169 ನಿವಾತಕವಚಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 169

ಸಾರ

ನಿವಾತಕವಚರ ವಿನಾಶ (1-35).

03169001 ಅರ್ಜುನ ಉವಾಚ।
03169001a ಅದೃಶ್ಯಮಾನಾಸ್ತೇ ದೈತ್ಯಾ ಯೋಧಯಂತಿ ಸ್ಮ ಮಾಯಯಾ।
03169001c ಅದೃಶ್ಯಾನ್ ಅಸ್ತ್ರವೀರ್ಯೇಣ ತಾನಪ್ಯಹಮಯೋಧಯಂ।।

ಅರ್ಜುನನು ಹೇಳಿದನು: “ಅದೃಶ್ಯರಾಗಿ ಆ ದೈತ್ಯರು ನನ್ನೊಡನೆ ಮಾಯೆಯಿಂದ ಯುದ್ಧಮಾಡಿದರು; ಆದರೆ ನಾನು ಆದೃಶ್ಯವಾಗಿರುವವರೊಡನೆ ಅಸ್ತ್ರವೀರ್ಯದಿಂದ ಹೋರಾಡಿದೆನು.

03169002a ಗಾಂಡೀವಮುಕ್ತಾ ವಿಶಿಖಾಃ ಸಮ್ಯಗಸ್ತ್ರಪ್ರಚೋದಿತಾಃ।
03169002c ಅಚ್ಚಿಂದನ್ನುತ್ತಮಾಂಗಾನಿ ಯತ್ರ ಯತ್ರ ಸ್ಮ ತೇಽಭವನ್।।

ಗಾಂಡೀವದಿಂದ ಬಿಟ್ಟ ಸರಿಯಾಗಿ ಅಸ್ತ್ರಗಳಿಂದ ಪ್ರಚೋದಿತ ಬಾಣಗಳು ಅವರ ಶಿರಗಳನ್ನು ಎಲ್ಲೆಲ್ಲಿ ಇದ್ದವೋ ಅಲ್ಲಿಯೇ ತುಂಡರಿಸಿದವು.

03169003a ತತೋ ನಿವಾತಕವಚಾ ವಧ್ಯಮಾನಾ ಮಯಾ ಯುಧಿ।
03169003c ಸಂಹೃತ್ಯ ಮಾಯಾಂ ಸಹಸಾ ಪ್ರಾವಿಶನ್ಪುರಮಾತ್ಮನಃ।।

ಆಗ ಯುದ್ಧದಲ್ಲಿ ನನ್ನಿಂದ ಹೊಡೆಯಲ್ಪಟ್ಟ ನಿವಾತಕವಚರು ಒಮ್ಮೆಗೇ ಮಾಯೆಯನ್ನು ತೊರೆದು ತಮ್ಮ ಪುರವನ್ನು ಪ್ರವೇಶಿಸಿದರು.

03169004a ವ್ಯಪಯಾತೇಷು ದೈತ್ಯೇಷು ಪ್ರಾದುರ್ಭೂತೇ ಚ ದರ್ಶನೇ।
03169004c ಅಪಶ್ಯಂ ದಾನವಾಂಸ್ತತ್ರ ಹತಾಂ ಶತಸಹಸ್ರಶಃ।।

ದೈತ್ಯರು ಹೋಗಿ ಪುನ ಕಾಣಿಸುವಂತಾದಾಗ ನಾನು ಅಲ್ಲಿ ಹತರಾಗಿದ್ದ ನೂರಾರು ಸಾವಿರಾರು ದಾನವರನ್ನು ನೋಡಿದೆನು.

03169005a ವಿನಿಷ್ಪಿಷ್ಟಾನಿ ತತ್ರೈಷಾಂ ಶಸ್ತ್ರಾಣ್ಯಾಭರಣಾನಿ ಚ।
03169005c ಕೂಟಶಃ ಸ್ಮ ಪ್ರದೃಶ್ಯಂತೇ ಗಾತ್ರಾಣಿ ಕವಚಾನಿ ಚ।।

ಅಲ್ಲಿ ಅವರ ಶಸ್ತ್ರಗಳು ಮತ್ತು ಆಭರಣಗಳು ಚದುರಿ ಬಿದ್ದಿದ್ದವು; ದೇಹಗಳು ಮತ್ತು ಕವಚಗಳು ರಾಶಿರಾಶಿಯಾಗಿ ಬಿದ್ದಿರುವುದು ಕಂಡುಬಂದಿತು.

03169006a ಹಯಾನಾಂ ನಾಂತರಂ ಹ್ಯಾಸೀತ್ಪದಾದ್ವಿಚಲಿತುಂ ಪದಂ।
03169006c ಉತ್ಪತ್ಯ ಸಹಸಾ ತಸ್ಥುರಂತರಿಕ್ಷಗಮಾಸ್ತತಃ।।

ಕುದುರೆಗಳಿಗೆ ಒಂದು ಕಾಲನ್ನು ಚಲಿಸಲೂ ಸ್ಥಳವಿರಲಿಲ್ಲ. ಒಮ್ಮೆಲೇ ಹಾರಿ ಅವು ಅಂತರಿಕ್ಷಗಾಮಿಗಳಾದವು.

03169007a ತತೋ ನಿವಾತಕವಚಾ ವ್ಯೋಮ ಸಂಚಾದ್ಯ ಕೇವಲಂ।
03169007c ಅದೃಶ್ಯಾ ಹ್ಯಭ್ಯವರ್ತಂತ ವಿಸೃಜಂತಃ ಶಿಲೋಚ್ಚಯಾನ್।।

ಆಗ ನಿವಾತಕವಚರೂ ಕೂಡ ಇಡೀ ವ್ಯೋಮವನ್ನು ತುಂಬಿ, ಅದೃಶ್ಯರಾಗಿಯೇ ದೊಡ್ಡ ಶಿಲೆಗಳನ್ನು ಬೀರಿ ಆಕ್ರಮಣಮಾಡಿದರು.

03169008a ಅಂತರ್ಭೂಮಿಗತಾಶ್ಚಾನ್ಯೇ ಹಯಾನಾಂ ಚರಣಾನ್ಯಥ।
03169008c ನ್ಯಗೃಹ್ಣನ್ದಾನವಾ ಘೋರಾ ರಥಚಕ್ರೇ ಚ ಭಾರತ।।

ಭಾರತ! ಭೂಮಿಯ ಒಳಗೆ ಹೋಗಿದ್ದ ಅವರಲ್ಲಿಯೇ ಕೆಲವು ಘೋರ ದಾನವರು ಕುದುರೆಗಳ ಕಾಲುಗಳನ್ನು ಮತ್ತು ರಥಚಕ್ರಗಳನ್ನು ಎಳೆದು ತಡೆದರು.

03169009a ವಿನಿಗೃಹ್ಯ ಹರೀನಶ್ವಾನ್ರಥಂ ಚ ಮಮ ಯುಧ್ಯತಃ।
03169009c ಸರ್ವತೋ ಮಾಮಚಿನ್ವಂತ ಸರಥಂ ಧರಣೀಧರೈಃ।।
03169010a ಪರ್ವತೈರುಪಚೀಯದ್ಭಿಃ ಪತಮಾನೈಸ್ತಥಾಪರೈಃ।
03169010c ಸ ದೇಶೋ ಯತ್ರ ವರ್ತಾಮ ಗುಹೇವ ಸಮಪದ್ಯತ।।

ಆ ಹರಿ ಕುದುರೆಗಳನ್ನು ಮತ್ತು ಯುದ್ಧಮಾಡುತ್ತಿರುವ ನನ್ನ ರಥವನ್ನು ಹಿಡಿದು ಅವರು ಎಲ್ಲ ಕಡೆಯಿಂದ ರಥದೊಡನೆ ನನ್ನ ಮೇಲೆ ಎಲ್ಲಕಡೆಯಿಂದಲೂ ಮುಚ್ಚಿ ಪರ್ವತಗಳನ್ನು ಒಟ್ಟುಹಾಕಿದರು. ಬಿದ್ದಿರುವ ಮತ್ತು ಇನ್ನೂ ಬೀಳುತ್ತಿರುವ ಪರ್ವತಗಳಿಂದ ನಾವಿರುವ ಪ್ರದೇಶವು ಗುಹೆಯಂತೆ ಆಯಿತು.

03169011a ಪರ್ವತೈಶ್ಚಾದ್ಯಮಾನೋಽಹಂ ನಿಗೃಹೀತೈಶ್ಚ ವಾಜಿಭಿಃ।
03169011c ಅಗಚ್ಚಂ ಪರಮಾಮಾರ್ತಿಂ ಮಾತಲಿಸ್ತದಲಕ್ಷಯತ್।।
03169012a ಲಕ್ಷಯಿತ್ವಾ ತು ಮಾಂ ಭೀತಮಿದಂ ವಚನಮಬ್ರವೀತ್।
03169012c ಅರ್ಜುನಾರ್ಜುನ ಮಾ ಭೈಸ್ತ್ವಂ ವಜ್ರಮಸ್ತ್ರಮುದೀರಯ।।

ಸಂಪೂರ್ಣವಾಗಿ ಪರ್ವತಗಳಿಂದ ಮುಚ್ಚಲ್ಪಟ್ಟು, ಕುದುರೆಗಳು ಚಲಿಸಲಾಗದಿರುವಾಗ ನಾನು ಪರಮ ಚಿಂತಿತನಾದೆನು. ನಾನು ಹೆದರಿದುದನ್ನು ಗಮನಿಸಿ ಮಾತಲಿಯು ಹೇಳಿದನು: “ಅರ್ಜುನ! ಅರ್ಜುನ! ಹೆದರಬೇಡ! ಈಗ ವಜ್ರಾಸ್ತ್ರವನ್ನು ಬಿಡು!”

03169013a ತತೋಽಹಂ ತಸ್ಯ ತದ್ವಾಕ್ಯಂ ಶ್ರುತ್ವಾ ವಜ್ರಮುದೀರಯಂ।
03169013c ದೇವರಾಜಸ್ಯ ದಯಿತಂ ವಜ್ರಮಸ್ತ್ರಂ ನರಾಧಿಪ।।

ನರಾಧಿಪ! ಅವನ ಆ ಮಾತನ್ನು ಕೇಳಿ ನಾನು ದೇವರಾಜನಿಗೆ ಪ್ರಿಯವಾದ ವಜ್ರಾಸ್ತ್ರವನ್ನು ಬಿಟ್ಟೆನು.

03169014a ಅಚಲಂ ಸ್ಥಾನಮಾಸಾದ್ಯ ಗಾಂಡೀವಮನುಮಂತ್ರ್ಯ ಚ।
03169014c ಅಮುಂಚಂ ವಜ್ರಸಂಸ್ಪರ್ಶಾನಾಯಸಾನ್ನಿಶಿತಾಂ ಶರಾನ್।।

ಅಚಲವಾದ ಗೋಡೆಗಳಿಂದ ಆವೃತ ಸ್ಥಳವನ್ನು ಸೇರಿ ವಜ್ರದ ಪರಿಣಾಮವುಳ್ಳ ಹರಿತ ಉಕ್ಕಿನ ಶರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದೆನು.

03169015a ತತೋ ಮಾಯಾಶ್ಚ ತಾಃ ಸರ್ವಾ ನಿವಾತಕವಚಾಂಶ್ಚ ತಾನ್।
03169015c ತೇ ವಜ್ರಚೋದಿತಾ ಬಾಣಾ ವಜ್ರಭೂತಾಃ ಸಮಾವಿಶನ್।।

ವಜ್ರದಿಂದ ಪ್ರಚೋದಿತ ಆ ಬಾಣಗಳು ವಜ್ರದಂತೆಯೇ ಆಗಿ ನಿವಾತಕವಚರ ಆ ಎಲ್ಲ ಮಾಯೆಗಳನ್ನು ಭೇದಿಸಿದವು.

03169016a ತೇ ವಜ್ರವೇಗಾಭಿಹತಾ ದಾನವಾಃ ಪರ್ವತೋಪಮಾಃ।
03169016c ಇತರೇತರಮಾಶ್ಲಿಷ್ಯ ನ್ಯಪತನ್ಪೃಥಿವೀತಲೇ।।

ಆ ವೇಗವಾದ ವಜ್ರಗಳ ಹೊಡೆತಕ್ಕೆ ಸಿಲುಕಿದ ಪರ್ವತೋಪಮ ದಾನವರು ಇತರರನ್ನು ಅಪ್ಪಿಕೊಂಡು ಭೂಮಿಯ ಮೇಲೆ ಬಿದ್ದರು.

03169017a ಅಂತರ್ಭೂಮೌ ತು ಯೇಽಗೃಹ್ಣನ್ದಾನವಾ ರಥವಾಜಿನಃ।
03169017c ಅನುಪ್ರವಿಶ್ಯ ತಾನ್ಬಾಣಾಃ ಪ್ರಾಹಿಣ್ವನ್ಯಮಸಾದನಂ।।

ಆ ಬಾಣಗಳು ಭೂಮಿಯ ಒಳಗೆ ಇದ್ದು ರಥ ಕುದುರೆಗಳನ್ನು ಹಿಡಿದಿದ್ದ ದಾನವರನ್ನೂ ಹುಡುಕಿ ಯಮಸಾದನಕ್ಕೆ ಕಳುಹಿಸಿದವು.

03169018a ಹತೈರ್ನಿವಾತಕವಚೈರ್ನಿರಸ್ತೈಃ ಪರ್ವತೋಪಮೈಃ।
03169018c ಸಮಾಚ್ಚಾದ್ಯತ ದೇಶಃ ಸ ವಿಕೀರ್ಣೈರಿವ ಪರ್ವತೈಃ।।

ಆ ಪ್ರದೇಶವು ಚದುರಿದ ಪರ್ವತಗಳಂತೆ ಪರ್ವತೋಪಮ ನಿವಾತಕವಚರ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳಿಂದ ತುಂಬಿಹೋಯಿತು.

03169019a ನ ಹಯಾನಾಂ ಕ್ಷತಿಃ ಕಾ ಚಿನ್ನ ರಥಸ್ಯ ನ ಮಾತಲೇಃ।
03169019c ಮಮ ಚಾದೃಶ್ಯತ ತದಾ ತದದ್ಭುತಮಿವಾಭವತ್।।

ಆದರೆ ಕುದುರೆಗಳಾಗಲೀ, ರಥವಾಗಲೀ, ಮಾತಲಿಯಾಗಲೀ ಅಥವಾ ನಾನಾಗಲೀ ಸ್ವಲ್ಪವೂ ಚ್ಯುತಿಯನ್ನು ಹೊಂದಲಿಲ್ಲ. ಇದೊಂದು ಅದ್ಭುತವೇ ನಡೆಯಿತು.

03169020a ತತೋ ಮಾಂ ಪ್ರಹಸನ್ರಾಜನ್ಮಾತಲಿಃ ಪ್ರತ್ಯಭಾಷತ।
03169020c ನೈತದರ್ಜುನ ದೇವೇಷು ತ್ವಯಿ ವೀರ್ಯಂ ಯದೀಕ್ಷ್ಯತೇ।।

ರಾಜನ್! ಆಗ ಮಾತಲಿಯು ನಗುತ್ತಾ ನನಗೆ ಹೇಳಿದನು: “ಅರ್ಜುನ! ನಿನ್ನಲ್ಲಿ ಕಂಡುಬರುವ ವೀರ್ಯವು ದೇವತೆಗಳಲ್ಲಿಯೂ ಇಲ್ಲ.”

03169021a ಹತೇಷ್ವಸುರಸಂಘೇಷು ದಾರಾಸ್ತೇಷಾಂ ತು ಸರ್ವಶಃ।
03169021c ಪ್ರಾಕ್ರೋಶನ್ನಗರೇ ತಸ್ಮಿನ್ಯಥಾ ಶರದಿ ಲಕ್ಷ್ಮಣಾಃ।।

ಆ ಅಸುರರ ಗುಂಪುಗಳು ಹತರಾಗಲು ಅವರ ಪತ್ನಿಯರೆಲ್ಲರೂ ನಗರದಲ್ಲಿ ಶರದೃತುವಿನ ಸಾರಂಗಗಳಂತೆ ರೋದಿಸತೊಡಗಿದರು.

03169022a ತತೋ ಮಾತಲಿನಾ ಸಾರ್ಧಮಹಂ ತತ್ಪುರಮಭ್ಯಯಾಂ।
03169022c ತ್ರಾಸಯನ್ರಥಘೋಷೇಣ ನಿವಾತಕವಚಸ್ತ್ರಿಯಃ।।

ಮಾತಲಿಯೊಂದಿಗೆ ನಾನು ನಿವಾತಕವಚ ಸ್ತ್ರೀಯರನ್ನು ರಥಘೋಷದಿಂದ ನಡುಗಿಸುತ್ತಾ ಆ ಪುರದೊಳಗೆ ಹೋದೆನು.

03169023a ತಾನ್ದೃಷ್ಟ್ವಾ ದಶಸಾಹಸ್ರಾನ್ಮಯೂರಸದೃಶಾನ್ ಹಯಾನ್।
03169023c ರಥಂ ಚ ರವಿಸಂಕಾಶಂ ಪ್ರಾದ್ರವನ್ಗಣಶಃ ಸ್ತ್ರಿಯಃ।।

ಹತ್ತುಸಾವಿರ ನವಿಲಿನ ಬಣ್ಣಗಳ ಕುದುರೆಗಳನ್ನು ಮತ್ತು ರವಿಸಂಕಾಶ ರಥವನ್ನು ನೋಡಿ ಸ್ತ್ರೀಯರು ಗುಂಪುಗುಂಪಾಗಿ ಓಡಿದರು.

03169024a ತಾಭಿರಾಭರಣೈಃ ಶಬ್ಧಸ್ತ್ರಾಸಿತಾಭಿಃ ಸಮೀರಿತಃ।
03169024c ಶಿಲಾನಾಮಿವ ಶೈಲೇಷು ಪತಂತೀನಾಮಭೂತ್ತದಾ।।

ಆಭರಣಗಳೊಂದಿಗೆ ಆ ವಿಭೀತರಾದ ಸ್ತ್ರೀಯರು ಮಾಡಿದ ಶಬ್ಧವು ಪರ್ವತದಿಂದ ಹಾಸಿಗಲ್ಲುಗಳು ಕೆಳಗೆ ಬೀಳುತ್ತಿರುವಂತೆ ಕೇಳಿಸಿದವು.

03169025a ವಿತ್ರಸ್ತಾ ದೈತ್ಯನಾರ್ಯಸ್ತಾಃ ಸ್ವಾನಿ ವೇಶ್ಮಾನ್ಯಥಾವಿಶನ್।
03169025c ಬಹುರತ್ನವಿಚಿತ್ರಾಣಿ ಶಾತಕುಂಭಮಯಾನಿ ಚ।।

ಬೆದರಿ ನಡುಗುತ್ತ ಆ ದೈತ್ಯನಾರಿಯರು ವಿಚಿತ್ರವಾದ ಬಹುರತ್ನಗಳಿಂದ ಮತ್ತು ಬಂಗಾರದಿಂದ ನಿರ್ಮಿಸಲ್ಪಟ್ಟಿದ್ದ ತಮ್ಮ ಮನೆಗಳನ್ನು ಪ್ರವೇಶಿಸಿದರು.

03169026a ತದದ್ಭುತಾಕಾರಮಹಂ ದೃಷ್ಟ್ವಾ ನಗರಮುತ್ತಮಂ।
03169026c ವಿಶಿಷ್ಟಂ ದೇವನಗರಾದಪೃಚ್ಚಂ ಮಾತಲಿಂ ತತಃ।।

ಆ ಅದ್ಭುತಾಕಾರದ, ದೇವನಗರವನ್ನೂ ಮೀರಿದ ವಿಶಿಷ್ಠವಾದ ಉತ್ತಮ ನಗರವನ್ನು ನೋಡಿ ನಾನು ಮಾತಲಿಗೆ ಹೇಳಿದೆನು:

03169027a ಇದಮೇವಂವಿಧಂ ಕಸ್ಮಾದ್ದೇವತಾ ನಾವಿಶಂತ್ಯುತ।
03169027c ಪುರಂದರಪುರಾದ್ಧೀದಂ ವಿಶಿಷ್ಟಮಿತಿ ಲಕ್ಷಯೇ।।

“ದೇವತೆಗಳು ಏಕೆ ಈ ಅಮೋಘ ಸ್ಥಳದಲ್ಲಿ ವಾಸಿಸುವುದಿಲ್ಲ? ಇದು ಪುರಂದರನ ಪುರಕ್ಕಿಂತಲೂ ವಿಶಿಷ್ಟವಾಗಿದೆ ಎಂದು ನನಗನ್ನಿಸುತ್ತದೆ.”

03169028 ಮಾತಲಿರುವಾಚ।
03169028a ಆಸೀದಿದಂ ಪುರಾ ಪಾರ್ಥ ದೇವರಾಜಸ್ಯ ನಃ ಪುರಂ।
03169028c ತತೋ ನಿವಾತಕವಚೈರಿತಃ ಪ್ರಚ್ಯಾವಿತಾಃ ಸುರಾಃ।।

ಮಾತಲಿಯು ಹೇಳಿದನು: “ಪಾರ್ಥ! ಇದು ಹಿಂದೆ ನಮ್ಮ ದೇವರಾಜನದೇ ಪುರವಾಗಿತ್ತು. ಆದರೆ ನಿವಾತಕವಚರಿಂದ ಸುರರು ಹೊರಗಟ್ಟಲ್ಪಟ್ಟಿದ್ದರು.

03169029a ತಪಸ್ತಪ್ತ್ವಾ ಮಹತ್ತೀವ್ರಂ ಪ್ರಸಾದ್ಯ ಚ ಪಿತಾಮಹಂ।
03169029c ಇದಂ ವೃತಂ ನಿವಾಸಾಯ ದೇವೇಭ್ಯಶ್ಚಾಭಯಂ ಯುಧಿ।।

ಅವರು ಮಹಾತೀವ್ರ ತಪಸ್ಸನ್ನು ತಪಿಸಿ ಪಿತಾಮಹನ ಪ್ರಸಾದಕ್ಕೊಳಗಾದರು. ಇಲ್ಲಿಯೇ ವಾಸಿಸಿ ಯುದ್ಧದಲ್ಲಿ ದೇವತೆಗಳಿಂದ ಅಭಯವೇ ಅವರ ವರವಾಗಿತ್ತು.

03169030a ತತಃ ಶಕ್ರೇಣ ಭಗವಾನ್ಸ್ವಯಂಭೂರಭಿಚೋದಿತಃ।
03169030c ವಿಧತ್ತಾಂ ಭಗವಾನತ್ರೇತ್ಯಾತ್ಮನೋ ಹಿತಕಾಮ್ಯಯಾ।।

ಆಗ ಶಕ್ರನು ಭಗವಾನ್ ಸ್ವಯಂಭುವಿನ ಮೊರೆಹೊಕ್ಕನು. “ಭಗವಾನ್! ನಿನ್ನದೇ ಹಿತಕ್ಕಾಗಿ ಈ ವಿಷಯದಲ್ಲಿ ವಿಧಿಸು!”

03169031a ತತ ಉಕ್ತೋ ಭಗವತಾ ದಿಷ್ಟಮತ್ರೇತಿ ವಾಸವಃ।
03169031c ಭವಿತಾಂತಸ್ತ್ವಮೇವೈಷಾಂ ದೇಹೇನಾನ್ಯೇನ ವೃತ್ರಹನ್।।

ಈ ವಿಷಯದಲ್ಲಿ ದೈವದಂತಾಗುವುದನ್ನು ಭಗವಾನನು ವಾಸವನಿಗೆ ಹೇಳಿದನು: “ವೃತ್ರಹನ್! ನೀನೇ ಇವರ ಅಂತ್ಯಕ್ಕೆ ಕಾರಣನಾಗುತ್ತೀಯೆ. ಆದರೆ ಬೇರೆಯೇ ದೇಹದಲ್ಲಿ!”

03169032a ತತ ಏಷಾಂ ವಧಾರ್ಥಾಯ ಶಕ್ರೋಽಸ್ತ್ರಾಣಿ ದದೌ ತವ।
03169032c ನ ಹಿ ಶಕ್ಯಾಃ ಸುರೈರ್ಹಂತುಂ ಯ ಏತೇ ನಿಹತಾಸ್ತ್ವಯಾ।।

ಆದುದರಿಂದ ಇವರ ವಧೆಗಾಗಿ ಶಕ್ರನು ನಿನಗೆ ಅಸ್ತ್ರಗಳನ್ನು ನೀಡಿದನು. ನೀನು ಸಂಹರಿಸಿದ ಇವರನ್ನು ಸುರರು ಸಂಹರಿಸಲು ಸಾಧ್ಯವಾಗುತ್ತಿರಲಿಲ್ಲ.

03169033a ಕಾಲಸ್ಯ ಪರಿಣಾಮೇನ ತತಸ್ತ್ವಮಿಹ ಭಾರತ।
03169033c ಏಷಾಮಂತಕರಃ ಪ್ರಾಪ್ತಸ್ತತ್ತ್ವಯಾ ಚ ಕೃತಂ ತಥಾ।।

ಭಾರತ! ಕಾಲದ ಪರಿಣಾಮವಾಗಿ, ಇವರನ್ನು ಮುಗಿಸಲು ನೀನು ಇಲ್ಲಿಗೆ ಬಂದೆ ಮತ್ತು ಅದನ್ನು ಮಾಡಿದೆ ಕೂಡ.

03169034a ದಾನವಾನಾಂ ವಿನಾಶಾರ್ಥಂ ಮಹಾಸ್ತ್ರಾಣಾಂ ಮಹದ್ಬಲಂ।
03169034c ಗ್ರಾಹಿತಸ್ತ್ವಂ ಮಹೇಂದ್ರೇಣ ಪುರುಷೇಂದ್ರ ತದುತ್ತಮಂ।।

ಪುರುಷೇಂದ್ರ! ದಾನವರ ವಿನಾಶಕ್ಕಾಗಿ ಮಹೇಂದ್ರನು ನಿನಗೆ ಉತ್ತಮವಾದ, ಮಹಾಬಲವಾದ ಮಹಾಸ್ತ್ರಗಳನ್ನು ನೀಡಿದನು.””

03169035 ಅರ್ಜುನ ಉವಾಚ।
03169035a ತತಃ ಪ್ರವಿಶ್ಯ ನಗರಂ ದಾನವಾಂಶ್ಚ ನಿಹತ್ಯ ತಾನ್।
03169035c ಪುನರ್ಮಾತಲಿನಾ ಸಾರ್ಧಮಗಚ್ಚಂ ದೇವಸದ್ಮ ತತ್।।

ಅರ್ಜುನನು ಹೇಳಿದನು: “ಆಗ ನಗರವನ್ನು ಪ್ರವೇಶಿಸಿ ಆ ದಾನವರನ್ನು ಕೊಂದು ಪುನಃ ಮಾತಲಿಯೊಂದಿಗೆ ದೇವಪೀಠಕ್ಕೆ ಬಂದೆನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ನೂರಾಅರವತ್ತೊಂಭತ್ತನೆಯ ಅಧ್ಯಾಯವು.