ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 167
ಸಾರ
ಹಲವಾರು ನಿವಾತಕವಚರು ಹತರಾಗಲು ಅವರು ಅರ್ಜುನನೊಂದಿಗೆ ಮಾಯಾ ಯುದ್ಧವನ್ನು ಪ್ರಾರಂಭಿಸಿದುದು (1-28).
03167001 ಅರ್ಜುನ ಉವಾಚ।
03167001a ತತೋ ನಿವಾತಕವಚಾಃ ಸರ್ವೇ ವೇಗೇನ ಭಾರತ।
03167001c ಅಭ್ಯದ್ರವನ್ಮಾಂ ಸಹಿತಾಃ ಪ್ರಗೃಹೀತಾಯುಧಾ ರಣೇ।।
ಅರ್ಜುನನು ಹೇಳಿದನು: “ಭಾರತ! ಆಗ ನಿವಾತಕವಚರು ಎಲ್ಲರೂ ಒಟ್ಟಿಗೆ ವೇಗದಿಂದ ಆಯುಧಗಳು ಹಿಡಿದು ರಣದಲ್ಲಿ ನನ್ನಕಡೆ ಧಾವಿಸಿ ಬಂದರು.
03167002a ಆಚ್ಚಿದ್ಯ ರಥಪನ್ಥಾನಮುತ್ಕ್ರೋಶಂತೋ ಮಹಾರಥಾಃ।
03167002c ಆವೃತ್ಯ ಸರ್ವತಸ್ತೇ ಮಾಂ ಶರವರ್ಷೈರವಾಕಿರನ್।।
ಮಹಾರಥಿಗಳು ನನ್ನ ರಥದ ದಾರಿಯನ್ನು ಕತ್ತರಿಸಿದರು ಮತ್ತು ಜೋರಾಗಿ ಕೂಗುತ್ತಾ ನನ್ನನ್ನು ಎಲ್ಲಕಡೆಯಿಂದಲೂ ಮುತ್ತಿ ಶರಗಳ ಮಳೆಯನ್ನು ಸುರಿಸಿದರು.
03167003a ತತೋಽಪರೇ ಮಹಾವೀರ್ಯಾಃ ಶೂಲಪಟ್ಟಿಶಪಾಣಯಃ।
03167003c ಶೂಲಾನಿ ಚ ಭುಶುಂಡೀಶ್ಚ ಮುಮುಚುರ್ದಾನವಾ ಮಯಿ।।
ಇತರ ಮಹಾವೀರ್ಯ ದಾನವರು ಶೂಲಪಟ್ಟಿಶಗಳನ್ನು ಹಿಡಿದು ಶೂಲ ಭುಶುಂಡಿಗಳನ್ನು ನನ್ನ ಮೇಲೆ ಎಸೆದರು.
03167004a ತಚ್ಶೂಲವರ್ಷಂ ಸುಮಹದ್ಗದಾಶಕ್ತಿಸಮಾಕುಲಂ।
03167004c ಅನಿಶಂ ಸೃಜ್ಯಮಾನಂ ತೈರಪತನ್ಮದ್ರಥೋಪರಿ।।
ಒಂದೇ ಸಮನೆ ಪ್ರಯೋಗಿಸಲ್ಪಟ್ಟ ಗದೆ, ಶಕ್ತಿಗಳಿಂದ ಕೂಡಿದ್ದ ಆ ಮಹಾ ಶೂಲವರ್ಷವು ನನ್ನ ರಥದ ಮೇಲೆ ಬಿದ್ದವು.
03167005a ಅನ್ಯೇ ಮಾಮಭ್ಯಧಾವಂತ ನಿವಾತಕವಚಾ ಯುಧಿ।
03167005c ಶಿತಶಸ್ತ್ರಾಯುಧಾ ರೌದ್ರಾಃ ಕಾಲರೂಪಾಃ ಪ್ರಹಾರಿಣಃ।।
ಯುದ್ಧದಲ್ಲಿ ಇತರ ರೌದ್ರರೂ, ಕಾಲರೂಪಿ ಪ್ರಹಾರಿಗಳೂ ಆದ ನಿವಾತಕವಚರು ಹರಿತವಾದ ಅಸ್ತ್ರ ಆಯುಧಗಳನ್ನು ಹಿಡಿದು, ನನ್ನ ಮೇಲೆ ಓಡಿಬಂದೆರಗಿದರು.
03167006a ತಾನಹಂ ವಿವಿಧೈರ್ಬಾಣೈರ್ವೇಗವದ್ಭಿರಜಿಹ್ಮಗೈಃ।
03167006c ಗಾಂಡೀವಮುಕ್ತೈರಭ್ಯಘ್ನಮೇಕೈಕಂ ದಶಭಿರ್ಮೃಧೇ।।
03167006e ತೇ ಕೃತಾ ವಿಮುಖಾಃ ಸರ್ವೇ ಮತ್ಪ್ರಯುಕ್ತೈಃ ಶಿಲಾಶಿತೈಃ।।
ಅವುಗಳನ್ನು ನಾನು ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ವೇಗವಾಗಿ ನೇರವಾಗಿ ಹೋಗುವ ಹತ್ತು ವಿವಿಧ ಬಾಣಗಳಿಂದ ಪತಿಯೊಬ್ಬರಿಗೂ ಹೊಡೆದೆನು. ನನ್ನ ಆ ಶಿಲಾಶಿತ ಬಾಣಗಳು ಅವರೆಲ್ಲರನ್ನೂ ವಿಮುಖರನ್ನಾಗಿ ಮಾಡಿತು.
03167007a ತತೋ ಮಾತಲಿನಾ ತೂರ್ಣಂ ಹಯಾಸ್ತೇ ಸಂಪ್ರಚೋದಿತಾಃ।
03167007c ರಥಮಾರ್ಗಾದ್ಬಹೂಂಸ್ತತ್ರ ವಿಚೇರುರ್ವಾತರಂಹಸಃ।।
03167007e ಸುಸಮ್ಯತಾ ಮಾತಲಿನಾ ಪ್ರಾಮಥ್ನಂತ ದಿತೇಃ ಸುತಾನ್।।
ಆಗ ಮಾತಲಿಯು ಕುದುರೆಗಳನ್ನು ಪುಸಲಾಯಿಸಲು ರಥಮಾರ್ಗದಲ್ಲಿ ಬಹಳ ನೆಗೆತಗಳನ್ನು ಹಾರಿ ಮಾತಲಿಯ ಮಾರ್ಗದರ್ಶನದಲ್ಲಿ ಅವು ದಿತಿಯ ಮಕ್ಕಳನ್ನು ತುಳಿದವು.
03167008a ಶತಂ ಶತಾಸ್ತೇ ಹರಯಸ್ತಸ್ಮಿನ್ಯುಕ್ತಾ ಮಹಾರಥೇ।
03167008c ತದಾ ಮಾತಲಿನಾ ಯತ್ತಾ ವ್ಯಚರನ್ನಲ್ಪಕಾ ಇವ।।
ನೂರು ನೂರು ಕುದುರೆಗಳನ್ನು ಆ ಮಹಾರಥಕ್ಕೆ ಕಟ್ಟಲಾಗಿತ್ತು. ಆದರೂ ಮಾತಲಿಯು ಅವುಗಳನ್ನು ಕೆಲವೇ ಇವೆಯೋ ಎನ್ನುವಂತೆ ತಿರುಗಿಸುತ್ತಿದ್ದನು.
03167009a ತೇಷಾಂ ಚರಣಪಾತೇನ ರಥನೇಮಿಸ್ವನೇನ ಚ।
03167009c ಮಮ ಬಾಣನಿಪಾತೈಶ್ಚ ಹತಾಸ್ತೇ ಶತಶೋಽಸುರಾಃ।।
ಅವುಗಳ ಕಾಲ ತುಳಿತದಿಂದ, ರಥದ ಚಲಿಕೆಯ ಘೋಷದಿಂದ ಮತ್ತು ನನ್ನ ಬಾಣಗಳಿಂದ ಆ ಅಸುರರು ನೂರು ನೂರು ಪಟ್ಟು ಹತರಾದರು.
03167010a ಗತಾಸವಸ್ತಥಾ ಚಾನ್ಯೇ ಪ್ರಗೃಹೀತಶರಾಸನಾಃ।
03167010c ಹತಸಾರಥಯಸ್ತತ್ರ ವ್ಯಕೃಷ್ಯಂತ ತುರಂಗಮೈಃ।।
ಜೀವವಿಂಗಿದ ಮತ್ತು ಸಾರಥಿಗಳನ್ನು ಕಳೆದುಕೊಂಡ ಅನ್ಯ ಧನುಷ್ಪಾಣಿಗಳನ್ನು ಅವರ ಕುದುರೆಗಳು ಎತ್ತಿಕೊಂಡು ಹೋದವು.
03167011a ತೇ ದಿಶೋ ವಿದಿಶಃ ಸರ್ವಾಃ ಪ್ರತಿರುಧ್ಯ ಪ್ರಹಾರಿಣಃ।
03167011c ನಿಘ್ನಂತಿ ವಿವಿಧೈಃ ಶಸ್ತ್ರೈಸ್ತತೋ ಮೇ ವ್ಯಥಿತಂ ಮನಃ।।
ಆ ಪ್ರಹಾರಿಗಳು ದಿಕ್ಕುಗಳ ಎಲ್ಲ ಕೋನೆಗಳನ್ನೂ ಎಲ್ಲ ರೀತಿಯ ಶಸ್ತ್ರಗಳಿಂದ ಹೊಡೆದು ನನ್ನ ಮನಸ್ಸನ್ನು ವ್ಯಥಿತಗೊಳಿಸಿದರು.
03167012a ತತೋಽಹಂ ಮಾತಲೇರ್ವೀರ್ಯಮಪಶ್ಯಂ ಪರಮಾದ್ಭುತಂ।
03167012c ಅಶ್ವಾಂಸ್ತಥಾ ವೇಗವತೋ ಯದಯತ್ನಾದಧಾರಯತ್।।
ಆಗ ನಾನು ವೇಗದಲ್ಲಿ ಹೋಗುತ್ತಿರುವ ಕುದುರೆಗಳನ್ನು ನಿಯಂತ್ರಿಸುವ ಅವನ ಪರಮಾಧ್ಭುತ ಯತ್ನವನ್ನು ನೋಡಿದೆನು.
03167013a ತತೋಽಹಂ ಲಘುಭಿಶ್ಚಿತ್ರೈರಸ್ತ್ರೈಸ್ತಾನಸುರಾನ್ರಣೇ।
03167013c ಸಾಯುಧಾನಚ್ಚಿನಂ ರಾಜಂ ಶತಶೋಽಥ ಸಹಸ್ರಶಃ।।
ರಾಜನ್! ಆಗ ನಾನು ವಿಚಿತ್ರ ಲಘು ಬಾಣಗಳನ್ನು ಬಿಟ್ಟು ರಣದಲ್ಲಿ ಆಯುಧಪಾಣಿ ಅಸುರರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಕಡಿದುರಿಳಿಸಿದೆನು.
03167014a ಏವಂ ಮೇ ಚರತಸ್ತತ್ರ ಸರ್ವಯತ್ನೇನ ಶತ್ರುಹನ್।
03167014c ಪ್ರೀತಿಮಾನಭವದ್ವೀರೋ ಮಾತಲಿಃ ಶಕ್ರಸಾರಥಿಃ।।
ಶತ್ರುಹನ್! ಹೀಗೆ ನಾನು ಸರ್ವಯತ್ನದಿಂದ ನಡೆಯುತ್ತಿರಲು ಶಕ್ರನ ವೀರ ಸಾರಥಿ ಮಾತಲಿಯು ಸಂತೋಷಗೊಂಡನು.
03167015a ವಧ್ಯಮಾನಾಸ್ತತಸ್ತೇ ತು ಹಯೈಸ್ತೇನ ರಥೇನ ಚ।
03167015c ಅಗಮನ್ಪ್ರಕ್ಷಯಂ ಕೇ ಚಿನ್ನ್ಯವರ್ತಂತ ತಥಾಪರೇ।।
ಕುದುರೆಗಳಿಂದ ಮತ್ತು ರಥಗಳಿಂದ ಅವರು ಹತರಾದರೆ ಮತ್ತೆ ಕೆಲವರು ಯುದ್ಧಮಾಡುವುದನ್ನು ನಿಲ್ಲಿಸಿದರು.
03167016a ಸ್ಪರ್ಧಮಾನಾ ಇವಾಸ್ಮಾಭಿರ್ನಿವಾತಕವಚಾ ರಣೇ।
03167016c ಶರವರ್ಷೈರ್ಮಹದ್ಭಿರ್ಮಾಂ ಸಮಂತಾತ್ಪ್ರತ್ಯವಾರಯನ್।।
ರಣದಲ್ಲಿ ನಮ್ಮೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ನಿವಾತಕವಚರು ಶರವರ್ಷಗಳಿಂದ ನನ್ನನ್ನು ಎಲ್ಲ ಕಡೆಯಿಂದಲೂ ಮುತ್ತಿಗೆಹಾಕಿದರು.
03167017a ತತೋಽಹಂ ಲಘುಭಿಶ್ಚಿತ್ರೈರ್ಬ್ರಹ್ಮಾಸ್ತ್ರಪರಿಮಂತ್ರಿತೈಃ।
03167017c ವ್ಯಧಮಂ ಸಾಯಕೈರಾಶು ಶತಶೋಽಥ ಸಹಸ್ರಶಃ।।
ಆಗ ನಾನು ಲಘುವಾದ ವಿಚಿತ್ರ ಬಾಣಗಳನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಅವರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದೆನು.
03167018a ತತಃ ಸಂಪೀಡ್ಯಮಾನಾಸ್ತೇ ಕ್ರೋಧಾವಿಷ್ಟಾ ಮಹಾಸುರಾಃ।
03167018c ಅಪೀಡಯನ್ಮಾಂ ಸಹಿತಾಃ ಶರಶೂಲಾಸಿವೃಷ್ಟಿಭಿಃ।।
ಆಗ ಪೀಡಿತರಾಗಿ ಕ್ರೋಧಾವಿಷ್ಟರಾದ ಆ ಮಹಾಸುರರು ನನ್ನನ್ನು ಶರ, ಶೂಲ ಮತ್ತು ಶಿಲೆಗಳ ಮಳೆಯಿಂದ ಹೊಡೆಯತೊಡಗಿದರು.
03167019a ತತೋಽಹಮಸ್ತ್ರಮಾತಿಷ್ಠಂ ಪರಮಂ ತಿಗ್ಮತೇಜಸಂ।
03167019c ದಯಿತಂ ದೇವರಾಜಸ್ಯ ಮಾಧವಂ ನಾಮ ಭಾರತ।।
ಭಾರತ! ಆಗ ನಾನು ದೇವರಾಜನಿಗೆ ಪ್ರಿಯವಾದ ಪರಮ ತಿಗ್ಮತೇಜಸ್ಸಿನ ಮಾಧವ ಎಂಬ ಹೆಸರಿನ ಅಸ್ತ್ರವನ್ನು ಹಿಡಿದೆನು.
03167020a ತತಃ ಖಡ್ಗಾಂಸ್ತ್ರಿಶೂಲಾಂಶ್ಚ ತೋಮರಾಂಶ್ಚ ಸಹಸ್ರಶಃ।
03167020c ಅಸ್ತ್ರವೀರ್ಯೇಣ ಶತಧಾ ತೈರ್ಮುಕ್ತಾನಹಮಚ್ಚಿನಂ।।
03167021a ಚಿತ್ತ್ವಾ ಪ್ರಹರಣಾನ್ಯೇಷಾಂ ತತಸ್ತಾನಪಿ ಸರ್ವಶಃ।
03167021c ಪ್ರತ್ಯವಿಧ್ಯಮಹಂ ರೋಷಾದ್ದಶಭಿರ್ದಶಭಿಃ ಶರೈಃ।।
ಆ ಅಸ್ತ್ರದ ವೀರ್ಯದಿಂದ ನಾನು ಅವರು ಪ್ರಯೋಗಿಸಿದ ಸಹಸ್ರಾರು ಖಡ್ಗ, ತ್ರಿಶೂಲ ಮತ್ತು ತೋಮರಗಳನ್ನು ನೂರಾರು ತುಂಡುಗಳನ್ನಾಗಿ ಕತ್ತರಿಸಿದೆ. ಅವರ ಪ್ರಹರಣಗಳನ್ನು ತುಂಡರಿಸಿ ನಾನು ರೋಷದಿಂದ ಪ್ರತಿಯೊಬ್ಬರಿಗೆ ಹತ್ತರಂತೆ ಬಾಣಗಳಿಂದ ಚುಚ್ಚಿದೆನು.
03167022a ಗಾಂಡೀವಾದ್ಧಿ ತದಾ ಸಂಖ್ಯೇ ಯಥಾ ಭ್ರಮರಪಂಕ್ತಯಃ।
03167022c ನಿಷ್ಪತಂತಿ ತಥಾ ಬಾಣಾಸ್ತನ್ ಮಾತಲಿರಪೂಜಯತ್।।
ಆ ಯುದ್ಧದಲ್ಲಿ ಗಾಂಡೀವದಿಂದ ಜೇನುಹುಳುಗಳ ಗುಂಪಿನಂತೆ ಬಾಣಗಳು ಹೊರಬರುತ್ತಿದ್ದುದನ್ನು ನೋಡಿ ಮಾತಲಿಯು ಪ್ರೋತ್ಸಾಹಿಸಿದನು.
03167023a ತೇಷಾಮಪಿ ತು ಬಾಣಾಸ್ತೇ ಬಹುತ್ವಾಚ್ಶಲಭಾ ಇವ।
03167023c ಅವಾಕಿರನ್ಮಾಂ ಬಲವತ್ತಾನಹಂ ವ್ಯಧಮಂ ಶರೈಃ।।
ಅವರು ಕೂಡ ಬಹು ಮಿಡಿತೆಗಳಂತೆ ಬಾಣಗಳಿಂದ ನನ್ನನ್ನು ಮುಚ್ಚಿದರು. ಆದರೆ ನಾನು ಅವುಗಳನ್ನು ನನ್ನ ಬಲದ ಶರಗಳಿಂದ ಚದುರಿಸಿದೆನು.
03167024a ವಧ್ಯಮಾನಾಸ್ತತಸ್ತೇ ತು ನಿವಾತಕವಚಾಃ ಪುನಃ।
03167024c ಶರವರ್ಷೈರ್ಮಹದ್ಭಿರ್ಮಾಂ ಸಮಂತಾತ್ಪರ್ಯವಾರಯನ್।।
ಈ ಆಕ್ರಮಣದಡಿಯಲ್ಲಿ ನಿವಾತಕವಚರು ಪುನಃ ನನ್ನ ಸುತ್ತಲೂ ಶರವರ್ಷಗಳಿಂದ ಮುತ್ತಿಗೆ ಹಾಕಿದರು.
03167025a ಶರವೇಗಾನ್ನಿಹತ್ಯಾಹಮಸ್ತ್ರೈಃ ಶರವಿಘಾತಿಭಿಃ।
03167025c ಜ್ವಲದ್ಭಿಃ ಪರಮೈಃ ಶೀಘ್ರೈಸ್ತಾನವಿಧ್ಯಂ ಸಹಸ್ರಶಃ।।
ವೇಗವಾಗಿ ಬರುತ್ತಿದ್ದ ಆ ಶರಗಳನ್ನು ನಾನು ಪರಮಶೀಘ್ರವಾಗಿ ಹೋಗಬಲ್ಲ, ಸಹಸ್ರಾರು ಜ್ವಲಿಸುವ ಅಸ್ತ್ರಗಳಿಂದ ತುಂಡರಿಸಿದೆನು.
03167026a ತೇಷಾಂ ಚಿನ್ನಾನಿ ಗಾತ್ರಾಣಿ ವಿಸೃಜಂತಿ ಸ್ಮ ಶೋಣಿತಂ।
03167026c ಪ್ರಾವೃಷೀವಾತಿವೃಷ್ಟಾನಿ ಶೃಂಗಾಣೀವ ಧರಾಭೃತಾಂ।।
ಅವರ ತುಂಡಾದ ದೇಹಗಳಿಂದ ಚಿಮ್ಮಿದ ರಕ್ತವು ಮಳೆಗಾಲದಲ್ಲಿ ಸಿಡಿಲಿಗಿ ಸಿಲುಕಿದ ಪರ್ವತ ಶಿಖರಗಳಂತೆ ಕಂಡುಬಂದವು.
03167027a ಇಂದ್ರಾಶನಿಸಮಸ್ಪರ್ಶೈರ್ವೇಗವದ್ಭಿರಜಿಹ್ಮಗೈಃ।
03167027c ಮದ್ಬಾಣೈರ್ವಧ್ಯಮಾನಾಸ್ತೇ ಸಮುದ್ವಿಗ್ನಾಃ ಸ್ಮ ದಾನವಾಃ।।
ಇಂದ್ರನ ವಜ್ರಸಮಾನವಾದ ನನ್ನ ಶೀಘ್ರ, ನೇರವಾಗಿ ಹೋದ ಬಾಣಗಳಿಂದ ಹೊಡೆಯಲ್ಪಟ್ಟ ದಾನವರು ಉದ್ವಿಗ್ನರಾದರು.
03167028a ಶತಧಾ ಭಿನ್ನದೇಹಾಂತ್ರಾಃ ಕ್ಷೀಣಪ್ರಹರಣೌಜಸಃ।
03167028c ತತೋ ನಿವಾತಕವಚಾ ಮಾಮಯುಧ್ಯಂತ ಮಾಯಯಾ।।
ಆಗ ದೇಹ ಮತ್ತು ಕರುಳುಗಳು ನೂರಾರು ತುಂಡುಗಳಾದ, ಆಯುಧ- ಸತ್ವವನ್ನು ಕಳೆದುಕೊಂಡ ನಿವಾತಕವಚರು ನನ್ನೊಂದಿಗೆ ಮಾಯಾಯುದ್ಧವನ್ನು ಪ್ರಾರಂಭಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.