161 ನಿವಾತಕವಚಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 161

ಸಾರ

ಯುಧಿಷ್ಠಿರಾದಿಗಳು ಗಂಧಮಾದನ ಪರ್ವತದ ಮೇಲೆ ಅರ್ಜುನನ ನಿರೀಕ್ಷೆಯಲ್ಲಿ ಒಂದು ತಿಂಗಳು ಕಳೆದುದು (1-16). ಇಂದ್ರರಥದಲ್ಲಿ ಅರ್ಜುನನನ್ನು ಕರೆತಂದು ಮಾತಲಿಯು ಹಿಂದಿರುಗಿದುದು (17-24). ಸಂತೋಷದಿಂದ ನಡೆದುದೆಲ್ಲವನ್ನೂ ಹೇಳಿ ಅರ್ಜುನನು ರಾತ್ರಿಯನ್ನು ಕಳೆದುದು (26-29).

03161001 1ವೈಶಂಪಾಯನ ಉವಾಚ।
03161001a ತಸ್ಮಿನ್ನಗೇಂದ್ರೇ ವಸತಾಂ ತು ತೇಷಾಂ। ಮಹಾತ್ಮನಾಂ ಸದ್ವ್ರತಮಾಸ್ಥಿತಾನಾಂ।
03161001c ರತಿಃ ಪ್ರಮೋದಶ್ಚ ಬಭೂವ ತೇಷಾಂ। ಆಕಾಂಕ್ಷತಾಂ ದರ್ಶನಮರ್ಜುನಸ್ಯ।।

ವೈಶಂಪಾಯನನು ಹೇಳಿದನು: “ಅರ್ಜುನನನ್ನು ನೋಡುವ ಆಕ್ಷಾಂಕ್ಷೆಯಿಂದ ಆ ಮಹಾತ್ಮ ಸದ್ವ್ರತ ನಿರತರೆಲ್ಲರೂ ಸುಖ ಸಂತೋಷದಿಂದ ಆ ಪರ್ವತದ ಮೇಲೆ ವಾಸಿಸಿದರು.

03161002a ತಾನ್ವೀರ್ಯಯುಕ್ತಾನ್ಸುವಿಶುದ್ಧಸತ್ತ್ವಾಂಸ್। ತೇಜಸ್ವಿನಃ ಸತ್ಯಧೃತಿಪ್ರಧಾನಾನ್।
03161002c ಸಂಪ್ರೀಯಮಾಣಾ ಬಹವೋಽಭಿಜಗ್ಮುರ್। ಗಂಧರ್ವಸಂಘಾಶ್ಚ ಮಹರ್ಷಯಶ್ಚ।।

ಆ ವೀರ್ಯಯುಕ್ತರನ್ನು ಸುವಿಶುದ್ಧ ಸತ್ವವುಳ್ಳ ತೇಜಸ್ವಿ ಸತ್ಯಧೃತಿಯುಕ್ತರನ್ನು ಬಹಳಷ್ಟು ಗಂದರ್ವ ಮತ್ತು ಮಹರ್ಷಿಗಣಗಳು ಕಾಣಲು ಬಂದರು.

03161003a ತಂ ಪಾದಪೈಃ ಪುಷ್ಪಧರೈರುಪೇತಂ। ನಗೋತ್ತಮಂ ಪ್ರಾಪ್ಯ ಮಹಾರಥಾನಾಂ।
03161003c ಮನಃಪ್ರಸಾದಃ ಪರಮೋ ಬಭೂವ। ಯಥಾ ದಿವಂ ಪ್ರಾಪ್ಯ ಮರುದ್ಗಣಾನಾಂ।।

ಸ್ವರ್ಗವನ್ನು ಸೇರಿದ ಮರುತ್ಗಣಗಳಂತೆ ಆ ಮಹಾರಥಿಗಳು ಹೂಬಿಡುವ ಮರಗಳಿಂದ ಶೋಭಿತವಾದ ಆ ಉತ್ತಮ ಪರ್ವತವನ್ನು ಸೇರಿ ಪರಮ ಪ್ರಶಾಂತ ಮನಸ್ಸನ್ನು ಹೊಂದಿದರು.

03161004a ಮಯೂರಹಂಸಸ್ವನನಾದಿತಾನಿ। ಪುಷ್ಪೋಪಕೀರ್ಣಾನಿ ಮಹಾಚಲಸ್ಯ।
03161004c ಶೃಂಗಾಣಿ ಸಾನೂನಿ ಚ ಪಶ್ಯಮಾನಾ। ಗಿರೇಃ ಪರಂ ಹರ್ಷಮವಾಪ್ಯ ತಸ್ಥುಃ।।

ನವಿಲು ಮತ್ತು ಹಂಸಗಳ ಧ್ವನಿಗಳಿಂದ ತುಂಬಿದ್ದ, ಕುಸುಮಗಳು ಹಾಸಿಗೆಯಂತೆ ಹರಡಿದ್ದ ಆ ಮಹಾಗಿರಿಯ ಶಿಖರಗಳನ್ನೂ ಕಣಿವೆಗಳನ್ನೂ ನೋಡಿ ಅವರು ಪರಮ ಹರ್ಷಿತರಾದರು.

03161005a ಸಾಕ್ಷಾತ್ಕುಬೇರೇಣ ಕೃತಾಶ್ಚ ತಸ್ಮಿನ್। ನಗೋತ್ತಮೇ ಸಂವೃತಕೂಲರೋಧಸಃ।
03161005c ಕಾದಂಬಕಾರಂಡವಹಂಸಜುಷ್ಟಾಃ। ಪದ್ಮಾಕುಲಾಃ ಪುಷ್ಕರಿಣೀರಪಶ್ಯನ್।।

ಸಾಕ್ಷಾತ್ ಕುಬೇರನ ಆತಿಥ್ಯವನ್ನು ಪಡೆದ ಅವರು ಆ ಉತ್ತಮ ಪರ್ವತದಮೇಲೆ ಪರ್ವತದಿಂದ ಹರಿಯುವ ನದಿಗಳನ್ನೂ ಅವಕ್ಕೆ ದಡವಾಗಿ ನಿಂತಿದ್ದ ವನಗಳನ್ನೂ, ಕಾಡಂಬ, ಕಾರಂಡ ಮತ್ತು ಹಂಸಗಳು ಆಡುತ್ತಿರುವ ತಾವರೆಯ ಹೂಗುಚ್ಛಗಳಿಂದ ಕೂಡಿದ ತಾವರೆಯ ಕೊಳಗಳನ್ನೂ ನೋಡಿದರು.

03161006a ಕ್ರೀಡಾಪ್ರದೇಶಾಂಶ್ಚ ಸಮೃದ್ಧರೂಪಾನ್। ಸುಚಿತ್ರಮಾಲ್ಯಾವೃತಜಾತಶೋಭಾನ್।
03161006c ಮಣಿಪ್ರವೇಕಾನ್ಸುಮನೋಹರಾಂಶ್ಚ। ಯಥಾ ಭವೇಯುರ್ಧನದಸ್ಯ ರಾಜ್ಞಃ।।

ಕ್ರೀಡಾಪ್ರದೇಶಗಳನ್ನೂ, ಸಮೃದ್ಧರೂಪದ ಬಣ್ಣಬಣ್ಣದ ಮಾಲೆಗಳಿಂದ ಸುತ್ತುವರೆಯಲ್ಪಟ್ಟು ಶೋಭಿಸುವ, ಸುಮನೋಹರವಾದ ಆರಿಸಿದ ಮಣಿಗಳನ್ನೂ, ರಾಜ ಧನದನ ಬಳಿಯಲ್ಲಿ ಏನಿವೆಯೋ ಅವೆಲ್ಲವನ್ನೂ ನೋಡಿದರು.

03161007a ಅನೇಕವರ್ಣೈಶ್ಚ ಸುಗಂಧಿಭಿಶ್ಚ। ಮಹಾದ್ರುಮೈಃ ಸಂತತಮಭ್ರಮಾಲಿಭಿಃ।
03161007c ತಪಃಪ್ರಧಾನಾಃ ಸತತಂ ಚರಂತಃ। ಶೃಂಗಂ ಗಿರೇಶ್ಚಿಂತಯಿತುಂ ನ ಶೇಕುಃ।।

ತಪಸ್ಸನ್ನೇ ಪ್ರಧಾನವಾಗಿಟ್ಟುಕೊಂಡಿದ್ದ ಅವರು ಸತತವೂ ತಿರುಗಾಡುತ್ತಿರುವಾಗ ಅನೇಕ ವರ್ಣಗಳು ಮತ್ತು ಸುಗಂಧಗಳಿದ್ದ ಮೋಡಗಳನ್ನು ಮುಟ್ಟುವಂತಿರುವ ಮಹಾವೃಕ್ಷಗಳನ್ನು ನೋಡಿ ಪರ್ವತದ ಶಿಖರವನ್ನೇ ಕಾಣದಂತಾದರು.

03161008a ಸ್ವತೇಜಸಾ ತಸ್ಯ ನಗೋತ್ತಮಸ್ಯ। ಮಹೌಷಧೀನಾಂ ಚ ತಥಾ ಪ್ರಭಾವಾತ್।
03161008c ವಿಭಕ್ತಭಾವೋ ನ ಬಭೂವ ಕಶ್ಚಿದ್। ಅಹರ್ನಿಶಾನಾಂ ಪುರುಷಪ್ರವೀರ।।

ಪುರುಷಪ್ರವೀರ! ಆ ನಗೋತ್ತಮನ ಸ್ವತೇಜಸ್ಸಿನಿಂದ ಮತ್ತು ಮಹೌಷಧಿಗಳ ಪ್ರಭಾವದಿಂದ ಅಲ್ಲಿ ಹಗಲು ಮತ್ತು ರಾತ್ರಿಗಳನ್ನು ಬೇರಾಗಿಸಲು ಸಾಧ್ಯವಾಗುತ್ತಿರಲಿಲ್ಲ.

03161009a ಯಮಾಸ್ಥಿತಃ ಸ್ಥಾವರಜಂಗಮಾನಿ। ವಿಭಾವಸುರ್ಭಾವಯತೇಽಮಿತೌಜಾಃ।
03161009c ತಸ್ಯೋದಯಂ ಚಾಸ್ತಮಯಂ ಚ ವೀರಾಸ್। ತತ್ರ ಸ್ಥಿತಾಸ್ತೇ ದದೃಶುರ್ನೃಸಿಂಹಾಃ।।

ಅಮಿತೌಜಸ ವಿಭಾವಸುವು ಅಲ್ಲಿಯೇ ನಿಂತು ಸ್ಥಾವರಜಂಗಮಗಳಿಗೆ ಆಧಾರನಾಗಿದ್ದಾನೆ. ಆ ವೀರರು ಅಲ್ಲಿ ಉಳಿದುಕೊಂಡಿರುವಾಗ ಅವನ ಉದಯ ಮತ್ತು ಅಸ್ತಗಳನ್ನು ನೋಡುತ್ತಿದ್ದರು.

03161010a ರವೇಸ್ತಮಿಸ್ರಾಗಮನಿರ್ಗಮಾಂಸ್ತೇ। ತಥೋದಯಂ ಚಾಸ್ತಮಯಂ ಚ ವೀರಾಃ।
03161010c ಸಮಾವೃತಾಃ ಪ್ರೇಕ್ಷ್ಯ ತಮೋನುದಸ್ಯ। ಗಭಸ್ತಿಜಾಲೈಃ ಪ್ರದಿಶೋ ದಿಶಶ್ಚ।।

ಆ ವೀರರು ಸೂರ್ಯನ ಉದಯದೊಂದಿಗೆ ರಾತ್ರಿಯು ಹೇಗೆ ಓಡಿಹೋಯಿತು ಮತ್ತು ಅವನು ಮುಳುಗುವ ಜೊತೆ ಪುನಃ ಬಂದಿತು ಎನ್ನುವುದನ್ನು ನೋಡಿದರು. ಮತ್ತು ಅವರು ಅವನ ಕಿರಣಗಳು ಎಲ್ಲ ದಿಕ್ಕುಗಳನ್ನೂ ಜಾಲಗಳಂತೆ ಪಸರಿಸುವುದನ್ನು ನೋಡಿದರು.

03161011a ಸ್ವಾಧ್ಯಾಯವಂತಃ ಸತತಕ್ರಿಯಾಶ್ಚ। ಧರ್ಮಪ್ರಧಾನಾಶ್ಚ ಶುಚಿವ್ರತಾಶ್ಚ।
03161011c ಸತ್ಯೇ ಸ್ಥಿತಾಸ್ತಸ್ಯ ಮಹಾರಥಸ್ಯ। ಸತ್ಯವ್ರತಸ್ಯಾಗಮನಪ್ರತೀಕ್ಷಾಃ।।

ಆ ಮಹಾರಥರು ಸ್ವಾಧ್ಯಾಯಮಾಡುತ್ತಿದ್ದರು. ನಿತ್ಯಕರ್ಮಗಳನ್ನು ಮಾಡುತ್ತಿದ್ದರು. ಧರ್ಮವನ್ನೇ ಪ್ರಧಾನವನ್ನಾಗಿರಿಸಿಕೊಂಡಿದ್ದರು. ಶುಚಿವ್ರತರಾಗಿದ್ದರು. ಸತ್ಯದಲ್ಲಿ ನೆಲೆಸಿದ್ದರು. ಮತ್ತು ಸತ್ಯವ್ರತನ ಆಗಮನವನ್ನು ಕಾಯುತ್ತಿದ್ದರು.

03161012a ಇಹೈವ ಹರ್ಷೋಽಸ್ತು ಸಮಾಗತಾನಾಂ। ಕ್ಷಿಪ್ರಂ ಕೃತಾಸ್ತ್ರೇಣ ಧನಂಜಯೇನ।
03161012c ಇತಿ ಬ್ರುವಂತಃ ಪರಮಾಶಿಷಸ್ತೇ। ಪಾರ್ಥಾಸ್ತಪೋಯೋಗಪರಾ ಬಭೂವುಃ।।

“ಇಲ್ಲಿಯೇ ಶೀಘ್ರದಲ್ಲಿ ನಾವು ಅಸ್ತ್ರಗಳನ್ನು ಕಲಿತುಕೊಂಡು ಬರುವ ಧನಂಜಯನನ್ನು ಸೇರುವ ಹರ್ಷವನ್ನು ಪಡೆಯುವವರಿದ್ದೇವೆ!” ಎಂದು ಹೇಳಿಕೊಳ್ಳುತ್ತಾ ಆ ಪಾರ್ಥರು ಪರಮ ಆಶೀರ್ವಾದಗಳಿಂದ ತಪಸ್ಸು ಮತ್ತು ಯೋಗದಲ್ಲಿ ನಿರತರಾದರು.

03161013a ದೃಷ್ಟ್ವಾ ವಿಚಿತ್ರಾಣಿ ಗಿರೌ ವನಾನಿ। ಕಿರೀಟಿನಂ ಚಿಂತಯತಾಮಭೀಕ್ಷ್ಣಂ।
03161013c ಬಭೂವ ರಾತ್ರಿರ್ದಿವಸಶ್ಚ ತೇಷಾಂ। ಸಂವತ್ಸರೇಣೈವ ಸಮಾನರೂಪಃ।।

ಆ ವಿಚಿತ್ರ ಗಿರಿಗಳನ್ನೂ ವನಗಳನ್ನೂ ನೋಡಿ ಅವರು ಸದಾ ಕಿರೀಟಿಯ ಕುರಿತು ಚಿಂತಿಸಿದರು. ಅವರ ದಿನ-ರಾತ್ರಿಗಳು ಒಂದೊಂದು ವರುಷದ ಸಮಾನವಾಗಿ ತೋರುತ್ತಿದ್ದವು.

03161014a ಯದೈವ ಧೌಮ್ಯಾನುಮತೇ ಮಹಾತ್ಮಾ। ಕೃತ್ವಾ ಜಟಾಃ ಪ್ರವ್ರಜಿತಃ ಸ ಜಿಷ್ಣುಃ।
03161014c ತದೈವ ತೇಷಾಂ ನ ಬಭೂವ ಹರ್ಷಃ। ಕುತೋ ರತಿಸ್ತದ್ಗತಮಾನಸಾನಾಂ।।

ಮಹಾತ್ಮ ಧೌಮ್ಯನ ಅನುಮತಿಯಂತೆ ಜಟೆಯನ್ನು ಧರಿಸಿ ಜಿಷ್ಣುವು ಎಂದು ಪ್ರವ್ರಾಜಿತನಾದನೋ, ಅವನನ್ನೇ ಅನುಸರಿಸಿದ್ದನೋ, ಅಂದಿನಿಂದ ಅವರು ಸಂತೋಷವನ್ನೇ ಪಡೆದಿರಲಿಲ್ಲ. ಅವನನ್ನು ಅನುಸರಿಸಿ ಹೋದ ಮನಸ್ಸುಳ್ಳವರು ಹೇಗೆ ತಾನೆ ಸಂತೋಷಪಟ್ಟಾರು?

03161015a ಭ್ರಾತುರ್ನಿಯೋಗಾತ್ತು ಯುಧಿಷ್ಠಿರಸ್ಯ। ವನಾದಸೌ ವಾರಣಮತ್ತಗಾಮೀ।
03161015c ಯತ್ಕಾಮ್ಯಕಾತ್ಪ್ರವ್ರಜಿತಃ ಸ ಜಿಷ್ಣುಸ್। ತದೈವ ತೇ ಶೋಕಹತಾ ಬಭೂವುಃ।।

ಮತ್ತ ಗಜಗಾಮಿ ಜಿಷ್ಣುವು ತನ್ನ ಅಣ್ಣ ಯುಧಿಷ್ಠಿರನ ಆದೇಶದಂತೆ ಕಾಮ್ಯಕವನ್ನು ಬಿಟ್ಟು ಹೋದಾಗಿನಿಂದ ಅವರು ಶೋಕಹತರಾಗಿದ್ದರು.

03161016a ತಥಾ ತು ತಂ ಚಿಂತಯತಾಂ ಸಿತಾಶ್ವಂ। ಅಸ್ತ್ರಾರ್ಥಿನಂ ವಾಸವಮಭ್ಯುಪೇತಂ।
03161016c ಮಾಸೋಽಥ ಕೃಚ್ಚ್ರೇಣ ತದಾ ವ್ಯತೀತಸ್। ತಸ್ಮಿನ್ನಗೇ ಭಾರತ ಭಾರತಾನಾಂ।।

ಹೀಗೆ ಶ್ವೇತಾಶ್ವಗಳನ್ನು ಓಡಿಸುವ, ವಾಸವನಲ್ಲಿ ಅಸ್ತ್ರಾರ್ಥಿಯಾಗಿ ಹೋಗಿದ್ದ ಭಾರತನ ಕುರಿತು ಚಿಂತಿಸುತ್ತಾ ಆ ಭಾರತರು ಅಲ್ಲಿ ಕಷ್ಟದಿಂದ ಒಂದು ತಿಂಗಳು ಕಳೆದರು.

03161017a ತತಃ ಕದಾ ಚಿದ್ಧರಿಸಂಪ್ರಯುಕ್ತಂ। ಮಹೇಂದ್ರವಾಹಂ ಸಹಸೋಪಯಾತಂ।
03161017c ವಿದ್ಯುತ್ಪ್ರಭಂ ಪ್ರೇಕ್ಷ್ಯ ಮಹಾರಥಾನಾಂ। ಹರ್ಷೋಽರ್ಜುನಂ ಚಿಂತಯತಾಂ ಬಭೂವ।।

ಆಗ ಒಂದುದಿನ ಆ ಮಹಾರಥಿಗಳು ಒಮ್ಮೆಲೇ ವಿದ್ಯುತ್ತಿನ ಪ್ರಭೆಯನ್ನು ಹೊಂದಿದ ಇಂದ್ರನ ಕುದುರೆಗಳಿಂದ ಎಳೆಯಲ್ಪಟ್ಟ ಯಾನವನ್ನು ನೋಡಿದರು ಮತ್ತು ಅರ್ಜುನನ ಕುರಿತು ಯೋಚಿಸುತ್ತಾ ಹರ್ಷಿತರಾದರು.

03161018a ಸ ದೀಪ್ಯಮಾನಃ ಸಹಸಾಂತರಿಕ್ಷಂ। ಪ್ರಕಾಶಯನ್ಮಾತಲಿಸಂಗೃಹೀತಃ।
03161018c ಬಭೌ ಮಹೋಲ್ಕೇವ ಘನಾಂತರಸ್ಥಾ। ಶಿಖೇವ ಚಾಗ್ನೇರ್ಜ್ವಲಿತಾ ವಿಧೂಮಾ।।

ಮಾತಲಿಯಿಂದ ನಡೆಸಲ್ಪಟ್ಟ ಚೆನ್ನಾಗಿ ಉರಿಯುತ್ತಿರುವ ಬೆಂಕಿಯ ಹೊಗೆಯಿಲ್ಲದ ಜ್ವಾಲೆಯಂತೆ ಬೆಳಗುತ್ತಿದ್ದ ಆ ರಥವು ಘನ ಆಕಾಶದಲ್ಲಿ ಮಹಾ ಉಲ್ಕೆಯಂತೆ ಅಂತರಿಕ್ಷವನ್ನು ಬೆಳಗಿಸುತ್ತಿತ್ತು.

03161019a ತಮಾಸ್ಥಿತಃ ಸಂದದೃಶೇ ಕಿರೀಟೀ। ಸ್ರಗ್ವೀ ವರಾಣ್ಯಾಭರಣಾನಿ ಬಿಭ್ರತ್।
03161019c ಧನಂಜಯೋ ವಜ್ರಧರಪ್ರಭಾವಃ। ಶ್ರಿಯಾ ಜ್ವಲನ್ಪರ್ವತಮಾಜಗಾಮ।।

ಅದರಲ್ಲಿ ವಜ್ರಧರನ ಪ್ರಭಾವದಿಂದ ಶ್ರೇಷ್ಠ ಆಭರಣ ಮತ್ತು ಮಾಲೆಗಳಿಂದ ಕಾಂತಿಯುಕ್ತನಾಗಿ, ಕಾಂತಿಯಿಂದ ಬೆಳಗುತ್ತಾ ಕುಳಿತಿದ್ದ ಕಿರೀಟಿ ಧನಂಜಯನು ಕಾಣುತ್ತಿದ್ದಂತೆಯೇ ಪರ್ವತದ ಮೇಲೆ ಬಂದಿಳಿಯಿತು.

03161020a ಸ ಶೈಲಮಾಸಾದ್ಯ ಕಿರೀಟಮಾಲೀ। ಮಹೇಂದ್ರವಾಹಾದವರುಃಯ ತಸ್ಮಾತ್।
03161020c ಧೌಮ್ಯಸ್ಯ ಪಾದಾವಭಿವಾದ್ಯ ಪೂರ್ವಂ। ಅಜಾತಶತ್ರೋಸ್ತದನಂತರಂ ಚ।।

ಆ ಶೈಲವನ್ನು ತಲುಪಿ ಕಿರೀಟಮಾಲಿಯು ಆ ಮಹೇಂದ್ರನ ರಥದಿಂದ ಕೆಳಗಿಳಿದು ಮೊದಲು ಧೌಮ್ಯನ ಪಾದಗಳಿಗೆ ವಂದಿಸಿ ಅನಂತರ ಅಜಾತಶತ್ರುವಿನ ಪಾದಗಳಿಗೆ ವಂದಿಸಿದನು.

03161021a ವೃಕೋದರಸ್ಯಾಪಿ ವವಂದ ಪಾದೌ। ಮಾದ್ರೀಸುತಾಭ್ಯಾಮಭಿವಾದಿತಶ್ಚ।
03161021c ಸಮೇತ್ಯ ಕೃಷ್ಣಾಂ ಪರಿಸಾಂತ್ವ್ಯ ಚೈನಾಂ। ಪ್ರಹ್ವೋಽಭವದ್ಭ್ರಾತುರುಪಹ್ವರೇ ಸಃ।।

ಅವನು ವೃಕೋದರನ ಪಾದಗಳಿಗೂ ವಂದಿಸಿದನು ಮತ್ತು ಮಾದ್ರೀಸುತರನ್ನು ಅಭಿವಾದಿಸಿದನು. ಕೃಷ್ಣೆಯನ್ನು ಸೇರಿ ಅವಳನ್ನು ಪರಿಸಂಚಿಸಿದನು ಮತ್ತು ತಲೆಬಾಗಿ ತನ್ನ ಅಣ್ಣನ ಕೆಳಗೆ ನಿಂತುಕೊಂಡನು.

03161022a ಬಭೂವ ತೇಷಾಂ ಪರಮಃ ಪ್ರಹರ್ಷಸ್। ತೇನಾಪ್ರಮೇಯೇಣ ಸಮಾಗತಾನಾಂ।
03161022c ಸ ಚಾಪಿ ತಾನ್ಪ್ರೇಕ್ಷ್ಯ ಕಿರೀಟಮಾಲೀ। ನನಂದ ರಾಜಾನಮಭಿಪ್ರಶಂಸನ್।।

ಆ ಅಪ್ರಮೇಯನ ಮಿಲನದಿಂದ ಅವರಿಗೆ ಪರಮ ಪ್ರಹರ್ಷವಾಯಿತು. ಆ ಕಿರೀಟಮಾಲಿಯೂ ಕೂಡ ಅವರನ್ನು ಕಂಡು, ರಾಜನನ್ನು ಪ್ರಶಂಸಿಸಿ ಆನಂದಿಸಿದನು.

03161023a ಯಮಾಸ್ಥಿತಃ ಸಪ್ತ ಜಘಾನ ಪೂಗಾನ್। ದಿತೇಃ ಸುತಾನಾಂ ನಮುಚೇರ್ನಿಹಂತಾ।
03161023c ತಮಿಂದ್ರವಾಹಂ ಸಮುಪೇತ್ಯ ಪಾರ್ಥಾಃ। ಪ್ರದಕ್ಷಿಣಂ ಚಕ್ರುರದೀನಸತ್ತ್ವಾಃ।।

ಯಾವುದರಲ್ಲಿ ಕುಳಿತು ದಿತಿಯ ಮಕ್ಕಳ ಏಳು ಪಂಗಡಗಳನ್ನು ನಮೂಚಿಹಂತಕ ಇಂದ್ರನು ಸಂಹರಿಸಿದ್ದನೋ ಆ ಇಂದ್ರವಾಹನವನ್ನು ಸಮೀಪಿಸಿ ಪ್ರದಕ್ಷಿಣೆ ಮಾಡಿ ಆ ಪಾರ್ಥರ ಹೃದಯಗಳು ಸಂತೋಷ ಭರಿತವಾದವು.

03161024a ತೇ ಮಾತಲೇಶ್ಚಕ್ರುರತೀವ ಹೃಷ್ಟಾಃ। ಸತ್ಕಾರಮಗ್ರ್ಯಂ ಸುರರಾಜತುಲ್ಯಂ।
03161024c ಸರ್ವಂ ಯಥಾವಚ್ಚ ದಿವೌಕಸಸ್ತಾನ್। ಪಪ್ರಚ್ಚುರೇನಂ ಕುರುರಾಜಪುತ್ರಾಃ।।

ಅತೀವ ಹೃಷ್ಟರಾದ ಅವರು ಮಾತಲಿಗೆ ಸುರರಾಜನಿಗೆ ಸಮನಾದ ಸತ್ಕಾರವನ್ನಿತ್ತರು ಮತ್ತು ಎಲ್ಲ ಕುರುರಾಜಪುತ್ರರೂ ಯಥಾವತ್ತಾಗಿ ದಿವೌಕಸರ ಕುರಿತು ಕೇಳಿದರು.

03161025a ತಾನಪ್ಯಸೌ ಮಾತಲಿರಭ್ಯನಂದತ್। ಪಿತೇವ ಪುತ್ರಾನನುಶಿಷ್ಯ ಚೈನಾನ್।
03161025c ಯಯೌ ರಥೇನಾಪ್ರತಿಮಪ್ರಭೇಣ। ಪುನಃ ಸಕಾಶಂ ತ್ರಿದಿವೇಶ್ವರಸ್ಯ।।

ಮಾತಲಿಯೂ ಕೂಡ ಪಿತನು ಪುತ್ರರಿಗೆ ಹೇಗೋ ಹಾಗೆ ಅವರನ್ನು ಅಭಿನಂದಿಸಿದನು ಮತ್ತು ಉಪದೇಶಿಸಿದನು. ಅನಂತರ ಅವನು ಆ ಅಪ್ರತಿಮ ರಥದಲ್ಲಿ ಮರಳಿ ತ್ರಿದೇವೇಶ್ವರನ ಬಳಿ ಹೋದನು.

03161026a ಗತೇ ತು ತಸ್ಮಿನ್ವರದೇವವಾಹೇ। ಶಕ್ರಾತ್ಮಜಃ ಸರ್ವರಿಪುಪ್ರಮಾಥೀ।
03161026c ಶಕ್ರೇಣ ದತ್ತಾನಿ ದದೌ ಮಹಾತ್ಮಾ। ಮಹಾಧನಾನ್ಯುತ್ತಮರೂಪವಂತಿ।।
03161026e ದಿವಾಕರಾಭಾಣಿ ವಿಭೂಷಣಾನಿ। ಪ್ರೀತಃ ಪ್ರಿಯಾಯೈ ಸುತಸೋಮಮಾತ್ರೇ।।

ಆ ವರದೇವನ ಯಾನವು ಹೊರಟುಹೋಗಲು, ಶಕ್ರಾತ್ಮಜ, ಸರ್ವರಿಪುಪ್ರಮಥಿಯು ಮಹಾತ್ಮ ಶಕ್ರನು ನೀಡಿದ್ದ ಮಹಾಧನವನ್ನೂ, ಉತ್ತಮ ರೂಪಗಳನ್ನೂ, ದಿವಾಕರನಂತೆ ಹೊಳೆಯುತ್ತಿರುವ ವಿಭೂಷಣಗಳನ್ನೂ ಪ್ರೀತಿಯಿಂದ ಆ ಸುತಸೋಮನ ತಾಯಿ ದ್ರೌಪದಿಗೆ ಕೊಟ್ಟನು.

03161027a ತತಃ ಸ ತೇಷಾಂ ಕುರುಪುಂಗವಾನಾಂ। ತೇಷಾಂ ಚ ಸೂರ್ಯಾಗ್ನಿಸಮಪ್ರಭಾಣಾಂ।
03161027c ವಿಪ್ರರ್ಷಭಾಣಾಮುಪವಿಶ್ಯ ಮಧ್ಯೇ। ಸರ್ವಂ ಯಥಾವತ್ಕಥಯಾಂ ಬಭೂವ।।

ಅನಂತರ ಅವನು ಆ ಕುರುಪುಂಗವರ ಮತ್ತು ಸೂರ್ಯಾಗ್ನಿ ಸಮಪ್ರಭೆಯನ್ನು ಹೊಂದಿದ್ದ ವಿಪ್ರರ್ಷಿಭರ ಮಧ್ಯೆ ಕುಳಿದು ಅವರಿಗೆ ನಡೆದುದೆಲ್ಲವನ್ನೂ ಹೇಳಿದನು.

03161028a ಏವಂ ಮಯಾಸ್ತ್ರಾಣ್ಯುಪಶಿಕ್ಷಿತಾನಿ। ಶಕ್ರಾಚ್ಚ ವಾತಾಚ್ಚ ಶಿವಾಚ್ಚ ಸಾಕ್ಷಾತ್।
03161028c ತಥೈವ ಶೀಲೇನ ಸಮಾಧಿನಾ ಚ। ಪ್ರೀತಾಃ ಸುರಾ ಮೇ ಸಹಿತಾಃ ಸಹೇಂದ್ರಾಃ।।

“ಹೀಗೆ ನಾನು ಶಕ್ರನಿಂದ, ವಾಯುವಿನಿಂದ ಮತ್ತು ಸಾಕ್ಷಾತ್ ಶಿವನಿಂದ ಅಸ್ತ್ರಗಳ ಶಿಕ್ಷಣವನ್ನು ಪಡೆದೆನು. ಇಂದ್ರನೂ ಸೇರಿದ ಆ ದೇವತೆಗಳಾದರೋ ನನ್ನ ಶೀಲ ಮತ್ತು ಸಮಾಧಿಗಳಿಂದ ಪ್ರೀತರಾದರು.”

03161029a ಸಂಕ್ಷೇಪತೋ ವೈ ಸ ವಿಶುದ್ಧಕರ್ಮಾ। ತೇಭ್ಯಃ ಸಮಾಖ್ಯಾಯ ದಿವಿ ಪ್ರವೇಶಂ।
03161029c ಮಾದ್ರೀಸುತಾಭ್ಯಾಂ ಸಹಿತಃ ಕಿರೀಟೀ। ಸುಷ್ವಾಪ ತಾಮಾವಸತಿಂ ಪ್ರತೀತಃ।।

ಆ ವಿಶುದ್ಧಕರ್ಮ ಕಿರೀಟಿಯು ಸಂಕ್ಷೇಪವಾಗಿ ಅವರಿಗೆ ಸ್ವರ್ಗವನ್ನು ಪ್ರವೇಶಿಸುದದರ ಕುರಿತು ಹೇಳಿ ಆ ರಾತ್ರಿ ಪ್ರತೀತನಾಗಿ ಮಾದ್ರೀಸುತರೊಡನೆ ಮಲಗಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನಸಮಾಗಮೇ ಏಕಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನಸಮಾಗಮದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.


  1. ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯವನ್ನು ಯಕ್ಷಯುದ್ಧ ಪರ್ವದ ಕೊನೆಯ ಅಧ್ಯಾಯವನ್ನಾಗಿ ಕೊಟ್ಟಿದ್ದಾರೆ. ↩︎