ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಯಕ್ಷಯುದ್ಧ ಪರ್ವ
ಅಧ್ಯಾಯ 156
ಸಾರ
ಆರ್ಷ್ಟಿಷೇಣನ ಆಶ್ರಮಕ್ಕೆ ಬಂದುದು (1-5). ಆರ್ಷ್ಟಿಷೇಣನು ಉಪದೇಶಿಸಿದುದು (6-31).
03156001 ವೈಶಂಪಾಯನ ಉವಾಚ।
03156001a ಯುಧಿಷ್ಠಿರಸ್ತಮಾಸಾದ್ಯ ತಪಸಾ ದಗ್ಧಕಿಲ್ಬಿಷಂ।
03156001c ಅಭ್ಯವಾದಯತ ಪ್ರೀತಃ ಶಿರಸಾ ನಾಮ ಕೀರ್ತಯನ್।।
ವೈಶಂಪಾಯನನು ಹೇಳಿದನು: “ತಪಸ್ಸಿನಿಂದ ಪಾಪಗಳನ್ನೆಲ್ಲ ಸುಟ್ಟುಹಾಕಿದ್ದ ಅವನ ಬಳಿಸಾರಿ ಯುಧಿಷ್ಠಿರನು ತನ್ನ ಹೆಸರನ್ನು ಹೇಳಿಕೊಂಡು ಸಂತೋಷದಿಂದ ತಲೆಬಾಗಿ ನಮಸ್ಕರಿಸಿದನು.
03156002a ತತಃ ಕೃಷ್ಣಾ ಚ ಭೀಮಶ್ಚ ಯಮೌ ಚಾಪಿ ಯಶಸ್ವಿನೌ।
03156002c ಶಿರೋಭಿಃ ಪ್ರಾಪ್ಯ ರಾಜರ್ಷಿಂ ಪರಿವಾರ್ಯೋಪತಸ್ಥಿರೇ।।
ಅನಂತರ ಕೃಷ್ಣೆ, ಭೀಮ ಮತ್ತು ಯಶಸ್ವಿಗಳಾದ ಯಮಳರು ತಲೆಬಾಗಿ ಆ ರಾಜರ್ಷಿಯ ಬಳಿಸಾರಿ ಸುತ್ತುವರೆದರು.
03156003a ತಥೈವ ಧೌಮ್ಯೋ ಧರ್ಮಜ್ಞಃ ಪಾಂಡವಾನಾಂ ಪುರೋಹಿತಃ।
03156003c ಯಥಾನ್ಯಾಯಮುಪಾಕ್ರಾಂತಸ್ತಮೃಷಿಂ ಸಂಶಿತವ್ರತಂ।।
ಹಾಗೆಯೇ ಪಾಂಡವರ ಪುರೋಹಿತ ಧರ್ಮಜ್ಞ ಧೌಮ್ಯನು ಯಥಾನ್ಯಾಯವಾಗಿ ಆ ಸಂಶಿತವ್ರತ ಋಷಿಯ ಬಳಿಬಂದನು.
03156004a ಅನ್ವಜಾನಾತ್ಸ ಧರ್ಮಜ್ಞೋ ಮುನಿರ್ದಿವ್ಯೇನ ಚಕ್ಷುಷಾ।
03156004c ಪಾಂಡೋಃ ಪುತ್ರಾನ್ಕುರುಶ್ರೇಷ್ಠಾನಾಸ್ಯತಾಮಿತಿ ಚಾಬ್ರವೀತ್।।
ದಿವ್ಯ ದೃಷ್ಟಿಯಿಂದ ಪಾಂಡುವಿನ ಪುತ್ರರಾದ ಆ ಕುರುಶ್ರೇಷ್ಠರನ್ನು ಗುರುತಿಸಿದ ಆ ಧರ್ಮಜ್ಞ ಮುನಿಯು ಕುಳಿತುಕೊಳ್ಳಲು ಹೇಳಿದನು.
03156005a ಕುರೂಣಾಮೃಷಭಂ ಪ್ರಾಜ್ಞಂ ಪೂಜಯಿತ್ವಾ ಮಹಾತಪಾಃ।
03156005c ಸಹ ಭ್ರಾತೃಭಿರಾಸೀನಂ ಪರ್ಯಪೃಚ್ಚದನಾಮಯಂ।।
ಆ ಮಹಾತಪಸ್ವಿಯು ಪ್ರಾಜ್ಞ ಕುರುವೃಷಭನನ್ನು ಪೂಜಿಸಿ, ತಮ್ಮಂದಿರೊಡನೆ ಕುಳಿತುಕೊಂಡ ಅವನ ಆರೋಗ್ಯದ ಕುರಿತು ಪ್ರಶ್ನಿಸಿದನು.
03156006a ನಾನೃತೇ ಕುರುಷೇ ಭಾವಂ ಕಚ್ಚಿದ್ಧರ್ಮೇ ಚ ವರ್ತಸೇ।
03156006c ಮತಾಪಿತ್ರೋಶ್ಚ ತೇ ವೃತ್ತಿಃ ಕಚ್ಚಿತ್ಪಾರ್ಥ ನ ಸೀದತಿ।।
“ನೀನು ಯಾವಾಗಲೂ ಸುಳ್ಳುಹೇಳುವ ಭಾವನನ್ನು ಇಟ್ಟುಕೊಳ್ಳದೇ ಧರ್ಮದಂತೆ ನಡೆದುಕೊಳ್ಳುತ್ತಿದ್ದೀಯೆ ತಾನೇ? ಪಾರ್ಥ! ನಿನ್ನ ತಂದೆ-ತಾಯಂದಿರ ಕುರಿತಾದ ನಿನ್ನ ವರ್ತನೆಯು ಕ್ಷೀಣಿಸುವುದಿಲ್ಲ ತಾನೇ?
03156007a ಕಚ್ಚಿತ್ತೇ ಗುರವಃ ಸರ್ವೇ ವೃದ್ಧಾ ವೈದ್ಯಾಶ್ಚ ಪೂಜಿತಾಃ।
03156007c ಕಚ್ಚಿನ್ನ ಕುರುಷೇ ಭಾವಂ ಪಾರ್ಥ ಪಾಪೇಷು ಕರ್ಮಸು।।
ನೀನು ಎಲ್ಲ ಗುರುಗಳನ್ನೂ, ವೃದ್ಧರನ್ನೂ, ಮತ್ತು ವೈದ್ಯರನ್ನೂ ಪೂಜಿಸುತ್ತೀಯೆ ತಾನೇ? ಪಾರ್ಥ! ನೀನು ಎಂದೂ ಪಾಪಕರ್ಮಗಳನ್ನು ಮಾಡಲು ಬಯಸಿಲ್ಲ ತಾನೇ?
03156008a ಸುಕೃತಂ ಪ್ರತಿಕರ್ತುಂ ಚ ಕಚ್ಚಿದ್ಧಾತುಂ ಚ ದುಷ್ಕೃತಂ।
03156008c ಯಥಾನ್ಯಾಯಂ ಕುರುಶ್ರೇಷ್ಠ ಜಾನಾಸಿ ನ ಚ ಕತ್ಥಸೇ।।
ಕುರುಶ್ರೇಷ್ಠ! ಯಥಾನ್ಯಾಯವಾಗಿ ಒಳಿತನ್ನು ಹೇಗೆ ಸ್ವೀಕರಿಸಬೇಕು ಮತ್ತು ದುಷ್ಕೃತವನ್ನು ಹೇಗೆ ಗಮನಿಸಬಾರದು ಎನ್ನುವುದನ್ನು ತಿಳಿದಿದ್ದೀಯೆ ತಾನೇ? ಜಂಬಕೊಚ್ಚಿಕೊಳ್ಳುವುದಿಲ್ಲ ತಾನೇ?
03156009a ಯಥಾರ್ಹಂ ಮಾನಿತಾಃ ಕಚ್ಚಿತ್ತ್ವಯಾ ನಂದಂತಿ ಸಾಧವಃ।
03156009c ವನೇಷ್ವಪಿ ವಸನ್ಕಚ್ಚಿದ್ಧರ್ಮಮೇವಾನುವರ್ತಸೇ।।
ಸಾಧುಜನರು ಯಥಾರ್ಹವಾಗಿ ನಿನ್ನಿಂದ ಸಮ್ಮಾನಿತರಾಗಿ ಸಂತೋಷಗೊಳ್ಳುತ್ತಾರೆ ತಾನೇ? ವನದಲ್ಲಿ ವಾಸವಾಗಿದ್ದುಕೊಂಡೂ ಧರ್ಮವನ್ನು ಅನುಸರಿಸುತ್ತಿದ್ದೀಯೆ ತಾನೇ?
03156010a ಕಚ್ಚಿದ್ಧೌಮ್ಯಸ್ತ್ವದಾಚಾರೈರ್ನ ಪಾರ್ಥ ಪರಿತಪ್ಯತೇ।
03156010c ದಾನಧರ್ಮತಪಹ್ಶೌಚೈರಾರ್ಜವೇನ ತಿತಿಕ್ಷಯಾ।।
ಪಾರ್ಥ! ಧೌಮ್ಯನು ನಿನ್ನ ಆಚಾರ, ದಾನ, ಧರ್ಮ, ತಪಸ್ಸು, ಶೌಚ, ಆರ್ಜವಗಳ ಕುರಿತು ಖಂಡಿಸುವ ಸನ್ನಿವೇಶಗಳು ಒದಗಿಲ್ಲ ತಾನೇ?
03156011a ಪಿತೃಪೈತಾಮಹಂ ವೃತ್ತಂ ಕಚ್ಚಿತ್ಪಾರ್ಥಾನುವರ್ತಸೇ।
03156011c ಕಚ್ಚಿದ್ರಾಜರ್ಷಿಯಾತೇನ ಪಥಾ ಗಚ್ಚಸಿ ಪಾಂಡವ।।
ಪಾರ್ಥ! ತಂದೆ ಮತ್ತು ಅಜ್ಜಂದಿರ ನಡತೆಯನ್ನು ಅನುಸರಿಸುತ್ತೀಯೆ ತಾನೇ? ಪಾಂಡವ! ರಾಜರ್ಷಿಗಳು ನಡೆದ ದಾರಿಯಲ್ಲಿಯೇ ಹೋಗುತ್ತಿದ್ದೀಯೆ ತಾನೇ?
03156012a ಸ್ವೇ ಸ್ವೇ ಕಿಲ ಕುಲೇ ಜಾತೇ ಪುತ್ರೇ ನಪ್ತರಿ ವಾ ಪುನಃ।
03156012c ಪಿತರಃ ಪಿತೃಲೋಕಸ್ಥಾಃ ಶೋಚಂತಿ ಚ ಹಸಂತಿ ಚ।।
ತಮ್ಮ ಕುಲದಲ್ಲಿ ಮಗ ಅಥವಾ ಮೊಮ್ಮಗನು ಹುಟ್ಟಿದಾಗಲೆಲ್ಲಾ ಪಿತೃಲೋಕದಲ್ಲಿರುವ ಪಿತೃಗಳು ನಗುತ್ತಾರೆ ಅಥವಾ ದುಃಖಿಸುತ್ತಾರೆ ಎಂದು ಹೇಳುತ್ತಾರೆ.
03156013a ಕಿಂ ನ್ವಸ್ಯ ದುಷ್ಕೃತೇಽಸ್ಮಾಭಿಃ ಸಂಪ್ರಾಪ್ತವ್ಯಂ ಭವಿಷ್ಯತಿ।
03156013c ಕಿಂ ಚಾಸ್ಯ ಸುಕೃತೇಽಸ್ಮಾಭಿಃ ಪ್ರಾಪ್ತವ್ಯಮಿತಿ ಶೋಭನಂ।।
ಅವನು ದುಷ್ಟಕರ್ಮಗಳನ್ನೆಸಗಿದರೆ ನಮಗೆ ಏನಾಗುತ್ತದೆ? ಅಥವಾ ಅವನ ಸುಕೃತಗಳಿಂದ ನಮಗೆ ಒಳ್ಳೆಯದಾಗುತ್ತದೆಯೇ? ಎಂದು ಚಿಂತಿಸುತ್ತಿರುತ್ತಾರೆ.
03156014a ಪಿತಾ ಮಾತಾ ತಥೈವಾಗ್ನಿರ್ಗುರುರಾತ್ಮಾ ಚ ಪಂಚಮಃ।
03156014c ಯಸ್ಯೈತೇ ಪೂಜಿತಾಃ ಪಾರ್ಥ ತಸ್ಯ ಲೋಕಾವುಭೌ ಜಿತೌ।।
ಪಾರ್ಥ! ತಂದೆ, ತಾಯಿ, ಹಾಗೆಯೇ ಅಗ್ನಿ, ಗುರು ಮತ್ತು ಆತ್ಮ ಈ ಐವರನ್ನು ಪೂಜಿಸುವವನು ಎರಡೂ ಲೋಕಗಳನ್ನು ಗೆಲ್ಲುತ್ತಾರೆ.
03156015a ಅಬ್ಭಕ್ಷಾ ವಾಯುಭಕ್ಷಾಶ್ಚ ಪ್ಲವಮಾನಾ ವಿಹಾಯಸಾ।
03156015c ಜುಷಂತೇ ಪರ್ವತಶ್ರೇಷ್ಠಮೃಷಯಃ ಪರ್ವಸಂಧಿಷು।।
ಪರ್ವಸಂಧಿಗಳಲ್ಲಿ (ಹುಣ್ಣಿಮೆ ಅಮವಾಸ್ಯೆಗಳಲ್ಲಿ) ಕೇವಲ ನೀರು ಮತ್ತು ಗಾಳಿಯನ್ನು ಸೇವಿಸುವ ಋಷಿಗಳು ಗಾಳಿಯಲ್ಲಿ ಹಾರಿಕೊಂಡು ಬಂದು ಈ ಪರ್ವತಶ್ರೇಷ್ಠನನ್ನು ಭೇಟಿ ಮಾಡುತ್ತಾರೆ.
03156016a ಕಾಮಿನಃ ಸಹ ಕಾಂತಾಭಿಃ ಪರಸ್ಪರಮನುವ್ರತಾಃ।
03156016c ದೃಶ್ಯಂತೇ ಶೈಲಶೃಂಗಸ್ಥಾಸ್ತಥಾ ಕಿಂಪುರುಷಾ ನೃಪ।।
ನೃಪ! ಪರಸ್ಪರರಲ್ಲಿ ಅನುರತರಾದ ಕಿಂಪುರುಷ ಕಾಮಿ-ಕಾಂತೆಯರೂ ಕೂಡ ಈ ಪರ್ವತ ಶಿಖರಗಳಲ್ಲಿ ಕಂಡುಬರುತ್ತಾರೆ.
03156017a ಅರಜಾಂಸಿ ಚ ವಾಸಾಂಸಿ ವಸಾನಾಃ ಕೌಶಿಕಾನಿ ಚ।
03156017c ದೃಶ್ಯಂತೇ ಬಹವಃ ಪಾರ್ಥ ಗಂಧರ್ವಾಪ್ಸರಸಾಂ ಗಣಾಃ।।
03156018a ವಿದ್ಯಾಧರಗಣಾಶ್ಚೈವ ಸ್ರಗ್ವಿಣಃ ಪ್ರಿಯದರ್ಶನಾಃ।
03156018c ಮಹೋರಗಗಣಾಶ್ಚೈವ ಸುಪರ್ಣಾಶ್ಚೋರಗಾದಯಃ।।
ಪಾರ್ಥ! ಕೊಳೆಯಿಲ್ಲದ ಶುಭ್ರ ರೇಷ್ಮೆ ಬಟ್ಟೆಗಳನ್ನುಟ್ಟು, ಹಾರಗಳನ್ನು ಧರಿಸಿದ ಬಹಳಷ್ಟು ಸುಂದರ ಗಂಧರ್ವ ಅಪ್ಸರ ಗಣಗಳು, ವಿದ್ಯಾಧರರ ಗುಂಪುಗಳು, ಮಹಾ ಉರಗಗಣಗಳು, ಪಕ್ಷಿ ಮತ್ತು ಉರಗಗಣಗಳು ಅಲ್ಲಿ ಕಾಣಿಸುತ್ತಾರೆ.
03156019a ಅಸ್ಯ ಚೋಪರಿ ಶೈಲಸ್ಯ ಶ್ರೂಯತೇ ಪರ್ವಸಂಧಿಷು।
03156019c ಭೇರೀಪಣವಶಂಖಾನಾಂ ಮೃದಂಗಾನಾಂ ಚ ನಿಸ್ವನಃ।।
ಆ ಗಿರಿಯ ಶಿಖರದಲ್ಲಿ ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಭೇರಿ, ಪಣವ, ಶಂಖ ಮತ್ತು ಮೃದಂಗಗಳ ನಿನಾದವು ಕೇಳಿಬರುತ್ತದೆ.
03156020a ಇಹಸ್ಥೈರೇವ ತತ್ಸರ್ವಂ ಶ್ರೋತವ್ಯಂ ಭರತರ್ಷಭಾಃ।
03156020c ನ ಕಾರ್ಯಾ ವಃ ಕಥಂ ಚಿತ್ಸ್ಯಾತ್ತತ್ರಾಭಿಸರಣೇ ಮತಿಃ।।
03156021a ನ ಚಾಪ್ಯತಃ ಪರಂ ಶಕ್ಯಂ ಗಂತುಂ ಭರತಸತ್ತಮಾಃ।
03156021c ವಿಹಾರೋ ಹ್ಯತ್ರ ದೇವಾನಾಮಮಾನುಷಗತಿಸ್ತು ಸಾ।।
ಭರತರ್ಷಭರೇ! ಇಲ್ಲಿ ನಿಂತುಕೊಂಡರೂ ಆ ಎಲ್ಲವನ್ನೂ ಕೇಳಬಹುದು. ಎಷ್ಟೇ ಮನಸ್ಸು ಮಾಡಿದರೂ ನೀವು ಅದರ ಹತ್ತಿರ ಹೋಗಕೂಡದು. ಭರತಸತ್ತಮರೇ! ಇಲ್ಲಿಂದ ಮುಂದೆ ಹೋಗುವುದು ಅಸಾಧ್ಯ. ಯಾಕೆಂದರೆ, ಅಲ್ಲಿ ದೇವತೆಗಳು ವಿಹರಿಸುತ್ತಾರೆ, ಮತ್ತು ಅದು ಮನುಷ್ಯರ ಗಮನಕ್ಕೆ ಸಿಲುಕುವುದಿಲ್ಲ.
03156022a ಈಷಚ್ಚಪಲಕರ್ಮಾಣಂ ಮನುಷ್ಯಮಿಹ ಭಾರತ।
03156022c ದ್ವಿಷಂತಿ ಸರ್ವಭೂತಾನಿ ತಾಡಯಂತಿ ಚ ರಾಕ್ಷಸಾಃ।।
ಭಾರತ! ಇಲ್ಲಿರುವ ಸರ್ವಭೂತಗಳೂ ಸ್ವಲ್ಪವೇ ತಪ್ಪುಮಾಡಿರುವ ಮನುಷ್ಯನನ್ನೂ ದ್ವೇಷಿಸುತ್ತವೆ ಮತ್ತು ರಾಕ್ಷಸರು ಅವನನ್ನು ಒದೆಯುತ್ತಾರೆ.
03156023a ಅಭ್ಯತಿಕ್ರಮ್ಯ ಶಿಖರಂ ಶೈಲಸ್ಯಾಸ್ಯ ಯುಧಿಷ್ಠಿರ।
03156023c ಗತಿಃ ಪರಮಸಿದ್ಧಾನಾಂ ದೇವರ್ಷೀಣಾಂ ಪ್ರಕಾಶತೇ।।
ಯುಧಿಷ್ಠಿರ! ಈ ಗಿರಿಯ ಶಿಖರವನ್ನು ದಾಟಿದರೆ ಪರಮಸಿದ್ಧ ದೇವರ್ಷಿಗಳ ಮಾರ್ಗವು ತೋರುತ್ತದೆ.
03156024a ಚಾಪಲಾದಿಹ ಗಚ್ಚಂತಂ ಪಾರ್ಥ ಯಾನಮತಃ ಪರಂ।
03156024c ಅಯಃಶೂಲಾದಿಭಿರ್ಘ್ನಂತಿ ರಾಕ್ಷಸಾಃ ಶತ್ರುಸೂದನ।।
ಪಾರ್ಥ! ಶತ್ರುಸೂದನ! ಚಪಲನಾಗಿ ಇಲ್ಲಿಂದ ಮುಂದೆ ಪ್ರಯಾಣಮಾಡಿದರೆ ಅವನನ್ನು ರಾಕ್ಷಸರು ಕಬ್ಬಿಣದ ಶೂಲಗಳಿಂದ ತಿವಿದು ಹೊಡೆಯುತ್ತಾರೆ.
03156025a ಅಪ್ಸರೋಭಿಃ ಪರಿವೃತಃ ಸಮೃದ್ಧ್ಯಾ ನರವಾಹನಃ।
03156025c ಇಹ ವೈಶ್ರವಣಸ್ತಾತ ಪರ್ವಸಂಧಿಷು ದೃಶ್ಯತೇ।।
03156026a ಶಿಖರೇ ತಂ ಸಮಾಸೀನಮಧಿಪಂ ಸರ್ವರಕ್ಷಸಾಂ।
03156026c ಪ್ರೇಕ್ಷಂತೇ ಸರ್ವಭೂತಾನಿ ಭಾನುಮಂತಮಿವೋದಿತಂ।।
ಮಗೂ! ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಅಪ್ಸರೆಯರಿಂದ ಪರಿವೃತನಾಗಿ, ಸಮೃದ್ಧನಾದ, ಸರ್ವರಾಕ್ಷಸರ ಒಡೆಯನಾದ ನರವಾಹನ ವೈಶ್ರವಣನು ಇಲ್ಲಿ ಶಿಖರದಲ್ಲಿ ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿರುವ, ರ್ವಭೂತಗಳಿಗೆ ದರ್ಶನನೀಡಿ ಕುಳಿತುಕೊಂಡಿರುವುದನ್ನು ಕಾಣಬಹುದು.
03156027a ದೇವದಾನವಸಿದ್ಧಾನಾಂ ತಥಾ ವೈಶ್ರವಣಸ್ಯ ಚ।
03156027c ಗಿರೇಃ ಶಿಖರಮುದ್ಯಾನಮಿದಂ ಭರತಸತ್ತಮ।।
ಭರತಸತ್ತಮ! ಈ ಗಿರಿಶಿಖರವು ಧೇವ-ದಾನವ-ಸಿದ್ಧರು ಮತ್ತು ವೈಶ್ರವಣನ ಉದ್ಯಾನವನವು.
03156028a ಉಪಾಸೀನಸ್ಯ ಧನದಂ ತುಂಬುರೋಃ ಪರ್ವಸಂಧಿಷು।
03156028c ಗೀತಸಾಮಸ್ವನಸ್ತಾತ ಶ್ರೂಯತೇ ಗಂಧಮಾದನೇ।।
ಮಗೂ! ಪರ್ವಸಂಧಿಗಳಲ್ಲಿ ತುಂಬುರನು ಉಪಾಸೀನನಾಗಿರುವ ಕುಬೇರನನ್ನು ಗೀತ-ವಾದ್ಯಗಳಿಂದ ಮನೋರಂಜಿಸುವಾಗ ಅದನ್ನು ಗಂಧಮಾದನದಲ್ಲಿ ಕೇಳಬಹುದು.
03156029a ಏತದೇವಂವಿಧಂ ಚಿತ್ರಮಿಹ ತಾತ ಯುಧಿಷ್ಠಿರ।
03156029c ಪ್ರೇಕ್ಷಂತೇ ಸರ್ವಭೂತಾನಿ ಬಹುಶಃ ಪರ್ವಸಂಧಿಷು।।
ಮಗೂ! ಯುಧಿಷ್ಠಿರ! ಪರ್ವಸಂಧಿಗಳಲ್ಲಿ ಸರ್ವಭೂತಗಳು ಬಹುಸಂಖ್ಯೆಗಳಲ್ಲಿ ಈ ರೀತಿಯ ಅದ್ಭುತವನ್ನು ನೋಡುತ್ತಾರೆ.
03156030a ಭುಂಜಾನಾಃ ಸರ್ವಭೋಜ್ಯಾನಿ ರಸವಂತಿ ಫಲಾನಿ ಚ।
03156030c ವಸಧ್ವಂ ಪಾಂಡವಶ್ರೇಷ್ಠಾ ಯಾವದರ್ಜುನದರ್ಶನಂ।।
ಪಾಂಡವಶ್ರೇಷ್ಠ! ತಿನ್ನಬಹುದಾದ ಎಲ್ಲ ರಸಭರಿತ ಫಲಗಳನ್ನು ಸೇವಿಸುತ್ತಾ ಅರ್ಜುನನನ್ನು ನೋಡುವವರೆಗೆ ಇಲ್ಲಿಯೇ ವಾಸಿಸು.
03156031a ನ ತಾತ ಚಪಲೈರ್ಭಾವ್ಯಮಿಹ ಪ್ರಾಪ್ತೈಃ ಕಥಂ ಚನ।
03156031c ಉಷಿತ್ವೇಹ ಯಥಾಕಾಮಂ ಯಥಾಶ್ರದ್ಧಂ ವಿಹೃತ್ಯ ಚ।।
03156031e ತತಃ ಶಸ್ತ್ರಭೃತಾಂ ಶ್ರೇಷ್ಠ ಪೃಥಿವೀಂ ಪಾಲಯಿಷ್ಯಸಿ।।
ಮಗೂ! ಇಲ್ಲಿಗೆ ಹೇಗೋ ಬಂದಿದ್ದಾಗಿದೆ. ಚಪಲನಾಗಬೇಡ! ಶಸ್ತ್ರಗಳನ್ನು ಹಿಡಿದವರಲ್ಲಿ ಶ್ರೇಷ್ಠನೇ! ಇಷ್ಟಬಂದಂತೆ ಮತ್ತು ಆಸಕ್ತಿಯಿದ್ದಷ್ಟು ಇಲ್ಲಿ ವಿಹರಿಸಿಕೊಂಡು ವಾಸಿಸಿ ನಂತರ ಭೂಮಿಯನ್ನು ಆಳುತ್ತೀಯೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಆರ್ಷ್ಟಿಷೇಣಯುಧಿಷ್ಠಿರಸಂವಾದೇ ಷಟ್ಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಆರ್ಷ್ಟಿಷೇಣಯುಧಿಷ್ಠಿರಸಂವಾದ ದಲ್ಲಿ ನೂರಾಐವತ್ತಾರನೆಯ ಅಧ್ಯಾಯವು.