165 ನಿವಾತಕವಚಯುದ್ಧೇ ಅರ್ಜುನವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 165

ಸಾರ

ಇಂದ್ರನು ಅರ್ಜುನನಿಗೆ ಗುರುದಕ್ಷಿಣೆಯಾಗಿ ನಿವಾತಕವಚರನ್ನು ವಧಿಸಬೇಕೆಂದು ಕೇಳುವುದು (1-11). ಅರ್ಜುನನು ಮಾತಲಿಯೊಂದಿಗೆ ಯುದ್ಧಕ್ಕೆ ಹೊರಟಿದ್ದುದು (12-23).

03165001 ಅರ್ಜುನ ಉವಾಚ।
03165001a ಕೃತಾಸ್ತ್ರಮಭಿವಿಶ್ವಸ್ತಮಥ ಮಾಂ ಹರಿವಾಹನಃ।
03165001c ಸಂಸ್ಪೃಶ್ಯ ಮೂರ್ಧ್ನಿ ಪಾಣಿಭ್ಯಾಮಿದಂ ವಚನಮಬ್ರವೀತ್।।

ಅರ್ಜುನನು ಹೇಳಿದನು: “ನಾನು ಅಸ್ತ್ರಗಳನ್ನು ಕಲಿತಾದ ನಂತರ ಮತ್ತು ವಿಶ್ವಾಸವನ್ನು ಹೊಂದಿದ ನಂತರ ಹರಿವಾಹನನು ನನ್ನ ನೆತ್ತಿಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಹೇಳಿದನು:

03165002a ನ ತ್ವಮದ್ಯ ಯುಧಾ ಜೇತುಂ ಶಕ್ಯಃ ಸುರಗಣೈರಪಿ।
03165002c ಕಿಂ ಪುನರ್ಮಾನುಷೇ ಲೋಕೇ ಮಾನುಷೈರಕೃತಾತ್ಮಭಿಃ।।
03165002e ಅಪ್ರಮೇಯೋಽಪ್ರಧೃಷ್ಯಶ್ಚ ಯುದ್ಧೇಷ್ವಪ್ರತಿಮಸ್ತಥಾ।।

“ಇಂದು ನಿನ್ನನ್ನು ಸುರಗಣಗಳೂ ಕೂಡ ಜಯಿಸಲು ಶಕ್ಯವಿಲ್ಲ. ಇನ್ನು ಮನುಷ್ಯಲೋಕದಲ್ಲಿ ಕೃತಾತ್ಮರಾಗಿರದ ಮನುಷ್ಯರೆಲ್ಲಿ? ಯಾಕೆಂದರೆ ನೀನು ಅಪ್ರಮೇಯನಾಗಿದ್ದೀಯೆ. ಯುದ್ಧದಲ್ಲಿ ಅಪ್ರತಿಮನಾಗಿದ್ದೀಯೆ ಮತ್ತು ದುರ್ಧರ್ಷನಾಗಿದ್ದೀಯೆ.”

03165003a ಅಥಾಬ್ರವೀತ್ಪುನರ್ದೇವಃ ಸಂಪ್ರಹೃಷ್ಟತನೂರುಹಃ।
03165003c ಅಸ್ತ್ರಯುದ್ಧೇ ಸಮೋ ವೀರ ನ ತೇ ಕಶ್ಚಿದ್ಭವಿಷ್ಯತಿ।।

ಪುನಃ ಆ ದೇವನು ಮೈನವಿರೇಳುವಷ್ಟು ಸಂತೋಷಗೊಂಡು ಹೇಳಿದನು: “ವೀರ! ಅಸ್ತ್ರಯುದ್ಧದಲ್ಲಿ ನಿನ್ನ ಸಮನಾಗಿರುವವರು ಯಾರೂ ಇರುವುದಿಲ್ಲ!

03165004a ಅಪ್ರಮತ್ತಃ ಸದಾ ದಕ್ಷಃ ಸತ್ಯವಾದೀ ಜಿತೇಂದ್ರಿಯಃ।
03165004c ಬ್ರಹ್ಮಣ್ಯಶ್ಚಾಸ್ತ್ರವಿಚ್ಚಾಸಿ ಶೂರಶ್ಚಾಸಿ ಕುರೂದ್ವಹ।।

ಕುರೂದ್ಧಹ! ನೀನು ಅಪ್ರಮತ್ತ, ಸದಾ ದಕ್ಷ, ಸತ್ಯವಾದೀ, ಜಿತೇಂದ್ರಿಯ, ಬ್ರಹ್ಮಣ್ಯ ಮತ್ತು ಅಸ್ತ್ರಗಳನ್ನು ತಿಳಿದುಕೊಂಡಿರುವ ಶೂರನಾಗಿದ್ದೀಯೆ.

03165005a ಅಸ್ತ್ರಾಣಿ ಸಮವಾಪ್ತಾನಿ ತ್ವಯಾ ದಶ ಚ ಪಂಚ ಚ।
03165005c ಪಂಚಭಿರ್ವಿಧಿಭಿಃ ಪಾರ್ಥ ನ ತ್ವಯಾ ವಿದ್ಯತೇ ಸಮಃ।।

ಪಾರ್ಥ! ನೀನು ಹತ್ತು ಮತ್ತು ಐದು ಅಸ್ತ್ರಗಳನ್ನು ಐದು ವಿಧಿಗಳಿಂದ ಸರಿಯಾಗಿ ತಿಳಿದುಕೊಂಡಿದ್ದೀಯೆ. ನಿನ್ನ ಸಮನಾದವರಿಲ್ಲ.

03165006a ಪ್ರಯೋಗಮುಪಸಂಹಾರಮಾವೃತ್ತಿಂ ಚ ಧನಂಜಯ।
03165006c ಪ್ರಾಯಶ್ಚಿತ್ತಂ ಚ ವೇತ್ಥ ತ್ವಂ ಪ್ರತಿಘಾತಂ ಚ ಸರ್ವಶಃ।।

ಧನಂಜಯ! ನೀನು ಎಲ್ಲವುಗಳ ಪ್ರಯೋಗ, ಉಪಸಂಹಾರ, ಆವೃತ್ತಿ, ಪ್ರಾಯಶ್ಚಿತ್ತ ಮತ್ಟು ಪ್ರತಿಘಾತಗಳನ್ನು ತಿಳಿದಿದ್ದೀಯೆ.

03165007a ತವ ಗುರ್ವರ್ಥಕಾಲೋಽಯಮುಪಪನ್ನಃ ಪರಂತಪ।
03165007c ಪ್ರತಿಜಾನೀಷ್ವ ತಂ ಕರ್ತುಮತೋ ವೇತ್ಸ್ಯಾಮ್ಯಹಂ ಪರಂ।।

ಪರಂತಪ! ಈಗ ಗುರುದಕ್ಷಿಣೆಯ ಕಾಲವು ಬಂದೊದಗಿದೆ. ಮಾಡುತ್ತೇನೆಂದು ಭರವಸೆಯನ್ನು ಕೊಡು. ಅನಂತರ ನಾನು ಮಾಡುವುದೇನೆಂದು ಹೇಳುತ್ತೇನೆ.”

03165008a ತತೋಽಹಮಬ್ರುವಂ ರಾಜನ್ದೇವರಾಜಮಿದಂ ವಚಃ।
03165008c ವಿಷಹ್ಯಂ ಚೇನ್ಮಯಾ ಕರ್ತುಂ ಕೃತಮೇವ ನಿಬೋಧ ತತ್।।

ರಾಜನ್! ಆಗ ನಾನು ದೇವರಾಜನಿಗೆ ಈ ಮಾತುಗಳನ್ನಾಡಿದೆ: “ನಾನು ಆ ಕೆಲಸವನ್ನು ಮಾಡಬಹುದಾದರೆ ಕೆಲಸವನ್ನು ನನಗೆ ಹೇಳು.”

03165009a ತತೋ ಮಾಮಬ್ರವೀದ್ರಾಜನ್ಪ್ರಹಸ್ಯ ಬಲವೃತ್ರಹಾ।
03165009c ನಾವಿಷಹ್ಯಂ ತವಾದ್ಯಾಸ್ತಿ ತ್ರಿಷು ಲೋಕೇಷು ಕಿಂ ಚನ।।
03165010a ನಿವಾತಕವಚಾ ನಾಮ ದಾನವಾ ಮಮ ಶತ್ರವಃ।
03165010c ಸಮುದ್ರಕುಕ್ಷಿಮಾಶ್ರಿತ್ಯ ದುರ್ಗೇ ಪ್ರತಿವಸಂತ್ಯುತ।।
03165011a ತಿಸ್ರಃ ಕೋಟ್ಯಃ ಸಮಾಖ್ಯಾತಾಸ್ತುಲ್ಯರೂಪಬಲಪ್ರಭಾಃ।
03165011c ತಾಂಸ್ತತ್ರ ಜಹಿ ಕೌಂತೇಯ ಗುರ್ವರ್ಥಸ್ತೇ ಭವಿಷ್ಯತಿ।।

ರಾಜನ್! ಆಗ ಬಲವೃತ್ರಹನು ನಸುನಗುತ್ತ ನನಗೆ ಹೇಳಿದನು: “ಈಗ ಮೂರು ಲೋಕಗಳಲ್ಲಿ ಯಾವುದೂ ನಿನಗೆ ಅಸಾದ್ಯವೆನ್ನುವುದಿಲ್ಲ. ನಿವಾತಕವಚರೆನ್ನುವ ದಾನವರು ನನ್ನ ಶತ್ರುಗಳು. ಅವರು ದುರ್ಗಮವಾದ ಸಮುದ್ರದ ಹೊಟ್ಟೆಯಲ್ಲಿ ಆಶ್ರಯಿಸಿ ವಾಸಿಸುತ್ತಿದ್ದಾರೆ. ಮೂವತ್ತು ಕೋಟಿಯಲ್ಲಿ ಎಲ್ಲರೂ ಒಂದೇ ಸಮನಾದ ಆಕಾರ, ಬಲ, ಮತ್ತು ಪ್ರಭೆಗಳನ್ನು ಹೊಂದಿದವರಾಗಿದ್ದಾರೆ. ಅವರನ್ನು ಅಲ್ಲಿಯೇ ಕೊಲ್ಲು ಕೌಂತೇಯ! ಅದು ನಿನ್ನ ಗುರುದಕ್ಷಿಣೆಯಾಗುತ್ತದೆ.”

03165012a ತತೋ ಮಾತಲಿಸಮ್ಯುಕ್ತಂ ಮಯೂರಸಮರೋಮಭಿಃ।
03165012c ಹಯೈರುಪೇತಂ ಪ್ರಾದಾನ್ಮೇ ರಥಂ ದಿವ್ಯಂ ಮಹಾಪ್ರಭಂ।।

ಅವನು ನನಗೆ ಮಾತಲಿಸಂಯುಕ್ತ, ನವಿಲಿನ ರೆಕ್ಕೆಗಳಂತೆ ಚರ್ಮಗಳುಳ್ಳ ಕುದುರೆಗಳನ್ನು ಕಟ್ಟಿದ ಮಹಾಪ್ರಭೆಯ ದಿವ್ಯ ರಥವನ್ನು ಕೊಟ್ಟನು.

03165013a ಬಬಂಧ ಚೈವ ಮೇ ಮೂರ್ಧ್ನಿ ಕಿರೀಟಮಿದಮುತ್ತಮಂ।
03165013c ಸ್ವರೂಪಸದೃಶಂ ಚೈವ ಪ್ರಾದಾದಂಗವಿಭೂಷಣಂ।।
03165014a ಅಭೇದ್ಯಂ ಕವಚಂ ಚೇದಂ ಸ್ಪರ್ಶರೂಪವದುತ್ತಮಂ।
03165014c ಅಜರಾಂ ಜ್ಯಾಮಿಮಾಂ ಚಾಪಿ ಗಾಂಡೀವೇ ಸಮಯೋಜಯತ್।।

ಅವನು ನನ್ನ ನೆತ್ತಿಗೆ ಈ ಉತ್ತಮ ಕಿರೀಟವನ್ನು ಕಟ್ಟಿದನು ಮತ್ತು ಅವನು ಧರಿಸಿದ್ದ ಆಭರಣಗಳಂತೆಯೇ ಇದ್ದ ಆಭರಣಗಳನ್ನು, ಮುಟ್ಟಲು ಮತ್ತು ನೋಡಲು ಸುಂದರವಾದ ಅಭೇದ್ಯ ಕವಚವನ್ನು ಕೊಟ್ಟನು ಮತ್ತು ಈ ಜೀರ್ಣವಾಗದ ಬಿಲ್ಲುದಾರವನ್ನು ನನ್ನ ಗಾಂಡೀವಕ್ಕೆ ಕಟ್ಟಿದನು.

03165015a ತತಃ ಪ್ರಾಯಾಮಹಂ ತೇನ ಸ್ಯಂದನೇನ ವಿರಾಜತಾ।
03165015c ಯೇನಾಜಯದ್ದೇವಪತಿರ್ಬಲಿಂ ವೈರೋಚನಿಂ ಪುರಾ।।

ಅನಂತರ ನಾನು ಹಿಂದೆ ದೇವರಾಜನು ವಿರೋಚನಿ ಬಲಿಯನ್ನು ಜಯಿಸಿದ್ದ ಆ ಹೊಳೆಯುವ ರಥದಲ್ಲಿ ಕುಳಿತು ಹೊರಟೆನು.

03165016a ತತೋ ದೇವಾಃ ಸರ್ವ ಏವ ತೇನ ಘೋಷೇಣ ಬೋಧಿತಃ।
03165016c ಮನ್ವಾನಾ ದೇವರಾಜಂ ಮಾಂ ಸಮಾಜಗ್ಮುರ್ವಿಶಾಂ ಪತೇ।।
03165016e ದೃಷ್ಟ್ವಾ ಚ ಮಾಮಪೃಚ್ಚಂತ ಕಿಂ ಕರಿಷ್ಯಸಿ ಫಲ್ಗುನ।।

ವಿಶಾಂಪತೇ! ಅದರ ಘೋಷವನ್ನು ಕೇಳಿ ಅಲ್ಲಿ ಸೇರಿದ್ದ ಎಲ್ಲರೂ ನಾನೇ ಇಂದ್ರನೆಂದು ತಿಳಿದರು. ನನ್ನನ್ನು ನೋಡಿ ಕೇಳಿದರು: “ಫಲ್ಗುನ! ಏನು ಮಾಡುತ್ತಿರುವೆ?”

03165017a ತಾನಬ್ರುವಂ ಯಥಾಭೂತಮಿದಂ ಕರ್ತಾಸ್ಮಿ ಸಂಯುಗೇ।
03165017c ನಿವಾತಕವಚಾನಾಂ ತು ಪ್ರಸ್ಥಿತಂ ಮಾಂ ವಧೈಷಿಣಂ।।
03165017e ನಿಬೋಧತ ಮಹಾಭಾಗಾಃ ಶಿವಂ ಚಾಶಾಸ್ತ ಮೇಽನಘಾಃ।।

ಇದ್ದಹಾಗೆ ನಾನು ಅವರಿಗೆ ಹೇಳಿದೆನು: “ಯುದ್ಧದಲ್ಲಿ ನಾನು ಇದನ್ನು ಮಾಡುವವನಿದ್ದೇನೆ. ನಾನು ನಿವಾತಕವಚರ ವಧೆಗಾಗಿ ಹೊರಟಿದ್ದೇನೆಂದು ತಿಳಿಯಿರಿ. ಅನಘ ಮಹಾಭಾಗರೇ! ನನಗೆ ಮಂಗಳವಾಗಲೆಂದು ಅಶೀರ್ವದಿಸಿ.”

03165018a ತುಷ್ಟುವುರ್ಮಾಂ ಪ್ರಸನ್ನಾಸ್ತೇ ಯಥಾ ದೇವಂ ಪುರಂದರಂ।
03165018c ರಥೇನಾನೇನ ಮಘವಾ ಜಿತವಾಂ ಶಂಬರಂ ಯುಧಿ।।
03165018e ನಮುಚಿಂ ಬಲವೃತ್ರೌ ಚ ಪ್ರಹ್ಲಾದನರಕಾವಪಿ।।
03165019a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
03165019c ರಥೇನಾನೇನ ದೈತ್ಯಾನಾಂ ಜಿತವಾನ್ಮಘವಾನ್ಯುಧಿ।।
03165020a ತ್ವಮಪ್ಯೇತೇನ ಕೌಂತೇಯ ನಿವಾತಕವಚಾನ್ ರಣೇ।
03165020c ವಿಜೇತಾ ಯುಧಿ ವಿಕ್ರಮ್ಯ ಪುರೇವ ಮಘವಾನ್ವಶೀ।।

ಪುರಂದರನಂತೆ ಅವರು ಪ್ರಸನ್ನರಾಗಿ ನನಗೆ ತುಷ್ಟಿಗಳನ್ನು ಹೇಳಿದರು. “ಇದೇ ರಥದಲ್ಲಿ ಕುಳಿತು ಮಘವನು ಯುದ್ಧದಲ್ಲಿ ಶಂಬರನನ್ನು ಜಯಿಸಿದನು. ನಮುಚಿ, ಬಲ-ವೃತ್ರರು, ಪ್ರಹ್ಲಾದ, ನರಕರಂಥ ಬಹಳಷ್ಟು ಸಹಸ್ರ, ಅರ್ಬುದ ದೈತ್ಯರನ್ನು ಕೂಡ ಇದೇ ರಥದಲ್ಲಿ ಕುಳಿತು ಮಘವಾನನು ಯುದ್ಧದಲ್ಲಿ ಜಯಿಸಿದನು. ಕೌಂತೇಯ! ನೀನೂ ಕೂಡ ಇದರಿಂದ ರಣದಲ್ಲಿ ನಿವಾತಕವಚರನ್ನು ಹಿಂದೆ ಮಘವಾನನು ವಿಕ್ರಮದಿಂದ ಯುದ್ದದಲ್ಲಿ ಗೆದ್ದಂತೆ ಗೆಲ್ಲುವೆ.

03165021a ಅಯಂ ಚ ಶಂಖಪ್ರವರೋ ಯೇನ ಜೇತಾಸಿ ದಾನವಾನ್।
03165021c ಅನೇನ ವಿಜಿತಾ ಲೋಕಾಃ ಶಕ್ರೇಣಾಪಿ ಮಹಾತ್ಮನಾ।।

ಇದು ಶಂಖಗಳಲ್ಲಿ ಶ್ರೇಷ್ಠವಾದುದು. ಇದರಿಂದ ಕೂಡ ದಾನವರನ್ನು ಗೆಲ್ಲುವೆ. ಇದರಿಂದ ಮಹಾತ್ಮ ಶಕ್ರನೂ ಲೋಕಗಳನ್ನು ಗೆದ್ದಿದ್ದನು.”

03165022a ಪ್ರದೀಯಮಾನಂ ದೇವೈಸ್ತು ದೇವದತ್ತಂ ಜಲೋದ್ಭವಂ।
03165022c ಪ್ರತ್ಯಗೃಹ್ಣಂ ಜಯಾಯೈನಂ ಸ್ತೂಯಮಾನಸ್ತದಾಮರೈಃ।।

ಆಗ ನಾನು ಜಲೋದ್ಭವ ದೇವದತ್ತವನ್ನು ದೇವತೆಗಳಿಂದ ಸ್ವೀಕರಿಸಿದೆನು. ಜಯವನ್ನು ತರುವ ಅಮರರ ಸ್ತುತಿಗಳನ್ನು ಸ್ವೀಕರಿಸಿದೆ.

03165023a ಸ ಶಂಖೀ ಕವಚೀ ಬಾಣೀ ಪ್ರಗೃಹೀತಶರಾಸನಃ।
03165023c ದಾನವಾಲಯಮತ್ಯುಗ್ರಂ ಪ್ರಯಾತೋಽಸ್ಮಿ ಯುಯುತ್ಸಯಾ।।

ಆ ಶಂಖ, ಕವಚ, ಬಾಣ, ಬಿಲ್ಲುಗಳನ್ನು ಹಿಡಿದು ನಾನು ಯುದ್ಧೋತ್ಸುಕನಾಗಿ ಆ ಅತ್ಯುಗ್ರ ದಾನವಾಲಯದ ಕಡೆ ಹೊರಟೆನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನವಾಕ್ಯೇ ಪಂಚಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನವಾಕ್ಯದಲ್ಲಿ ನೂರಾಅರವತ್ತೈದನೆಯ ಅಧ್ಯಾಯವು.