ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 160
ಸಾರ
ಧೌಮ್ಯನು ಯುಧಿಷ್ಠಿರನಿಗೆ ಮಂದರ, ಮೇರು ಪರ್ವತಗಳನ್ನು ತೋರಿಸಿ ವಿವರಿಸುವುದು (1-37).
03160001 ವೈಶಂಪಾಯನ ಉವಾಚ।
03160001a ತತಃ ಸೂರ್ಯೋದಯೇ ಧೌಮ್ಯಃ ಕೃತ್ವಾಹ್ನಿಕಮರಿಂದಮ।
03160001c ಆರ್ಷ್ಟಿಷೇಣೇನ ಸಹಿತಃ ಪಾಂಡವಾನಭ್ಯವರ್ತತ।।
ವೈಶಂಪಾಯನನು ಹೇಳಿದನು: “ಅರಿಂದಮ! ಅನಂತರ ಸೂರ್ಯೋದಯದಲ್ಲಿ ಆಹ್ನೀಕವನ್ನು ಪೂರೈಸಿ ಧೌಮ್ಯನು ಆರ್ಷ್ಟಿಷೇಣನೊಂದಿಗೆ ಪಾಂಡವರಲ್ಲಿಗೆ ಬಂದನು.
03160002a ತೇಽಭಿವಾದ್ಯಾರ್ಷ್ಟಿಷೇಣಸ್ಯ ಪಾದೌ ಧೌಮ್ಯಸ್ಯ ಚೈವ ಹ।
03160002c ತತಃ ಪ್ರಾಂಜಲಯಃ ಸರ್ವೇ ಬ್ರಾಹ್ಮಣಾಂಸ್ತಾನಪೂಜಯನ್।।
ಅವರು ಆರ್ಷ್ಟಿಷೇಣನ ಮತ್ತು ಧೌಮ್ಯನ ಪಾದಗಳಿಗೆ ವಂದಿಸಿ, ಕೈಜೋಡಿಸಿ ಅಲ್ಲಿದ್ದ ಬ್ರಾಹ್ಮಣರೆಲ್ಲರಿಗೂ ನಮಸ್ಕರಿಸಿದರು.
03160003a ತತೋ ಯುಧಿಷ್ಠಿರಂ ಧೌಮ್ಯೋ ಗೃಹೀತ್ವಾ ದಕ್ಷಿಣೇ ಕರೇ।
03160003c ಪ್ರಾಚೀಂ ದಿಶಮಭಿಪ್ರೇಕ್ಷ್ಯ ಮಹರ್ಷಿರಿದಮಬ್ರವೀತ್।।
ಆಗ ಮಹರ್ಷಿ ಧೌಮ್ಯನು ಯುಧಿಷ್ಠಿರನ ಬಲಗೈಯನ್ನು ಹಿಡಿದು ಪೂರ್ವದಿಕ್ಕನ್ನು ನೋಡುತ್ತಾ ಹೇಳಿದನು:
03160004a ಅಸೌ ಸಾಗರಪರ್ಯಂತಾಂ ಭೂಮಿಮಾವೃತ್ಯ ತಿಷ್ಠತಿ।
03160004c ಶೈಲರಾಜೋ ಮಹಾರಾಜ ಮಂದರೋಽಭಿವಿರಾಜತೇ।।
“ಮಹಾರಾಜ! ಅದು ಸಾಗರಪರ್ಯಂತದ ಭೂಮಿಯನ್ನು ಆವರಿಸಿ ವಿರಾಜಿಸಿ ನಿಂತಿರುವ ಶೈಲರಾಜ ಮಂದರ!
03160005a ಇಂದ್ರವೈಶ್ರವಣಾವೇತಾಂ ದಿಶಂ ಪಾಂಡವ ರಕ್ಷತಃ।
03160005c ಪರ್ವತೈಶ್ಚ ವನಾಂತೈಶ್ಚ ಕಾನನೈಶ್ಚೋಪಶೋಭಿತಾಂ।।
ಪಾಂಡವ! ಇಂದ್ರ ಮತ್ತು ವೈಶ್ರವಣರು ಪರ್ವತ, ವನ ಕಾನನಗಳಿಂದ ಶೋಭಿತ ಈ ದಿಕ್ಕನ್ನು ರಕ್ಷಿಸುತ್ತಾರೆ.
03160006a ಏತದಾಹುರ್ಮಹೇಂದ್ರಸ್ಯ ರಾಜ್ಞೋ ವೈಶ್ರವಣಸ್ಯ ಚ।
03160006c ಋಷಯಃ ಸರ್ವಧರ್ಮಜ್ಞಾಃ ಸದ್ಮ ತಾತ ಮನೀಷಿಣಃ।।
ಮಗೂ! ಇದು ಮಹೇಂದ್ರ ಮತ್ತು ರಾಜ ವೈಶ್ರವಣನ ಪೀಠವೆಂದು ಸರ್ವಧರ್ಮಗಳನ್ನು ತಿಳಿದ ಬುದ್ಧಿವಂತ ಋಷಿಗಳು ಹೇಳಿದ್ದಾರೆ.
03160007a ಅತಶ್ಚೋದ್ಯಂತಮಾದಿತ್ಯಮುಪತಿಷ್ಠಂತಿ ವೈ ಪ್ರಜಾಃ।
03160007c ಋಷಯಶ್ಚಾಪಿ ಧರ್ಮಜ್ಞಾಃ ಸಿದ್ಧಾಃ ಸಾಧ್ಯಾಶ್ಚ ದೇವತಾಃ।।
ಇಲ್ಲಿಂದ ಉದಯಿಸುವ ಆದಿತ್ಯನನ್ನು ಪ್ರಜೆಗಳು, ಋಷಿಗಳು, ಧರ್ಮಜ್ಞರು, ಸಿದ್ಧರು, ಸಾಧ್ಯರು ಮತ್ತು ದೇವತೆಗಳೂ ಕೂಡ ಪೂಜಿಸುತ್ತಾರೆ.
03160008a ಯಮಸ್ತು ರಾಜಾ ಧರ್ಮಾತ್ಮಾ ಸರ್ವಪ್ರಾಣಭೃತಾಂ ಪ್ರಭುಃ।
03160008c ಪ್ರೇತಸತ್ತ್ವಗತೀಮೇತಾಂ ದಕ್ಷಿಣಾಮಾಶ್ರಿತೋ ದಿಶಂ।।
ಎಲ್ಲ ಜೀವಿಗಳ ಪ್ರಭು, ಧರ್ಮಾತ್ಮ ಯಮರಾಜನು ಪ್ರೇತಸತ್ವಗಳ ದಾರಿಯಾದ ಈ ದಕ್ಷಿಣ ದಿಕ್ಕನ್ನು ಪಾಲಿಸುತ್ತಾನೆ.
03160009a ಏತತ್ಸಮ್ಯಮನಂ ಪುಣ್ಯಮತೀವಾದ್ಭುತದರ್ಶನಂ।
03160009c ಪ್ರೇತರಾಜಸ್ಯ ಭವನಮೃದ್ಧ್ಯಾ ಪರಮಯಾ ಯುತಂ।।
ಇದು ಪುಣ್ಯ, ಅತೀವ ಅದ್ಭುತವಾಗಿ ಕಾಣುವ, ಪರಮ ಐಶ್ವರ್ಯದಿಂದ ಕೂಡಿದ ಪ್ರೇತರಾಜನ ಭವನ ಸಂಯಮನ.
03160010a ಯಂ ಪ್ರಾಪ್ಯ ಸವಿತಾ ರಾಜನ್ಸತ್ಯೇನ ಪ್ರತಿತಿಷ್ಠತಿ।
03160010c ಅಸ್ತಂ ಪರ್ವತರಾಜಾನಮೇತಮಾಹುರ್ಮನೀಷಿಣಃ।।
ರಾಜನ್! ಸೂರ್ಯನು ತಲುಪಿ ಸತ್ಯದಲ್ಲಿ ನೆಲೆಗೊಳ್ಳುವ ಇದನ್ನು ಅಸ್ತಪರ್ವತರಾಜನೆಂದು ತಿಳಿದವರು ಹೇಳುತ್ತಾರೆ.
03160011a ಏತಂ ಪರ್ವತರಾಜಾನಂ ಸಮುದ್ರಂ ಚ ಮಹೋದಧಿಂ।
03160011c ಆವಸನ್ವರುಣೋ ರಾಜಾ ಭೂತಾನಿ ಪರಿರಕ್ಷತಿ।।
ಈ ಪರ್ವತರಾಜ ಮತ್ತು ಮಹೋದಧಿ ಸಮುದ್ರದಲ್ಲಿಯೂ ನೆಲೆಗೊಂಡು ರಾಜ ವರುಣನು ಇರುವವನ್ನು ರಕ್ಷಿಸುತ್ತಾನೆ.
03160012a ಉದೀಚೀಂ ದೀಪಯನ್ನೇಷ ದಿಶಂ ತಿಷ್ಠತಿ ಕೀರ್ತಿಮಾನ್।
03160012c ಮಹಾಮೇರುರ್ಮಹಾಭಾಗ ಶಿವೋ ಬ್ರಹ್ಮವಿದಾಂ ಗತಿಃ।।
ಮಹಾಭಾಗ! ಉತ್ತರ ದಿಕ್ಕಿನಲ್ಲಿ ಬ್ರಹ್ಮವಿದರ ದಾರಿಯಾದ ಪ್ರಸಿದ್ಧ ಮಂಗಳಕರ ಮಹಾಮೇರುವು ಬೆಳಗುತ್ತ ನಿಂತಿದೆ.
03160013a ಯಸ್ಮಿನ್ಬ್ರಹ್ಮಸದಶ್ಚೈವ ತಿಷ್ಠತೇ ಚ ಪ್ರಜಾಪತಿಃ।
03160013c ಭೂತಾತ್ಮಾ ವಿಸೃಜನ್ಸರ್ವಂ ಯತ್ಕಿಂ ಚಿಜ್ಜಂಗಮಾಗಮಂ।।
ಅದರ ಮೇಲೆ ಪ್ರಜಾಪತಿ ಬ್ರಹ್ಮನ ಸದನವು ನಿಂತಿದೆ. ಅಲ್ಲಿ ಪ್ರಜಾಪತಿ, ಭೂತಾತ್ಮನು ಚಲಿಸುವ ಮತ್ತು ನಿಂತಿರುವ ಎಲ್ಲವನ್ನೂ ಸೃಷ್ಟಿಸುತ್ತಾ ಇರುವನು.
03160014a ಯಾನಾಹುರ್ಬ್ರಹ್ಮಣಃ ಪುತ್ರಾನ್ಮಾನಸಾನ್ದಕ್ಷಸಪ್ತಮಾನ್।
03160014c ತೇಷಾಮಪಿ ಮಹಾಮೇರುಃ ಸ್ಥಾನಂ ಶಿವಮನಾಮಯಂ।।
ಅಲ್ಲಿಯೇ ಬ್ರಹ್ಮನ ಮಾನಸಪುತ್ರರಲ್ಲಿ ಏಳನೆಯವನಾದ ದಕ್ಷನ ಯಾನ, ಮಂಗಳವೂ ಅನಾಮಯವೂ ಆದ ಮಹಾಮೇರುವಿನ ಸ್ಥಾನವಿದೆ.
03160015a ಅತ್ರೈವ ಪ್ರತಿತಿಷ್ಠಂತಿ ಪುನರತ್ರೋದಯಂತಿ ಚ।
03160015c ಸಪ್ತ ದೇವರ್ಷಯಸ್ತಾತ ವಸಿಷ್ಠಪ್ರಮುಖಾಃ ಸದಾ।।
ಮಗೂ! ಅಲ್ಲಿಯೇ ಅತ್ರಿಯೇ ಮೊದಲಾದ ಸಪ್ತದೇವರ್ಷಿಗಳೂ, ಮಸಿಷ್ಠ ಪ್ರಮುಖರೂ ಸದಾ ಪ್ರತಿಷ್ಠಿತರಾಗಿರುತ್ತಾರೆ.
03160016a ದೇಶಂ ವಿರಜಸಂ ಪಶ್ಯ ಮೇರೋಃ ಶಿಖರಮುತ್ತಮಂ।
03160016c ಯತ್ರಾತ್ಮತೃಪ್ತೈರಧ್ಯಾಸ್ತೇ ದೇವೈಃ ಸಹ ಪಿತಾಮಹಃ।।
ಆತ್ಮತೃಪ್ತರಾದ ದೇವತೆಗಳೊಂದಿಗೆ ಪಿತಾಮಹನಿರುವ, ವಿರಾಜಿಸುತ್ತಿರುವ ಉತ್ತಮ ಮೇರು ಶಿಖರವನ್ನು ನೋಡು.
03160017a ಯಂ ಆಹುಃ ಸರ್ವಭೂತಾನಾಂ ಪ್ರಕೃತೇಃ ಪ್ರಕೃತಿಂ ಧ್ರುವಂ।
03160017c ಅನಾದಿನಿಧನಂ ದೇವಂ ಪ್ರಭುಂ ನಾರಾಯಣಂ ಪರಂ।।
03160018a ಬ್ರಹ್ಮಣಃ ಸದನಾತ್ತಸ್ಯ ಪರಂ ಸ್ಥಾನಂ ಪ್ರಕಾಶತೇ।
03160018c ದೇವಾಶ್ಚ ಯತ್ನಾತ್ಪಶ್ಯಂತಿ ದಿವ್ಯಂ ತೇಜೋಮಯಂ ಶಿವಂ।।
ಬ್ರಹ್ಮನ ಸದನದ ನಂತರ ಪ್ರಕಾಶಿಸುವ ಸ್ಥಾನವು ಪ್ರಕೃತಿಯ ಸರ್ವಭೂತಗಳ ಅಂತಿಮ ಕಾರಣನಾದ ಅನಾದಿನಿಧನ, ದೇವ, ಪ್ರಭೂ ನಾರಾಯಣನ ಪರಮ ಸ್ಥಾನ. ಆ ತೇಜೋಮಯವಾದ ಮಂಗಳಕರ ದಿವ್ಯ ಸ್ಥಾನವನ್ನು ನೋಡಲು ದೇವತೆಗಳೂ ಪ್ರಯತ್ನಪಡಬೇಕಾಗುತ್ತದೆ.
03160019a ಅತ್ಯರ್ಕಾನಲದೀಪ್ತಂ ತತ್ಸ್ಥಾನಂ ವಿಷ್ಣೋರ್ಮಹಾತ್ಮನಃ।
03160019c ಸ್ವಯೈವ ಪ್ರಭಯಾ ರಾಜನ್ದುಷ್ಪ್ರೇಕ್ಷ್ಯಂ ದೇವದಾನವೈಃ।।
ರಾಜನ್! ಸೂರ್ಯ ಮತ್ತು ಅಗ್ನಿಗಳಿಗಿಂತಲೂ ಹೆಚ್ಚಾಗಿ ಬೆಳಗುವ ಆ ಮಹಾತ್ಮ ವಿಷ್ಣುವಿನ ಸ್ಥಾನವನ್ನು ಅದರ ಪ್ರಭೆಯ ಕಾರಣದಿಂದಲೇ ದೇವದಾನವರಿಗೂ ನೋಡಲು ಕಷ್ಟವಾಗುತ್ತದೆ.
03160020a ತದ್ವೈ ಜ್ಯೋತೀಂಷಿ ಸರ್ವಾಣಿ ಪ್ರಾಪ್ಯ ಭಾಸಂತಿ ನೋಽಪಿ ಚ।
03160020c ಸ್ವಯಂ ವಿಭುರದೀನಾತ್ಮಾ ತತ್ರ ಹ್ಯಭಿವಿರಾಜತೇ।।
ಅಲ್ಲಿಗೆ ತಲುಪಿದಾಗ ಪ್ರಭಾಯುಕ್ತ ದೇವತೆಗಳೆಲ್ಲರೂ ಹೊಳೆಯುವುದಿಲ್ಲ. ಏಕೆಂದರೆ ಎಲ್ಲರಿಗಿಂತ ಹೆಚ್ಚಾಗಿ ಅವನೇ ಹೊಳೆದು ವಿರಾಜಿಸುತ್ತಿರುತ್ತಾನೆ.
03160021a ಯತಯಸ್ತತ್ರ ಗಚ್ಚಂತಿ ಭಕ್ತ್ಯಾ ನಾರಾಯಣಂ ಹರಿಂ।
03160021c ಪರೇಣ ತಪಸಾ ಯುಕ್ತಾ ಭಾವಿತಾಃ ಕರ್ಮಭಿಃ ಶುಭೈಃ।।
ಯತಿಗಳು ಪರಮ ತಪಸ್ಸಿನ ಫಲಗಳೊಂದಿಗೆ ಮತ್ತು ಶುಭ ಕರ್ಮಗಳ ಭಾವಗಳೊಂದಿಗೆ ಭಕ್ತಿಯಿಂದ ಹರಿ ನಾರಾಯಣನಲ್ಲಿಗೆ ಹೋಗುತ್ತಾರೆ.
03160022a ಯೋಗಸಿದ್ಧಾ ಮಹಾತ್ಮಾನಸ್ತಮೋಮೋಹವಿವರ್ಜಿತಾಃ।
03160022c ತತ್ರ ಗತ್ವಾ ಪುನರ್ನೇಮಂ ಲೋಕಮಾಯಾಂತಿ ಭಾರತ।।
ಭಾರತ! ಯೋಗಸಿದ್ಧರು ತಮೋಮೋಹವಿವರ್ಜಿತ ಮಹಾತ್ಮರು ಅಲ್ಲಿಗೆ ಹೋಗಿ ಪುನಃ ಈ ಲೋಕಕ್ಕೆ ಹಿಂದಿರುಗುವುದಿಲ್ಲ.
03160023a ಸ್ಥಾನಮೇತನ್ಮಹಾಭಾಗ ಧ್ರುವಮಕ್ಷಯಮವ್ಯಯಂ।
03160023c ಈಶ್ವರಸ್ಯ ಸದಾ ಹ್ಯೇತತ್ಪ್ರಣಮಾತ್ರ ಯುಧಿಷ್ಠಿರ।।
ಮಹಾಭಾಗ ಯುಧಿಷ್ಠಿರ! ಈಶ್ವರನ ಈ ಸ್ಥಳವು ಅಕ್ಷಯವೂ ಅವ್ಯವವೂ ಆದುದು. ಆದುದರಿಂದ ಇದಕ್ಕೆ ಸದಾ ಪ್ರಣಾಮಮಾಡು.
03160024a ಏತಂ ಜ್ಯೋತೀಂಷಿ ಸರ್ವಾಣಿ ಪ್ರಕರ್ಷನ್ಭಗವಾನಪಿ।
03160024c ಕುರುತೇ ವಿತಮಸ್ಕರ್ಮಾ ಆದಿತ್ಯೋಽಭಿಪ್ರದಕ್ಷಿಣಂ।।
ಕತ್ತಲೆಯನ್ನು ದೂರಮಾಡುವ ಭಗವಾನ್ ಆದಿತ್ಯನೂ ಕೂಡ ಎಲ್ಲ ರಾಶಿಗಳೊಡಗೂಡಿ ಇದರ ಪ್ರದಕ್ಷಿಣೆ ಮಾಡುತ್ತಾನೆ.
03160025a ಅಸ್ತಂ ಪ್ರಾಪ್ಯ ತತಃ ಸಂಧ್ಯಾಮತಿಕ್ರಮ್ಯ ದಿವಾಕರಃ।
03160025c ಉದೀಚೀಂ ಭಜತೇ ಕಾಷ್ಠಾಂ ದಿಶಮೇಷ ವಿಭಾವಸುಃ।।
ವಿಭಾವಸು ದಿವಾಕರನು ಅಸ್ತವನ್ನು ತಲುಪಿ ಸಂಧ್ಯೆಯನ್ನು ದಾಟಿ ಉತ್ತರ ದಿಶೆಯಲ್ಲಿ ಪ್ರಯಾಣಿಸುತ್ತಾನೆ.
03160026a ಸ ಮೇರುಮನುವೃತ್ತಃ ಸನ್ಪುನರ್ಗಚ್ಚತಿ ಪಾಂಡವ।
03160026c ಪ್ರಾಙ್ಮುಖಃ ಸವಿತಾ ದೇವಃ ಸರ್ವಭೂತಹಿತೇ ರತಃ।।
ಪಾಂಡವ! ಸರ್ವ ಭೂತಹಿತ ರತನಾದ ಆ ಸವಿತಾ ದೇವನು ಮೇರುವನ್ನು ಸುತ್ತುವರೆದು ಪುನಃ ಪೂರ್ವಮುಖನಾಗುತ್ತಾನೆ.
03160027a ಸ ಮಾಸಂ ವಿಭಜನ್ಕಾಲಂ ಬಹುಧಾ ಪರ್ವಸಂಧಿಷು।
03160027c ತಥೈವ ಭಗವಾನ್ಸೋಮೋ ನಕ್ಷತ್ರೈಃ ಸಹ ಗಚ್ಚತಿ।।
ಇದೇ ರೀತಿ ಭಗವಾನ್ ಸೋಮನೂ ಕೂಡ ನಕ್ಷತ್ರಗಳೊಡನೆ ಕಾಲವನ್ನು ಮಾಸವಾಗಿಯೂ, ಮಾಸವನ್ನು ಪರ್ವಗಳಾಗಿಯೂ ವಿಂಗಡಿಸುತ್ತಾ ಹೋಗುತ್ತಾನೆ.
03160028a ಏವಮೇಷ ಪರಿಕ್ರಮ್ಯ ಮಹಾಮೇರುಮತಂದ್ರಿತಃ।
03160028c ಭಾವಯನ್ಸರ್ವಭೂತಾನಿ ಪುನರ್ಗಚ್ಚತಿ ಮಂದರಂ।।
ಹೀಗೆ ಮಹಾಮೇರುವನ್ನು ಸುತ್ತುವರೆದು ಸೂರ್ಯನು ಸರ್ವಭೂತಗಳಿಗೆ ಒಳಿತನ್ನು ಮಾಡಲು ಮಂದರಕ್ಕೆ ಪುನಃ ಹೋಗುತ್ತಾನೆ.
03160029a ತಥಾ ತಮಿಸ್ರಹಾ ದೇವೋ ಮಯೂಖೈರ್ಭಾವಯಂ ಜಗತ್।
03160029c ಮಾರ್ಗಮೇತದಸಂಬಾಧಮಾದಿತ್ಯಃ ಪರಿವರ್ತತೇ।।
ಹೀಗೆ ತನ್ನ ಕಿರಣಗಳಿಂದ ಜಗತ್ತಿನ ಕತ್ತಲೆಯನ್ನು ಕಳೆದು ಒಳಿತನ್ನು ಮಾಡುವ ದೇವ ಆದಿತ್ಯನು ಬೇರೆ ಯಾರೂ ಪ್ರಯಾಣಿಸದ ಅದೇ ದಾರಿಯಲ್ಲಿ ಸುತ್ತುವರೆಯುತ್ತಾನೆ.
03160030a ಸಿಸೃಕ್ಷುಃ ಶಿಶಿರಾಣ್ಯೇಷ ದಕ್ಷಿಣಾಂ ಭಜತೇ ದಿಶಂ।
03160030c ತತಃ ಸರ್ವಾಣಿ ಭೂತಾನಿ ಕಾಲಃ ಶಿಶಿರಮೃಚ್ಚತಿ।।
ಛಳಿಗಾಲವನ್ನುಂಟುಮಾಡಲು ಅವನು ದಕ್ಷಿಣಪಥವನ್ನು ಹಿಡಿಯುತ್ತಾನೆ. ಆ ಕಾಲವನ್ನು ಎಲ್ಲರೂ ಶಿಶಿರವೆಂದು ಕರೆಯುತ್ತಾರೆ.
03160031a ಸ್ಥಾವರಾಣಾಂ ಚ ಭೂತಾನಾಂ ಜಂಗಮಾನಾಂ ಚ ತೇಜಸಾ।
03160031c ತೇಜಾಂಸಿ ಸಮುಪಾದತ್ತೇ ನಿವೃತ್ತಃ ಸನ್ವಿಭಾವಸುಃ।।
ಹಿಂದುರಿಗಿದಾಗ ಆ ವಿಭಾವಸುವು ತನ್ನ ತೇಜಸ್ಸನ್ನು ಪುನಃ ಪಡೆದುಕೊಂಡು ಎಲ್ಲ ಸ್ಥಾವರ ಜಂಗಮಗಳನ್ನು ಸುಡುತ್ತಾನೆ.
03160032a ತತಃ ಸ್ವೇದಃ ಕ್ಲಮಸ್ತಂದ್ರೀ ಗ್ಲಾನಿಶ್ಚ ಭಜತೇ ನರಾನ್।
03160032c ಪ್ರಾಣಿಭಿಃ ಸತತಂ ಸ್ವಪ್ನೋ ಹ್ಯಭೀಕ್ಷ್ಣಂ ಚ ನಿಷೇವ್ಯತೇ।।
ಆಗ ನರರು ಮತ್ತು ಇತರ ಪ್ರಾಣಿಗಳು ಬೆವರು, ಬಳಲಿಕೆ, ಸೋಮಾರಿತನ ಮತ್ತು ಸುಸ್ತನ್ನು ಅನುಭವಿಸಿ ಸತತವೂ ನಿದ್ದೆಯನ್ನು ಬಯಸುತ್ತಾರೆ.
03160033a ಏವಮೇತದನಿರ್ದೇಶ್ಯಂ ಮಾರ್ಗಮಾವೃತ್ಯ ಭಾನುಮಾನ್।
03160033c ಪುನಃ ಸೃಜತಿ ವರ್ಷಾಣಿ ಭಗವಾನ್ಭಾವಯನ್ಪ್ರಜಾಃ।।
ಹೀಗೆ ಭಗವಾನ್ ಸೂರ್ಯನು ವರ್ಣಿಸಲಸಾಧ್ಯವಾದ ದಾರಿಯನ್ನು ಪ್ರಯಾಣಿಸಿ, ಪುನಃ ಮಳೆಯನ್ನು ಸುರಿಸಿ, ಎಲ್ಲ ಪ್ರಜೆಗಳಿಗೂ ಒಳಿತುಮಾಡುತ್ತಾನೆ.
03160034a ವೃಷ್ಟಿಮಾರುತಸಂತಾಪೈಃ ಸುಖೈಃ ಸ್ಥಾವರಜಂಗಮಾನ್।
03160034c ವರ್ಧಯನ್ಸುಮಹಾತೇಜಾಃ ಪುನಃ ಪ್ರತಿನಿವರ್ತತೇ।।
ಮಳೆ-ಗಾಳಿಗಳನ್ನು ಸುರಿಸಿ ಸ್ಥಾವರ ಜಂಗಮಗಳ ಸುಖವನ್ನು ಹೆಚ್ಚಿಸಿ ಆ ಸುಮಹಾತೇಜಸ್ವಿಯು ಪುನಃ ತಿರುಗುತ್ತಾನೆ.
03160035a ಏವಮೇಷ ಚರನ್ಪಾರ್ಥ ಕಾಲಚಕ್ರಮತಂದ್ರಿತಃ।
03160035c ಪ್ರಕರ್ಷನ್ಸರ್ವಭೂತಾನಿ ಸವಿತಾ ಪರಿವರ್ತತೇ।।
03160036a ಸಂತತಾ ಗತಿರೇತಸ್ಯ ನೈಷ ತಿಷ್ಠತಿ ಪಾಂಡವ।
03160036c ಆದಾಯೈವ ತು ಭೂತಾನಾಂ ತೇಜೋ ವಿಸೃಜತೇ ಪುನಃ।।
ಪಾರ್ಥ! ಪಾಂಡವ! ಹೀಗೆ ಸ್ವಲ್ಪವೂ ಆಯಾಸಗೊಳ್ಳದೇ ಈ ಕಾಲಚಕ್ರದ ದಾರಿಯನ್ನು ಹಿಡಿದು ಸರ್ವಭೂತಗಳನ್ನೂ ತನ್ನೊಂದಿಗೆ ಎಳೆದುಕೊಂಡು ಸೂರ್ಯನು ಸಂಚರಿಸುತ್ತಾನೆ. ಇವನು ಒಮ್ಮೆಯೂ ಸ್ಥಿರವಾಗಿ ನಿಲ್ಲದೇ ಎಲ್ಲರಿಗೂ ತೇಜಸ್ಸನ್ನು ನೀಡುತ್ತಾ ಪುನಃ ಹಿಂದೆ ತೆಗೆದುಕೊಳ್ಳುತ್ತಾ ಸತತವಾಗಿ ಸಂಚರಿಸುತ್ತಿರುತ್ತಾನೆ.
03160037a ವಿಭಜನ್ಸರ್ವಭೂತಾನಾಮಾಯುಃ ಕರ್ಮ ಚ ಭಾರತ।
03160037c ಅಹೋರಾತ್ರಾನ್ಕಲಾಃ ಕಾಷ್ಠಾಃ ಸೃಜತ್ಯೇಷ ಸದಾ ವಿಭುಃ।।
ಭಾರತ! ಸರ್ವಭೂತಗಳ ಆಯಸ್ಸು ಮತ್ತು ಕರ್ಮಗಳನ್ನು ಅಳೆಯುತ್ತಾ ಸೂರ್ಯದೇವನು ಸದಾ ಹಗಲು-ರಾತ್ರಿಗಳನ್ನು ಋತುಗಳನ್ನೂ ಸೃಷ್ಟಿಸುತ್ತಿರುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಮೇರುದರ್ಶನೇ ಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಮೇರುದರ್ಶನದಲ್ಲಿ ನೂರಾಅರವತ್ತನೆಯ ಅಧ್ಯಾಯವು.