148 ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 148

ಸಾರ

ಹನುಮಂತನು ಭೀಮನಿಗೆ ಯುಗಧರ್ಮಗಳ ಕುರಿತು ವಿವರಿಸಿದುದು (1-39).

03148001 ವೈಶಂಪಾಯನ ಉವಾಚ।
03148001a ಏವಮುಕ್ತೋ ಮಹಾಬಾಹುರ್ಭೀಮಸೇನಃ ಪ್ರತಾಪವಾನ್।
03148001c ಪ್ರಣಿಪತ್ಯ ತತಃ ಪ್ರೀತ್ಯಾ ಭ್ರಾತರಂ ಹೃಷ್ಟಮಾನಸಃ।।
03148001e ಉವಾಚ ಶ್ಲಕ್ಷ್ಣಯಾ ವಾಚಾ ಹನೂಮಂತಂ ಕಪೀಶ್ವರಂ।।

ªÉʱವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ಮಹಾಬಾಹು ಪ್ರತಾಪಿ ಭೀಮಸೇನನು ಪ್ರೀತಿಯಿಂದ ಅವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಸಂತೋಷದಿಂದ ಮೃದುವಾದ ಮಾತುಗಳಿಂದ ತನ್ನ ಅಣ್ಣ ಕಪೀಶ್ವರ ಹನೂಮಂತನಿಗೆ ಹೇಳಿದನು:

03148002a ಮಯಾ ಧನ್ಯತರೋ ನಾಸ್ತಿ ಯದಾರ್ಯಂ ದೃಷ್ಟವಾನಹಂ।
03148002c ಅನುಗ್ರಹೋ ಮೇ ಸುಮಹಾಂಸ್ತೃಪ್ತಿಶ್ಚ ತವ ದರ್ಶನಾತ್।।

“ನಿನ್ನನ್ನು ನೋಡಿದ ನನ್ನಷ್ಟು ಧನ್ಯನು ಇನ್ನು ಯಾರೂ ಇರಲಿಕ್ಕಿಲ್ಲ. ನಿನ್ನ ದರ್ಶನದಿಂದ ನಾನು ತುಂಬಾ ಅನುಗ್ರಹೀತನಾಗಿದ್ದೇನೆ ಮತ್ತು ಮಹಾ ತೃಪ್ತಿಯನ್ನು ಪಡೆದಿದ್ದೇನೆ.

03148003a ಏವಂ ತು ಕೃತಮಿಚ್ಚಾಮಿ ತ್ವಯಾರ್ಯಾದ್ಯ ಪ್ರಿಯಂ ಮಮ।
03148003c ಯತ್ತೇ ತದಾಸೀತ್ಪ್ಲವತಃ ಸಾಗರಂ ಮಕರಾಲಯಂ।।
03148003e ರೂಪಮಪ್ರತಿಮಂ ವೀರ ತದಿಚ್ಚಾಮಿ ನಿರೀಕ್ಷಿತುಂ।।
03148004a ಏವಂ ತುಷ್ಟೋ ಭವಿಷ್ಯಾಮಿ ಶ್ರದ್ಧಾಸ್ಯಾಮಿ ಚ ತೇ ವಚಃ।

ಆರ್ಯ! ಇಂದು ನಿನಗೆ ಪ್ರಿಯಕರವಾದ ಇದನ್ನೂ ಕೂಡ ಮಾಡುತ್ತೀಯೆಂದು ಬಯಸುತ್ತೇನೆ. ವೀರ! ಮಕರಾಲಯ ಸಾಗರವನ್ನು ಜಿಗಿಯುವಾಗ ನೀನು ಯಾವ ರೂಪವನ್ನು ಧರಿಸಿದ್ದೆಯೋ ಆ ರೂಪವನ್ನು ನೋಡಲು ಬಯಸುತ್ತೇನೆ. ಹೀಗೆ ನಾನು ಸಂತುಷ್ಟನಾಗುತ್ತೇನೆ ಮತ್ತು ನಿನ್ನ ಮಾತುಗಳನ್ನು ನಂಬುತ್ತೇನೆ.”

03148004c ಏವಮುಕ್ತಃ ಸ ತೇಜಸ್ವೀ ಪ್ರಹಸ್ಯ ಹರಿರಬ್ರವೀತ್।।

ಇದನ್ನು ಕೇಳಿದ ಆ ತೇಜಸ್ವಿ ಕಪಿಯು ನಗುತ್ತಾ ಹೇಳಿದನು:

03148005a ನ ತಚ್ಛಕ್ಯಂ ತ್ವಯಾ ದ್ರಷ್ಟುಂ ರೂಪಂ ನಾನ್ಯೇನ ಕೇನ ಚಿತ್।
03148005c ಕಾಲಾವಸ್ಥಾ ತದಾ ಹ್ಯನ್ಯಾ ವರ್ತತೇ ಸಾ ನ ಸಾಂಪ್ರತಂ।।

“ಆ ರೂಪವನ್ನು ನೀನಾಗಲೀ ಅಥವಾ ಇನ್ನ್ಯಾರೇ ಆಗಲೀ ನೋಡಲಿಕ್ಕಾಗುವುದಿಲ್ಲ. ಯಾಕೆಂದರೆ ಆಗ ಇದ್ದಿದ್ದ ಕಾಲಾವಸ್ಥೆಯು ಬೇರೆಯಾಗಿತ್ತು. ಅದು ಈಗ ಇಲ್ಲ.

03148006a ಅನ್ಯಃ ಕೃತಯುಗೇ ಕಾಲಸ್ತ್ರೇತಾಯಾಂ ದ್ವಾಪರೇಽಪರಃ।
03148006c ಅಯಂ ಪ್ರಧ್ವಂಸನಃ ಕಾಲೋ ನಾದ್ಯ ತದ್ರೂಪಮಸ್ತಿ ಮೇ।।
03148007a ಭೂಮಿರ್ನದ್ಯೋ ನಗಾಃ ಶೈಲಾಃ ಸಿದ್ಧಾ ದೇವಾ ಮಹರ್ಷಯಃ।
03148007c ಕಾಲಂ ಸಮನುವರ್ತಂತೇ ಯಥಾ ಭಾವಾ ಯುಗೇ ಯುಗೇ।।
03148007e ಬಲವರ್ಷ್ಮಪ್ರಭಾವಾ ಹಿ ಪ್ರಹೀಯಂತ್ಯುದ್ಭವಂತಿ ಚ।।

ಕೃತಯುಗವು ತ್ರೇತಾಯುಗಕ್ಕಿಂತ ಬೇರೆ ಮತ್ತು ಅದಕ್ಕಿಂತಲೂ ಬೇರೆ ದ್ವಾಪರಯುಗ. ಇದು ಕ್ಷೀಣಿಸುತ್ತಿರುವ ಕಾಲ. ಈಗ ನನಗೆ ಆ ರೂಪವಿಲ್ಲ. ಭೂಮಿ, ನದಿಗಳೂ, ಪರ್ವತಗಳು, ಶಿಖರಗಳು, ಸಿದ್ಧರು, ದೇವತೆಗಳು ಮತ್ತು ಮಹರ್ಷಿಗಳು ಕಾಲಕ್ಕೆ ತಕ್ಕಂತೆ ವರ್ತಿಸುತ್ತಾರೆ. ಯುಗಯುಗದ ಭಾವದಂತೆ ಜೀವಿಗಳ ಶಕ್ತಿ, ಗಾತ್ರ, ಮತ್ತು ಪ್ರಭಾವಗಳು ಕ್ಷೀಣಿಸುತ್ತವೆ ಮತ್ತು ಪುನಃ ವೃದ್ಧಿಯಾಗುತ್ತವೆ.

03148008a ತದಲಂ ತವ ತದ್ರೂಪಂ ದ್ರಷ್ಟುಂ ಕುರುಕುಲೋದ್ವಹ।
03148008c ಯುಗಂ ಸಮನುವರ್ತಾಮಿ ಕಾಲೋ ಹಿ ದುರತಿಕ್ರಮಃ।।

ಕುರುಕುಲೋದ್ವಹ! ಆದುದರಿಂದ ನನ್ನ ಆ ರೂಪವನ್ನು ನೋಡುವ ನಿನ್ನ ಈ ಬಯಕೆಯು ಸಾಕು. ನಾನೂ ಕೂಡ ಯುಗವನ್ನು ಅನುಸರಿಸುತ್ತೇನೆ. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.”

03148009 ಭೀಮ ಉವಾಚ।
03148009a ಯುಗಸಂಖ್ಯಾಂ ಸಮಾಚಕ್ಷ್ವ ಆಚಾರಂ ಚ ಯುಗೇ ಯುಗೇ।
03148009c ಧರ್ಮಕಾಮಾರ್ಥಭಾವಾಂಶ್ಚ ವರ್ಷ್ಮ ವೀರ್ಯಂ ಭವಾಭವೌ।।

ಭೀಮನು ಹೇಳಿದನು: “ಯುಗಗಳ ಸಂಖ್ಯೆಯನ್ನೂ ಮತ್ತು ಯುಗಯುಗಗಳಲ್ಲಿರುವ ಆಚಾರಗಳನ್ನೂ, ಧರ್ಮ, ಕಾಮ ಮತ್ತು ಅರ್ಥಗಳ ಭಾವವನ್ನೂ, ಗಾತ್ರ, ವೀರ್ಯ ಮತ್ತು ಇರುವುದು ಮತ್ತು ಇಲ್ಲದಿರುವುದರ ಕುರಿತು ಹೇಳು.”

03148010 ಹನೂಮಾನುವಾಚ।
03148010a ಕೃತಂ ನಾಮ ಯುಗಂ ತಾತ ಯತ್ರ ಧರ್ಮಃ ಸನಾತನಃ।
03148010c ಕೃತಮೇವ ನ ಕರ್ತವ್ಯಂ ತಸ್ಮಿನ್ಕಾಲೇ ಯುಗೋತ್ತಮೇ।।

“ಮಗೂ! ಕೃತ ಎಂಬ ಹೆಸರಿನ ಯುಗದಲ್ಲಿ ಸನಾತನ ಧರ್ಮವಿದೆ. ಮಾಡಬೇಕಾದುದು ಯಾವುದೂ ಇರದೇ ಎಲ್ಲವನ್ನೂ ಮಾಡಿಯಾಗಿರುತ್ತದೆಯಾದುದರಿಂದ ಆ ಕಾಲವನ್ನು ಉತ್ತಮ ಯುಗವೆಂದು ಕರೆಯುತ್ತಾರೆ.

03148011a ನ ತತ್ರ ಧರ್ಮಾಃ ಸೀದಂತಿ ನ ಕ್ಷೀಯಂತೇ ಚ ವೈ ಪ್ರಜಾಃ।
03148011c ತತಃ ಕೃತಯುಗಂ ನಾಮ ಕಾಲೇನ ಗುಣತಾಂ ಗತಂ।।

ಅಲ್ಲಿ ಧರ್ಮವು ಕ್ಷಣಿಸುವುದಿಲ್ಲ. ಜೀವಿಗಳು ಕ್ಷೀಣಿಸುವುದಿಲ್ಲ. ಆದುದರಿಂದ ಅದಕ್ಕೆ ಕೃತಯುಗವೆಂದು ಹೆಸರು. ಕಾಲಾಂತರದಲ್ಲಿ ಇದು ಅತ್ಯಂತ ಉತ್ತಮವೆಂದೆನಿಸಿಕೊಂಡಿತು.

03148012a ದೇವದಾನವಗಂಧರ್ವಯಕ್ಷರಾಕ್ಷಸಪನ್ನಗಾಃ।
03148012c ನಾಸನ್ಕೃತಯುಗೇ ತಾತ ತದಾ ನ ಕ್ರಯವಿಕ್ರಯಾಃ।।

ಕೃತಯುಗದಲ್ಲಿ ದೇವತೆಗಳು, ದಾನವರು, ಗಂಧರ್ವರು, ಯಕ್ಷರು, ರಾಕ್ಷಸರು ಮತ್ತು ನಾಗಗಳು ಯಾರೂ ಇರುವುದಿಲ್ಲ. ಮಗೂ ಅಲ್ಲಿ ಕ್ರಯವಿಕ್ರಯಗಳೂ ಇರುವುದಿಲ್ಲ.

03148013a ನ ಸಾಮಯಜು‌ಋಗ್ವರ್ಣಾಃ ಕ್ರಿಯಾ ನಾಸೀಚ್ಚ ಮಾನವೀ।
03148013c ಅಭಿಧ್ಯಾಯ ಫಲಂ ತತ್ರ ಧರ್ಮಃ ಸಂನ್ಯಾಸ ಏವ ಚ।।

ಸಾಮ, ಯಜುರ್ ಮತ್ತು ಋಕ್ ಗಳೆಂಬ ವಿಂಗಡಣೆಯಿಲ್ಲ, ಮಾನವೀಯ ಶ್ರಮವೂ ಅಲ್ಲಿಲ್ಲ. ನೆನೆಸಿದ ಹಾಗೆ ಫಲವು ದೊರೆಯುತ್ತದೆ ಮತ್ತು ಸನ್ಯಾಸವೇ ಅಲ್ಲಿಯ ಧರ್ಮ.

03148014a ನ ತಸ್ಮಿನ್ಯುಗಸಂಸರ್ಗೇ ವ್ಯಾಧಯೋ ನೇಂದ್ರಿಯಕ್ಷಯಃ।
03148014c ನಾಸೂಯಾ ನಾಪಿ ರುದಿತಂ ನ ದರ್ಪೋ ನಾಪಿ ಪೈಶುನಂ।।
03148015a ನ ವಿಗ್ರಹಃ ಕುತಸ್ತಂದ್ರೀ ನ ದ್ವೇಷೋ ನಾಪಿ ವೈಕೃತಂ।
03148015c ನ ಭಯಂ ನ ಚ ಸಂತಾಪೋ ನ ಚೇರ್ಷ್ಯಾ ನ ಚ ಮತ್ಸರಃ।।

ಆ ಯುಗಸಂಸರ್ಗದಲ್ಲಿ ವ್ಯಾಧಿಯಿರುವುದಿಲ್ಲ. ಇಂದ್ರಿಯ ಕ್ಷೀಣವಾಗುವುದಿಲ್ಲ. ಅಸೂಯೆಯಾಗಲೀ, ಕಣ್ಣೀರಾಗಲೀ, ದರ್ಪವಾಗಲೀ, ಶ್ರಮವಾಗಲೀ, ಹತೋಟಿಯಲ್ಲಿ ಇಟ್ಟುಕೊಳ್ಳುವುದಾಗಲೀ, ಸೋಮಾರಿತನವಾಗಲೀ, ದ್ವೇಷವಾಗಲೀ, ಮೋಸವಾಗಲೀ, ಭಯವಾಗಲೀ, ಸಂತಾಪವಾಗಲೀ, ಹೊಟ್ಟೆಕಿಚ್ಚಾಗಲೀ, ಮತ್ಸರವಾಗಲೀ ಇರುವುದಿಲ್ಲ.

03148016a ತತಃ ಪರಮಕಂ ಬ್ರಹ್ಮ ಯಾ ಗತಿರ್ಯೋಗಿನಾಂ ಪರಾ।
03148016c ಆತ್ಮಾ ಚ ಸರ್ವಭೂತಾನಾಂ ಶುಕ್ಲೋ ನಾರಾಯಣಸ್ತದಾ।।

ಆಗ ಪರಬ್ರಹ್ಮನೇ ಯೋಗಿಗಳು ಹೊಂದುವ ಪರಮಗತಿ. ಸರ್ವಭೂತಗಳ ಆತ್ಮನು ಶುಕ್ಲ ನಾರಾಯಣನು.

03148017a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ಕೃತಲಕ್ಷಣಾಃ।
03148017c ಕೃತೇ ಯುಗೇ ಸಮಭವನ್ಸ್ವಕರ್ಮನಿರತಾಃ ಪ್ರಜಾಃ।।

ಕೃತಯುಗದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಲಕ್ಷಣಗಳಲ್ಲಿ ಒಂದೇ ಆಗಿರುತ್ತಾರೆ ಮತ್ತು ಪ್ರಜೆಗಳು ತಮ್ಮ ಕರ್ಮಗಳಲ್ಲಿ ನಿರತರಾಗಿರುತ್ತಾರೆ.

03148018a ಸಮಾಶ್ರಮಂ ಸಮಾಚಾರಂ ಸಮಜ್ಞಾನಮತೀಬಲಂ।
03148018c ತದಾ ಹಿ ಸಮಕರ್ಮಾಣೋ ವರ್ಣಾ ಧರ್ಮಾನವಾಪ್ನುವನ್।।

ಆಶ್ರಮಗಳು ಒಂದೇಸಮನಾಗಿರುತ್ತವೆ. ಆಚಾರಗಳು ಒಂದೇ ಸಮನಾಗಿರುತ್ತವೆ. ಜ್ಞಾನ, ಬುದ್ಧಿ ಮತ್ತು ಬಲಗಳು ಒಂದೇ ಸಮನಾಗಿರುತ್ತವೆ. ಮತ್ತು ವರ್ಣಗಳು ಒಂದೇ ರೀತಿಯ ಧರ್ಮವನ್ನು ಅನುಸರಿಸುತ್ತವೆ.

03148019a ಏಕವೇದಸಮಾಯುಕ್ತಾ ಏಕಮಂತ್ರವಿಧಿಕ್ರಿಯಾಃ।
03148019c ಪೃಥಗ್ಧರ್ಮಾಸ್ತ್ವೇಕವೇದಾ ಧರ್ಮಮೇಕಮನುವ್ರತಾಃ।।

ಒಂದೇ ಒಂದು ವೇದವನ್ನು ಹೊಂದಿದ್ದು, ವಿಧಿಕ್ರಿಯೆಗಳಲ್ಲಿ ಒಂದೇ ಮಂತ್ರವನ್ನು ಬಳಸಿ ಅವರು ಎಲ್ಲರೂ ಒಂದೇ ಒಂದು ಧರ್ಮವನ್ನು ಒಂದೇ ವೇದವನ್ನು ಅನುಸರಿಸುತ್ತಿದ್ದರು. ಒಂದೇ ಧರ್ಮದಂತೆ ನಡೆದುಕೊಳ್ಳುತ್ತಿದ್ದರು.

03148020a ಚಾತುರಾಶ್ರಮ್ಯಯುಕ್ತೇನ ಕರ್ಮಣಾ ಕಾಲಯೋಗಿನಾ।
03148020c ಅಕಾಮಫಲಸಮ್ಯೋಗಾತ್ಪ್ರಾಪ್ನುವಂತಿ ಪರಾಂ ಗತಿಂ।।

ಕಾಲಕ್ಕೆ ಸರಿಯಾದ ನಾಲ್ಕು ಆಶ್ರಮಗಳನ್ನು ಅನುಸರಿಸಿ ಯಾವುದೇ ಫಲವನ್ನು ಬಯಸದೇ ಮಾಡುವ ಕರ್ಮಗಳಿಂದ ಪರಮ ಗತಿಯನ್ನು ಹೊಂದುತ್ತಿದ್ದರು.

03148021a ಆತ್ಮಯೋಗಸಮಾಯುಕ್ತೋ ಧರ್ಮೋಽಯಂ ಕೃತಲಕ್ಷಣಃ।
03148021c ಕೃತೇ ಯುಗೇ ಚತುಷ್ಪಾದಶ್ಚಾತುರ್ವರ್ಣ್ಯಸ್ಯ ಶಾಶ್ವತಃ।।

ಕೃತಯುಗದಲ್ಲಿ ಆತ್ಮಯೋಗದಿಂದೊಡಗೂಡಿದ ಇದೇ ಧರ್ಮವನ್ನು ನಾಲ್ಕೂ ವರ್ಣದವರು ನಾಲ್ಕೂ ಪಾದಗಳಲ್ಲಿ ಶಾಶ್ವತವಾಗಿ ಅನುಸರಿಸುತ್ತಿದ್ದರು.

03148022a ಏತತ್ಕೃತಯುಗಂ ನಾಮ ತ್ರೈಗುಣ್ಯಪರಿವರ್ಜಿತಂ।
03148022c ತ್ರೇತಾಮಪಿ ನಿಬೋಧ ತ್ವಂ ಯಸ್ಮಿನ್ಸತ್ರಂ ಪ್ರವರ್ತತೇ।।

ತ್ರಿಗುಣಗಳನ್ನು ವರ್ಜಿಸಿದ ಇದರ ಹೆಸರು ಕೃತಯುಗ. ಈಗ ಯಾಗಗಳು ಕಂಡುಬರುವ ತ್ರೇತಾಯುಗದ ಕುರಿತು ಕೇಳು.

03148023a ಪಾದೇನ ಹ್ರಸತೇ ಧರ್ಮೋ ರಕ್ತತಾಂ ಯಾತಿ ಚಾಚ್ಯುತಃ।
03148023c ಸತ್ಯಪ್ರವೃತ್ತಾಶ್ಚ ನರಾಃ ಕ್ರಿಯಾಧರ್ಮಪರಾಯಣಾಃ।।

ಧರ್ಮವು ಒಂದು ಪಾದ ಕಡಿಮೆಯಾಗುತ್ತದೆ. ಮತ್ತು ಅಚ್ಯುತ ನಾರಾಯಣನು ಕೆಂಪುಬಣ್ಣದವನಾಗುತ್ತಾನೆ. ಮನುಷ್ಯರು ಸತ್ಯವ್ರತರಾಗಿದ್ದು ಧರ್ಮಕಾರ್ಯಗಳಲ್ಲಿ ನಿರತರಾಗಿರುತ್ತಾರೆ.

03148024a ತತೋ ಯಜ್ಞಾಃ ಪ್ರವರ್ತಂತೇ ಧರ್ಮಾಶ್ಚ ವಿವಿಧಾಃ ಕ್ರಿಯಾಃ।
03148024c ತ್ರೇತಾಯಾಂ ಭಾವಸಂಕಲ್ಪಾಃ ಕ್ರಿಯಾದಾನಫಲೋದಯಾಃ।।

ತ್ರೇತಾಯುಗದಲ್ಲಿ ಯಜ್ಞಗಳು ಮತ್ತು ಧರ್ಮದ ವಿವಿಧ ಕಾರ್ಯಗಳು ನಡೆಯುತ್ತವೆ. ಭಾವಸಂಕಲ್ಪದಿಂದ ಫಲವನ್ನು ನೀಡುವ ದಾನಾದಿ ಕ್ರಿಯೆಗಳು ನಡೆಯುತ್ತವೆ.

03148025a ಪ್ರಚಲಂತಿ ನ ವೈ ಧರ್ಮಾತ್ತಪೋದಾನಪರಾಯಣಾಃ।
03148025c ಸ್ವಧರ್ಮಸ್ಥಾಃ ಕ್ರಿಯಾವಂತೋ ಜನಾಸ್ತ್ರೇತಾಯುಗೇಽಭವನ್।।

ತ್ರೇತಾಯುಗದಲ್ಲಿ ಧರ್ಮ, ತಪಸ್ಸು, ಮತ್ತು ದಾನಗಳಲ್ಲಿ ನಿರತರಾಗಿದ್ದು ಸ್ವಧರ್ಮದಲ್ಲಿಯೇ ಇದ್ದುಕೊಂಡು ಕ್ರಿಯಾವಂತರಾಗಿ ಧರ್ಮದಿಂದ ವಿಚಲಿತರಾಗುವುದಿಲ್ಲ.

03148026a ದ್ವಾಪರೇಽಪಿ ಯುಗೇ ಧರ್ಮೋ ದ್ವಿಭಾಗೋನಃ ಪ್ರವರ್ತತೇ।
03148026c ವಿಷ್ಣುರ್ವೈ ಪೀತತಾಂ ಯಾತಿ ಚತುರ್ಧಾ ವೇದ ಏವ ಚ।।

ದ್ವಾಪರಯುಗದಲ್ಲಿ ಧರ್ಮವು ಅರ್ಧಭಾಗದಲ್ಲಿ ಮಾತ್ರ ನಡೆಯುತ್ತದೆ. ವಿಷ್ಣುವು ಹಳದಿಬಣ್ಣವನ್ನು ಹೊಂದುತ್ತಾನೆ ಮತ್ತು ವೇದಗಳೂ ಕೂಡ ನಾಲ್ಕು ಭಾಗಗಳಾಗಿ ವಿಭಜಿಸಲ್ಪಡುತ್ತದೆ.

03148027a ತತೋಽನ್ಯೇ ಚ ಚತುರ್ವೇದಾಸ್ತ್ರಿವೇದಾಶ್ಚ ತಥಾಪರೇ।
03148027c ದ್ವಿವೇದಾಶ್ಚೈಕವೇದಾಶ್ಚಾಪ್ಯನೃಚಶ್ಚ ತಥಾಪರೇ।।

ಕೆಲವರು ನಾಲ್ಕೂ ವೇದಗಳನ್ನೂ ತಿಳಿದಿರುತ್ತಾರೆ, ಮತ್ತೆ ಕೆಲವರು ಮೂರು ಅಥವಾ ಎರಡು ಅಥವಾ ಒಂದನ್ನೇ ತಿಳಿದುಕೊಂಡಿರುತ್ತಾರೆ. ಇನ್ನುಳಿದವರಿಗೆ ವೇದಗಳೇ ತಿಳಿದಿರುವುದಿಲ್ಲ.

03148028a ಏವಂ ಶಾಸ್ತ್ರೇಷು ಭಿನ್ನೇಷು ಬಹುಧಾ ನೀಯತೇ ಕ್ರಿಯಾ।
03148028c ತಪೋದಾನಪ್ರವೃತ್ತಾ ಚ ರಾಜಸೀ ಭವತಿ ಪ್ರಜಾ।।

ಈ ರೀತಿ ಶಾಸ್ತ್ರಗಳು ಭಿನ್ನವಾಗಿ ಬಹಳ ರೀತಿಯ ಕ್ರಿಯೆಗಳು ನಡೆಯುತ್ತವೆ. ತಪೋದಾನಪ್ರವೃತ್ತರಾದ ಪ್ರಜೆಗಳು ರಾಜಸ ಭಾವವನ್ನು ತಳೆಯುತ್ತಾರೆ.

03148029a ಏಕವೇದಸ್ಯ ಚಾಜ್ಞಾನಾದ್ವೇದಾಸ್ತೇ ಬಹವಃ ಕೃತಾಃ।
03148029c ಸತ್ಯಸ್ಯ ಚೇಹ ವಿಭ್ರಂಶಾತ್ಸತ್ಯೇ ಕಶ್ಚಿದವಸ್ಥಿತಃ।।

ಒಂದೇ ವೇದವನ್ನು ಅರಿತಿಲ್ಲವಾದುದರಿಂದ ವೇದಗಳು ಬಹಳಾಗಿ ವಿಂಗಡಣೆಗೊಳ್ಳುತ್ತವೆ. ಸತ್ಯವು ಒಂದೇ ಆಗಿಲ್ಲದಿದುರಿಂದ ಕೆಲವರು ಮಾತ್ರ ಸತ್ಯದಲ್ಲಿ ನೆಲೆಸಿರುತ್ತಾರೆ.

03148030a ಸತ್ಯಾತ್ಪ್ರಚ್ಯವಮಾನಾನಾಂ ವ್ಯಾಧಯೋ ಬಹವೋಽಭವನ್।
03148030c ಕಾಮಾಶ್ಚೋಪದ್ರವಾಶ್ಚೈವ ತದಾ ದೈವತಕಾರಿತಾಃ।।
03148031a ಯೈರರ್ದ್ಯಮಾನಾಃ ಸುಭೃಶಂ ತಪಸ್ತಪ್ಯಂತಿ ಮಾನವಾಃ।
03148031c ಕಾಮಕಾಮಾಃ ಸ್ವರ್ಗಕಾಮಾ ಯಜ್ಞಾಂಸ್ತನ್ವಂತಿ ಚಾಪರೇ।।

ಸತ್ಯದಿಂದ ಪ್ರಚಲಿತರಾದವರಿಗೆ ಬಹಳಷ್ಟು ವ್ಯಾಧಿಗಳು ಉಂಟಾಗುತ್ತವೆ. ವಿಧಿಯ ಕಾರಣದಿಂದ ಕಾಮ ಮತ್ತು ಉಪದ್ರವಗಳು ಉಂಟಾಗುತ್ತವೆ. ಇದರಿಂದಾಗಿ ಕೆಲವು ಮಾನವರು ತುಂಬಾ ಕಠಿಣ ತಪಸ್ಸಿನಲ್ಲಿ ನಿರತರಾಗಿರುತ್ತಾರೆ ಮತ್ತು ಇನ್ನುಳಿದವರು ಆಸೆಗಳಿಂದ ಪ್ರಚೋದಿತರಾಗಿ ಸ್ವರ್ಗವನ್ನು ಬಯಸಿ ಯಜ್ಞ-ಯಾಗಾದಿಗಳನ್ನು ಕೈಗೊಳ್ಳುತ್ತಾರೆ.

03148032a ಏವಂ ದ್ವಾಪರಮಾಸಾದ್ಯ ಪ್ರಜಾಃ ಕ್ಷೀಯಂತ್ಯಧರ್ಮತಃ।
03148032c ಪಾದೇನೈಕೇನ ಕೌಂತೇಯ ಧರ್ಮಃ ಕಲಿಯುಗೇ ಸ್ಥಿತಃ।।
03148033a ತಾಮಸಂ ಯುಗಮಾಸಾದ್ಯ ಕೃಷ್ಣೋ ಭವತಿ ಕೇಶವಃ।
03148033c ವೇದಾಚಾರಾಃ ಪ್ರಶಾಮ್ಯಂತಿ ಧರ್ಮಯಜ್ಞಕ್ರಿಯಾಸ್ತಥಾ।।

ದ್ವಾಪರಯುಗದಲ್ಲಿ ಹೀಗೆ ಅಧರ್ಮದಿಂದ ಪ್ರಜೆಗಳು ಕ್ಷೀಣಿಸುತ್ತಾರೆ. ಕೌಂತೇಯ! ಕಲಿಯುಗದಲ್ಲಿ ಧರ್ಮವು ಒಂದೇ ಕಾಲಿನ ಮೇಲೆ ನಿಂತಿರುತ್ತದೆ. ಈ ತಾಮಸ ಯುಗವು ಬಂದಾಗ ಕೇಶವ ನಾರಾಯಣನು ಕಪ್ಪುಬಣ್ಣದವನಾಗುತ್ತಾನೆ. ವೇದಾಚಾರಗಳೂ ಧರ್ಮ ಯಜ್ಞಗಳೂ ಅಳಿದುಹೋಗುತ್ತವೆ.

03148034a ಈತಯೋ ವ್ಯಾಧಯಸ್ತಂದ್ರೀ ದೋಷಾಃ ಕ್ರೋಧಾದಯಸ್ತಥಾ।
03148034c ಉಪದ್ರವಾಶ್ಚ ವರ್ತಂತೇ ಆಧಯೋ ವ್ಯಾಧಯಸ್ತಥಾ।।

ಬೆಳೆಗಳು ನಾಶವಾಗುತ್ತವೆ. ವ್ಯಾಧಿಗಳು, ಸೋಮಾರಿತನ, ಮತ್ತು ಕ್ರೋಧಾದಿ ದೋಷಗಳು, ಉಪದ್ರವಗಳು ನಡೆಯುತ್ತವೆ. ರೋಗ ವ್ಯಾಧಿಗಳು ಇರುತ್ತವೆ.

03148035a ಯುಗೇಷ್ವಾವರ್ತಮಾನೇಷು ಧರ್ಮೋ ವ್ಯಾವರ್ತತೇ ಪುನಃ।
03148035c ಧರ್ಮೇ ವ್ಯಾವರ್ತಮಾನೇ ತು ಲೋಕೋ ವ್ಯಾವರ್ತತೇ ಪುನಃ।।

ಒಂದನ್ನು ಅನುಸರಿಸಿ ಬರುವ ಯುಗಗಳಲ್ಲಿ ಪ್ರತಿಬಾರಿಯೂ ಧರ್ಮವು ಕ್ಷೀಣವಾಗುತ್ತದೆ. ಧರ್ಮವು ಕ್ಷೀಣವಾಗುತ್ತಿದ್ದಂತೆ ಜನರೂ ಕ್ಷೀಣರಾಗುತ್ತಾರೆ.

03148036a ಲೋಕೇ ಕ್ಷೀಣೇ ಕ್ಷಯಂ ಯಾಂತಿ ಭಾವಾ ಲೋಕಪ್ರವರ್ತಕಾಃ।
03148036c ಯುಗಕ್ಷಯಕೃತಾ ಧರ್ಮಾಃ ಪ್ರಾರ್ಥನಾನಿ ವಿಕುರ್ವತೇ।।

ಜನರು ಕ್ಷೀಣರಾಗುತ್ತಿದ್ದಂತೆ ಪ್ರಪಂಚವನ್ನು ವಿಕಸನದತ್ತ ತೆಗೆದುಕೊಂಡು ಹೋಗುವ ಶಕ್ತಿಗಳು ಕ್ಷೀಣವಾಗುತ್ತವೆ. ಈ ಯುಗಕ್ಷಯದಿಂದಾಗಿ ಧರ್ಮಗಳು ಪ್ರಾರ್ಥನೆಗಳಾಗಿ ವಿಕಾರಗೊಳ್ಳುತ್ತವೆ.

03148037a ಏತತ್ಕಲಿಯುಗಂ ನಾಮ ಅಚಿರಾದ್ಯತ್ಪ್ರವರ್ತತೇ।
03148037c ಯುಗಾನುವರ್ತನಂ ತ್ವೇತತ್ಕುರ್ವಂತಿ ಚಿರಜೀವಿನಃ।।

ಈ ಕಲಿಯುಗ ಎನ್ನುವುದು ಸ್ವಲ್ಪವೇ ಸಮಯದಲ್ಲಿ ಬರುತ್ತದೆ. ಚಿರಂಜೀವಿಗಳು ಈ ಯುಗಗಳು ಬದಲಾದ ಹಾಗೆಲ್ಲ ತಾವೂ ಬದಲಾಗುತ್ತಾರೆ.

03148038a ಯಚ್ಚ ತೇ ಮತ್ಪರಿಜ್ಞಾನೇ ಕೌತೂಹಲಮರಿಂದಮ।
03148038c ಅನರ್ಥಕೇಷು ಕೋ ಭಾವಃ ಪುರುಷಸ್ಯ ವಿಜಾನತಃ।।

ಅರಿಂದಮ! ನನ್ನನ್ನು ಸರಿಯಾಗಿ ತಿಳಿದುಕೊಳ್ಳುವ ನಿನ್ನ ಈ ಕುತೂಹಲವು ತಿಳಿದುಕೊಂಡಿರುವ ಮನುಷ್ಯನು ಅನರ್ಥವಾಗಿರುವುದರಲ್ಲಿ ಏಕೆ ಆಸಕ್ತಿಯನ್ನು ತೋರಿಸುತ್ತಾನೆ ಎನ್ನುವಂತಿದೆ.

03148039a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।
03148039c ಯುಗಸಂಖ್ಯಾಂ ಮಹಾಬಾಹೋ ಸ್ವಸ್ತಿ ಪ್ರಾಪ್ನುಹಿ ಗಮ್ಯತಾಂ।।

ನೀನು ನನ್ನಲ್ಲಿ ಕೇಳಿದುದೆಲ್ಲವನ್ನೂ ಯುಗಸಂಖ್ಯೆಗಳನ್ನೂ ನಾನು ನಿನಗೆ ಹೇಳಿದ್ದೇನೆ. ಮಹಾಬಾಹೋ! ನಿನಗೆ ಮಂಗಳವಾಗಲಿ. ಈಗ ಹೊರಟು ಹೋಗು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದೇ ಅಷ್ಟಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಹನುಮದ್ಭೀಮಸಂವಾದವೆಂಬ ನೂರಾನಲ್ವತ್ತೆಂಟನೆಯ ಅಧ್ಯಾಯವು.