168 ನಿವಾತಕವಚಯುದ್ಧೇ ಮಾಯಾಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 168

ಸಾರ

ನಿವಾತಕವಚರ ಮಾಯಾಯುದ್ಧವು ಮುಂದುವರೆದುದು (1-30).

03168001 ಅರ್ಜುನ ಉವಾಚ।
03168001a ತತೋಽಶ್ಮವರ್ಷಂ ಸುಮಹತ್ಪ್ರಾದುರಾಸೀತ್ಸಮಂತತಃ।
03168001c ನಗಮಾತ್ರೈರ್ಮಹಾಘೋರೈಸ್ತನ್ಮಾಂ ದೃಢಮಪೀಡಯತ್।।
03168002a ತದಹಂ ವಜ್ರಸಂಕಾಶೈಃ ಶರೈರಿಂದ್ರಾಸ್ತ್ರಚೋದಿತೈಃ।
03168002c ಅಚೂರ್ಣಯಂ ವೇಗವದ್ಭಿಃ ಶತಧೈಕೈಕಮಾಹವೇ।।

ಅರ್ಜುನನು ಹೇಳಿದನು: “ಆಗ ಎಲ್ಲಕಡೆಗಳಿಂದಲೂ ಕಲ್ಲುಬಂಡೆಗಳ ಸುರಿಮಳೆಯು ಕಂಡುಬಂದಿತು. ಪರ್ವತಗಳಷ್ಟು ದೊಡ್ಡದಾಗಿ ಘೋರವಾಗಿದ್ದ ಅವು ನನ್ನನ್ನು ಒತ್ತಿಹಿಡಿದು ಪೀಡಿಸಿದವು. ಆದರೆ ನಾನು ಇಂದ್ರಾಸ್ತ್ರದಿಂದ ಪ್ರಚೋದಿತಗೊಂಡ ವಜ್ರಸಂಕಾಶ ವೇಗ ಶರಗಳಿಂದ ಪ್ರತಿಯೊಂದನ್ನೂ ನೂರಾರು ಚೂರುಗಳನ್ನಾಗಿ ಪುಡಿಮಾಡಿದೆನು.

03168003a ಚೂರ್ಣ್ಯಮಾನೇಽಶ್ಮವರ್ಷೇ ತು ಪಾವಕಃ ಸಮಜಾಯತ।
03168003c ತತ್ರಾಶ್ಮಚೂರ್ಣಮಪತತ್ಪಾವಕಪ್ರಕರಾ ಇವ।।

ಸುರಿಯುತ್ತಿರುವ ಕಲ್ಲುಬಂಡೆಗಳು ಚೂರಾದಾಗ ಅಲ್ಲಿ ಬೆಂಕಿಯು ಹುಟ್ಟಿತು, ಮತ್ತು ಕಲ್ಲುಚೂರುಗಳು ಆ ಅಗ್ನಿಯಲ್ಲಿ ಕಿಡಿಗಳಂತೆ ಬಿದ್ದವು.

03168004a ತತೋಽಶ್ಮವರ್ಷೇ ನಿಹತೇ ಜಲವರ್ಷಂ ಮಹತ್ತರಂ।
03168004c ಧಾರಾಭಿರಕ್ಷಮಾತ್ರಾಭಿಃ ಪ್ರಾದುರಾಸೀನ್ಮಮಾಂತಿಕೇ।।

ಆ ಶಿಲಾವರ್ಷವು ತಣ್ಣಗಾಗಲು, ಒನಕೆಯ ಗಾತ್ರದ ಧಾರೆಗಳ ಮಹತ್ತರ ಜಲವರ್ಷವು ನನ್ನ ಮೇಲೆ ಸುರಿಯಲಾರಂಭಿಸಿತು.

03168005a ನಭಸಃ ಪ್ರಚ್ಯುತಾ ಧಾರಾಸ್ತಿಗ್ಮವೀರ್ಯಾಃ ಸಹಸ್ರಶಃ।
03168005c ಆವೃಣ್ವನ್ಸರ್ವತೋ ವ್ಯೋಮ ದಿಶಶ್ಚೋಪದಿಶಸ್ತಥಾ।।

ನಭದಿಂದ ಸಹಸ್ರಾರು ಧಾರೆಗಳು ಅತಿ ಬಲದಿಂದ ಸುರಿದು ದಿಕ್ಕು ಉಪದಿಕ್ಕುಗಳೊಂದಿಗೆ ವ್ಯೋಮವನ್ನು ಎಲ್ಲ ಕಡೆಗಳಿಂದಲೂ ಆವರಿಸಿತು.

03168006a ಧಾರಾಣಾಂ ಚ ನಿಪಾತೇನ ವಾಯೋರ್ವಿಸ್ಫೂರ್ಜಿತೇನ ಚ।
03168006c ಗರ್ಜಿತೇನ ಚ ದೈತ್ಯಾನಾಂ ನ ಪ್ರಾಜ್ಞಾಯತ ಕಿಂ ಚನ।।

ಸುರಿಯುತ್ತಿರುವ ಧಾರೆಗಳು, ಭುಸುಗುಟ್ಟುತ್ತಿರುವ ಗಾಳಿ, ಮತ್ತು ದೈತ್ಯರ ಗರ್ಜನೆಯಿಂದ ಏನೂ ತಿಳಿಯದಾಯಿತು.

03168007a ಧಾರಾ ದಿವಿ ಚ ಸಂಬದ್ಧಾ ವಸುಧಾಯಾಂ ಚ ಸರ್ವಶಃ।
03168007c ವ್ಯಾಮೋಹಯಂತ ಮಾಂ ತತ್ರ ನಿಪತಂತ್ಯೋಽನಿಶಂ ಭುವಿ।।
03168008a ತತ್ರೋಪದಿಷ್ಟಮಿಂದ್ರೇಣ ದಿವ್ಯಮಸ್ತ್ರಂ ವಿಶೋಷಣಂ।
03168008c ದೀಪ್ತಂ ಪ್ರಾಹಿಣವಂ ಘೋರಮಶುಷ್ಯತ್ತೇನ ತಜ್ಜಲಂ।।

ದಿವಿ ಮತ್ತು ಭೂಮಿಯ ನಡುವೆ ನೀರಿನ ಧಾರೆ ಮಾತ್ರವಿತ್ತು. ನಿರಂತರವಾಗಿ ಭೂಮಿಯಮೇಲೆ ಸುರಿಯುತ್ತಿರುವ ಧಾರೆಯು ನನ್ನನ್ನು ಮೂರ್ಛೆಗೊಳಿಸಿದವು. ಆಗ ನಾನು ಇಂದ್ರನು ಉಪದೇಶಿಸಿದ ವಿಶೇಷವಾದ ದಿವ್ಯಾಸ್ತ್ರವನ್ನು ಪ್ರಯೋಗಿಸಿದೆನು. ಬಿಟ್ಟ ಘೋರವಾಗಿ ಉರಿಯುತ್ತಿರುವ ಅದು ನೀರನ್ನು ಒಣಗಿಸಿತು.

03168009a ಹತೇಽಶ್ಮವರ್ಷೇ ತು ಮಯಾ ಜಲವರ್ಷೇ ಚ ಶೋಷಿತೇ।
03168009c ಮುಮುಚುರ್ದಾನವಾ ಮಾಯಾಮಗ್ನಿಂ ವಾಯುಂ ಚ ಮಾನದ।।

ಮಾನದ! ಶಿಲಾವರ್ಷವನ್ನು ಮುಗಿಸಿ ನಾನು ಜಲಾವರ್ಷವನ್ನೂ ಒಣಗಿಸಲು ದಾನವರು ಮಾಯೆಯಿಂದ ಅಗ್ನಿ ಮತ್ತು ವಾಯುವನ್ನು ಬಿಡುಗಡೆಮಾಡಿದರು.

03168010a ತತೋಽಹಮಗ್ನಿಂ ವ್ಯಧಮಂ ಸಲಿಲಾಸ್ತ್ರೇಣ ಸರ್ವಶಃ।
03168010c ಶೈಲೇನ ಚ ಮಹಾಸ್ತ್ರೇಣ ವಾಯೋರ್ವೇಗಮಧಾರಯಂ।।

ಆಗ ನಾನು ಎಲ್ಲ ಬೆಂಕಿಯನ್ನೂ ಸಲಿಲಾಸ್ತ್ರಗಳಿಂದ ಆರಿಸಿದೆನು ಮತ್ತು ಮಹಾ ಶೈಲಾಸ್ತ್ರದಿಂದ ವಾಯುವಿನ ವೇಗವನ್ನು ತಡೆದೆನು.

03168011a ತಸ್ಯಾಂ ಪ್ರತಿಹತಾಯಾಂ ತು ದಾನವಾ ಯುದ್ಧದುರ್ಮದಾಃ।
03168011c ಪ್ರಾಕುರ್ವನ್ವಿವಿಧಾ ಮಾಯಾ ಯೌಗಪದ್ಯೇನ ಭಾರತ।।

ಭಾರತ! ಆ ಮಾಯೆಯನ್ನೂ ಎದುರಿಸಲು, ಯುದ್ಧದುರ್ಮದರಾದ ದಾನವರು ಒಂದೇ ಸಮನೆ ವಿವಿಧ ಮಾಯೆಗಳನ್ನು ಪ್ರಯೋಗಿಸಿದರು.

03168012a ತತೋ ವರ್ಷಂ ಪ್ರಾದುರಭೂತ್ಸುಮಹಲ್ಲೋಮಹರ್ಷಣಂ।
03168012c ಅಸ್ತ್ರಾಣಾಂ ಘೋರರೂಪಾಣಾಮಗ್ನೇರ್ವಾಯೋಸ್ತಥಾಶ್ಮನಾಂ।।

ಆಗ ಅತಿದೊಡ್ಡದಾದ, ಮೈನವಿರೇಳಿಸುವ, ಅಸ್ತ್ರಗಳ ಘೋರರೂಪದ ಅಗ್ನಿ, ವಾಯು ಮತ್ತು ಶಿಲೆಗಳ ಮಳೆಯು ಹುಟ್ಟಿಕೊಂಡಿತು.

03168013a ಸಾ ತು ಮಾಯಾಮಯೀ ವೃಷ್ಟಿಃ ಪೀಡಯಾಮಾಸ ಮಾಂ ಯುಧಿ।
03168013c ಅಥ ಘೋರಂ ತಮಸ್ತೀವ್ರಂ ಪ್ರಾದುರಾಸೀತ್ಸಮಂತತಃ।।

ಯುದ್ಧದಲ್ಲಿ ಆ ಮಯಾಮಯಿ ಮಳೆಯು ನನ್ನನ್ನು ಪೀಡಿಸಲು, ಎಲ್ಲೆಡೆಯೂ ಘೋರವಾದ ಕತ್ತಲೆಯುಂಟಾಯಿತು.

03168014a ತಮಸಾ ಸಂವೃತೇ ಲೋಕೇ ಘೋರೇಣ ಪರುಷೇಣ ಚ।
03168014c ತುರಗಾ ವಿಮುಖಾಶ್ಚಾಸನ್ಪ್ರಾಸ್ಖಲಚ್ಚಾಪಿ ಮಾತಲಿಃ।।

ಲೋಕವು ಘೋರವಾದ ದಟ್ಟವಾದ ಕತ್ತಲೆಯಿಂದ ಆವೃತಗೊಳ್ಳಲು ಕುದುರೆಗಳು ಹಿಂದೆಸರಿದವು ಮತ್ತು ಮಾತಲಿಯು ಮುಕ್ಕರಿಸಿದನು.

03168015a ಹಸ್ತಾದ್ಧಿರಣ್ಮಯಶ್ಚಾಸ್ಯ ಪ್ರತೋದಃ ಪ್ರಾಪತದ್ಭುವಿ।
03168015c ಅಸಕೃಚ್ಚಾಹ ಮಾಂ ಭೀತಃ ಕ್ವಾಸೀತಿ ಭರತರ್ಷಭ।।

ಭರತರ್ಷಭ! ಅವನ ಕೈಯಿಂದ ಬಂಗಾರದ ಬಾರಿಕೋಲು ನೆಲದ ಮೇಲೆ ಬೀಳಲು ಭೀತನಾಗಿ ಎಲ್ಲಿದ್ದೀಯೆ? ಎಲ್ಲಿದ್ದೀಯೆ? ಎಂದು ನನ್ನನ್ನು ಕೇಳತೊಡಗಿದನು.

03168016a ಮಾಂ ಚ ಭೀರಾವಿಶತ್ತೀವ್ರಾ ತಸ್ಮಿನ್ವಿಗತಚೇತಸಿ।
03168016c ಸ ಚ ಮಾಂ ವಿಗತಜ್ಞಾನಃ ಸಂತ್ರಸ್ತ ಇದಮಬ್ರವೀತ್।।

ಹೀಗೆ ಅವನು ತನ್ನ ಬುದ್ಧಿಯನ್ನು ಕಳೆದುಕೊಂಡಾಗ ತೀವ್ರವಾದ ಭೀತಿಯು ನನ್ನನ್ನು ಹಿಡಿಯಿತು. ವಿಗತಜ್ಞಾನನಾದ ಅವನು ನಡುಗುತ್ತಾ ಹೇಳಿದನು:

03168017a ಸುರಾಣಾಮಸುರಾಣಾಂ ಚ ಸಂಗ್ರಾಮಃ ಸುಮಹಾನಭೂತ್।
03168017c ಅಮೃತಾರ್ಥೇ ಪುರಾ ಪಾರ್ಥ ಸ ಚ ದೃಷ್ಟೋ ಮಯಾನಘ।।

“ಅನಘ! ಪಾರ್ಥ! ಹಿಂದೆ ಅಮೃತಕ್ಕಾಗಿ ಸುರಾಸುರರಲ್ಲಿ ನಡೆದ ಮಹಾ ಸಂಗ್ರಾಮವನ್ನು ನೋಡಿದ್ದೆ.

03168018a ಶಂಬರಸ್ಯ ವಧೇ ಚಾಪಿ ಸಂಗ್ರಾಮಃ ಸುಮಹಾನಭೂತ್।
03168018c ಸಾರಥ್ಯಂ ದೇವರಾಜಸ್ಯ ತತ್ರಾಪಿ ಕೃತವಾನಹಂ।।

ಶಂಬರನ ವಧೆಯಲ್ಲಿಯೂ ಕೂಡ ಮಹಾ ಸಂಗ್ರಾಮವು ನಡೆಯಿತು. ಅಲ್ಲಿಯೂ ಕೂಡ ನಾನು ದೇವರಾಜನ ಸಾರಥ್ಯವನ್ನು ಮಾಡಿದ್ದೆನು.

03168019a ತಥೈವ ವೃತ್ರಸ್ಯ ವಧೇ ಸಂಗೃಹೀತಾ ಹಯಾ ಮಯಾ।
03168019c ವೈರೋಚನೇರ್ಮಯಾ ಯುದ್ಧಂ ದೃಷ್ಟಂ ಚಾಪಿ ಸುದಾರುಣಂ।।

ಹೀಗೆ ವೃತ್ರನ ವಧೆಯಲ್ಲಿಯೂ ನಾನೇ ಕುದುರೆಗಳನ್ನು ಹಿಡಿದಿದ್ದೆ. ವೈರೋಚನನ ಸುದಾರುಣ ಯುದ್ಧವನ್ನೂ ಕೂಡ ನಾನು ನೋಡಿದ್ದೇನೆ.

03168020a ಏತೇ ಮಯಾ ಮಹಾಘೋರಾಃ ಸಂಗ್ರಾಮಾಃ ಪರ್ಯುಪಾಸಿತಾಃ।
03168020c ನ ಚಾಪಿ ವಿಗತಜ್ಞಾನೋ ಭೂತಪೂರ್ವೋಽಸ್ಮಿ ಪಾಂಡವ।।

ಈ ಎಲ್ಲ ಮಹಾಘೋರ ಸಂಗ್ರಾಮಗಳನ್ನು ನಾನು ವೀಕ್ಷಿಸಿದ್ದರೂ ಕೂಡ ಇದಕ್ಕೂ ಮೊದಲು ನಾನು ನನ್ನ ಬುದ್ಧಿಯನ್ನು ಕಳೆದುಕೊಂಡಿರಲಿಲ್ಲ.

03168021a ಪಿತಾಮಹೇನ ಸಂಹಾರಃ ಪ್ರಜಾನಾಂ ವಿಹಿತೋ ಧ್ರುವಂ।
03168021c ನ ಹಿ ಯುದ್ಧಮಿದಂ ಯುಕ್ತಮನ್ಯತ್ರ ಜಗತಃ ಕ್ಷಯಾತ್।।

ನಿಶ್ಚಿತವಾಗಿಯೂ ಪಿತಾಮಹನು ಪ್ರಜೆಗಳ ಸಂಹಾರವನ್ನು ವಿಧಿಸಿರಬಹುದು. ಯಾಕೆಂದರೆ ಈ ಯುದ್ಧವು ಜಗತ್ತಿನ ಕ್ಷಯವನ್ನು ಸೂಚಿಸುವಂತಿದೆ.”

03168022a ತಸ್ಯ ತದ್ವಚನಂ ಶ್ರುತ್ವಾ ಸಂಸ್ತಭ್ಯಾತ್ಮಾನಮಾತ್ಮನಾ।
03168022c ಮೋಹಯಿಷ್ಯನ್ದಾನವಾನಾಮಹಂ ಮಾಯಾಮಯಂ ಬಲಂ।।

ಅವನ ಆ ಮಾತುಗಳನ್ನು ಕೇಳಿ ನನ್ನನ್ನು ನಾನು ಹಿಡಿತದಲ್ಲಿ ತಂದುಕೊಂಡೆನು ಮತ್ತು ದಾನವರ ಮಾಯಾಮಯ ಬಲವನ್ನು ಸೋಲಿಸಲು ಮನಸ್ಸು ಮಾಡಿದೆನು.

03168023a ಅಬ್ರುವಂ ಮಾತಲಿಂ ಭೀತಂ ಪಶ್ಯ ಮೇ ಭುಜಯೋರ್ಬಲಂ।
03168023c ಅಸ್ತ್ರಾಣಾಂ ಚ ಪ್ರಭಾವಂ ಮೇ ಧನುಷೋ ಗಾಂಡಿವಸ್ಯ ಚ।।

ಭೀತನಾಗಿದ್ದ ಮಾತಲಿಗೆ ಹೇಳಿದೆನು: “ನನ್ನ ಭುಜಗಳ ಬಲವನ್ನು, ನನ್ನ ಗಾಂಡೀವಧನುಸ್ಸನ್ನೂ ಅಸ್ತ್ರಗಳ ಪ್ರಭಾವವನ್ನೂ ನೋಡು!

03168024a ಅದ್ಯಾಸ್ತ್ರಮಾಯಯೈತೇಷಾಂ ಮಾಯಾಮೇತಾಂ ಸುದಾರುಣಾಂ।
03168024c ವಿನಿಹನ್ಮಿ ತಮಶ್ಚೋಗ್ರಂ ಮಾ ಭೈಃ ಸೂತ ಸ್ಥಿರೋ ಭವ।।

ಇಂದು ನನ್ನ ಅಸ್ತ್ರಗಳ ಮಾಯೆಯಿಂದ ಈ ಸುದಾರುಣ ಮಾಯೆಯನ್ನು ಮತ್ತು ಉಗ್ರ ಕತ್ತಲೆಯನ್ನು ಕಳೆಯುತ್ತೇನೆ. ಸೂತ! ಸ್ಥಿರವಾಗಿರು!”

03168025a ಏವಮುಕ್ತ್ವಾಹಮಸೃಜಮಸ್ತ್ರಮಾಯಾಂ ನರಾಧಿಪ।
03168025c ಮೋಹನೀಂ ಸರ್ವಶತ್ರೂಣಾಂ ಹಿತಾಯ ತ್ರಿದಿವೌಕಸಾಂ।।

ನರಾಧಿಪ! ಹೀಗೆ ಹೇಳಿ ನಾನು ದೇವತೆಗಳ ಹಿತಕ್ಕಾಗಿ ಸರ್ವಶತ್ರುಗಳನ್ನು ಮೋಹಿಸುವ ಮೋಹಿನೀ ಅಸ್ತ್ರವನ್ನು ಪ್ರಯೋಗಿಸಿದೆನು.

03168026a ಪೀಡ್ಯಮಾನಾಸು ಮಾಯಾಸು ತಾಸು ತಾಸ್ವಸುರೇಶ್ವರಾಃ।
03168026c ಪುನರ್ಬಹುವಿಧಾ ಮಾಯಾಃ ಪ್ರಾಕುರ್ವನ್ನಮಿತೌಜಸಃ।।

ಈ ಮಾಯೆಗಳಿಂದ ಪೀಡಿತರಾದ ಆ ಅಮಿತೌಜಸ ಅಸುರೇಶ್ವರರು ಪುನಃ ಬಹುವಿಧದ ಮಾಯೆಗಳನ್ನು ತೋರಿಸಿದರು.

03168027a ಪುನಃ ಪ್ರಕಾಶಮಭವತ್ತಮಸಾ ಗ್ರಸ್ಯತೇ ಪುನಃ।
03168027c ವ್ರಜತ್ಯದರ್ಶನಂ ಲೋಕಃ ಪುನರಪ್ಸು ನಿಮಜ್ಜತಿ।।

ಈಗ ಬೆಳಕಾದರೆ ಪುನಃ ಕತ್ತಲೆಯು ಅದನ್ನು ನುಂಗುತ್ತಿತ್ತು. ಈಗ ಲೋಕವು ಅದೃಶ್ಯವಾದರೆ ಪುನಃ ಅದು ಸಮುದ್ರದಲ್ಲಿ ಮುಳುಗಿಹೋಗುತ್ತಿತ್ತು.

03168028a ಸುಸಂಗೃಹೀತೈರ್ಹರಿಭಿಃ ಪ್ರಕಾಶೇ ಸತಿ ಮಾತಲಿಃ।
03168028c ವ್ಯಚರತ್ಸ್ಯಂದನಾಗ್ರ್ಯೇಣ ಸಂಗ್ರಾಮೇ ಲೋಮಹರ್ಷಣೇ।।

ಬೆಳಕಾದಾಗ ಮಾತಲಿಯು ಉತ್ತಮವಾಗಿ ಹೋಗುತ್ತಿರುವ ಕುದುರೆಗಳಿರುವ ರಥವನ್ನು ಮೈನವಿರೇಳಿಸುವ ಸಂಗ್ರಾಮದ ಕಡೆ ಕೊಂಡೊಯ್ದನು.

03168029a ತತಃ ಪರ್ಯಪತನ್ನುಗ್ರಾ ನಿವಾತಕವಚಾ ಮಯಿ।
03168029c ತಾನಹಂ ವಿವರಂ ದೃಷ್ಟ್ವಾ ಪ್ರಾಹಿಣ್ವಂ ಯಮಸಾದನಂ।।

ಆಗ ಉಗ್ರ ನಿವಾತಕವಚರು ನನ್ನ ಮೇಲೆ ಮುತ್ತಿಗೆ ಹಾಕಿದರು, ಮತ್ತು ನಾನು ತೆರವು ಕಂಡಾಗಲೆಲ್ಲಾ ಅವರನ್ನು ಯಮಸಾದನಕ್ಕೆ ಅಟ್ಟಿದೆನು.

03168030a ವರ್ತಮಾನೇ ತಥಾ ಯುದ್ಧೇ ನಿವಾತಕವಚಾಂತಕೇ।
03168030c ನಾಪಶ್ಯಂ ಸಹಸಾ ಸರ್ವಾನ್ದಾನವಾನ್ಮಾಯಯಾವೃತಾನ್।।

ವರ್ತಮಾನದಲ್ಲಿ ನಿವಾತಕವಚರ ಅಂತ್ಯವನ್ನು ಸೂಚಿಸುವ ಯುದ್ಧವು ನಡೆಯುತ್ತಿರಲು, ತಕ್ಷಣವೇ ಎಲ್ಲ ದಾನವರೂ ಮಾಯೆಯಿಂದ ಆವೃತರಾಗಿ ಕಾಣದಂತಾದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಮಾಯಾಯುದ್ಧೇ ಅಷ್ಟಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಮಾಯಾಯುದ್ಧದಲ್ಲಿ ನೂರಾಅರವತ್ತೆಂಟನೆಯ ಅಧ್ಯಾಯವು.