೇಣುಕಂ।।
03172004e ಪಾರ್ಥಿವಂ ರಥಮಾಸ್ಥಾಯ ಶೋಭಮಾನೋ ಧನಂಜಯಃ।।
03172005a ತತಃ ಸುದಂಶಿತಸ್ತೇನ ಕವಚೇನ ಸುವರ್ಚಸಾ।
03172005c ಧನುರಾದಾಯ ಗಾಂಡೀವಂ ದೇವದತ್ತಂ ಚ ವಾರಿಜಂ।।
ಯಥಾನ್ಯಾಯವಾಗಿ ಆ ಮಹಾತೇಜಸ್ವಿಗಳು ಶೌಚವನ್ನು ಮುಗಿಸಿ ಉಪಸ್ಥಿತರಾಗಿರಲು, ಸುವರ್ಚಸ ಕವಚವನ್ನು ಧರಿಸಿ, ಗಾಂಡೀವಧನುಸ್ಸು ಮತ್ತು ಸಾಗರದಲ್ಲಿ ಜನಿಸಿದ ದೇವದತ್ತವನ್ನು ಹಿಡಿದು ಶೋಭಿಸುತ್ತಿರುವ ಧನಂಜಯನು ಗಿರಿಕೂಬರಗಳೇ ಕಾಲಕಂಭಗಳಾಗಿದ್ದ, ವೃಕ್ಷಗಳೇ ತ್ರಿವೇಣಿಗಳಾಗಿದ್ದ, ಬಿದಿರೇ ಧ್ವಜಕಂಬಗಳಾಗಿದ್ದ ಭೂಮಿಯ ರಥವನ್ನೇರಿದನು.
03172006a ಶೋಶುಭ್ಯಮಾನಃ ಕೌಂತೇಯ ಆನುಪೂರ್ವ್ಯಾನ್ಮಹಾಭುಜಃ।
03172006c ಅಸ್ತ್ರಾಣಿ ತಾನಿ ದಿವ್ಯಾನಿ ದರ್ಶನಾಯೋಪಚಕ್ರಮೇ।।
ಕಿರಣಗಳಿಂದ ತೋಯ್ದ ಮಹಾಭುಜ ಕೌಂತೇಯನು ಆ ದಿವ್ಯಾಸ್ತ್ರಗಳನ್ನು ಒಂದೊಂದಾಗಿ ಪ್ರದರ್ಶಿಸಲು ತೊಡಗಿದನು.
03172007a ಅಥ ಪ್ರಯೋಕ್ಷ್ಯಮಾಣೇನ ದಿವ್ಯಾನ್ಯಸ್ತ್ರಾಣಿ ತೇನ ವೈ।
03172007c ಸಮಾಕ್ರಾಂತಾ ಮಹೀ ಪದ್ಭ್ಯಾಂ ಸಮಕಂಪತ ಸದ್ರುಮಾ।।
ಆದರೆ ಅವನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು ತೊಡಗಿದಾಗ ಆಕ್ರಾಂತಗೊಂಡು ಅವನ ಕಾಲ್ಕೆಳಗಿನ ಭೂಮಿಯು ಮರಗಳೊಂದಿಗೆ ಕಂಪಿಸತೊಡಗಿತು.
03172008a ಕ್ಷುಭಿತಾಃ ಸರಿತಶ್ಚೈವ ತಥೈವ ಚ ಮಹೋದಧಿಃ।
03172008c ಶೈಲಾಶ್ಚಾಪಿ ವ್ಯಶೀರ್ಯಂತ ನ ವವೌ ಚ ಸಮೀರಣಃ।।
ನದಿಗಳು ಮತ್ತು ಹಾಗೆಯೇ ಸಾಗರಗಳು ಉಕ್ಕೆದ್ದು ಗಿರಿಗಳೂ ಕೂಡ ಮುಳುಗಿದವು. ಗಾಳಿಯು ಬೀಸಲಿಲ್ಲ.
03172009a ನ ಬಭಾಸೇ ಸಹಸ್ರಾಂಶುರ್ನ ಜಜ್ವಾಲ ಚ ಪಾವಕಃ।
03172009c ನ ವೇದಾಃ ಪ್ರತಿಭಾಂತಿ ಸ್ಮ ದ್ವಿಜಾತೀನಾಂ ಕಥಂ ಚನ।।
ಸೂರ್ಯನು ಕಾಣಲಿಲ್ಲ, ಅಗ್ನಿಯು ಉರಿಯಲಿಲ್ಲ. ದ್ವಿಜಾತಿಯವರಿಗೆ ವೇದಗಳೇ ಮನಸ್ಸಿಗೆ ಕಾಣಿಸಿಕೊಳ್ಳಲಿಲ್ಲ.
03172010a ಅಂತರ್ಭೂಮಿಗತಾ ಯೇ ಚ ಪ್ರಾಣಿನೋ ಜನಮೇಜಯ।
03172010c ಪೀಡ್ಯಮಾನಾಃ ಸಮುತ್ಥಾಯ ಪಾಂಡವಂ ಪರ್ಯವಾರಯನ್।।
ಜನಮೇಜಯ! ಭೂಮಿಯ ಒಳಗೆ ಜೀವಿಸುತ್ತಿದ್ದ ಪ್ರಾಣಿಗಳು ಪೀಡಿತರಾಗಿ ಮೇಲೆದ್ದು ಪಾಂಡವರನ್ನು ಸುತ್ತುವರೆದವು.
03172011a ವೇಪಮಾನಾಃ ಪ್ರಾಂಜಲಯಸ್ತೇ ಸರ್ವೇ ಪಿಹಿತಾನನಾಃ।
03172011c ದಹ್ಯಮಾನಾಸ್ತದಾಸ್ತ್ರೈಸ್ತೈರ್ಯಾಚಂತಿ ಸ್ಮ ಧನಂಜಯಂ।।
ಅವರೆಲ್ಲರೂ ನಡುಗುತ್ತಾ ಪ್ರಾಂಜಲಿಬದ್ಧರಾಗಿ ಮುಖವನ್ನು ಮುಚ್ಚಿಕೊಂಡು, ಆ ಅಸ್ತ್ರಗಳಿಂದ ಸುಡಲ್ಪಟ್ಟು ಧನಂಜಯನಲ್ಲಿ ಬೇಡಿಕೊಂಡವು.
03172012a ತತೋ ಬ್ರಹ್ಮರ್ಷಯಶ್ಚೈವ ಸಿದ್ಧಾಶ್ಚೈವ ಸುರರ್ಷಯಃ।
03172012c ಜಂಗಮಾನಿ ಚ ಭೂತಾನಿ ಸರ್ವಾಣ್ಯೇವಾವತಸ್ಥಿರೇ।।
03172013a ರಾಜರ್ಷಯಶ್ಚ ಪ್ರವರಾಸ್ತಥೈವ ಚ ದಿವೌಕಸಃ।
03172013c ಯಕ್ಷರಾಕ್ಷಸಗಂಧರ್ವಾಸ್ತಥೈವ ಚ ಪತತ್ರಿಣಃ।।
ಆಗ ಬ್ರಹ್ಮರ್ಷಿಗಳೂ, ಸಿದ್ಧರೂ, ಸುರಋಷಿಗಳೂ, ಚಲಿಸುವವೆಲ್ಲವೂ, ಶ್ರೇಷ್ಠ ರಾಜರ್ಷಿಗಳು, ದಿವೌಕಸರು, ಯಕ್ಷ, ರಾಕ್ಷಸ, ಗಂಧರ್ವರೂ, ಪಕ್ಷಿಗಳು ಕೂಡಿ ಇದ್ದಲ್ಲಿಯೇ ನಿಂತುಕೊಂಡವು.
03172014a ತತಃ ಪಿತಾಮಹಶ್ಚೈವ ಲೋಕಪಾಲಾಶ್ಚ ಸರ್ವಶಃ।
03172014c ಭಗವಾಂಶ್ಚ ಮಹಾದೇವಃ ಸಗಣೋಽಭ್ಯಾಯಯೌ ತದಾ।।
ಆಗ ಪಿತಾಮಹ, ಸರ್ವ ಲೋಕಪಾಲಕರೂ, ಭಗವಾನ್ ಮಹಾದೇವನೂ ಗಣಗೊಳಿಂದಿಗೆ ಅಲ್ಲಿಗೆ ಆಗಮಿಸಿದನು.
03172015a ತತೋ ವಾಯುರ್ಮಹಾರಾಜ ದಿವ್ಯೈರ್ಮಾಲ್ಯೈಃ ಸುಗಂಧಿಭಿಃ।
03172015c ಅಭಿತಃ ಪಾಂಡವಾಂಶ್ಚಿತ್ರೈರವಚಕ್ರೇ ಸಮಂತತಃ।।
03172016a ಜಗುಶ್ಚ ಗಾಥಾ ವಿವಿಧಾ ಗಂಧರ್ವಾಃ ಸುರಚೋದಿತಾಃ।
03172016c ನನೃತುಃ ಸಂಘಶಶ್ಚೈವ ರಾಜನ್ನಪ್ಸರಸಾಂ ಗಣಾಃ।।
ಮಹಾರಾಜ! ಆಗ ವಾಯುವು ಸುಗಂಧಯುಕ್ತ ದಿವ್ಯಮಾಲೆಗಳನ್ನು ಹಿಡಿದು ಪಾಂಡವರನ್ನು ಎಲ್ಲ ಕಡೆಗಳಿಂದ ಎದುರುಗೊಂಡನು. ಸುರರಿಂದ ಪ್ರೇರಿತಗೊಂಡು ಗಂಧರ್ವರು ವಿವಿಧ ಗಾಯನಗಳನ್ನು ಹಾಡಿದರು. ರಾಜನ್! ಅಪ್ಸರೆಯರ ಗಣಗಳೂ ಕೂಡ ಗುಂಪು ಗುಂಪಾಗಿ ನರ್ತಿಸಿದರು.
03172017a ತಸ್ಮಿಂಸ್ತು ತುಮುಲೇ ಕಾಲೇ ನಾರದಃ ಸುರಚೋದಿತಃ।
03172017c ಆಗಮ್ಯಾಹ ವಚಃ ಪಾರ್ಥಂ ಶ್ರವಣೀಯಮಿದಂ ನೃಪ।।
ನೃಪ! ಆ ತುಮುಲಗಳ ಸಮಯದಲ್ಲಿ ಸುರರಿಂದ ಕಳುಹಿಸಲ್ಪಟ್ಟ ನಾರದನು ಬಂದು ಪಾರ್ಥನಿಗೆ ಕೇಳುವಂಥಹ ಈ ಮಾತುಗಳನ್ನಾಡಿದನು.
03172018a ಅರ್ಜುನಾರ್ಜುನ ಮಾ ಯುಂಕ್ಷ್ವದಿವ್ಯಾನ್ಯಸ್ತ್ರಾಣಿ ಭಾರತ।
03172018c ನೈತಾನಿ ನಿರಧಿಷ್ಠಾನೇ ಪ್ರಯುಜ್ಯಂತೇ ಕದಾ ಚನ।।
03172019a ಅಧಿಷ್ಠಾನೇ ನ ವಾನಾರ್ತಃ ಪ್ರಯುಂಜೀತ ಕದಾ ಚನ।
03172019c ಪ್ರಯೋಗೇ ಸುಮಹಾನ್ದೋಷೋ ಹ್ಯಸ್ತ್ರಾಣಾಂ ಕುರುನಂದನ।।
“ಅರ್ಜುನ! ಅರ್ಜುನ! ಭಾರತ! ದಿವ್ಯಾಸ್ತ್ರಗಳನ್ನು ಹೂಡಬೇಡ! ಇವುಗಳನ್ನು ಸಾಮರ್ಥ್ಯವಿಲ್ಲದಿರುವವ ಮೇಲೆ ಎಂದೂ ಬಿಡುಗಡೆಮಾಡಬಾರದು! ಮತ್ತು ಸಮರ್ಥರ ಮೇಲೂ ಆರ್ತನಾಗಿರದಿದ್ದರೆ ಎಂದೂ ಬಿಡುಗಡೆ ಮಾಡಬಾರದು. ಕುರುನಂದನ! ಈ ಅಸ್ತ್ರಗಳ ಪ್ರಯೋಗದಿಂದ ಮಹಾ ದೋಷವುಂಟಾಗುತ್ತದೆ.
03172020a ಏತಾನಿ ರಕ್ಷ್ಯಮಾಣಾನಿ ಧನಂಜಯ ಯಥಾಗಮಂ।
03172020c ಬಲವಂತಿ ಸುಖಾರ್ಹಾಣಿ ಭವಿಷ್ಯಂತಿ ನ ಸಂಶಯಃ।।
03172021a ಅರಕ್ಷ್ಯಮಾಣಾನ್ಯೇತಾನಿ ತ್ರೈಲೋಕ್ಯಸ್ಯಾಪಿ ಪಾಂಡವ।
03172021c ಭವಂತಿ ಸ್ಮ ವಿನಾಶಾಯ ಮೈವಂ ಭೂಯಃ ಕೃಥಾಃ ಕ್ವ ಚಿತ್।।
ಧನಂಜಯ! ನೀನು ಕಲಿತಂತೆ ಇವುಗಳನ್ನು ರಕ್ಷಿಸಿದರೆ ಈ ಬಲಿಷ್ಟ ಅಸ್ತ್ರಗಳು ಸುಖವನ್ನು ನೀಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾಂಡವ! ಇವುಗಳನ್ನು ರಕ್ಷಿಸದೇ ಇದ್ದರೆ ಮೂರು ಲೋಕಗಳ ವಿನಾಶವಾಗುತ್ತದೆ. ಮುಂದೆಂದೂ ಹೀಗೆ ಮಾಡಬೇಡ!
03172022a ಅಜಾತಶತ್ರೋ ತ್ವಂ ಚೈವ ದ್ರಕ್ಷ್ಯಸೇ ತಾನಿ ಸಮ್ಯುಗೇ।
03172022c ಯೋಜ್ಯಮಾನಾನಿ ಪಾರ್ಥೇನ ದ್ವಿಷತಾಮವಮರ್ದನೇ।।
ಅಜಾತಶತ್ರೋ! ಯುದ್ಧದಲ್ಲಿ ದ್ವೇಷಿಗಳ ವಿನಾಶಕ್ಕಾಗಿ ಪಾರ್ಥನು ಇವುಗಳ್ನು ಬಳಸುವಾಗ ನೀನು ನೋಡುವೆಯಂತೆ!”
03172023a ನಿವಾರ್ಯಾಥ ತತಃ ಪಾರ್ಥಂ ಸರ್ವೇ ದೇವಾ ಯಥಾಗತಂ।
03172023c ಜಗ್ಮುರನ್ಯೇ ಚ ಯೇ ತತ್ರ ಸಮಾಜಗ್ಮುರ್ನರರ್ಷಭ।।
ನರರ್ಷಭ! ಪಾರ್ಥನನ್ನು ಈ ರೀತಿ ತಡೆದು ಎಲ್ಲ ದೇವತೆಗಳೂ ಮತ್ತು ಇತರರೂ ಅಲ್ಲಿಗೆ ಹೇಗೆ ಬಂದಿದ್ದರೋ ಹಾಗೆ ಹೊರಟುಹೋದರು.
03172024a ತೇಷು ಸರ್ವೇಷು ಕೌರವ್ಯ ಪ್ರತಿಯಾತೇಷು ಪಾಂಡವಾಃ।
03172024c ತಸ್ಮಿನ್ನೇವ ವನೇ ಹೃಷ್ಟಾಸ್ತ ಊಷುಃ ಸಹ ಕೃಷ್ಣಯಾ।।
ಕೌರವ್ಯ! ಅವರೆಲ್ಲರೂ ಹೊರಟುಹೋದ ನಂತರ ಪಾಂಡವರು ಕೃಷ್ಣೆಯೊಡನೆ ಅದೇ ವನದಲ್ಲಿಯೇ ಸಂತೋಷದಿಂದ ಉಳಿದುಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅಸ್ತ್ರದರ್ಶನೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅಸ್ತ್ರದರ್ಶನದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.ಇತಿ ಶ್ರೀ ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-35/100, ಅಧ್ಯಾಯಗಳು-469/1995, ಶ್ಲೋಕಗಳು-15519/73784.