151 ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 151

ಸಾರ

ವನವನ್ನು ಕಾಯುತ್ತಿದ್ದ ಕುಬೇರನ ಅನುಚರರಾದ ಕ್ರೋಧವಶರೆಂಬ ನೂರಾರು ಸಹಸ್ರಾರು ರಾಕ್ಷಸರು ಸೌಗಂಧಿಕಾ ಪುಷ್ಪಗಳನ್ನು ಕೀಳಲು ಮುಂದಾದ ಭೀಮನನ್ನು ತಡೆದುದು (1-15).

03151001 ವೈಶಂಪಾಯನ ಉವಾಚ।
03151001a ಸ ಗತ್ವಾ ನಲಿನೀಂ ರಮ್ಯಾಂ ರಾಕ್ಷಸೈರಭಿರಕ್ಷಿತಾಂ।
03151001c ಕೈಲಾಸಶಿಖರೇ ರಮ್ಯೇ ದದರ್ಶ ಶುಭಕಾನನೇ।।
03151002a ಕುಬೇರಭವನಾಭ್ಯಾಶೇ ಜಾತಾಂ ಪರ್ವತನಿರ್ಝರೇ।
03151002c ಸುರಮ್ಯಾಂ ವಿಪುಲಚ್ಚಾಯಾಂ ನಾನಾದ್ರುಮಲತಾವೃತಾಂ।।
03151003a ಹರಿತಾಂಬುಜಸಂಚನ್ನಾಂ ದಿವ್ಯಾಂ ಕನಕಪುಷ್ಕರಾಂ।
03151003c ಪವಿತ್ರಭೂತಾಂ ಲೋಕಸ್ಯ ಶುಭಾಮದ್ಭುತದರ್ಶನಾಂ।।

ªÉʱ ವೈಶಂಪಾಯನನು ಹೇಳಿದನು: “ಹೋಗಿ ಕೈಲಾಸ ಶಿಖರದ ಆ ಶುಭಕಾನನದಲ್ಲಿ ಸುಂದರವಾಗಿ ಕಾಣುತ್ತಿದ್ದ, ಕುಬೇರನ ಮನೆಯ ಪಕ್ಕದಲ್ಲಿದ್ದ, ಪರ್ವತದ ಜಲಪಾತಗಳಿಂದ ಹುಟ್ಟಿದ್ದ, ನಾನಾ ದ್ರುಮಲತೆಗಳಿಂದ ಸುತ್ತುವರೆಯಲ್ಪಟ್ಟು ಸಾಕಷ್ಟು ನೆರಳಿನಲ್ಲಿದ್ದ ಸುರಮ್ಯವಾದ, ಹಳದೀ ಬಣ್ಣದ ನೈದಿಲೆಗಳಿಂದ ಮತ್ತು ತೇಲಾಡುತ್ತಿರುವ ಲೋಕವನ್ನೇ ಸುಂದರಗೊಳಿಸಬಲ್ಲ ಬಂಗಾರದ ಕಮಲಗಳಿಂದ ಕೂಡಿದ್ದ, ದಿವ್ಯವಾದ, ನೋಡಲಿಕ್ಕೆ ಅದ್ಭುತವಾಗಿದ್ದ, ರಾಕ್ಷಸರಿಂದ ರಕ್ಷಿಸಲ್ಪಟ್ಟ ಆ ರಮ್ಯ ಸರೋವರಕ್ಕೆ ಹೋದನು.

03151004a ತತ್ರಾಮೃತರಸಂ ಶೀತಂ ಲಘು ಕುಂತೀಸುತಃ ಶುಭಂ।
03151004c ದದರ್ಶ ವಿಮಲಂ ತೋಯಂ ಶಿವಂ ಬಹು ಚ ಪಾಂಡವಃ।।

ಅಲ್ಲಿ ಕುಂತೀಸುತ ಪಾಂಡವನು ಅಮೃತದಂತೆ ರುಚಿಯಾಗಿದ್ದ ತಣ್ಣಗಿನ, ಹಗುರಾಗಿದ್ದ, ಶುಭವಾಗಿದ್ದ, ಶುದ್ಧವಾಗಿದ್ದ, ಬಹಳ ಮಂಗಳಕರವಾಗಿದ್ದ ನೀರನ್ನು ಕಂಡನು.

03151005a ತಾಂ ತು ಪುಷ್ಕರಿಣೀಂ ರಮ್ಯಾಂ ಪದ್ಮಸೌಗಂಧಿಕಾಯುತಾಂ।
03151005c ಜಾತರೂಪಮಯೈಃ ಪದ್ಮೈಶ್ಚನ್ನಾಂ ಪರಮಗಂಧಿಭಿಃ।।
03151006a ವೈಡೂರ್ಯವರನಾಲೈಶ್ಚ ಬಹುಚಿತ್ರೈರ್ಮನೋಹರೈಃ।
03151006c ಹಂಸಕಾರಂಡವೋದ್ಧೂತೈಃ ಸೃಜದ್ಭಿರಮಲಂ ರಜಃ।।

ಆ ಸುಂದರ ಸರೋವರವು ವೈಡೂರ್ಯದ ತೊಟ್ಟುಗಳುಳ್ಳ. ಬಹುಬಣ್ಣದ, ಮನೋಹರವಾದ, ಸೌಗಂಧಿಕಾ ಪದ್ಮಗಳಿಂದ, ಪರಮ ಸುಗಂಧದಿಂದ ಕೂಡಿದ್ದ ಬಂಗಾರದ ಪದ್ಮಗಳಿಂದ ತುಂಬಿಕೊಂಡಿತ್ತು ಮತ್ತು ಹಂಸ ಕಾರಂಡಗಳಿಂದ ಕದಡಿಸಲ್ಪಟ್ಟು ಬಿಳೀ ಹೂಧೂಳಿಯನ್ನು ಹೊಮ್ಮುತ್ತಿತ್ತು.

03151007a ಆಕ್ರೀಡಂ ಯಕ್ಷರಾಜಸ್ಯ ಕುಬೇರಸ್ಯ ಮಹಾತ್ಮನಃ।
03151007c ಗಂಧರ್ವೈರಪ್ಸರೋಭಿಶ್ಚ ದೇವೈಶ್ಚ ಪರಮಾರ್ಚಿತಾಂ।।
03151008a ಸೇವಿತಾಮೃಷಿಭಿರ್ದಿವ್ಯಾಂ ಯಕ್ಷೈಃ ಕಿಂಪುರುಷೈಸ್ತಥಾ।
03151008c ರಾಕ್ಷಸೈಃ ಕಿನ್ನರೈಶ್ಚೈವ ಗುಪ್ತಾಂ ವೈಶ್ರವಣೇನ ಚ।।

ಅದು ಯಕ್ಷರಾಜ ಮಹಾತ್ಮ ಕುಬೇರನ ಆಟದ ಸ್ಥಳವಾಗಿತ್ತು. ಅದನ್ನು ಗಂಧರ್ವ, ಅಪ್ಸರ ಮತ್ತು ದೇವತೆಗಳು ಅತಿಯಾಗಿ ಬಯಸುತ್ತಿದ್ದರು. ದೇವರ್ಷಿಗಳಿಂದ, ಯಕ್ಷರಿಂದ, ಹಾಗೆಯೇ ಕಿಂಪುರುಷರಿಂದ, ರಾಕ್ಷಸರಿಂದ, ಕಿನ್ನರರಿಂದ ಸೇವಿಸಲ್ಪಟ್ಟ ಅದನ್ನು ವೈಶ್ರವಣನು ರಕ್ಷಿಸುತ್ತಿದ್ದನು.

03151009a ತಾಂ ಚ ದೃಷ್ಟ್ವೈವ ಕೌಂತೇಯೋ ಭೀಮಸೇನೋ ಮಹಾಬಲಃ।
03151009c ಬಭೂವ ಪರಮಪ್ರೀತೋ ದಿವ್ಯಂ ಸಂಪ್ರೇಕ್ಷ್ಯ ತತ್ಸರಃ।।

ಆ ದಿವ್ಯ ಸರೋವರದ ಬಳಿಹೋಗಿ ಅದನ್ನು ನೋಡಿದೊಡನೆಯೇ ಕೌಂತೇಯ ಮಹಾಬಲ ಭೀಮಸೇನನು ಪರಮ ಸಂಪ್ರೀತನಾದನು.

03151010a ತಚ್ಚ ಕ್ರೋಧವಶಾ ನಾಮ ರಾಕ್ಷಸಾ ರಾಜಶಾಸನಾತ್।
03151010c ರಕ್ಷಂತಿ ಶತಸಾಹಸ್ರಾಶ್ಚಿತ್ರಾಯುಧಪರಿಚ್ಚದಾಃ।।

ಕ್ರೋಧವಶರೆಂಬ ಹೆಸರಿನ ನೂರಾರು ಸಹಸ್ರಾರು ರಾಕ್ಷಸರು ವಿಚಿತ್ರ ಆಯುಧಗಳನ್ನು ಹಿಡಿದು ಅವರ ರಾಜನ ಶಾಸನದಂತೆ ಅದನ್ನು ಕಾಯುತ್ತಿದ್ದರು.

03151011a ತೇ ತು ದೃಷ್ಟ್ವೈವ ಕೌಂತೇಯಮಜಿನೈಃ ಪರಿವಾರಿತಂ।
03151011c ರುಕ್ಮಾಂಗದಧರಂ ವೀರಂ ಭೀಮಂ ಭೀಮಪರಾಕ್ರಮಂ।।
03151012a ಸಾಯುಧಂ ಬದ್ಧನಿಸ್ತ್ರಿಂಶಮಶಮ್ಕಿತಮರಿಂದಮಂ।
03151012c ಪುಷ್ಕರೇಪ್ಸುಮುಪಾಯಾಂತಮನ್ಯೋನ್ಯಮಭಿಚುಕ್ರುಶುಃ।।

ಹೂಗಳನ್ನು ಕೀಳಲು ಮುಂದಾಗುತ್ತಿದ್ದ ಜಿನವನ್ನು ಧರಿಸಿದ್ದ ಕೌಂತೇಯ ವೀರ ಭೀಮಪರಾಕ್ರಮಿ ರುಕ್ಮಾಂಗದಧರ, ಆಯುಧಗಳನ್ನು ಹಿಡಿದಿದ್ದ, ಖಡ್ಗವನ್ನು ಹಿಡಿದಿದ್ದ ಭಯವನ್ನೇ ತೋರಿಸದಿದ್ದ ಆ ಅರಿಂದಮ ಭೀಮನನ್ನು ನೋಡಿದೊಡನೆಯೇ ಅವರು ಪರಸ್ಪರರಲ್ಲಿ ಕೂಗಾಡಲು ತೊಡಗಿದರು.

03151013a ಅಯಂ ಪುರುಷಶಾರ್ದೂಲಃ ಸಾಯುಧೋಽಜಿನಸಂವೃತಃ।
03151013c ಯಚ್ಚಿಕೀರ್ಷುರಿಹ ಪ್ರಾಪ್ತಸ್ತತ್ಸಂಪ್ರಷ್ಟುಮಿಹಾರ್ಹಥ।।

“ಜಿನವನ್ನು ಸುತ್ತಿಕೊಂಡು ಆಯುಧಗಳನ್ನು ಹಿಡಿದಿರುವ ಈ ಪುರುಷಶರ್ದೂಲನನ್ನು ಅವನು ಯಾರು ಮತ್ತು ಇಲ್ಲಿಗೆ ಏಕೆ ಬಂದಿದ್ದಾನೆಂದು ಕೇಳಿ!”

03151014a ತತಃ ಸರ್ವೇ ಮಹಾಬಾಹುಂ ಸಮಾಸಾದ್ಯ ವೃಕೋದರಂ।
03151014c ತೇಜೋಯುಕ್ತಮಪೃಚ್ಚಂತ ಕಸ್ತ್ವಮಾಖ್ಯಾತುಮರ್ಹಸಿ।।

ಆಗ ಅವರೆಲ್ಲರೂ ಮಹಾಬಾಹು ವೃಕೋದರನ ಬಳಿಬಂದು ಆ ತೇಜೋಯುಕ್ತನನ್ನು ಕೇಳಿದರು: “ನೀನು ಯಾರೆಂದು ಹೇಳು!

03151015a ಮುನಿವೇಷಧರಶ್ಚಾಸಿ ಚೀರವಾಸಾಶ್ಚ ಲಕ್ಷ್ಯಸೇ।
03151015c ಯದರ್ಥಮಸಿ ಸಂಪ್ರಾಪ್ತಸ್ತದಾಚಕ್ಷ್ವ ಮಹಾದ್ಯುತೇ।।

ನೀನು ಮುನಿಗಳ ವೇಷವನ್ನು ಧರಿಸಿದ್ದೀಯೆ ಮತ್ತು ನಾರುಡೆಗಳನ್ನು ಉಟ್ಟಿರುವಂತೆ ಕಾಣುತ್ತಿದ್ದೀಯೆ. ಮಹಾದ್ಯುತೇ! ನೀನು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀಯೆ. ಹೇಳು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಗಂಧಿಕಾಹರಣೇ ಏಕಪಂಚಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಗಂಧಿಕಾಹರಣವೆಂಬ ನೂರಾಐವತ್ತೊಂದನೆಯ ಅಧ್ಯಾಯವು.