ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 152
ಸಾರ
ಭೀಮನಿಂದ ಸೋತ ರಾಕ್ಷಸರು ಹಿಂದೆಸರಿದುದು (1-20). ಕುಬೇರನು ಭೀಮನು ಬೇಕಾದಷ್ಟು ಪುಷ್ಪಗಳನ್ನು ಕೊಂಡೊಯ್ಯಲೆಂದು ಅನುಮತಿಯನ್ನು ನೀಡಿದುದು (21-25).
03152001 ಭೀಮ ಉವಾಚ।
03152001a ಪಾಂಡವೋ ಭೀಮಸೇನೋಽಹಂ ಧರ್ಮಪುತ್ರಾದನಂತರಃ।
03152001c ವಿಶಾಲಾಂ ಬದರೀಂ ಪ್ರಾಪ್ತೋ ಭ್ರಾತೃಭಿಃ ಸಹ ರಾಕ್ಷಸಾಃ।।
ಭೀಮನು ಹೇಳಿದನು: “ರಾಕ್ಷಸರೇ! ನಾನು ಪಾಂಡವ ಭೀಮಸೇನ. ಧರ್ಮಪುತ್ರನ ತಮ್ಮ. ಸಹೋದರರೊಂದಿಗೆ ವಿಶಾಲವಾದ ಬದರಿಗೆ ಬಂದಿದ್ದೇನೆ.
03152002a ಅಪಶ್ಯತ್ತತ್ರ ಪಂಚಾಲೀ ಸೌಗಂಧಿಕಮನುತ್ತಮಂ।
03152002c ಅನಿಲೋಢಮಿತೋ ನೂನಂ ಸಾ ಬಹೂನಿ ಪರೀಪ್ಸತಿ।।
ಅಲ್ಲಿ ಪಾಂಚಾಲೀ ದ್ರೌಪದಿಯು ಗಾಳಿಯಲ್ಲಿ ಬೀಸಿ ಬಂದ ಅನುತ್ತಮ ಸೌಗಂಧಿಕಾ ಪುಷ್ಪವನ್ನು ಕಂಡಳು. ತಕ್ಷಣವೇ ಅವಳು ಅಂಥಹ ಬಹಳಷ್ಟು ಪುಷ್ಪಗಳನ್ನು ಬಯಸಿದಳು.
03152003a ತಸ್ಯಾ ಮಾಮನವದ್ಯಾಂಗ್ಯಾ ಧರ್ಮಪತ್ನ್ಯಾಃ ಪ್ರಿಯೇ ಸ್ಥಿತಂ।
03152003c ಪುಷ್ಪಾಹಾರಮಿಹ ಪ್ರಾಪ್ತಂ ನಿಬೋಧತ ನಿಶಾಚರಾಃ।।
ನಿಶಾಚರರೇ! ನನ್ನ ಆ ಅನವದ್ಯಾಂಗೀ ಧರ್ಮಪತ್ನಿ ಪ್ರಿಯೆಗೋಸ್ಕರವಾಗಿ ಪುಷ್ಪಗಳನ್ನು ಕೊಂಡೊಯ್ಯಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಯಿರಿ.”
03152004 ರಾಕ್ಷಸಾ ಊಚುಃ।
03152004a ಆಕ್ರೀಡೋಽಯಂ ಕುಬೇರಸ್ಯ ದಯಿತಃ ಪುರುಷರ್ಷಭ।
03152004c ನೇಹ ಶಕ್ಯಂ ಮನುಷ್ಯೇಣ ವಿಹರ್ತುಂ ಮರ್ತ್ಯಧರ್ಮಿಣಾ।।
ರಾಕ್ಷಸರು ಹೇಳಿದರು: “ಪುರುಷರ್ಷಭ! ಇದು ಕುಬೇರನ ಅತೀ ಅಚ್ಚುಮೆಚ್ಚಿನ ಕ್ರೀಡಾಸ್ಥಳ. ಮೃತ್ಯುಧರ್ಮಿಗಳಾದ ಮನುಷ್ಯರು ಇಲ್ಲಿ ವಿಹರಿಸಲು ಶಕ್ಯವಿಲ್ಲ.
03152005a ದೇವರ್ಷಯಸ್ತಥಾ ಯಕ್ಷಾ ದೇವಾಶ್ಚಾತ್ರ ವೃಕೋದರ।
03152005c ಆಮಂತ್ರ್ಯ ಯಕ್ಷಪ್ರವರಂ ಪಿಬಂತಿ ವಿಹರಂತಿ ಚ।।
03152005e ಗಂಧರ್ವಾಪ್ಸರಸಶ್ಚೈವ ವಿಹರಂತ್ಯತ್ರ ಪಾಂಡವ।।
ವೃಕೋದರ! ದೇವರ್ಷಿಗಳೂ, ಯಕ್ಷರೂ, ದೇವತೆಗಳೂ, ಯಕ್ಷಪ್ರವರ ಕುಬೇರನ ಅನುಮತಿಯಿಂದ ಮಾತ್ರ ಇಲ್ಲಿಯ ನೀರನ್ನು ಕುಡಿಯಬಲ್ಲರು ಮತ್ತು ಇಲ್ಲಿ ವಿಹರಿಸಬಲ್ಲರು. ಪಾಂಡವ! ಹೀಗೆ ಗಂಧರ್ವ ಅಪ್ಸರೆಯರೂ ಇಲ್ಲಿ ವಿಹರಿಸುತ್ತಾರೆ.
03152006a ಅನ್ಯಾಯೇನೇಹ ಯಃ ಕಶ್ಚಿದವಮನ್ಯ ಧನೇಶ್ವರಂ।
03152006c ವಿಹರ್ತುಮಿಚ್ಚೇದ್ದುರ್ವೃತ್ತಃ ಸ ವಿನಶ್ಯೇದಸಂಶಯಂ।।
ಧನೇಶ್ವರನನ್ನು ಅಪಮಾನಿಸಿ ಇಲ್ಲಿ ಯಾರಾದರೂ ವಿಹರಿಸಲು ಬಯಸಿದರೆ ಆ ಕೆಟ್ಟ ಕೆಲಸವನ್ನು ಮಾಡುವವನು ವಿನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03152007a ತಮನಾದೃತ್ಯ ಪದ್ಮಾನಿ ಜಿಹೀರ್ಷಸಿ ಬಲಾದಿತಃ।
03152007c ಧರ್ಮರಾಜಸ್ಯ ಚಾತ್ಮಾನಂ ಬ್ರವೀಷಿ ಭ್ರಾತರಂ ಕಥಂ।।
ಅವನನ್ನು ತಿರಸ್ಕರಿಸಿ ಬಲಾತ್ಕಾರವಾಗಿ ಇಲ್ಲಿಂದ ಹೂವುಗಳನ್ನು ಅಪಹರಿಸಿಕೊಂಡು ಹೋಗಲು ಬಯಸುವ ನೀನು ಹೇಗೆ ತಾನೆ ಧರ್ಮರಾಜನ ತಮ್ಮನೆಂದು ಹೇಳಿಕೊಳ್ಳುತ್ತೀಯೆ?”
03152008 ಭೀಮ ಉವಾಚ।
03152008a ರಾಕ್ಷಸಾಸ್ತಂ ನ ಪಶ್ಯಾಮಿ ಧನೇಶ್ವರಮಿಹಾಂತಿಕೇ।
03152008c ದೃಷ್ಟ್ವಾಪಿ ಚ ಮಹಾರಾಜಂ ನಾಹಂ ಯಾಚಿತುಮುತ್ಸಹೇ।।
ಭೀಮನು ಹೇಳಿದನು: “ರಾಕ್ಷಸರೇ! ಇಲ್ಲಿ ಹತ್ತಿರದಲ್ಲಿ ಎಲ್ಲಿಯೂ ನಾನು ಧನೇಶ್ವರ ಕುಬೇರನನ್ನು ಕಾಣುತ್ತಿಲ್ಲ. ಒಂದು ವೇಳೆ ಅವನನ್ನು ನೋಡಿದರೂ ಆ ಮಹಾರಾಜನಲ್ಲಿ ಬೇಡುವ ಕಷ್ಟವನ್ನು ಮಾಡುವುದಿಲ್ಲ.
03152009a ನ ಹಿ ಯಾಚಂತಿ ರಾಜಾನ ಏಷ ಧರ್ಮಃ ಸನಾತನಃ।
03152009c ನ ಚಾಹಂ ಹಾತುಮಿಚ್ಚಾಮಿ ಕ್ಷಾತ್ರಧರ್ಮಂ ಕಥಂ ಚನ।।
ಯಾಕೆಂದರೆ ರಾಜರು ಬೇಡುವುದಿಲ್ಲ. ಇದೇ ಸನಾತನ ಧರ್ಮ. ಮತ್ತು ನಾನು ಆ ಕ್ಷಾತ್ರಧರ್ಮವನ್ನು ತೊರೆಯಲು ಎಂದೂ ಬಯಸುವುದಿಲ್ಲ.
03152010a ಇಯಂ ಚ ನಲಿನೀ ರಮ್ಯಾ ಜಾತಾ ಪರ್ವತನಿರ್ಝರೇ।
03152010c ನೇಯಂ ಭವನಮಾಸಾದ್ಯ ಕುಬೇರಸ್ಯ ಮಹಾತ್ಮನಃ।।
03152011a ತುಲ್ಯಾ ಹಿ ಸರ್ವಭೂತಾನಾಮಿಯಂ ವೈಶ್ರವಣಸ್ಯ ಚ।
03152011c ಏವಂಗತೇಷು ದ್ರವ್ಯೇಷು ಕಃ ಕಂ ಯಾಚಿತುಮರ್ಹತಿ।।
ಈ ರಮ್ಯ ಸರೋವರವು ಪರ್ವತಗಳ ಝರಿಗಳಿಂದ ಹುಟ್ಟಿದೆ ಮತ್ತು ಮಹಾತ್ಮ ಕುಬೇರನ ಪ್ರದೇಶಕ್ಕೆ ಸೇರಿಲ್ಲ. ವೈಶ್ರವಣ ಕುಬೇರನನ್ನೂ ಸೇರಿ ಸರ್ವರೂ ಇದಕ್ಕೆ ಸರಿಸಮನಾಗಿ ಒಡೆಯರೇ. ಹೀಗಿರುವಾಗ ಯಾರು ಯಾರಲ್ಲಿ ಏಕೆ ಬೇಡಬೇಕು?””
03152012 ವೈಶಂಪಾಯನ ಉವಾಚ।
03152012a ಇತ್ಯುಕ್ತ್ವಾ ರಾಕ್ಷಸಾನ್ಸರ್ವಾನ್ಭೀಮಸೇನೋ ವ್ಯಗಾಹತ।
03152012c ತತಃ ಸ ರಾಕ್ಷಸೈರ್ವಾಚಾ ಪ್ರತಿಷಿದ್ಧಃ ಪ್ರತಾಪವಾನ್।।
03152012e ಮಾ ಮೈವಮಿತಿ ಸಕ್ರೋಧೈರ್ಭರ್ತ್ಸಯದ್ಭಿಃ ಸಮಂತತಃ।।
ವೈಶಂಪಾಯನನು ಹೇಳಿದನು: “ಹೀಗೆ ಎಲ್ಲ ರಾಕ್ಷಸರಿಗೂ ಹೇಳಿ ಭೀಮಸೇನನು ಸರೋವರದಲ್ಲಿ ಧುಮುಕಿದನು. ಆಗ ರಾಕ್ಷಸರೆಲ್ಲರೂ ಸರೋವರವನ್ನು ಸುತ್ತುವರೆದು ಬೇಡ ಬೇಡ ಎಂದು ಸಿಟ್ಟಿನಿಂದ ಹೇಳುತ್ತಾ ಆ ಪ್ರತಾಪವಂತನನ್ನು ತಡೆದರು ಮತ್ತು ಬೈದರು.
03152013a ಕದರ್ಥೀಕೃತ್ಯ ತು ಸ ತಾನ್ರಾಕ್ಷಸಾನ್ಭೀಮವಿಕ್ರಮಃ।
03152013c ವ್ಯಗಾಹತ ಮಹಾತೇಜಾಸ್ತೇ ತಂ ಸರ್ವೇ ನ್ಯವಾರಯನ್।।
ಅವನನ್ನು ತಡೆಯುತ್ತಿರುವ ಆ ಎಲ್ಲ ರಾಕ್ಷಸರನ್ನು ಗಮನಿಸದೇ ಆ ಮಹಾತೇಜಸ್ವಿ ಭೀಮವಿಕ್ರಮನು ಸರೋವರದಲ್ಲಿಳಿದನು.
03152014a ಗೃಹ್ಣೀತ ಬಧ್ನೀತ ನಿಕೃಂತತೇಮಂ। ಪಚಾಮ ಖಾದಾಮ ಚ ಭೀಮಸೇನಂ।
03152014c ಕ್ರುದ್ಧಾ ಬ್ರುವಂತೋಽನುಯಯುರ್ದ್ರುತಂ ತೇ। ಶಸ್ತ್ರಾಣಿ ಚೋದ್ಯಮ್ಯ ವಿವೃತ್ತನೇತ್ರಾಃ।।
“ಅವನನ್ನು ಹಿಡಿಯಿರಿ, ಕಟ್ಟಿರಿ, ಕೊಲ್ಲಿರಿ! ಭೀಮಸೇನನನ್ನು ಅಡುಗೆಮಾಡಿ ತಿನ್ನೋಣ!” ಎಂದು ಕೂಗುತ್ತಾ ಕೃದ್ಧರಾದ ಅವರು, ಶಸ್ತ್ರಗಳನ್ನು ಮೇಲಕ್ಕೆತ್ತಿ ಕಣ್ಣುಗಳನ್ನು ತಿರುಗಿಸುತ್ತಾ ಅವನನ್ನು ಬೆನ್ನಟ್ಟಿದರು.
03152015a ತತಃ ಸ ಗುರ್ವೀಂ ಯಮದಂಡಕಲ್ಪಾಂ। ಮಹಾಗದಾಂ ಕಾಂಚನಪಟ್ಟನದ್ಧಾಂ।
03152015c ಪ್ರಗೃಹ್ಯ ತಾನಭ್ಯಪತತ್ತರಸ್ವೀ। ತತೋಽಬ್ರವೀತ್ತಿಷ್ಠತ ತಿಷ್ಠತೇತಿ।।
ಆಗ ಅವನು ತನ್ನ ಅತಿ ಭಾರವಾಗಿದ್ದ ಯಮದಂಡದಂತಿರುವ ಬಂಗಾರದ ಪಟ್ಟಿಯಿಂದ ಸುತ್ತಲ್ಪಟ್ಟ ಮಹಾ ಗದೆಯನ್ನು ಎತ್ತಿ ಹಿಡಿದನು. ನಿಲ್ಲಿ ನಿಲ್ಲಿ ಎಂದು ಕೂಗುತ್ತಾ ಆ ಸಿಟ್ಟಿಗೆದ್ದ ಬೀಮನು ಅವರ ಮೇಲೆರಗಿದನು.
03152016a ತೇ ತಂ ತದಾ ತೋಮರಪಟ್ಟಿಶಾದ್ಯೈರ್। ವ್ಯಾವಿಧ್ಯ ಶಸ್ತ್ರೈಃ ಸಹಸಾಭಿಪೇತುಃ।
03152016c ಜಿಘಾಂಸವಃ ಕ್ರೋಧವಶಾಃ ಸುಭೀಮಾ। ಭೀಮಂ ಸಮಂತಾತ್ಪರಿವವ್ರುರುಗ್ರಾಃ।।
ಆಗ ಅವರು ತಮ್ಮ ತೋಮರ ಪಟ್ಟಿಶಗಳಿಂದ ಒಂದೇ ಸಮನೆ ಅವನ ಮೇಲೆರಗಿದರು. ತುಂಬಾ ಭಯಂಕರರಾಗಿದ್ದ ಕ್ರೋಧವಶರು ಕೋಪದಿಂದ ಭೀಮನನ್ನು ಸುತ್ತುವರೆದರು.
03152017a ವಾತೇನ ಕುಂತ್ಯಾಂ ಬಲವಾನ್ಸ ಜಾತಃ। ಶೂರಸ್ತರಸ್ವೀ ದ್ವಿಷತಾಂ ನಿಹಂತಾ।
03152017c ಸತ್ಯೇ ಚ ಧರ್ಮೇ ಚ ರತಃ ಸದೈವ। ಪರಾಕ್ರಮೇ ಶತ್ರುಭಿರಪ್ರಧೃಷ್ಯಃ।।
ವಾಯುವಿನಿಂದ ಕುಂತಿಯಲ್ಲಿ ಜನಿಸಿದ, ವಿರೋಧಿಗಳನ್ನು ಸಂಹರಿಸಲು ಚಡಪಡಿಸುವ, ಸತ್ಯ ಮತ್ತು ಧರ್ಮಗಳಲ್ಲಿ ಸದಾ ನಿರತನಾಗಿದ್ದ ಆ ಬಲವಾನ ಶೂರನು ಪರಾಕ್ರಮದಿಂದ ಶತ್ರುಗಳ ದಾರಿಯನ್ನೇ ಕಡಿದನು.
03152018a ತೇಷಾಂ ಸ ಮಾರ್ಗಾನ್ವಿವಿಧಾನ್ಮಹಾತ್ಮಾ। ನಿಹತ್ಯ ಶಸ್ತ್ರಾಣಿ ಚ ಶಾತ್ರವಾಣಾಂ।
03152018c ಯಥಾಪ್ರವೀರಾನ್ನಿಜಘಾನ ವೀರಃ। ಪರಹ್ಶತಾನ್ಪುಷ್ಕರಿಣೀಸಮೀಪೇ।।
ಅವರ ಶಸ್ತ್ರಗಳನ್ನೇ ಮುರಿದು ಹಾಕಿ ಆ ಮಹಾತ್ಮರ ವಿವಿಧ ಮಾರ್ಗಗಳನ್ನೂ ತಡೆದು, ಸರೋವರದ ಸಮೀಪದಲ್ಲಿ ನೂರಕ್ಕೂ ಹೆಚ್ಚು ಪ್ರಮುಖರನ್ನು ಆ ವೀರನು ಸಂಹರಿಸಿದನು.
03152019a ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ। ವಿದ್ಯಾಬಲಂ ಬಾಹುಬಲಂ ತಥೈವ।
03152019c ಅಶಕ್ನುವಂತಃ ಸಹಿತಾಃ ಸಮಂತಾದ್। ಧತಪ್ರವೀರಾಃ ಸಹಸಾ ನಿವೃತ್ತಾಃ।।
ಆಗ ಅವನ ವೀರ್ಯ ಮತ್ತು ಬಲವನ್ನು, ಹಾಗೆಯೇ ವಿದ್ಯಾಬಲ ಮತ್ತು ಬಾಹುಬಲವನ್ನು ಕಂಡು ತಮ್ಮ ಸಂಖ್ಯೆಯಿಂದಲೂ ಅವನನ್ನು ಎದುರಿಸಲಾಗದೇ ನಾಯಕರನ್ನು ಕಳೆದುಕೊಂಡು ಅವರು ತಕ್ಷಣವೇ ಹಿಂಗಾಲಿಕ್ಕಿದರು.
03152020a ವಿದೀರ್ಯಮಾಣಾಸ್ತತ ಏವ ತೂರ್ಣಂ। ಆಕಾಶಮಾಸ್ಥಾಯ ವಿಮೂಢಸಂಜ್ಞಾಃ।
03152020c ಕೈಲಾಸಶೃಂಗಾಣ್ಯಭಿದುದ್ರುವುಸ್ತೇ। ಭೀಮಾರ್ದಿತಾಃ ಕ್ರೋಧವಶಾಃ ಪ್ರಭಗ್ನಾಃ।।
ಸಂಪೂರ್ಣವಾಗಿ ಪೀಡೆಗೊಳಗಾಗಿ ತಮ್ಮ ಚೇತನವನ್ನೇ ಕಳೆದುಕೊಂಡ ಆ ಸೇನೆಯು ತಕ್ಷಣವೇ ಆಕಾಶ ಮಾರ್ಗವನ್ನೇರಿತು. ಭೀಮನಿಂದ ಸದೆಬಡಿಯಲ್ಪಟ್ಟ ಕ್ರೋಧವಶರು ಭಗ್ನರಾಗಿ ಕೈಶಾಸಶಿಖರರದ ಕಡೆ ಓಡಿದರು.
03152021a ಸ ಶಕ್ರವದ್ದಾನವದೈತ್ಯಸಂಘಾನ್। ವಿಕ್ರಮ್ಯ ಜಿತ್ವಾ ಚ ರಣೇಽರಿಸಂಘಾನ್।
03152021c ವಿಗಾಹ್ಯ ತಾಂ ಪುಷ್ಕರಿಣೀಂ ಜಿತಾರಿಃ। ಕಾಮಾಯ ಜಗ್ರಾಹ ತತೋಽಂಬುಜಾನಿ।।
ರಣದಲ್ಲಿ ತನ್ನ ವಿಕ್ರಮದಿಂದ ಶತ್ರುಗಳನ್ನು ಗೆದ್ದ ಇಂದ್ರನಂತೆ ಆ ದಾನವ ದೈತ್ಯರನ್ನು ಕೆಳಗುರುಳಿಸಿದನು. ಶತ್ರುಗಳನ್ನು ಸೋಲಿಸಿದ ಅವನು ಆ ಸರೋವರಕ್ಕೆ ಧುಮುಕಿ ತನಗಿಷ್ಟಬಂದಹಾಗೆ ಆ ನೀರಲ್ಲಿ ಬೆಳೆದಿದ್ದ ಹೂವುಗಳನ್ನು ಕಿತ್ತನು.
03152022a ತತಃ ಸ ಪೀತ್ವಾಮೃತಕಲ್ಪಮಂಭೋ। ಭೂಯೋ ಬಭೂವೋತ್ತಮವೀರ್ಯತೇಜಾಃ।
03152022c ಉತ್ಪಾಟ್ಯ ಜಗ್ರಾಹ ತತೋಽಂಬುಜಾನಿ। ಸೌಗಂಧಿಕಾನ್ಯುತ್ತಮಗಂಧವಂತಿ।।
ಅನಂತರ ಅವನು ಅಮೃತಸಮಾನ ನೀರನ್ನು ಕುಡಿದು ವೀರ್ಯ ಮತ್ತು ತೇಜಸ್ಸಿನಲ್ಲಿ ಇನ್ನೂ ಉತ್ತಮನಾದನು. ಅವನು ಅತ್ಯುತ್ತಮ ಸುಗಂಧವನ್ನು ಹೊಂದಿದ್ದ ನೀರಿನಲ್ಲಿ ಹುಟ್ಟಿದ್ದ ಸೌಗಂಧಿಕಗಳನ್ನು ಕಿತ್ತು ಒಟ್ಟುಹಾಕಿದನು.
03152023a ತತಸ್ತು ತೇ ಕ್ರೋಧವಶಾಃ ಸಮೇತ್ಯ। ಧನೇಶ್ವರಂ ಭೀಮಬಲಪ್ರಣುನ್ನಾಃ।
03152023c ಭೀಮಸ್ಯ ವೀರ್ಯಂ ಚ ಬಲಂ ಚ ಸಂಖ್ಯೇ। ಯಥಾವದಾಚಖ್ಯುರತೀವ ದೀನಾಃ।।
ಭೀಮನ ಬಲಕ್ಕೆ ಸಿಲುಕಿ ಸೋತ ಕ್ರೋಧವಶರು ಒಂದಾಗಿ ಧನೇಶ್ವರ ಕುಬೇರನನ್ನು ಭೇಟಿಯಾದರು. ಅತೀವ ದೀನರಾಗಿದ್ದ ಅವರು ಯುದ್ಧದಲ್ಲಿ ಭೀಮನಿಗಿದ್ದ ವೀರ್ಯ ಮತ್ತು ಬಲಗಳ ಕುರಿತು ಹೇಗಿತ್ತೋ ಹಾಗೆ ಹೇಳಿದರು.
03152024a ತೇಷಾಂ ವಚಸ್ತತ್ತು ನಿಶಮ್ಯ ದೇವಃ। ಪ್ರಹಸ್ಯ ರಕ್ಷಾಂಶಿ ತತೋಽಭ್ಯುವಾಚ।
03152024c ಗೃಹ್ಣಾತು ಭೀಮೋ ಜಲಜಾನಿ ಕಾಮಂ। ಕೃಷ್ಣಾನಿಮಿತ್ತಂ ವಿದಿತಂ ಮಮೈತತ್।।
ಅವರ ಮಾತುಗಳನ್ನು ಕೇಳಿದ ದೇವನು ನಗುತ್ತಾ ರಾಕ್ಷಸರಿಗೆ ಹೇಳಿದನು: “ಸರೋವರದಲ್ಲಿ ಹುಟ್ಟಿದ ಪುಷ್ಪಗಳನ್ನು ಭೀಮನು ತನಗೆ ಬೇಕಾದಷ್ಟು ತೆಗೆದುಕೊಂಡು ಹೋಗುತ್ತಾನೆ. ಕೃಷ್ಣೆಯ ಉದ್ದೇಶವನ್ನು ನಾನು ತಿಳಿದಿದ್ದೇನೆ.”
03152025a ತತೋಽಭ್ಯನುಜ್ಞಾಯ ಧನೇಶ್ವರಂ ತೇ। ಜಗ್ಮುಃ ಕುರೂಣಾಂ ಪ್ರವರಂ ವಿರೋಷಾಃ।
03152025c ಭೀಮಂ ಚ ತಸ್ಯಾಂ ದದೃಶುರ್ನಲಿನ್ಯಾಂ। ಯಥೋಪಜೋಷಂ ವಿಹರಂತಮೇಕಂ।।
ಅನಂತರ ಧನೇಶ್ವರ ಕುಬೇರನು ಅವರಿಗೆ ಅನುಮತಿಯನ್ನಿತ್ತನು. ಅವರು ರೋಷವನ್ನು ತೊರೆದು ಕುರುಗಳ ನಾಯಕನಲ್ಲಿಗೆ ಹೋದರು. ಅಲ್ಲಿ ಸರೋವರದಲ್ಲಿ ಒಬ್ಬನೇ ತನಗಿಷ್ಟಬಂದಂತೆ ಆಡುತ್ತಿದ್ದ ಭೀಮನನ್ನು ನೋಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ದ್ವಿಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ತೆರಡನೆಯ ಅಧ್ಯಾಯವು.