153 ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 153

ಸಾರ

ಭಿರುಗಾಳಿ ಬೀಸಲು ಯುಧಿಷ್ಠಿರನು ಭೀಮನನ್ನು ಕಾಣದೇ ದ್ರೌಪದಿಯನ್ನು ಕೇಳಿದುದು (1-9). ದ್ರೌಪದಿಯಿಂದ ವಿಷಯವನ್ನು ತಿಳಿದ ಯುಧಿಷ್ಠಿರನು ಘಟೋತ್ಕಚನ ಸಹಾಯದಿಂದ ಭೀಮನಿದ್ದಲ್ಲಿಗೆ ಹೋಗಿ ರಾಕ್ಷಸರನ್ನು ಸಂತವಿಸಿದುದು (10-31).

03153001 ವೈಶಂಪಾಯನ ಉವಾಚ।
03153001a ತತಸ್ತಾನಿ ಮಹಾರ್ಹಾಣಿ ದಿವ್ಯಾನಿ ಭರತರ್ಷಭ।
03153001c ಬಹೂನಿ ಬಹುರೂಪಾಣಿ ವಿರಜಾಂಸಿ ಸಮಾದದೇ।।

ªÉʱÀವೈಶಂಪಾಯನನು ಹೇಳಿದನು: “ಅನಂತರ ಭರತರ್ಷಭನು ಆ ಮಹಾಮೌಲ್ಯದ, ಬಹುರೂಪಗಳ, ಧೂಳಿಲ್ಲದ ತುಂಬಾ ದಿವ್ಯ ಪುಷ್ಪಗಳನ್ನು ಒಟ್ಟುಮಾಡಿಕೊಂಡನು.

03153002a ತತೋ ವಾಯುರ್ಮಹಾಂ ಶೀಘ್ರೋ ನೀಚೈಃ ಶರ್ಕರಕರ್ಷಣಃ।
03153002c ಪ್ರಾದುರಾಸೀತ್ಖರಸ್ಪರ್ಶಃ ಸಂಗ್ರಾಮಮಭಿಚೋದಯನ್।।

ಆಗ ಶೀಘ್ರವಾಗಿ ಬೀಸುವ, ಧೂಳನ್ನು ಮೇಲಕ್ಕೆತ್ತಿ ಹಾಕುವ, ತಾಗಿದರೆ ಕೊರೆಯುವ, ಸಂಗ್ರಾಮದ ಸುಳಿವನ್ನು ಕೊಡುವ ಭಿರುಗಾಳಿಯು ಬೀಸತೊಡಗಿತು.

03153003a ಪಪಾತ ಮಹತೀ ಚೋಲ್ಕಾ ಸನಿರ್ಘಾತಾ ಮಹಾಪ್ರಭಾ।
03153003c ನಿಷ್ಪ್ರಭಶ್ಚಾಭವತ್ಸೂರ್ಯಶ್ಚನ್ನರಶ್ಮಿಸ್ತಮೋವೃತಃ।।

ಮಹಾಪ್ರಭೆಯುಳ್ಳ ಅತಿದೊಡ್ಡ ಉಲ್ಕೆಯೊಂದು ಆ ಭಿರುಗಾಳಿಯಲ್ಲಿ ಬಿದ್ದಿತು. ಅದರಿಂದಾಗಿ ಸೂರ್ಯನು ತನ್ನ ಪ್ರಭೆಯನ್ನು ಕಳೆದುಕೊಂಡನು ಮತ್ತು ಎಲ್ಲೆಡೆಯೂ ಕತ್ತಲೆಯು ಆವರಿಸಿತು.

03153004a ನಿರ್ಘಾತಶ್ಚಾಭವದ್ಭೀಮೋ ಭೀಮೇ ವಿಕ್ರಮಮಾಸ್ಥಿತೇ।
03153004c ಚಚಾಲ ಪೃಥಿವೀ ಚಾಪಿ ಪಾಂಸುವರ್ಷಂ ಪಪಾತ ಚ।।

ಭೀಮನು ಆ ವಿಕ್ರಮಕಾರ್ಯವನ್ನೆಸಗುತ್ತಿರಲು ಭಯಂಕರವಾದ ಸುಂಟರಗಾಳಿಯು ಬೀಸಿಬಂದು ಭೂಮಿಯನ್ನೇ ಅಡುಗಿಸಿತು ಮತ್ತು ಧೂಳಿನ ಮಳೆಯನ್ನು ಸುರಿಸಿತು.

03153005a ಸಲೋಹಿತಾ ದಿಶಶ್ಚಾಸನ್ಖರವಾಚೋ ಮೃಗದ್ವಿಜಾಃ।
03153005c ತಮೋವೃತಮಭೂತ್ಸರ್ವಂ ನ ಪ್ರಜ್ಞಾಯತ ಕಿಂ ಚನ।।

ಆಕಾಶವು ಕೆಂಪಾಯಿತು, ಮೃಗಪಕ್ಷಿಗಳು ಚೀರಾಡಿದವು, ಎಲ್ಲಕಡೆಯೂ ಕತ್ತಲೆಯು ಆವರಿಸಿತು ಮತ್ತು ಏನೂ ಕಾಣಿಸುತ್ತಿರಲಿಲ್ಲ.

03153006a ತದದ್ಭುತಮಭಿಪ್ರೇಕ್ಷ್ಯ ಧರ್ಮಪುತ್ರೋ ಯುಧಿಷ್ಠಿರಃ।
03153006c ಉವಾಚ ವದತಾಂ ಶ್ರೇಷ್ಠಃ ಕೋಽಸ್ಮಾನಭಿಭವಿಷ್ಯತಿ।।

ಆ ಅದ್ಭುತವನ್ನು ನೋಡಿ ಮಾತನಾಡುವವರಲ್ಲಿ ಶ್ರೇಷ್ಠ ಧರ್ಮಪುತ್ರ ಯುಧಿಷ್ಠಿರನು ಹೇಳಿದನು: “ಯಾರೋ ನಮ್ಮನ್ನು ಧಾಳಿಯಿಡುತ್ತಿದ್ದಾರೆ.

03153007a ಸಜ್ಜೀಭವತ ಭದ್ರಂ ವಃ ಪಾಂಡವಾ ಯುದ್ಧದುರ್ಮದಾಃ।
03153007c ಯಥಾರೂಪಾಣಿ ಪಶ್ಯಾಮಿ ಸ್ವಭ್ಯಗ್ರೋ ನಃ ಪರಾಕ್ರಮಃ।।

ಸುರಕ್ಷಿತರಾಗಿರಿ! ಯುದ್ಧದುರ್ಮದ ಪಾಂಡವರೇ! ಸಿದ್ಧರಾಗಿರಿ! ಕಾಣುತ್ತಿರುವುದನ್ನು ನೋಡಿದರೆ ಪರಾಕ್ರಮದಲ್ಲಿ ನಾವೇ ಮೇಲಾಗುತ್ತೇವೆ ಎಂದು ತೋರುತ್ತದೆ!”

03153008a ಏವಮುಕ್ತ್ವಾ ತತೋ ರಾಜಾ ವೀಕ್ಷಾಂ ಚಕ್ರೇ ಸಮಂತತಃ।
03153008c ಅಪಶ್ಯಮಾನೋ ಭೀಮಂ ಚ ಧರ್ಮರಾಜೋ ಯುಧಿಷ್ಠಿರಃ।।

ಹೀಗೆ ಹೇಳಿದ ರಾಜನು ಸುತ್ತಲೂ ನೋಡಿದನು. ಆಗ ಧರ್ಮರಾಜ ಯುಧಿಷ್ಠಿರನು ಭೀಮನನ್ನು ಕಾಣಲಿಲ್ಲ.

03153009a ತತ್ರ ಕೃಷ್ಣಾಂ ಯಮೌ ಚೈವ ಸಮೀಪಸ್ಥಾನರಿಂದಮಃ।
03153009c ಪಪ್ರಚ್ಚ ಭ್ರಾತರಂ ಭೀಮಂ ಭೀಮಕರ್ಮಾಣಮಾಹವೇ।।

ಆ ಅರಿಂದಮನು ಅಲ್ಲಿ ಹತ್ತಿರದಲ್ಲಿ ನಿಂತಿದ್ದ ಕೃಷ್ಣೆ ಮತ್ತು ಯಮಳರಲ್ಲಿ ತನ್ನ ತಮ್ಮ ಮಹಾಯುದ್ಧದಲ್ಲಿ ಭಯಂಕರವಾಗಿ ಹೋರಾಡುವ ಭೀಮನ ಕುರಿತು ಕೇಳಿದನು

03153010a ಕಚ್ಚಿನ್ನ ಭೀಮಃ ಪಾಂಚಾಲಿ ಕಿಂ ಚಿತ್ಕೃತ್ಯಂ ಚಿಕೀರ್ಷತಿ।
03153010c ಕೃತವಾನಪಿ ವಾ ವೀರಃ ಸಾಹಸಂ ಸಾಹಸಪ್ರಿಯಃ।।

“ಪಾಂಚಾಲೀ! ಭೀಮನು ಏನನ್ನಾದರೂ ಮಾಡಲು ಬಯಸಿದನೇ? ಅಥವಾ ಆ ಸಾಹಸಪ್ರಿಯ ವೀರನು ಏನಾದರೂ ಸಾಹಸಕೃತ್ಯವನ್ನು ಮಾಡಿದನೇ?

03153011a ಇಮೇ ಹ್ಯಕಸ್ಮಾದುತ್ಪಾತಾ ಮಹಾಸಮರದರ್ಶಿನಃ।
03153011c ದರ್ಶಯಂತೋ ಭಯಂ ತೀವ್ರಂ ಪ್ರಾದುರ್ಭೂತಾಃ ಸಮಂತತಃ।।

ಯಾಕೆಂದರೆ ಅಕಸ್ಮಾತ್ತಾಗಿ ಎಲ್ಲೆಡೆಯಲ್ಲಿಯೂ ಕಂಡುಬರುವ ತೀವ್ರ ಭಯವನ್ನುಂಟುಮಾಡುವ ಈ ಉತ್ಪಾತಗಳು ಮಹಾ ಸಮರವನ್ನು ಸೂಚಿಸುತ್ತವೆ.”

03153012a ತಂ ತಥಾ ವಾದಿನಂ ಕೃಷ್ಣಾ ಪ್ರತ್ಯುವಾಚ ಮನಸ್ವಿನೀ।
03153012c ಪ್ರಿಯಾ ಪ್ರಿಯಂ ಚಿಕೀರ್ಷಂತೀ ಮಹಿಷೀ ಚಾರುಹಾಸಿನೀ।।

ಆಗ ಮಾತನಾಡುವ ಮನಸ್ವಿನೀ ಪ್ರಿತಿಯ ರಾಣಿ, ಚಾರುಹಾಸಿನಿ ಕೃಷ್ಣೆಯು ತನ್ನ ಪ್ರಿಯನಿಗೆ ಸಂತೋಷಗೊಳಿಸಲು ಹೇಳಿದಳು:

03153013a ಯತ್ತತ್ಸೌಗಂಧಿಕಂ ರಾಜನ್ನಾಹೃತಂ ಮಾತರಿಶ್ವನಾ।
03153013c ತನ್ಮಯಾ ಭೀಮಸೇನಸ್ಯ ಪ್ರೀತಯಾದ್ಯೋಪಪಾದಿತಂ।।

“ರಾಜನ್! ಇಂದು ನನಗೆ ಸಂತೋಷವನ್ನು ನೀಡಿದ, ಗಾಳಿಯಲ್ಲಿ ತೇಲಿಬಂದ ಸೌಗಂಧಿಕಾ ಪುಷ್ಪಗಳನ್ನು ತರಲು ಭೀಮಸೇನನಿಗೆ ಒಪ್ಪಿಸಿದ್ದೆ.

03153014a ಅಪಿ ಚೋಕ್ತೋ ಮಯಾ ವೀರೋ ಯದಿ ಪಶ್ಯೇದ್ಬಹೂನ್ಯಪಿ।
03153014c ತಾನಿ ಸರ್ವಾಣ್ಯುಪಾದಾಯ ಶೀಘ್ರಮಾಗಮ್ಯತಾಮಿತಿ।।

ಒಂದು ವೇಳೆ ಅಂಥಹ ಪುಷ್ಪಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ಕಂಡರೆ ಶೀಘ್ರವಾಗಿ ಅವುಗಳೆಲ್ಲವನ್ನೂ ತರಲು ಆ ವೀರನಿಗೆ ಹೇಳಿದ್ದೆ.

03153015a ಸ ತು ನೂನಂ ಮಹಾಬಾಹುಃ ಪ್ರಿಯಾರ್ಥಂ ಮಮ ಪಾಂಡವಃ।
03153015c ಪ್ರಾಗುದೀಚೀಂ ದಿಶಂ ರಾಜಂಸ್ತಾನ್ಯಾಹರ್ತುಮಿತೋ ಗತಃ।।

ರಾಜನ್! ನನಗೆ ಪ್ರಿಯವಾದುದನ್ನು ಮಾಡಲು ಆ ಮಹಾಬಾಹು ಪಾಂಡವನು ಅವುಗಳನ್ನು ತರಲು ಈಶಾನ್ಯದಿಕ್ಕಿಗೆ ನಿಜವಾಗಿಯೂ ಹೋಗಿರಬಹುದು.”

03153016a ಉಕ್ತಸ್ತ್ವೇವಂ ತಯಾ ರಾಜಾ ಯಮಾವಿದಮಥಾಬ್ರವೀತ್।
03153016c ಗಚ್ಚಾಮ ಸಹಿತಾಸ್ತೂರ್ಣಂ ಯೇನ ಯಾತೋ ವೃಕೋದರಃ।।

ಅವಳ ಮಾತುಗಳನ್ನು ಕೇಳಿದೊಡನೆಯೇ ರಾಜನು ಯಮಳರಿಗೆ ಹೇಳಿದನು: “ಹಾಗಿದ್ದರೆ ನಾವು ಕೂಡಲೇ ವೃಕೋದರ ಭೀಮನು ಹೋದಲ್ಲಿಗೆ ಒಟ್ಟಿಗೇ ಹೋಗೋಣ.

03153017a ವಹಂತು ರಾಕ್ಷಸಾ ವಿಪ್ರಾನ್ಯಥಾಶ್ರಾಂತಾನ್ಯಥಾಕೃಶಾನ್।
03153017c ತ್ವಮಪ್ಯಮರಸಂಕಾಶ ವಹ ಕೃಷ್ಣಾಂ ಘಟೋತ್ಕಚ।।

ರಾಕ್ಷಸರು ಯಾರೆಲ್ಲ ಆಯಾಸಗೊಂಡಿದ್ದಾರೋ, ಕೃಶರಾಗಿದ್ದಾರೋ ಅಂಥಹ ಬ್ರಾಹ್ಮಣರನ್ನು ಹೊತ್ತುಕೊಂಡು ಹೋಗಲಿ, ಮತ್ತು ಘಟೋತ್ಕಚ, ಅಮರರಂತಿರುವ ನೀನು ಕೃಷ್ಣೆ ದ್ರೌಪದಿಯನ್ನು ಎತ್ತಿಕೊಂಡು ಹೋಗು.

03153018a ವ್ಯಕ್ತಂ ದೂರಮಿತೋ ಭೀಮಃ ಪ್ರವಿಷ್ಟ ಇತಿ ಮೇ ಮತಿಃ।
03153018c ಚಿರಂ ಚ ತಸ್ಯ ಕಾಲೋಽಯಂ ಸ ಚ ವಾಯುಸಮೋ ಜವೇ।।

ವೇಗದಲ್ಲಿ ವಾಯುವಿನ ಸಮನಾಗಿರುವ ಭೀಮನು ಹೋಗಿ ಬಹಳ ಸಮಯವಾಗಿರುವುದರಿಂದ ಖಂಡಿತವಾಗಿಯೂ ಅವನು ಬಹಳ ದೂರ ಹೋಗಿದ್ದಾನೆ ಎಂದು ನನಗನ್ನಿಸುತ್ತದೆ.

03153019a ತರಸ್ವೀ ವೈನತೇಯಸ್ಯ ಸದೃಶೋ ಭುವಿ ಲಂಘನೇ।
03153019c ಉತ್ಪತೇದಪಿ ಚಾಕಾಶಂ ನಿಪತೇಚ್ಚ ಯಥೇಚ್ಚಕಂ।।

ಅವನು ಭೂಮಿಯಲ್ಲಿ ಗರುಡನಂತೆ ಹಾರಿಹೋಗುತ್ತಾನೆ. ಅವನು ಆಕಾಶದಲ್ಲಿ ಹಾರಿ ಬೇಕಾದಲ್ಲಿ ಇಳಿಯುತ್ತಾನೆ.

03153020a ತಮನ್ವಿಯಾಮ ಭವತಾಂ ಪ್ರಭಾವಾದ್ರಜನೀಚರಾಃ।
03153020c ಪುರಾ ಸ ನಾಪರಾಧ್ನೋತಿ ಸಿದ್ಧಾನಾಂ ಬ್ರಹ್ಮವಾದಿನಾಂ।।

ರಜನೀಚರ ರಾಕ್ಷಸರೇ! ನಿಮ್ಮ ಪ್ರಭಾವದಿಂದ ನಾವು ಬ್ರಹ್ಮವಾದಿಗಳಾದ ಸಿದ್ಧರನ್ನು ಉಲ್ಲಂಘಿಸುವುದರ ಮೊದಲೇ ಅವನಿರುವಲ್ಲಿಗೆ ಹೋಗೋಣ.”

03153021a ತಥೇತ್ಯುಕ್ತ್ವಾ ತು ತೇ ಸರ್ವೇ ಹೈಡಿಂಬಪ್ರಮುಖಾಸ್ತದಾ।
03153021c ಉದ್ದೇಶಜ್ಞಾಃ ಕುಬೇರಸ್ಯ ನಲಿನ್ಯಾ ಭರತರ್ಷಭ।।
03153022a ಆದಾಯ ಪಾಂಡವಾಂಶ್ಚೈವ ತಾಂಶ್ಚ ವಿಪ್ರಾನನೇಕಶಃ।
03153022c ಲೋಮಶೇನೈವ ಸಹಿತಾಃ ಪ್ರಯಯುಃ ಪ್ರೀತಮಾನಸಾಃ।।

ಅವರೆಲ್ಲರೂ “ಹಾಗೆಯೇ ಆಗಲಿ” ಎಂದರು. ಭರತರ್ಷಭ! ಹೈಡಿಂಬಿ ಘಟೋತ್ಕಚನ ನಾಯಕತ್ವದಲ್ಲಿ ಕುಬೇರನ ಸರೋವರವಿರುವ ಸ್ಥಳವನ್ನು ಅರಿತಿದ್ದ ಆ ರಾಕ್ಷಸರು ಪಾಂಡವರನ್ನೂ, ಲೋಮಹರ್ಷಣನೊಂದಿಗೆ ಇತರ ಅನೇಕ ಬ್ರಾಹ್ಮಣರನ್ನೂ ಎತ್ತಿಕೊಂಡು ಸಂತೋಷದಿಂದ ಹೊರಟರು.

03153023a ತೇ ಗತ್ವಾ ಸಹಿತಾಃ ಸರ್ವೇ ದದೃಶುಸ್ತತ್ರ ಕಾನನೇ।
03153023c ಪ್ರಫುಲ್ಲಪಮ್ಕಜವತೀಂ ನಲಿನೀಂ ಸುಮನೋಹರಾಂ।।

ಹೀಗೆ ಎಲ್ಲರೂ ಒಟ್ಟಿಗೇ ಹೋಗಿ ಅಲ್ಲಿ ಕಾಡಿನಲ್ಲಿ ಅರಳುತ್ತಿರುವ ಕಮಲಗಳಿಂದ ತುಂಬಿದ್ದ ಸುಮನೋಹರ ಸರೋವರವನ್ನು ಕಂಡರು.

03153024a ತಂ ಚ ಭೀಮಂ ಮಹಾತ್ಮಾನಂ ತಸ್ಯಾಸ್ತೀರೇ ವ್ಯವಸ್ಥಿತಂ।
03153024c ದದೃಶುರ್ನಿಹತಾಂಶ್ಚೈವ ಯಕ್ಷಾನ್ಸುವಿಪುಲೇಕ್ಷಣಾನ್।।

ಅಲ್ಲಿ ಅವರು ಸರೋವರದ ತೀರದ ಮೇಲೆ ನಿಂತಿರುವ ಮಹಾತ್ಮ ಭೀಮನನ್ನು ಮತ್ತು ಅವನಿಂದ ನಿಹತರಾದ ತೆರದ ಕಣ್ಣುಗಳ ಯಕ್ಷರನ್ನೂ ಕಂಡರು.

03153025a ಉದ್ಯಮ್ಯ ಚ ಗದಾಂ ದೋರ್ಭ್ಯಾಂ ನದೀತೀರೇ ವ್ಯವಸ್ಥಿತಂ।
03153025c ಪ್ರಜಾಸಂಕ್ಷೇಪಸಮಯೇ ದಂಡಹಸ್ತಮಿವಾಂತಕಂ।।

ಪ್ರಜೆಗಳನ್ನು ನಾಶಗೊಳಿಸುವ ಸಮಯದಲ್ಲಿ ಅಂತಕ ಯಮನು ತನ್ನ ದಂಡವನ್ನು ಹೇಗೋ ಹಾಗೆ ಗದೆಯನ್ನು ಎತ್ತಿ ಹಿಡಿದು ನದೀತೀರದಲ್ಲಿ ನಿಂತಿದ್ದ ಭೀಮನನ್ನು ಕಂಡರು.

03153026a ತಂ ದೃಷ್ಟ್ವಾ ಧರ್ಮರಾಜಸ್ತು ಪರಿಷ್ವಜ್ಯ ಪುನಃ ಪುನಃ।
03153026c ಉವಾಚ ಶ್ಲಕ್ಷ್ಣಯಾ ವಾಚಾ ಕೌಂತೇಯ ಕಿಮಿದಂ ಕೃತಂ।।

ಅವನನ್ನು ಕಂಡ ಧರ್ಮರಾಜನು ಪುನಃ ಪುನಃ ಅವನನ್ನು ಆಲಂಗಿಸಿದನು ಮತ್ತು ಮೃದುವಾದ ಮಾತುಗಳಲ್ಲಿ ಕೇಳಿದನು: “ಕೌಂತೇಯ! ಇದೇನು ಮಾಡಿದೆ?

03153027a ಸಾಹಸಂ ಬತ ಭದ್ರಂ ತೇ ದೇವಾನಾಮಪಿ ಚಾಪ್ರಿಯಂ।
03153027c ಪುನರೇವಂ ನ ಕರ್ತವ್ಯಂ ಮಮ ಚೇದಿಚ್ಚಸಿ ಪ್ರಿಯಂ।।

ದೇವರಿಗೆ ಅಪ್ರಿಯವಾದ ಈ ಸಾಹಸವನ್ನೇಕೆ ಮಾಡಿದೆ? ನನಗೆ ಸಂತೋಷವಾದುದನ್ನು ಮಾಡಲು ಬಯಸುವೆಯಾದರೆ ಇಂತಹ ಕಾರ್ಯವನ್ನು ಪುನಃ ಮಾಡಬೇಡ!”

03153028a ಅನುಶಾಸ್ಯ ಚ ಕೌಂತೇಯಂ ಪದ್ಮಾನಿ ಪ್ರತಿಗೃಃಯ ಚ।
03153028c ತಸ್ಯಾಮೇವ ನಲಿನ್ಯಾಂ ತೇ ವಿಜಹ್ರುರಮರೋಪಮಾಃ।।

ಈ ರೀತಿ ಕೌಂತೇಯನನ್ನು ನಿಯಂತ್ರಿಸಿ ಅವರು ಪದ್ಮಗಳನ್ನು ಒಟ್ಟುಗೂಡಿಸಿಕೊಂಡು ಆ ಸರೋವರದಲ್ಲಿ ಅಮರರಂತೆ ವಿಹರಿಸಿದರು.

03153029a ಏತಸ್ಮಿನ್ನೇವ ಕಾಲೇ ತು ಪ್ರಗೃಹೀತಶಿಲಾಯುಧಾಃ।
03153029c ಪ್ರಾದುರಾಸನ್ಮಹಾಕಾಯಾಸ್ತಸ್ಯೋದ್ಯಾನಸ್ಯ ರಕ್ಷಿಣಃ।।

ಅದೇ ಸಮಯದಲ್ಲಿ ಆ ಉದ್ಯಾನವನದ ರಕ್ಷಣೆಯಲ್ಲಿದ್ದ ಮಹಾಕಾಯರು ಶಿಲಾಯುಧಗಳನ್ನು ಹಿಡಿದು ಅಲ್ಲಿಗೆ ಆಗಮಿಸಿದರು.

03153030a ತೇ ದೃಷ್ಟ್ವಾ ಧರ್ಮರಾಜಾನಂ ದೇವರ್ಷಿಂ ಚಾಪಿ ಲೋಮಶಂ।
03153030c ನಕುಲಂ ಸಹದೇವಂ ಚ ತಥಾನ್ಯಾನ್ಬ್ರಾಹ್ಮಣರ್ಷಭಾನ್।।
03153030e ವಿನಯೇನಾನತಾಃ ಸರ್ವೇ ಪ್ರಣಿಪೇತುಶ್ಚ ಭಾರತ।

ಭಾರತ! ಧರ್ಮರಾಜನನ್ನು, ದೇವರ್ಷಿ ಲೋಮಶನನ್ನು, ನಕುಲ ಸಹದೇವರನ್ನು ಮತ್ತು ಇತರ ಬ್ರಾಹ್ಮಣರ್ಷಭರನ್ನು ಕಂಡು ಅವರೆಲ್ಲರೂ ವಿನಯದಿಂದ ತಲೆಬಾಗಿ ನಮಸ್ಕರಿಸಿದರು.

03153031a ಸಾಂತ್ವಿತಾ ಧರ್ಮರಾಜೇನ ಪ್ರಸೇದುಃ ಕ್ಷಣದಾಚರಾಃ।।
03153031c ವಿದಿತಾಶ್ಚ ಕುಬೇರಸ್ಯ ತತಸ್ತೇ ನರಪುಂಗವಾಃ।
03153031e ಊಷುರ್ನಾತಿಚಿರಂ ಕಾಲಂ ರಮಮಾಣಾಃ ಕುರೂದ್ವಹಾಃ।।

ಧರ್ಮರಾಜನು ಆ ರಾಕ್ಷಸರನ್ನು ಸಂತವಿಸಿದಾಗ ಅವರು ಶಾಂತರಾದರು. ಅನಂತರ ಆ ಕುರೂದ್ಧಹ ನರಪುಂಗವರು ಕುಬೇರನಿಗೆ ತಿಳಿದಿದ್ದಹಾಗೆ ಅಲ್ಲಿಯೇ ಕೆಲ ಸಮಯ ಉಳಿದು ರಮಿಸಿದರು1.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ತ್ರಿಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ಮೂರನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-33/100, ಅಧ್ಯಾಯಗಳು-450/1995, ಶ್ಲೋಕಗಳು-14731/73784.


  1. ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯದ ನಂತರದ ಇನ್ನೊಂದು ಅಧ್ಯಾಯದಲ್ಲಿ (ಅಧ್ಯಾಯ 156) ಅಶರೀರವಾಣಿಯಂತೆ ಪಾಂಡವರು ಪುನಃ ನರನಾರಾಯಣರ ಆಶ್ರಮಕ್ಕೆ ಹಿಂದಿರುಗಿದ ವಿಷಯವಿದೆ. ಪುಣೆಯ ಸಂಪುಟದಲ್ಲಿ ಇಲ್ಲದಿರುವ ಈ 21 ಶ್ಲೋಕಗಳನ್ನು ಅನುಬಂಧ 5ರಲ್ಲಿ ನೀಡಲಾಗಿದೆ. ↩︎