ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕಿರ್ಮೀರವಧ ಪರ್ವ
ಅಧ್ಯಾಯ 154
ಸಾರ
ಸೌಗಂಧಿಕಾ ವನದಲ್ಲಿ ಉಳಿದುಕೊಂಡಿರಲು ಒಮ್ಮೆ ಓರ್ವ ರಾಕ್ಷಸನು ಭೀಮನಿಲ್ಲದಿರುವಾಗ ಯುಧಿಷ್ಠಿರ, ದ್ರೌಪದಿ, ಮತ್ತು ನಕುಲ ಸಹದೇವರನ್ನು ಎತ್ತಿಕೊಂಡು ಹೋದುದು (1-27). ಅದನ್ನು ನೋಡಿದ ಭೀಮನು ರಾಕ್ಷಸನನ್ನು ಎದುರಿಸುವುದು (28-44). ಭೀಮ-ಜಟಾಸುರರ ಯುದ್ಧ, ಅಸುರನ ವಧೆ (45-61).
03154001 ವೈಶಂಪಾಯನ ಉವಾಚ।
03154001a ತತಸ್ತಾನ್ಪರಿವಿಶ್ವಸ್ತಾನ್ವಸತಸ್ತತ್ರ ಪಾಂಡವಾನ್।
03154001c ಗತೇಷು ತೇಷು ರಕ್ಷಃಸು ಭೀಮಸೇನಾತ್ಮಜೇಽಪಿ ಚ।।
03154002a ರಹಿತಾನ್ಭೀಮಸೇನೇನ ಕದಾ ಚಿತ್ತಾನ್ಯದೃಚ್ಚಯಾ।
03154002c ಜಹಾರ ಧರ್ಮರಾಜಾನಂ ಯಮೌ ಕೃಷ್ಣಾಂ ಚ ರಾಕ್ಷಸಃ।।
ವೈಶಂಪಾಯನನು ಹೇಳಿದನು: “ಭೀಮಸೇನಾತ್ಮಜ ಮತ್ತು ಇತರ ರಾಕ್ಷಸರು ಹೊರಟು ಹೋದ ನಂತರ ಅಲ್ಲಿ ಆ ಪಾಂಡವರು ಶಾಂತರಾಗಿ ವಾಸಿಸುತ್ತಿರುವಾಗ ಒಂದು ದಿನ ಭೀಮಸೇನನು ಇಲ್ಲದಿರುವಾಗ ಓರ್ವ ರಾಕ್ಷಸನು ಧರ್ಮರಾಜನನ್ನು, ನಕುಲ-ಸಹದೇವರನ್ನು ಮತ್ತು ಕೃಷ್ಣೆಯನ್ನು ಅಪಹರಿಸಿಕೊಂಡು ಹೋದನು.
03154003a ಬ್ರಾಹ್ಮಣೋ ಮಂತ್ರಕುಶಲಃ ಸರ್ವಾಸ್ತ್ರೇಷ್ವಸ್ತ್ರವಿತ್ತಮಃ।
03154003c ಇತಿ ಬ್ರುವನ್ಪಾಂಡಡವೇಯಾನ್ಪರ್ಯುಪಾಸ್ತೇ ಸ್ಮ ನಿತ್ಯದಾ।।
ಅವನು ತಾನೋರ್ವ ಮಂತ್ರ ಕುಶಲ, ಶಸ್ತ್ರ ಅಶ್ವಸ್ತ್ರ ವಿತ್ತಮ ಬ್ರಾಹ್ಮಣನೆಂದು ಹೇಳಿಕೊಂಡು ಪಾಂಡವರನ್ನು ನಿತ್ಯವೂ ಸುತ್ತುವರೆದುಕೊಂಡು ಇರುತ್ತಿದ್ದನು.
03154004a ಪರೀಕ್ಷಮಾಣಃ ಪಾರ್ಥಾನಾಂ ಕಲಾಪಾನಿ ಧನೂಂಷಿ ಚ।
03154004c ಅಂತರಂ ಸಮಭಿಪ್ರೇಪ್ಸುರ್ನಾಮ್ನಾ ಖ್ಯಾತೋ ಜಟಾಸುರಃ।।
ಆ ಜಟಾಸುರನೆಂಬ ವಿಖ್ಯಾತನು ಪಾರ್ಥನ ಧನುಸ್ಸು ಮತ್ತು ಬತ್ತಳಿಕೆಗಳನ್ನು ಪರೀಕ್ಷಿಸುವ ಅವಕಾಶವನ್ನು ಹುಡುಕುತ್ತಿದ್ದನು.
03154005a ಸ ಭೀಮಸೇನೇ ನಿಷ್ಕ್ರಾಂತೇ ಮೃಗಯಾರ್ಥಮರಿಂದಮೇ।
03154005c ಅನ್ಯದ್ರೂಪಂ ಸಮಾಸ್ಥಾಯ ವಿಕೃತಂ ಭೈರವಂ ಮಹತ್।।
03154006a ಗೃಹೀತ್ವಾ ಸರ್ವಶಸ್ತ್ರಾಣಿ ದ್ರೌಪದೀಂ ಪರಿಗೃಹ್ಯ ಚ।
03154006c ಪ್ರಾತಿಷ್ಠತ ಸ ದುಷ್ಟಾತ್ಮಾ ತ್ರೀನ್ಗೃಹೀತ್ವಾ ಚ ಪಾಂಡವಾನ್।।
ಅರಿಂದಮ ಭೀಮಸೇನನು ಬೇಟೆಗೆಂದು ಹೋಗಿದ್ದಾಗ, ಆ ದುಷ್ಟಾತ್ಮ ರಾಕ್ಷಸನು ತನ್ನ ಬೇರೆಯದಾದ ವಿಕೃತ ಮಹಾ ಭೈರವ ರೂಪವನ್ನು ಧರಿಸಿ ಸರ್ವ ಶಸ್ತ್ರಗಳನ್ನು ಹಿಡಿದು, ದ್ರೌಪದಿಯನ್ನೂ ಮೂವರು ಪಾಂಡವರನ್ನೂ ಎತ್ತಿಕೊಂಡು ಹೋದನು.
03154007a ಸಹದೇವಸ್ತು ಯತ್ನೇನ ತತೋಽಪಕ್ರಮ್ಯ ಪಾಂಡವಃ।
03154007c ಆಕ್ರಂದದ್ಭೀಮಸೇನಂ ವೈ ಯೇನ ಯಾತೋ ಮಹಾಬಲಃ।।
ಆದರೆ ಪಾಂಡವ ಸಹದೇವನು ಮಾತ್ರ ಯತ್ನದಿಂದ ತಪ್ಪಿಸಿಕೊಂಡು ಭೀಮಸೇನನನ್ನು ಕರೆಯುತ್ತಾ ಆ ಮಹಾಬಲನು ಹೋದ ದಾರಿಯಲ್ಲಿಯೇ ಹೋದನು.
03154008a ತಮಬ್ರವೀದ್ಧರ್ಮರಾಜೋ ಹ್ರಿಯಮಾಣೋ ಯುಧಿಷ್ಠಿರಃ।
03154008c ಧರ್ಮಸ್ತೇ ಹೀಯತೇ ಮೂಢ ನ ಚೈನಂ ಸಮವೇಕ್ಷಸೇ।।
ಎತ್ತಿಕೊಂಡು ಹೋಗುತ್ತಿರುವಾಗ ಧರ್ಮರಾಜ ಯುಧಿಷ್ಠಿರನು ಅವನಿಗೆ ಹೇಳಿದನು: “ಮೂಢ! ನಿನ್ನ ಧರ್ಮವು ಕ್ಷೀಣಿಸುತ್ತಾ ಬಂದಿದೆಯಾದರೂ ಅದನ್ನು ನೀನು ಗಮನಿಸುತ್ತಿಲ್ಲ!
03154009a ಯೇಽನ್ಯೇ ಕೇ ಚಿನ್ಮನುಷ್ಯೇಷು ತಿರ್ಯಗ್ಯೋನಿಗತಾ ಅಪಿ।
03154009c ಗಂಧರ್ವಯಕ್ಷರಕ್ಷಾಂಸಿ ವಯಾಂಸಿ ಪಶವಸ್ತಥಾ।।
03154009e ಮನುಷ್ಯಾನುಪಜೀವಂತಿ ತತಸ್ತ್ವಮುಪಜೀವಸಿ।।
ಮನುಷ್ಯರೂ ಮತ್ತು ಇತರ ಯೋನಿಗಳಲ್ಲಿ ಜನಿಸಿದ ಅನ್ಯರೂ ಕೂಡ - ಗಂಧರ್ವರು, ಯಕ್ಷರು, ರಾಕ್ಷಸರು, ಪಕ್ಷಿ ಪ್ರಾಣಿಗಳು ಮನುಷ್ಯರನ್ನು ಅವಲಂಬಿಸಿ ಜೀವಿಸುತ್ತಾರೆ. ಅವರಂತೆ ನೀನೂ ಕೂಡ ಉಪಜೀವನ ಮಾಡುತ್ತೀಯೆ!
03154010a ಸಮೃದ್ಧ್ಯಾ ಹ್ಯಸ್ಯ ಲೋಕಸ್ಯ ಲೋಕೋ ಯುಷ್ಮಾಕಮೃಧ್ಯತೇ।
03154010c ಇಮಂ ಚ ಲೋಕಂ ಶೋಚಂತಮನುಶೋಚಂತಿ ದೇವತಾಃ।।
03154010e ಪೂಜ್ಯಮಾನಾಶ್ಚ ವರ್ಧಂತೇ ಹವ್ಯಕವ್ಯೈರ್ಯಥಾವಿಧಿ।।
ನಮ್ಮ ಈ ಲೋಕವು ಸಮೃದ್ಧವಾಗಿದ್ದರೆ ನಿನ್ನ ಲೋಕವೂ ವೃದ್ಧಿಹೊಂದುತ್ತದೆ. ಈ ಲೋಕವು ಶೋಕದಿಂದಿದ್ದರೆ ದೇವತೆಗಳು ಶೋಕಿಸುತ್ತಾರೆ. ಯಾಕೆಂದರೆ ಅವರು ಯಥಾವಿಧಿಯಾಗಿ ನಡೆಯುವ ಪೂಜೆ ಮತ್ತು ಹವ್ಯಕವ್ಯಗಳ ಮೂಲಕ ವೃದ್ಧಿ ಹೊಂದುತ್ತಾರೆ.
03154011a ವಯಂ ರಾಷ್ಟ್ರಸ್ಯ ಗೋಪ್ತಾರೋ ರಕ್ಷಿತಾರಶ್ಚ ರಾಕ್ಷಸ।
03154011c ರಾಷ್ಟ್ರಸ್ಯಾರಕ್ಷ್ಯಮಾಣಸ್ಯ ಕುತೋ ಭೂತಿಃ ಕುತಃ ಸುಖಂ।।
ರಾಕ್ಷಸ! ನಾವು ರಾಷ್ಟ್ರವನ್ನು ಕಾಯುವವರು ಮತ್ತು ರಕ್ಷಕರು. ರಾಷ್ಟ್ರದ ರಕ್ಷಣೆಯೇ ಇಲ್ಲವೆಂದಾದರೆ ಎಲ್ಲಿಯ ಅಭಿವೃದ್ಧಿ ಮತ್ತು ಹೇಗಿನ ಸುಖ!
03154012a ನ ಚ ರಾಜಾವಮಂತವ್ಯೋ ರಕ್ಷಸಾ ಜಾತ್ವನಾಗಸಿ।
03154012c ಅಣುರಪ್ಯಪಚಾರಶ್ಚ ನಾಸ್ತ್ಯಸ್ಮಾಕಂ ನರಾಶನ।।
ನರಾಶನ! ತಪ್ಪಿಲ್ಲದ ರಾಜನನ್ನು ರಾಕ್ಷಸನು ಹಳಿಯಬಾರದು. ನಾವು ಅಣುವಿನಷ್ಟೂ ಏನೂ ತಪ್ಪನ್ನು ಮಾಡಿಲ್ಲ.
03154013a ದ್ರೋಗ್ಧವ್ಯಂ ನ ಚ ಮಿತ್ರೇಷು ನ ವಿಶ್ವಸ್ತೇಷು ಕರ್ಹಿ ಚಿತ್।
03154013c ಯೇಷಾಂ ಚಾನ್ನಾನಿ ಭುಂಜೀತ ಯತ್ರ ಚ ಸ್ಯಾತ್ಪ್ರತಿಶ್ರಯಃ।।
ಸ್ನೇಹ ಮತ್ತು ವಿಶ್ವಾಸದಿಂದಿದ್ದವರನ್ನು, ಯಾರ ಅನ್ನವನ್ನು ಉಂಡಿದ್ದೇವೋ ಮತ್ತು ಯಾರ ಆಶ್ರಯದಲ್ಲಿದ್ದೆವೋ ಅಂಥವರಿಗೆ ಎಂದೂ ಆಪತ್ತನ್ನು ತರಬಾರದು.
03154014a ಸ ತ್ವಂ ಪ್ರತಿಶ್ರಯೇಽಸ್ಮಾಕಂ ಪೂಜ್ಯಮಾನಃ ಸುಖೋಷಿತಃ।
03154014c ಭುಕ್ತ್ವಾ ಚಾನ್ನಾನಿ ದುಷ್ಪ್ರಜ್ಞ ಕಥಮಸ್ಮಾಂ ಜಿಹೀರ್ಷಸಿ।।
ನೀನು ನಮ್ಮೊಡನೆ ಉಳಿದುಕೊಂಡಿದ್ದೆ, ನಮ್ಮ ಗೌರವವನ್ನು ಪಡೆದು ನೀನು ಸುಖವಾಗಿ ವಾಸಿಸುತ್ತಿದ್ದೆ. ದುಷ್ಪ್ರಜ್ಞ! ನಮ್ಮ ಅನ್ನವನ್ನೇ ತಿಂದ ನೀನು ನಮ್ಮನ್ನು ಏಕೆ ಅಪಹರಿಸಿಕೊಂಡು ಹೋಗುತ್ತಿರುವೆ?
03154015a ಏವಮೇವ ವೃಥಾಚಾರೋ ವೃಥಾವೃದ್ಧೋ ವೃಥಾಮತಿಃ।
03154015c ವೃಥಾಮರಣಮರ್ಹಸ್ತ್ವಂ ವೃಥಾದ್ಯ ನ ಭವಿಷ್ಯಸಿ।।
ನಿನ್ನ ಆಚಾರವು ಸುಳ್ಳು. ನಿನ್ನ ವಯಸ್ಸು ಸುಳ್ಳು. ನಿನ್ನ ಬುದ್ಧಿಯೂ ಸುಳ್ಳು! ಆದರೆ ಇಂದು ನಿನಗೆ ದೊರಕುವ ಮರಣವು ಸುಳ್ಳಾಗುವುದಿಲ್ಲ!
03154016a ಅಥ ಚೇದ್ದುಷ್ಟಬುದ್ಧಿಸ್ತ್ವಂ ಸರ್ವೈರ್ಧರ್ಮೈರ್ವಿವರ್ಜಿತಃ।
03154016c ಪ್ರದಾಯ ಶಸ್ತ್ರಾಣ್ಯಸ್ಮಾಕಂ ಯುದ್ಧೇನ ದ್ರೌಪದೀಂ ಹರ।।
03154017a ಅಥ ಚೇತ್ತ್ವಮವಿಜ್ಞಾಯ ಇದಂ ಕರ್ಮ ಕರಿಷ್ಯಸಿ।
03154017c ಅಧರ್ಮಂ ಚಾಪ್ಯಕೀರ್ತಿಂ ಚ ಲೋಕೇ ಪ್ರಾಪ್ಸ್ಯಸಿ ಕೇವಲಂ।।
ನೀನು ದುಷ್ಟಬುದ್ಧಿಯವನೂ ಸರ್ವಧರ್ಮಗಳನ್ನು ಬಿಟ್ಟವನೂ ಆಗಿದ್ದರೆ ಈಗ ನಮ್ಮ ಅಸ್ತ್ರಗಳನ್ನು ಕೊಟ್ಟು ಯುದ್ಧದಲ್ಲಿ ದ್ರೌಪದಿಯನ್ನು ಪಡೆ. ಆದರೆ ನೀನು ಅಜ್ಞಾನದಿಂದ ಇದೇ ಕೆಲಸವನ್ನು ಮಾಡುತ್ತೀಯಾದರೆ ಅಧರ್ಮವನ್ನು ಮಾಡಿದವರು ಪಡೆಯುವ ತುಚ್ಛ ಲೋಕವನ್ನು ಹೊಂದುತ್ತೀಯೆ.
03154018a ಏತಾಮದ್ಯ ಪರಾಮೃಶ್ಯ ಸ್ತ್ರಿಯಂ ರಾಕ್ಷಸ ಮಾನುಷೀಂ।
03154018c ವಿಷಮೇತತ್ಸಮಾಲೋಡ್ಯ ಕುಂಭೇನ ಪ್ರಾಶಿತಂ ತ್ವಯಾ।।
ರಾಕ್ಷಸ! ಇಂದು ನೀನು ಮನುಷ್ಯ ಸ್ತ್ರೀಯನ್ನು ಎತ್ತಿಕೊಂಡು ಕುಂಭದಲ್ಲಿರುವ ವಿಷವನ್ನು ಕದಡಿ ಕುಡಿದಿದ್ದೀಯೆ!”
03154019a ತತೋ ಯುಧಿಷ್ಠಿರಸ್ತಸ್ಯ ಭಾರಿಕಃ ಸಮಪದ್ಯತ।
03154019c ಸ ತು ಭಾರಾಭಿಭೂತಾತ್ಮಾ ನ ತಥಾ ಶೀಘ್ರಗೋಽಭವತ್।।
03154020a ಅಥಾಬ್ರವೀದ್ದ್ರೌಪದೀಂ ಚ ನಕುಲಂ ಚ ಯುಧಿಷ್ಠಿರಃ।
ಆಗ ಯುಧಿಷ್ಠಿರನು ತನ್ನ ಭಾರದಿಂದ ಅವನನ್ನು ಒತ್ತಲು ಅವನ ಭಾರದಿಂದ ಆ ಭೂತಾತ್ಮನು ಶೀಘ್ರವಾಗಿ ಹೋಗಲು ಸಾಧ್ಯವಾಗಲಿಲ್ಲ. ಆಗ ಯುಧಿಷ್ಠಿರನು ದ್ರೌಪದಿ ಮತ್ತು ನಕುಲರಿಗೆ ಹೇಳಿದನು:
03154020c ಮಾ ಭೈಷ್ಟ ರಾಕ್ಷಸಾನ್ಮೂಢಾದ್ಗತಿರಸ್ಯ ಮಯಾ ಹೃತಾ।।
03154021a ನಾತಿದೂರೇ ಮಹಾಬಾಹುರ್ಭವಿತಾ ಪವನಾತ್ಮಜಃ।
03154021c ಅಸ್ಮಿನ್ಮುಹೂರ್ತೇ ಸಂಪ್ರಾಪ್ತೇ ನ ಭವಿಷ್ಯತಿ ರಾಕ್ಷಸಃ।।
“ಮೂಢ ರಾಕ್ಷಸರಿಂದ ಭಯಪಡಬೇಡಿ! ಅವನ ಓಟವನ್ನು ಸ್ಥಗಿತಗೊಳಿಸಿದ್ದೇನೆ. ಮಹಾಬಾಹು ಪವನಾತ್ಮಜನು ತುಂಬಾ ದೂರದಲ್ಲಿ ಇರಲಿಕ್ಕಿಲ್ಲ. ಸ್ವಲ್ಪವೇ ಸಮಯದಲ್ಲಿ ಅವನು ಬಂದರೆ ಈ ರಾಕ್ಷಸನು ಉಳಿಯುವುದಿಲ್ಲ.”
03154022a ಸಹದೇವಸ್ತು ತಂ ದೃಷ್ಟ್ವಾ ರಾಕ್ಷಸಂ ಮೂಢಚೇತಸಂ।
03154022c ಉವಾಚ ವಚನಂ ರಾಜನ್ಕುಂತೀಪುತ್ರಂ ಯುಧಿಷ್ಠಿರಂ।।
ಆ ಮೂಢಚೇತಸ ರಾಕ್ಷಸನನ್ನು ನೋಡಿ ಸಹದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು:
03154023a ರಾಜನ್ಕಿಂ ನಾಮ ತತ್ಕೃತ್ಯಂ ಕ್ಷತ್ರಿಯಸ್ಯಾಸ್ತ್ಯತೋಽಧಿಕಂ।
03154023c ಯದ್ಯುದ್ಧೇಽಭಿಮುಖಃ ಪ್ರಾಣಾಂಸ್ತ್ಯಜೇಚ್ಛತ್ರೂಂ ಜಯೇತ ವಾ।।
“ರಾಜನ್! ಯುದ್ಧದಲ್ಲಿ ಇವನನ್ನು ಎದುರಿಸಿ ಪ್ರಾಣವನ್ನು ತ್ಯಜಿಸುವುದರಿಂದ ಅಥವಾ ಶತ್ರುವನ್ನು ಜಯಿಸುವುದರಿಂದ ದೊರೆಯುವಷ್ಟು ತೃಪ್ತಿಯು ಕ್ಷತ್ರಿಯನಿಗೆ ಇನ್ನ್ಯಾವುದರಿಂದ ದೊರೆಯುತ್ತದೆ?
03154024a ಏಷ ಚಾಸ್ಮಾನ್ವಯಂ ಚೈನಂ ಯುಧ್ಯಮಾನಾಃ ಪರಂತಪ।
03154024c ಸೂದಯೇಮ ಮಹಾಬಾಹೋ ದೇಶಕಾಲೋ ಹ್ಯಯಂ ನೃಪ।।
ಪರಂತಪ! ಯುದ್ಧಮಾಡಿ ನಾವು ಇವನನ್ನು ಮುಗಿಸಬಹುದು ಅಥವಾ ಇವನೇ ನಮ್ಮನ್ನು ಮುಗಿಸಬಹುದು. ಮಹಾಬಾಹು ನೃಪ! ಇದೇ ನಮಗೆ ಒದಗಿಬಂದಿರುವ ಸ್ಥಳ ಮತ್ತು ಅವಕಾಶ!
03154025a ಕ್ಷತ್ರಧರ್ಮಸ್ಯ ಸಂಪ್ರಾಪ್ತಃ ಕಾಲಃ ಸತ್ಯಪರಾಕ್ರಮ।
03154025c ಜಯಂತಃ ಪಾತ್ಯಮಾನಾ ವಾ ಪ್ರಾಪ್ತುಮರ್ಹಾಮ ಸದ್ಗತಿಂ।।
ಸತ್ಯಪರಾಕ್ರಮ! ಕ್ಷತ್ರಧರ್ಮವನ್ನು ಪಾಲಿಸುವ ಕಾಲವು ಒದಗಿಬಂದಿದೆ. ಜಯಿಸಿದರೆ ಅಥವಾ ಮಡಿದರೆ ನಮಗೆ ಸದ್ಗತಿಯು ಪ್ರಾಪ್ತವಾಗುತ್ತದೆ.
03154026a ರಾಕ್ಷಸೇ ಜೀವಮಾನೇಽದ್ಯ ರವಿರಸ್ತಮಿಯಾದ್ಯದಿ।
03154026c ನಾಹಂ ಬ್ರೂಯಾಂ ಪುನರ್ಜಾತು ಕ್ಷತ್ರಿಯೋಽಸ್ಮೀತಿ ಭಾರತ।।
ಭಾರತ! ಇಂದು ಸೂರ್ಯನು ಮುಳುಗುವಾಗಲೂ ಈ ರಾಕ್ಷಸನು ಜೀವಿತನಾಗಿದ್ದರೆ ಇನ್ನು ಎಂದೂ ನನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳಲಾರೆ!
03154027a ಭೋ ಭೋ ರಾಕ್ಷಸ ತಿಷ್ಠಸ್ವ ಸಹದೇವೋಽಸ್ಮಿ ಪಾಂಡವಃ।
03154027c ಹತ್ವಾ ವಾ ಮಾಂ ನಯಸ್ವೈನಾನ್ ಹತೋ ವಾದ್ಯೇಹ ಸ್ವಪ್ಸ್ಯಸಿ।।
ಭೋ! ಭೋ! ರಾಕ್ಷಸ! ನಿಲ್ಲು! ನಾನು ಪಾಂಡವ ಸಹದೇವ! ನನ್ನನ್ನು ಕೊಂದು ಅವರನ್ನು ಎತ್ತಿಕೊಂಡು ಹೋಗು ಅಥವಾ ನನ್ನಿಂದ ಮರಣ ಹೊಂದು.”
03154028a ತಥೈವ ತಸ್ಮಿನ್ಬ್ರುವತಿ ಭೀಮಸೇನೋ ಯದೃಚ್ಚಯಾ।
03154028c ಪ್ರಾದೃಶ್ಯತ ಮಹಾಬಾಹುಃ ಸವಜ್ರ ಇವ ವಾಸವಃ।।
ಅವನು ಹೀಗೆ ಹೇಳುತ್ತಿರಲು ಅಕಸ್ಮಾತ್ತಾಗಿ ಮಹಾಬಾಹು ಭೀಮಸೇನನು ವಜ್ರಧಾರಿ ವಾಸವನಂತೆ ಅಲ್ಲಿ ಕಂಡುಬಂದನು.
03154029a ಸೋಽಪಶ್ಯದ್ಭ್ರಾತರೌ ತತ್ರ ದ್ರೌಪದೀಂ ಚ ಯಶಸ್ವಿನೀಂ।
03154029c ಕ್ಷಿತಿಸ್ಥಂ ಸಹದೇವಂ ಚ ಕ್ಷಿಪಂತಂ ರಾಕ್ಷಸಂ ತದಾ।।
03154030a ಮಾರ್ಗಾಚ್ಚ ರಾಕ್ಷಸಂ ಮೂಢಂ ಕಾಲೋಪಹತಚೇತಸಂ।
03154030c ಭ್ರಮಂತಂ ತತ್ರ ತತ್ರೈವ ದೈವೇನ ವಿನಿವಾರಿತಂ।।
ಅವನು ತನ್ನ ಈರ್ವರು ಸಹೋದರರನ್ನೂ ಯಶಸ್ವಿನೀ ದ್ರೌಪದಿಯನ್ನೂ, ಭೂಮಿಯ ಮೇಲೆ ನಿಂತಿರುವ ಸಹದೇವನನ್ನೂ ಮತ್ತು ಕಾಲವಶನಾಗಿ ಬುದ್ಧಿಯನ್ನು ಕಳೆದುಕೊಂಡು ಅಲ್ಲಲ್ಲಿ ತಿರುಗುತ್ತಿರಲು ದೈವದಿಂದ ತಡೆಹಿಡಿಯಲ್ಪಟ್ಟು ಮಾರ್ಗದ ಎದುರು ನಿಂತಿರುವ ಮೂಢ ರಾಕ್ಷಸನನ್ನೂ ನೋಡಿದನು.
03154031a ಭ್ರಾತೄಂಸ್ತಾನ್ ಹ್ರಿಯತೋ ದೃಷ್ಟ್ವಾ ದ್ರೌಪದೀಂ ಚ ಮಹಾಬಲಃ।
03154031c ಕ್ರೋಧಮಾಹಾರಯದ್ಭೀಮೋ ರಾಕ್ಷಸಂ ಚೇದಮಬ್ರವೀತ್।।
ದ್ರೌಪದಿಯನ್ನೂ ಸಹೋದರರನ್ನು ಅಪಹರಿಸಿಕೊಂಡು ಹೋಗುತ್ತಿರುವುದನ್ನು ನೋಡಿದ ಮಹಾಬಲ ಭೀಮನು ಕ್ರೋಧಮೂರ್ಛಿತನಾಗಿ ರಾಕ್ಷಸನಿಗೆ ಹೇಳಿದನು:
03154032a ವಿಜ್ಞಾತೋಽಸಿ ಮಯಾ ಪೂರ್ವಂ ಚೇಷ್ಟಂ ಶಸ್ತ್ರಪರೀಕ್ಷಣೇ।
03154032c ಆಸ್ಥಾ ತು ತ್ವಯಿ ಮೇ ನಾಸ್ತಿ ಯತೋಽಸಿ ನ ಹತಸ್ತದಾ।।
03154032e ಬ್ರಹ್ಮರೂಪಪ್ರತಿಚ್ಚನ್ನೋ ನ ನೋ ವದಸಿ ಚಾಪ್ರಿಯಂ।।
“ನಮ್ಮ ಶಸ್ತ್ರಗಳನ್ನು ನೀನು ಪರೀಕ್ಷಿಸುತ್ತಿರುವಾಗ ಮೊದಲೇ ನಿನ್ನನ್ನು ಅರ್ಥಮಾಡಿಕೊಂಡಿದ್ದೆ! ಆದರೆ ನಿನ್ನ ಕುರಿತು ನನಗೆ ಅಷ್ಟು ಆಸಕ್ತಿಯಿಲ್ಲದೇ ಇದ್ದುದರಿಂದ ಆಗಲೇ ನಿನ್ನನ್ನು ಕೊಲ್ಲಲಿಲ್ಲ. ಬ್ರಾಹ್ಮಣ ರೂಪದ ಹಿಂದೆ ಅಡಗಿಕೊಂಡಿದ್ದ ನೀನು ನಮಗೆ ಅಪ್ರಿಯ ಮಾತುಗಳನ್ನೆಂದೂ ಆಡಿರಲಿಲ್ಲ.
03154033a ಪ್ರಿಯೇಷು ಚರಮಾಣಂ ತ್ವಾಂ ನ ಚೈವಾಪ್ರಿಯಕಾರಿಣಂ।
03154033c ಅತಿಥಿಂ ಬ್ರಹ್ಮರೂಪಂ ಚ ಕಥಂ ಹನ್ಯಾಮನಾಗಸಂ।।
03154033e ರಾಕ್ಷಸಂ ಮನ್ಯಮಾನೋಽಪಿ ಯೋ ಹನ್ಯಾನ್ನರಕಂ ವ್ರಜೇತ್।।
ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಎಂದೂ ಅಪ್ರಿಯ ಕೆಲಸಗಳನ್ನು ಮಾಡದೇ ಇದ್ದ ಬ್ರಾಹ್ಮಣ ರೂಪದಲ್ಲಿ ಅತಿಥಿಯಾಗಿದ್ದ ತಪ್ಪನ್ನೇ ಮಾಡದಿದ್ದ ನಿನ್ನನ್ನು ಹೇಗೆ ತಾನೇ ನಾನು ಕೊಲ್ಲುತ್ತಿದ್ದೆ? ನೀನೊಬ್ಬ ರಾಕ್ಷಸನೆಂದು ತಿಳಿದೂ ನಿನ್ನನ್ನು ಸಂಹರಿಸಿದವನು ನರಕವನ್ನು ಸೇರುತ್ತಿದ್ದ!
03154034a ಅಪಕ್ವಸ್ಯ ಚ ಕಾಲೇನ ವಧಸ್ತವ ನ ವಿದ್ಯತೇ।
03154034c ನೂನಮದ್ಯಾಸಿ ಸಂಪಕ್ವೋ ಯಥಾ ತೇ ಮತಿರೀದೃಶೀ।।
03154034e ದತ್ತಾ ಕೃಷ್ಣಾಪಹರಣೇ ಕಾಲೇನಾದ್ಭುತಕರ್ಮಣಾ।।
ನಿನ್ನ ವಧೆಯ ಕಾಲವು ಒದಗಿ ಬಂದಿರಲಿಲ್ಲವೆಂದು ತೋರುತ್ತದೆ. ಆದರೆ ಇಂದು ನಿನ್ನದೇ ಬುದ್ಧಿ ಕಾರ್ಯದಿಂದ ಅಧ್ಭುತಕರ್ಮಿ ಕಾಲವು ಕೃಷ್ಣೆಯ ಅಪಹರಣದ ಮೂಲಕ ಅದನ್ನು ಒದಗಿಸಿ ಕೊಟ್ಟಿದೆ.
03154035a ಬಡಿಶೋಽಯಂ ತ್ವಯಾ ಗ್ರಸ್ತಃ ಕಾಲಸೂತ್ರೇಣ ಲಂಬಿತಃ।
03154035c ಮತ್ಸ್ಯೋಽಂಭಸೀವ ಸ್ಯೂತಾಸ್ಯಃ ಕಥಂ ಮೇಽದ್ಯ ಗಮಿಷ್ಯಸಿ।।
ನೀರಿನಲ್ಲಿರುವ ಮೀನಿನ ಬಾಯಿಯು ಕೊಕ್ಕೆಗೆ ಹೇಗಿ ಸಿಲುಕಿಕೊಳ್ಳುತ್ತದೆಯೋ ಹಾಗೆ ಇಂದು ಕಾಲವೆಂಬ ದಾರದಲ್ಲಿ ಜೋತು ಬಿದ್ದಿರುವ ಕೊಕ್ಕೆಗೆ ನೀನು ಸಿಲುಕಿ ಬಿಟ್ಟಿದ್ದೀಯೆ! ಇಂದು ನನ್ನಿಂದ ಹೇಗೆ ಬಿಡುಗಡೆ ಹೊಂದುತ್ತೀಯೆ?
03154036a ಯಂ ಚಾಸಿ ಪ್ರಸ್ಥಿತೋ ದೇಶಂ ಮನಃ ಪೂರ್ವಂ ಗತಂ ಚ ತೇ।
03154036c ನ ತಂ ಗಂತಾಸಿ ಗಂತಾಸಿ ಮಾರ್ಗಂ ಬಕಹಿಡಿಂಬಯೋಃ।।
ಎಲ್ಲಿಂದ ನೀನು ಬಂದಿದ್ದೀಯೋ ಮತ್ತು ಎಲ್ಲಿಗೆ ಹೋಗಲು ಬಯಸುತ್ತೀಯೋ ಅಲ್ಲಿಗೆ ಇಂದು ನೀನು ಹೋಗದೇ ಬಕ ಮತ್ತು ಹಿಡಿಂಬರು ಹೋದ ದಾರಿಯಲ್ಲಿಯೇ ಹೋಗುತ್ತೀಯೆ!”
03154037a ಏವಮುಕ್ತಸ್ತು ಭೀಮೇನ ರಾಕ್ಷಸಃ ಕಾಲಚೋದಿತಃ।
03154037c ಭೀತ ಉತ್ಸೃಜ್ಯ ತಾನ್ಸರ್ವಾನ್ಯುದ್ಧಾಯ ಸಮುಪಸ್ಥಿತಃ।।
ಭೀಮನು ಹೀಗೆ ಹೇಳಲು ಕಾಲಚೋದಿತ ರಾಕ್ಷಸನು ಭಯಗೊಂಡು ಅವರೆಲ್ಲರನ್ನೂ ಬಿಸುಟು ಯುದ್ಧಕ್ಕೆ ಅಣಿಯಾಗಿ ನಿಂತನು.
03154038a ಅಬ್ರವೀಚ್ಚ ಪುನರ್ಭೀಮಂ ರೋಷಾತ್ ಪ್ರಸ್ಫುರಿತಾಧರಃ।
03154038c ನ ಮೇ ಮೂಢಾ ದಿಶಃ ಪಾಪ ತ್ವದರ್ಥಂ ಮೇ ವಿಲಂಬನಂ।।
ರೋಷದಿಂದ ಅವನ ಕೆಳಬಾಹುವು ಕಂಪಿಸುತ್ತಿರಲು ಭೀಮನಿಗೆ ತಿರುಗಿ ಹೇಳಿದನು: “ಮೂಢ! ನಾನೇನೂ ದಿಕ್ಕು ತಪ್ಪಿ ಹೋಗುತ್ತಿರಲಿಲ್ಲ. ನಿನಗೋಸ್ಕರವೇ ಕಾಯುತ್ತಿದ್ದೆ!
03154039a ಶ್ರುತಾ ಮೇ ರಾಕ್ಷಸಾ ಯೇ ಯೇ ತ್ವಯಾ ವಿನಿಹತಾ ರಣೇ।
03154039c ತೇಷಾಮದ್ಯ ಕರಿಷ್ಯಾಮಿ ತವಾಸ್ರೇಣೋದಕಕ್ರಿಯಾಂ।।
ರಣದಲ್ಲಿ ನಿನ್ನಿಂದ ಯಾವ ಯಾವ ರಾಕ್ಷಸರು ಹತರಾದರೋ ಅವರ ಕುರಿತು ಕೇಳಿದ್ದೇನೆ. ನಿನ್ನ ರಕ್ತದಿಂದ ಇಂದು ಅವರಿಗೆ ಉದಕ ಕ್ರಿಯೆಯನ್ನು ಮಾಡುತ್ತೇನೆ.”
03154040a ಏವಮುಕ್ತಸ್ತತೋ ಭೀಮಃ ಸೃಕ್ಕಿಣೀ ಪರಿಸಂಲಿಹನ್।
03154040c ಸ್ಮಯಮಾನ ಇವ ಕ್ರೋಧಾತ್ಸಾಕ್ಷಾತ್ಕಾಲಾಂತಕೋಪಮಃ।।
ಹೀಗೆ ಹೇಳಲು ಭೀಮನು ನಾಲಿಗೆಯಿಂದ ತನ್ನ ಬಾಯಿಯ ತುದಿಯನ್ನು ನೆಕ್ಕಿ ಸಾಕ್ಷಾತ್ ಕಾಲಾಂತಕನಂತೆ ಕ್ರೋಧದಿಂದ ರಾಕ್ಷಸನೊಂದಿಗೆ ಬಾಹುಯುದ್ಧಕ್ಕೆ ಮುನ್ನುಗ್ಗಿದನು.
03154040e ಬಾಹುಸಂರಂಭಮೇವೇಚ್ಚನ್ನಭಿದುದ್ರಾವ ರಾಕ್ಷಸಂ।।
03154041a ರಾಕ್ಷಸೋಽಪಿ ತದಾ ಭೀಮಂ ಯುದ್ಧಾರ್ಥಿನಮವಸ್ಥಿತಂ।
ಆಗ ರಾಕ್ಷಸನೂ ಕೂಡ ಯುದ್ಧಕ್ಕೆ ಅಣಿಯಾಗಿ ನಿಂತಿದ್ದ ಭೀಮನೆಡೆಗೆ ವಜ್ರಧರನೆಡೆಗೆ ಬಲನು ಹೇಗೋ ಹಾಗೆ ಮುನ್ನುಗ್ಗಿದನು.
03154041c ಅಭಿದುದ್ರಾವ ಸಂರಬ್ಧೋ ಬಲೋ ವಜ್ರಧರಂ ಯಥಾ।।
03154042a ವರ್ತಮಾನೇ ತದಾ ತಾಭ್ಯಾಂ ಬಾಹುಯುದ್ಧೇ ಸುದಾರುಣೇ।
03154042c ಮಾದ್ರೀಪುತ್ರಾವಭಿಕ್ರುದ್ಧಾವುಭಾವಪ್ಯಭ್ಯಧಾವತಾಂ।।
ಆಗ ಅವರಿಬ್ಬರ ದಾರುಣ ಬಾಹುಯುದ್ಧವು ಪ್ರಾರಂಭವಾಯಿತು. ಇಬ್ಬರು ಮಾದ್ರೀ ಪುತ್ರರೂ ಕೋಪದಿಂದ ಮುನ್ನುಗ್ಗಲು ಕುಂತೀಪುತ್ರ ವೃಕೋದರನು ನಗುತ್ತಾ ಅವರನ್ನು ತಡೆದು ಹೇಳಿದನು:
03154043a ನ್ಯವಾರಯತ್ತೌ ಪ್ರಹಸನ್ಕುಂತೀಪುತ್ರೋ ವೃಕೋದರಃ।
03154043c ಶಕ್ತೋಽಹಂ ರಾಕ್ಷಸಸ್ಯೇತಿ ಪ್ರೇಕ್ಷಧ್ವಮಿತಿ ಚಾಬ್ರವೀತ್।।
03154044a ಆತ್ಮನಾ ಭ್ರಾತೃಭಿಶ್ಚಾಹಂ ಧರ್ಮೇಣ ಸುಕೃತೇನ ಚ।
03154044c ಇಷ್ಟೇನ ಚ ಶಪೇ ರಾಜನ್ಸೂದಯಿಷ್ಯಾಮಿ ರಾಕ್ಷಸಂ।।
“ನಾನು ಈ ರಾಕ್ಷಸನನ್ನು ಕೊಲ್ಲಲು ಶಕ್ತನಾಗಿದ್ದೇನೆ. ಸುಮ್ಮನೇ ನೋಡುತ್ತಿರಿ! ರಾಜನ್! ಸ್ವತಃ ನನ್ನಿಂದ, ನನ್ನ ಭ್ರಾತೃಗಳಿಂದ ಮಾಡಿದ ಧರ್ಮಕಾರ್ಯಗಳಿಂದ, ಯಾಗಗಳಿಂದ, ಈ ರಾಕ್ಷಸನನ್ನು ಸಂಹರಿಸುತ್ತೇನೆ. ಇದು ನನ್ನ ಪ್ರತಿಜ್ಞೆ!”
03154045a ಇತ್ಯೇವಮುಕ್ತ್ವಾ ತೌ ವೀರೌ ಸ್ಪರ್ಧಮಾನೌ ಪರಸ್ಪರಂ।
03154045c ಬಾಹುಭಿಃ ಸಮಸಜ್ಜೇತಾಮುಭೌ ರಕ್ಷೋವೃಕೋದರೌ।।
ಹೀಗೆ ಹೇಳಲು ಆ ವೀರ ರಾಕ್ಷಸ ವೃಕೋದರರಿಬ್ಬರೂ ಪರಸ್ಪರರೊಡನೆ ಸ್ಪರ್ಧಿಸುತ್ತಾ ಬಾಹುಗಳಿಂದ ಹೊಡೆದಾಡಿದರು.
03154046a ತಯೋರಾಸೀತ್ಸಂಪ್ರಹಾರಃ ಕ್ರುದ್ಧಯೋರ್ಭೀಮರಕ್ಷಸೋಃ।
03154046c ಅಮೃಷ್ಯಮಾಣಯೋಃ ಸಂಖ್ಯೇ ದೇವದಾನವಯೋರಿವ।।
ಕೃದ್ಧರಾದ ಆ ಭೀಮ-ರಾಕ್ಷಸರು ದೇವದಾನವರಂತೆ ಒಬ್ಬರಿಂದೊಬ್ಬರು ಬಹಳಷ್ಟು ಹೊಡೆದಾಡಿದರು.
03154047a ಆರುಜ್ಯಾರುಜ್ಯ ತೌ ವೃಕ್ಷಾನನ್ಯೋನ್ಯಮಭಿಜಘ್ನತುಃ।
03154047c ಜೀಮೂತಾವಿವ ಘರ್ಮಾಂತೇ ವಿನದಂತೌ ಮಹಾಬಲೌ।।
ಅವರಿಬ್ಬರೂ ಮರಗಳನ್ನು ಕೀಳುತ್ತಾ ಅನ್ಯೋನ್ಯರನ್ನು ಹೊಡೆದರು ಮತ್ತು ಆ ಮಹಾಬಲಶಾಲಿಗಳು ನಾನು ಗೆದ್ದೆ ನಾನು ಗೆದ್ದೆ ಎಂದು ಜೋರಾಗಿ ಕೂಗಾಡಿಕೊಂಡರು.
03154048a ಬಭಂಜತುರ್ಮಹಾವೃಕ್ಷಾನೂರುಭಿರ್ಬಲಿನಾಂ ವರೌ।
03154048c ಅನ್ಯೋನ್ಯೇನಾಭಿಸಂರಬ್ಧೌ ಪರಸ್ಪರಜಯೈಷಿಣೌ।।
ಬಲಶಾಲಿಗಳಲ್ಲಿಯೇ ಶ್ರೇಷ್ಠರಾದ ಅವರಿಬ್ಬರೂ ತಮ್ಮ ತಮ್ಮ ತೊಡೆಗಳಿಂದ ಮಹಾವೃಕ್ಷಗಳನ್ನು ಕಿತ್ತು ಪರಸ್ಪರ ಜಯವನ್ನು ಬಯಸಿ ಅನ್ಯೋನ್ಯರನ್ನು ಹೊಡೆಯುತ್ತಿದ್ದರು.
03154049a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ।
03154049c ವಾಲಿಸುಗ್ರೀವಯೋರ್ಭ್ರಾತ್ರೋಃ ಪುರೇವ ಕಪಿಸಿಂಹಯೋಃ।।
ಆ ಯುದ್ಧದಲ್ಲಿ ಕೀಳಲ್ಪಟ್ಟು ಬಹಳಷ್ಟ್ರು ವೃಕ್ಷಗಳು ನಾಶಗೊಂಡವು. ಹಿಂದೆ ಕಪಿಸಿಂಹ ಸಹೋದರ ವಾಲಿ-ಸುಗ್ರೀವರ ನಡುವೆ ನಡೆದ ಯುದ್ಧದಂತೆ ತೋರಿಬಂದಿತು.
03154050a ಆವಿಧ್ಯಾವಿಧ್ಯ ತೌ ವೃಕ್ಷಾನ್ಮುಹೂರ್ತಮಿತರೇತರಂ।
03154050c ತಾಡಯಾಮಾಸತುರುಭೌ ವಿನದಂತೌ ಮುಹುರ್ಮುಹುಃ।।
03154051a ತಸ್ಮಿನ್ದೇಶೇ ಯದಾ ವೃಕ್ಷಾಃ ಸರ್ವ ಏವ ನಿಪಾತಿತಾಃ।
03154051c ಪುಂಜೀಕೃತಾಶ್ಚ ಶತಶಃ ಪರಸ್ಪರವಧೇಪ್ಸಯಾ।।
03154052a ತದಾ ಶಿಲಾಃ ಸಮಾದಾಯ ಮುಹೂರ್ತಮಿವ ಭಾರತ।
03154052c ಮಹಾಭ್ರೈರಿವ ಶೈಲೇಂದ್ರೌ ಯುಯುಧಾತೇ ಮಹಾಬಲೌ।।
03154053a ಉಗ್ರಾಭಿರುಗ್ರರೂಪಾಭಿರ್ಬೃಹತೀಭಿಃ ಪರಸ್ಪರಂ।
03154053c ವಜ್ರೈರಿವ ಮಹಾವೇಗೈರಾಜಘ್ನತುರಮರ್ಷಣೌ।।
ಭಾರತ! ಪರಸ್ಪರರನ್ನು ಕೊಲ್ಲುವ ಉದ್ದೇಶದಿಂದ ಆ ಪ್ರದೇಶದಲ್ಲಿದ್ದ ಎಲ್ಲ ಮರಗಳನ್ನು ಬೀಳಿಸಿ, ನೂರಾರು ಸಂಖ್ಯೆಗಳಲ್ಲಿ ಗುಂಪುಮಾಡಿಯಾದ ನಂತರ ಆ ಮಹಾಬಲಶಾಲಿಗಳಿಬ್ಬರೂ ಸ್ವಲ್ಪ ಸಮಯ ಕಲ್ಲುಬಂಡೆಗಳನ್ನು ಎತ್ತಿಕೊಂಡು ದೊಡ್ಡ ಮೋಡಗಳಿಂದ ಆವೃತವಾದ ಪರ್ವತಗಳಂತೆ ಯುದ್ಧಮಾಡಿದರು. ಉಗ್ರವಾಗಿ ತೋರುದ್ದಿದ್ದ ಆ ಕಲ್ಲುಬಂಡೆಗಳನ್ನು ದಯೆತೋರಿಸದೇ ಪರಸ್ಪರರ ಮೇಲೆ ಬೀಸಾಡಿದರು. ಆಕಾಶದಲ್ಲಿ ಮಿಂಚಿನಂತೆ ಆ ಮಹಾವೇಗದಲ್ಲಿ ಹಾರುತ್ತಿದ್ದ ಬಂಡೆಗಲ್ಲುಗಳು ಕಂಡುಬಂದವು.
03154054a ಅಭಿಹತ್ಯ ಚ ಭೂಯಸ್ತಾವನ್ಯೋನ್ಯಂ ಬಲದರ್ಪಿತೌ।
03154054c ಭುಜಾಭ್ಯಾಂ ಪರಿಗೃಹ್ಯಾಥ ಚಕರ್ಷಾತೇ ಗಜಾವಿವ।।
ಆ ಬಲದರ್ಪಿತರಿಬ್ಬರೂ ಅನ್ಯೋನ್ಯರ ಭುಜಗಳನ್ನು ಹಿಡಿದು ಆನೆಗಳಂತೆ ಎಳೆದಾಡಿದರು.
03154055a ಮುಷ್ಟಿಭಿಶ್ಚ ಮಹಾಘೋರೈರನ್ಯೋನ್ಯಮಭಿಪೇತತುಃ।
03154055c ತಯೋಶ್ಚಟಚಟಾಶಬ್ದೋ ಬಭೂವ ಸುಮಹಾತ್ಮನೋಃ।।
ಆ ಮಹಾಘೋರರೀರ್ವರೂ ಮುಷ್ಟಿಗಳಿಂದ ಅನ್ಯೋನ್ಯರನ್ನು ಹೊಡೆಯುತ್ತಿರಲು ಆ ಮಹಾತ್ಮರ ಮಧ್ಯೆ ಚಟ ಚಟ ಎನ್ನುವ ಶಬ್ಧವು ಕೇಳಿಬಂದಿತು.
03154056a ತತಃ ಸಂಹೃತ್ಯ ಮುಷ್ಟಿಂ ತು ಪಂಚಶೀರ್ಷಮಿವೋರಗಂ।
03154056c ವೇಗೇನಾಭ್ಯಹನದ್ಭೀಮೋ ರಾಕ್ಷಸಸ್ಯ ಶಿರೋಧರಾಂ।।
ಐದುಹೆಡೆಯ ಸರ್ಪದಂತಿದ್ದ ತನ್ನ ಮುಷ್ಟಿಯನ್ನು ಬಿಗಿದು ಆ ರಾಕ್ಷಸನ ತಲೆಯಮೇಲೆ ವೇಗದಿಂದ ಗುದ್ದಿದನು.
03154057a ತತಃ ಶ್ರಾಂತಂ ತು ತದ್ರಕ್ಷೋ ಭೀಮಸೇನಭುಜಾಹತಂ।
03154057c ಸುಪರಿಶ್ರಾಂತಮಾಲಕ್ಷ್ಯ ಭೀಮಸೇನೋಽಭ್ಯವರ್ತತ।।
ಅವನ ಪೆಟ್ಟನ್ನು ತಿಂದು ಆ ರಾಕ್ಷಸನು ತಲೆತಿರುಗಿ ಆಯಾಸಗೊಂಡಿದ್ದುದನ್ನು ನೋಡಿದ ಭೀಮಸೇನನು ಅವನ ಮೇಲೆರಗಿದನು.
03154058a ತತ ಏನಂ ಮಹಾಬಾಹುರ್ಬಾಹುಭ್ಯಾಮಮರೋಪಮಃ।
03154058c ಸಮುತ್ಕ್ಷಿಪ್ಯ ಬಲಾದ್ಭೀಮೋ ನಿಷ್ಪಿಪೇಷ ಮಹೀತಲೇ।।
ಅಮರೋಪಮ ಮಹಾಬಾಹು ಭೀಮನು ಅವನನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಗಟ್ಟಿಯಾಗಿ ನೆಲಕ್ಕೆ ಅಪ್ಪಳಿಸಿದನು.
03154059a ತಸ್ಯ ಗಾತ್ರಾಣಿ ಸರ್ವಾಣಿ ಚೂರ್ಣಯಾಮಾಸ ಪಾಂಡವಃ।
03154059c ಅರತ್ನಿನಾ ಚಾಭಿಹತ್ಯ ಶಿರಃ ಕಾಯಾದಪಾಹರತ್।।
ಆಗ ಪಾಂಡವನು ಅವನ ದೇಹದ ಸರ್ವಾಂಗಗಳನ್ನೂ ಒತ್ತಿ ತನ್ನ ತೋಳಿನಿಂದ ಅವನ ಶಿರವನ್ನು ದೇಹದಿಂದ ತುಂಡುಮಾಡಿದನು.
03154060a ಸಂದಷ್ಟೋಷ್ಠಂ ವಿವೃತ್ತಾಕ್ಷಂ ಫಲಂ ವೃಂತಾದಿವ ಚ್ಯುತಂ।
03154060c ಜಟಾಸುರಸ್ಯ ತು ಶಿರೋ ಭೀಮಸೇನಬಲಾದ್ಧೃತಂ।।
03154060e ಪಪಾತ ರುಧಿರಾದಿಗ್ಧಂ ಸಂದಷ್ಟದಶನಚ್ಚದಂ।।
ಭೀಮಸೇನನ ಅದ್ಭುತ ಬಲಕ್ಕೆ ಸಿಲುಕಿ ತುಟಿಗಳು ಸೀಳಿಹೋದ, ಕಣ್ಣುಗಳು ಮೇಲೆದ್ದ, ಹಲ್ಲುಗಳನ್ನು ಕಚ್ಚಿದ್ದ ಆ ಜಟಾಸುರನ ಶಿರಸ್ಸು ರಕ್ತದಿಂದ ತೋಯ್ದು, ಮರದಿಂದ ಬೀಳುವ ಹಣ್ಣಿನಂತೆ ಕೆಳಕ್ಕೆ ಬಿದ್ದಿತು.
03154061a ತಂ ನಿಹತ್ಯ ಮಹೇಷ್ವಾಸೋ ಯುಧಿಷ್ಠಿರಮುಪಾಗಮತ್।
03154061c ಸ್ತೂಯಮಾನೋ ದ್ವಿಜಾಗ್ರ್ಯೈಸ್ತೈರ್ಮರುದ್ಭಿರಿವ ವಾಸವಃ।।
ಅವನನ್ನು ಸಂಹರಿಸಿದ ಆ ಮಹೇಷ್ವಾಸನು, ವಾಸವನನ್ನು ಅಮರರು ಹೇಗೋ ಹಾಗೆ ದ್ವಿಜಶ್ರೇಷ್ಠರು ಪ್ರಶಂಸಿಸುತ್ತಿರಲು, ಯುಧಿಷ್ಠಿರನ ಬಳಿ ಬಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ವನಪರ್ವಣಿ ಜಟಾಸುರವಧಪರ್ವಣಿ ಚತುಷ್ಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ವನಪರ್ವದಲ್ಲಿ ಜಟಾಸುರವಧಪರ್ವದಲ್ಲಿ ನೂರಾಐವತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ವನಪರ್ವಣಿ ಜಟಾಸುರವಧಪರ್ವಃ।
ಇದು ಮಹಾಭಾರತದ ವನಪರ್ವದಲ್ಲಿ ಜಟಾಸುರವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-34/100, ಅಧ್ಯಾಯಗಳು-451/1995, ಶ್ಲೋಕಗಳು-14792/73784.