ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 147
ಸಾರ
ಭೀಮನು ದಾರಿಯನ್ನು ಕೇಳಲು ಬೇಕಾದರೆ ತನ್ನ ಮೇಲೆ ಹಾರಿಹೋಗೆಂದು ಹನುಮಂತನು ಹೇಳುವುದು (1-7). ತನ್ನ ಬಾಲವನ್ನು ಎತ್ತಿ ಸರಿಸಿ ಮುಂದೆ ಸಾಗಬೇಕೆಂದು ಕೇಳಿಕೊಳ್ಳಲು ಭೀಮನು ಹನುಮಂತನ ಬಾಲವನ್ನು ಸರಿಸಲು ಪ್ರಯತ್ನಿಸಿ ಸೋತುದು (8-19). ನಾಚಿಕೊಂಡ ಭೀಮನು ಯಾರೆಂದು ಕೇಳಲು ಹನುಮಂತನು ತನ್ನ ನಿಜಸ್ವರೂಪವನ್ನು ಹೇಳಿದುದು; ಸಂಕ್ಷಿಪ್ತ ರಾಮಾಯಣ (20-41).
03147001 ವೈಶಂಪಾಯನ ಉವಾಚ।
03147001a ಏತಚ್ಛೃತ್ವಾ ವಚಸ್ತಸ್ಯ ವಾನರೇಂದ್ರಸ್ಯ ಧೀಮತಃ।
03147001c ಭೀಮಸೇನಸ್ತದಾ ವೀರಃ ಪ್ರೋವಾಚಾಮಿತ್ರಕರ್ಶನಃ।।
ವೈಶಂಪಾಯನನು ಹೇಳಿದನು: “ಆ ಧೀಮಂತ ವಾನರೇಂದ್ರನ ಮಾತುಗಳನ್ನು ಕೇಳಿ ಅಮಿತ್ರಕರ್ಶನ ವೀರ ಭೀಮಸೇನನು ಉತ್ತರಿಸಿದನು:
03147002a ಕೋ ಭವಾನ್ಕಿಂನಿಮಿತ್ತಂ ವಾ ವಾನರಂ ವಪುರಾಶ್ರಿತಃ।
03147002c ಬ್ರಾಹ್ಮಣಾನಂತರೋ ವರ್ಣಃ ಕ್ಷತ್ರಿಯಸ್ತ್ವಾನುಪೃಚ್ಚತಿ।।
03147003a ಕೌರವಃ ಸೋಮವಂಶೀಯಃ ಕುಂತ್ಯಾ ಗರ್ಭೇಣ ಧಾರಿತಃ।
03147003c ಪಾಂಡವೋ ವಾಯುತನಯೋ ಭೀಮಸೇನ ಇತಿ ಶ್ರುತಃ।।
“ನೀನು ಯಾರು? ಯಾವ ಕಾರಣಕ್ಕೆ ನೀನು ಈ ರೀತಿ ಕಪಿಯ ರೂಪವನ್ನು ತಳೆದಿರುವೆ? ಬ್ರಾಹ್ಮಣರ ನಂತರದ ಜಾತಿಯವ ಕ್ಷತ್ರಿಯನು ನಿನ್ನನ್ನು ಪ್ರಶ್ನಿಸುತ್ತಿದ್ದೇನೆ. ಕೌರವ, ಸೋಮವಂಶದವನು, ಕುಂತಿಯ ಗರ್ಭದಲ್ಲಿ ಹುಟ್ಟಿದ, ಪಾಂಡವ, ವಾಯುತನಯ ಭೀಮಸೇನನೆಂದು ಕರೆಯುತ್ತಾರೆ.”
03147004a ಸ ವಾಕ್ಯಂ ಭೀಮಸೇನಸ್ಯ ಸ್ಮಿತೇನ ಪ್ರತಿಗೃಹ್ಯ ತತ್।
03147004c ಹನೂಮಾನ್ವಾಯುತನಯೋ ವಾಯುಪುತ್ರಮಭಾಷತ।।
ಭೀಮಸೇನನ ಆ ಮಾತುಗಳನ್ನು ನಸುನಕ್ಕು ಸ್ವೀಕರಿಸಿದ ವಾಯುತನಯ ಹನುಮಂತನು ವಾಯುಪುತ್ರನಿಗೆ ಹೇಳಿದನು:
03147005a ವಾನರೋಽಹಂ ನ ತೇ ಮಾರ್ಗಂ ಪ್ರದಾಸ್ಯಾಮಿ ಯಥೇಪ್ಸಿತಂ।
03147005c ಸಾಧು ಗಚ್ಚ ನಿವರ್ತಸ್ವ ಮಾ ತ್ವಂ ಪ್ರಾಪ್ಸ್ಯಸಿ ವೈಶಸಂ।।
“ನಾನೊಬ್ಬ ವಾನರ ಮತ್ತು ನಾನು ನಿನಗೆ ಇಷ್ಟವಾದಂತೆ ಮಾರ್ಗವನ್ನು ನೀಡುವುದಿಲ್ಲ. ನೀನು ಹಿಂದಿರುಗೆ ಹೋದರೆ ಒಳ್ಳೆಯದು. ಇಲ್ಲವಾದರೆ ನಿನ್ನ ನಾಶವನ್ನು ಹೊಂದುತ್ತೀಯೆ.”
03147006 ಭೀಮ ಉವಾಚ।
03147006a ವೈಶಸಂ ವಾಸ್ತು ಯದ್ವಾನ್ಯನ್ನ ತ್ವಾ ಪೃಚ್ಚಾಮಿ ವಾನರ।
03147006c ಪ್ರಯಚ್ಚೋತ್ತಿಷ್ಠ ಮಾರ್ಗಂ ಮೇ ಮಾ ತ್ವಂ ಪ್ರಾಪ್ಸ್ಯಸಿ ವೈಶಸಂ।।
ಭೀಮನು ಹೇಳಿದನು: “ವಾನರ! ನನ್ನ ನಾಶವಾಗುತ್ತದೆಯೋ ಇಲ್ಲವೋ ಎಂದು ನಾನು ನಿನ್ನಲ್ಲಿ ಕೇಳುತ್ತಿಲ್ಲ. ಎದ್ದೇಳು ಮತ್ತು ನನಗೆ ದಾರಿಯನ್ನು ಮಾಡಿಕೊಡು. ಇಲ್ಲವಾದರೆ ನೀನೇ ನಿನ್ನ ನಾಶವನ್ನು ಹೊಂದುತ್ತೀಯೆ.”
03147007 ಹನೂಮಾನುವಾಚ।
03147007a ನಾಸ್ತಿ ಶಕ್ತಿರ್ಮಮೋತ್ಥಾತುಂ ವ್ಯಾಧಿನಾ ಕ್ಲೇಶಿತೋ ಹ್ಯಹಂ।
03147007c ಯದ್ಯವಶ್ಯಂ ಪ್ರಯಾತವ್ಯಂ ಲಂಘಯಿತ್ವಾ ಪ್ರಯಾಹಿ ಮಾಂ।।
ಹನುಮಂತನು ಹೇಳಿದನು: “ನಾನು ವ್ಯಾಧಿಯಿಂದ ಪೀಡಿತನಾಗಿದ್ದೇನೆ. ಏಳುವುದಕ್ಕೆ ಆಗುತ್ತಿಲ್ಲ. ಒಂದುವೇಳೆ ನಿನಗೆ ಮುಂದೆ ಹೋಗಬೇಕಾದರೆ ನನ್ನ ಮೇಲೆ ಹಾರಿ ಹೋಗು.”
03147008 ಭೀಮ ಉವಾಚ।
03147008a ನಿರ್ಗುಣಃ ಪರಮಾತ್ಮೇತಿ ದೇಹಂ ತೇ ವ್ಯಾಪ್ಯ ತಿಷ್ಠತಿ।
03147008c ತಮಹಂ ಜ್ಞಾನವಿಜ್ಞೇಯಂ ನಾವಮನ್ಯೇ ನ ಲಂಘಯೇ।।
ಭೀಮನು ಹೇಳಿದನು: “ನಿರ್ಗುಣನೆನೆಸಿಕೊಂಡ ಪರಮಾತ್ಮನು ನಿನ್ನ ದೇಹದಲ್ಲಿ ವ್ಯಾಪ್ತವಾಗಿದ್ದಾನೆ. ವಿಶೇಷ ಜ್ಞಾನದಿಂದ ಮಾತ್ರ ತಿಳಿಯಬಹುದಾದಂಥಹ ಅವನ ಮೇಲೆ ಹಾರಿ ಅವನನ್ನು ಅಪಮಾನಿಸಲು ಬಯಸುವುದಿಲ್ಲ.
03147009a ಯದ್ಯಾಗಮೈರ್ನ ವಿಂದೇಯಂ ತಮಹಂ ಭೂತಭಾವನಂ।
03147009c ಕ್ರಮೇಯಂ ತ್ವಾಂ ಗಿರಿಂ ಚೇಮಂ ಹನೂಮಾನಿವ ಸಾಗರಂ।।
ಆ ಭೂತಭಾವನನ ಕುರಿತು ಅಧ್ಯಯನ ಮಾಡಿ ತಿಳಿದುಕೊಳ್ಳದೇ ಇದ್ದಿದ್ದರೆ ನಾನೂ ಕೂಡ ಹನುಮಂತನು ಸಾಗರವನ್ನೇ ಹೇಗೆ ಹಾರಿ ದಾಟಿದನೋ ಹಾಗೆ ನಿನ್ನನ್ನೂ ಈ ಪರ್ವತವನ್ನೂ ಹಾರಿ ಹೋಗುತ್ತಿದ್ದೆ!”1
03147010 ಹನೂಮಾನುವಾಚ।
03147010a ಕ ಏಷ ಹನುಮಾನ್ನಾಮ ಸಾಗರೋ ಯೇನ ಲಂಘಿತಃ।
03147010c ಪೃಚ್ಚಾಮಿ ತ್ವಾ ಕುರುಶ್ರೇಷ್ಠ ಕಥ್ಯತಾಂ ಯದಿ ಶಕ್ಯತೇ।।
ಹನುಮಂತನು ಹೇಳಿದನು: “ಸಾಗರವನ್ನು ಲಂಘಿಸಿ ದಾಟಿದ ಆ ಹನುಮಂತನೆನ್ನುವನು ಯಾರು? ಕುರುಶ್ರೇಷ್ಠ! ಇದನ್ನು ಕೇಳುತ್ತಿದ್ದೇನೆ. ನಿನಗೆ ಸಾಧ್ಯವಾದರೆ ಉತ್ತರಿಸು.”
03147011 ಭೀಮ ಉವಾಚ।
03147011a ಭ್ರಾತಾ ಮಮ ಗುಣಶ್ಲಾಘ್ಯೋ ಬುದ್ಧಿಸತ್ತ್ವಬಲಾನ್ವಿತಃ।
03147011c ರಾಮಾಯಣೇಽತಿವಿಖ್ಯಾತಃ ಶೂರೋ ವಾನರಪುಂಗವಃ।।
ಭೀಮನು ಹೇಳಿದನು: “ಗುಣವಂತನೂ, ಬುದ್ಧಿ, ಸತ್ವ ಬಲಾನ್ವಿತನೂ ಆದ ಅವನು ನನ್ನ ಅಣ್ಣ. ರಾಮಾಯಣದಲ್ಲಿ ಶೂರನೆಂದೂ, ವಾನರಪುಂಗವನೆಂದೂ ಖ್ಯಾತಿಗೊಂಡವನು.
03147012a ರಾಮಪತ್ನೀಕೃತೇ ಯೇನ ಶತಯೋಜನಮಾಯತಃ।
03147012c ಸಾಗರಃ ಪ್ಲವಗೇಂದ್ರೇಣ ಕ್ರಮೇಣೈಕೇನ ಲಂಘಿತಃ।।
ರಾಮನ ಪತ್ನಿಯ ಸಲುವಾಗಿ ಅವನು ನೂರುಯೋಜನ ಅಗಲವಾಗಿದ್ದ ಸಾಗರವನ್ನು ಈ ಕಪೀಂದ್ರನು ಒಂದೇ ಒಂದು ನೆಗೆತವನ್ನು ಹಾರಿ ದಾಟಿದನು.
03147013a ಸ ಮೇ ಭ್ರಾತಾ ಮಹಾವೀರ್ಯಸ್ತುಲ್ಯೋಽಹಂ ತಸ್ಯ ತೇಜಸಾ।
03147013c ಬಲೇ ಪರಾಕ್ರಮೇ ಯುದ್ಧೇ ಶಕ್ತೋಽಹಂ ತವ ನಿಗ್ರಹೇ।।
ಆ ಮಹಾವೀರನು ನನ್ನ ಅಣ್ಣ. ನಾನೂ ಕೂಡ ತೇಜಸ್ಸು, ಬಲ ಮತ್ತು ಪರಾಕ್ರಮದಲ್ಲಿ ಅವನಂತೆಯೇ ಇದ್ದೇನೆ. ನಿನ್ನನ್ನು ಯುದ್ಧದಲ್ಲಿ ನಿಗ್ರಹಿಸಲು ಸಮರ್ಥನಾಗಿದ್ದೇನೆ.
03147014a ಉತ್ತಿಷ್ಠ ದೇಹಿ ಮೇ ಮಾರ್ಗಂ ಪಶ್ಯ ವಾ ಮೇಽದ್ಯ ಪೌರುಷಂ।
03147014c ಮಚ್ಚಾಸನಮಕುರ್ವಾಣಂ ಮಾ ತ್ವಾ ನೇಷ್ಯೇ ಯಮಕ್ಷಯಂ।।
ಎದ್ದೇಳು. ನನಗೆ ದಾರಿಯನ್ನು ಬಿಟ್ಟುಕೊಡು. ಇಲ್ಲವಾದರೆ ಇಂದು ನನ್ನ ಪೌರುಷವನ್ನು ನೋಡು. ನನ್ನ ಆಜ್ಞೆಯನ್ನು ಪಾಲಿಸದೇ ಯಮಲೋಕಕ್ಕೆ ಪ್ರಯಾಣಮಾಡಬೇಡ!””
03147015 ವೈಶಂಪಾಯನ ಉವಾಚ।
03147015a ವಿಜ್ಞಾಯ ತಂ ಬಲೋನ್ಮತ್ತಂ ಬಾಹುವೀರ್ಯೇಣ ಗರ್ವಿತಂ।
03147015c ಹೃದಯೇನಾವಹಸ್ಯೈನಂ ಹನೂಮಾನ್ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ಅವನು ಬಲೋನ್ಮತ್ತನಾಗಿದ್ದಾನೆ ಮತ್ತು ಬಾಹುವೀರ್ಯದಿಂದ ಗರ್ವಿತನಾಗಿದ್ದಾನೆ ಎಂದು ತಿಳಿದು ಹನುಮಂತನು ಹೃದಯದಲ್ಲಿಯೇ ಅವನ ಕುರಿತು ನಕ್ಕು ಹೇಳಿದನು:
03147016a ಪ್ರಸೀದ ನಾಸ್ತಿ ಮೇ ಶಕ್ತಿರುತ್ಥಾತುಂ ಜರಯಾನಘ।
03147016c ಮಮಾನುಕಂಪಯಾ ತ್ವೇತತ್ಪುಚ್ಚಮುತ್ಸಾರ್ಯ ಗಮ್ಯತಾಂ।।
“ನನ್ನ ಮೇಲೆ ಕೃಪೆತೋರು! ನನಗೆ ಏಳಲು ಆಗುತ್ತಿಲ್ಲ! ಅನಘ! ನಾನು ಮುದುಕ! ನನ್ನ ಮೇಲೆ ಅನುಕಂಪ ತೋರಿಸಿ ನನ್ನ ಈ ಬಾಲವನ್ನು ಎತ್ತಿ ಸರಿಸಿ ಮುಂದೆ ಸಾಗಬೇಕು!”
03147017a ಸಾವಜ್ಞಮಥ ವಾಮೇನ ಸ್ಮಯಂ ಜಗ್ರಾಹ ಪಾಣಿನಾ।
03147017c ನ ಚಾಶಕಚ್ಚಾಲಯಿತುಂ ಭೀಮಃ ಪುಚ್ಚಂ ಮಹಾಕಪೇಃ।।
ತುಚ್ಛಭಾವನೆಯ ಮುಗುಳ್ನಗೆಯನ್ನು ನಗುತ್ತಾ ಭೀಮನು ತನ್ನ ಎಡಗೈಯಿಂದ ಆ ಮಹಾಕಪಿಯ ಬಾಲವನ್ನು ಹಿಡಿದನು. ಆದರೆ ಅದನ್ನು ಅಲುಗಾಡಿಸಲೂ ಅವನಿಗೆ ಆಗಲಿಲ್ಲ.
03147018a ಉಚ್ಚಿಕ್ಷೇಪ ಪುನರ್ದೋರ್ಭ್ಯಾಮಿಂದ್ರಾಯುಧಮಿವೋಚ್ಚ್ರಿತಂ।
03147018c ನೋದ್ಧರ್ತುಮಶಕದ್ಭೀಮೋ ದೋರ್ಭ್ಯಾಮಪಿ ಮಹಾಬಲಃ।।
ಅನಂತರ ಇಂದ್ರಾಯುಧದಂತೆ ಎತ್ತರವಾಗಿ ಬೆಳೆದಿದ್ದ ಅದನ್ನು ತನ್ನ ಎರಡೂ ಕೈಗಳಿಂದ ಎಳೆದಾಡಿದನು. ತನ್ನ ಎರಡೂ ಕೈಗಳಿಂದಲೂ ಆ ಮಹಾಬಲಿ ಭೀಮನು ಅದನ್ನು ಎತ್ತಲು ಅಶಕ್ತನಾದನು.
03147019a ಉತ್ಕ್ಷಿಪ್ತಭ್ರೂರ್ವಿವೃತ್ತಾಕ್ಷಃ ಸಂಹತಭ್ರುಕುಟೀಮುಖಃ।
03147019c ಸ್ವಿನ್ನಗಾತ್ರೋಽಭವದ್ಭೀಮೋ ನ ಚೋದ್ಧರ್ತುಂ ಶಶಾಕ ಹ।।
ಕಣ್ಣಿನ ಹುಬ್ಬುಗಳನ್ನು ಬಿಗಿದು, ಕಣ್ಣುಗಳನ್ನು ಅಗಲುಮಾಡಿ, ಕಣ್ಣುಗಳನ್ನು ಮೇಲೆ ಕಳಗೆ ಮಾಡಿ ಎತ್ತಿದರೂ ಅವನ ಬಾಹುಗಳು ಬೆವರಿದವೇ ಹೊರತು ಆ ಭೀಮನು ಅದನ್ನು ಹಂದಾಡಿಸಲೂ ಅಶಕ್ತನಾದನು.
03147020a ಯತ್ನವಾನಪಿ ತು ಶ್ರೀಮಾಽಲ್ಲಾಂಗೂಲೋದ್ಧರಣೋದ್ಧುತಃ।
03147020c ಕಪೇಃ ಪಾರ್ಶ್ವಗತೋ ಭೀಮಸ್ತಸ್ಥೌ ವ್ರೀಡಾದಧೋಮುಖಃ।।
ಬಹಳಷ್ಟು ಪ್ರಯತ್ನಿಸಿ ಸೋತುಹೋದ ಭೀಮನು ಆ ಮಹಾಕಪಿಯ ಪಕ್ಕದಲ್ಲಿ ನಾಚಿಕೆಯಿಂದ ತಲೆಬಾಗಿಸಿ ನಿಂತುಕೊಂಡನು.
03147021a ಪ್ರಣಿಪತ್ಯ ಚ ಕೌಂತೇಯಃ ಪ್ರಾಂಜಲಿರ್ವಾಕ್ಯಮಬ್ರವೀತ್।
03147021c ಪ್ರಸೀದ ಕಪಿಶಾರ್ದೂಲ ದುರುಕ್ತಂ ಕ್ಷಮ್ಯತಾಂ ಮಮ।।
ಕೌಂತೇಯನು ಅಂಜಲೀ ಬದ್ಧನಾಗಿ ಕೈಮುಗಿದು ಹೇಳಿದನು: “ಕಪಿಶಾರ್ದೂಲ! ಕೃಪೆತೋರು! ನನ್ನ ಅಪಮಾನಗೊಳಿಸುವ ಮಾತುಗಳನ್ನು ಕ್ಷಮಿಸು.
03147022a ಸಿದ್ಧೋ ವಾ ಯದಿ ವಾ ದೇವೋ ಗಂಧರ್ವೋ ವಾಥ ಗುಹ್ಯಕಃ।
03147022c ಪೃಷ್ಟಃ ಸನ್ಕಾಮಯಾ ಬ್ರೂಹಿ ಕಸ್ತ್ವಂ ವಾನರರೂಪಧೃಕ್।।
ವಾನರರೂಪವನ್ನು ಧರಿಸಿರುವ ನೀನು ಯಾರು? ಸಿದ್ಧನೋ, ಅಥವಾ ದೇವತೆಯೋ, ಗಂಧರ್ವನೋ ಅಥವಾ ಗುಹ್ಯಕನೋ? ನಾನು ಕೇಳಿದ ಪ್ರಶ್ನೆಗೆ ಉತ್ತರಿಸುವ ಕೃಪೆತೋರು.”
03147023 ಹನೂಮಾನುವಾಚ।
03147023a ಯತ್ತೇ ಮಮ ಪರಿಜ್ಞಾನೇ ಕೌತೂಹಲಮರಿಂದಮ।
03147023c ತತ್ಸರ್ವಮಖಿಲೇನ ತ್ವಂ ಶೃಣು ಪಾಂಡವನಂದನ।।
ಹನುಮಂತನು ಹೇಳಿದನು: “ಅರಿಂದಮ! ಪಾಂಡವನಂದನ! ನನ್ನ ಕುರಿತು ತಿಳಿದುಕೊಳ್ಳಲು ನಿನಗೆ ಎಷ್ಟು ಕುತೂಹಲವಿದೆಲ್ಲವೋ ಅದೆಲ್ಲವನ್ನೂ ನಿನಗೆ ಹೇಳುತ್ತೇನೆ. ಕೇಳು.
03147024a ಅಹಂ ಕೇಸರಿಣಃ ಕ್ಷೇತ್ರೇ ವಾಯುನಾ ಜಗದಾಯುಷಾ।
03147024c ಜಾತಃ ಕಮಲಪತ್ರಾಕ್ಷ ಹನೂಮಾನ್ನಾಮ ವಾನರಃ।।
ನಾನು ಕೇಸರಿಯ ಗರ್ಭದಲ್ಲಿ ವಾಯುವಿನಿಂದ ಹುಟ್ಟಿದ್ದೇನೆ ಮತ್ತು ಕಮಲಪತ್ರಾಕ್ಷ! ಹನೂಮಾನ್ ಎಂಬ ಹೆಸರಿನ ನಾನೊಬ್ಬ ವಾನರ.
03147025a ಸೂರ್ಯಪುತ್ರಂ ಚ ಸುಗ್ರೀವಂ ಶಕ್ರಪುತ್ರಂ ಚ ವಾಲಿನಂ।
03147025c ಸರ್ವವಾನರರಾಜಾನೌ ಸರ್ವವಾನರಯೂಥಪಾಃ।।
03147026a ಉಪತಸ್ಥುರ್ಮಹಾವೀರ್ಯಾ ಮಮ ಚಾಮಿತ್ರಕರ್ಶನ।
03147026c ಸುಗ್ರೀವೇಣಾಭವತ್ಪ್ರೀತಿರನಿಲಸ್ಯಾಗ್ನಿನಾ ಯಥಾ।।
ವಾನರರೆಲ್ಲರ ರಾಜರಾದ ಸೂರ್ಯಪುತ್ರ ಸುಗ್ರೀವ ಮತ್ತು ಇಂದ್ರನ ಮಗ ವಾಲಿ ಇಬ್ಬರನ್ನೂ ಎಲ್ಲ ಮಹಾವೀರ ವಾನರ ಪಂಗಡಗಳೂ ಸೇವಿಸುತ್ತಿದ್ದರು. ನಾನು ಮತ್ತು ಆ ಅಮಿತ್ರಕರ್ಷಣ ಸುಗ್ರೀವನು ಬೆಂಕಿಯೊಂದಿಗೆ ಗಾಳಿಯು ಹೇಗೋ ಹಾಗೆ ಪ್ರೀತಿಯಿಂದ ಅನ್ಯೋನ್ಯರಾಗಿದ್ದೆವು.
03147027a ನಿಕೃತಃ ಸ ತತೋ ಭ್ರಾತ್ರಾ ಕಸ್ಮಿಂಶ್ಚಿತ್ಕಾರಣಾಂತರೇ।
03147027c ಋಶ್ಯಮೂಕೇ ಮಯಾ ಸಾರ್ಧಂ ಸುಗ್ರೀವೋ ನ್ಯವಸಚ್ಚಿರಂ।।
ಯಾವುದೋ ಕಾರಣಾಂತರದಿಂದ ತನ್ನ ಅಣ್ಣನಿಂದ ಮೋಸಗೊಂಡು ಸುಗ್ರೀವನು ನನ್ನೊಡನೆ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿದ್ದನು.
03147028a ಅಥ ದಾಶರಥಿರ್ವೀರೋ ರಾಮೋ ನಾಮ ಮಹಾಬಲಃ।
03147028c ವಿಷ್ಣುರ್ಮಾನುಷರೂಪೇಣ ಚಚಾರ ವಸುಧಾಮಿಮಾಂ।।
ಆಗ ದಶರಥನ ಮಗ ರಾಮನೆಂಬ ಹೆಸರಿನ ವೀರ ಮಹಾಬಲಶಾಲಿ, ಮನುಷ್ಯರೂಪದಲ್ಲಿದ್ದ ವಿಷ್ಣುವು ಈ ಭೂಮಿಯುಲ್ಲಿ ಅಲೆದಾಡುತ್ತಿದ್ದನು.
03147029a ಸ ಪಿತುಃ ಪ್ರಿಯಮನ್ವಿಚ್ಚನ್ಸಹಭಾರ್ಯಃ ಸಹಾನುಜಃ।
03147029c ಸಧನುರ್ಧನ್ವಿನಾಂ ಶ್ರೇಷ್ಠೋ ದಂಡಕಾರಣ್ಯಮಾಶ್ರಿತಃ।।
ತನ್ನ ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಧನ್ವಿಗಳಲ್ಲಿ ಶ್ರೇಷ್ಠನಾದ ಅವನು ಪತ್ನಿಯೊಂದಿಗೆ ಮತ್ತು ತಮ್ಮನೊಂದಿಗೆ ದಂಡಕಾರಣ್ಯದಲ್ಲಿ ವಾಸಿಸಿದನು.
03147030a ತಸ್ಯ ಭಾರ್ಯಾ ಜನಸ್ಥಾನಾದ್ರಾವಣೇನ ಹೃತಾ ಬಲಾತ್।
03147030c ವಂಚಯಿತ್ವಾ ಮಹಾಬುದ್ಧಿಂ ಮೃಗರೂಪೇಣ ರಾಘವಂ।।
ಅವನ ಪತ್ನಿಯನ್ನು ರಾವಣನು ಜನಸ್ಥಾನದಲ್ಲಿ ಜಿಂಕೆಯ ರೂಪದಲ್ಲಿ ಆ ಮಹಾಬುದ್ಧಿ ರಾಘವನನ್ನು ಮೋಸಗೊಳಿಸಿ ಬಲಾತ್ಕಾರವಾಗಿ ಅಪಹರಿಸಿದನು.
03147031a ಹೃತದಾರಃ ಸಹ ಭ್ರಾತ್ರಾ ಪತ್ನೀಂ ಮಾರ್ಗನ್ಸ ರಾಘವಃ।
03147031c ದೃಷ್ಟವಾಂ ಶೈಲಶಿಖರೇ ಸುಗ್ರೀವಂ ವಾನರರ್ಷಭಂ।।
ಪತ್ನಿಯನ್ನು ಕಳೆದುಕೊಂಡ ರಾಘವನು ಅವಳನ್ನು ಹುಡುಕುತ್ತಾ ಪರ್ವತಶಿಖರದಲ್ಲಿದ್ದ ವಾನರರ್ಷಭ ಸುಗ್ರೀವನನ್ನು ಕಂಡನು.
03147032a ತೇನ ತಸ್ಯಾಭವತ್ಸಖ್ಯಂ ರಾಘವಸ್ಯ ಮಹಾತ್ಮನಃ।
03147032c ಸ ಹತ್ವಾ ವಾಲಿನಂ ರಾಜ್ಯೇ ಸುಗ್ರೀವಂ ಪ್ರತ್ಯಪಾದಯತ್।।
03147032e ಸ ಹರೀನ್ಪ್ರೇಷಯಾಮಾಸ ಸೀತಾಯಾಃ ಪರಿಮಾರ್ಗಣೇ।।
ಅಲ್ಲಿ ಮಹಾತ್ಮ ರಾಘವನಿಗೆ ಅವನೊಂದಿಗೆ ಸಖ್ಯವಾಯಿತು. ಅವನು ವಾಲಿಯನ್ನು ಕೊಂದು ರಾಜ್ಯವನ್ನು ಸುಗ್ರೀವನಿಗಿತ್ತನು. ಅನಂತರ ಅವನು ಸೀತೆಯನ್ನು ಹುಡುಕಲು ಕಪಿಗಳನ್ನು ಕಳುಹಿಸಿದನು.
03147033a ತತೋ ವಾನರಕೋಟೀಭಿರ್ಯಾಂ ವಯಂ ಪ್ರಸ್ಥಿತಾ ದಿಶಂ।
03147033c ತತ್ರ ಪ್ರವೃತ್ತಿಃ ಸೀತಾಯಾ ಗೃಧ್ರೇಣ ಪ್ರತಿಪಾದಿತಾ।।
ಕೋಟಿಗಟ್ಟಲೆ ವಾನರರೊಂದಿಗೆ ಕಳುಹಿಸಲ್ಪಟ್ಟ ನಾವೂ ಕೂಡ ಒಂದು ದಿಕ್ಕಿನಲ್ಲಿ ಹೊರಟಿದ್ದೆವು. ಅಲ್ಲಿ ಒಂದು ಹದ್ದು ನಮಗೆ ಸೀತೆಯ ಕುರಿತು ವಿಷಯವನ್ನು ತಿಳಿಸಿತು.
03147034a ತತೋಽಹಂ ಕಾರ್ಯಸಿದ್ಧ್ಯರ್ಥಂ ರಾಮಸ್ಯಾಕ್ಲಿಷ್ಟಕರ್ಮಣಃ।
03147034c ಶತಯೋಜನವಿಸ್ತೀರ್ಣಮರ್ಣವಂ ಸಹಸಾಪ್ಲುತಃ।।
ಆಗ ಅಕ್ಲಿಷ್ಟಕರ್ಮಿ ರಾಮನ ಸಿದ್ದಿಗೋಸ್ಕರವಾಗಿ ನಾನು ನೂರು ಯೋಜನ ವಿಸ್ತೀರ್ಣದ ಮಹಾಸಾಗರವನ್ನು ಒಂದೇ ಸಾರಿ ಹಾರಿ ದಾಟಿದೆನು.
03147035a ದೃಷ್ಟಾ ಸಾ ಚ ಮಯಾ ದೇವೀ ರಾವಣಸ್ಯ ನಿವೇಶನೇ।
03147035c ಪ್ರತ್ಯಾಗತಶ್ಚಾಪಿ ಪುನರ್ನಾಮ ತತ್ರ ಪ್ರಕಾಶ್ಯ ವೈ।।
ಅಲ್ಲಿ ರಾವಣನ ರಾಜ್ಯದಲ್ಲಿ ಆ ದೇವಿಯನ್ನು ನೋಡಿದೆನು ಮತ್ತು ನನ್ನ ಹೆಸರನ್ನು ಅಲ್ಲಿ ಪುನಃ ಪ್ರಕಟಿಸಿ ಹಿಂದಿರುಗಿದೆನು2.
03147036a ತತೋ ರಾಮೇಣ ವೀರೇಣ ಹತ್ವಾ ತಾನ್ಸರ್ವರಾಕ್ಷಸಾನ್।
03147036c ಪುನಃ ಪ್ರತ್ಯಾಹೃತಾ ಭಾರ್ಯಾ ನಷ್ಟಾ ವೇದಶ್ರುತಿರ್ಯಥಾ।।
ಅನಂತರ ವೀರ ರಾಮನು ಆ ಎಲ್ಲ ರಾಕ್ಷಸರನ್ನು ಸಂಹರಿಸಿ, ವೇದಶ್ರುತಿಗಳಂತೆ ಕಳೆದುಹೋಗಿದ್ದ ತನ್ನ ಭಾರ್ಯೆಯನ್ನು ಪುನಃ ಸ್ವೀಕರಿಸಿದನು.
03147037a ತತಃ ಪ್ರತಿಷ್ಠಿತೇ ರಾಮೇ ವೀರೋಽಯಂ ಯಾಚಿತೋ ಮಯಾ।
03147037c ಯಾವದ್ರಾಮಕಥಾ ವೀರ ಭವೇಲ್ಲೋಕೇಷು ಶತ್ರುಹನ್।।
03147037e ತಾವಜ್ಜೀವೇಯಮಿತ್ಯೇವಂ ತಥಾಸ್ತ್ವಿತಿ ಚ ಸೋಽಬ್ರವೀತ್।।
ವೀರ ರಾಮನು ಹಿಂದಿರುಗಿದ ನಂತರ ನಾನು ಅವನಲ್ಲಿ ಕೇಳಿಕೊಂಡಿದ್ದೆನು: “ವೀರ! ಶತ್ರುಹರ! ಎಲ್ಲಿಯವರೆಗೆ ರಾಮಕಥೆಯು ಲೋಕಗಳಲ್ಲಿರುವುದೋ ಅಲ್ಲಿಯ ವರೆಗೆ ನಾವು ಜೀವಿಸಿರಲಿ!” ಎಂದು. ಅದಕ್ಕೆ ಅವನು ಹಾಗೆಯೇ ಆಗಲಿ ಎಂದಿದ್ದನು.
03147038a ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ।
03147038c ರಾಜ್ಯಂ ಕಾರಿತವಾನ್ರಾಮಸ್ತತಸ್ತು ತ್ರಿದಿವಂ ಗತಃ।।
ಹನ್ನೊಂದು ಸಾವಿರ ವರ್ಷಗಳು ರಾಜ್ಯಭಾರವನ್ನು ಮಾಡಿ ರಾಮನು ದೇವಲೋಕವನ್ನು ಸೇರಿದನು.
03147039a ತದಿಹಾಪ್ಸರಸಸ್ತಾತ ಗಂಧರ್ವಾಶ್ಚ ಸದಾನಘ।
03147039c ತಸ್ಯ ವೀರಸ್ಯ ಚರಿತಂ ಗಾಯಂತ್ಯೋ ರಮಯಂತಿ ಮಾಂ।।
ಅನಘ! ಮಗೂ! ಈಗ ಇಲ್ಲಿ ಅಪ್ಸರೆಯರೂ ಗಂಧರ್ವರೂ ಆ ವೀರನ ಚರಿತ್ರೆಯನ್ನು ಹಾಡುತ್ತಾ ನನ್ನನ್ನು ರಂಜಿಸುತ್ತಾರೆ.
03147040a ಅಯಂ ಚ ಮಾರ್ಗೋ ಮರ್ತ್ಯಾನಾಮಗಮ್ಯಃ ಕುರುನಂದನ।
03147040c ತತೋಽಹಂ ರುದ್ಧವಾನ್ಮಾರ್ಗಂ ತವೇಮಂ ದೇವಸೇವಿತಂ।।
03147040e ಧರ್ಷಯೇದ್ವಾ ಶಪೇದ್ವಾಪಿ ಮಾ ಕಶ್ಚಿದಿತಿ ಭಾರತ।।
ಕುರುನಂದನ! ಈ ಮಾರ್ಗವಾದರೋ ಮನುಷ್ಯರು ಹೋಗುವಂಥಹುದಲ್ಲ. ಅದಕ್ಕಾಗಿಯೇ ನಾನು ಈ ಮಾರ್ಗದಲ್ಲಿ ಹೋಗುವುದನ್ನು ತಡೆಹಿಡಿದಿದ್ದೇನೆ. ಭಾರತ! ದೇವಸೇವಿತವಾದ ಈ ಮಾರ್ಗದಲ್ಲಿ ಯಾರೂ ನಿನ್ನನ್ನು ಘಾತಿಗೊಳಿಸಬಾರದು ಅಥವಾ ಶಪಿಸಬಾರದು.
03147041a ದಿವ್ಯೋ ದೇವಪಥೋ ಹ್ಯೇಷ ನಾತ್ರ ಗಚ್ಚಂತಿ ಮಾನುಷಾಃ।
03147041c ಯದರ್ಥಮಾಗತಶ್ಚಾಸಿ ತತ್ಸರೋಽಭ್ಯರ್ಣ ಏವ ಹಿ।।
ಇದು ದೇವತೆಗಳು ಬಳಸುವ ದಿವ್ಯ ಮಾರ್ಗ. ಅಲ್ಲಿ ಮನುಷ್ಯರು ಹೋಗುವುದಿಲ್ಲ. ಆದರೆ ನೀನು ಯಾವ ಸರೋವರಕ್ಕಾಗಿ ಬಂದಿರುವೆಯೋ ಅದು ಹತ್ತಿರದಲ್ಲಿಯೇ ಇದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಹನುಮದ್ಭೀಮಸಂವಾದೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಹನುಮದ್ಭೀಮಸಂವಾದವೆಂಬ ನೂರಾನಲ್ವತ್ತೇಳನೆಯ ಅಧ್ಯಾಯವು.
-
ಇಲ್ಲಿ ಭೀಮನು ತಾನು ಮನುಷ್ಯ –ಅಧ್ಯಯನ ಮಾಡಿ ಪರಮಾತ್ಮನನ್ನು ತಿಳಿದುಕೊಳ್ಳಬಲ್ಲವನು. ಆದರೆ ಹನುಮಂತನು ವಾನರ - ಅವನಿಗೆ ಪರಮಾತ್ಮನನ್ನು ತಿಳಿದುಕೊಳ್ಳುವ ಬುದ್ಧಿ ಇರಲಿಲ್ಲ ಎಂದು ತಿಳಿದುಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ. ↩︎
-
ರಾವಣಸ್ಯ ನಿವೇಶನ ಎನ್ನುವುದನ್ನು ರಾವಣನ ಅರಮನೆ ಎಂದು ಅರ್ಥೈಸಿಕೊಳ್ಳದೇ ಅವನ ರಾಜ್ಯ ಎಂದು ಅರ್ಥೈಸಿಕೊಳ್ಳಬೇಕು. ಏಕೆಂದರೆ, ಸೀತೆಯು ರಾವಣನ ಅರಮನೆಯನ್ನು ಪ್ರವೇಶಿಸಿಯೇ ಇರಲಿಲ್ಲ. ↩︎