157 ಮಣಿಮದ್ವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 157

ಸಾರ

ಗಂಧಮಾದನದಲ್ಲಿ ಪಾಂಡವರ ವಾಸ (1-13). ಪಕ್ಷಿಯು ಮೇಲೆಬ್ಬಿಸಿದ ಭಿರುಗಾಳಿಯು ಬೀಸಿ ತಂದ ಐದುಬಣ್ಣದ ಹೂಗಳನ್ನು ನೋಡಿ ದ್ರೌಪದಿಯು ಭೀಮನನ್ನು ಪ್ರಚೋದಿಸುವುದು (14-24). ಭೀಮನು ಹೂಗಳಿಗೋಸ್ಕರ ಗಂಧಮಾದನ ಪರ್ವತ ಶಿಖರವನ್ನು ಏರುವುದು (25-34). ಭೀಮ-ಮಣಿಮತರ ಯುದ್ಧ; ಮಣಿಮತನ ವಧೆ (35-70).

03157001 ಜನಮೇಜಯ ಉವಾಚ।
03157001a ಪಾಂಡೋಃ ಪುತ್ರಾ ಮಹಾತ್ಮಾನಃ ಸರ್ವೇ ದಿವ್ಯಪರಾಕ್ರಮಾಃ।
03157001c ಕಿಯಂತಂ ಕಾಲಮವಸನ್ಪರ್ವತೇ ಗಂಧಮಾದನೇ।।

ಜನಮೇಜಯನು ಹೇಳಿದನು: “ದಿವ್ಯಪರಾಕ್ರಮಿಗಳಾದ ಪಾಂಡುವಿನ ಮಕ್ಕಳು ಮಹಾತ್ಮರೆಲ್ಲರೂ ಗಂಧಮಾದನ ಪರ್ವತದಲ್ಲಿ ಎಷ್ಟು ಸಮಯ ತಂಗಿದರು?

03157002a ಕಾನಿ ಚಾಭ್ಯವಹಾರ್ಯಾಣಿ ತತ್ರ ತೇಷಾಂ ಮಹಾತ್ಮನಾಂ।
03157002c ವಸತಾಂ ಲೋಕವೀರಾಣಾಮಾಸಂಸ್ತದ್ಬ್ರೂಹಿ ಸತ್ತಮ।।

ಸತ್ತಮ! ಅಲ್ಲಿ ವಾಸಿಸುತ್ತಿದ್ದಾಗ ಆ ಲೋಕವೀರ ಮಹಾತ್ಮರು ಏನು ವ್ಯವಹಾರಗಳನ್ನು ಕಂಡರು ಎನ್ನುವುದನ್ನು ಹೇಳು!

03157003a ವಿಸ್ತರೇಣ ಚ ಮೇ ಶಂಸ ಭೀಮಸೇನಪರಾಕ್ರಮಂ।
03157003c ಯದ್ಯಚ್ಚಕ್ರೇ ಮಹಾಬಾಹುಸ್ತಸ್ಮಿನ್ ಹೈಮವತೇ ಗಿರೌ।।
03157003e ನ ಖಲ್ವಾಸೀತ್ಪುನರ್ಯುದ್ಧಂ ತಸ್ಯ ಯಕ್ಷೈರ್ದ್ವಿಜೋತ್ತಮ।।

ಅದರಲ್ಲೂ ಮಹಾಬಾಹು ಭೀಮನು ಆ ಹಿಮವತ್ ಗಿರಿಯಲ್ಲಿ ವಾಸಿಸುತ್ತಿರುವಾಗ ಏನು ಪರಾಕ್ರಮಗಳನ್ನು ಮಾಡಿದನು ಎನ್ನುವುದನ್ನು ವಿಸ್ತಾರವಾಗಿ ಹೇಳು. ದ್ವಿಜೋತ್ತಮ! ಅವನು ಯಕ್ಷರೊಂದಿಗೆ ಪುನಃ ಯುದ್ಧವನ್ನು ಮಾಡಲಿಲ್ಲ ತಾನೇ?

03157004a ಕಚ್ಚಿತ್ಸಮಾಗಮಸ್ತೇಷಾಮಾಸೀದ್ವೈಶ್ರವಣೇನ ಚ।
03157004c ತತ್ರ ಹ್ಯಾಯಾತಿ ಧನದ ಆರ್ಷ್ಟಿಷೇಣೋ ಯಥಾಬ್ರವೀತ್।।

ಆರ್ಷ್ಟಿಷೇಣನು ಹೇಳಿದಂತೆ ಅಲ್ಲಿಗೆ ಧನದ ಕುಬೇರನು ಬರುತ್ತಾನಾದರೆ, ಅವರು ಆ ವೈಶ್ರವಣನನ್ನು ಭೇಟಿಮಾಡಿದರೇ ಹೇಗೆ?

03157005a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ।
03157005c ನ ಹಿ ಮೇ ಶೃಣ್ವತಸ್ತೃಪ್ತಿರಸ್ತಿ ತೇಷಾಂ ವಿಚೇಷ್ಟಿತಂ।।

ತಪೋಧನ! ಇವೆಲ್ಲವನ್ನೂ ವಿಸ್ತಾರವಾಗಿ ಕೇಳಬಯಸುತ್ತೇನೆ. ಅವರ ವಿಚೇಷ್ಟೆಗಳನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ.”

03157006 ವೈಶಂಪಾಯನ ಉವಾಚ।
03157006a ಏತದಾತ್ಮಹಿತಂ ಶ್ರುತ್ವಾ ತಸ್ಯಾಪ್ರತಿಮತೇಜಸಃ।
03157006c ಶಾಸನಂ ಸತತಂ ಚಕ್ರುಸ್ತಥೈವ ಭರತರ್ಷಭಾಃ।।

ªÉʱÀವೈಶಂಪಾಯನನು ಹೇಳಿದನು: “ಆ ಅಪ್ರತಿಮ ತೇಜಸ್ವಿಯ ಆತ್ಮಹಿತ ಮಾತುಗಳನ್ನು ಕೇಳಿ ಭರತರ್ಷಭರು ಅವನ ಶಾಸನದಂತೆ ಸತತವಾಗಿ ನಡೆದುಕೊಂಡರು.

03157007a ಭುಂಜಾನಾ ಮುನಿಭೋಜ್ಯಾನಿ ರಸವಂತಿ ಫಲಾನಿ ಚ।
03157007c ಶುದ್ಧಬಾಣಹತಾನಾಂ ಚ ಮೃಗಾಣಾಂ ಪಿಶಿತಾನ್ಯಪಿ।।
03157008a ಮೇಧ್ಯಾನಿ ಹಿಮವತ್ಪೃಷ್ಠೇ ಮಧೂನಿ ವಿವಿಧಾನಿ ಚ।
03157008c ಏವಂ ತೇ ನ್ಯವಸಂಸ್ತತ್ರ ಪಾಂಡವಾ ಭರತರ್ಷಭಾಃ।।

ಮುನಿಗಳ ಭೋಜನ, ರಸವತ್ತಾದ ಹಣ್ಣುಗಳು, ವಿಷವನ್ನು ಹಚ್ಚಿರದ ಶುದ್ಧ ಬಾಣಗಳಿಂದ ಹೊಡೆದ ಜಿಂಕೆಯ ಮಾಂಸ, ಬಹು ವಿಧದ ಸಿಹಿ ಊಟಗಳನ್ನು ಉಣ್ಣುತ್ತಾ ಭರತರ್ಷಭ ಪಾಂಡವರು ಹಿಮಾಲಯದ ಆ ತಪ್ಪಲಿನಲ್ಲಿ ವಾಸಿಸಿದರು.

03157009a ತಥಾ ನಿವಸತಾಂ ತೇಷಾಂ ಪಂಚಮಂ ವರ್ಷಮಭ್ಯಗಾತ್।
03157009c ಶೃಣ್ವತಾಂ ಲೋಮಶೋಕ್ತಾನಿ ವಾಕ್ಯಾನಿ ವಿವಿಧಾನಿ ಚ।।

ಹೀಗೆ ಅವರು ಲೋಮಶನು ಹೇಳಿದ ವಿವಿಧ ಮಾತುಗಳನ್ನು ಕೇಳುತ್ತಾ ವಾಸಿಸಿ ಅವರ ಐದನೆಯ ವರ್ಷವೂ ಕಳೆಯಿತು.

03157010a ಕೃತ್ಯಕಾಲ ಉಪಸ್ಥಾಸ್ಯ ಇತಿ ಚೋಕ್ತ್ವಾ ಘಟೋತ್ಕಚಃ।
03157010c ರಾಕ್ಷಸೈಃ ಸಹಿತಃ ಸರ್ವೈಃ ಪೂರ್ವಮೇವ ಗತಃ ಪ್ರಭೋ।।

ಇದರ ಮೊದಲೇ ಘಟೋತ್ಕಚನು ಬೇಕಾದಾಗ ಬರುತ್ತೇನೆ ಎಂದು ಹೇಳಿ ತನ್ನ ಸರ್ವ ರಾಕ್ಷಸರೊಂದಿಗೆ ಹೊರಟುಹೋಗಿದ್ದ.

03157011a ಆರ್ಷ್ಟಿಷೇಣಾಶ್ರಮೇ ತೇಷಾಂ ವಸತಾಂ ವೈ ಮಹಾತ್ಮನಾಂ।
03157011c ಅಗಚ್ಚನ್ಬಹವೋ ಮಾಸಾಃ ಪಶ್ಯತಾಂ ಮಹದದ್ಭುತಂ।।

ಆ ಮಹಾತ್ಮರು ಆರ್ಷ್ಟಿಶೇಣನ ಆಶ್ರಮದಲ್ಲಿ ವಾಸಿಸುತ್ತಾ ಮಹಾ ಅದ್ಭುತಗಳನ್ನು ನೋಡುತ್ತಲೇ ಹಲವು ತಿಂಗಳುಗಳು ಕಳೆದವು.

03157012a ತೈಸ್ತತ್ರ ರಮಮಾಣೈಶ್ಚ ವಿಹರದ್ಭಿಶ್ಚ ಪಾಂಡವೈಃ।
03157012c ಪ್ರೀತಿಮಂತೋ ಮಹಾಭಾಗಾ ಮುನಯಶ್ಚಾರಣಾಸ್ತಥಾ।।
03157013a ಆಜಗ್ಮುಃ ಪಾಂಡವಾನ್ದ್ರಷ್ಟುಂ ಸಿದ್ಧಾತ್ಮಾನೋ ಯತವ್ರತಾಃ।
03157013c ತೈಸ್ತೈಃ ಸಹ ಕಥಾಶ್ಚಕ್ರುರ್ದಿವ್ಯಾ ಭರತಸತ್ತಮಾಃ।।

ಪಾಂಡವರು ಅಲ್ಲಿ ವಿಹರಿಸುತ್ತಾ ಸಂತೋಷದಿಂದಿರಲು ಮಹಾಭಾಗ ಮುನಿಗಳು ಮತ್ತು ಚಾರಣರು ಪ್ರೀತಿಯಿಂದ ಪಾಂಡವರನ್ನು ನೋಡಲು ಅಲ್ಲಿಗೆ ಬರುತ್ತಿದ್ದರು. ಆಗ ಆ ಸಿದ್ಧಾತ್ಮ ಯತವ್ರತರೊಂದಿಗೆ ಭರತಸತ್ತಮರು ದಿವ್ಯ ಕಥನಗಳನ್ನು ಚರ್ಚಿಸುತ್ತಿದ್ದರು.

03157014a ತತಃ ಕತಿಪಯಾಹಸ್ಯ ಮಹಾಹ್ರದನಿವಾಸಿನಂ।
03157014c ಋದ್ಧಿಮಂತಂ ಮಹಾನಾಗಂ ಸುಪರ್ಣಃ ಸಹಸಾಹರತ್।।

ಕೆಲವು ದಿನಗಳ ನಂತರ ಆ ಮಹಾಸರೋವರದ ಹತ್ತಿರ ವಾಸಿಸಿ ಬೆಳೆಯುತ್ತಿದ್ದ ಮಹಾನಾಗವೊಂದನ್ನು ಪಕ್ಷಿಯೊಂದು ಕ್ಷಣಮಾತ್ರದಲ್ಲಿ ಎತ್ತಿಕೊಂಡು ಹೋಯಿತು.

03157015a ಪ್ರಾಕಂಪತ ಮಹಾಶೈಲಃ ಪ್ರಾಮೃದ್ಯಂತ ಮಹಾದ್ರುಮಾಃ।
03157015c ದದೃಶುಃ ಸರ್ವಭೂತಾನಿ ಪಾಂಡವಾಶ್ಚ ತದದ್ಭುತಂ।।

ಆಗ ಆ ಮಹಾಪರ್ವತವು ನಡುಗಿತು. ದೊಡ್ಡ ದೊಡ್ಡ ಮರಗಳು ಕೆಳಗುರುಳಿದವು. ಆ ಅದ್ಭುತವನ್ನು ಪಾಂಡವರೂ ಸರ್ವರೂ ವೀಕ್ಷಿಸಿದರು.

03157016a ತತಃ ಶೈಲೋತ್ತಮಸ್ಯಾಗ್ರಾತ್ಪಾಂಡವಾನ್ಪ್ರತಿ ಮಾರುತಃ।
03157016c ಅವಹತ್ಸರ್ವಮಾಲ್ಯಾನಿ ಗಂಧವಂತಿ ಶುಭಾನಿ ಚ।।

ಆಗ ಆ ಉತ್ತಮ ಪರ್ವತದ ಶಿಖರದಿಂದ ಬೀಸಿದ ಗಾಳಿಯು ಸುಗಂಧಿತ ಸುಂದರ ಪುಷ್ಪಗಳನ್ನು ಪಾಂಡವರ ಕಡೆ ತಂದು ಚೆಲ್ಲಿತು.

03157017a ತತ್ರ ಪುಷ್ಪಾಣಿ ದಿವ್ಯಾನಿ ಸುಹೃದ್ಭಿಃ ಸಹ ಪಾಂಡವಾಃ।
03157017c ದದೃಶುಃ ಪಂಚ ವರ್ಣಾನಿ ದ್ರೌಪದೀ ಚ ಯಶಸ್ವಿನೀ।।

ಆ ದಿವ್ಯ ಪುಷ್ಪಗಳನ್ನು ಪಾಂಡವರೂ ಮತ್ತು ಅವರ ಸ್ನೇಹಿತರೂ ನೋಡಿದರು. ಐದು ಬಣ್ಣಗಳ ಆ ಹೂಗಳನ್ನು ಯಶಸ್ವಿನಿ ಪಾಂಚಾಲಿಯೂ ನೋಡಿದಳು.

03157018a ಭೀಮಸೇನಂ ತತಃ ಕೃಷ್ಣಾ ಕಾಲೇ ವಚನಮಬ್ರವೀತ್।
03157018c ವಿವಿಕ್ತೇ ಪರ್ವತೋದ್ದೇಶೇ ಸುಖಾಸೀನಂ ಮಹಾಭುಜಂ।।

ಅದೇ ಸಮಯದಲ್ಲಿ ಕೃಷ್ಣೆಯು ಪರ್ವತದ ಒಂದೆಡೆಯಲ್ಲಿ ಒಬ್ಬನೇ ಸುಖಾಸೀನನಾಗಿದ್ದ ಮಹಾಭುಜ ಭೀಮಸೇನನಿಗೆ ಹೇಳಿದಳು:

03157019a ಸುಪರ್ಣಾನಿಲವೇಗೇನ ಶ್ವಸನೇನ ಮಹಾಬಲಾತ್।
03157019c ಪಂಚವರ್ಣಾನಿ ಪಾತ್ಯಂತೇ ಪುಷ್ಪಾಣಿ ಭರತರ್ಷಭ।।

“ಭರತರ್ಷಭ! ಪಕ್ಷಿಯು ಮೇಲೆಬ್ಬಿಸಿದ ಅತಿ ದೊಡ್ಡ ಭಿರುಗಾಳಿಯು ಐದುಬಣ್ಣಗಳ ಹೂಗಳನ್ನು ನದೀ ಅಶ್ವರಥದ ಬಳಿ ಎಲ್ಲರೂ ನೋಡುತ್ತಿದ್ದಂತೆಯೇ ತಂದು ಬೀಳಿಸಿದೆ.

03157019e ಪ್ರತ್ಯಕ್ಷಂ ಸರ್ವಭೂತಾನಾಂ ನದೀಮಶ್ವರಥಾಂ ಪ್ರತಿ।।
03157020a ಖಾಂಡವೇ ಸತ್ಯಸಂಧೇನ ಭ್ರಾತ್ರಾ ತವ ನರೇಶ್ವರ।
03157020c ಗಂಧರ್ವೋರಗರಕ್ಷಾಂಸಿ ವಾಸವಶ್ಚ ನಿವಾರಿತಃ।।
03157020e ಹತಾ ಮಾಯಾವಿನಶ್ಚೋಗ್ರಾ ಧನುಃ ಪ್ರಾಪ್ತಂ ಚ ಗಾಂಡಿವಂ।।

ನರೇಶ್ವರ! ನಿನ್ನ ತಮ್ಮ ಸತ್ಯಸಂಧನು ಖಾಂಡವದಲ್ಲಿ ಗಂಧರ್ವ-ಉರಗ-ರಾಕ್ಷಸರು ಮತ್ತು ಇಂದ್ರನನ್ನೂ ತಡೆಗಟ್ಟಿ ಉಗ್ರ ಮಾಯಾವಿಗಳನ್ನು ಕೊಂದು ಗಾಂಡಿವ ಧನುಸ್ಸನ್ನು ಪಡೆದ.

03157021a ತವಾಪಿ ಸುಮಹತ್ತೇಜೋ ಮಹದ್ಬಾಹುಬಲಂ ಚ ತೇ।
03157021c ಅವಿಷಹ್ಯಮನಾಧೃಷ್ಯಂ ಶತಕ್ರತುಬಲೋಪಮಂ।।

ನೀನೂ ಕೂಡ ತುಂಬಾ ತೇಜೋವಂತ ಮತ್ತು ಮಹಾ ಬಾಹುಬಲವಂತ. ಎದುರಿಸಲಸಾದ್ಯನಾದ ಮತ್ತು ಗೆಲ್ಲಲಸಾದ್ಯನಾದ ನೀನು ಶತಕ್ರತು ಇಂದ್ರನ ಸಮಾನ.

03157022a ತ್ವದ್ಬಾಹುಬಲವೇಗೇನ ತ್ರಾಸಿತಾಃ ಸರ್ವರಾಕ್ಷಸಾಃ।
03157022c ಹಿತ್ವಾ ಶೈಲಂ ಪ್ರಪದ್ಯಂತಾಂ ಭೀಮಸೇನ ದಿಶೋ ದಶ।।
03157023a ತತಃ ಶೈಲೋತ್ತಮಸ್ಯಾಗ್ರಂ ಚಿತ್ರಮಾಲ್ಯಧರಂ ಶಿವಂ।
03157023c ವ್ಯಪೇತಭಯಸಮ್ಮೋಹಾಃ ಪಶ್ಯಂತು ಸುಹೃದಸ್ತವ।।

ಭೀಮಸೇನ! ನಿನ್ನ ಬಾಹುಬಲ ಮತ್ತು ವೇಗದಿಂದ ನರಳುವ ಸರ್ವ ರಾಕ್ಷಸರೂ ಈ ಪರ್ವತವನ್ನು ತೊರೆದು ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಾರೆ. ಆಗ ನಿನ್ನ ಸ್ನೇಹಿತರೆಲ್ಲರೂ ಭಯಭೀತರಾಗಿ ಬಣ್ಣದ ಹೂಗಳನ್ನು ಮುಡಿದು ಮಂಗಳಕರವಾಗಿರುವ ಈ ಉತ್ತಮ ಪರ್ವತವನ್ನು ಏರಬಹುದು.

03157024a ಏವಂ ಪ್ರಣಿಹಿತಂ ಭೀಮ ಚಿರಾತ್ಪ್ರಭೃತಿ ಮೇ ಮನಃ।
03157024c ದ್ರಷ್ಟುಮಿಚ್ಚಾಮಿ ಶೈಲಾಗ್ರಂ ತ್ವದ್ಬಾಹುಬಲಮಾಶ್ರಿತಾ।।

ಭೀಮ! ನಿನ್ನ ಬಾಹುಬಲವನ್ನು ಆಶ್ರಯಿಸಿ ಈ ಪರ್ವತದ ಶಿಖರವನ್ನು ನೋಡುವ ಆಸೆ ಬಹುಕಾಲದಿಂದ ನನ್ನಲ್ಲಿದೆ.”

03157025a ತತಃ ಕ್ಷಿಪ್ತಮಿವಾತ್ಮಾನಂ ದ್ರೌಪದ್ಯಾ ಸ ಪರಂತಪಃ।
03157025c ನಾಮೃಷ್ಯತ ಮಹಾಬಾಹುಃ ಪ್ರಹಾರಮಿವ ಸದ್ಗವಃ।।

ಚಾಟಿಯೇಟಿಗೊಳಗಾದ ಎತ್ತಿನಂತೆ ಆ ಮಹಾಬಾಹು ಪರಂತಪನು ದ್ರೌಪದಿಯ ಮಾತುಗಳನ್ನು ಸಹಿಸಲಾರದೇ ಹೋದನು.

03157026a ಸಿಂಹರ್ಷಭಗತಿಃ ಶ್ರೀಮಾನುದಾರಃ ಕನಕಪ್ರಭಃ।
03157026c ಮನಸ್ವೀ ಬಲವಾಂದೃಪ್ತೋ ಮಾನೀ ಶೂರಶ್ಚ ಪಾಂಡವಃ।।
03157027a ಲೋಹಿತಾಕ್ಷಃ ಪೃಥುವ್ಯಂಸೋ ಮತ್ತವಾರಣವಿಕ್ರಮಃ।
03157027c ಸಿಂಹದಂಷ್ಟ್ರೋ ಬೃಹತ್ಸ್ಕಂಧಃ ಶಾಲಪೋತ ಇವೋದ್ಗತಃ।।
03157028a ಮಹಾತ್ಮಾ ಚಾರುಸರ್ವಾಂಗಃ ಕಂಬುಗ್ರೀವೋ ಮಹಾಭುಜಃ।
03157028c ರುಕ್ಮಪೃಷ್ಠಂ ಧನುಃ ಖಡ್ಗಂ ತೂಣಾಂಶ್ಚಾಪಿ ಪರಾಮೃಶತ್।।
03157029a ಕೇಸರೀವ ಯಥೋತ್ಸಿಕ್ತಃ ಪ್ರಭಿನ್ನ ಇವ ವಾರಣಃ।
03157029c ವ್ಯಪೇತಭಯಸಮ್ಮೋಹಃ ಶೈಲಮಭ್ಯಪತದ್ಬಲೀ।।

ಸಿಂಹರಾಜನ ನಡುಗೆಯುಳ್ಳ, ಶ್ರೀಮಾನ್, ಉದಾರ, ಕನಕಪ್ರಭ, ಮನಸ್ವೀ, ಬಲವಾನ್, ದೃಪ್ತ, ಶೂರ, ಪಾಂಡವ, ಲೋಹಿತಾಕ್ಷ, ವಿಶಾಲ ಎದೆಯುಳ್ಳವ, ಮತ್ತಗಜಶ ವಿಕ್ರಮವುಳ್ಳ, ಸಿಂದದಂಷ್ಟ್ರ, ದಷ್ಟಬಾಹುಗಳುಳ್ಳ, ಶಾಲವೃಕ್ಷಗಳಂತೆ ಎತ್ತರಕ್ಕೆ ಬೆಳೆದಿದ್ದ, ಮಹಾತ್ಮ, ಸರ್ವಾಂಗಗಳೂ ಸುಂದರವಾಗಿರುವ, ಶಂಖದಂತೆ ಕುತ್ತಿಗೆಯುಳ್ಳ, ಮಹಾಭುಜಿ, ಬಲಿ ಭೀಮಸೇನನು ಹಿಂಬಾಗದಲ್ಲಿ ಬಂಗಾರವನ್ನು ಹೊಂದಿದ್ದ ಧನುಸ್ಸು, ಖಡ್ಗ, ಮತ್ತು ಬತ್ತಳಿಕೆಗಳನ್ನು ಎತ್ತಿಕೊಂಡು ರಾಜ ಕೇಸರಿಯಂತೆ ಮತ್ತು ಆನೆಗಳ ನಾಯಕನಂತೆ ಭಯಸಮ್ಮೋಹಗಳಿಲ್ಲದೇ ಪರ್ವತವನ್ನೇರಿದನು.

03157030a ತಂ ಮೃಗೇಂದ್ರಮಿವಾಯಾಂತಂ ಪ್ರಭಿನ್ನಮಿವ ವಾರಣಂ।
03157030c ದದೃಶುಃ ಸರ್ವಭೂತಾನಿ ಬಾಣಖಡ್ಗಧನುರ್ಧರಂ।।

ಬಾಣ, ಖಡ್ಗ ಮತ್ತು ಧನುಸ್ಸನ್ನು ಹಿಡಿದು ಮೃಗೇಂದ್ರ ಸಿಂಹನಂತೆ ಮತ್ತು ಆನೆಗಳ ನಾಯಕನಂತೆ ಬರುತ್ತಿದ್ದ ಅವನನ್ನು ಅಲ್ಲಿದ್ದ ಎಲ್ಲರೂ ನೋಡಿದರು.

03157031a ದ್ರೌಪದ್ಯಾ ವರ್ಧಯನ್ಹರ್ಷಂ ಗದಾಮಾದಾಯ ಪಾಂಡವಃ।
03157031c ವ್ಯಪೇತಭಯಸಮ್ಮೋಹಃ ಶೈಲರಾಜಂ ಸಮಾವಿಶತ್।।

ದ್ರೌಪದಿಯ ಸಂತೋಷವನ್ನು ಹೆಚ್ಚಿಸಲು ಆ ಪಾಂಡವನು ಗದೆಯನ್ನು ಹಿಡಿದು ಭಯ ಸಮ್ಮೋಹಗಳನ್ನು ತೊರೆದು ಆ ಪರ್ವತವನ್ನು ಏರಿದನು.

03157032a ನ ಗ್ಲಾನಿರ್ನ ಚ ಕಾತರ್ಯಂ ನ ವೈಕ್ಲವ್ಯಂ ನ ಮತ್ಸರಃ।
03157032c ಕದಾ ಚಿಜ್ಜುಷತೇ ಪಾರ್ಥಮಾತ್ಮಜಂ ಮಾತರಿಶ್ವನಃ।।

ಆಯಾಸವಾಗಲೀ, ಭಯವಾಗಲೀ ಅಥವಾ ಹೇಡಿತನವಾಗಲೀ, ಮಾತ್ಸರ್ಯವಾಗಲೀ ಆ ವಾಯುಪುತ್ರ ಪಾರ್ಥನನ್ನು ಕಾಡಲಿಲ್ಲ.

03157033a ತದೇಕಾಯನಮಾಸಾದ್ಯ ವಿಷಮಂ ಭೀಮದರ್ಶನಂ।
03157033c ಬಹುತಾಲೋಚ್ಚ್ರಯಂ ಶೃಂಗಮಾರುರೋಹ ಮಹಾಬಲಃ।।

ಆಗ ಆ ಮಹಾಬಾಹುವು ಘೋರವಾಗಿ ತೋರುತ್ತಿದ್ದ ಚಿಕ್ಕದಾದ ವಿಷಮ ದಾರಿಯೊಂದನ್ನು ಹಿಡಿದು ಬಹು ಎತ್ತರವಾಗಿದ್ದ ಆ ಗಿರಿಯನ್ನೇರಿದನು.

03157034a ಸ ಕಿನ್ನರಮಹಾನಾಗಮುನಿಗಂಧರ್ವರಾಕ್ಷಸಾನ್।
03157034c ಹರ್ಷಯನ್ಪರ್ವತಸ್ಯಾಗ್ರಮಾಸಸಾದ ಮಹಾಬಲಃ।।

ಕಿನ್ನರರನ್ನೂ, ಮಹಾನಾಗಗಳನ್ನೂ, ಮುನಿಗಳನ್ನೂ, ಗಂಧರ್ವರಾಕ್ಷಸರನ್ನೂ ಹರ್ಷಗೊಳಿಸುತ್ತಾ ಆ ಮಹಾಬಲನು ಪರ್ವತದ ಶಿಖರವನ್ನು ತಲುಪಿದನು.

03157035a ತತ್ರ ವೈಶ್ರವಣಾವಾಸಂ ದದರ್ಶ ಭರತರ್ಷಭಃ।
03157035c ಕಾಂಚನೈಃ ಸ್ಫಾಟಿಕಾಕಾರೈರ್ವೇಶ್ಮಭಿಃ ಸಮಲಂಕೃತಂ।।

ಅಲ್ಲಿ ಆ ಭರತರ್ಷಭನು ಕಾಂಚನ ಮತ್ತು ಸ್ಪಟಿಕದ ಕಟ್ಟಡಗಳಿಂದ ಅಲಂಕೃತಗೊಂಡಿದ್ದ ವೈಶ್ರವಣ ಕುಬೇರನ ಆವಾಸವನ್ನು ಕಂಡನು.

03157036a ಮೋದಯನ್ಸರ್ವಭೂತಾನಿ ಗಂಧಮಾದನಸಂಭವಃ।
03157036c ಸರ್ವಗಂಧವಹಸ್ತತ್ರ ಮಾರುತಃ ಸುಸುಖೋ ವವೌ।।

ಗಂಧಮಾದನದಿಂದ ಪ್ರಾರಂಭಗೊಂಡು ಎಲ್ಲವಕ್ಕೂ ಸಂತೋಷವನ್ನು ನೀಡುತ್ತಿದ್ದ ಎಲ್ಲ ತರಹದ ಉತ್ತಮ ಸುವಾಸನೆಯನ್ನು ಹೊತ್ತ ಸುಖಕರ ಗಾಳಿಯು ಅಲ್ಲಿ ಬೀಸುತ್ತಿತ್ತು.

03157037a ಚಿತ್ರಾ ವಿವಿಧವರ್ಣಾಭಾಶ್ಚಿತ್ರಮಂಜರಿಧಾರಿಣಃ।
03157037c ಅಚಿಂತ್ಯಾ ವಿವಿಧಾಸ್ತತ್ರ ದ್ರುಮಾಃ ಪರಮಶೋಭನಾಃ।।

ಅತೀವ ಸುಂದರವಾದ ಯೋಚನೆಗೂ ಮೀರಿದ ಅದ್ಭುತವಾದ ಸುಂದರ ಬಣ್ಣಗಳ ಪರಮ ಸುಂದರ ಹೂಗಳಿಂದ ತುಂಬಿದ ಎಲ್ಲ ತರಹದ ಮರಗಳು ಅಲ್ಲಿ ಬೆಳೆದಿದ್ದವು.

03157038a ರತ್ನಜಾಲಪರಿಕ್ಷಿಪ್ತಂ ಚಿತ್ರಮಾಲ್ಯಧರಂ ಶಿವಂ।
03157038c ರಾಕ್ಷಸಾಧಿಪತೇಃ ಸ್ಥಾನಂ ದದರ್ಶ ಭರತರ್ಷಭಃ।।

ಆ ಭರತರ್ಷಭ ಭೀಮನು ರತ್ನಗಳ ಜಾಲಗಳಿಂದ ಸುತ್ತುವರೆಯಲ್ಪಟ್ಟ, ವಿಚಿತ್ರಹೂವುಗಳ ಮಾಲೆಗಳನ್ನು ಧರಿಸಿದ್ದ, ಮಂಗಳಕರವಾಗಿದ್ದ ರಾಕ್ಷಸಾಧಿಪತಿ ಕುಬೇರನ ಅರಮನೆಯನ್ನು ನೋಡಿದನು.

03157039a ಗದಾಖಡ್ಗಧನುಷ್ಪಾಣಿಃ ಸಮಭಿತ್ಯಕ್ತಜೀವಿತಃ।
03157039c ಭೀಮಸೇನೋ ಮಹಾಬಾಹುಸ್ತಸ್ಥೌ ಗಿರಿರಿವಾಚಲಃ।।

ಗದೆ, ಖಡ್ಗ, ಧನುಸ್ಸುಗಳನ್ನು ಹಿಡಿದು ಜೀವವನ್ನು ಬಿಡಲೂ ತಯಾರಾಗಿದ್ದ ಮಹಾಬಾಹು ಭೀಮಸೇನನು ಪರ್ವತದಂತೆ ಅಚಲನಾಗಿ ನಿಂತನು.

03157040a ತತಃ ಶಂಖಮುಪಾಧ್ಮಾಸೀದ್ದ್ವಿಷತಾಂ ಲೋಮಹರ್ಷಣಂ।
03157040c ಜ್ಯಾಘೋಷತಲಘೋಷಂ ಚ ಕೃತ್ವಾ ಭೂತಾನ್ಯಮೋಹಯತ್।।

ಆಗ ಅವನು ತನ್ನ ಶಂಖವನ್ನು ಶತ್ರುಗಳ ಮೈ ನವಿರೇಳಿಸುವಂತೆ ಊದಿದನು ಮತ್ತು ತನ್ನ ಬಿಲ್ಲಿನ ಝಂಕಾರದಿಂದ ಮತ್ತು ಚಪ್ಪಾಳೆಯಿಂದ ಅಲ್ಲಿರುವ ಪ್ರಾಣಿಗಳಲ್ಲಿಯೂ ಭಯವನ್ನುಂಟುಮಾಡಿದನು.

03157041a ತತಃ ಸಂಹೃಷ್ಟರೋಮಾಣಃ ಶಬ್ಧಂ ತಮಭಿದುದ್ರುವುಃ।
03157041c ಯಕ್ಷರಾಕ್ಷಸಗಂಧರ್ವಾಃ ಪಾಂಡವಸ್ಯ ಸಮೀಪತಃ।।

ಮೈನವಿರೆದ್ದ ಯಕ್ಷರು, ರಾಕ್ಷಸರು ಮತ್ತು ಗಂಧರ್ವರು ಆ ಧ್ವನಿಯನ್ನೇ ಅವಲಂಬಿಸಿ ಪಾಂಡವನ ಸಮೀಪಕ್ಕೆ ಓಡಿ ಬಂದರು.

03157042a ಗದಾಪರಿಘನಿಸ್ತ್ರಿಂಶಶಕ್ತಿಶೂಲಪರಶ್ವಧಾಃ।
03157042c ಪ್ರಗೃಹೀತಾ ವ್ಯರೋಚಂತ ಯಕ್ಷರಾಕ್ಷಸಬಾಹುಭಿಃ।।
03157043a ತತಃ ಪ್ರವವೃತೇ ಯುದ್ಧಂ ತೇಷಾಂ ತಸ್ಯ ಚ ಭಾರತ।
03157043c ತೈಃ ಪ್ರಯುಕ್ತಾನ್ಮಹಾಕಾಯೈಃ ಶಕ್ತಿಶೂಲಪರಶ್ವಧಾನ್।।
03157043e ಭಲ್ಲೈರ್ಭೀಮಃ ಪ್ರಚಿಚ್ಚೇದ ಭೀಮವೇಗತರೈಸ್ತತಃ।।

ಭಾರತ! ಯಕ್ಷರು ಮತ್ತು ಗಂಧರ್ವರು ಹಿಡಿದಿದ್ದ ಗದೆ, ಪರಿಘ, ಖಡ್ಗ, ಶಕ್ತಿ, ಶೂಲ, ಕೊಡಲಿಗಳು ಹೊಳೆಯುತ್ತಿರಲು ಅವರು ಮತ್ತು ಭೀಮಸೇನನೊಂದಿಗೆ ಯುದ್ಧವು ನಡೆಯಿತು. ಭೀಮಸೇನನು ತನ್ನ ಭಯಂಕರ ವೇಗದ ಬಾಣಗಳು ಮತ್ತು ಈಟಿಯಿಂದ ಆ ಮಹಾಕಾಯರು ಪ್ರಯೋಗಿಸುತ್ತಿದ್ದ ಶಕ್ತಿ, ಶೂಲ, ಪರಘಗಳನ್ನು ತುಂಡರಿಸಿದನು.

03157044a ಅಂತರಿಕ್ಷಚರಾಣಾಂ ಚ ಭೂಮಿಷ್ಠಾನಾಂ ಚ ಗರ್ಜತಾಂ।
03157044c ಶರೈರ್ವಿವ್ಯಾಧ ಗಾತ್ರಾಣಿ ರಾಕ್ಷಸಾನಾಂ ಮಹಾಬಲಃ।।

ಆ ಮಹಾಬಲನು ಆಕಾಶ ಮತ್ತು ನೆಲದಮೇಲೆ ಗರ್ಜಿಸುತ್ತಿದ್ದ ರಾಕ್ಷಸರ ದೇಹಗಳನ್ನು ತನ್ನ ಬಾಣಗಳಿಂದ ಚುಚ್ಚಿದನು.

03157045a ಸಾ ಲೋಹಿತಮಹಾವೃಷ್ಟಿರಭ್ಯವರ್ಷನ್ಮಹಾಬಲಂ।
03157045c ಕಾಯೇಭ್ಯಃ ಪ್ರಚ್ಯುತಾ ಧಾರಾ ರಾಕ್ಷಸಾನಾಂ ಸಮಂತತಃ।।

ಆ ರಾಕ್ಷಸರ ದೇಹಗಳ ಎಲ್ಲಕಡೆಯಿಂದ ಆ ಮಹಾಬಲನ ಮೇಲೆ ರಕ್ತದ ಮಹಾಮಳೆಯೇ ಸುರಿಯಿತು.

03157046a ಭೀಮಬಾಹುಬಲೋತ್ಸೃಷ್ಟೈರ್ಬಹುಧಾ ಯಕ್ಷರಕ್ಷಸಾಂ।
03157046c ವಿನಿಕೃತ್ತಾನ್ಯದೃಶ್ಯಂತ ಶರೀರಾಣಿ ಶಿರಾಂಸಿ ಚ।।

ಭೀಮನ ಬಾಹುಬಲದ ಪ್ರಯೋಗದಿಂದಾಗಿ ಹಲವಾರು ಯಕ್ಷ ರಾಕ್ಷಸರ ಶಿರ-ಶರೀರಗಳು ತುಂಡಾದುದು ಕಂಡುಬಂದವು.

03157047a ಪ್ರಚ್ಚಾದ್ಯಮಾನಂ ರಕ್ಷೋಭಿಃ ಪಾಂಡವಂ ಪ್ರಿಯದರ್ಶನಂ।
03157047c ದದೃಶುಃ ಸರ್ವಭೂತಾನಿ ಸೂರ್ಯಮಭ್ರಗಣೈರಿವ।।
03157048a ಸ ರಶ್ಮಿಭಿರಿವಾದಿತ್ಯಃ ಶರೈರರಿನಿಘಾತಿಭಿಃ।
03157048c ಸರ್ವಾನಾರ್ಚನ್ಮಹಾಬಾಹುರ್ಬಲವಾನ್ಸತ್ಯವಿಕ್ರಮಃ।।

ಕಪ್ಪು ಮೋಡಗಳು ಸೂರ್ಯನನ್ನು ಮುತ್ತುವಂತೆ ಆ ಸುಂದರ ಪಾಂಡವನನ್ನು ರಾಕ್ಷಸರು ಮುತ್ತುವುದನ್ನು ಸರ್ವಭೂತಗಳೂ ನೋಡಿದವು. ಅವನು ಆದಿತ್ಯನು ತನ್ನ ಕಿರಣಗಳಿಂದ ಎಲ್ಲವನ್ನೂ ಹೊಗುವಂತೆ ಆ ಸತ್ಯವಿಕ್ರಮಿ, ಮಹಾಬಾಹು ಬಲವಾನನು ಶರಗಳಿಂದ ಶತ್ರುಗಳನ್ನು ಘಾತಿಗೊಳಿಸಿದನು.

03157049a ಅಭಿತರ್ಜಯಮಾನಾಶ್ಚ ರುವಂತಶ್ಚ ಮಹಾರವಾನ್।
03157049c ನ ಮೋಹಂ ಭೀಮಸೇನಸ್ಯ ದದೃಶುಃ ಸರ್ವರಾಕ್ಷಸಾಃ।।

ಮಹಾಸ್ವರದಲ್ಲಿ ಕೂಗಿ ಅವನನ್ನು ಹೆದರಿಸಿದರು. ಆದರೂ ಯಾವ ರಾಕ್ಷಸನೂ ಭೀಮಸೇನನು ಭಯಪಟ್ಟಿದುದನ್ನು ನೋಡಲಿಲ್ಲ.

03157050a ತೇ ಶರೈಃ ಕ್ಷತಸರ್ವಾಂಗಾ ಭೀಮಸೇನಭಯಾರ್ದಿತಾಃ।
03157050c ಭೀಮಮಾರ್ತಸ್ವರಂ ಚಕ್ರುರ್ವಿಪ್ರಕೀರ್ಣಮಹಾಯುಧಾಃ।।

ಅವನ ಬಾಣಗಳಿಂದ ಎಲ್ಲ ಅಂಗಗಳೂ ಗಾಯಗೊಳ್ಳಲು ಭೀಮಸೇನನಿಗೆ ಹೆದರಿ ಅವರು ಘೋರ ಆರ್ತಸ್ವರದಲ್ಲಿ ಕೂಗಿ ಅವರ ಮಹಾಯುಧಗಳನ್ನು ಎಸೆದರು.

03157051a ಉತ್ಸೃಜ್ಯ ತೇ ಗದಾಶೂಲಾನಸಿಶಕ್ತಿಪರಶ್ವಧಾನ್।
03157051c ದಕ್ಷಿಣಾಂ ದಿಶಮಾಜಗ್ಮುಸ್ತ್ರಾಸಿತಾ ದೃಢಧನ್ವನಾ।।

ಗದೆ, ಶೂಲ, ಖಡ್ಗ, ಶಕ್ತಿ ಮತ್ತು ಕೊಡಲಿಗಳನ್ನು ಎಸೆದು ಆ ದೃಢಧನ್ವಿಗೆ ಹೆದರಿ ಅವರು ದಕ್ಷಿಣದಿಕ್ಕಿನ ಕಡೆ ಓಡಿಹೋದರು.

03157052a ತತ್ರ ಶೂಲಗದಾಪಾಣಿರ್ವ್ಯೂಢೋರಸ್ಕೋ ಮಹಾಭುಜಃ।
03157052c ಸಖಾ ವೈಶ್ರವಣಸ್ಯಾಸೀನ್ಮಣಿಮಾನ್ನಾಮ ರಾಕ್ಷಸಃ।।
03157053a ಅದರ್ಶಯದಧೀಕಾರಂ ಪೌರುಷಂ ಚ ಮಹಾಬಲಃ।

ಆದರೆ ಅಲ್ಲಿ ವೈಶ್ರವಣ ಕುಬೇರನ ಸಖ ಮಣಿಮತನೆಂಬ ಹೆಸರಿನ ವಿಶಾಲ ಎದೆಯ ಮಹಾಭುಜಿ ಮಹಾಬಲ ರಾಕ್ಷಸನು ಶೂಲ-ಗದೆಗಳನ್ನು ಹಿಡಿದು ತನ್ನ ಅಧಿಕಾರವನ್ನೂ ಪೌರುಷವನ್ನು ತೋರಿಸುತ್ತಾ ನಿಂತನು.

03157053c ಸ ತಾನ್ದೃಷ್ಟ್ವಾ ಪರಾವೃತ್ತಾನ್ಸ್ಮಯಮಾನ ಇವಾಬ್ರವೀತ್।।
03157054a ಏಕೇನ ಬಹವಃ ಸಂಖ್ಯೇ ಮಾನುಷೇಣ ಪರಾಜಿತಾಃ।
03157054c ಪ್ರಾಪ್ಯ ವೈಶ್ರವಣಾವಾಸಂ ಕಿಂ ವಕ್ಷ್ಯಥ ಧನೇಶ್ವರಂ।।

ಪಲಾಯನ ಮಾಡುತ್ತಿರುವ ಅವರನ್ನು ನೋಡಿ ನಸುನಗುತ್ತಾ ಅವನು ಹೇಳಿದನು: “ಒಬ್ಬನೇ ಮನುಷ್ಯನಿಂದ ಬಹಳ ಸಂಖ್ಯೆಯಲ್ಲಿರುವ ನಾವು ಪರಾಜಿತರಾದರೆ ಧನೇಶ್ವರ ವೈಶ್ರವಣ ಕುಬೇರನ ಅರಮನೆಯನ್ನು ತಲುಪಿ ಏನು ಹೇಳುವಿರಿ?”

03157055a ಏವಮಾಭಾಷ್ಯ ತಾನ್ಸರ್ವಾನ್ನ್ಯವರ್ತತ ಸ ರಾಕ್ಷಸಃ।
03157055c ಶಕ್ತಿಶೂಲಗದಾಪಾಣಿರಭ್ಯಧಾವಚ್ಚ ಪಾಂಡವಂ।।

ಹೀಗೆ ಹೇಳಿ ಅವರೆಲ್ಲರನ್ನೂ ತಡೆಹಿಡಿದು ಆ ರಾಕ್ಷಸನು ಶಕ್ತಿ, ಶೂಲ ಮತ್ತು ಗದೆಗಳನ್ನು ಹಿಡಿದು ಪಾಂಡವ ಭೀಮನ ಮೇಲೆ ಧಾಳಿಯಿಟ್ಟನು.

03157056a ತಮಾಪತಂತಂ ವೇಗೇನ ಪ್ರಭಿನ್ನಮಿವ ವಾರಣಂ।
03157056c ವತ್ಸದಂತೈಸ್ತ್ರಿಭಿಃ ಪಾರ್ಶ್ವೇ ಭೀಮಸೇನಃ ಸಮರ್ಪಯತ್।।

ಮದಿಸಿದ ಆನೆಯಂತೆ ತನ್ನ ಮೇಲೆ ವೇಗದಿಂದ ಎರಗಿದ್ದುದನ್ನು ನೋಡಿ ಭೀಮಸೇನನು ಕರುಗಳ ಹಲ್ಲುಗಳಿಂದ ಮಾಡಿದ ಬಾಣಗಳಿಂದ ಅವನ ಪಕ್ಕಗಳಿಗೆ ಹೊಡೆದನು.

03157057a ಮಣಿಮಾನಪಿ ಸಂಕ್ರುದ್ಧಃ ಪ್ರಗೃಹ್ಯ ಮಹತೀಂ ಗದಾಂ।
03157057c ಪ್ರಾಹಿಣೋದ್ಭೀಮಸೇನಾಯ ಪರಿಕ್ಷಿಪ್ಯ ಮಹಾಬಲಃ।।

ಕೃದ್ಧನಾದ ಆ ಮಹಾಬಲ ಮಣಿಮತನು ದೊಡ್ಡ ಗದೆಯನ್ನು ಹಿಡಿದು ತಿರುಗಿಸಿ ಭೀಮಸೇನನ ಮೇಲೆ ಎಸೆದನು.

03157058a ವಿದ್ಯುದ್ರೂಪಾಂ ಮಹಾಘೋರಾಮಾಕಾಶೇ ಮಹತೀಂ ಗದಾಂ।
03157058c ಶರೈರ್ಬಹುಭಿರಭ್ಯರ್ಚದ್ಭೀಮಸೇನಃ ಶಿಲಾಶಿತೈಃ।।
03157059a ಪ್ರತ್ಯಹನ್ಯಂತ ತೇ ಸರ್ವೇ ಗದಾಮಾಸಾದ್ಯ ಸಾಯಕಾಃ।
03157059c ನ ವೇಗಂ ಧಾರಯಾಮಾಸುರ್ಗದಾವೇಗಸ್ಯ ವೇಗಿತಾಃ।।

ಮಿಂಚಿನಂತೆ ಮಹಾಘೋರವಾಗಿ ಆಕಾಶದಲ್ಲಿ ಬರುತ್ತಿರುವ ಆ ಮಹಾಗದೆಯನ್ನು ಭೀಮಸೇನನು ಕಲ್ಲಿನಮೇಲೆ ಮಸೆದ ಹಲವಾರು ತೀಕ್ಷ್ಣಬಾಣಗಳಿಂದ ಹೊಡೆದನು. ಆದರೆ ಅವುಗಳೆಲ್ಲವೂ ಗದೆಯನ್ನು ಮುಟ್ಟುತ್ತಲೇ ಮೊನಚಾದವು ಮತ್ತು ಅತಿ ವೇಗದಲ್ಲಿ ಬರುತ್ತಿದ್ದ ಆ ಗದೆಯನ್ನು ತಮ್ಮ ವೇಗದಿಂದ ತಡೆಯಲಸಾದ್ಯವಾದವು.

03157060a ಗದಾಯುದ್ಧಸಮಾಚಾರಂ ಬುಧ್ಯಮಾನಃ ಸ ವೀರ್ಯವಾನ್।
03157060c ವ್ಯಂಸಯಾಮಾಸ ತಂ ತಸ್ಯ ಪ್ರಹಾರಂ ಭೀಮವಿಕ್ರಮಃ।।

ಗದಾಯುದ್ಧದ ವಿಷಯವನ್ನು ಚೆನ್ನಾಗಿ ತಿಳಿದಿದ್ದ ಆ ಭೀಮವಿಕ್ರಮ ವೀರ್ಯವಂತ ಭೀಮಸೇನನು ಅವನ ಪ್ರಹಾರವನ್ನು ತಪ್ಪಿಸಿಕೊಂಡನು.

03157061a ತತಃ ಶಕ್ತಿಂ ಮಹಾಘೋರಾಂ ರುಕ್ಮದಂಡಾಮಯಸ್ಮಯೀಂ।
03157061c ತಸ್ಮಿನ್ನೇವಾಂತರೇ ಧೀಮಾನ್ಪ್ರಜಹಾರಾಥ ರಾಕ್ಷಸಃ।।

ಅಷ್ಟರಲ್ಲಿಯೇ ಆ ಧೀಮಂತ ರಾಕ್ಷಸನು ಸಮಯವನ್ನು ನೋಡಿ ಮಹಾಘೋರವಾಗಿದ್ದ ಬಂಗಾರದ ತುದಿಯನ್ನು ಹೊಂದಿದ್ದ ಶಕ್ತಿಯನ್ನು ಅವನ ಮೇಲೆ ಎಸೆದನು.

03157062a ಸಾ ಭುಜಂ ಭೀಮನಿರ್ಹ್ರಾದಾ ಭಿತ್ತ್ವಾ ಭೀಮಸ್ಯ ದಕ್ಷಿಣಂ।
03157062c ಸಾಗ್ನಿಜ್ವಾಲಾ ಮಹಾರೌದ್ರಾ ಪಪಾತ ಸಹಸಾ ಭುವಿ।।

ಅಗ್ನಿಯೊಂದಿಗೆ ಜ್ವಲಿಸುತ್ತಾ ಮಹಾರೌದ್ರನಂತೆ ಬರುತ್ತಿದ್ದ ಅದು ಭೀಮಸೇನನ ಬಲಭುಜವನ್ನು ಸೀಳಿ ತಕ್ಷಣವೇ ನೆಲಕ್ಕೆ ಬಿದ್ದಿತು.

03157063a ಸೋಽತಿವಿದ್ಧೋ ಮಹೇಷ್ವಾಸಃ ಶಕ್ತ್ಯಾಮಿತಪರಾಕ್ರಮಃ।
03157063c ಗದಾಂ ಜಗ್ರಾಹ ಕೌರವ್ಯೋ ಗದಾಯುದ್ಧವಿಶಾರದಃ।।
03157064a ತಾಂ ಪ್ರಗೃಹ್ಯೋನ್ನದನ್ಭೀಮಃ ಸರ್ವಶೈಕ್ಯಾಯಸೀಂ ಗದಾಂ।
03157064c ತರಸಾ ಸೋಽಭಿದುದ್ರಾವ ಮಣಿಮಂತಂ ಮಹಾಬಲಂ।।

ಹೀಗೆ ಶಕ್ತಿಯಿಂದ ಚೆನ್ನಾಗಿ ಗಾಯಗೊಂಡ ಆ ಅಮಿತಪರಾಕ್ರಮಿ, ಮಹೇಷ್ವಾಸ, ಗದಾಯುದ್ಧ ವಿಶಾರದ ಕೌರವ್ಯ ಭೀಮಸೇನನು ಎಲ್ಲೆಡೆಯಲ್ಲಿಯೂ ಉಕ್ಕಿನಿಂದ ಮಾಡಿದ್ದ ಗದೆಯನ್ನು ಎತ್ತಿ ಹಿಡಿದು ಬೀಸುತ್ತಾ ಮಹಾಬಲಿ ಮಣಿಮತನ ಕಡೆಗೆ ಓಡಿದನು.

03157065a ದೀಪ್ಯಮಾನಂ ಮಹಾಶೂಲಂ ಪ್ರಗೃಹ್ಯ ಮಣಿಮಾನಪಿ।
03157065c ಪ್ರಾಹಿಣೋದ್ಭೀಮಸೇನಾಯ ವೇಗೇನ ಮಹತಾ ನದನ್।।

ಮಣಿಮಂತನೂ ಕೂಡ ಉರಿಯುತ್ತಿರುವ ಮಹಾಶೂಲವನ್ನು ಹಿಡಿದು ಜೋರಾಗಿ ಕೂಗುತ್ತಾ ವೇಗದಿಂದ ಭೀಮಸೇನನೆಡೆಗೆ ಎಸೆದನು.

03157066a ಭಂಕ್ತ್ವಾ ಶೂಲಂ ಗದಾಗ್ರೇಣ ಗದಾಯುದ್ಧವಿಶಾರದಃ।
03157066c ಅಭಿದುದ್ರಾವ ತಂ ತೂರ್ಣಂ ಗರುತ್ಮಾನಿವ ಪನ್ನಗಂ।।

ಗದೆಯ ತುದಿಯಿಂದ ಆ ಶೂಲವನ್ನು ತುಂಡರಿಸಿ ಗದಾಯುದ್ಧ ವಿಶಾರದ ಭೀಮಸೇನನು ಹಾವಿನಮೇಲೆ ಗರುಡನು ಎರಗುವಂತೆ ಮಣಿಮತನ ಮೇಲೆ ಹಾರಿ ಎರಗಿದನು.

03157067a ಸೋಽಂತರಿಕ್ಷಮಭಿಪ್ಲುತ್ಯ ವಿಧೂಯ ಸಹಸಾ ಗದಾಂ।
03157067c ಪ್ರಚಿಕ್ಷೇಪ ಮಹಾಬಾಹುರ್ವಿನದ್ಯ ರಣಮೂರ್ಧನಿ।।

ಗದೆಯನ್ನು ಗರಗರನೆ ಜೋರಾಗಿ ತಿರುಗಿಸುತ್ತಾ ಆ ಮಹಾಬಾಹುವು ಮೇಲೆ ಹಾರಿ ಜೋರಾಗಿ ಕಿರುಚುತ್ತಾ ಅವನ ನೆತ್ತಿಯ ಮೇಲೆ ಹೊಡೆದನು.

03157068a ಸೇಂದ್ರಾಶನಿರಿವೇಂದ್ರೇಣ ವಿಸೃಷ್ಟಾ ವಾತರಂಹಸಾ।
03157068c ಹತ್ವಾ ರಕ್ಷಃ ಕ್ಷಿತಿಂ ಪ್ರಾಪ್ಯ ಕೃತ್ಯೇವ ನಿಪಪಾತ ಹ।।

ಇಂದ್ರನು ಎಸೆದ ವಜ್ರದಂತೆ ಅದು ಗಾಳಿಯಲ್ಲಿ ವೇಗದಿಂದ ಬಂದು ರಾಕ್ಷಸನನ್ನು ಹೊಡೆದು ಕೆಳಗುರುಳಿಸಿತು.

03157069a ತಂ ರಾಕ್ಷಸಂ ಭೀಮಬಲಂ ಭೀಮಸೇನೇನ ಪಾತಿತಂ।
03157069c ದದೃಶುಃ ಸರ್ವಭೂತಾನಿ ಸಿಂಹೇನೇವ ಗವಾಂ ಪತಿಂ।।
03157070a ತಂ ಪ್ರೇಕ್ಷ್ಯ ನಿಹತಂ ಭೂಮೌ ಹತಶೇಷಾ ನಿಶಾಚರಾಃ।
03157070c ಭೀಮಮಾರ್ತಸ್ವರಂ ಕೃತ್ವಾ ಜಗ್ಮುಃ ಪ್ರಾಚೀಂ ದಿಶಂ ಪ್ರತಿ।।

ಸಿಂಹನಿಂದ ಬೀಳಿಸಲ್ಪಟ್ಟ ಹಸುವಿನಂತೆ ಭೀಮಬಲ ಭೀಮಸೇನನಿಂದ ಕೆಳಗುರುಳಿ ಬಿದ್ದ ಆ ರಾಕ್ಷಸನನ್ನು ಸರ್ವರೂ ನೋಡಿದರು. ಅವನು ನೆಲದ ಮೇಲೆ ಉರುಳಿ ಬಿದ್ದುದನ್ನು ನೋಡಿದ ಹತಶೇಷ ನಿಶಾಚರರು ಘೋರ ಆರ್ತಸ್ವರದಲ್ಲಿ ಕೂಗುತ್ತಾ ಪೂರ್ವದಿಕ್ಕಿನಲ್ಲಿ ಓಡಿಹೋದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಮಣಿಮದ್ವಧೇ ಸಪ್ತಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಮಣಿಮತನ ವಧೆಯಲ್ಲಿ ನೂರಾಐವತ್ತೇಳನೆಯ ಅಧ್ಯಾಯವು.