ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 158
ಸಾರ
ಭೀಮನನ್ನು ಹುಡುಕಿಕೊಂಡು ಯುಧಿಷ್ಠಿರನು ಗಂಧಮಾದನ ಶಿಖರವನ್ನೇರಿ ಭೀಮನನ್ನೂ ರಾಕ್ಷಸರನ್ನೂ ನೋಡಿದುದು (1-7). ಯುಧಿಷ್ಠಿರನು ಭೀಮನಿಗೆ ಉಪದೇಶಿಸುವುದು (8-13). ರಾಕ್ಷಸರಿಂದ ವಿಷಯವನ್ನು ತಿಳಿದ ಕುಬೇರನು ಸಂಕೃದ್ಧನಾಗಿ ಹೊರಟು ಪಾಂಡವರಿದ್ದಲ್ಲಿಗೆ ಬರುವುದು (14-26). ಪಾಂಡವರಿಗೆ ಕುಬೇರನ ದರ್ಶನ (27-39). ಕುಬೇರ-ಯುಧಿಷ್ಠಿರರ ಸಂವಾದ (40-46). ಕುಬೇರನು ಭೀಮನಿಗೆ ಮಣಿಮತನಿಗಿದ್ದ ಶಾಪದ ಕುರಿತು ಹೇಳುವುದು (47-59).
03158001 ವೈಶಂಪಾಯನ ಉವಾಚ।
03158001a ಶ್ರುತ್ವಾ ಬಹುವಿಧೈಃ ಶಬ್ಧೈರ್ನಾದ್ಯಮಾನಾ ಗಿರೇರ್ಗುಹಾಃ।
03158001c ಅಜಾತಶತ್ರುಃ ಕೌಂತೇಯೋ ಮಾದ್ರೀಪುತ್ರಾವುಭಾವಪಿ।।
03158002a ಧೌಮ್ಯಃ ಕೃಷ್ಣಾ ಚ ವಿಪ್ರಾಶ್ಚ ಸರ್ವೇ ಚ ಸುಹೃದಸ್ತಥಾ।
03158002c ಭೀಮಸೇನಮಪಶ್ಯಂತಃ ಸರ್ವೇ ವಿಮನಸೋಽಭವನ್।।
ವೈಶಂಪಾಯನನು ಹೇಳಿದನು: “ಗಿರಿಗುಹೆಗಳಿಂದ ಬರುತ್ತಿರುವ ಬಹುವಿಧದ ಶಬ್ಧಗಳನ್ನು ಕೇಳಿ ಅಜಾತಶತ್ರು ಕೌಂತೇಯ ಯುಧಿಷ್ಠಿರ, ಮಾದ್ರಿಯ ಮಕ್ಕಳು ನಕುಲ ಸಹದೇವರು, ಧೌಮ್ಯ, ದ್ರೌಪದಿ, ಮತ್ತು ಎಲ್ಲ ವಿಪ್ರರೂ ಸುಹೃದಯರೂ ಭೀಮಸೇನನಿಲ್ಲದಿದ್ದುದನ್ನು ನೋಡಿ ಚಿಂತಾಪರರಾದರು.
03158003a ದ್ರೌಪದೀಮಾರ್ಷ್ಟಿಷೇಣಾಯ ಪ್ರದಾಯ ತು ಮಹಾರಥಾಃ।
03158003c ಸಹಿತಾಃ ಸಾಯುಧಾಃ ಶೂರಾಃ ಶೈಲಮಾರುರುಹುಸ್ತದಾ।।
ಆ ಶೂರ ಮಹಾರಥಿಗಳು ದ್ರೌಪದಿಯನ್ನು ಅರ್ಷ್ಟಿಷೇಣಿಯ ಬಳಿ ಇರಿಸಿ, ಆಯುಧಗಳೊಡನೆ ಒಂದಾಗಿ ಆ ಪರ್ವತವನ್ನೇರಿದರು.
03158004a ತತಃ ಸಂಪ್ರಾಪ್ಯ ಶೈಲಾಗ್ರಂ ವೀಕ್ಷಮಾಣಾ ಮಹಾರಥಾಃ।
03158004c ದದೃಶುಸ್ತೇ ಮಹೇಷ್ವಾಸಾ ಭೀಮಸೇನಮರಿಂದಮಂ।।
03158005a ಸ್ಫುರತಶ್ಚ ಮಹಾಕಾಯಾನ್ಗತಸತ್ತ್ವಾಂಶ್ಚ ರಾಕ್ಷಸಾನ್।
03158005c ಮಹಾಬಲಾನ್ಮಹಾಘೋರಾನ್ಭೀಮಸೇನೇನ ಪಾತಿತಾನ್।।
ಪರ್ವತದ ತುದಿಯನ್ನು ತಲುಪಿದ ಆ ಮಹೇಷ್ವಾಸ ಮಹಾರಥಿಗಳು ಅರಿಂದಮ ಭೀಮಸೇನನನ್ನೂ, ಮತ್ತು ಭೀಮಸೇನನು ಸದೆಬಡಿದು ಬೀಳಿಸಿದ್ದ ಉಚ್ಛೋಶ್ವಾಸಗಳನ್ನು ಬಿಡುತ್ತಾ, ಸತ್ವವನ್ನು ಕಳೆದುಕೊಂಡಿದ್ದ ಮಹಾಕಾಯ, ಮಹಾಬಲಶಾಲಿ, ಮಹಾಘೋರ ರಾಕ್ಷಸರನ್ನು ಕಂಡರು.
03158006a ಶುಶುಭೇ ಸ ಮಹಾಬಾಹುರ್ಗದಾಖಡ್ಗಧನುರ್ಧರಃ।
03158006c ನಿಹತ್ಯ ಸಮರೇ ಸರ್ವಾನ್ದಾನವಾನ್ಮಘವಾನಿವ।।
ಗದೆ, ಖಡ್ಗ ಮತ್ತು ಧನುಸ್ಸನ್ನು ಹಿಡಿದ ಆ ಮಹಾಬಾಹು ಭೀಮಸೇನನು ಯುದ್ಧದಲ್ಲಿ ಎಲ್ಲ ದಾನವರನ್ನೂ ಕೊಂದ ಮಘವನ್ ಇಂದ್ರನಂತೆ ಶೋಭಿಸುತ್ತಿದ್ದನು.
03158007a ತತಸ್ತೇ ಸಮತಿಕ್ರಮ್ಯ ಪರಿಷ್ವಜ್ಯ ವೃಕೋದರಂ।
03158007c ತತ್ರೋಪವಿವಿಶುಃ ಪಾರ್ಥಾಃ ಪ್ರಾಪ್ತಾ ಗತಿಮನುತ್ತಮಾಂ।।
ಆಗ ಉತ್ತಮ ಗತಿಯನ್ನು ಪಡೆದ ಪಾಂಡವರು ಆ ಹೆಣಗಳನ್ನು ದಾಟಿ, ವೃಕೋದರ ಭೀಮಸೇನನನ್ನು ಬಿಗಿದಪ್ಪಿ ಅಲ್ಲಿಯೇ ಕುಳಿತುಕೊಂಡರು.
03158008a ತೈಶ್ಚತುರ್ಭಿರ್ಮಹೇಷ್ವಾಸೈರ್ಗಿರಿಶೃಂಗಮಶೋಭತ।
03158008c ಲೋಕಪಾಲೈರ್ಮಹಾಭಾಗೈರ್ದಿವಂ ದೇವವರೈರಿವ।।
ಆ ನಾಲ್ಕು ಧನುಶ್ರೇಷ್ಠರಿಂದ ಪರ್ವತವು ಸ್ವರ್ಗದಲ್ಲಿ ಮಹಾಭಾಗ ಲೋಕಪಾಲಕರೊಂದಿಗಿರುವ ದೇವೇಂದ್ರನಂತೆ ತೋರಿತು.
03158009a ಕುಬೇರಸದನಂ ದೃಷ್ಟ್ವಾ ರಾಕ್ಷಸಾಂಶ್ಚ ನಿಪಾತಿತಾನ್।
03158009c ಭ್ರಾತಾ ಭ್ರಾತರಮಾಸೀನಮಭ್ಯಭಾಷತ ಪಾಂಡವಂ।।
ಕುಬೇರನ ಅರಮನೆಯನ್ನೂ ಮತ್ತು ಕೆಳಗುರುಳಿ ಬಿದ್ದಿದ್ದ ರಾಕ್ಷಸರನ್ನೂ ನೋಡಿ ಅಣ್ಣ ಪಾಂಡವನು ಕುಳಿತಿದ್ದ ತಮ್ಮನಿಗೆ ಹೇಳಿದನು:
03158010a ಸಾಹಸಾದ್ಯದಿ ವಾ ಮೋಹಾದ್ಭೀಮ ಪಾಪಮಿದಂ ಕೃತಂ।
03158010c ನೈತತ್ತೇ ಸದೃಶಂ ವೀರ ಮುನೇರಿವ ಮೃಷಾವಚಃ।
“ಭೀಮ! ವೀರ! ತಿಳಿಯದೇ ಅಥವಾ ದುಡುಕಿ ನೀನು ಮುನಿಯ ಸುಳ್ಳಿಗೆ ಸಮನಾಗಿರುವ ಈ ಪಾಪಕೃತ್ಯವನ್ನು ಮಾಡಿದ್ದೇವೆ.
03158011a ರಾಜದ್ವಿಷ್ಟಂ ನ ಕರ್ತವ್ಯಮಿತಿ ಧರ್ಮವಿದೋ ವಿದುಃ।
03158011c ತ್ರಿದಶಾನಾಮಿದಂ ದ್ವಿಷ್ಟಂ ಭೀಮಸೇನ ತ್ವಯಾ ಕೃತಂ।।
ರಾಜನ ಇಚ್ಛೆಯ ವಿರುದ್ಧವಾದ ಕೆಲಸವನ್ನು ಮಾಡಬಾರದೆಂದು ಧರ್ಮವನ್ನು ತಿಳಿದವರು ತಿಳಿದಿದ್ದಾರೆ. ಭೀಮಸೇನ! ನೀನು ಮಾಡಿದ ಈ ಕೆಲಸವು ದೇವೇಂದ್ರನಿಗೆ ಇಷ್ಟವಾದುದಲ್ಲ.
03158012a ಅರ್ಥಧರ್ಮಾವನಾದೃತ್ಯ ಯಃ ಪಾಪೇ ಕುರುತೇ ಮನಃ।
03158012c ಕರ್ಮಣಾಂ ಪಾರ್ಥ ಪಾಪಾನಾಂ ಸ ಫಲಂ ವಿಂದತೇ ಧ್ರುವಂ।।
ಪಾರ್ಥ! ಧರ್ಮ ಅರ್ಥಗಳನ್ನು ಅನಾದರಿಸಿ ಪಾಪವನ್ನೆಸಗುವ ಮನವು ಪಾಪಕರ್ಮಗಳ ಫಲವನ್ನು ಪಡೆದೇ ಪಡೆಯುತ್ತದೆ ಎನ್ನುವುದು ನಿಜ. ನನಗೆ ಅಪ್ರಿಯವಾದ ಈ ರೀತಿಯ ಕೆಲಸವನ್ನು ಮತ್ತೆ ಮಾಡಬೇಡ.”
03158012e ಪುನರೇವಂ ನ ಕರ್ತವ್ಯಂ ಮಮ ಚೇದಿಚ್ಚಸಿ ಪ್ರಿಯಂ।।
03158013a ಏವಮುಕ್ತ್ವಾ ಸ ಧರ್ಮಾತ್ಮಾ ಭ್ರಾತಾ ಭ್ರಾತರಮಚ್ಯುತಂ।
03158013c ಅರ್ಥತತ್ತ್ವವಿಭಾಗಜ್ಞಃ ಕುಂತೀಪುತ್ರೋ ಯುಧಿಷ್ಠಿರಃ।।
03158013e ವಿರರಾಮ ಮಹಾತೇಜಾಸ್ತಮೇವಾರ್ಥಂ ವಿಚಿಂತಯನ್।।
ಆ ಧರ್ಮಾತ್ಮ, ಮಹಾತೇಜಸ್ವಿ, ತತ್ವ ಅರ್ಥಗಳನ್ನು ವಿಭಜಿಸಲು ತಿಳಿದಿದ್ದ ಅಣ್ಣ ಕುಂತಿಪುತ್ರ ಯುಧಿಷ್ಠಿರನು ದೋಷವಿಲ್ಲದ ತಮ್ಮನಿಗೆ ಈ ರೀತಿ ಮಾತನಾಡಿ, ಅದರ ಅರ್ಥದ ಕುರಿತು ಯೋಚಿಸುತ್ತಾ ಮಾತನ್ನು ನಿಲ್ಲಿಸಿದನು.
03158014a ತತಸ್ತು ಹತಶಿಷ್ಟಾ ಯೇ ಭೀಮಸೇನೇನ ರಾಕ್ಷಸಾಃ।
03158014c ಸಹಿತಾಃ ಪ್ರತ್ಯಪದ್ಯಂತ ಕುಬೇರಸದನಂ ಪ್ರತಿ।।
ಇದರ ಮಧ್ಯೆ ಭೀಮಸೇನನಿಂದ ಹತರಾಗದೇ ಉಳಿದಿದ್ದ ಎಲ್ಲ ರಾಕ್ಷಸರು ಕುಬೇರನ ಮನೆಯ ಕಡೆ ಹೋದರು.
03158015a ತೇ ಜವೇನ ಮಹಾವೇಗಾಃ ಪ್ರಾಪ್ಯ ವೈಶ್ರವಣಾಲಯಂ।
03158015c ಭೀಮಮಾರ್ತಸ್ವರಂ ಚಕ್ರುರ್ಭೀಮಸೇನಭಯಾರ್ದಿತಾಃ।।
ಭೀಮಸೇನನಿಂದ ಭಯಾರ್ದಿತರಾಗಿ ದುಃಖದಿಂದ ಜೋರಾಗಿ ಕೂಗುತ್ತಾ ಆ ಮಹಾವೇಗಿಗಳು ವೇಗದಿಂದ ವೈಶ್ರವಣ ಕುಬೇರನ ಸಭೆಯನ್ನು ತಲುಪಿದರು.
03158016a ನ್ಯಸ್ತಶಸ್ತ್ರಾಯುಧಾಃ ಶ್ರಾಂತಾಃ ಶೋಣಿತಾಕ್ತಪರಿಚ್ಚದಾಃ।
03158016c ಪ್ರಕೀರ್ಣಮೂರ್ಧಜಾ ರಾಜನ್ಯಕ್ಷಾಧಿಪತಿಮಬ್ರುವನ್।।
ರಾಜನ್! ಶಸ್ತ್ರಾಯುಧಗಳನ್ನು ಕಳೆದುಕೊಂಡು, ದೇಹದಿಂದ ರಕ್ತವು ತೋಯುತ್ತಿರಲು, ಆಯಾಸಗೊಂಡ, ತಲೆಕೂದಲು ಕೆದರಿದ ಅವರು ಯಕ್ಷಾಧಿಪತಿ ಕುಬೇರನಿಗೆ ಹೇಳಿದರು:
03158017a ಗದಾಪರಿಘನಿಸ್ತ್ರಿಂಶತೋಮರಪ್ರಾಸಯೋಧಿನಃ।
03158017c ರಾಕ್ಷಸಾ ನಿಹತಾಃ ಸರ್ವೇ ತವ ದೇವ ಪುರಹ್ಸರಾಃ।।
“ದೇವ! ಗದೆ, ಪರಿಘ, ಖಡ್ಗ, ಶಕ್ತಿ ಮತ್ತು ಪ್ರಾಸಗಳನ್ನು ಹಿಡಿದ ನಿನ್ನ ಎಲ್ಲ ಮುಖ್ಯ ಯೋದ್ಧರು ಸರೋವರದ ಹತ್ತಿರ ಸತ್ತು ಬಿದ್ದಿದ್ದಾರೆ.
03158018a ಪ್ರಮೃದ್ಯ ತರಸಾ ಶೈಲಂ ಮಾನುಷೇಣ ಧನೇಶ್ವರ।
03158018c ಏಕೇನ ಸಹಿತಾಃ ಸಂಖ್ಯೇ ಹತಾಃ ಕ್ರೋಧವಶಾ ಗಣಾಃ।।
ಧನೇಶ್ವರ! ಮನುಷ್ಯನೋರ್ವನು ಈ ಪರ್ವತವನ್ನು ಉಲ್ಲಂಘಿಸಿದ್ದಾನೆ ಮತ್ತು ಅವನು ಒಬ್ಬನೇ ಬಹುಸಂಖ್ಯೆಯಲ್ಲಿದ್ದ ಕ್ರೋಧವಶರ ಗುಂಪನ್ನು ಸಂಹರಿಸಿದ್ದಾನೆ.
03158019a ಪ್ರವರಾ ರಕ್ಷಸೇಂದ್ರಾಣಾಂ ಯಕ್ಷಾಣಾಂ ಚ ಧನಾಧಿಪ।
03158019c ಶೇರತೇ ನಿಹತಾ ದೇವ ಗತಸತ್ತ್ವಾಃ ಪರಾಸವಃ।।
ದೇವ! ಧನಾಧಿಪ! ರಾಕ್ಷಸೇಂದ್ರರ ಮತ್ತು ಯಕ್ಷರ ಪ್ರಮುಖರು ಹೊಡೆತ ತಿಂದು ತಮ್ಮ ಜೀವವನ್ನು ಕಳೆದುಕೊಂಡು ಬಿದ್ದಿದ್ದಾರೆ.
03158020a ಲಬ್ಧಃ ಶೈಲೋ ವಯಂ ಮುಕ್ತಾ ಮಣಿಮಾಂಸ್ತೇ ಸಖಾ ಹತಃ।
03158020c ಮಾನುಷೇಣ ಕೃತಂ ಕರ್ಮ ವಿಧತ್ಸ್ವ ಯದನಂತರಂ।।
ಅವನು ಈ ಪರ್ವತವನ್ನು ವಶಪಡಿಸಿಕೊಂಡಿದ್ದಾನೆ. ನಿನ್ನ ಸಖ ಮಣಿಮತನನ್ನು ಸಂಹರಿಸಿದ್ದಾನೆ. ಇವೆಲ್ಲವನ್ನೂ ಮನುಷ್ಯನೋರ್ವನು ಮಾಡಿದ್ದಾನೆ. ನಂತರದ ವಿಧಿಯನ್ನು ನೀನೇ ಮಾಡಬೇಕು.”
03158021a ಸ ತಚ್ಛೃತ್ವಾ ತು ಸಂಕ್ರುದ್ಧಃ ಸರ್ವಯಕ್ಷಗಣಾಧಿಪಃ।
03158021c ಕೋಪಸಂರಕ್ತನಯನಃ ಕಥಮಿತ್ಯಬ್ರವೀದ್ವಚಃ।।
ಇದನ್ನು ಕೇಳಿದ ಸರ್ವ ಯಕ್ಷರ ರಾಜನು ಸಂಕೃದ್ಧನಾದನು. ಕೋಪದಿಂದ ಕಣ್ಣುಗಳು ಕೆಂಪಾಗಲು, ಇದು ಹೇಗೆ ನಡೆಯಿತು ಎಂದು ಉದ್ಗರಿಸಿದನು.
03158022a ದ್ವಿತೀಯಮಪರಾಧ್ಯಂತಂ ಭೀಮಂ ಶ್ರುತ್ವಾ ಧನೇಶ್ವರಃ।
03158022c ಚುಕ್ರೋಧ ಯಕ್ಷಾಧಿಪತಿರ್ಯುಜ್ಯತಾಮಿತಿ ಚಾಬ್ರವೀತ್।।
ಇದು ಭೀಮಸೇನನ ಎರಡನೆಯ ಅಪರಾಧವೆಂದು ಕೇಳಿದ ಯಕ್ಷಾಧಿಪ ಧನೇಶ್ವರನು ಕ್ರೋಧದಿಂದ ಕುದುರೆಗಳನ್ನು ಕಟ್ಟಿ ಎಂದು ಆಜ್ಞಾಪಿಸಿದನು.
03158023a ಅಥಾಭ್ರಘನಸಂಕಾಶಂ ಗಿರಿಕೂಟಮಿವೋಚ್ಚ್ರಿತಂ।
03158023c ಹಯೈಃ ಸಮ್ಯೋಜಯಾಮಾಸುರ್ಗಾಂಧರ್ವೈರುತ್ತಮಂ ರಥಂ।।
03158024a ತಸ್ಯ ಸರ್ವಗುಣೋಪೇತಾ ವಿಮಲಾಕ್ಷಾ ಹಯೋತ್ತಮಾಃ।
03158024c ತೇಜೋಬಲಜವೋಪೇತಾ ನಾನಾರತ್ನವಿಭೂಷಿತಾಃ।।
03158025a ಶೋಭಮಾನಾ ರಥೇ ಯುಕ್ತಾಸ್ತರಿಷ್ಯಂತ ಇವಾಶುಗಾಃ।
03158025c ಹರ್ಷಯಾಮಾಸುರನ್ಯೋನ್ಯಮಿಂಗಿತೈರ್ವಿಜಯಾವಹೈಃ।।
ಆಗ ಘನಮೋಡದಂತೆ ದೊಡ್ಡದಾಗಿದ್ದ ಪರ್ವತ ಶಿಖರದಂತೆ ಎತ್ತರವಾಗಿದ್ದ ಉತ್ತಮ ರಥಕ್ಕೆ ಗಂಧರ್ವ ಕುದುರೆಗಳನ್ನು ಕಟ್ಟಿದರು. ಅವನ ಉತ್ತಮ ಕುದುರೆಗಳು ಸರ್ವಗುಣಗಳಿಂದೊಳಗೊಂಡಿದ್ದವು. ಕಣ್ಣುಗಳು ವಿಮಲವಾಗಿದ್ದವು. ತೇಜಸ್ವಿ ಮತ್ತು ಬಲಶಾಲಿಗಳಾಗಿದ್ದವು. ನಾನಾರತ್ನಗಳಿಂದ ಅಲಂಕೃತಗೊಂಡು ಶೋಭಾಯಮಾನವಾಗಿದ್ದವು. ರಥಕ್ಕೆ ಕಟ್ಟಿದಾಗಲೇ ಬಾಣಗಳಂತೆ ಹಾರಿಹೋಗಲು ಸಿದ್ಧರಾಗಿ ಮುಂದೆ ಬರಲಿರುವ ವಿಜಯವನ್ನು ತಿಳಿದು ಸಂತೋಷಪಡುವಂತೆ ಉದ್ವೇಗಗೊಂಡು ಕುಣಿದಾಡಿದವು.
03158026a ಸ ತಮಾಸ್ಥಾಯ ಭಗವಾನ್ರಾಜರಾಜೋ ಮಹಾರಥಂ।
03158026c ಪ್ರಯಯೌ ದೇವಗಂಧರ್ವೈಃ ಸ್ತೂಯಮಾನೋ ಮಹಾದ್ಯುತಿಃ।।
ಆ ಮಹಾದ್ಯುತಿ ಭಗವಾನ್ ರಾಜರಾಜನು ಮಹಾರಥವನ್ನೇರಿ ನಿಂತುಕೊಳ್ಳಲು ದೇವಗಂಧರ್ವರು ಅವನನ್ನು ಸ್ತುತಿಸಿದರು.
03158027a ತಂ ಪ್ರಯಾಂತಂ ಮಹಾತ್ಮಾನಂ ಸರ್ವಯಕ್ಷಧನಾಧಿಪಂ।
03158027c ರಕ್ತಾಕ್ಷಾ ಹೇಮಸಂಕಾಶಾ ಮಹಾಕಾಯಾ ಮಹಾಬಲಾಃ।।
03158028a ಸಾಯುಧಾ ಬದ್ಧನಿಸ್ತ್ರಿಂಶಾ ಯಕ್ಷಾ ದಶಶತಾಯುತಾಃ।
03158028c ಜವೇನ ಮಹತಾ ವೀರಾಃ ಪರಿವಾರ್ಯೋಪತಸ್ಥಿರೇ।।
ಹೀಗೆ ಆ ಮಹಾತ್ಮ ಸರ್ವಯಕ್ಷಧನಾಧಿಪನು ಹೋಗುತ್ತಿರಲು ರಕ್ತಾಕ್ಷರಾದ, ಬಂಗಾರದ ಬಣ್ಣದ, ಮಹಾಕಾಯ, ಮಹಾಬಲಶಾಲಿ, ಮಹಾವೀರ ಯಕ್ಷರು ಆವೇಶಗೊಂಡು ಸಾವಿರ ಸಾವಿರ ಸಂಖ್ಯೆಯಲ್ಲಿ ಆಯುಧಗಳನ್ನು ಹಿಡಿದು, ಖಡ್ಗಗಳನ್ನು ಕಟ್ಟಿಕೊಂಡು ಅವನನ್ನು ಸುತ್ತುವರೆದು ನಿಂತರು.
03158029a ತಂ ಮಹಾಂತಮುಪಾಯಾಂತಂ ಧನೇಶ್ವರಮುಪಾಂತಿಕೇ।
03158029c ದದೃಶುರ್ಹೃಷ್ಟರೋಮಾಣಃ ಪಾಂಡವಾಃ ಪ್ರಿಯದರ್ಶನಂ।।
ಆ ಮಹಾಂತ ಸುಂದರ ಧನೇಶ್ವರನು ಹತ್ತಿರ ಬರುತ್ತಿರುವುದನ್ನು ನೋಡಿ ಹರ್ಷದಿಂದ ಪುಳಕಿತರಾದರು.
03158030a ಕುಬೇರಸ್ತು ಮಹಾಸತ್ತ್ವಾನ್ಪಾಂಡೋಃ ಪುತ್ರಾನ್ಮಹಾರಥಾನ್।
03158030c ಆತ್ತಕಾರ್ಮುಕನಿಸ್ತ್ರಿಂಶಾನ್ದೃಷ್ಟ್ವಾ ಪ್ರೀತೋಽಭವತ್ತದಾ।।
ಕುಬೇರನೂ ಕೂಡ, ಕೈಗಳಲ್ಲಿ ಬಿಲ್ಲು ಖಡ್ಗಗಳನ್ನು ಹಿಡಿದಿದ್ದ ಪಾಂಡುವಿನ ಆ ಮಹಾಸಾತ್ವಿಕ ಮಹಾರಥಿ ಮಕ್ಕಳನ್ನು ಕಂಡು ಸಂತೋಷಗೊಂಡನು.
03158031a ತೇ ಪಕ್ಷಿಣ ಇವೋತ್ಪತ್ಯ ಗಿರೇಃ ಶೃಂಗಂ ಮಹಾಜವಾಃ।
03158031c ತಸ್ಥುಸ್ತೇಷಾಂ ಸಮಭ್ಯಾಶೇ ಧನೇಶ್ವರಪುರಃಸರಾಃ।।
ಮಹಾಜವ ಯಕ್ಷರು ಪಕ್ಷಿಗಳಂತೆ ಗಿರಿಶೃಂಗದ ಮೇಲೆ ಹಾರಿ ನಾಯಕ ಧನೇಶ್ವರನನನ್ನು ಸುತ್ತುವರೆದು ನಿಂತುಕೊಂಡರು.
03158032a ತತಸ್ತಂ ಹೃಷ್ಟಮನಸಂ ಪಾಂಡವಾನ್ಪ್ರತಿ ಭಾರತ।
03158032c ಸಮೀಕ್ಷ್ಯ ಯಕ್ಷಗಂಧರ್ವಾ ನಿರ್ವಿಕಾರಾ ವ್ಯವಸ್ಥಿತಾಃ।।
ಭಾರತ! ಅವನು ಪಾಂಡವರಿಗೆ ಒಲವನ್ನು ತೋರಿಸುತ್ತಿರುವುದನ್ನು ನೋಡಿದ ಆ ಯಕ್ಷ-ಗಂಧರ್ವರು ಕೋಪವನ್ನು ತೊರೆದು ನಿರ್ವಿಕಾರರಾಗಿ ನಿಂತಿದ್ದರು.
03158033a ಪಾಂಡವಾಶ್ಚ ಮಹಾತ್ಮಾನಃ ಪ್ರಣಮ್ಯ ಧನದಂ ಪ್ರಭುಂ।
03158033c ನಕುಲಃ ಸಹದೇವಶ್ಚ ಧರ್ಮಪುತ್ರಶ್ಚ ಧರ್ಮವಿತ್।।
ಧರ್ಮವಿದ ಪಾಂಡವರಾದರೋ - ನಕುಲ, ಸಹದೇವ ಮತ್ತು ಯುಧಿಷ್ಠಿರರು -ಆ ಮಹಾತ್ಮ ಧನಾಧಿಪತಿ ಕುಬೇರನಿಗೆ ನಮಸ್ಕರಿಸಿದರು.
03158034a ಅಪರಾದ್ಧಮಿವಾತ್ಮಾನಂ ಮನ್ಯಮಾನಾ ಮಹಾರಥಾಃ।
03158034c ತಸ್ಥುಃ ಪ್ರಾಂಜಲಯಃ ಸರ್ವೇ ಪರಿವಾರ್ಯ ಧನೇಶ್ವರಂ।।
ತಾವೇ ಅಪರಾಧಿಗಳೆಂದು ತಿಳಿದ ಆ ಮಹಾರಥಿಗಳೆಲ್ಲರೂ ಕೈಮುಗಿದು ಧನೇಶ್ವರ ಕುಬೇರನನ್ನು ಸುತ್ತುವರೆದು ನಿಂತುಕೊಂಡರು.
03158035a ಶಯ್ಯಾಸನವರಂ ಶ್ರೀಮತ್ಪುಷ್ಪಕಂ ವಿಶ್ವಕರ್ಮಣಾ।
03158035c ವಿಹಿತಂ ಚಿತ್ರಪರ್ಯಂತಮಾತಿಷ್ಠತ ಧನಾಧಿಪಃ।।
ಧನಾಧಿಪನು ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ಬಣ್ಣದ ಅಂಚುಗಳನ್ನು ಹೊಂದಿದ್ದ ಸುಂದರ ಪುಷ್ಪಕದಲ್ಲಿ ಕುಳಿತುಕೊಂಡಿದ್ದನು.
03158036a ತಮಾಸೀನಂ ಮಹಾಕಾಯಾಃ ಶಂಕುಕರ್ಣಾ ಮಹಾಜವಾಃ।
03158036c ಉಪೋಪವಿವಿಶುರ್ಯಕ್ಷಾ ರಾಕ್ಷಸಾಶ್ಚ ಸಹಸ್ರಶಃ।।
ಅವನ ಕೆಳಗೆ ಸಹಸ್ರಾರು ಚೂಪಾಗಿದ್ದ ಕಿವಿಗಳನ್ನುಳ್ಳ ಮಹಾಕಾಯ ಯಕ್ಷ-ರಾಕ್ಷಸರು ಕುಳಿತುಕೊಂಡಿದ್ದರು.
03158037a ಶತಶಶ್ಚಾಪಿ ಗಂಧರ್ವಾಸ್ತಥೈವಾಪ್ಸರಸಾಂ ಗಣಾಃ।
03158037c ಪರಿವಾರ್ಯೋಪತಿಷ್ಠಂತ ಯಥಾ ದೇವಾಃ ಶತಕ್ರತುಂ।।
ಶತಕ್ರತು ಇಂದ್ರನನ್ನು ದೇವತೆಗಳು ಹೇಗೋ ಹಾಗೆ ನೂರಾರು ಗಂಧರ್ವ ಮತ್ತು ಅಪ್ಸರಗಣಗಳು ಅವನನ್ನು ಸುತ್ತುವರೆದು ನಿಂತಿದ್ದರು.
03158038a ಕಾಂಚನೀಂ ಶಿರಸಾ ಬಿಭ್ರದ್ಭೀಮಸೇನಃ ಸ್ರಜಂ ಶುಭಾಂ।
03158038c ಬಾಣಖಡ್ಗಧನುಷ್ಪಾಣಿರುದೈಕ್ಷತ ಧನಾಧಿಪಂ।।
ಶಿರದಲ್ಲಿ ಶೋಭಿಸುತ್ತಿದ್ದ ಬಂಗಾರದ ಆಭರಣವನ್ನು ಧರಿಸಿದ್ದ ಮತ್ತು ಕೈಗಳಲ್ಲಿ ಬಿಲ್ಲು, ಬಾಣ ಮತ್ತು ಖಡ್ಗವನ್ನು ಹಿಡಿದಿದ್ದ ಬೀಮಸೇನನು ತಲೆಯೆತ್ತಿ ಧನಾಧಿಪ ಕುಬೇರನನ್ನು ನೋಡಿದನು.
03158039a ನ ಭೀರ್ಭೀಮಸ್ಯ ನ ಗ್ಲಾನಿರ್ವಿಕ್ಷತಸ್ಯಾಪಿ ರಾಕ್ಷಸೈಃ।
03158039c ಆಸೀತ್ತಸ್ಯಾಮವಸ್ಥಾಯಾಂ ಕುಬೇರಮಪಿ ಪಶ್ಯತಃ।।
ರಾಕ್ಷಸರಿಂದ ಘಾಯಗೊಂಡಿದ್ದರೂ ಕುಬೇರನನ್ನು ನೋಡುತ್ತಿದ್ದ ಭೀಮನಲ್ಲಿ ಭಯವಾಗಲೀ ಆಯಾಸವಾಗಲೀ ತೋರುತ್ತಿರಲಿಲ್ಲ.
03158040a ಆದದಾನಂ ಶಿತಾನ್ಬಾಣಾನ್ಯೋದ್ಧುಕಾಮಮವಸ್ಥಿತಂ।
03158040c ದೃಷ್ಟ್ವಾ ಭೀಮಂ ಧರ್ಮಸುತಮಬ್ರವೀನ್ನರವಾಹನಃ।।
ಯುದ್ಧದಲ್ಲಿ ಉತ್ಸುಕನಾಗಿ ತೀಕ್ಷ್ಣಬಾಣಗಳನ್ನು ಹಿಡಿದು ನಿಂತಿದ್ದ ಭೀಮನನ್ನು ನೋಡಿ ನರವಾಹನ ಕುಬೇರನು ಧರ್ಮಸುತ ಯುಧಿಷ್ಠಿರನನ್ನುದ್ದೇಶಿಸಿ ಹೇಳಿದನು:
03158041a ವಿದುಸ್ತ್ವಾಂ ಸರ್ವಭೂತಾನಿ ಪಾರ್ಥ ಭೂತಹಿತೇ ರತಂ।
03158041c ನಿರ್ಭಯಶ್ಚಾಪಿ ಶೈಲಾಗ್ರೇ ವಸ ತ್ವಂ ಸಹ ಬಂಧುಭಿಃ।।
“ಪಾರ್ಥ! ಇರುವ ಎಲ್ಲದರ ಹಿತವನ್ನು ನೀನು ಬಯಸುತ್ತೀಯೆ ಎನ್ನುವುದನ್ನು ಎಲ್ಲರೂ ಬಲ್ಲರು. ಆದುದರಿಂದ ನಿನ್ನ ಬಂಧುಗಳೊಂದಿಗೆ ಈ ಪರ್ವತದ ತುದಿಯಲ್ಲಿ ನಿರ್ಭಯನಾಗಿ ವಾಸಿಸು.
03158042a ನ ಚ ಮನ್ಯುಸ್ತ್ವಯಾ ಕಾರ್ಯೋ ಭೀಮಸೇನಸ್ಯ ಪಾಂಡವ।
03158042c ಕಾಲೇನೈತೇ ಹತಾಃ ಪೂರ್ವಂ ನಿಮಿತ್ತಮನುಜಸ್ತವ।।
ಪಾಂಡವ! ಭೀಮಸೇನನೊಂದಿಗೆ ಸಿಟ್ಟಾಗಬೇಡ. ಅವರೆಲ್ಲರೂ ಕಾಲನಿಂದ ಮೊದಲೇ ಹತರಾಗಿದ್ದರು. ನಿನ್ನ ತಮ್ಮನು ಈ ಕಾರ್ಯಕ್ಕೆ ನಿಮಿತ್ತಮಾತ್ರ.
03158043a ವ್ರೀಡಾ ಚಾತ್ರ ನ ಕರ್ತವ್ಯಾ ಸಾಹಸಂ ಯದಿದಂ ಕೃತಂ।
03158043c ದೃಷ್ಟಶ್ಚಾಪಿ ಸುರೈಃ ಪೂರ್ವಂ ವಿನಾಶೋ ಯಕ್ಷರಕ್ಷಸಾಂ।।
03158044a ನ ಭೀಮಸೇನೇ ಕೋಪೋ ಮೇ ಪ್ರೀತೋಽಸ್ಮಿ ಭರತರ್ಷಭ।।
03158044c ಕರ್ಮಣಾನೇನ ಭೀಮಸ್ಯ ಮಮ ತುಷ್ಟಿರಭೂತ್ಪುರಾ।।
ಸಾಹಸ ಕಾರ್ಯವು ನಡೆದುಹೋಯಿತಲ್ಲ ಎಂದು ನೀನು ಮನಸ್ಸು ಸಣ್ಣಮಾಡುವ ಅವಶ್ಯಕತೆಯಿಲ್ಲ. ಈ ಯಕ್ಷ-ರಾಕ್ಷಸರ ವಿನಾಶವನ್ನು ಸುರರು ಹಿಂದೆಯೇ ಕಂಡಿದ್ದರು. ನನಗೆ ಭೀಮಸೇನನ ಮೇಲೆ ಸ್ವಲ್ಪವೂ ಕೋಪವಿಲ್ಲ. ಭರತರ್ಷಭ! ನಾನು ಸಂತೋಷಗೊಂಡಿದ್ದೇನೆ. ಈ ಹಿಂದೆಯೇ ನಾನು ಭೀಮನ ಈ ಕೃತ್ಯದಿಂದ ಸಂತೃಪ್ತನಾಗಿದ್ದೇನೆ.”
03158045a ಏವಮುಕ್ತ್ವಾ ತು ರಾಜಾನಂ ಭೀಮಸೇನಮಭಾಷತ।
03158045c ನೈತನ್ಮನಸಿ ಮೇ ತಾತ ವರ್ತತೇ ಕುರುಸತ್ತಮ।।
03158045e ಯದಿದಂ ಸಾಹಸಂ ಭೀಮ ಕೃಷ್ಣಾರ್ಥೇ ಕೃತವಾನಸಿ।।
03158046a ಮಾಮನಾದೃತ್ಯ ದೇವಾಂಶ್ಚ ವಿನಾಶಂ ಯಕ್ಷರಕ್ಷಸಾಂ।
03158046c ಸ್ವಬಾಹುಬಲಮಾಶ್ರಿತ್ಯ ತೇನಾಹಂ ಪ್ರೀತಿಮಾಂಸ್ತ್ವಯಿ।।
03158046e ಶಾಪಾದಸ್ಮಿ ವಿನಿರ್ಮುಕ್ತೋ ಘೋರಾದದ್ಯ ವೃಕೋದರ।।
ರಾಜನಿಗೆ ಈ ರೀತಿ ಹೇಳಿ, ಭೀಮಸೇನನನ್ನು ಉದ್ದೇಶಿಸಿ ಹೇಳಿದನು: “ಮಗೂ! ಕುರುಸತ್ತಮ! ನಾನು ನಿನ್ನ ಮನಸ್ಸಿನ ಮೇಲೆ ಭಾರವನ್ನು ಹೊರಿಸುವುದಿಲ್ಲ. ಭೀಮ! ಕೃಷ್ಣೆಗಾಗಿ ನೀನು ನನ್ನನ್ನೂ ಮತ್ತು ದೇವತೆಗಳನ್ನೂ ಕಡೆಗೆಣಿಸಿ ನಿನ್ನದೇ ಬಾಹುಬಲವನ್ನು ಆಶ್ರಯಿಸಿ ಈ ಸಾಹಸವನ್ನು ಕೈಗೊಂಡ ನಿನ್ನ ಮೇಲೆ ನನಗೆ ಪ್ರೀತಿಯಿದೆ. ವೃಕೋದರ! ಇಂದು ನಾನು ಒಂದು ಘೋರ ಶಾಪದಿಂದ ಬಿಡುಗಡೆ ಹೊಂದಿದ್ದೇನೆ.
03158047a ಅಹಂ ಪೂರ್ವಮಗಸ್ತ್ಯೇನ ಕ್ರುದ್ಧೇನ ಪರಮರ್ಷಿಣಾ।
03158047c ಶಪ್ತೋಽಪರಾಧೇ ಕಸ್ಮಿಂಶ್ಚಿತ್ತಸ್ಯೈಷಾ ನಿಷ್ಕೃತಿಃ ಕೃತಾ।।
ಹಿಂದೆ ನನ್ನ ಯಾವುದೋ ಒಂದು ಅಪರಾಧಕ್ಕಾಗಿ ಕೃದ್ಧನಾದ ಪರಮ ಋಷಿ ಅಗಸ್ತ್ಯನಿಂದ ಶಪಿಸಲ್ಪಟ್ಟಿದ್ದೆ. ಅದು ಇಂದು ಇಲ್ಲದಂತಾಯಿತು.
03158048a ದೃಷ್ಟೋ ಹಿ ಮಮ ಸಂಕ್ಲೇಶಃ ಪುರಾ ಪಾಂಡವನಂದನ।
03158048c ನ ತವಾತ್ರಾಪರಾಧೋಽಸ್ತಿ ಕಥಂ ಚಿದಪಿ ಶತ್ರುಹನ್।।
ಪಾಂಡವನಂದನ! ಶತ್ರುಧ್ವಂಸಿ! ಈ ಶೋಕವನ್ನು ಅನುಭವಿಸುತ್ತೇನೆಂದು ನನಗೆ ಮೊದಲೇ ತಿಳಿದಿದ್ದುದರಿಂದ ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ.”
03158049 ಯುಧಿಷ್ಠಿರ ಉವಾಚ।
03158049a ಕಥಂ ಶಪ್ತೋಽಸಿ ಭಗವನ್ನಗಸ್ತ್ಯೇನ ಮಹಾತ್ಮನಾ।
03158049c ಶ್ರೋತುಮಿಚ್ಚಾಮ್ಯಹಂ ದೇವ ತವೈತಚ್ಶಾಪಕಾರಣಂ।।
ಯುಧಿಷ್ಠಿರನು ಹೇಳಿದನು: “ಭಗವನ್! ಮಹಾತ್ಮ ಅಗಸ್ತ್ಯನಿಂದ ನೀನು ಹೇಗೆ ಶಪಿಸಲ್ಪಟ್ಟೆ? ದೇವ! ನಿನ್ನ ಶಾಪದ ಕಾರಣವನ್ನು ಕೇಳಲು ಬಯಸುತ್ತೇನೆ.
03158050a ಇದಂ ಚಾಶ್ಚರ್ಯಭೂತಂ ಮೇ ಯತ್ಕ್ರೋಧಾತ್ತಸ್ಯ ಧೀಮತಃ।
03158050c ತದೈವ ತ್ವಂ ನ ನಿರ್ದಗ್ಧಃ ಸಬಲಃ ಸಪದಾನುಗಃ।।
ಆ ಧೀಮಂತನ ಕ್ರೋಧದಿಂದ ನಿನ್ನನ್ನು ನಿನ್ನ ಸೇನೆ ಮತ್ತು ಅನುಯಾಯಿಗಳಿಂದಿಗೆ ಭಸ್ಮಮಾಡದೇ ಇದ್ದುದೇ ಒಂದು ಆಶ್ಚರ್ಯ!”
03158051 ವೈಶ್ರವಣ ಉವಾಚ।
03158051a ದೇವತಾನಾಮಭೂನ್ಮಂತ್ರಃ ಕುಶವತ್ಯಾಂ ನರೇಶ್ವರ।
03158051c ವೃತಸ್ತತ್ರಾಹಮಗಮಂ ಮಹಾಪದ್ಮಶತೈಸ್ತ್ರಿಭಿಃ।।
ವೈಶ್ರವಣನು ಹೇಳಿದನು: “ನರೇಶ್ವರ! ಕುಶವತಿಯಲ್ಲಿ ದೇವತೆಗಳ ಮಂತ್ರಾಲೋಚನೆ ನಡೆಯುತ್ತಿತ್ತು. ಅಲ್ಲಿಗೆ ನಾನು ವಿವಿಧ ಆಯುಧಗಳನ್ನು ಧರಿಸಿದ್ದ ಮೂರುನೂರು ಪದ್ಮ ಸಂಖ್ಯೆಗಳಷ್ಟು ಘೋರರೂಪಿ ಯಕ್ಷರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆ.
03158051e ಯಕ್ಷಾಣಾಂ ಘೋರರೂಪಾಣಾಂ ವಿವಿಧಾಯುಧಧಾರಿಣಾಂ।।
03158052a ಅಧ್ವನ್ಯಹಮಥಾಪಶ್ಯಮಗಸ್ತ್ಯಮೃಷಿಸತ್ತಮಂ।
03158052c ಉಗ್ರಂ ತಪಸ್ತಪಸ್ಯಂತಂ ಯಮುನಾತೀರಮಾಶ್ರಿತಂ।।
ಮಾರ್ಗದಲ್ಲಿ ನಾನಾಪಕ್ಷಿಗಣಗಳಿಂದ ಕೂಡಿದ್ದ ಹೂಬಿಟ್ಟ ಮರಗಳಿಂದ ಶೋಭಾಯಮಾನವಾಗಿದ್ದ ಯಮುನಾ ತೀರದಲ್ಲಿ ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದ ಋಷಿಸತ್ತಮ ಅಗಸ್ತ್ಯನನ್ನು ಕಂಡೆ.
03158052e ನಾನಾಪಕ್ಷಿಗಣಾಕೀರ್ಣಂ ಪುಷ್ಪಿತದ್ರುಮಶೋಭಿತಂ।।
03158053a ತಮೂರ್ಧ್ವಬಾಹುಂ ದೃಷ್ಟ್ವಾ ತು ಸೂರ್ಯಸ್ಯಾಭಿಮುಖಂ ಸ್ಥಿತಂ।
03158053c ತೇಜೋರಾಶಿಂ ದೀಪ್ಯಮಾನಂ ಹುತಾಶನಮಿವೈಧಿತಂ।।
03158054a ರಾಕ್ಷಸಾಧಿಪತಿಃ ಶ್ರೀಮಾನ್ಮಣಿಮಾನ್ನಾಮ ಮೇ ಸಖಾ।
03158054c ಮೌರ್ಖ್ಯಾದಜ್ಞಾನಭಾವಾಚ್ಚ ದರ್ಪಾನ್ಮೋಹಾಚ್ಚ ಭಾರತ।।
03158054e ನ್ಯಷ್ಠೀವದಾಕಾಶಗತೋ ಮಹರ್ಷೇಸ್ತಸ್ಯ ಮೂರ್ಧನಿ।।
ತೋಳುಗಳನ್ನು ಮೇಲಕ್ಕೆತ್ತಿ ಸೂರ್ಯನಿಗೆ ಅಭಿಮುಖನಾಗಿ ನಿಂತಿದ್ದ, ವಿಧಿವತ್ತಾಗಿ ಉರಿಸಿದ ಅಗ್ನಿಯಂತೆ ಉರಿಯುತ್ತಿರುವ ಆ ತೇಜೋರಾಶಿಯನ್ನು ಆಕಾಶದಲ್ಲಿ ಹೋಗುತ್ತಿರುವ ರಾಕ್ಷಸರ ಅಧಿಪತಿ ಶ್ರೀಮಾನ್ ಮಣಿಮತ್ ಎಂಬ ಹೆಸರಿನ ನನ್ನ ಸಖನು ನೋಡಿ ಮೂರ್ಖತನದಲ್ಲಿ, ಏನೂ ತಿಳಿಯದವನಂತೆ ವರ್ತಿಸುತ್ತಾ ದರ್ಪ ಮತ್ತು ಮೋಹದಿಂದ ಆ ಮಹರ್ಷಿಯ ನೆತ್ತಿಯಮೇಲೆ ಉಗುಳಿದನು.
03158055a ಸ ಕೋಪಾನ್ಮಾಮುವಾಚೇದಂ ದಿಶಃ ಸರ್ವಾ ದಹನ್ನಿವ।
03158055c ಮಾಮವಜ್ಞಾಯ ದುಷ್ಟಾತ್ಮಾ ಯಸ್ಮಾದೇಷ ಸಖಾ ತವ।।
03158056a ಧರ್ಷಣಾಂ ಕೃತವಾನೇತಾಂ ಪಶ್ಯತಸ್ತೇ ಧನೇಶ್ವರ।
03158056c ತಸ್ಮಾತ್ಸಹೈಭಿಃ ಸೈನ್ಯೈಸ್ತೇ ವಧಂ ಪ್ರಾಪ್ಸ್ಯತಿ ಮಾನುಷಾತ್।।
ಸರ್ವದಿಕ್ಕುಗಳನ್ನು ಸುಟ್ಟುಬಿಡುವನೋ ಎನ್ನುವಷ್ಟು ಕೋಪದಿಂದ ಅವನು ನನಗೆ ಹೇಳಿದನು: “ಧನೇಶ್ವರ! ನಿನ್ನ ಈ ಸಖನು ನನ್ನನ್ನು ಕಡೆಗೆಣಿಸಿ ನೀನು ನೋಡುತ್ತಿರುವಾಗಲೇ ಈ ಅಪರಾಧವನ್ನು ಎಸಗಿದುದಕ್ಕಾಗಿ ಅವನು ತನ್ನ ಸೈನ್ಯದೊಂದಿಗೆ ಮನುಷ್ಯನಿಂದ ಸಾವನ್ನು ಹೊಂದುತ್ತಾನೆ.
03158057a ತ್ವಂ ಚಾಪ್ಯೇಭಿರ್ಹತೈಃ ಸೈನ್ಯೈಃ ಕ್ಲೇಶಂ ಪ್ರಾಪ್ಸ್ಯಸಿ ದುರ್ಮತೇ।
03158057c ತಮೇವ ಮಾನುಷಂ ದೃಷ್ಟ್ವಾ ಕಿಲ್ಬಿಷಾದ್ವಿಪ್ರಮೋಕ್ಷ್ಯಸೇ।।
ದುರ್ಮತಿಯಾದ ನೀನು ಕೂಡ ಈ ಸೇನೆಯ ನಾಶದಿಂದ ದುಃಖವನ್ನು ಪಡೆಯುತ್ತೀಯೆ. ಆದರೆ ಆ ಮನುಷ್ಯನನ್ನು ನೋಡಿದಾಕ್ಷಣ ಈ ದೋಷದಿಂದ ಮುಕ್ತಿಯನ್ನು ಹೊಂದುತ್ತೀಯೆ.
03158058a ಸೈನ್ಯಾನಾಂ ತು ತವೈತೇಷಾಂ ಪುತ್ರಪೌತ್ರಬಲಾನ್ವಿತಂ।
03158058c ನ ಶಾಪಂ ಪ್ರಾಪ್ಸ್ಯತೇ ಘೋರಂ ಗಚ್ಚ ತೇಽಜ್ಞಾಂ ಕರಿಷ್ಯತಿ।।
ಆದರೆ ಈ ಸೇನೆಯ ಮಕ್ಕಳು ಮತ್ತು ಮೊಮ್ಮಕ್ಕಳು ಈ ಶಾಪಕ್ಕೆ ಗುರಿಯಾಗುವುದಿಲ್ಲ. ಅದು ನಿನ್ನ ಆಜ್ಞೆಯಂತೆ ನಡೆದುಕೊಳ್ಳುತ್ತದೆ. ಹೋಗು!”
03158059a ಏಷ ಶಾಪೋ ಮಯಾ ಪ್ರಾಪ್ತಃ ಪ್ರಾಕ್ತಸ್ಮಾದೃಷಿಸತ್ತಮಾತ್।
03158059c ಸ ಭೀಮೇನ ಮಹಾರಾಜ ಭ್ರಾತ್ರಾ ತವ ವಿಮೋಕ್ಷಿತಃ।।
ಮಹಾರಾಜ! ಹಿಂದೆ ಆ ಋಷಿಸತ್ತಮನಿಂದ ನನಗೆ ಇದೇ ಶಾಪವು ದೊರೆತಿತ್ತು. ನಿನ್ನ ತಮ್ಮ ಭೀಮನು ಅದರಿಂದ ಬಿಡುಗಡೆ ದೊರಕಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಕುಬೇರದರ್ಶನೇ ಅಷ್ಟಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಕುಬೇರದರ್ಶನದಲ್ಲಿ ನೂರಾಐವತ್ತೆಂಟನೆಯ ಅಧ್ಯಾಯವು.