166 ನಿವಾತಕವಚಯುದ್ಧೇ ಯುದ್ಧಾರಂಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 166

ಸಾರ

ನಿವಾತಕವಚರೊಡನೆ ಅರ್ಜುನನ ಘೋರ ಯುದ್ಧ (1-23).

03166001 ಅರ್ಜುನ ಉವಾಚ।
03166001a ತತೋಽಹಂ ಸ್ತೂಯಮಾನಸ್ತು ತತ್ರ ತತ್ರ ಮಹರ್ಷಿಭಿಃ।
03166001c ಅಪಶ್ಯಮುದಧಿಂ ಭೀಮಮಪಾಂಪತಿಮಥಾವ್ಯಯಂ।।

ಅರ್ಜುನನು ಹೇಳಿದನು: “ಆಲ್ಲಲ್ಲಿ ಮಹರ್ಷಿಗಳು ಸ್ತುತಿಸುತ್ತಿರಲು ನಾನು ಅವ್ಯಯ ಅಪಾಂಪತಿಯ ಭಯಂಕರವಾದ ಮಹಾಸಾಗರವನ್ನು ಕಂಡೆನು.

03166002a ಫೇನವತ್ಯಃ ಪ್ರಕೀರ್ಣಾಶ್ಚ ಸಂಹತಾಶ್ಚ ಸಮುಚ್ಚ್ರಿತಾಃ।
03166002c ಊರ್ಮಯಶ್ಚಾತ್ರ ದೃಶ್ಯಂತೇ ಚಲಂತ ಇವ ಪರ್ವತಾಃ।।
03166002e ನಾವಃ ಸಹಸ್ರಶಸ್ತತ್ರ ರತ್ನಪೂರ್ಣಾಃ ಸಮಂತತಃ।।
03166003a ತಿಮಿಂಗಿಲಾಃ ಕಚ್ಚಪಾಶ್ಚ ತಥಾ ತಿಮಿತಿಮಿಂಗಿಲಾಃ।
03166003c ಮಕರಾಶ್ಚಾತ್ರ ದೃಶ್ಯಂತೇ ಜಲೇ ಮಗ್ನಾ ಇವಾದ್ರಯಃ।।

ಚಲಿಸುತ್ತಿರುವ ಪರ್ವತಗಳಂತಿರುವ ಬಹು ಎತ್ತರಕ್ಕೆ ನೊರೆಯುಕ್ತವಾಗಿ, ಹರಡುತ್ತಾ, ಹೊಡೆಯುತ್ತ ಬರುವ ಅಲೆಗಳು, ರತ್ನಗಳಿಂದ ತುಂಬಿದ್ದ ಸಹಸ್ರಾರು ಹಡಗುಗಳು ಎಲ್ಲೆಡೆಯೂ ಕಾಣುತ್ತಿದ್ದವು. ನೀರಿನಲ್ಲಿ ಮುಳುಗಿದ ಬೆಟ್ಟಗಳಂತೆ ತಿಮಿಂಗಿಲಗಳು, ಆಮೆಗಳು, ತಿಮಿತಿಮಿಂಗಿಲಗಳು, ಮತ್ತು ಮೊಸಳೆಗಳು ಕಾಣುತ್ತಿದ್ದವು.

03166004a ಶಂಖಾನಾಂ ಚ ಸಹಸ್ರಾಣಿ ಮಗ್ನಾನ್ಯಪ್ಸು ಸಮಂತತಃ।
03166004c ದೃಶ್ಯಂತೇ ಸ್ಮ ಯಥಾ ರಾತ್ರೌ ತಾರಾಸ್ತನ್ವಭ್ರಸಂವೃತಾಃ।।

ಎಲ್ಲೆಡೆಯೂ ನೀರಿನಲ್ಲಿ ಮುಳುಗಿದ್ದ ಸಹಸ್ರಾರು ಶಂಖಗಳು, ತೆಳುವಾಗಿ ಮೋಡಗಳು ಕವಿದ ರಾತ್ರಿಯಲ್ಲಿ ಕಾಣುವ ನಕ್ಷತ್ರಗಳಂತೆ ಕಂಡವು.

03166005a ತಥಾ ಸಹಸ್ರಶಸ್ತತ್ರ ರತ್ನಸಂಘಾಃ ಪ್ಲವಂತ್ಯುತ।
03166005c ವಾಯುಶ್ಚ ಘೂರ್ಣತೇ ಭೀಮಸ್ತದದ್ಭುತಮಿವಾಭವತ್।।

ಹಾಗೆಯೇ ಸಹಸ್ರಾರು ಮುತ್ತುಗಳ ಗುಚ್ಚಗಳು ಅಲ್ಲಿ ತೇಲುತ್ತಿದ್ದವು. ಭಯಂಕರ ಭಿರುಗಾಳಿಯು ಅಲೆಗಳನ್ನು ಹೊಡೆಯಲು, ಅದು ಅದ್ಭುತವಾಗಿತ್ತು.

03166006a ತಮತೀತ್ಯ ಮಹಾವೇಗಂ ಸರ್ವಾಂಭೋನಿಧಿಮುತ್ತಮಂ।
03166006c ಅಪಶ್ಯಂ ದಾನವಾಕೀರ್ಣಂ ತದ್ದೈತ್ಯಪುರಮಂತಿಕಾತ್।।

ಮಹಾವೇಗದಿಂದ ಎಲ್ಲ ಸಾಗರಗಳು ಸೇರುವ ಆ ಉತ್ತಮ ಪ್ರದೇಶವನ್ನು ದಾಟಿ ಹತ್ತಿರದಲ್ಲಿಯೇ ದಾನವರಿಂದ ತುಂಬಿದ್ದ ಆ ದೈತ್ಯಪುರವನ್ನು ನೋಡಿದೆನು.

03166007a ತತ್ರೈವ ಮಾತಲಿಸ್ತೂರ್ಣಂ ನಿಪತ್ಯ ಪೃಥಿವೀತಲೇ।
03166007c ನಾದಯನ್ರಥಘೋಷೇಣ ತತ್ಪುರಂ ಸಮುಪಾದ್ರವತ್।।

ಮಾತಲಿಯು ಅಲ್ಲಿಯೇ ಭೂಮಿಯ ಮೇಲೆ ಇಳಿದು ರಥಘೋಷದಿಂದ ಮೊಳಗಿಸುತ್ತಾ ಆ ಪುರವನ್ನು ಸೇರಿದನು.

03166008a ರಥಘೋಷಂ ತು ತಂ ಶ್ರುತ್ವಾ ಸ್ತನಯಿತ್ನೋರಿವಾಂಬರೇ।
03166008c ಮನ್ವಾನಾ ದೇವರಾಜಂ ಮಾಂ ಸಂವಿಗ್ನಾ ದಾನವಾಭವನ್।।

ಅಂಬರದಲ್ಲಿ ಸಿಡಿಲುಬಡಿಯಿತೋ ಎನ್ನುವಂತಿದ್ದ ಆ ರಥಘೋಷವನ್ನು ಕೇಳಿ ದೇವರಾಜನೇ ಬಂದನೆಂದು ಯೋಚಿಸಿ ಆ ದಾನವರು ಸಂವಿಗ್ನರಾದರು.

03166009a ಸರ್ವೇ ಸಂಭ್ರಾಂತಮನಸಃ ಶರಚಾಪಧರಾಃ ಸ್ಥಿತಾಃ।
03166009c ತಥಾ ಶೂಲಾಸಿಪರಶುಗದಾಮುಸಲಪಾಣಯಃ।।

ಸಂಭ್ರಾಂತಮನಸ್ಕರಾದ ಅವರೆಲ್ಲರೂ ಬಿಲ್ಲುಬಾಣಗಳನ್ನು ಹಿಡಿದು, ಶೂಲ, ಖಡ್ಗ, ಕೊಡಲಿ, ದೊಣ್ಣೆ ಮತ್ತು ಮುಸಲಗಳನ್ನು ಹಿಡಿದು ನಿಂತರು.

03166010a ತತೋ ದ್ವಾರಾಣಿ ಪಿದಧುರ್ದಾನವಾಸ್ತ್ರಸ್ತಚೇತಸಃ।
03166010c ಸಂವಿಧಾಯ ಪುರೇ ರಕ್ಷಾಂ ನ ಸ್ಮ ಕಶ್ಚನ ದೃಶ್ಯತೇ।।

ಅವರ ಚೇತನವು ಕಂಪಿಸುತ್ತಿರಲು ಆ ದಾನವರು ದ್ವಾರಗಳನ್ನು ಮುಚ್ಚಿ ಪುರವನ್ನು ರಕ್ಷಣೆಗೆ ತಂದರು. ಯಾರೂ ಕೂಡ ಅಲ್ಲಿ ಕಂಡುಬರಲಿಲ್ಲ.

03166011a ತತಃ ಶಂಖಮುಪಾದಾಯ ದೇವದತ್ತಂ ಮಹಾಸ್ವನಂ।
03166011c ಪುರಮಾಸುರಮಾಶ್ಲಿಷ್ಯ ಪ್ರಾಧಮಂ ತಂ ಶನೈರಹಂ।।

ಆಗ ನಾನು ಮಹಾಸ್ವನಿ ದೇವದತ್ತ ಶಂಖವನ್ನು ಎತ್ತಿ ಮೆಲ್ಲಗೆ ಊದಿ, ಆ ಪುರಕ್ಕೆ ಸುತ್ತುಹಾಕಿದೆನು.

03166012a ಸ ತು ಶಬ್ಧೋ ದಿವಂ ಸ್ತಬ್ಧ್ವಾ ಪ್ರತಿಶಬ್ಧಮಜೀಜನತ್।
03166012c ವಿತ್ರೇಸುಶ್ಚ ನಿಲಿಲ್ಯುಶ್ಚ ಭೂತಾನಿ ಸುಮಹಾಂತ್ಯಪಿ।।

ಆ ಶಬ್ಧವು ಆಕಾಶವನ್ನು ಸ್ತಬ್ಧಗೊಳಿಸಿತು. ಪ್ರತಿಧ್ವನಿಯನ್ನು ಹುಟ್ಟಿಸಿತು. ಮಹಾಕಾಯದ ಭೂತಗಳು ಕೂಡ ನಡುಗಿದವು ಮತ್ತು ಮೇಲೇಳಲಿಲ್ಲ.

03166013a ತತೋ ನಿವಾತಕವಚಾಃ ಸರ್ವ ಏವ ಸಮಂತತಃ।
03166013c ದಂಶಿತಾ ವಿವಿಧೈಸ್ತ್ರಾಣೈರ್ವಿವಿಧಾಯುಧಪಾಣಯಃ।।
03166014a ಆಯಸೈಶ್ಚ ಮಹಾಶೂಲೈರ್ಗದಾಭಿರ್ಮುಸಲೈರಪಿ।
03166014c ಪಟ್ಟಿಶೈಃ ಕರವಾಲೈಶ್ಚ ರಥಚಕ್ರೈಶ್ಚ ಭಾರತ।।
03166015a ಶತಘ್ನೀಭಿರ್ಭುಶುಂಡೀಭಿಃ ಖಡ್ಗೈಶ್ಚಿತ್ರೈಃ ಸ್ವಲಂಕೃತೈಃ।
03166015c ಪ್ರಗೃಹೀತೈರ್ದಿತೇಃ ಪುತ್ರಾಃ ಪ್ರಾದುರಾಸನ್ಸಹಸ್ರಶಃ।।

ಭಾರತ! ಆಗ ದಿತಿಯ ಪುತ್ರ ನಿವಾತಕವಚರು ಎಲ್ಲರೂ ಎಲ್ಲೆಡೆಯಿಂದಲೂ ಸಾವಿರ ಸಂಖ್ಯೆಗಳಲ್ಲಿ ವಿವಿಧ ಅಸ್ತ್ರಗಳಿಂದ ರಕ್ಷಿತರಾಗಿ, ವಿವಿಧ ಆಯುಧಗಳನ್ನು ಹಿಡಿದು ಕಾಣಿಸಿಕೊಳ್ಳತೊಡಗಿದರು. ಮಹಾಶೂಲಗಳನ್ನು, ಗದೆಗಳನ್ನು, ಮುಸುಲಗಳನ್ನು, ಪಟ್ಟಿಷಗಳನ್ನು, ಕಲವಾಲಗಳನ್ನು ಮತ್ತು ರಥಚಕ್ರಗಳನ್ನು ಬೀಸುತ್ತಿದ್ದರು; ಸುಂದರವಾಗಿ ಅಲಂಕೃತಗೊಂಡಿದ್ದ ಖಡ್ಗಗಳನ್ನು, ಭುಷುಂಡಿಗಳನ್ನು, ಶತಗ್ನಿಗಳನ್ನು ಹಿಡಿದಿದ್ದರು.

03166016a ತತೋ ವಿಚಾರ್ಯ ಬಹುಧಾ ರಥಮಾರ್ಗೇಷು ತಾನ್ಹಯಾನ್।
03166016c ಪ್ರಾಚೋದಯತ್ಸಮೇ ದೇಶೇ ಮಾತಲಿರ್ಭರತರ್ಷಭ।।

ಭರತರ್ಷಭ! ಮಾತಲಿಯು ಬಹುವಿಧದ ರಥಮಾರ್ಗಗಳನ್ನು ವಿಚಾರಿಸಿ ಹಯಗಳನ್ನು ಸಮಪ್ರದೇಶದ ಕಡೆಗೆ ಪ್ರಚೋದಿಸಿದನು.

03166017a ತೇನ ತೇಷಾಂ ಪ್ರಣುನ್ನಾನಾಮಾಶುತ್ವಾಚ್ಶೀಘ್ರಗಾಮಿನಾಂ।
03166017c ನಾನ್ವಪಶ್ಯಂ ತದಾ ಕಿಂ ಚಿತ್ತನ್ಮೇಽದ್ಭುತಮಿವಾಭವತ್।।

ಅವನ ಕೈಚಳಕದಿಂದ ಕುದುರೆಗಳು ಎಷ್ಟೊಂದು ವೇಗವಾಗಿ ಹೋದವೆಂದರೆ ನನಗೆ ಏನಾಯಿತೆಂದೂ ತಿಳಿಯಲಿಲ್ಲ. ಅದೊಂದು ಅದ್ಭುತವಾಗಿತ್ತು.

03166018a ತತಸ್ತೇ ದಾನವಾಸ್ತತ್ರ ಯೋಧವ್ರಾತಾನ್ಯನೇಕಶಃ।
03166018c ವಿಕೃತಸ್ವರರೂಪಾಣಿ ಭೃಶಂ ಸರ್ವಾಣ್ಯಚೋದಯನ್।।

ಆಗ ಆ ದಾನವರು ಅನೇಕ ಸಂಖ್ಯೆಗಳಲ್ಲಿ, ವಿಕೃತ ಸ್ವರೂಪಗಳ ಎಲ್ಲ ಯೋಧರನ್ನು ಒಟ್ಟುಹಾಕಿದರು.

03166019a ತೇನ ಶಬ್ಧೇನ ಮಹತಾ ಸಮುದ್ರೇ ಪರ್ವತೋಪಮಾಃ।
03166019c ಆಪ್ಲವಂತ ಗತೈಃ ಸತ್ತ್ವೈರ್ಮತ್ಸ್ಯಾಃ ಶತಸಹಸ್ರಶಃ।।

ಅವರ ಮಹಾ ಶಬ್ಧದಿಂದ ಸಮುದ್ರದಲ್ಲಿ ಪರ್ವತದಂತಿದ್ದ ಮೀನುಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸತ್ವವನ್ನು ಕಳೆದುಕೊಂಡು ತೇಲುತ್ತಿದ್ದವು.

03166020a ತತೋ ವೇಗೇನ ಮಹತಾ ದಾನವಾ ಮಾಮುಪಾದ್ರವನ್।
03166020c ವಿಮುಂಚಂತಃ ಶಿತಾನ್ಬಾಣಾಂ ಶತಶೋಽಥ ಸಹಸ್ರಶಃ।।

ಆಗ ಮಹಾವೇಗದಿಂದ ಆ ದಾನವರು ನೂರಾರು ಸಹಸ್ರಾರು ಹರಿತ ಬಾಣಗಳನ್ನು ಬಿಡುತ್ತಾ ನನ್ನೆಡೆಗೆ ಧಾವಿಸಿದರು.

03166021a ಸ ಸಂಪ್ರಹಾರಸ್ತುಮುಲಸ್ತೇಷಾಂ ಮಮ ಚ ಭಾರತ।
03166021c ಅವರ್ತತ ಮಹಾಘೋರೋ ನಿವಾತಕವಚಾಂತಕಃ।।

ಭಾರತ! ಅವರು ಮತ್ತು ನನ್ನ ನಡುವೆ ಸಂಪ್ರಹಾರ ತುಮುಲಗಳು ನಡೆದವು. ಆ ಮಹಾಘೋರ ನಿವಾತಕವಚರ ಆಂತ್ಯವೆನಿಸಿತು.

03166022a ತತೋ ದೇವರ್ಷಯಶ್ಚೈವ ದಾನವರ್ಷಿಗಣಾಶ್ಚ ಯೇ।
03166022c ಬ್ರಹ್ಮರ್ಷಯಶ್ಚ ಸಿದ್ಧಾಶ್ಚ ಸಮಾಜಗ್ಮುರ್ಮಹಾಮೃಧೇ।।
03166023a ತೇ ವೈ ಮಾಮನುರೂಪಾಭಿರ್ಮಧುರಾಭಿರ್ಜಯೈಷಿಣಃ।
03166023c ಅಸ್ತುವನ್ಮುನಯೋ ವಾಗ್ಭಿರ್ಯಥೇಂದ್ರಂ ತಾರಕಾಮಯೇ।।

ಆಗ ದೇವರ್ಷಿಗಳು, ದಾನವರ್ಷಿಗಣಗಳು, ಬ್ರಹ್ಮರ್ಷಿಗಳು, ಸಿದ್ಧರು, ಆ ಮಹಾಯುದ್ಧದಲಿ ಒಟ್ಟುಸೇರಿದರು. ಮುನಿಗಳು ತಾರಕಾ ಯುದ್ಧದಲ್ಲಿ ಇಂದ್ರನನ್ನು ಹೇಗೋ ಹಾಗೆ ನನ್ನ ಜಯವನ್ನು ಬಯಸಿ ನನ್ನನ್ನು ಮಧುರವಾಗಿ ಹೊಗಳಿದರು ಮತ್ತು ಸ್ತುತಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಯುದ್ಧಾರಂಭೇ ಷಷ್ಟಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಯುದ್ಧಾರಂಭದಲ್ಲಿ ನೂರಾಅರವತ್ತಾರನೆಯ ಅಧ್ಯಾಯವು.