170 ನಿವಾತಕವಚಯುದ್ಧೇ ಹಿರಣ್ಯಪುರದೈತ್ಯವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 170

ಸಾರ

ಹಿರಣ್ಯಪುರಿಯನ್ನು ಅರ್ಜುನನು ನಾಶಪಡಿಸಿದುದು (1-59). ವಿಜಯಿಯಾಗಿ ಮರಳಿದ ಅರ್ಜುನನಿಗೆ ಸತ್ಕಾರ (60-69).

03170001 ಅರ್ಜುನ ಉವಾಚ।
03170001a ನಿವರ್ತಮಾನೇನ ಮಯಾ ಮಹದ್ದೃಷ್ಟಂ ತತೋಽಪರಂ।
03170001c ಪುರಂ ಕಾಮಚರಂ ದಿವ್ಯಂ ಪಾವಕಾರ್ಕಸಮಪ್ರಭಂ।।
03170002a ದ್ರುಮೈ ರತ್ನಮಯೈಶ್ಚೈತ್ರೈರ್ಭಾಸ್ವರೈಶ್ಚ ಪತತ್ರಿಭಿಃ।
03170002c ಪೌಲೋಮೈಃ ಕಾಲಕೇಯೈಶ್ಚ ನಿತ್ಯಹೃಷ್ಟೈರಧಿಷ್ಠಿತಂ।।
03170003a ಗೋಪುರಾಟ್ಟಾಲಕೋಪೇತಂ ಚತುರ್ದ್ವಾರಂ ದುರಾಸದಂ।
03170003c ಸರ್ವರತ್ನಮಯಂ ದಿವ್ಯಮದ್ಭುತೋಪಮದರ್ಶನಂ।।
03170003e ದ್ರುಮೈಃ ಪುಷ್ಪಫಲೋಪೇತೈರ್ದಿವ್ಯರತ್ನಮಯೈರ್ವೃತಂ।।

ಅರ್ಜುನನು ಹೇಳಿದನು: “ಹಿಂದಿರುಗಿ ಬರುತ್ತಿರುವಾಗ ನಾನು ದಿವ್ಯವಾದ, ಮನಬಂದಲ್ಲಿ ಹೋಗುವ, ಅಗ್ನಿ ಸೂರ್ಯರಿಗೆ ಸಮನಾದ ಪ್ರಭೆಯನ್ನು ಹೊಂದಿದ್ದ, ರತ್ನಮಯ ವೃಕ್ಷಗಳಿಂದ ಮತ್ತು ಬಣ್ಣಬಣ್ಣದ ಪಕ್ಷಿಗಳ, ನಿತ್ಯವೂ ಸಂತೋಷದಿಂದಿರುವ ಪೌಲೋಮ ಕಾಲಕೇಯರಿಂದ ಕೂಡಿದ್ದ, ಅಭೇದ್ಯವಾದ ಗೋಪುರಗಳಿಂದ, ನಾಲ್ಕು ದುರಾಸದ ದ್ವಾರಗಳಿಂದ ಕೂಡಿದ, ಸರ್ವರತ್ನಮಯವಾದ, ದಿವ್ಯವಾಗಿ ಅದ್ಭುತವಾಗಿ ಕಾಣುತ್ತಿರುವ, ಪುಷ್ಪಫಲಗಳಿಂದ ಮತ್ತು ದಿವ್ಯರತ್ನಗಳಿಂದ ಆವೃತವಾದ ವೃಕ್ಷಗಳಿಂದ ಕೂಡಿದ ಇನ್ನೊಂದು ಮಹಾಪುರಿಯನ್ನು ನೋಡಿದೆನು.

03170004a ತಥಾ ಪತತ್ರಿಭಿರ್ದಿವ್ಯೈರುಪೇತಂ ಸುಮನೋಹರೈಃ।
03170004c ಅಸುರೈರ್ನಿತ್ಯಮುದಿತೈಃ ಶೂಲರ್ಷ್ಟಿಮುಸಲಾಯುಧೈಃ।।
03170004e ಚಾಪಮುದ್ಗರಹಸ್ತೈಶ್ಚ ಸ್ರಗ್ವಿಭಿಃ ಸರ್ವತೋ ವೃತಂ।।

ಅದು ಸುಮನೋಹರ ದಿವ್ಯಪಕ್ಷಿಗಳಿಂದ ತುಂಬಿತ್ತು. ನಿತ್ಯವೂ ಸಂತೋಷದಿಂದಿರುವ, ಶೂಲ, ಈಟಿ, ಮುಸಲಾಯುಧಗಳನ್ನು ಹಾರಗಳನ್ನೂ ಧರಿಸಿರುವ, ಚಾಪಮುದ್ರಗಳನ್ನು ಕೈಯಲ್ಲಿ ಹಿಡಿದಿರುವ ಅಸುರರಿಂದ ಎಲ್ಲೆಡೆಯೂ ತುಂಬಿತ್ತು.

03170005a ತದಹಂ ಪ್ರೇಕ್ಷ್ಯ ದೈತ್ಯಾನಾಂ ಪುರಮದ್ಭುತದರ್ಶನಂ।
03170005c ಅಪೃಚ್ಚಂ ಮಾತಲಿಂ ರಾಜನ್ಕಿಮಿದಂ ದೃಶ್ಯತೇತಿ ವೈ।।

ರಾಜನ್! ನೋಡಲು ಅದ್ಭುತವಾಗಿದ್ದ ದೈತ್ಯರ ಆ ಪುರವನ್ನು ನೋಡಿ ನಾನು ಮಾತಲಿಯನ್ನು “ಕಾಣುತ್ತಿರುವ ಇದೇನಿದು?” ಎಂದು ಕೇಳಿದೆನು.

03170006 ಮಾತಲಿರುವಾಚ।
03170006a ಪುಲೋಮಾ ನಾಮ ದೈತೇಯೀ ಕಾಲಕಾ ಚ ಮಹಾಸುರೀ।
03170006c ದಿವ್ಯಂ ವರ್ಷಸಹಸ್ರಂ ತೇ ಚೇರತುಃ ಪರಮಂ ತಪಃ।।
03170006e ತಪಸೋಽಂತೇ ತತಸ್ತಾಭ್ಯಾಂ ಸ್ವಯಂಭೂರದದಾದ್ವರಂ।।

ಮಾತಲಿಯು ಹೇಳಿದನು: “ಪುಲೋಮ ಎಂಬ ಹೆಸರಿನ ಮಹಾಸುರೀ ದೈತ್ಯೆಯು ಸಹಸ್ರ ದಿವ್ಯವರ್ಷಗಳ ಪರ್ಯಂತ ಪರಮ ತಪವನ್ನು ನಡೆಸಿದಳು. ತಪಸ್ಸಿನ ಅಂತ್ಯದಲ್ಲಿ ಸ್ವಯಂಭುವು ಅವಳಿಗೆ ವರವನ್ನಿತ್ತನು.

03170007a ಅಗೃಹ್ಣೀತಾಂ ವರಂ ತೇ ತು ಸುತಾನಾಮಲ್ಪದುಃಖತಾಂ।
03170007c ಅವಧ್ಯತಾಂ ಚ ರಾಜೇಂದ್ರ ಸುರರಾಕ್ಷಸಪನ್ನಗೈಃ।।

ರಾಜೇಂದ್ರ! ಅವಳು ತನ್ನ ಮಕ್ಕಳು ಅಲ್ಪವೇ ದುಃಖವನ್ನನುಭವಿಸಲಿ, ಸುರ-ರಾಕ್ಷಸ-ಪನ್ನಗಗಳಿಗೆ ಅವಧ್ಯರಾಗಲಿ ಎಂದು ವರವನ್ನು ಬೇಡಿದಳು.

03170008a ರಮಣೀಯಂ ಪುರಂ ಚೇದಂ ಖಚರಂ ಸುಕೃತಪ್ರಭಂ।
03170008c ಸರ್ವರತ್ನೈಃ ಸಮುದಿತಂ ದುರ್ಧರ್ಷಮಮರೈರಪಿ।।
03170008e ಸಯಕ್ಷಗಂಧರ್ವಗಣೈಃ ಪನ್ನಗಾಸುರರಾಕ್ಷಸೈಃ।।
03170009a ಸರ್ವಕಾಮಗುಣೋಪೇತಂ ವೀತಶೋಕಮನಾಮಯಂ।
03170009c ಬ್ರಹ್ಮಣಾ ಭರತಶ್ರೇಷ್ಠ ಕಾಲಕೇಯಕೃತೇ ಕೃತಂ।।

ಭರತಶ್ರೇಷ್ಠ! ರಮಣೀಯವಾದ, ಆಕಾಶದಲ್ಲಿ ಸಂಚರಿಸುವ, ಸುಕೃತ ಪ್ರಭೆಯುಳ್ಳ, ಸರ್ವರತ್ನಗಳಿಂದ ತುಂಬಿದ, ಅಮರರಿಗೂ, ಯಕ್ಷಗಂಧರ್ವಗಣಗಳೊಂದಿಗೆ ಪನ್ನಗ-ಅಸುರ-ರಾಕ್ಷಸರಿಗೂ ದುರ್ಧರ್ಷವಾದ, ಸರ್ವಕಾಮಗಳನ್ನು ಪೂರೈಸುವ ಗುಣಗಳುಳ್ಳ, ಶೋಕವನ್ನು ನೀಗುವ, ಅನಾಮಯ ಈ ಪುರಿಯನ್ನು ಬ್ರಹ್ಮನು ಕಾಲಕೇಯರಿಗಾಗಿ ನಿರ್ಮಿಸಿದನು.

03170010a ತದೇತತ್ಖಚರಂ ದಿವ್ಯಂ ಚರತ್ಯಮರವರ್ಜಿತಂ।
03170010c ಪೌಲೋಮಾಧ್ಯುಷಿತಂ ವೀರ ಕಾಲಕೇಯೈಶ್ಚ ದಾನವೈಃ।।

ಅಮರರಿಗೆ ವರ್ಜಿತವಾದ ಈ ದಿವ್ಯ ಆಕಾಶಗಾಮಿಯಲ್ಲಿ ವೀರ ಪೌಲೋಮ ಕಾಲಕೇಯ ದಾನವರು ವಾಸಿಸುತ್ತಾರೆ.

03170011a ಹಿರಣ್ಯಪುರಮಿತ್ಯೇತತ್ಖ್ಯಾಯತೇ ನಗರಂ ಮಹತ್।
03170011c ರಕ್ಷಿತಂ ಕಾಲಕೇಯೈಶ್ಚ ಪೌಲೋಮೈಶ್ಚ ಮಹಾಸುರೈಃ।।

ಮಹಾಸುರ ಕಾಲಕೇಯರಿಂದ ಮತ್ತು ಪೌಲೋಮರಿಂದ ರಕ್ಷಿತವಾದ ಈ ಮಹಾನಗರಿಯು ಹಿರಣ್ಯಪುರಿಯೆಂದು ಖ್ಯಾತಿಯಾಗಿದೆ.

03170012a ತ ಏತೇ ಮುದಿತಾ ನಿತ್ಯಮವಧ್ಯಾಃ ಸರ್ವದೈವತೈಃ।
03170012c ನಿವಸಂತ್ಯತ್ರ ರಾಜೇಂದ್ರ ಗತೋದ್ವೇಗಾ ನಿರುತ್ಸುಕಾಃ।।
03170012e ಮಾನುಷೋ ಮೃತ್ಯುರೇತೇಷಾಂ ನಿರ್ದಿಷ್ಟೋ ಬ್ರಹ್ಮಣಾ ಪುರಾ।।

ರಾಜೇಂದ್ರ! ಇವರು ನಿತ್ಯವೂ ಸಂತೋಷದಿಂದಿರುತ್ತಾರೆ ಮತ್ತು ಸರ್ವದೇವತೆಗಳಿಗೂ ಅವಧ್ಯರು. ಇಲ್ಲಿ ಅವರು ಉದ್ವೇಗಗಳನ್ನು ನೀಗಿ, ನಿರುತ್ಸಾಹಕರಾಗಿ ವಾಸಿಸುತ್ತಿದ್ದಾರೆ. ಆದರೆ ಮನುಷ್ಯನು ಇವರ ಮೃತ್ಯು ಎಂದು ಹಿಂದೆ ಬ್ರಹ್ಮನು ನಿರ್ದೇಶಿಸಿದ್ದನು.””

03170013 ಅರ್ಜುನ ಉವಾಚ।
03170013a ಸುರಾಸುರೈರವಧ್ಯಾಂಸ್ತಾನಹಂ ಜ್ಞಾತ್ವಾ ತತಃ ಪ್ರಭೋ।
03170013c ಅಬ್ರುವಂ ಮಾತಲಿಂ ಹೃಷ್ಟೋ ಯಾಹ್ಯೇತತ್ಪುರಮಂಜಸಾ।।

ಅರ್ಜುನನು ಹೇಳಿದನು: “ಪ್ರಭೋ! ಸುರಾಸುರರಿಂದ ಅವರು ಅವಧ್ಯರೆಂದು ತಿಳಿದ ನಂತರ ನಾನು ಸಂತೋಷದಿಂದ ಮಾತಲಿಗೆ ಹೇಳಿದೆನು. “ಬೇಗನೇ ಆ ಪುರಕ್ಕೆ ಹೋಗು.

03170014a ತ್ರಿದಶೇಶದ್ವಿಷೋ ಯಾವತ್ ಕ್ಷಯಮಸ್ತ್ರೈರ್ನಯಾಮ್ಯಹಂ।
03170014c ನ ಕಥಂ ಚಿದ್ಧಿ ಮೇ ಪಾಪಾ ನ ವಧ್ಯಾ ಯೇ ಸುರದ್ವಿಷಃ।।

ತ್ರಿದಶೇಶ ವೈರಿಗಳಾದ ಅವರನ್ನು ನಾನು ಅಸ್ತ್ರಗಳಿಂದ ಕ್ಷಯಗೊಳಿಸುತ್ತೇನೆ. ಸುರರ ವೈರಿಗಳಾದ ಈ ಪಾಪಿಗಳು ನನಗೆ ಅವಧ್ಯರಲ್ಲ ಎಂದು ನನಗೆ ತಿಳಿಯಿತು.”

03170015a ಉವಾಹ ಮಾಂ ತತಃ ಶೀಘ್ರಂ ಹಿರಣ್ಯಪುರಮಂತಿಕಾತ್।
03170015c ರಥೇನ ತೇನ ದಿವ್ಯೇನ ಹರಿಯುಕ್ತೇನ ಮಾತಲಿಃ।।

ಮಾತಲಿಯು ದಿವ್ಯ ಕುದುರೆಗಳನ್ನು ಕಟ್ಟಿದ್ದ ಆ ರಥವನ್ನು ಶೀಘ್ರವಾಗಿ ಆ ಹಿರಣ್ಯಪುರಿಯ ಹತ್ತಿರ ಕೊಂಡೊಯ್ದನು.

03170016a ತೇ ಮಾಮಾಲಕ್ಷ್ಯ ದೈತೇಯಾ ವಿಚಿತ್ರಾಭರಣಾಂಬರಾಃ।
03170016c ಸಮುತ್ಪೇತುರ್ಮಹಾವೇಗಾ ರಥಾನಾಸ್ಥಾಯ ದಂಶಿತಾಃ।।

ವಿಚಿತ್ರವಾದ ಆಭರಣ-ಬಟ್ಟೆಗಳನ್ನು ಉಟ್ಟಿದ್ದ ಆ ದೈತ್ಯರು ನನ್ನನ್ನು ನೋಡಿ ಮಹಾವೇಗದಲ್ಲಿ ಒಂದಾಗಿ ಕವಚಗಳನ್ನು ಧರಿಸಿ ರಥಗಳನ್ನೇರಿದರು.

03170017a ತತೋ ನಾಲೀಕನಾರಾಚೈರ್ಭಲ್ಲಶಕ್ತ್ಯೃಷ್ಟಿತೋಮರೈಃ।
03170017c ಅಭ್ಯಘ್ನನ್ದಾನವೇಂದ್ರಾ ಮಾಂ ಕ್ರುದ್ಧಾಸ್ತೀವ್ರಪರಾಕ್ರಮಾಃ।।

ಆ ತೀವ್ರಪರಾಕ್ರಮಿ ದಾನವೇಂದ್ರರು ಕೃದ್ಧರಾಗಿ ನನ್ನ ಮೇಲೆ ಈಟಿ, ಕಬ್ಬಿಣದ ಬಾಣಗಳು, ಶಕ್ತಿ, ವೃಷ್ಟಿ ತೋಮರಗಳಿಂದ ಆಕ್ರಮಣ ಮಾಡಿದರು.

03170018a ತದಹಂ ಚಾಸ್ತ್ರವರ್ಷೇಣ ಮಹತಾ ಪ್ರತ್ಯವಾರಯಂ।
03170018c ಶಸ್ತ್ರವರ್ಷಂ ಮಹದ್ರಾಜನ್ವಿದ್ಯಾಬಲಮುಪಾಶ್ರಿತಃ।।

ರಾಜನ್! ಅದನ್ನು ನಾನು ಅಸ್ತ್ರಗಳ ಮಹಾವರ್ಷದಿಂದ ತಡೆದೆನು. ಆ ಮಹಾಶಸ್ತ್ರವರ್ಷವು ನನ್ನ ವಿದ್ಯಾಬಲವನ್ನಾಶ್ರಯಿಸಿತ್ತು.

03170019a ವ್ಯಾಮೋಹಯಂ ಚ ತಾನ್ಸರ್ವಾನ್ರಥಮಾರ್ಗೈಶ್ಚರನ್ರಣೇ।
03170019c ತೇಽನ್ಯೋನ್ಯಮಭಿಸಮ್ಮೂಢಾಃ ಪಾತಯಂತಿ ಸ್ಮ ದಾನವಾಃ।।
03170020a ತೇಷಾಮಹಂ ವಿಮೂಢಾನಾಮನ್ಯೋನ್ಯಮಭಿಧಾವತಾಂ।
03170020c ಶಿರಾಂಸಿ ವಿಶಿಖೈರ್ದೀಪ್ತೈರ್ವ್ಯಹರಂ ಶತಸಂಘಶಃ।।

ರಣದಲ್ಲಿ ನನ್ನ ರಥದ ಚಲನೆಯಿಂದ ಅವರೆಲ್ಲರನ್ನೂ ಮರುಳು ಮಾಡಿದೆ. ಸಮ್ಮೂಢರಾದ ಆ ದಾನವರು ಅನ್ಯೋನ್ಯರನ್ನು ಹೊಡೆಯುತ್ತಿದ್ದರು. ವಿಮೂಢರಾಗಿ ಅನ್ಯೋನ್ಯರನ್ನು ಆಕ್ರಮಣಮಾಡುತ್ತಿದ್ದ ಅವರ ನೂರಾರು ಶಿರಗಳನ್ನು ನಾನು ಉರಿಯುತ್ತಿರುವ ಮೊನೆಗಳ ಬಾಣಗಳಿಂದ ಕತ್ತರಿಸಿದೆನು.

03170021a ತೇ ವಧ್ಯಮಾನಾ ದೈತೇಯಾಃ ಪುರಮಾಸ್ಥಾಯ ತತ್ಪುನಃ।
03170021c ಖಮುತ್ಪೇತುಃ ಸನಗರಾ ಮಾಯಾಮಾಸ್ಥಾಯ ದಾನವೀಂ।।

ದೈತ್ಯರು ವಧಿಸಲ್ಪಡುತ್ತಿರಲು ಅವರು ಪುನಃ ಆ ಪುರವನ್ನು ಸೇರಿ, ದಾನವೀಯ ಮಾಯೆಯಿಂದ ನಗರದೊಂದಿಗೆ ಆಕಾಶವನ್ನೇರಿದರು.

03170022a ತತೋಽಹಂ ಶರವರ್ಷೇಣ ಮಹತಾ ಪ್ರತ್ಯವಾರಯಂ।
03170022c ಮಾರ್ಗಮಾವೃತ್ಯ ದೈತ್ಯಾನಾಂ ಗತಿಂ ಚೈಷಾಮವಾರಯಂ।।

ಆಗ ನಾನು ಮಹಾ ಶರವರ್ಷದಿಂದ ದೈತ್ಯರ ಮಾರ್ಗವನ್ನು ಆವರಿಸಿ ತಡೆದು ಅವರ ಚಲನೆಯನ್ನು ನಿಲ್ಲಿಸಿದೆನು.

03170023a ತತ್ಪುರಂ ಖಚರಂ ದಿವ್ಯಂ ಕಾಮಗಂ ದಿವ್ಯವರ್ಚಸಂ।
03170023c ದೈತೇಯೈರ್ವರದಾನೇನ ಧಾರ್ಯತೇ ಸ್ಮ ಯಥಾಸುಖಂ।।

ದೈತ್ಯರಿಗೆ ಕೊಟ್ಟಿರುವ ವರದಿಂದಾಗಿ ಅವರು ಆ ದಿವ್ಯವಾದ, ದಿವ್ಯವರ್ಚಸ್ಸಿನ, ಬೇಕಾದಲ್ಲಿ ಹೋಗಬಹುದಾದ, ಆಕಾಶಗಾಮಿ ಪುರವನ್ನು ಸುಲಭವಾಗಿ ಹಿಡಿದುಕೊಂಡಿದ್ದರು.

03170024a ಅಂತರ್ಭೂಮೌ ನಿಪತಿತಂ ಪುನರೂರ್ಧ್ವಂ ಪ್ರತಿಷ್ಠತೇ।
03170024c ಪುನಸ್ತಿರ್ಯಕ್ಪ್ರಯಾತ್ಯಾಶು ಪುನರಪ್ಸು ನಿಮಜ್ಜತಿ।।

ಭೂಮಿಯೊಳಗೆ ಬೀಳುತ್ತಿತ್ತು, ಮತ್ತೆ ಪುನಃ ಮೇಲೆ ನಿಲ್ಲುತ್ತಿತ್ತು, ಪುನಃ ಓರೆಯಾಗಿ ಹಾರುತ್ತಿತ್ತು ಮತ್ತೆ ಪುನಃ ನೀರಿನಲ್ಲಿ ಮುಳುಗುತ್ತಿತ್ತು.

03170025a ಅಮರಾವತಿಸಂಕಾಶಂ ಪುರಂ ಕಾಮಗಮಂ ತು ತತ್।
03170025c ಅಹಮಸ್ತ್ರೈರ್ಬಹುವಿಧೈಃ ಪ್ರತ್ಯಗೃಹ್ಣಂ ನರಾಧಿಪ।।

ನರಾಧಿಪ! ಅಮರಾವತಿಯಂತಿರುವ ಬೇಕಾದಲ್ಲಿ ಹೋಗಬಲ್ಲ ಆ ಪುರಿಯನ್ನು ನಾನು ಬಹುವಿಧದ ಅಸ್ತ್ರಗಳಿಂದ ಆಕ್ರಮಣ ಮಾಡಿದೆನು.

03170026a ತತೋಽಹಂ ಶರಜಾಲೇನ ದಿವ್ಯಾಸ್ತ್ರಮುದಿತೇನ ಚ।
03170026c ನ್ಯಗೃಹ್ಣಂ ಸಹ ದೈತೇಯೈಸ್ತತ್ಪುರಂ ಭರತರ್ಷಭ।।

ಭರತರ್ಷಭ! ಆಗ ನಾನು ದೈತ್ಯರೊಂದಿಗೆ ಆ ಪುರವನ್ನು ದಿವ್ಯಾಸ್ತ್ರಗಳಿಂದ ಹೊರಟ ಶರಜಾಲದಿಂದ ಮುಚ್ಚಿದೆನು.

03170027a ವಿಕ್ಷತಂ ಚಾಯಸೈರ್ಬಾಣೈರ್ಮತ್ಪ್ರಯುಕ್ತೈರಜಿಹ್ಮಗೈಃ।
03170027c ಮಹೀಮಭ್ಯಪತದ್ರಾಜನ್ಪ್ರಭಗ್ನಂ ಪುರಮಾಸುರಂ।।

ರಾಜನ್! ನಾನು ಬಿಟ್ಟ ನೇರವಾಗಿ ಹೋಗುತ್ತಿದ್ದ ಉಕ್ಕಿನ ಬಾಣಗಳಿಂದ ಗಾಯಗೊಂಡ ಆ ಅಸುರಪುರಿಯು ಪುಡಿಯಾಗಿ ಭೂಮಿಯ ಮೇಲೆ ಬಿದ್ದಿತು.

03170028a ತೇ ವಧ್ಯಮಾನಾ ಮದ್ಬಾಣೈರ್ವಜ್ರವೇಗೈರಯಸ್ಮಯೈಃ।
03170028c ಪರ್ಯಭ್ರಮಂತ ವೈ ರಾಜನ್ನಸುರಾಃ ಕಾಲಚೋದಿತಾಃ।।

ರಾಜನ್! ಮಿಂಚಿನ ವೇಗದ ನನ್ನ ಉಕ್ಕಿನ ಬಾಣಗಳ ಹೊಡತಕ್ಕೆ ಸಿಲುಕಿದ ಅಸುರರು ಕಾಲಚೋದಿತರಾಗಿ ಸುತ್ತಲೂ ತಿರುಗುತ್ತಿದ್ದರು.

03170029a ತತೋ ಮಾತಲಿರಪ್ಯಾಶು ಪುರಸ್ತಾನ್ನಿಪತನ್ನಿವ।
03170029c ಮಹೀಮವಾತರತ್ ಕ್ಷಿಪ್ರಂ ರಥೇನಾದಿತ್ಯವರ್ಚಸಾ।।

ಆ ಪುರವು ಮುರಿದು ಬೀಳುತ್ತಿರಲು ಮಾತಲಿಯು ಆದಿತ್ಯವರ್ಚಸವಾದ ರಥವನ್ನು ಕ್ಷಿಪ್ರವಾಗಿ ಒಂದೇಸಮನೆ ಭೂಮಿಗಿಳಿಸಿದನು.

03170030a ತತೋ ರಥಸಹಸ್ರಾಣಿ ಷಷ್ಟಿಸ್ತೇಷಾಮಮರ್ಷಿಣಾಂ।
03170030c ಯುಯುತ್ಸೂನಾಂ ಮಯಾ ಸಾರ್ಧಂ ಪರ್ಯವರ್ತಂತ ಭಾರತ।।
03170031a ತಾನಹಂ ನಿಶಿತೈರ್ಬಾಣೈರ್ವ್ಯಧಮಂ ಗಾರ್ಧ್ರವಾಜಿತೈಃ।
03170031c ತೇ ಯುದ್ಧೇ ಸಂನ್ಯವರ್ತಂತ ಸಮುದ್ರಸ್ಯ ಯಥೋರ್ಮಯಃ।।

ಭಾರತ! ಆಗ ಯುದ್ಧಮಾಡುತ್ತಿರುವ ಆ ಅಮರ್ಷಿಗಳ ಅರವತ್ತು ಸಾವಿರ ರಥಗಳು ನನ್ನನ್ನು ಸುತ್ತುವರೆದಿರಲು ಆ ಯುದ್ಧದಲ್ಲಿ ನಾನು ಅವುಗಳನ್ನು ಹದ್ದಿನ ರೆಕ್ಕೆಯ ವಾಜಿಗಳಿಂದ ಕೂಡಿದ ನಿಶಿತ ಬಾಣಗಳಿಂದ ಹೊಡೆದೆನು. ಅವರು ಅಲೆಗಳಂತೆ ಸಮುದ್ರಕ್ಕೆ ಬಿದ್ದರು.

03170032a ನೇಮೇ ಶಕ್ಯಾ ಮಾನುಷೇಣ ಯುದ್ಧೇನೇತಿ ಪ್ರಚಿಂತ್ಯ ವೈ।
03170032c ತತೋಽಹಮಾನುಪೂರ್ವ್ಯೇಣ ಸರ್ವಾಣ್ಯಸ್ತ್ರಾಣ್ಯಯೋಜಯಂ।।

ಇವರನ್ನು ಯುದ್ಧದಲ್ಲಿ ಯಾವ ಮನುಷ್ಯನಿಗೂ ಸೋಲಿಸಲು ಸಾಧ್ಯವಿಲ್ಲವೆಂದು ಯೋಚಿಸಿ ನಾನು ಒಂದಾದಮೇಲೊಂದರಂತೆ ನನ್ನ ಎಲ್ಲ ಅಸ್ತ್ರಗಳನ್ನೂ ಬಳಸಿದೆನು.

03170033a ತತಸ್ತಾನಿ ಸಹಸ್ರಾಣಿ ರಥಾನಾಂ ಚಿತ್ರಯೋಧಿನಾಂ।
03170033c ಅಸ್ತ್ರಾಣಿ ಮಮ ದಿವ್ಯಾನಿ ಪ್ರತ್ಯಘ್ನಂ ಶನಕೈರಿವ।।

ಕ್ರಮೇಣವಾಗಿ ಆ ಚಿತ್ರಯೋಧಿಗಳ ಸಹಸ್ರರಥಗಳು ಮತ್ತು ನನ್ನ ದಿವ್ಯಾಸ್ತ್ರಗಳು ಪರಸ್ಪರರನ್ನು ನಾಶಪಡಿಸಿದವು.

03170034a ರಥಮಾರ್ಗಾನ್ವಿಚಿತ್ರಾಂಸ್ತೇ ವಿಚರಂತೋ ಮಹಾರಥಾಃ।
03170034c ಪ್ರತ್ಯದೃಶ್ಯಂತ ಸಂಗ್ರಾಮೇ ಶತಶೋಽಥ ಸಹಸ್ರಶಃ।।

ಆ ಸಂಗ್ರಾಮದಲ್ಲಿ ವಿಚಿತ್ರ ರಥಮಾರ್ಗಗಳಲ್ಲಿ ಚಲಿಸುತ್ತಿರುವ ನೂರಾರು ಸಾವಿರಾರು ಮಹಾರಥಿಗಳು ಕಂಡುಬಂದರು.

03170035a ವಿಚಿತ್ರಮುಕುಟಾಪೀಡಾ ವಿಚಿತ್ರಕವಚಧ್ವಜಾಃ।
03170035c ವಿಚಿತ್ರಾಭರಣಾಶ್ಚೈವ ನಂದಯಂತೀವ ಮೇ ಮನಃ।।

ವಿಚಿತ್ರ ಮುಕುಟ-ಪೇಟಗಳು, ವಿಚಿತ್ರ ಕವಚ ಧ್ವಜಗಳು, ಮತ್ತು ವಿಚಿತ್ರ ಆಭರಣಗಳು ನನ್ನ ಮನಸ್ಸಿಗೆ ಅತೀವ ಆನಂದವನ್ನು ನೀಡಿದವು.

03170036a ಅಹಂ ತು ಶರವರ್ಷೈಸ್ತಾನಸ್ತ್ರಪ್ರಮುದಿತೈ ರಣೇ।
03170036c ನಾಶಕ್ನುವಂ ಪೀಡಯಿತುಂ ತೇ ತು ಮಾಂ ಪರ್ಯಪೀಡಯನ್।।

ಆದರೆ ರಣದಲ್ಲಿ ಅಸ್ತ್ರಗಳಿಂದ ಬಿಡಲ್ಪಟ್ಟ ಶರವರ್ಷಗಳಿಂದಲೂ ನಾನು ಅವರನ್ನು ಪೀಡಿಸಲು ಶಕ್ತನಾಗಲಿಲ್ಲ. ಅವರಿಗೂ ಕೂಡ ನನ್ನನ್ನು ಪೀಡಿಸಲಾಗಲಿಲ್ಲ.

03170037a ತೈಃ ಪೀಡ್ಯಮಾನೋ ಬಹುಭಿಃ ಕೃತಾಸ್ತ್ರೈಃ ಕುಶಲೈರ್ಯುಧಿ।
03170037c ವ್ಯಥಿತೋಽಸ್ಮಿ ಮಹಾಯುದ್ಧೇ ಭಯಂ ಚಾಗಾನ್ಮಹನ್ಮಮ।।

ಯುದ್ದದಲ್ಲಿ ಕುಶಲರೂ ಕೃತಾಸ್ತ್ರರೂ ಆದ ಬಹಳಷ್ಟು ಮಂದಿ ಅವರಿಂದ ಪೀಡಿತನಾದ ನಾನು ಆ ಮಹಾಯುದ್ಧದಲ್ಲಿ ವ್ಯಥಿತನಾದೆನು ಮತ್ತು ಮಹಾಭಯವು ನನ್ನನ್ನು ತುಂಬಿಕೊಂಡಿತು.

03170038a ತತೋಽಹಂ ದೇವದೇವಾಯ ರುದ್ರಾಯ ಪ್ರಣತೋ ರಣೇ।
03170038c ಸ್ವಸ್ತಿ ಭೂತೇಭ್ಯ ಇತ್ಯುಕ್ತ್ವಾ ಮಹಾಸ್ತ್ರಂ ಸಮಯೋಜಯಂ।।
03170038e ಯತ್ತದ್ರೌದ್ರಮಿತಿ ಖ್ಯಾತಂ ಸರ್ವಾಮಿತ್ರವಿನಾಶನಂ।।

ಆಗ ನಾನು ರಣದಲ್ಲಿ ದೇವದೇವೇಶ ರುದ್ರನಿಗೆ ನಮಸ್ಕರಿಸಿದೆನು. ಇರುವವುಗಳಿಗೆ ಮಂಗಳವಾಗಲಿ ಎಂದು ರೌದ್ರವೆಂದು ಖ್ಯಾತವಾದ, ಸವಶತ್ರುಗಳನ್ನೂ ನಾಶಪಸಿಸಬಲ್ಲ ಮಹಾಸ್ತ್ರವನ್ನು ಹೂಡಿದೆನು.

03170039a ತತೋಽಪಶ್ಯಂ ತ್ರಿಶಿರಸಂ ಪುರುಷಂ ನವಲೋಚನಂ।
03170039c ತ್ರಿಮುಖಂ ಷಡ್ಭುಜಂ ದೀಪ್ತಮರ್ಕಜ್ವಲನಮೂರ್ಧಜಂ।।
03170039e ಲೇಲಿಹಾನೈರ್ಮಹಾನಾಗೈಃ ಕೃತಶೀರ್ಷಮಮಿತ್ರಹನ್।।

ಅಮಿತ್ರಹನ್! ಆಗ ನಾನು ಮೂರುಶಿರಗಳ, ಒಂಭತ್ತು ಕಣ್ಣುಗಳ, ಮೂರು ಮುಖಗಳ, ಆರು ಭುಜಗಳ, ರೋಮರೋಮಗಳಲ್ಲಿ ಸೂರ್ಯನ ಜ್ವಾಲೆಯಂತೆ ಉರಿಯುತ್ತಿರುವ, ತಲೆಯು ನಾಲಿಗೆಯನ್ನು ಚಾಚಿರುವ ಮಹಾನಾಗಗಳಿಂದ ಆವೃತವಾಗಿರುವ ಪುರುಷನನ್ನು ನೋಡಿದೆನು.

03170040a ವಿಭೀಸ್ತತಸ್ತದಸ್ತ್ರಂ ತು ಘೋರಂ ರೌದ್ರಂ ಸನಾತನಂ।
03170040c ದೃಷ್ಟ್ವಾ ಗಾಂಡೀವಸಂಯೋಗಮಾನೀಯ ಭರತರ್ಷಭ।।
03170041a ನಮಸ್ಕೃತ್ವಾ ತ್ರಿನೇತ್ರಾಯ ಶರ್ವಾಯಾಮಿತತೇಜಸೇ।
03170041c ಮುಕ್ತವಾನ್ದಾನವೇಂದ್ರಾಣಾಂ ಪರಾಭಾವಾಯ ಭಾರತ।।

ಭರತರ್ಷಭ! ಸನಾತನವಾದ ಘೋರವಾದ ಆ ರೌದ್ರಾಸ್ತ್ರವನ್ನು ಕಂಡು ನಾನು ವಿಭೀತನಾಗಿ, ಅದನ್ನು ನನ್ನ ಗಾಂಡೀವದ ಮೇಲಿರಿಸಿದೆನು. ಭಾರತ! ದಾನಾವೇಂದ್ರರ ಪರಾಭವಕ್ಕೆಂದು ತ್ರಿನೇತ್ರ, ಶರ್ವ ಅಮಿತತೇಜಸ್ವಿಗೆ ನಮಸ್ಕರಿಸಿ ಅದನ್ನು ಬಿಟ್ಟೆನು.

03170042a ಮುಕ್ತಮಾತ್ರೇ ತತಸ್ತಸ್ಮಿನ್ರೂಪಾಣ್ಯಾಸನ್ಸಹಸ್ರಶಃ।
03170042c ಮೃಗಾಣಾಮಥ ಸಿಂಹಾನಾಂ ವ್ಯಾಘ್ರಾಣಾಂ ಚ ವಿಶಾಂ ಪತೇ।।
03170042e ಋಕ್ಷಾಣಾಂ ಮಹಿಷಾಣಾಂ ಚ ಪನ್ನಗಾನಾಂ ತಥಾ ಗವಾಂ।।
03170043a ಗಜಾನಾಂ ಸೃಮರಾಣಾಂ ಚ ಶರಭಾಣಾಂ ಚ ಸರ್ವಶಃ।
03170043c ಋಷಭಾಣಾಂ ವರಾಹಾಣಾಂ ಮಾರ್ಜಾರಾಣಾಂ ತಥೈವ ಚ।।
03170043e ಶಾಲಾವೃಕಾಣಾಂ ಪ್ರೇತಾನಾಂ ಭುರುಂಡಾನಾಂ ಚ ಸರ್ವಶಃ।।
03170044a ಗೃಧ್ರಾಣಾಂ ಗರುಡಾನಾಂ ಚ ಮಕರಾಣಾಂ ತಥೈವ ಚ।
03170044c ಪಿಶಾಚಾನಾಂ ಸಯಕ್ಷಾಣಾಂ ತಥೈವ ಚ ಸುರದ್ವಿಷಾಂ।।
03170045a ಗುಹ್ಯಕಾನಾಂ ಚ ಸಂಗ್ರಾಮೇ ನೈರೃತಾನಾಂ ತಥೈವ ಚ।
03170045c ಝಷಾಣಾಂ ಗಜವಕ್ತ್ರಾಣಾಮುಲೂಕಾನಾಂ ತಥೈವ ಚ।।
03170046a ಮೀನಕೂರ್ಮಸಮೂಹಾನಾಂ ನಾನಾಶಸ್ತ್ರಾಸಿಪಾಣಿನಾಂ।
03170046c ತಥೈವ ಯಾತು ಧಾನಾನಾಂ ಗದಾಮುದ್ಗರಧಾರಿಣಾಂ।।
03170047a ಏತೈಶ್ಚಾನ್ಯೈಶ್ಚ ಬಹುಭಿರ್ನಾನಾರೂಪಧರೈಸ್ತಥಾ।
03170047c ಸರ್ವಮಾಸೀಜ್ಜಗದ್ವ್ಯಾಪ್ತಂ ತಸ್ಮಿನ್ನಸ್ತ್ರೇ ವಿಸರ್ಜಿತೇ।।

ವಿಶಾಂಪತೇ! ಅದನ್ನು ಬಿಟ್ಟಕೂಡಲೇ ಅಲ್ಲಿ ಸಹಸ್ರಾರು ರೂಪಗಳು ರಣದಲ್ಲಿ ಎಲ್ಲೆಡೆ ಕಾಣಿಸಿಕೊಂಡವು - ಜಿಂಕೆಗಳು, ಸಿಂಹಗಳು, ಹುಲಿಗಳು, ಕರಡಿಗಳು, ಎಮ್ಮೆಗಳು, ಹಾವುಗಳು, ಗೋವುಗಳು, ಆನೆಗಳು, ಸೂಮರಗಳು, ಶರಭಗಳು, ಹೋರಿಗಳು, ಹಂದಿಗಳು, ಕಪಿಗಳು, ಹಯೀನಗಳು, ಪ್ರೇತಗಳು, ಭುರುಂಡಗಳು, ಹದ್ದುಗಳು, ಗರುಡಗಳು, ಮೊಸಳೆಗಳು, ಪಿಶಾಚಿಗಳು, ಯಕ್ಷರು, ಸುರದ್ವಿಶರು, ಗುಹ್ಯಕರು, ನೈರುತ್ತರು, ಆನೆಯ ಮುಖದ ಮೀನುಗಳು, ಗೂಬೆಗಳು, ಮೀನು-ಆಮೆಗಳ ಸಮೂಹಗಳು, ನಾನಾಶಸ್ತ್ರಗಳನ್ನು ಹಿಡಿದಿರುವ, ಗದಾ ಮುದ್ಗರಗಳನ್ನು ಧರಿಸಿರುವ ಯೋಧರೂ, ಮತ್ತು ಹೀಗಿರುವ ಅನ್ಯ ಬಹುಸಂಖ್ಯೆಯ ನಾನಾರೂಪಗಳನ್ನು ಧರಿಸಿರುವವು ಆ ಅಸ್ತ್ರವನ್ನು ವಿಸರ್ಜಿಸಿದಾಗ ಸರ್ವಜಗತ್ತನ್ನೂ ವ್ಯಾಪಿಸಿದವು.

03170048a ತ್ರಿಷಿರೋಭಿಶ್ಚತುರ್ದಂಷ್ಟ್ರೈಶ್ಚತುರಾಸ್ಯೈಶ್ಚತುರ್ಭುಜೈಃ।
03170048c ಅನೇಕರೂಪಸಂಯುಕ್ತೈರ್ಮಾಂಸಮೇದೋವಸಾಶಿಭಿಃ।।
03170048e ಅಭೀಕ್ಷ್ಣಂ ವಧ್ಯಮಾನಾಸ್ತೇ ದಾನವಾ ಯೇ ಸಮಾಗತಾಃ।।

ಅಲ್ಲಿ ಸೇರಿದ್ದ ದಾನವರನ್ನು ವಧಿಸಿ, ಮಾಂಸ, ಕೊಬ್ಬು ಮತ್ತು ಎಲುಬುಗಳನ್ನು ಭಕ್ಷಿಸುತ್ತಿರುವ ಮೂರುಶಿರಗಳ, ನಾಲ್ಕು ದಾಡೆಗಳ, ನಾಲ್ಕು ಮುಖಗಳ, ನಾಲ್ಕು ಭುಜಗಳ ಅನೇಕ ರೂಪಗಳು ಕಂಡುಬಂದವು.

03170049a ಅರ್ಕಜ್ವಲನತೇಜೋಭಿರ್ವಜ್ರಾಶನಿಸಮಪ್ರಭೈಃ।
03170049c ಅದ್ರಿಸಾರಮಯೈಶ್ಚಾನ್ಯೈರ್ಬಾಣೈರರಿವಿದಾರಣೈಃ।।
03170049e ನ್ಯಹನಂ ದಾನವಾನ್ಸರ್ವಾನ್ಮುಹೂರ್ತೇನೈವ ಭಾರತ।।

ಭಾರತ! ಉರಿಯುತ್ತಿರುವ ಸೂರ್ಯನ ತೇಜಸ್ಸನ್ನು ಹೊಂದಿದ್ದ, ಮಿಂಚಿನಂತೆ ಹೊಳೆಯುತ್ತಿದ್ದ, ಕಲ್ಲುಬಂಡೆಗಳಂತೆ ಗಟ್ಟಿಯಾಗಿದ್ದ, ಅರಿಗಳನ್ನು ಪೀಡಿಸಬಲ್ಲ ಅನ್ಯ ಬಾಣಗಳಿಂದ ಆ ದಾನವರೆಲ್ಲರನ್ನೂ ಕ್ಷಣದಲ್ಲಿ ಸಂಹರಿಸಿದೆನು.

03170050a ಗಾಂಡೀವಾಸ್ತ್ರಪ್ರಣುನ್ನಾಂಸ್ತಾನ್ಗತಾಸೂನ್ನಭಸಶ್ಚ್ಯುತಾನ್।
03170050c ದೃಷ್ಟ್ವಾಹಂ ಪ್ರಾಣಮಂ ಭೂಯಸ್ತ್ರಿಪುರಘ್ನಾಯ ವೇಧಸೇ।।

ಗಾಂಡೀವದಿಂದ ಹೊರಟ ಅಸ್ತ್ರಗಳಿಂದ ಹೊಡೆಯಲ್ಪಟ್ಟು ನಭದಿಂದ ಸತ್ತು ಕೆಳಗೆ ಅವರು ಬೀಳುತ್ತಿರುವುದನ್ನು ನೋಡಿ ನಾನು ಪುನಃ ತ್ರಿಪುರಘ್ನನಿಗೆ ನಮಸ್ಕರಿಸಿದೆನು.

03170051a ತಥಾ ರೌದ್ರಾಸ್ತ್ರನಿಷ್ಪಿಷ್ಟಾನ್ದಿವ್ಯಾಭರಣಭೂಷಿತಾನ್।
03170051c ನಿಶಾಮ್ಯ ಪರಮಂ ಹರ್ಷಮಗಮದ್ದೇವಸಾರಥಿಃ।।

ದಿವ್ಯಾಭರಣ ಭೂಷಿತ ರಾಕ್ಷಸರು ರೌದ್ರಾಸ್ತ್ರದಿಂದ ಪುಡಿಪುಡಿಯಾದುದನ್ನು ನೋಡಿ ದೇವಸಾರಥಿಯು ಪರಮ ಹರ್ಷವನ್ನು ತಾಳಿದನು.

03170052a ತದಸಹ್ಯಂ ಕೃತಂ ಕರ್ಮ ದೇವೈರಪಿ ದುರಾಸದಂ।
03170052c ದೃಷ್ಟ್ವಾ ಮಾಂ ಪೂಜಯಾಮಾಸ ಮಾತಲಿಃ ಶಕ್ರಸಾರಥಿಃ।।

ದೇವತೆಗಳಿಗೂ ದುರಾಸದವಾದ ಕೆಲಸವನ್ನು ನಾನು ಮಾಡಿದುದನ್ನು ನೋಡಿ ಶಕ್ರಸಾರಥಿ ಮಾತಲಿಯು ನನ್ನನ್ನು ಗೌರವಿಸಿದನು.

03170053a ಉವಾಚ ಚೇದಂ ವಚನಂ ಪ್ರೀಯಮಾಣಃ ಕೃತಾಂಜಲಿಃ।
03170053c ಸುರಾಸುರೈರಸಹ್ಯಂ ಹಿ ಕರ್ಮ ಯತ್ಸಾಧಿತಂ ತ್ವಯಾ।।
03170053e ನ ಹ್ಯೇತತ್ಸಂಯುಗೇ ಕರ್ತುಮಪಿ ಶಕ್ತಃ ಸುರೇಶ್ವರಃ।।

ಕೈಗಳನ್ನು ಮುಗಿದು ಪ್ರೀತಿಯಿಂದ ಈ ಮಾತುಗಳನ್ನಾಡಿದನು: “ನೀನು ಸಾಧಿಸಿದ್ದುದು ಸುರಾಸುರರಿಗೂ ಕಷ್ಟಸಾದ್ಯವಾದುದು. ಸುರೇಶ್ವರನಿಗೂ ಕೂಡ ಯುದ್ದದಲ್ಲಿ ಇದನ್ನು ಮಾಡಲು ಆಗುತ್ತಿರಲಿಲ್ಲ.

03170054a ಸುರಾಸುರೈರವಧ್ಯಂ ಹಿ ಪುರಮೇತತ್ಖಗಂ ಮಹತ್।
03170054c ತ್ವಯಾ ವಿಮಥಿತಂ ವೀರ ಸ್ವವೀರ್ಯಾಸ್ತ್ರತಪೋಬಲಾತ್।।

ಸುರಾಸುರರಿಂದಲೂ ಅವಧ್ಯವಾದ ಆಕಾಶದಲ್ಲಿರುವ ಈ ಮಹಾ ಪುರವನ್ನು ನೀನು ನಿನ್ನ ವೀರ್ಯ, ಅಸ್ತ್ರ ಮತ್ತು ತಪೋಬಲಗಳಿಂದ ಪುಡಿಮಾಡಿದ್ದೀಯೆ.”

03170055a ವಿಧ್ವಸ್ತೇಽಥ ಪುರೇ ತಸ್ಮಿನ್ದಾನವೇಷು ಹತೇಷು ಚ।
03170055c ವಿನದಂತ್ಯಃ ಸ್ತ್ರಿಯಃ ಸರ್ವಾ ನಿಷ್ಪೇತುರ್ನಗರಾದ್ಬಹಿಃ।।

ಆ ಪುರವು ಧ್ವಂಸಗೊಳ್ಳಲು ಮತ್ತು ಅಲ್ಲಿದ್ದ ದಾನವರು ಹತರಾಗಲು ರೋದಿಸುತ್ತಿರುವ ಸ್ತ್ರೀಯರೆಲ್ಲರೂ ನಗರದಿಂದ ಹೊರಬಂದರು.

03170056a ಪ್ರಕೀರ್ಣಕೇಶ್ಯೋ ವ್ಯಥಿತಾಃ ಕುರರ್ಯ ಇವ ದುಃಖಿತಾಃ।
03170056c ಪೇತುಃ ಪುತ್ರಾನ್ಪಿತೄನ್ಭ್ರಾತೄಂ ಶೋಚಮಾನಾ ಮಹೀತಲೇ।।
03170057a ರುದಂತ್ಯೋ ದೀನಕಂಠ್ಯಾಸ್ತಾ ವಿನದಂತ್ಯೋ ಹತೇಶ್ವರಾಃ।
03170057c ಉರಾಂಸಿ ಪಾಣಿಭಿರ್ಘ್ನಂತ್ಯಃ ಪ್ರಸ್ರಸ್ತಸ್ರಗ್ವಿಭೂಷಣಾಃ।।

ಕೆದರಿದ ಕೂದಲುಗಳ, ವ್ಯಥಿತರಾಗಿ ಕುರವಗಳಂತೆ ದುಃಖಿತರಾಗಿದ್ದ ಅವರು ನೆಲದಮೇಲೆ ಬಿದ್ದು ಪುತ್ರರು, ಪಿತರು ಮತ್ತು ಭ್ರಾತೃಗಳಿಗಾಗಿ ಶೋಕಿಸುತ್ತಾ ಅಳುತ್ತಿದ್ದರು. ಎದೆಯನ್ನು ಕೈಗಳಿಂದ ಹೊಡೆಯುತ್ತಾ, ಹಾರ ಆಭರಣಗಳನ್ನು ಕಿತ್ತು ಬಿಸಾಡುತ್ತಾ, ದೀನಕಂಠದಲ್ಲಿ ಹತರಾದ ಒಡೆಯರ ಕುರಿತು ರೋದಿಸುತ್ತಿದ್ದರು.

03170058a ತಚ್ಛೋಕಯುಕ್ತಮಶ್ರೀಕಂ ದುಃಖದೈನ್ಯಸಮಾಹತಂ।
03170058c ನ ಬಭೌ ದಾನವಪುರಂ ಹತತ್ವಿಟ್ಕಂ ಹತೇಶ್ವರಂ।।

ಶೋಕಯುಕ್ತವಾದ, ಶ್ರೀಯನ್ನು ಕಳೆದುಕೊಂಡ, ದುಃಖ-ದೈನ್ಯದಿಂದ ಕೂಡಿದ ಆ ದಾನವಪುರವು ವೈಭವವನ್ನು ಕಳೆದುಕೊಂಡು ಒಡೆಯರನ್ನು ಕಳೆದುಕೊಂಡು ಹೊಳೆಯಲಿಲ್ಲ.

03170059a ಗಂಧರ್ವನಗರಾಕಾರಂ ಹತನಾಗಮಿವ ಹ್ರದಂ।
03170059c ಶುಷ್ಕವೃಕ್ಷಮಿವಾರಣ್ಯಮದೃಶ್ಯಮಭವತ್ಪುರಂ।।

ಗಂದರ್ವನಗರಿಯಂತಿದ್ದ ಆ ಪುರವು ಆನೆಗಳನ್ನು ಕಳೆದುಕೊಂಡ ಸರೋವರದಂತೆ, ಒಣಗಿದ ಮರಗಳನ್ನುಳ್ಳ ಅರಣ್ಯದಂತೆ ಅದೃಶ್ಯವಾಯಿತು.

03170060a ಮಾಂ ತು ಸಂಹೃಷ್ಟಮನಸಂ ಕ್ಷಿಪ್ರಂ ಮಾತಲಿರಾನಯತ್।
03170060c ದೇವರಾಜಸ್ಯ ಭವನಂ ಕೃತಕರ್ಮಾಣಮಾಹವಾತ್।।
03170061a ಹಿರಣ್ಯಪುರಮಾರುಜ್ಯ ನಿಹತ್ಯ ಚ ಮಹಾಸುರಾನ್।
03170061c ನಿವಾತಕವಚಾಂಶ್ಚೈವ ತತೋಽಹಂ ಶಕ್ರಮಾಗಮಂ।।

ನಾನು ಕೃತಕರ್ಮನಾದೆನೆಂದು ಸಂಹೃಷ್ಟಮನಸ್ಕನಾದ ಮಾತಲಿಯು ಬೇಗನೇ ನನ್ನನ್ನು ದೇವರಾಜನ ಭವನಕ್ಕೆ ಕರೆತಂದನು. ಹಿರಣ್ಯಪುರವನ್ನು ಧ್ವಂಸಗೊಳಿಸಿ, ಮಹಾಸುರ ನಿವಾತಕವಚರನ್ನೂ ಸಂಹರಿಸಿ ನಾನು ಶಕ್ರನಲ್ಲಿಗೆ ಬಂದೆನು.

03170062a ಮಮ ಕರ್ಮ ಚ ದೇವೇಂದ್ರಂ ಮಾತಲಿರ್ವಿಸ್ತರೇಣ ತತ್।
03170062c ಸರ್ವಂ ವಿಶ್ರಾವಯಾಮಾಸ ಯಥಾ ಭೂತಂ ಮಹಾದ್ಯುತೇ।।
03170063a ಹಿರಣ್ಯಪುರಘಾತಂ ಚ ಮಾಯಾನಾಂ ಚ ನಿವಾರಣಂ।
03170063c ನಿವಾತಕವಚಾನಾಂ ಚ ವಧಂ ಸಂಖ್ಯೇ ಮಹೌಜಸಾಂ।।

ಮಹಾದ್ಯುತೇ! ದೇವೇಂದ್ರನಿಗೆ ಮಾತಲಿಯು ನಾನು ಮಾಡಿದುದನ್ನು ಹಿರಣ್ಯಪುರವನ್ನು ಧ್ವಂಸಗೊಳಿಸಿದುದು, ಮಾಯೆಗಳ ನಿವಾರಣೆ, ಯುದ್ಧದಲ್ಲಿ ಮಹೌಜಸರಾದ ನಿವಾತಕವಚರ ವಧೆ ಎಲ್ಲವನ್ನೂ ವಿಸ್ತಾರವಾಗಿ ಹೇಗೆ ನಡೆಯಿತೋ ಹಾಗೆ ಹೇಳಿದನು.

03170064a ತಚ್ಶ್ರುತ್ವಾ ಭಗವಾನ್ಪ್ರೀತಃ ಸಹಸ್ರಾಕ್ಷಃ ಪುರಂದರಃ।
03170064c ಮರುದ್ಭಿಃ ಸಹಿತಃ ಶ್ರೀಮಾನ್ಸಾಧು ಸಾಧ್ವಿತ್ಯಥಾಬ್ರವೀತ್।।

ಅದನ್ನು ಕೇಳಿ ಪ್ರೀತನಾದ ಭಗವಾನ್ ಸಹಸ್ರಾಕ್ಷ, ಶ್ರೀಮಾನ್ ಪುರಂದರನು ಮರುದ್ಗಣಗಳೊಂದಿಗೆ “ಸಾಧು! ಸಾಧು!” ಎಂದು ಹೇಳಿದನು.

03170065a ತತೋ ಮಾಂ ದೇವರಾಜೋ ವೈ ಸಮಾಶ್ವಾಸ್ಯ ಪುನಃ ಪುನಃ।
03170065c ಅಬ್ರವೀದ್ವಿಬುಧೈಃ ಸಾರ್ಧಮಿದಂ ಸುಮಧುರಂ ವಚಃ।।

ದೇವರಾಜನು ಪುನಃ ಪುನಃ ನನ್ನನ್ನು ಹುರಿದುಂಬಿಸುತ್ತಾ ವಿಬುಧರ ಜೊತೆಗೆ ಈ ಸುಮಧುರ ಮಾತುಗಳನ್ನಾಡಿದನು:

03170066a ಅತಿದೇವಾಸುರಂ ಕರ್ಮ ಕೃತಮೇತತ್ತ್ವಯಾ ರಣೇ।
03170066c ಗುರ್ವರ್ಥಶ್ಚ ಮಹಾನ್ಪಾರ್ಥ ಕೃತಃ ಶತ್ರೂನ್ಘ್ನತಾ ಮಮ।।

“ದೇವಾಸುರರಿಗೂ ಅತಿಯಾದ ಕರ್ಮವನ್ನು ನೀನು ರಣದಲ್ಲಿ ಮಾಡಿದ್ದೀಯೆ. ಪಾರ್ಥ! ನನ್ನ ಶತ್ರುಗಳನ್ನು ನಾಶಪಡಿಸಿ ಮಹಾ ಗುರುದಕ್ಷಿಣೆಯನ್ನು ಇತ್ತಿದ್ದೀಯೆ.

03170067a ಏವಮೇವ ಸದಾ ಭಾವ್ಯಂ ಸ್ಥಿರೇಣಾಜೌ ಧನಂಜಯ।
03170067c ಅಸಮ್ಮೂಢೇನ ಚಾಸ್ತ್ರಾಣಾಂ ಕರ್ತವ್ಯಂ ಪ್ರತಿಪಾದನಂ।।

ಧನಂಜಯ! ನೀನು ಸದಾ ಸಮರದಲ್ಲಿ ಸ್ಥಿರಭಾವದಲ್ಲಿರುವೆ. ಸಮ್ಮೂಢನಾಗದೇ ಅಸ್ತ್ರಗಳ ಕರ್ತವ್ಯವನ್ನು ಅರ್ಥಮಾಡಿಕೊಂಡಿರುವೆ.

03170068a ಅವಿಷಹ್ಯೋ ರಣೇ ಹಿ ತ್ವಂ ದೇವದಾನವರಾಕ್ಷಸೈಃ।
03170068c ಸಯಕ್ಷಾಸುರಗಂಧರ್ವೈಃ ಸಪಕ್ಷಿಗಣಪನ್ನಗೈಃ।।

ರಣದಲ್ಲಿ ನಿನ್ನನ್ನು ದೇವ, ದಾನವ, ರಾಕ್ಷಸರು, ಯಕ್ಷ, ಅಸುರ, ಗಂಧರ್ವ, ಪಕ್ಷಿಗಣ ಮತ್ತು ಪನ್ನಗಗಳೊಂದಿಗೆ ಸಹಿಸಲಾರರು.

03170069a ವಸುಧಾಂ ಚಾಪಿ ಕೌಂತೇಯ ತ್ವದ್ಬಾಹುಬಲನಿರ್ಜಿತಾಂ।
03170069c ಪಾಲಯಿಷ್ಯತಿ ಧರ್ಮಾತ್ಮಾ ಕುಂತೀಪುತ್ರೋ ಯುಧಿಷ್ಠಿರಃ।।

ಕೌಂತೇಯ! ನಿನ್ನ ಬಾಹುಬಲದಿಂದ ಗಳಿಸುವ ವಸುಧೆಯನ್ನು ಧರ್ಮಾತ್ಮ ಕುಂತೀಪುತ್ರ ಯುಧಿಷ್ಠಿರನು ಪಾಲಿಸುತ್ತಾನೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಹಿರಣ್ಯಪುರದೈತ್ಯವಧೇ ಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಹಿರಣ್ಯಪುರದೈತ್ಯವಧದಲ್ಲಿ ನೂರಾಎಪ್ಪತ್ತನೆಯ ಅಧ್ಯಾಯವು.