155 ಗಂಧಮಾದನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಯಕ್ಷಯುದ್ಧ ಪರ್ವ

ಅಧ್ಯಾಯ 155

ಸಾರ

ಅರ್ಜುನನನ್ನು ಎದುರುಗೊಳ್ಳಲು ಶ್ವೇತಗಿರಿಗೆ ಪ್ರಯಾಣಿಸಿ ವೃಷಪರ್ವನಲ್ಲಿ ತಂಗಿದುದು (1-18). ವೃಷಪರ್ವನಲ್ಲಿ ಬ್ರಾಹ್ಮಣರು ಮತ್ತು ಸೇವಕರನ್ನಿರಿಸಿ ಮುಂದುವರೆದುದು (19-25). ಗಂಧಮಾದನ ಪರ್ವತದ ವರ್ಣನೆ (26-90).

03155001 ವೈಶಂಪಾಯನ ಉವಾಚ।
03155001a ನಿಹತೇ ರಾಕ್ಷಸೇ ತಸ್ಮಿನ್ಪುನರ್ನಾರಾಯಣಾಶ್ರಮಂ।
03155001c ಅಭ್ಯೇತ್ಯ ರಾಜಾ ಕೌಂತೇಯೋ ನಿವಾಸಮಕರೋತ್ಪ್ರಭುಃ।।

ವೈಶಂಪಾಯನನು ಹೇಳಿದನು: “ಆ ರಾಕ್ಷಸನನ್ನು ಕೊಂದನಂತರ ಪ್ರಭು ರಾಜ ಕೌಂತೇಯನು ಪುನಃ ನಾರಾಯಣಾಶ್ರಮಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದನು.

03155002a ಸ ಸಮಾನೀಯ ತಾನ್ಸರ್ವಾನ್ಭ್ರಾತೄನಿತ್ಯಬ್ರವೀದ್ವಚಃ।
03155002c ದ್ರೌಪದ್ಯಾ ಸಹಿತಾನ್ಕಾಲೇ ಸಂಸ್ಮರನ್ಭ್ರಾತರಂ ಜಯಂ।।

ಒಂದು ದಿನ ಅವನು ದ್ರೌಪದಿಯ ಸಹಿತ ಎಲ್ಲ ತಮ್ಮಂದಿರನ್ನೂ ಸೇರಿಸಿ, ತಮ್ಮ ಜಯನನ್ನು ನೆನಪಿಸಿಕೊಳ್ಳುತ್ತಾ ಹೇಳಿದನು:

03155003a ಸಮಾಶ್ಚತಸ್ರೋಽಭಿಗತಾಃ ಶಿವೇನ ಚರತಾಂ ವನೇ।
03155003c ಕೃತೋದ್ದೇಶಶ್ಚ ಬೀಭತ್ಸುಃ ಪಂಚಮೀಮಭಿತಃ ಸಮಾಂ।।
03155004a ಪ್ರಾಪ್ಯ ಪರ್ವತರಾಜಾನಂ ಶ್ವೇತಂ ಶಿಖರಿಣಾಂ ವರಂ।
03155004c ತತ್ರಾಪಿ ಚ ಕೃತೋದ್ದೇಶಃ ಸಮಾಗಮದಿದೃಕ್ಷುಭಿಃ।।

“ನಾವು ವನದಲ್ಲಿ ಸಂತೋಷದಿಂದ ತಿರುಗಾಡುತ್ತಾ ನಾಲ್ಕು ವರ್ಷಗಳು ಕಳೆದು ಹೋದವು. ಐದನೆಯ ವರ್ಷದಲ್ಲಿ ತನ್ನ ಉದ್ದೇಶಗಳನ್ನು ಪೂರೈಸಿದ ನಂತರ ಪರ್ವತರಾಜ, ಶ್ರೇಷ್ಠ ಶ್ವೇತಶಿಖರಕ್ಕೆ ಬೀಭತ್ಸುವು ಬರುವವನಿದ್ದಾನೆ. ನಾವೂ ಕೂಡ ಅವನನ್ನು ಭೇಟಿಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿರಬೇಕು.

03155005a ಕೃತಶ್ಚ ಸಮಯಸ್ತೇನ ಪಾರ್ಥೇನಾಮಿತತೇಜಸಾ।
03155005c ಪಂಚ ವರ್ಷಾಣಿ ವತ್ಸ್ಯಾಮಿ ವಿದ್ಯಾರ್ಥೀತಿ ಪುರಾ ಮಯಿ।।

ಅಮಿತ ತೇಜಸ್ವಿ ಪಾರ್ಥನು ಐದು ವರ್ಷಗಳ ಕಾಲ ವಿದ್ಯಾರ್ಥಿಯಾಗಿ ವಾಸಿಸುತ್ತೇನೆ ಎಂದು ನನ್ನೊಂದಿಗೆ ಹಿಂದೆ ಮಾತುಕೊಟ್ಟಿದ್ದ.

03155006a ತತ್ರ ಗಾಂಡೀವಧನ್ವಾನಮವಾಪ್ತಾಸ್ತ್ರಮರಿಂದಮಂ।
03155006c ದೇವಲೋಕಾದಿಮಂ ಲೋಕಂ ದ್ರಕ್ಷ್ಯಾಮಃ ಪುನರಾಗತಂ।।

ಅಲ್ಲಿ ನಾವು ದೇವಲೋಕದಿಂದ ಅಸ್ತ್ರಗಳನ್ನು ಪಡೆದು ಈ ಲೋಕಕ್ಕೆ ಹಿಂದಿರುಗುವ ಅರಿಂದಮ ಗಾಂಡೀವಧನ್ವಿಯನ್ನು ನೋಡುತ್ತೇವೆ.”

03155007a ಇತ್ಯುಕ್ತ್ವಾ ಬ್ರಾಹ್ಮಣಾನ್ಸರ್ವಾನಾಮಂತ್ರಯತ ಪಾಂಡವಃ।
03155007c ಕಾರಣಂ ಚೈವ ತತ್ತೇಷಾಮಾಚಚಕ್ಷೇ ತಪಸ್ವಿನಾಂ।।

ಹೀಗೆ ಹೇಳಿ ಪಾಂಡವನು ಎಲ್ಲ ಬ್ರಾಹ್ಮಣರನ್ನೂ ಕರೆದು ಆ ತಪಸ್ವಿಗಳಿಗೆ ಕಾರಣವನ್ನು ತಿಳಿಸಿ ಅವರೊಂದಿಗೆ ಆಲೋಚಿಸಿದನು.

03155008a ತಮುಗ್ರತಪಸಃ ಪ್ರೀತಾಃ ಕೃತ್ವಾ ಪಾರ್ಥಂ ಪ್ರದಕ್ಷಿಣಂ।
03155008c ಬ್ರಾಹ್ಮಣಾಸ್ತೇಽನ್ವಮೋದಂತ ಶಿವೇನ ಕುಶಲೇನ ಚ।।
03155009a ಸುಖೋದರ್ಕಮಿಮಂ ಕ್ಲೇಶಮಚಿರಾದ್ ಭರತರ್ಷಭ।
03155009c ಕ್ಷತ್ರಧರ್ಮೇಣ ಧರ್ಮಜ್ಞ ತೀರ್ತ್ವಾ ಗಾಂ ಪಾಲಯಿಷ್ಯಸಿ।।

ಪಾರ್ಥನು ಆ ಉಗ್ರತಪಸ್ವಿಗಳಿಗೆ ಪ್ರದಕ್ಷಿಣೆ ಮಾಡಲು ಅವರು ಸಂತೋಷಗೊಂಡು ಅದು ಮಂಗಳಕರವೂ ಕುಶಲವೂ ಆದುದೆಂದು ಅನುಮೋದಿಸಿದರು: “ಭರತರ್ಷಭ! ಕಷ್ಟಗಳು ಬೇಗನೇ ಸುಖಗಳಾಗಿ ಫಲಿಸುತ್ತವೆ. ಧರ್ಮಜ! ಕ್ಷಾತ್ರಧರ್ಮದ ಪ್ರಕಾರ ನಡೆದು ನೀನು ಈ ಭೂಮಿಯನ್ನು ಪರಿಪಾಲಿಸುತ್ತೀಯೆ!”

03155010a ತತ್ತು ರಾಜಾ ವಚಸ್ತೇಷಾಂ ಪ್ರತಿಗೃಹ್ಯ ತಪಸ್ವಿನಾಂ।
03155010c ಪ್ರತಸ್ಥೇ ಸಹ ವಿಪ್ರೈಸ್ತೈರ್ಭ್ರಾತೃಭಿಶ್ಚ ಪರಂತಪಃ।।
03155011a ದ್ರೌಪದ್ಯಾ ಸಹಿತಃ ಶ್ರೀಮಾನ್ ಹೈಡಿಂಬೇಯಾದಿಭಿಸ್ತಥಾ।
03155011c ರಾಕ್ಷಸೈರನುಯಾತಶ್ಚ ಲೋಮಶೇನಾಭಿರಕ್ಷಿತಃ।।

ಆಗ ರಾಜ ಪರಂತಪನು ತಪಸ್ವಿಗಳ ಮಾತನ್ನು ಸ್ವೀಕರಿಸಿ, ವಿಪ್ರರು ಮತ್ತು ತಮ್ಮಂದಿರೊಂದಿಗೆ, ದ್ರೌಪದಿಯನ್ನೊಡಗೂಡಿ, ಘಟೋತ್ಕಚನೇ ಮೊದಲಾದ ರಾಕ್ಷಸರು ಹಿಂಬಾಲಿಸಿ ಬರುತ್ತಿರಲು, ಲೋಮಶನ ರಕ್ಷಣೆಯಲ್ಲಿ ಹೊರಟನು.

03155012a ಕ್ವ ಚಿಜ್ಜಗಾಮ ಪದ್ಭ್ಯಾಂ ತು ರಾಕ್ಷಸೈರುಹ್ಯತೇ ಕ್ವ ಚಿತ್।
03155012c ತತ್ರ ತತ್ರ ಮಹಾತೇಜಾ ಭ್ರಾತೃಭಿಃ ಸಹ ಸುವ್ರತಃ।।

ಕೆಲವು ದೂರ ಕಾಲ್ನಡಿಗೆಯಲ್ಲಿ ಹೋದರೆ, ಇನ್ನು ಕೆಲವು ದೂರ ಅಲ್ಲಲ್ಲಿ ಆ ಮಹಾತೇಜಸ್ವಿ ಸುವ್ರತನು ಸಹೋದರರೊಂದಿಗೆ ರಾಕ್ಷಸರನ್ನೇರಿ ಪ್ರಯಾಣಿಸಿದರು.

03155013a ತತೋ ಯುಧಿಷ್ಠಿರೋ ರಾಜಾ ಬಹೂನ್ಕ್ಲೇಶಾನ್ವಿಚಿಂತಯನ್।
03155013c ಸಿಂಹವ್ಯಾಘ್ರಗಜಾಕೀರ್ಣಾಮುದೀಚೀಂ ಪ್ರಯಯೌ ದಿಶಂ।।

ಅನಂತರ ತನ್ನ ಬಹಳ ಕಷ್ಟಗಳ ಕುರಿತು ಚಿಂತಿಸುತ್ತಾ ರಾಜ ಯುಧಿಷ್ಠಿರನು ಸಿಂಹ, ಹುಲಿ ಮತ್ತು ಆನೆಗಳ ಗುಂಪುಗಳಿಂದ ಕೂಡಿದ ಉತ್ತರ ದಿಕ್ಕಿಗೆ ಪ್ರಯಾಣಿಸಿದನು.

03155014a ಅವೇಕ್ಷಮಾಣಃ ಕೈಲಾಸಂ ಮೈನಾಕಂ ಚೈವ ಪರ್ವತಂ।
03155014c ಗಂಧಮಾದನಪಾದಾಂಶ್ಚ ಮೇರುಂ ಚಾಪಿ ಶಿಲೋಚ್ಚಯಂ।।
03155015a ಉಪರ್ಯುಪರಿ ಶೈಲಸ್ಯ ಬಹ್ವೀಶ್ಚ ಸರಿತಃ ಶಿವಾಃ।
03155015c ಪ್ರಸ್ಥಂ ಹಿಮವತಃ ಪುಣ್ಯಂ ಯಯೌ ಸಪ್ತದಶೇಽಹನಿ।।

ಕೈಲಾಸ ಮತ್ತು ಮೈನಾಕ ಪರ್ವತಗಳನ್ನು, ಗಂಧಮಾದನ ಪರ್ವತದ ಬುಡವನ್ನೂ, ಕಲ್ಲುಬಂಡೆಗಳ ರಾಶಿಯಂತಿರುವ ಮೇರುಪರ್ವತದ ಶಿಖರವನ್ನೂ, ಮಂಗಳಕರ ನದಿಗಳನ್ನೂ ನೋಡುತ್ತಾ ಹದಿನೇಳನೇ ದಿನದಲ್ಲಿ ಪುಣ್ಯ ಹಿಮಾಲಯದ ತಪ್ಪಲಿಗೆ ಬಂದನು.

03155016a ದದೃಶುಃ ಪಾಂಡವಾ ರಾಜನ್ಗಂಧಮಾದನಮಂತಿಕಾತ್।
03155016c ಪೃಷ್ಠೇ ಹಿಮವತಃ ಪುಣ್ಯೇ ನಾನಾದ್ರುಮಲತಾಯುತೇ।।
03155017a ಸಲಿಲಾವರ್ತಸಂಜಾತೈಃ ಪುಷ್ಪಿತೈಶ್ಚ ಮಹೀರುಹೈಃ।
03155017c ಸಮಾವೃತಂ ಪುಣ್ಯತಮಮಾಶ್ರಮಂ ವೃಷಪರ್ವಣಃ।।

ರಾಜನ್! ಗಂಧಮಾದನದ ಹತ್ತಿರ ಹಿಮಾಲಯದ ಮಡಿಲಲ್ಲಿ ಹರಿಯುತ್ತಿರುವ ಪುಣ್ಯ ನದಿಯ ಅಂಚಿನಲ್ಲಿ ಹುಟ್ಟಿದ ನಾನಾ ದ್ರುಮಲತೆಗಳಿಂದ ಸುತ್ತುವರೆಯಲ್ಪಟ್ಟ, ವೃಷಪರ್ವನ ಪುಣ್ಯಕರ ಆಶ್ರಮವನ್ನು ಪಾಂಡವರು ಕಂಡರು.

03155018a ತಮುಪಕ್ರಮ್ಯ ರಾಜರ್ಷಿಂ ಧರ್ಮಾತ್ಮಾನಮರಿಂದಮಾಃ।
03155018c ಪಾಂಡವಾ ವೃಷಪರ್ವಾಣಮವಂದಂತ ಗತಕ್ಲಮಾಃ।।

ಅರಿಂದಮ ಪಾಂಡವರು ರಾಜರ್ಷಿ ವೃಷಪರ್ವನಲ್ಲಿಗೆ ಹೋಗಿ ಅವನನ್ನು ಅಭಿನಂದಿಸಿ ಅಲ್ಲಿ ಆಯಾಸವನ್ನು ಕಳೆದುಕೊಂಡರು.

03155019a ಅಭ್ಯನಂದತ್ಸ ರಾಜರ್ಷಿಃ ಪುತ್ರವದ್ಭರತರ್ಷಭಾನ್।
03155019c ಪೂಜಿತಾಶ್ಚಾವಸಂಸ್ತತ್ರ ಸಪ್ತರಾತ್ರಮರಿಂದಮಾಃ।।

ಆ ರಾಜರ್ಷಿಯು ಭರತರ್ಷಭರನ್ನು ಮಕ್ಕಳಂತೆ ಬರಮಾಡಿಕೊಂಡನು ಮತ್ತು ಆ ಅರಿಂದಮರು ಅಲ್ಲಿ ಸತ್ಕೃತರಾಗಿ ಏಳುರಾತ್ರಿಗಳು ತಂಗಿದರು.

03155020a ಅಷ್ಟಮೇಽಹನಿ ಸಂಪ್ರಾಪ್ತೇ ತಮೃಷಿಂ ಲೋಕವಿಶ್ರುತಂ।
03155020c ಆಮಂತ್ರ್ಯ ವೃಷಪರ್ವಾಣಂ ಪ್ರಸ್ಥಾನಂ ಸಮರೋಚಯನ್।।

ಎಂಟನೇ ದಿನ ಬಂದಾಗ ಆ ಲೋಕವಿಶ್ರುತ ಋಷಿ ವೃಷಪರ್ವನೊಂದಿಗೆ ವಿಚಾರಮಾಡಿ ಪ್ರಯಾಣ ಬೆಳೆಸಲು ನಿರ್ಧರಿಸಿದರು.

03155021a ಏಕೈಕಶಶ್ಚ ತಾನ್ವಿಪ್ರಾನ್ನಿವೇದ್ಯ ವೃಷಪರ್ವಣೇ।
03155021c ನ್ಯಾಸಭೂತಾನ್ಯಥಾಕಾಲಂ ಬಂಧೂನಿವ ಸುಸತ್ಕೃತಾನ್।।

ಹಿಂದಿರುಗಿ ಬರುವವರೆಗೆ ಪ್ರತಿಯೊಬ್ಬ ಬ್ರಾಹ್ಮಣನನ್ನೂ ನೆಂಟರಂತೆ ಸತ್ಕೃತರನ್ನಾಗಿಸಿ ಇಟ್ಟುಕೊಳ್ಳಲು ಅವರನ್ನು ವೃಷಪರ್ವನಿಗೆ ಒಪ್ಪಿಸಿದರು.

03155022a ತತಸ್ತೇ ವರವಸ್ತ್ರಾಣಿ ಶುಭಾನ್ಯಾಭರಣಾನಿ ಚ।
03155022c ನ್ಯದಧುಃ ಪಾಂಡವಾಸ್ತಸ್ಮಿನ್ನಾಶ್ರಮೇ ವೃಷಪರ್ವಣಃ।।

ಅನಂತರ ಪಾಂಡವರು ತಮ್ಮ ಉತ್ತಮ ಉಡುಪುಗಳನ್ನೂ ಸುಂದರ ಆಭರಣಗಳನ್ನೂ ವೃಷಪರ್ವನ ಆ ಆಶ್ರಮದಲ್ಲಿ ಇರಿಸಿದರು.

03155023a ಅತೀತಾನಾಗತೇ ವಿದ್ವಾನ್ಕುಶಲಃ ಸರ್ವಧರ್ಮವಿತ್।
03155023c ಅನ್ವಶಾಸತ್ಸ ಧರ್ಮಜ್ಞಃ ಪುತ್ರವದ್ಭರತರ್ಷಭಾನ್।।

ಭೂತ-ಭವಿಷ್ಯಗಳನ್ನು ಅರಿತಿದ್ದ, ಕುಶಲನೂ ಸರ್ವಧರ್ಮವಿದುವೂ ಆದ ಆ ಧರ್ಮಜ್ಞನು ಮಕ್ಕಳಂತಿದ್ದ ಭರತರ್ಷಭರಿಗೆ ಉಪದೇಶ ನೀಡಿದನು.

03155024a ತೇಽನುಜ್ಞಾತಾ ಮಹಾತ್ಮಾನಃ ಪ್ರಯಯುರ್ದಿಶಮುತ್ತರಾಂ।
03155024c ಕೃಷ್ಣಯಾ ಸಹಿತಾ ವೀರಾ ಬ್ರಾಹ್ಮಣೈಶ್ಚ ಮಹಾತ್ಮಭಿಃ।।

ಅವನಿಂದ ಬೀಳ್ಕೊಂಡು ಆ ಮಹಾತ್ಮ ವೀರರು ಕೃಷ್ಣೆಯೊಂದಿಗೆ ಮತ್ತು ಮಹಾತ್ಮ ಬ್ರಾಹ್ಮಣರೊಂದಿಗೆ ಉತ್ತರ ದಿಕ್ಕಿನಲ್ಲಿ ಹೊರಟರು.

03155024e ತಾನ್ಪ್ರಸ್ಥಿತಾನನ್ವಗಚ್ಚದ್ವೃಷಪರ್ವಾ ಮಹೀಪತಿಃ।।
03155025a ಉಪನ್ಯಸ್ಯ ಮಹಾತೇಜಾ ವಿಪ್ರೇಭ್ಯಃ ಪಾಂಡವಾಂಸ್ತದಾ।
03155025c ಅನುಸಂಸಾಧ್ಯ ಕೌಂತೇಯಾನಾಶೀರ್ಭಿರಭಿನಂದ್ಯ ಚ।।
03155025e ವೃಷಪರ್ವಾ ನಿವವೃತೇ ಪಂಥಾನಮುಪದಿಶ್ಯ ಚ।।

ಮಹೀಪತಿ ವೃಷಪರ್ವನು ಪಾಂಡವರನ್ನು ಮಹಾತೇಜಸ್ವಿ ಬ್ರಾಹ್ಮಣರಿಗೆ ಒಪ್ಪಿಸಿ ಆ ಕೌಂತೇಯರನ್ನು ತನ್ನ ಶುಭ ಆಶೀರ್ವಾದಗಳೊಂದಿಗೆ ಅನುಸಂಧಿಸಿ, ಹೊರಟ ಅವರನ್ನು ಹಿಂಬಾಲಿಸಿ ಅವರಿಗೆ ದಾರಿಯನ್ನು ತೋರಿಸಿ ಹಿಂದಿರುಗಿದನು.

03155026a ನಾನಾಮೃಗಗಣೈರ್ಜುಷ್ಟಂ ಕೌಂತೇಯಃ ಸತ್ಯವಿಕ್ರಮಃ।
03155026c ಪದಾತಿರ್ಭ್ರಾತೃಭಿಃ ಸಾರ್ಧಂ ಪ್ರಾತಿಷ್ಠತ ಯುಧಿಷ್ಠಿರಃ।।

ಸತ್ಯವಿಕ್ರಮ ಕೌಂತೇಯ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ನಾನಾ ಮೃಗಗಣಗಳಿಂದ ಕೂಡಿದ ದಾರಿಯನ್ನು ಹಿಡಿದನು.

03155027a ನಾನಾದ್ರುಮನಿರೋಧೇಷು ವಸಂತಃ ಶೈಲಸಾನುಷು।
03155027c ಪರ್ವತಂ ವಿವಿಶುಃ ಶ್ವೇತಂ ಚತುರ್ಥೇಽಹನಿ ಪಾಂಡವಾಃ।।
03155028a ಮಹಾಭ್ರಘನಸಂಕಾಶಂ ಸಲಿಲೋಪಹಿತಂ ಶುಭಂ।
03155028c ಮಣಿಕಾಂಚನರಮ್ಯಂ ಚ ಶೈಲಂ ನಾನಾಸಮುಚ್ಚ್ರಯಂ।।

ನಾನಾ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಗಿರಿಕಂದರಗಳಲ್ಲಿ ತಂಗುತ್ತಾ ನಾಲ್ಕನೆಯ ದಿನ ಪಾಂಡವರು ಶ್ವೇತ ಪರ್ವತಕ್ಕೆ ಬಂದರು. ಆ ಶುಭ ಶೈಲವು ಮಹಾ ಮೋಡದಂತೆ ತೋರುತ್ತಿತ್ತು. ಯಥೇಚ್ಛ ನೀರಿನಿಂದ ತುಂಬಿತ್ತು. ಮಣಿಕಾಂಚನಗಳಿಂದ ಸುಂದರವಾಗಿತ್ತು ಮತ್ತು ಅನೇಕ ಶಿಖರಗಳನ್ನು ಹೊಂದಿತ್ತು.

03155029a ತೇ ಸಮಾಸಾದ್ಯ ಪಂಥಾನಂ ಯಥೋಕ್ತಂ ವೃಷಪರ್ವಣಾ।
03155029c ಅನುಸಸ್ರುರ್ಯಥೋದ್ದೇಶಂ ಪಶ್ಯಂತೋ ವಿವಿಧಾನ್ನಗಾನ್।।
03155030a ಉಪರ್ಯುಪರಿ ಶೈಲಸ್ಯ ಗುಹಾಃ ಪರಮದುರ್ಗಮಾಃ।
03155030c ಸುದುರ್ಗಮಾಂಸ್ತೇ ಸುಬಹೂನ್ಸುಖೇನೈವಾಭಿಚಕ್ರಮುಃ।।

ವೃಶಪರ್ವನು ಹೇಳಿದ್ದ ದಾರಿಯನ್ನೇ ಹಿಡಿದು ವಿವಿಧ ಪರ್ವತಗಳನ್ನು ನೋಡುತ್ತಾ ಸುಖದಿಂದ ಇನ್ನೂ ಮೇಲಿನ ಪರ್ವತಗಳನ್ನು, ಪರಮ ದುರ್ಗಮ ಗುಹೆಗಳನ್ನೂ, ಬಹಳಷ್ಟು ದುರ್ಗಗಳನ್ನೂ ದಾಟಿ ಮುಂದುವರೆದರು.

03155031a ಧೌಮ್ಯಃ ಕೃಷ್ಣಾ ಚ ಪಾರ್ಥಾಶ್ಚ ಲೋಮಶಶ್ಚ ಮಹಾನೃಷಿಃ।
03155031c ಅಗಮನ್ಸಹಿತಾಸ್ತತ್ರ ನ ಕಶ್ಚಿದವಹೀಯತೇ।।

ಧೌಮ್ಯ, ಕೃಷ್ಣೆ, ಪಾರ್ಥರು, ಮತ್ತು ಮಹಾನೃಷಿ ಲೋಮಶ ಒಟ್ಟಿಗೆ ಅಲ್ಲಿಯವರೆಗೆ ಏನೂ ಆಯಾಸವಿಲ್ಲದೇ ಬಂದರು.

03155032a ತೇ ಮೃಗದ್ವಿಜಸಂಘುಷ್ಟಂ ನಾನಾದ್ವಿಜಸಮಾಕುಲಂ।
03155032c ಶಾಖಾಮೃಗಗಣೈಶ್ಚೈವ ಸೇವಿತಂ ಸುಮನೋಹರಂ।।
03155033a ಪುಣ್ಯಂ ಪದ್ಮಸರೋಪೇತಂ ಸಪಲ್ವಲಮಹಾವನಂ।
03155033c ಉಪತಸ್ಥುರ್ಮಹಾವೀರ್ಯಾ ಮಾಲ್ಯವಂತಂ ಮಹಾಗಿರಿಂ।।

ಆ ಮಹಾವೀರರು ಮೃಗಪಕ್ಷಿಗಳಿಂದ ಕೂಡಿದ್ದ, ನಾನಾ ಪಕ್ಷಿ ಸಂಕುಲಗಳಿಂದ ಕೂಡಿದ್ದ, ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದ ಮಂಗಗಳ ಗುಂಪುಗಳಿಂದ ಕೂಡಿದ್ದ, ಸುಮನೋಹರವಾದ, ಪುಣ್ಯ ಪದ್ಮಗಳಿಂದಿರುವ ಸರೋವರಗಳಿರುವ, ಮತ್ತು ದಟ್ಟ ಅರಣ್ಯದಿಂದ ಕೂಡಿದ್ದ ಮಹಾಗಿರಿ ಮಾನ್ಯವಂತವನ್ನು ತಲುಪಿದರು.

03155034a ತತಃ ಕಿಂಪುರುಷಾವಾಸಂ ಸಿದ್ಧಚಾರಣಸೇವಿತಂ।
03155034c ದದೃಶುರ್ಹೃಷ್ಟರೋಮಾಣಃ ಪರ್ವತಂ ಗಂಧಮಾದನಂ।।

ಅನಂತರ ಕಿಂಪುರುಷರ ವಾಸಸ್ಥಾನವಾದ, ಸಿದ್ಧಚಾರಣರು ಸೇವಿಸುವ ಗಂಧಮಾದನ ಪರ್ವತವನ್ನು ನೋಡಿ, ಅವರ ರೋಮಗಳು ನಿಮಿರಿ ನಿಂತವು.

03155035a ವಿದ್ಯಾಧರಾನುಚರಿತಂ ಕಿನ್ನರೀಭಿಸ್ತಥೈವ ಚ।
03155035c ಗಜಸಿಂಹಸಮಾಕೀರ್ಣಮುದೀರ್ಣಶರಭಾಯುತಂ।।
03155036a ಉಪೇತಮನ್ಯೈಶ್ಚ ತದಾ ಮೃಗೈರ್ಮೃದುನಿನಾದಿಭಿಃ।
03155036c ತೇ ಗಂಧಮಾದನವನಂ ತನ್ನಂದನವನೋಪಮಂ।।

ಅಲ್ಲಿ ವಿದ್ಯಾಧರರು ಮತ್ತು ಕಿನ್ನರಿಯರು ಅಲೆದಾಡುತ್ತಿದ್ದರು. ಆನೆ ಸಿಂಹಗಳ ಹಿಂಡುಗಳು, ಮತ್ತೇರಿದ ಶರಭಗಳು, ಮೃದುನಿನಾದಗೈಯುವ ಇನ್ನೂ ಇತರ ಮೃಗಗಳಿಂದ ಕೂಡಿದ್ದ ಆ ಗಂಧಮಾದನ ವನವು ನಂದನವನದಂತಿತ್ತು.

03155037a ಮುದಿತಾಃ ಪಾಂಡುತನಯಾ ಮನೋಹೃದಯನಂದನಂ।
03155037c ವಿವಿಶುಃ ಕ್ರಮಶೋ ವೀರಾ ಅರಣ್ಯಂ ಶುಭಕಾನನಂ।।

ಪಾಂಡುವಿನ ವೀರ ಮಕ್ಕಳು ಮನಸ್ಸು-ಹೃದಯಗಳಿಗೆ ಆನಂದ ನೀಡುವ ಆ ಶುಭ ಅರಣ್ಯ ಕಾನನವನ್ನು ಸಂತೋಷದಿಂದ ಕ್ರಮೇಣವಾಗಿ ಪ್ರವೇಶಿಸಿದರು.

03155038a ದ್ರೌಪದೀಸಹಿತಾ ವೀರಾಸ್ತೈಶ್ಚ ವಿಪ್ರೈರ್ಮಹಾತ್ಮಭಿಃ।
03155038c ಶೃಣ್ವಂತಃ ಪ್ರೀತಿಜನನಾನ್ವಲ್ಗೂನ್ಮದಕಲಾಂ ಶುಭಾನ್।।
03155038e ಶ್ರೋತ್ರರಮ್ಯಾನ್ಸುಮಧುರಾಂ ಶಬ್ಧಾನ್ಖಗಮುಖೇರಿತಾನ್।।
03155039a ಸರ್ವರ್ತುಫಲಭಾರಾಢ್ಯಾನ್ಸರ್ವರ್ತುಕುಸುಮೋಜ್ಜ್ವಲಾನ್।
03155039c ಪಶ್ಯಂತಃ ಪಾದಪಾಂಶ್ಚಾಪಿ ಫಲಭಾರಾವನಾಮಿತಾನ್।।
03155040a ಆಂರಾನಾಂರಾತಕಾನ್ಫುಲ್ಲಾನ್ನಾರಿಕೇಲಾನ್ಸತಿಂದುಕಾನ್।
03155040c ಅಜಾತಕಾಂಸ್ತಥಾ ಜೀರಾನ್ದಾಡಿಮಾನ್ಬೀಜಪೂರಕಾನ್।।
03155041a ಪನಸಾಽಲ್ಲಿಕುಚಾನ್ಮೋಚಾನ್ಖರ್ಜೂರಾನಾಂರವೇತಸಾನ್।
03155041c ಪಾರಾವತಾಂಸ್ತಥಾ ಕ್ಷೌದ್ರಾನ್ನೀಪಾಂಶ್ಚಾಪಿ ಮನೋರಮಾನ್।।
03155042a ಬಿಲ್ವಾನ್ಕಪಿತ್ಥಾಂ ಜಂಬೂಂಶ್ಚ ಕಾಶ್ಮರೀರ್ಬದರೀಸ್ತಥಾ।
03155042c ಪ್ಲಕ್ಷಾನುದುಂಬರವಟಾನಶ್ವತ್ಥಾನ್ ಕ್ಷೀರಿಣಸ್ತಥಾ।।
03155042e ಭಲ್ಲಾತಕಾನಾಮಲಕಾನ್ ಹರೀತಕಬಿಭೀತಕಾನ್।।
03155043a ಇಂಗುದಾನ್ಕರವೀರಾಂಶ್ಚ ತಿಂದುಕಾಂಶ್ಚ ಮಹಾಫಲಾನ್।
03155043c ಏತಾನನ್ಯಾಂಶ್ಚ ವಿವಿಧಾನ್ಗಂಧಮಾದನಸಾನುಷು।।
03155044a ಫಲೈರಮೃತಕಲ್ಪೈಸ್ತಾನಾಚಿತಾನ್ಸ್ವಾದುಭಿಸ್ತರೂನ್।
03155044c ತಥೈವ ಚಂಪಕಾಶೋಕಾನ್ಕೇತಕಾನ್ಬಕುಲಾಂಸ್ತಥಾ।।
03155045a ಪುನ್ನಾಗಾನ್ಸಪ್ತಪರ್ಣಾಂಶ್ಚ ಕರ್ಣಿಕಾರಾನ್ಸಕೇತಕಾನ್।
03155045c ಪಾಟಲಾನ್ಕುಟಜಾನ್ರಮ್ಯಾನ್ಮಂದಾರೇಂದೀವರಾಂಸ್ತಥಾ।।
03155046a ಪಾರಿಜಾತಾನ್ಕೋವಿದಾರಾನ್ದೇವದಾರುತರೂಂಸ್ತಥಾ।
03155046c ಶಾಲಾಂಸ್ತಾಲಾಂಸ್ತಮಾಲಾಂಶ್ಚ ಪ್ರಿಯಾಲಾನ್ಬಕುಲಾಂಸ್ತಥಾ।।
03155046e ಶಾಲ್ಮಲೀಃ ಕಿಂಶುಕಾಶೋಕಾಂ ಶಿಂಶಪಾಂಸ್ತರಲಾಂಸ್ತಥಾ।।
03155047a ಚಕೋರೈಃ ಶತಪತ್ರೈಶ್ಚ ಭೃಂಗರಾಜೈಸ್ತಥಾ ಶುಕೈಃ।
03155047c ಕೋಕಿಲೈಃ ಕಲವಿಂಕೈಶ್ಚ ಹಾರೀತೈರ್ಜೀವಜೀವಕೈಃ।।
03155048a ಪ್ರಿಯವ್ರತೈಶ್ಚಾತಕೈಶ್ಚ ತಥಾನ್ಯೈರ್ವಿವಿಧೈಃ ಖಗೈಃ।
03155048c ಶ್ರೋತ್ರರಮ್ಯಂ ಸುಮಧುರಂ ಕೂಜದ್ಭಿಶ್ಚಾಪ್ಯಧಿಷ್ಠಿತಾನ್।।

ದ್ರೌಪದಿ ಮತ್ತು ಮಹಾತ್ಮ ಬ್ರಾಹ್ಮಣರೊಂದಿಗೆ ಆ ವೀರರು ಪ್ರೀತಿಯನ್ನು ಹುಟ್ಟಿಸುವ, ಸಿಹಿಯಾದ, ಮಧುರವಾದ, ಶುಭವಾದ, ಕಿವಿತುಂಬುವ, ಸುಮಧುರ ಹಕ್ಕಿಗಳ ನಿನಾದಗಳನ್ನು ಕೇಳಿದರು. ಹಣ್ಣುಗಳ ಭಾರದಿಂದ ಬಗ್ಗಿರುವ ಎಲ್ಲ ಕಾಲಗಳಲ್ಲಿಯೂ ಹಣ್ಣುಗಳಿಂದ ತುಂಬಿರುವ, ಎಲ್ಲ ಕಾಲಗಳಲ್ಲಿಯೂ ಹೂವುಗಳಿಂದ ತುಂಬಿರುವ ಮರಗಳನ್ನು –ಮಾವು, ಆಮ್ರತಕ (ಹಲಸು), ತೆಂಗು, ತಿಂದುಕ, ಮುಂಜಾತಕ, ಮಾದಲ, ಅಂಜೂರ, ದಾಳಿಂಬೆ, ಸೀಬೆ, ಖರ್ಜೂರ, ದ್ರಾಕ್ಷಿ, ಹುಣಿಸೆ, ನಿಂಬೆ, ಬೇವು, ಬಿಲ್ವ, ಕಪಿತ್ಥ (ಬೇಲ), ನೇರಳೆ, ಪಾರಾವತ, ಕಾಶ್ಮರೀ, ಬದರೀ, ಪ್ಲಕ್ಷ, ಉದುಂಬರ (ಅತ್ತಿ), ಆಲ, ಅಶ್ವತ್ಥ, ಕ್ಷೀರಿಕ, ಭಲ್ಲತಕ, ಆಮಲಕ (ನೆಲ್ಲಿ), ಹರೀತಕ, ಬಿಭೀತಕ, ಇಂಗುದ, ತಿಂದುಕ, ಕರಮರ್ತ ಇವೇ ಮೊದಲಾದ ನಾನಾ ಜಾತಿಯ ಅಮೃತಸದೃಶ ಫಲಭರಿತ ಮರ-ಗಿಡಗಳನ್ನು ಆ ಗಂಧಮಾದನ ಪರ್ವತದ ಕಣಿವೆಗಳಲ್ಲಿ ನೋಡಿದರು. ಹಾಗೆಯೇ ಹೂಗಳಿಂದ ತುಂಬಿದ ಚಂಪಕ, ಅಶೋಕ, ಪುನ್ನಾಗ, ಕೇದಗೆ, ವಕುಲ, ಸಪ್ತಪರ್ಣ, ಕರ್ಣಿಕಾರ, ಪಾಟಲ, ಕುಟಜ, ಮಂದಾರ, ಇಂದೀವರ, ಪಾರಿಜಾತ, ಕೋವಿದಾರ, ದೇವದಾರು, ಶಾಲ, ತಾಲ, ತಮಾಲ, ಪಿಪ್ಪಲ, ಹಿಂಗುಕ, ಶಾಲ್ಮಲೀ, ಕಿಂಶುಕ, ಶಿಂಶುಪ, ಸರಲ ಮುಂತಾದ ಸಾವಿರಾರು ಜಾತಿಯ ಪುಷ್ಪವೃಕ್ಷಗಳನ್ನೂ ನೋಡಿದರು. ಅಲ್ಲಿ ಅಗಣಿತ ಸಂಖ್ಯೆಯಲ್ಲಿದ್ದ ಚಕೋರ, ಶತಪತ್ರ, ಭೃಂಗರಾಜ, ಗಿಣಿ, ಕೋಕಿಲ, ಕಲವಿಂಡ (ಗುಬ್ಬಚ್ಚಿ), ಹಾರೀತ, ಜೀವಜೀವಕ, ಪ್ರಿಯಕ, ಜಾತಕ ಇವೇ ಮುಂತಾದ ಸುಮಧುರವಾಗಿ ಇಂಪಾಗಿ ನಿನಾದಗೈಯುತ್ತಿದ್ದ ನಾನಾಜಾತಿಯ ಪಕ್ಷಿಗಳನ್ನೂ ನೋಡಿದರು.

03155049a ಸರಾಂಸಿ ಚ ವಿಚಿತ್ರಾಣಿ ಪ್ರಸನ್ನಸಲಿಲಾನಿ ಚ।
03155049c ಕುಮುದೈಃ ಪುಂಡರೀಕೈಶ್ಚ ತಥಾ ಕೋಕನದೋತ್ಪಲೈಃ।।
03155049e ಕಹ್ಲಾರೈಃ ಕಮಲೈಶ್ಚೈವ ಆಚಿತಾನಿ ಸಮಂತತಃ।।

ಮತ್ತು ಪ್ರಸನ್ನ ನೀರಿರುವ, ಕುಮುದ, ಬಿಳಿಯ ಕುಮುದಿಲೆ, ನೀಲಿ ಕುಮುದಿಲೆ, ಕೆಂಪು ಕುಮುದಿಲೆ ಮತ್ತು ಕಮಲಗಳಿಂದ ತುಂಬಿರುವ ವಿಚಿತ್ರ ಸರೋವರಗಳನ್ನು ಕಂಡರು.

03155050a ಕದಂಬೈಶ್ಚಕ್ರವಾಕೈಶ್ಚ ಕುರರೈರ್ಜಲಕುಕ್ಕುಟೈಃ।
03155050c ಕಾರಂಡವೈಃ ಪ್ಲವೈರ್ಹಂಸೈರ್ಬಕೈರ್ಮದ್ಗುಭಿರೇವ ಚ।।
03155050e ಏತೈಶ್ಚಾನ್ಯೈಶ್ಚ ಕೀರ್ಣಾನಿ ಸಮಂತಾಜ್ಜಲಚಾರಿಭಿಃ।।

ಕದಂಬ, ಚಕ್ರವಾಕ, ಕುರ, ನೀರುಕೋಳಿ, ಕಾರಂಡ, ಪ್ಲವ, ಹಂಸ, ಕೌರ್ಮದಗಳು ಮತ್ತು ಇತರ ಜಲಪಕ್ಷಿಗಳು ಎಲ್ಲೆಡೆಯಲ್ಲಿಯೂ ತುಂಬಿಕೊಂಡಿದ್ದವು.

03155051a ಹೃಷ್ಟೈಸ್ತಥಾ ತಾಮರಸರಸಾಸವಮದಾಲಸೈಃ।
03155051c ಪದ್ಮೋದರಚ್ಯುತರಜಃಕಿಂಜಲ್ಕಾರುಣರಂಜಿತೈಃ।।
03155052a ಮಧುರಸ್ವರೈರ್ಮಧುಕರೈರ್ವಿರುತಾನ್ಕಮಲಾಕರಾನ್।
03155052c ಪಶ್ಯಂತಸ್ತೇ ಮನೋರಮ್ಯಾನ್ಗಂಧಮಾದನಸಾನುಷು।।
03155053a ತಥೈವ ಪದ್ಮಷಂಡೈಶ್ಚ ಮಂಡಿತೇಷು ಸಮಂತತಃ।
03155053c ಶಿಖಂಡಿನೀಭಿಃ ಸಹಿತಾಽಲ್ಲತಾಮಂಡಪಕೇಷು ಚ।।
03155053e ಮೇಘತೂರ್ಯರವೋದ್ದಾಮಮದನಾಕುಲಿತಾನ್ ಭೃಶಂ।।
03155054a ಕೃತ್ವೈವ ಕೇಕಾಮಧುರಂ ಸಂಗೀತಮಧುರಸ್ವರಂ।
03155054c ಚಿತ್ರಾನ್ಕಲಾಪಾನ್ವಿಸ್ತೀರ್ಯ ಸವಿಲಾಸಾನ್ಮದಾಲಸಾನ್।।
03155054e ಮಯೂರಾನ್ದದೃಶುಶ್ಚಿತ್ರಾನ್ನೃತ್ಯತೋ ವನಲಾಸಕಾನ್।।
03155055a ಕಾಂತಾಭಿಃ ಸಹಿತಾನನ್ಯಾನಪಶ್ಯನ್ರಮತಃ ಸುಖಂ।
03155055c ವಲ್ಲೀಲತಾಸಂಕಟೇಷು ಕಟಕೇಷು ಸ್ಥಿತಾಂಸ್ತಥಾ।।
03155056a ಕಾಂಶ್ಚಿಚ್ಛಕುನಜಾತಾಂಶ್ಚ ವಿಟಪೇಷೂತ್ಕಟಾನಪಿ।
03155056c ಕಲಾಪರಚಿತಾಟೋಪಾನ್ವಿಚಿತ್ರಮುಕುಟಾನಿವ।।
03155056e ವಿವರೇಷು ತರೂಣಾಂ ಚ ಮುದಿತಾನ್ದದೃಶುಶ್ಚ ತೇ।।
03155057a ಸಿಂಧುವಾರಾನಥೋದ್ದಾಮಾನ್ಮನ್ಮಥಸ್ಯೇವ ತೋಮರಾನ್।
03155057c ಸುವರ್ಣಕುಸುಮಾಕೀರ್ಣಾನ್ಗಿರೀಣಾಂ ಶಿಖರೇಷು ಚ।।
03155058a ಕರ್ಣಿಕಾರಾನ್ವಿರಚಿತಾನ್ಕರ್ಣಪೂರಾನಿವೋತ್ತಮಾನ್।

ಆ ಸರೋವರಗಳಲ್ಲಿದ್ದ ಪುಷ್ಪಗಳ ಮಕರಂದವನ್ನು ಸವಿದು ಮದಿಸಿದ ದುಂಬಿಗಳು ಝೇಂಕಾರನಿನಾದಗಳನ್ನು ಮಾಡುತ್ತಿದ್ದವಲ್ಲದೇ, ಪದ್ಮಪುಷ್ಪಗಳ ಪರಾಗದಿಂದ ಆಚ್ಛಾದಿತವಾಗಿದ್ದ ದುಂಬಿಗಳು ಕೆಂಪಾಗಿಯೂ ಕಾಣುತ್ತಿದ್ದವು. ಅಂತಹ ಸುಂದರ ಅನೇಕಾನೇಕ ದೃಶ್ಯಗಳನ್ನು ನೋಡುತ್ತಾ ಪಾಂಡವರು ಪ್ರಯಾಣಿಸುತ್ತಿದ್ದರು. ಒಂದೆಡೆಯಲ್ಲಿ ಅವರು ನವಿಲುಗಳ ಸಮೂಹಗಳನ್ನು ಕಂಡರು. ಕೆಲವು ಗಂಡು ನವಿಲುಗಳು ಹೆಣ್ಣು ನವಿಲುಗಳೊಡನೆ ಸೇರಿ ಗುಡುಗಿನ ಶಬ್ಧವನ್ನು ಕೇಳಿ ಆನಂದದಿಂದ ಗರಿಗಳನ್ನು ಪಸರಿಸಿ ಹೃದಯಂಗಮವಾಗಿ ಕೂಗಿ ನೃತ್ಯವಾಡುತ್ತಿದ್ದವು. ಮತ್ತೆ ಕೆಲವು ನವಿಲುಗಳು ಮರದ ರೆಂಬೆಗಳ ಮೇಲೆಯೇ ಜಾಗರವಾಡುತ್ತಿದ್ದವು. ಅದನ್ನು ನೋಡಿದರೆ ವೃಕ್ಷಕ್ಕೆ ಕಿರೀಟವಿಟ್ಟಂತೆ ಕಾಣುತ್ತಿತ್ತು. ಮರಗಳ ಮಧ್ಯ ಮಧ್ಯದಲ್ಲಿ ಸಣ್ಣ ಸಣ್ಣ ಸರೋವರಗಳಿದ್ದವು. ಅವುಗಳಲ್ಲಿ ಸಿಂಧುವಾರಗಳೆಂಬ ನೀಳವಾದ ಕಮಲದ ಬಳ್ಳಿಗಳಿದ್ದವು. ಅವು ಮನ್ಮಥನ ಶೂಲಾಯುಧಗಳೋಪಾದಿಯಲ್ಲಿ ಕಾಣುತ್ತಿದ್ದವು. ಪರ್ವತ ಶಿಖರಗಳಲ್ಲಿ ಕರ್ಣಿಕಾರವೃಕ್ಷಗಳಿದ್ದು ಅವುಗಳ ಕುಸುಮಗಳು ಹೊಂಬಣ್ಣದಿಂದ ಪ್ರಕಾಶಿಸುತ್ತಿದ್ದವು ಮತ್ತು ಆ ಪುಷ್ಪಗಳು ದುಂಡಾಗಿದ್ದು ಪರ್ವತದ ಕರ್ಣಕುಂಡಲಗಳೋಪಾದಿಯಲ್ಲಿ ಪ್ರಕಾಶಿಸುತ್ತಿದ್ದವು.

03155058c ಅಥಾಪಶ್ಯನ್ಕುರಬಕಾನ್ವನರಾಜಿಷು ಪುಷ್ಪಿತಾನ್।।
03155058e ಕಾಮವಶ್ಯೋತ್ಸುಕಕರಾನ್ಕಾಮಸ್ಯೇವ ಶರೋತ್ಕರಾನ್।।
03155059a ತಥೈವ ವನರಾಜೀನಾಮುದಾರಾನ್ರಚಿತಾನಿವ।
03155059c ವಿರಾಜಮಾನಾಂಸ್ತೇಽಪಶ್ಯಂಸ್ತಿಲಕಾಂಸ್ತಿಲಕಾನಿವ।।
03155060a ತಥಾನಂಗಶರಾಕಾರಾನ್ಸಹಕಾರಾನ್ಮನೋರಮಾನ್।
03155060c ಅಪಶ್ಯನ್ಭ್ರಮರಾರಾವಾನ್ಮಂಜರೀಭಿರ್ವಿರಾಜಿತಾನ್।।
03155061a ಹಿರಣ್ಯಸದೃಶೈಃ ಪುಷ್ಪೈರ್ದಾವಾಗ್ನಿಸದೃಶೈರಪಿ।
03155061c ಲೋಹಿತೈರಂಜನಾಭೈಶ್ಚ ವೈಡೂರ್ಯಸದೃಶೈರಪಿ।।

ಮಾರ್ಗದಲ್ಲಿ ನಡೆದು ಹೋಗುತ್ತಿರುವಾಗ ಪಾಂಡವರು ಪುಷ್ಪಭರಿತವಾದ ಕುರವಕ ವೃಕ್ಷಗಳನ್ನು ಕಂಡರು. ಅವುಗಳಲ್ಲಿದ್ದ ಹೂಗಳನ್ನು ಕಾಮನ ಬಾಣಗಳಿಗೆ ಹೋಲಿಸಬಹುದ್ದಾಗಿತ್ತು. ಆ ಪುಷ್ಪಗಳ ಸೊಬಗನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಅಲ್ಲಿದ್ದ ತಿಲಕ ವೃಕ್ಷಗಳು ಅರಣ್ಯಕ್ಕೆ ತಿಲಕಪ್ರಾಯವಾಗಿದ್ದವು. ಆಗತಾನೆ ಚಿಗುರಿ ಹೂವಾಗಿದ್ದ ಮಾವಿನ ಮರಗಳನ್ನೂ ಪಾಂಡವರು ದಾರಿಯಲ್ಲಿ ಕಂಡರು. ಆ ವೃಕ್ಷಗಳಲ್ಲಿ ಪುಷ್ಪರಸವನ್ನು ಹೀರುತ್ತಾ ಅನೇಕ ದುಂಬಿಗಳು ಝೇಂಕಾರಮಾಡುತ್ತಿದ್ದವು. ಆ ವೃಕ್ಷಗಳೆಲ್ಲವೂ ನಯನಮನೋಹರವಾಗಿದ್ದು ಮನ್ಮಥನ ಬಾಣಗಳಂತಿದ್ದವು. ಇನ್ನೂ ಅನೇಕ ವೃಕ್ಷಗಳು ಹೂವಿನಿಂದ ಕೂಡಿ ಕಂಗೊಳಿಸುತ್ತಿದ್ದವು. ಕೆಲವು ಕೆಂಪುಬಣ್ಣದ ಹೂಗಳಿಂದಲೂ ಮತ್ತು ಕೆಲವು ಹೊಂಬಣ್ಣದ ಹೂಗಳಿಂದಲೂ ಶೋಭಿಸುತ್ತಿದ್ದವು.

03155062a ತಥಾ ಶಾಲಾಂಸ್ತಮಾಲಾಂಶ್ಚ ಪಾಟಲ್ಯೋ ಬಕುಲಾನಿ ಚ।
03155062c ಮಾಲಾ ಇವ ಸಮಾಸಕ್ತಾಃ ಶೈಲಾನಾಂ ಶಿಖರೇಷು ಚ।।
03155063a ಏವಂ ಕ್ರಮೇಣ ತೇ ವೀರಾ ವೀಕ್ಷಮಾಣಾಃ ಸಮಂತತಃ।
03155063c ಗಜಸಂಘಸಮಾಬಾಧಂ ಸಿಂಹವ್ಯಾಘ್ರಸಮಾಯುತಂ।।
03155064a ಶರಭೋನ್ನಾದಸಂಘುಷ್ಟಂ ನಾನಾರಾವನಿನಾದಿತಂ।
03155064c ಸರ್ವರ್ತುಫಲಪುಷ್ಪಾಢ್ಯಂ ಗಂಧಮಾದನಸಾನುಷು।।
03155065a ಪೀತಾ ಭಾಸ್ವರವರ್ಣಾಭಾ ಬಭೂವುರ್ವನರಾಜಯಃ।
03155065c ನಾತ್ರ ಕಂಟಕಿನಃ ಕೇ ಚಿನ್ನಾತ್ರ ಕೇ ಚಿದಪುಷ್ಪಿತಾಃ।।
03155065e ಸ್ನಿಗ್ಧಪತ್ರಫಲಾ ವೃಕ್ಷಾ ಗಂಧಮಾದನಸಾನುಷು।।
03155066a ವಿಮಲಸ್ಫಟಿಕಾಭಾನಿ ಪಾಂಡುರಚ್ಚದನೈರ್ದ್ವಿಜೈಃ।
03155066c ರಾಜಹಂಸೈರುಪೇತಾನಿ ಸಾರಸಾಭಿರುತಾನಿ ಚ।।
03155066e ಸರಾಂಸಿ ಸರಿತಃ ಪಾರ್ಥಾಃ ಪಶ್ಯಂತಃ ಶೈಲಸಾನುಷು।।
03155067a ಪದ್ಮೋತ್ಪಲವಿಚಿತ್ರಾಣಿ ಸುಖಸ್ಪರ್ಶಜಲಾನಿ ಚ।
03155067c ಗಂಧವಂತಿ ಚ ಮಾಲ್ಯಾನಿ ರಸವಂತಿ ಫಲಾನಿ ಚ।।
03155067e ಅತೀವ ವೃಕ್ಷಾ ರಾಜಂತೇ ಪುಷ್ಪಿತಾಃ ಶೈಲಸಾನುಷು।।
03155068a ಏತೇ ಚಾನ್ಯೇ ಚ ಬಹವಸ್ತತ್ರ ಕಾನನಜಾ ದ್ರುಮಾಃ।
03155068c ಲತಾಶ್ಚ ವಿವಿಧಾಕಾರಾಃ ಪತ್ರಪುಷ್ಪಫಲೋಚ್ಚಯಾಃ।।

ಎತ್ತರವಾಗಿ ಬೆಳೆದಿದ್ದ ಸಾಲ, ತಮಾಲ, ಪಾಟಲ ಮತ್ತು ಬಕುಳ ವೃಕ್ಷಗಳು ಪುಷ್ಪಭರಿತವಾಗಿದ್ದು ಪರ್ವತಕ್ಕೆ ಹಾಕಿರುವ ಪುಷ್ಪಮಾಲಿಕೆಗಳೋಪಾದಿಯಲ್ಲಿ ಕಂಗೊಳಿಸುತ್ತಿದ್ದವು. ಜನಮೇಜಯ! ಸ್ಪಟಿಕಶಿಲೆಯಷ್ಟು ಸ್ವಚ್ಛವಾಗಿದ್ದ ನೀರುಳ್ಳ ಸರೋವರಗಳನ್ನೂ, ಅವುಗಳಲ್ಲಿದ್ದ ನಯನ ಮನೋಹರವಾದ ಬಿಳಿಯ ರೆಕ್ಕೆಗಳ ಕಲಹಂಸ, ಕೊಕ್ಕರೆ ಮೊದಲಾದ ಪಕ್ಷಿಗಳನ್ನೂ, ಕಮಲ-ಕುಶೇಶಯಗಳನ್ನೂ ನೋಡುತ್ತಾ, ನೀರನ್ನು ಕುಡಿದು ಮತ್ತು ಸರೋವರಗಳಲ್ಲಿ ಮಿಂದು ದಣಿವಾರಿಸಿಕೊಳ್ಳುತ್ತಾ ಪಾಂಡವರು ಮುಂದೆ ಮುಂದೆ ಪ್ರಯಾಣಮಾಡಿದರು. ಆ ವನದ ಸೊಬಗನ್ನು ನೋಡುತ್ತಿದ್ದ ಪಾಂಡವರು ಭ್ರಾಂತರಾಗಿ ತೆರೆದ ಕಣ್ಣುಗಳನ್ನು ಮುಚ್ಚುತ್ತಲೇ ಇರಲಿಲ್ಲ. ಅವರಿಗೆ ಎಲ್ಲವೂ ಆಶ್ಚರ್ಯಕರವಾಗಿ ಕಂಡಿತು. ಕಮಲ, ಕಹ್ಲಾರ, ಉತ್ಪಲ ಮತ್ತು ಪುಂಡರೀಕ ಪುಷ್ಪಗಳ ಮೇಲೆ ಬೀಸಿದ ಸುಗಂಧಮಯ ಮಂದಮಾರುತವು ಪಾಂಡವರ ಮೇಲೆ ಬೀಸಿ ಅವರಿಗೆ ಮತ್ತಷ್ಟು ಆನಂದವನ್ನುಂಟುಮಾಡಿತು.

03155069a ಯುಧಿಷ್ಠಿರಸ್ತು ತಾನ್ವೃಕ್ಷಾನ್ಪಶ್ಯಮಾನೋ ನಗೋತ್ತಮೇ।
03155069c ಭೀಮಸೇನಮಿದಂ ವಾಕ್ಯಮಬ್ರವೀನ್ಮಧುರಾಕ್ಷರಂ।।

ಯುಧಿಷ್ಠಿರನಾದರೋ ಆ ಶ್ರೇಷ್ಠ ಪರ್ವತದಲ್ಲಿದ್ದ ವೃಕ್ಷಗಳನ್ನು ನೋಡಿ ಭೀಮಸೇನನನ್ನುದ್ದೇಶಿಸಿ ಈ ಮಧುರವಾಕ್ಯಗಳಲ್ಲಿ ಹೇಳಿದನು:

03155070a ಪಶ್ಯ ಭೀಮ ಶುಭಾನ್ದೇಶಾನ್ದೇವಾಕ್ರೀಡಾನ್ಸಮಂತತಃ।
03155070c ಅಮಾನುಷಗತಿಂ ಪ್ರಾಪ್ತಾಃ ಸಂಸಿದ್ಧಾಃ ಸ್ಮ ವೃಕೋದರ।।
03155071a ಲತಾಭಿಶ್ಚೈವ ಬಹ್ವೀಭಿಃ ಪುಷ್ಪಿತಾಃ ಪಾದಪೋತ್ತಮಾಃ।
03155071c ಸಂಶ್ಲಿಷ್ಟಾಃ ಪಾರ್ಥ ಶೋಭಂತೇ ಗಂಧಮಾದನಸಾನುಷು।।
03155072a ಶಿಖಂಡಿನೀಭಿಶ್ಚರತಾಂ ಸಹಿತಾನಾಂ ಶಿಖಂಡಿನಾಂ।
03155072c ನರ್ದತಾಂ ಶೃಣು ನಿರ್ಘೋಷಂ ಭೀಮ ಪರ್ವತಸಾನುಷು।।
03155073a ಚಕೋರಾಃ ಶತಪತ್ರಾಶ್ಚ ಮತ್ತಕೋಕಿಲಶಾರಿಕಾಃ।
03155073c ಪತ್ರಿಣಃ ಪುಷ್ಪಿತಾನೇತಾನ್ಸಂಶ್ಲಿಷ್ಯಂತಿ ಮಹಾದ್ರುಮಾನ್।।
03155074a ರಕ್ತಪೀತಾರುಣಾಃ ಪಾರ್ಥ ಪಾದಪಾಗ್ರಗತಾ ದ್ವಿಜಾಃ।
03155074c ಪರಸ್ಪರಮುದೀಕ್ಷಂತೇ ಬಹವೋ ಜೀವಜೀವಕಾಃ।।
03155075a ಹರಿತಾರುಣವರ್ಣಾನಾಂ ಶಾದ್ವಲಾನಾಂ ಸಮಂತತಃ।
03155075c ಸಾರಸಾಃ ಪ್ರತಿದೃಶ್ಯಂತೇ ಶೈಲಪ್ರಸ್ರವಣೇಷ್ವಪಿ।।
03155076a ವದಂತಿ ಮಧುರಾ ವಾಚಃ ಸರ್ವಭೂತಮನೋನುಗಾಃ।
03155076c ಭೃಂಗರಾಜೋಪಚಕ್ರಾಶ್ಚ ಲೋಹಪೃಷ್ಠಾಶ್ಚ ಪತ್ರಿಣಃ।।
03155077a ಚತುರ್ವಿಷಾಣಾಃ ಪದ್ಮಾಭಾಃ ಕುಂಜರಾಃ ಸಕರೇಣವಃ।
03155077c ಏತೇ ವೈಡೂರ್ಯವರ್ಣಾಭಂ ಕ್ಷೋಭಯಂತಿ ಮಹತ್ಸರಃ।।
03155078a ಬಹುತಾಲಸಮುತ್ಸೇಧಾಃ ಶೈಲಶೃಂಗಾತ್ಪರಿಚ್ಯುತಾಃ।
03155078c ನಾನಾಪ್ರಸ್ರವಣೇಭ್ಯಶ್ಚ ವಾರಿಧಾರಾಃ ಪತಂತ್ಯಮೂಃ।।
03155079a ಭಾಸ್ಕರಾಭಪ್ರಭಾ ಭೀಮ ಶಾರದಾಭ್ರಘನೋಪಮಾಃ।
03155079c ಶೋಭಯಂತಿ ಮಹಾಶೈಲಂ ನಾನಾರಜತಧಾತವಃ।।
03155080a ಕ್ವ ಚಿದಂಜನವರ್ಣಾಭಾಃ ಕ್ವ ಚಿತ್ಕಾಂಚನಸನ್ನಿಭಾಃ।
03155080c ಧಾತವೋ ಹರಿತಾಲಸ್ಯ ಕ್ವ ಚಿದ್ಧಿಂಗುಲಕಸ್ಯ ಚ।।
03155081a ಮನಃಶಿಲಾಗುಹಾಶ್ಚೈವ ಸಂಧ್ಯಾಭ್ರನಿಕರೋಪಮಾಃ।
03155081c ಶಶಲೋಹಿತವರ್ಣಾಭಾಃ ಕ್ವ ಚಿದ್ಗೈರಿಕಧಾತವಃ।।
03155082a ಸಿತಾಸಿತಾಭ್ರಪ್ರತಿಮಾ ಬಾಲಸೂರ್ಯಸಮಪ್ರಭಾಃ।
03155082c ಏತೇ ಬಹುವಿಧಾಃ ಶೈಲಂ ಶೋಭಯಂತಿ ಮಹಾಪ್ರಭಾಃ।।
03155083a ಗಂಧರ್ವಾಃ ಸಹ ಕಾಂತಾಭಿರ್ಯಥೋಕ್ತಂ ವೃಷಪರ್ವಣಾ।
03155083c ದೃಶ್ಯಂತೇ ಶೈಲಶೃಂಗೇಷು ಪಾರ್ಥ ಕಿಂಪುರುಷೈಃ ಸಹ।।
03155084a ಗೀತಾನಾಂ ತಲತಾಲಾನಾಂ ಯಥಾ ಸಾಮ್ನಾಂ ಚ ನಿಸ್ವನಃ।
03155084c ಶ್ರೂಯತೇ ಬಹುಧಾ ಭೀಮ ಸರ್ವಭೂತಮನೋಹರಃ।।
03155085a ಮಹಾಗಂಗಾಮುದೀಕ್ಷಸ್ವ ಪುಣ್ಯಾಂ ದೇವನದೀಂ ಶುಭಾಂ।
03155085c ಕಲಹಂಸಗಣೈರ್ಜುಷ್ಟಾಂ ಋಷಿಕಿನ್ನರಸೇವಿತಾಂ।।
03155086a ಧಾತುಭಿಶ್ಚ ಸರಿದ್ಭಿಶ್ಚ ಕಿನ್ನರೈರ್ಮೃಗಪಕ್ಷಿಭಿಃ।
03155086c ಗಂಧರ್ವೈರಪ್ಸರೋಭಿಶ್ಚ ಕಾನನೈಶ್ಚ ಮನೋರಮೈಃ।।
03155087a ವ್ಯಾಲೈಶ್ಚ ವಿವಿಧಾಕಾರೈಃ ಶತಶೀರ್ಷೈಃ ಸಮಂತತಃ।
03155087c ಉಪೇತಂ ಪಶ್ಯ ಕೌಂತೇಯ ಶೈಲರಾಜಮರಿಂದಮ।।

“ಭೀಮಸೇನ! ನಿಶ್ಚಯವಾಗಿಯೂ ಈ ಗಂಧಮಾದನ ಪರ್ವತದ ವನವು ಎಷ್ಟು ಸೊಗಸಾಗಿದೆ! ಈ ಕಾನನವು ದೇವಲೋಕದ ವೃಕ್ಷಗಳಿಂದ ತುಂಬಿಹೋಗಿದೆ. ಎಲ್ಲ ವೃಕ್ಷಗಳೂ, ಗಿಡ-ಬಳ್ಳಿಗಳೂ ಫಲ-ಪುಷ್ಪಭರಿತವಾಗಿವೆ. ಮುಳ್ಳಿನ ಗಿಡಗಳಿಲ್ಲ. ಫಲಪುಷ್ಪಗಳಿಲ್ಲದ ಒಂದು ಮರವನ್ನಾಗಲೀ, ಗಿಡವನ್ನಾಗಲೀ, ಬಳ್ಳಿಯನ್ನಾಗಲೀ ನಾವು ಕಾಣಲಿಲ್ಲ. ನಾನಾ ವಿಧದ, ನಾನಾ ಜಾತಿಗಳ, ನಾನಾ ಬಣ್ಣದ ಮರ-ಗಿಡ-ಬಳ್ಳಿಗಳಿವೆ. ಈ ಮರಗಳ ಚಿಗುರೆಲೆಗಳನ್ನು ತಿಂದು ಸುಮಧುರವಾಗಿ ಧ್ವನಿಮಾಡುತ್ತಿರುವ ಗಂಡುಕೋಗಿಲೆಗಳಿಂದ ನಿಬಿಡವಾಗಿದ್ದು ನೋಡುವವರಿಗೆ ನೇತ್ರಾನಂದವನ್ನೂ ಕರ್ಣಾನಂದವನ್ನೂ ಏಕಕಾಲದಲ್ಲಿ ನೀಡುತ್ತಿವೆ. ಇಲ್ಲಿರುವ ಈ ಸರೋವರವನ್ನಾದರೂ ನೋಡು! ಅರಳಿದ ಕಮಲಗಳಿಂದ ತುಂಬಿಹೋಗಿದೆ. ದುಂಬಿಗಳು ಇವುಗಳ ಮಧುರ ಮಧುರಸವನ್ನು ಕುಡಿದು ಮದಿಸಿರುವವು. ಈ ಸಮಯದಲ್ಲಿಯೇ ಸರೋವರವನ್ನು ಆನೆಗಳು ಕಲಕುತ್ತಿವೆ. ಭೀಮಸೇನ! ಈ ಸರೋವರವನ್ನು ನೋಡು! ಇಲ್ಲಿರುವ ಕಮಲಗಳು ಮಾಲೆಯಾಕಾರದಲ್ಲಿದ್ದು ಮೂರ್ತಿಮತ್ತಾಗಿರುವ ಲಕ್ಷ್ಮಿಗೆ ಹಾಕಿರುವ ಹಾರದೋಪಾದಿಯಲ್ಲಿ ಕಾಣಿಸುತ್ತಿವೆ. ನಿಶ್ಚಯವಾಗಿಯೂ ಈ ವನಲಕ್ಷ್ಮಿಯು ಅನೇಕಾನೇಕ ಸುಗಂಧಮಯ ಪುಷ್ಪಗಳಿಂದ ಅಲಂಕೃತಳಾಗಿರುವಳು! ಅತ್ತಕಡೆ ನೋಡು ಭೀಮ! ಆ ಪ್ರದೇಶಗಳಲ್ಲಿಯೇ ದೇವತೆಗಳು ವಿಹರಿಸುತ್ತಿದ್ದಾರೆ. ನಾವಿಲ್ಲಿ ಬಂದು ಧನ್ಯರಾದೆವು.”

03155088a ತೇ ಪ್ರೀತಮನಸಃ ಶೂರಾಃ ಪ್ರಾಪ್ತಾ ಗತಿಮನುತ್ತಮಾಂ।
03155088c ನಾತೃಪ್ಯನ್ಪರ್ವತೇಂದ್ರಸ್ಯ ದರ್ಶನೇನ ಪರಂತಪಾಃ।।

ಆ ಉತ್ತಮ ಮಾರ್ಗವನ್ನು ಪ್ರಯಾಣಿಸಿ ಆ ಪರ್ವತೇಂದ್ರನ ದರ್ಶನದಿಂದ ಸಂತೋಷಗೊಂಡ ಪರಂತಪರ ಮನಸ್ಸು ತೃಪ್ತಿಯನ್ನೇ ಹೊಂದಲಿಲ್ಲ.

03155089a ಉಪೇತಮಥ ಮಾಲ್ಯೈಶ್ಚ ಫಲವದ್ಭಿಶ್ಚ ಪಾದಪೈಃ।
03155089c ಆರ್ಷ್ಟಿಷೇಣಸ್ಯ ರಾಜರ್ಷೇರಾಶ್ರಮಂ ದದೃಶುಸ್ತದಾ।।
03155090a ತತಸ್ತಂ ತೀವ್ರತಪಸಂ ಕೃಶಂ ಧಮನಿಸಂತತಂ।
03155090c ಪಾರಗಂ ಸರ್ವಧರ್ಮಾಣಾಮಾರ್ಷ್ಟಿಷೇಣಮುಪಾಗಮನ್।।

ಆಗ ಅಲ್ಲಿ ಹೂವು ಹಣ್ಣುಗಳಿಂದ ತುಂಬಿದ್ದ ವೃಕ್ಷಗಳ ಸಂಕುಲವಾಗಿದ್ದ ರಾಜರ್ಷಿ ಆರ್ಷ್ಟಿಷೇಣನ ಆಶ್ರಮವನ್ನು ನೋಡಿದರು. ತೀವ್ರ ತಪಸ್ಸಿನಿಂದ ಕೇವಲ ಧಮನಿಗಳಿಂದ ಕಟ್ಟಲ್ಪಟ್ಟಿದ್ದನೋ ಎನ್ನುವಷ್ಟು ಕೃಶನಾಗಿದ್ದ ಸರ್ವಧರ್ಮಗಳ ಪಾರಂಗತ ಆರ್ಷ್ಟಿಷೇಣನ ಬಳಿ ಬಂದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಗಂಧಮಾದನಪ್ರವೇಶೇ ಪಂಚಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಗಂಧಮಾದನಪ್ರವೇಶದಲ್ಲಿ ನೂರಾಐವತ್ತೈದನೆಯ ಅಧ್ಯಾಯವು.