ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 171
ಸಾರ
ಯುಧಿಷ್ಠಿರನು ದಿವ್ಯಾಸ್ತ್ರಗಳನ್ನು ತೋರಿಸೆಂದು ಕೇಳಲು ಅರ್ಜುನನು ನಾಳೆ ತೋರಿಸುತ್ತೇನೆಂದು ಹೇಳುವುದು (1-17).
03171001 ಅರ್ಜುನ ಉವಾಚ।
03171001a ತತೋ ಮಾಮಭಿವಿಶ್ವಸ್ತಂ ಸಂರೂಢಶರವಿಕ್ಷತಂ।
03171001c ದೇವರಾಜೋಽನುಗೃಹ್ಯೇದಂ ಕಾಲೇ ವಚನಮಬ್ರವೀತ್।।
ಅರ್ಜುನನು ಹೇಳಿದನು: “ನಾನು ಬಾಣದ ಗಾಯಗಳು ಮಾಸಿ ವಿಶ್ರಾಂತಿಹೊಂದಿರುವ ಸಮಯದಲ್ಲಿ ದೇವರಾಜನು ಅನುಗ್ರಹಿಸುವ ಈ ಮಾತುಗಳನ್ನಾಡಿದನು.
03171002a ದಿವ್ಯಾನ್ಯಸ್ತ್ರಾಣಿ ಸರ್ವಾಣಿ ತ್ವಯಿ ತಿಷ್ಠಂತಿ ಭಾರತ।
03171002c ನ ತ್ವಾಭಿಭವಿತುಂ ಶಕ್ತೋ ಮಾನುಷೋ ಭುವಿ ಕಶ್ಚನ।।
“ಭಾರತ! ಎಲ್ಲ ದಿವ್ಯಾಸ್ತ್ರಗಳೂ ನಿನ್ನಲ್ಲಿ ನಿಂತಿವೆ. ಭೂಮಿಯಲ್ಲಿನ ಯಾವ ಒಬ್ಬ ಮನುಷ್ಯನೂ ನಿನ್ನನ್ನು ಮೀರಿಸಲಾರ.
03171003a ಭೀಷ್ಮೋ ದ್ರೋಣಃ ಕೃಪಃ ಕರ್ಣಃ ಶಕುನಿಃ ಸಹ ರಾಜಭಿಃ।
03171003c ಸಂಗ್ರಾಮಸ್ಥಸ್ಯ ತೇ ಪುತ್ರ ಕಲಾಂ ನಾರ್ಹಂತಿ ಷೋಡಶೀಂ।।
ಪುತ್ರ! ಸಂಗ್ರಾಮಸ್ಥನಾದ ನಿನ್ನನ್ನು ಭೀಷ್ಮ, ದ್ರೋಣ, ಕೃಪ, ಕರ್ಣ, ಶಕುನಿ ಮತ್ತು ರಾಜರುಗಳೆಲ್ಲ ಸೇರಿದರೂ ಸಂಗ್ರಾಮಸ್ಥನಾದ ನಿನ್ನ ಮೌಲ್ಯದ ಒಂದಂಶದಷ್ಟೂ ಅಲ್ಲ.”
03171004a ಇದಂ ಚ ಮೇ ತನುತ್ರಾಣಂ ಪ್ರಾಯಚ್ಚನ್ಮಘವಾನ್ಪ್ರಭುಃ।
03171004c ಅಭೇದ್ಯಂ ಕವಚಂ ದಿವ್ಯಂ ಸ್ರಜಂ ಚೈವ ಹಿರಣ್ಮಯೀಂ।।
03171005a ದೇವದತ್ತಂ ಚ ಮೇ ಶಂಖಂ ದೇವಃ ಪ್ರಾದಾನ್ಮಹಾರವಂ।
03171005c ದಿವ್ಯಂ ಚೇದಂ ಕಿರೀಟಂ ಮೇ ಸ್ವಯಮಿಂದ್ರೋ ಯುಯೋಜ ಹ।।
ಪ್ರಭು ಮಘವತನು ನನಗೆ ಈ ಅಭೇದ್ಯವಾದ, ದಿವ್ಯ ಕವಚವನ್ನೂ, ಹಿರಣ್ಮಯೀ ಹಾರವನ್ನೂ ಕೊಟ್ಟನು. ದೇವನು ಮಹಾರವ ದೇವದತ್ತ ಶಂಖವನ್ನೂ ಕೊಟ್ಟನು. ಸ್ವಯಂ ಇಂದ್ರನೇ ದಿವ್ಯವಾದ ಈ ಕಿರೀಟವನ್ನು ನನ್ನ ತಲೆಗೆ ತೊಡಿಸಿದನು.
03171006a ತತೋ ದಿವ್ಯಾನಿ ವಸ್ತ್ರಾಣಿ ದಿವ್ಯಾನ್ಯಾಭರಣಾನಿ ಚ।
03171006c ಪ್ರಾದಾಚ್ಛಕ್ರೋ ಮಮೈತಾನಿ ರುಚಿರಾಣಿ ಬೃಹಂತಿ ಚ।।
ಶಕ್ರನು ನನಗೆ ಈ ಎಲ್ಲ ಸುಂದರವಾದ ದಿವ್ಯ ವಸ್ತ್ರಗಳನ್ನೂ, ದಿವ್ಯ ಆಭರಣಗಳನ್ನೂ ಹೇರಳವಾಗಿ ನೀಡಿದನು.
03171007a ಏವಂ ಸಂಪೂಜಿತಸ್ತತ್ರ ಸುಖಮಸ್ಮ್ಯುಷಿತೋ ನೃಪ।
03171007c ಇಂದ್ರಸ್ಯ ಭವನೇ ಪುಣ್ಯೇ ಗಂಧರ್ವಶಿಶುಭಿಃ ಸಹ।।
ನೃಪ! ಈ ರೀತಿ ಅಲ್ಲಿ ಗೌರವಿಸಲ್ಪಟ್ಟ ನಾನು ಇಂದ್ರನ ಪುಣ್ಯ ಭವನದಲ್ಲಿ ಗಂಧರ್ವ ಮಕ್ಕಳೊಡನೆ ಸಂತೋಷದಿಂದ ವಾಸಿಸಿದೆನು.
03171008a ತತೋ ಮಾಮಬ್ರವೀಚ್ಛಕ್ರಃ ಪ್ರೀತಿಮಾನಮರೈಃ ಸಹ।
03171008c ಸಮಯೋಽರ್ಜುನ ಗಂತುಂ ತೇ ಭ್ರಾತರೋ ಹಿ ಸ್ಮರಂತಿ ತೇ।।
ಆಗ ಅಮರರೊಂದಿಗೆ ಶಕ್ರನು ಪ್ರೀತಿಯಿಂದ ನನಗೆ ಹೇಳಿದನು: “ಅರ್ಜುನ! ನಿನಗೆ ನಿನ್ನ ಸಹೋದರರಲ್ಲಿಗೆ ಹೋಗುವ ಸಮಯವು ಬಂದಿದೆ. ಅವರು ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದಾರೆ.”
03171009a ಏವಮಿಂದ್ರಸ್ಯ ಭವನೇ ಪಂಚ ವರ್ಷಾಣಿ ಭಾರತ।
03171009c ಉಷಿತಾನಿ ಮಯಾ ರಾಜನ್ಸ್ಮರತಾ ದ್ಯೂತಜಂ ಕಲಿಂ।।
03171010a ತತೋ ಭವಂತಮದ್ರಾಕ್ಷಂ ಭ್ರಾತೃಭಿಃ ಪರಿವಾರಿತಂ।
03171010c ಗಂಧಮಾದನಮಾಸಾದ್ಯ ಪರ್ವತಸ್ಯಾಸ್ಯ ಮೂರ್ಧನಿ।।
ರಾಜನ್! ಭಾರತ! ಈ ರೀತಿ ಇಂದ್ರನ ಭವನದಲ್ಲಿ ಐದು ವರ್ಷಗಳು ದ್ಯೂತದಿಂದ ಹುಟ್ಟಿದ ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ಉಳಿದೆ. ಆಗ ಗಂಧಮಾದನ ಪರ್ವತವನ್ನು ಸೇರಿ ಪರ್ವತದ ಶಿಖರದಲ್ಲಿ ಸಹೋದರರಿಂದ ಪರಿವೃತನಾಗಿರುವ ನಿನ್ನನ್ನು ನೋಡಿದೆ.”
03171011 ಯುಧಿಷ್ಠಿರ ಉವಾಚ।
03171011a ದಿಷ್ಟ್ಯಾ ಧನಂಜಯಾಸ್ತ್ರಾಣಿ ತ್ವಯಾ ಪ್ರಾಪ್ತಾನಿ ಭಾರತ।
03171011c ದಿಷ್ಟ್ಯಾ ಚಾರಾಧಿತೋ ರಾಜಾ ದೇವಾನಾಮೀಶ್ವರಃ ಪ್ರಭುಃ।।
ಯುಧಿಷ್ಠಿರನು ಹೇಳಿದನು: “ಭಾರತ! ಧನಂಜಯ! ಒಳ್ಳೆಯದಾಯಿತು ನೀನು ದಿವ್ಯಾಸ್ತ್ರಗಳನ್ನು ಪಡೆದಿದ್ದೀಯೆ. ಒಳ್ಳೆಯದಾಯಿತು ನೀನು ರಾಜ, ಪ್ರಭು, ದೇವತೆಗಳ ಒಡೆಯನನ್ನು ಆರಾಧಿಸಿದೆ.
03171012a ದಿಷ್ಟ್ಯಾ ಚ ಭಗವಾನ್ ಸ್ಥಾಣುರ್ದೇವ್ಯಾ ಸಹ ಪರಂತಪ।
03171012c ಸಾಕ್ಷಾದ್ದೃಷ್ಟಃ ಸುಯುದ್ಧೇನ ತೋಷಿತಶ್ಚ ತ್ವಯಾನಘ।।
ಪರಂತಪ! ಅನಘ! ಒಳ್ಳೆಯದಾಯಿತು ನೀನು ಭಗವಾನ್ ಸ್ಥಾಣುವನ್ನು ದೇವಿಯ ಸಹಿತ ಸಾಕ್ಷಾತ್ ಕಂಡೆ ಮತ್ತು ಉತ್ತಮ ಯುದ್ಧದಿಂದ ಅವನನ್ನು ತೃಪ್ತಿಪಡಿಸಿದೆ.
03171013a ದಿಷ್ಟ್ಯಾ ಚ ಲೋಕಪಾಲೈಸ್ತ್ವಂ ಸಮೇತೋ ಭರತರ್ಷಭ।
03171013c ದಿಷ್ಟ್ಯಾ ವರ್ಧಾಮಹೇ ಸರ್ವೇ ದಿಷ್ಟ್ಯಾಸಿ ಪುನರಾಗತಃ।।
ಭರತರ್ಷಭ! ಒಳ್ಳೆಯದಾಯಿತು ನೀನು ಲೋಕಪಾಲಕರನ್ನು ಭೇಟಿ ಮಾಡಿದೆ. ಅದೃಷ್ಟದಿಂದ ನಾವೆಲ್ಲರೂ ವರ್ಧಿಸಿದ್ದೇವೆ. ಅದೃಷ್ಟದಿಂದ ನೀನು ಮರಳಿ ಬಂದಿದ್ದೀಯೆ.
03171014a ಅದ್ಯ ಕೃತ್ಸ್ನಾಮಿಮಾಂ ದೇವೀಂ ವಿಜಿತಾಂ ಪುರಮಾಲಿನೀಂ।
03171014c ಮನ್ಯೇ ಚ ಧೃತರಾಷ್ಟ್ರಸ್ಯ ಪುತ್ರಾನಪಿ ವಶೀಕೃತಾನ್।।
ಇಂದು ನಾವು ಈ ಇಡೀ ಪುರಮಾಲಿನಿ ಭೂಮಿದೇವಿಯನ್ನು ಗೆದ್ದಿದ್ದೇವೆ ಮತ್ತು ಧೃತರಾಷ್ಟ್ರನ ಮಕ್ಕಳನ್ನೂ ವಶೀಕರಿಸಿದ್ದೇವೆ ಎಂದು ನನಗನ್ನಿಸುತ್ತಿದೆ.
03171015a ತಾನಿ ತ್ವಿಚ್ಚಾಮಿ ತೇ ದ್ರಷ್ಟುಂ ದಿವ್ಯಾನ್ಯಸ್ತ್ರಾಣಿ ಭಾರತ।
03171015c ಯೈಸ್ತಥಾ ವೀರ್ಯವಂತಸ್ತೇ ನಿವಾತಕವಚಾ ಹತಾ।।
ಭಾರತ! ಆದರೆ ನಾನು ವೀರ್ಯವಂತ ನಿವಾತಕವಚರನ್ನು ಸಂಹರಿಸಲು ಬಳಸಿದ ನಿನ್ನ ಆ ದಿವ್ಯಾಸ್ತ್ರಗಳನ್ನು ನೋಡಲು ಬಯಸುತ್ತೇನೆ.”
03171016 ಅರ್ಜುನ ಉವಾಚ।
03171016a ಶ್ವಃ ಪ್ರಭಾತೇ ಭವಾನ್ದ್ರಷ್ಟಾ ದಿವ್ಯಾನ್ಯಸ್ತ್ರಾಣಿ ಸರ್ವಶಃ।
03171016c ನಿವಾತಕವಚಾ ಘೋರಾ ಯೈರ್ಮಯಾ ವಿನಿಪಾತಿತಾಃ।।
ಅರ್ಜುನನು ಹೇಳಿದನು: “ನಾಳೆ ಬೆಳಿಗ್ಗೆ ನಿಮಗೆ ಯಾವುದರಿಂದ ಘೋರ ನಿವಾತಕವಚರು ಕೆಳಗುರುಳಿದರೋ ಆ ಎಲ್ಲ ದಿವ್ಯಾಸ್ತ್ರಗಳನ್ನೂ ತೋರಿಸುತ್ತೇನೆ.””
03171017 ವೈಶಂಪಾಯನ ಉವಾಚ।
03171017a ಏವಮಾಗಮನಂ ತತ್ರ ಕಥಯಿತ್ವಾ ಧನಂಜಯಃ।
03171017c ಭ್ರಾತೃಭಿಃ ಸಹಿತಃ ಸರ್ವೈ ರಜನೀಂ ತಾಮುವಾಸ ಹ।।
ವೈಶಂಪಾಯನನು ಹೇಳಿದನು: “ಹೀಗೆ ಧನಂಜಯನು ತನ್ನ ಆಗಮನದ ಕುರಿತು ಹೇಳಿ, ಎಲ್ಲ ಸಹೋದರರ ಸಹಿತ ರಾತ್ರಿಯನ್ನು ಕಳೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅಸ್ತ್ರದರ್ಶನಸಂಕೇತೇ ಏಕಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅಸ್ತ್ರದರ್ಶನಸಂಕೇತದಲ್ಲಿ ನೂರಾಎಪ್ಪತ್ತೊಂದನೆಯ ಅಧ್ಯಾಯವು.