146 ಲೋಮಶತೀರ್ಥಯಾತ್ರಾಯಾಂ ಭೀಮಕದಲೀಶಂಡಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 146

ಸಾರ

ಗಾಳಿಯಲ್ಲಿ ಬಂದು ಬಿದ್ದ ಸೌಗಂಧಿಕಾ ಪುಷ್ಪವನ್ನು ನೋಡಿ ದ್ರೌಪದಿಯು ಇನ್ನೂ ಅನೇಕ ಪುಷ್ಪಗಳನ್ನು ತಂದುಕೊಡೆಂದು ಭೀಮನಿಗೆ ಹೇಳುವುದು (1-11). ಆ ಪುಷ್ಪವನ್ನು ಹೊತ್ತು ತಂದ ಗಾಳಿಯು ಬರುವ ಕಡೆ ಭೀಮನು ಹೊರಡುವುದು; ದಾರಿಯಲ್ಲಿ ವನಗಳನ್ನು ಧ್ವಂಸಮಾಡಿ ಅಲ್ಲಿಯ ಶಾಂತತೆಯನ್ನು ಭಂಗಗೊಳಿಸಿದುದು (12-58). ಬಾಳೆಯ ವನದಲ್ಲಿ ನಿದ್ರಿಸುತ್ತಿದ್ದ ಹನುಮಂತನು ಭೀಮನ ಶಂಖನಾದವನ್ನು ಕೇಳಿ ಎಚ್ಚೆತ್ತು, ಬಾಲವನ್ನು ನೆಲಕ್ಕೆ ಬಡಿಯಲು ಆ ಶಬ್ಧವು ಎಲ್ಲಿಂದ ಬಂದಿತೆಂದು ಹುಡುಕುತ್ತಾ ಭೀಮನು ಹನುಮಂತನನ್ನು ನೋಡಿ, ಹತ್ತಿರಹೋಗಿ ಸಿಂಹನಾದಗೈದುದು (59-73). ಹನುಮಂತನು ಭೀಮನ ಕೃತ್ಯಗಳನ್ನು ಉಪೇಕ್ಷಿಸಿ, ಮನುಷ್ಯರು ಬರಬಾರದ ಆ ಪ್ರದೇಶದಿಂದ ಹಿಂದಿರುಗಬೇಕೆಂದು ಹೇಳುವುದು (74-81).

03146001 ವೈಶಂಪಾಯನ ಉವಾಚ।
03146001a ತತ್ರ ತೇ ಪುರುಷವ್ಯಾಘ್ರಾಃ ಪರಮಂ ಶೌಚಮಾಸ್ಥಿತಾಃ।
03146001c ಷಡ್ರಾತ್ರಮವಸನ್ವೀರಾ ಧನಂಜಯದಿದೃಕ್ಷಯಾ।।
03146001e ತಸ್ಮಿನ್ವಿಹರಮಾಣಾಶ್ಚ ರಮಮಾಣಾಶ್ಚ ಪಾಂಡವಾಃ।।

ªÉʱವೈಶಂಪಾಯನನು ಹೇಳಿದನು: “ಅಲ್ಲಿ ಆ ವೀರ ಪುರುಷವ್ಯಾಘ್ರ ಪಾಂಡವರು ವಿಹರಿಸುತ್ತಾ ರಂಜಿಸಿಕೊಳ್ಳುತ್ತಾ ಅತ್ಯಂತ ಶುಚಿಯಾಗಿದ್ದುಕೊಂಡು ಧನಂಜಯನನ್ನು ನೋಡುವ ಆಕಾಂಕ್ಷೆಯಿಂದ ಆರು ರಾತ್ರಿಗಳನ್ನು ಕಳೆದರು.

03146002a ಮನೋಜ್ಞೇ ಕಾನನವರೇ ಸರ್ವಭೂತಮನೋರಮೇ।
03146002c ಪಾದಪೈಃ ಪುಷ್ಪವಿಕಚೈಃ ಫಲಭಾರಾವನಾಮಿತೈಃ।।
03146003a ಶೋಭಿತಂ ಸರ್ವತೋರಮ್ಯೈಃ ಪುಂಸ್ಕೋಕಿಲಕುಲಾಕುಲೈಃ।
03146003c ಸ್ನಿಗ್ಧಪತ್ರೈರವಿರಲೈಃ ಶೀತಚ್ಚಾಯೈರ್ಮನೋರಮೈಃ।।
03146004a ಸರಾಂಸಿ ಚ ವಿಚಿತ್ರಾಣಿ ಪ್ರಸನ್ನಸಲಿಲಾನಿ ಚ।
03146004c ಕಮಲೈಃ ಸೋತ್ಪಲೈಸ್ತತ್ರ ಭ್ರಾಜಮಾನಾನಿ ಸರ್ವಶಃ।।
03146004e ಪಶ್ಯಂತಶ್ಚಾರುರೂಪಾಣಿ ರೇಮಿರೇ ತತ್ರ ಪಾಂಡವಾಃ।।

ಮನೋಜ್ಞವಾದ, ಸರ್ವಭೂತಗಳಿಗೂ ಮನೋರಮವಾದ, ಆ ಶ್ರೇಷ್ಠ ಕಾನನದಲ್ಲಿ, ಹೂಗಳ ಗೊಂಚಲುಗಳಿಂದ ತೂಗುತ್ತಿದ್ದ, ಹಣ್ಣಿನ ಭಾರದಿಂದ ಬಾಗಿನಿಂತಿದ್ದ ಮರಗಳಿಂದ ಶೋಭಿತವಾದ, ಎಲ್ಲೆಲ್ಲೂ ಸುಂದರವಾಗಿದ್ದ, ಗಂಡುಕೋಗಿಲೆಗಳ ಕೂಗಿನಿಂದ ತುಂಬಿದ್ದ, ದಟ್ಟವಾದ ಚಿಗುರೆಲೆಗಳಿಂದ ಕೂಡಿದ್ದ, ಮನೋರಮ ತಣ್ಣಗಿನ ನೆರಳನ್ನು ಹೊಂದಿದ್ದ, ತಿಳಿನೀರಿನ ವಿಚಿತ್ರ ಸರೋವರಗಳಿಂದ ಕೂಡಿದ್ದ, ಕಮಲಗಳಿಂದ ಮತ್ತು ತಾವರೆಗಳಿಂದ ಎಲ್ಲೆಡೆಯೂ ಹೊಳೆಯುತ್ತಿದ್ದ ಸುಂದರ ರೂಪಗಳನ್ನು ನೋಡುತ್ತಾ ಅಲ್ಲಿ ಪಾಂಡವರು ರಮಿಸಿದರು.

03146005a ಪುಣ್ಯಗಂಧಃ ಸುಖಸ್ಪರ್ಶೋ ವವೌ ತತ್ರ ಸಮೀರಣಃ।
03146005c ಹ್ಲಾದಯನ್ಪಾಂಡವಾನ್ಸರ್ವಾನ್ಸಕೃಷ್ಣಾನ್ಸದ್ವಿಜರ್ಷಭಾನ್।।

ಅಲ್ಲಿ ಪುಣ್ಯವಾದ ಸುವಾಸನೆಯನ್ನು ಹೊತ್ತ ಸಂತೋಷವನ್ನು ನೀಡುವ ಮಂದಮಾರುತವು ದ್ರೌಪದಿಯೊಂದಿಗೆ ಪಾಂಡವರನ್ನೂ ಬ್ರಾಹ್ಮಣರನ್ನೂ ಆಹ್ಲಾದಗೊಳಿಸಿ ಬೀಸಿತು.

03146006a ತತಃ ಪೂರ್ವೋತ್ತರೋ ವಾಯುಃ ಪವಮಾನೋ ಯದೃಚ್ಚಯಾ।
03146006c ಸಹಸ್ರಪತ್ರಮರ್ಕಾಭಂ ದಿವ್ಯಂ ಪದ್ಮಮುದಾವಹತ್।।

ಆಗ ಪೂರ್ವೋತ್ತರ ಗಾಳಿಯು ಬೀಸತೊಡಗಿತು ಮತ್ತು ಅದು ಸಹಸ್ರ ದಳಗಳ ಪ್ರಭೆಯನ್ನು ಹೊಂದಿದ್ದ ದಿವ್ಯ ಪದ್ಮವನ್ನು ಹೊತ್ತು ತಂದಿತು.

03146007a ತದಪಶ್ಯತ ಪಾಂಚಾಲೀ ದಿವ್ಯಗಂಧಂ ಮನೋರಮಂ।
03146007c ಅನಿಲೇನಾಹೃತಂ ಭೂಮೌ ಪತಿತಂ ಜಲಜಂ ಶುಚಿ।।

ಗಾಳಿಯು ಹೊತ್ತು ತಂದು ನೆಲದ ಮೇಲೆ ಬೀಳುತ್ತಿದ್ದ ಶುಚಿಯಾಗಿದ್ದ ಮನೋರಮವಾಗಿದ್ದ ದಿವ್ಯಸುವಾಸನೆಯನ್ನು ಹೊಂದಿದ್ದ ಆ ಕಮಲವನ್ನು ಪಾಂಚಾಲಿ ದ್ರೌಪದಿಯು ನೋಡಿದಳು.

03146008a ತಚ್ಛುಭಾ ಶುಭಮಾಸಾದ್ಯ ಸೌಗಂಧಿಕಮನುತ್ತಮಂ।
03146008c ಅತೀವ ಮುದಿತಾ ರಾಜನ್ಭೀಮಸೇನಮಥಾಬ್ರವೀತ್।।

ರಾಜನ್! ಆ ಶುಭೆಯು ಆ ಶುಭ ಅನುತ್ತಮ ಸೌಗಂಧಿಕಾ ಪುಷ್ಪವನ್ನು ಪಡೆದು ಅತೀವ ಸಂತೋಷಗೊಂಡಳು ಮತ್ತು ಭೀಮಸೇನನಿಗೆ ಹೇಳಿದಳು:

03146009a ಪಶ್ಯ ದಿವ್ಯಂ ಸುರುಚಿರಂ ಭೀಮ ಪುಷ್ಪಮನುತ್ತಮಂ।
03146009c ಗಂಧಸಂಸ್ಥಾನಸಂಪನ್ನಂ ಮನಸೋ ಮಮ ನಂದನಂ।।

“ಭೀಮ! ಈ ದಿವ್ಯ ಸುಂದರ ಅನುತ್ತಮ ಒಳ್ಳೆಯ ಸುಗಂಧವನ್ನು ಹೊಂದಿ ನನ್ನ ಮನಸ್ಸಿಗೆ ಆನಂದವನ್ನು ನೀಡುತ್ತಿರುವ ಈ ಪುಷ್ಪವನ್ನು ನೋಡು!

03146010a ಏತತ್ತು ಧರ್ಮರಾಜಾಯ ಪ್ರದಾಸ್ಯಾಮಿ ಪರಂತಪ।
03146010c ಹರೇರಿದಂ ಮೇ ಕಾಮಾಯ ಕಾಮ್ಯಕೇ ಪುನರಾಶ್ರಮೇ।।

ಪರಂತಪ! ಇದನ್ನು ಧರ್ಮರಾಜನಿಗೆ ಒಪ್ಪಿಸುತ್ತೇನೆ ಮತ್ತು ನನ್ನ ಸಂತೋಷಕ್ಕಾಗಿ ಇದನ್ನು ಕಾಮ್ಯಕದಲ್ಲಿರುವ ನಮ್ಮ ಆಶ್ರಮಕ್ಕೂ ಕೊಂಡೊಯ್ಯುತ್ತೇನೆ.

03146011a ಯದಿ ತೇಽಹಂ ಪ್ರಿಯಾ ಪಾರ್ಥ ಬಹೂನೀಮಾನ್ಯುಪಾಹರ।
03146011c ತಾನ್ಯಹಂ ನೇತುಮಿಚ್ಚಾಮಿ ಕಾಮ್ಯಕಂ ಪುನರಾಶ್ರಮಂ।।

ಪಾರ್ಥ! ನೀನು ನನ್ನನ್ನು ಪ್ರೀತಿಸುವೆಯಾದರೆ ಇನ್ನೂ ಅನೇಕ ಹೂವುಗಳನ್ನು ತಂದುಕೊಡು. ಅವುಗಳನ್ನು ನಾನು ನಮ್ಮ ಕಾಮ್ಯಕವನದ ಆಶ್ರಮಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇನೆ.”

03146012a ಏವಮುಕ್ತ್ವಾ ತು ಪಾಂಚಾಲೀ ಭೀಮಸೇನಮನಿಂದಿತಾ।
03146012c ಜಗಾಮ ಧರ್ಮರಾಜಾಯ ಪುಷ್ಪಮಾದಾಯ ತತ್ತದಾ।।
03146013a ಅಭಿಪ್ರಾಯಂ ತು ವಿಜ್ಞಾಯ ಮಹಿಷ್ಯಾಃ ಪುರುಷರ್ಷಭಃ।
03146013c ಪ್ರಿಯಾಯಾಃ ಪ್ರಿಯಕಾಮಃ ಸ ಭೀಮೋ ಭೀಮಪರಾಕ್ರಮಃ।।
03146014a ವಾತಂ ತಮೇವಾಭಿಮುಖೋ ಯತಸ್ತತ್ಪುಷ್ಪಮಾಗತಂ।
03146014c ಆಜಿಹೀರ್ಷುರ್ಜಗಾಮಾಶು ಸ ಪುಷ್ಪಾಣ್ಯಪರಾಣ್ಯಪಿ।।
03146015a ರುಕ್ಮಪೃಷ್ಠಂ ಧನುರ್ಗೃಹ್ಯ ಶರಾಂಶ್ಚಾಶೀವಿಷೋಪಮಾನ್।
03146015c ಮೃಗರಾಡಿವ ಸಂಕ್ರುದ್ಧಃ ಪ್ರಭಿನ್ನ ಇವ ಕುಂಜರಃ।।

ಭೀಮಸೇನನಿಗೆ ಹೀಗೆ ಹೇಳಿ ಅನಿಂದೆತೆ ಪಾಂಚಾಲಿಯು ಧರ್ಮರಾಜನಲ್ಲಿಗೆ ಹೋಗಿ ಆ ಪುಷ್ಪವನ್ನು ಅವನಿಗೆ ಒಪ್ಪಿಸಿದಳು. ರಾಣಿಯ ಅಭಿಪ್ರಾಯವನ್ನು ತಿಳಿದ ಪುರುಷರ್ಷಭ ಭೀಮನು, ಪ್ರಿಯರಿಗೆ ಪ್ರೀತಿಯಾಗುವುದನ್ನು ಮಾಡುವ ಆ ಭೀಮಪರಾಕ್ರಮ ಭೀಮನು, ಆ ಪುಷ್ಪವನ್ನು ಹೊತ್ತು ತಂದ ಗಾಳಿಯು ಬರುವ ಕಡೆ ಮುಖಮಾಡಿ, ಬಂಗಾರದ ಕೊನೆಯಿರುವ ಧನುಸ್ಸನ್ನು ಮತ್ತು ಸರ್ಪಗಳಂತಿರುವ ಶರಗಳನ್ನು ಎತ್ತಿಕೊಂಡು, ಕೃದ್ಧನಾದ ಸಿಂಹನಂತೆ ಮತ್ತು ಮದವೇರಿದ ಆನೆಯಂತೆ, ಇನ್ನೂ ಅನೇಕ ಪುಷ್ಪಗಳನ್ನು ತರಲೆಂದು ತಕ್ಷಣವೇ ಹೊರಟನು.

03146016a ದ್ರೌಪದ್ಯಾಃ ಪ್ರಿಯಮನ್ವಿಚ್ಚನ್ಸ್ವಬಾಹುಬಲಮಾಶ್ರಿತಃ।
03146016c ವ್ಯಪೇತಭಯಸಮ್ಮೋಹಃ ಶೈಲಮಭ್ಯಪತದ್ಬಲೀ।।

ದ್ರೌಪದಿಯ ಸಂತೋಷದ ಕುರಿತು ಯೋಚಿಸುತ್ತಾ ಮತ್ತು ತನ್ನ ಬಲವನ್ನು ಆಶ್ರಯಿಸಿ ಆ ಬಲಿಯು ಭಯ ಸಮ್ಮೋಹಗಳನ್ನು ತೊರೆದು ಪರ್ವತದ ಕಡೆ ನಡೆದನು.

03146017a ಸ ತಂ ದ್ರುಮಲತಾಗುಲ್ಮಚ್ಚನ್ನಂ ನೀಲಶಿಲಾತಲಂ।
03146017c ಗಿರಿಂ ಚಚಾರಾರಿಹರಃ ಕಿನ್ನರಾಚರಿತಂ ಶುಭಂ।।

ಅರಿಹರನು ಕಿನ್ನರರು ಸಂಚರಿಸುತ್ತಿದ್ದ, ನೀಲಿ ಕಲ್ಲುಗಳ ನೆಲದ, ಮರ ಮತ್ತು ಬಳ್ಳಿಗಳಿಂದ ತುಂಬಿದ ಆ ಸುಂದರ ಗಿರಿಯಲ್ಲಿ ಸಂಚರಿಸಿದನು.

03146018a ನಾನಾವರ್ಣಧರೈಶ್ಚಿತ್ರಂ ಧಾತುದ್ರುಮಮೃಗಾಂಡಜೈಃ।
03146018c ಸರ್ವಭೂಷಣಸಂಪೂರ್ಣಂ ಭೂಮೇರ್ಭುಜಮಿವೋಚ್ಚ್ರಿತಂ।।

ಬಣ್ಣಬಣ್ಣದ ಧಾತುಗಳಿಂದ, ಮರಗಳಿಂದ, ಮೃಗಗಳಿಂದ ಮತ್ತು ಪಕ್ಷಿಗಳಿಂದ ಕೂಡಿದ ಆ ಪರ್ವತವು ಭೂಮಿಯ ಸರ್ವಾಭರಣ ಭೂಷಿತ ತೋಳಿನಂತೆ ತೋರುತ್ತಿತ್ತು.

03146019a ಸರ್ವರ್ತುರಮಣೀಯೇಷು ಗಂಧಮಾದನಸಾನುಷು।
03146019c ಸಕ್ತಚಕ್ಷುರಭಿಪ್ರಾಯಂ ಹೃದಯೇನಾನುಚಿಂತಯನ್।।

ಎಲ್ಲ ಋತುಗಳಲ್ಲಿಯೂ ರಮಣೀಯವಾಗಿದ್ದ ಗಂಧಮಾದನ ಶಿಖರದ ಮೇಲೆ ಅವನ ಕಣ್ಣು ಅಭಿಪ್ರಾಯಗಳೆರಡನ್ನೂ ಇಟ್ಟು ಹೃದಯದಲ್ಲಿ ಚಿಂತಿಸಿದನು.

03146020a ಪುಂಸ್ಕೋಕಿಲನಿನಾದೇಷು ಷಟ್ಪದಾಭಿರುತೇಷು ಚ।
03146020c ಬದ್ಧಶ್ರೋತ್ರಮನಶ್ಚಕ್ಷುರ್ಜಗಾಮಾಮಿತವಿಕ್ರಮಃ।।

ಗಂಡುಕೋಕಿಲಗಳ ನಿನಾದದಿಂದ ಮತ್ತು ದುಂಬಿಗಳ ಝೇಂಕಾರದಿಂದ ತುಂಬಿದ್ದ ಆ ಪರ್ವತದೆಡೆಗೆ ತನ್ನ ಕಿವಿ-ಕಣ್ಣುಗಳನ್ನಿರಿಸಿ ಆ ಅಮಿತವಿಕ್ರಮನು ನಡೆದನು.

03146021a ಜಿಘ್ರಮಾಣೋ ಮಹಾತೇಜಾಃ ಸರ್ವರ್ತುಕುಸುಮೋದ್ಭವಂ।
03146021c ಗಂಧಮುದ್ದಾಮಮುದ್ದಾಮೋ ವನೇ ಮತ್ತ ಇವ ದ್ವಿಪಃ।।

ಸರ್ವ‌ಋತುಗಳಲ್ಲಿರುವ ಆ ಪುಷ್ಪದಿಂದ ಹೊರಹೊಮ್ಮುತ್ತಿದ್ದ ಸುವಾಸನೆಯ ಮಾರ್ಗವನ್ನು ಹಿಂಬಾಲಿಸುತ್ತಾ ಆ ಮಹಾತೇಜಸ್ವಿಯು ಮದವೇರಿದ ಆನೆಯಂತೆ ಮೂಸುತ್ತಾ ಗಂಧಮಾದನದ ಕಡೆ ಹೊರಟನು.

03146022a ಹ್ರಿಯಮಾಣಶ್ರಮಃ ಪಿತ್ರಾ ಸಂಪ್ರಹೃಷ್ಟತನೂರುಹಃ।
03146022c ಪಿತುಃ ಸಂಸ್ಪರ್ಶಶೀತೇನ ಗಂಧಮಾದನವಾಯುನಾ।।

ಅವನ ತಂದೆಯು ಗಂಧಮಾದನದಿಂದ ಬೀಸುವ ಛಳಿ ಗಾಳಿಯ ಮೂಲಕ ಅವನ ಆಯಾಸವನ್ನು ಕಡಿಮೆಮಾಡಿದನು ಮತ್ತು ಮೈ ನವಿರೇಳಿಸಿ ಸಂತೋಷಗೊಳಿಸಿದನು.

03146023a ಸ ಯಕ್ಷಗಂಧರ್ವಸುರಬ್ರಹ್ಮರ್ಷಿಗಣಸೇವಿತಂ।
03146023c ವಿಲೋಡಯಾಮಾಸ ತದಾ ಪುಷ್ಪಹೇತೋರರಿಂದಮಃ।।

ಹೀಗೆ ಪುಷ್ಪದ ಕಾರಣದಿಂದಾಗಿ ಅರಿಂದಮನು ಆ ಯಕ್ಷ-ಗಂಧರ್ವ-ಸುರ-ಬ್ರಹ್ಮರ್ಷಿಗಣಗಳು ಪೂಜಿಸುವ ಜಾಗಗಳಿಂದ ಹಾದು ಹೋದನು.

03146024a ವಿಷಮಚ್ಚೇದರಚಿತೈರನುಲಿಪ್ತಮಿವಾಂಗುಲೈಃ।
03146024c ವಿಮಲೈರ್ಧಾತುವಿಚ್ಚೇದೈಃ ಕಾಂಚನಾಂಜನರಾಜತೈಃ।।

ವಿವಿಧ ವರ್ಣಗಳ - ಕಪ್ಪು, ಚಿನ್ನ, ಮತ್ತು ಬೆಳ್ಳಿ ಬಣ್ಣಗಳ ಧಾತುಗಳು, ಸಮ ಪ್ರಕಾರಗಳಲ್ಲಿ ಹೊಳೆಯುತ್ತಿರಲು ಆ ಶೈಲಕ್ಕೆ ಬೆರಳುಗಳಿಂದ ಬಣ್ಣ ಹಚ್ಚಲಾಗಿದೆಯೋ ಎಂದು ತೋರುತ್ತಿತ್ತು.

03146025a ಸಪಕ್ಷಮಿವ ನೃತ್ಯಂತಂ ಪಾರ್ಶ್ವಲಗ್ನೈಃ ಪಯೋಧರೈಃ।
03146025c ಮುಕ್ತಾಹಾರೈರಿವ ಚಿತಂ ಚ್ಯುತೈಃ ಪ್ರಸ್ರವಣೋದಕೈಃ।।

ಎರಡೂ ಪಕ್ಕಗಳಲ್ಲಿ ಮೋಡಗಳು ತಾಗಿಕೊಂಡು ಅದು ರೆಕ್ಕೆಗಳೊಂದಿಗೆ ಕುಣಿಯುತ್ತಿದೆಯೋ ಎಂದು ತೋರುತ್ತಿತ್ತು. ಧುಮುಕುತ್ತಿರುವ ನದೀ ಧಾರೆಗಳು ಮುತ್ತಿನ ಹಾರಗಳಂತೆ ತೋರುತ್ತಿದ್ದವು.

03146026a ಅಭಿರಾಮನದೀಕುಂಜನಿರ್ಝರೋದರಕಂದರಂ।
03146026c ಅಪ್ಸರೋನೂಪುರರವೈಃ ಪ್ರನೃತ್ತಬಹುಬರ್ಹಿಣಂ।।

ಅದರ ನದಿಗಳು, ವನಗಳು, ಜಲಪಾತಗಳು ಮತ್ತು ಕಂದರಗಳು ಸುಂದರವಾಗಿದ್ದವು ಮತ್ತು ನವಿಲುಗಳು ಅಪ್ಸರೆಯರ ಕಾಲ್ಗೆಜ್ಜೆಯ ನಾದಕ್ಕೆ ಕುಣಿಯುತ್ತಿದ್ದವು.

03146027a ದಿಗ್ವಾರಣವಿಷಾಣಾಗ್ರೈರ್ಘೃಷ್ಟೋಪಲಶಿಲಾತಲಂ।
03146027c ಸ್ರಸ್ತಾಂಶುಕಮಿವಾಕ್ಷೋಭ್ಯೈರ್ನಿಮ್ನಗಾನಿಃಸೃತೈರ್ಜಲೈಃ।।

ದಿಕ್ಕುಗಳನ್ನು ಕಾಯುವ ದಿಗ್ಗಜಗಳು ತಮ್ಮ ಸೊಂಡಿಲುಗಳ ತುಟಿಗಳಿಂದ ಶಿಲಾತಲವನ್ನು ತಿಕ್ಕಲು ಅದರಿಂದ ಹೊರಚಿಮ್ಮಿದ ನದಿಯು ಪರ್ವತದ ಕೆಳಗೆ ಹರಿದುಬಂದು ತನ್ನ ಶುದ್ಧ ಜಲದಿಂದ ಪರ್ವತದ ಪಕ್ಕೆಗಳನ್ನು ತೊಳೆಯುತ್ತಿರುವಂತೆ ಕಾಣುತ್ತಿತ್ತು.

03146028a ಸಶಷ್ಪಕವಲೈಃ ಸ್ವಸ್ಥೈರದೂರಪರಿವರ್ತಿಭಿಃ।
03146028c ಭಯಸ್ಯಾಜ್ಞೈಶ್ಚ ಹರಿಣೈಃ ಕೌತೂಹಲನಿರೀಕ್ಷಿತಃ।।

ಭಯವನ್ನೇ ಅರಿಯದ ಆರೋಗ್ಯದಿಂದಿದ್ದ ಜಿಂಕೆಗಳು ಬಾಯಿತುಂಬಾ ಹುಲ್ಲನ್ನು ತಿನ್ನುತ್ತಾ ಕುತೂಹಲದಿಂದ ಅವನನ್ನು ಹತ್ತಿರದಿಂದಲೇ ನೋಡುತ್ತಿದ್ದವು.

03146029a ಚಾಲಯನ್ನೂರುವೇಗೇನ ಲತಾಜಾಲಾನ್ಯನೇಕಶಃ।
03146029c ಆಕ್ರೀಡಮಾನಃ ಕೌಂತೇಯಃ ಶ್ರೀಮಾನ್ವಾಯುಸುತೋ ಯಯೌ।।
03146030a ಪ್ರಿಯಾಮನೋರಥಂ ಕರ್ತುಮುದ್ಯತಶ್ಚಾರುಲೋಚನಃ।
03146030c ಪ್ರಾಂಶುಃ ಕನಕತಾಲಾಭಃ ಸಿಂಹಸಂಹನನೋ ಯುವಾ।।
03146031a ಮತ್ತವಾರಣವಿಕ್ರಾಂತೋ ಮತ್ತವಾರಣವೇಗವಾನ್।
03146031c ಮತ್ತವಾರಣತಾಂರಾಕ್ಷೋ ಮತ್ತವಾರಣವಾರಣಃ।।
03146032a ಪ್ರಿಯಪಾರ್ಶ್ವೋಪವಿಷ್ಟಾಭಿರ್ವ್ಯಾವೃತ್ತಾಭಿರ್ವಿಚೇಷ್ಟಿತೈಃ।
03146032c ಯಕ್ಷಗಂಧರ್ವಯೋಷಾಭಿರದೃಶ್ಯಾಭಿರ್ನಿರೀಕ್ಷಿತಃ।।

ತನ್ನ ತೊಡೆಗಳ ಬಲದಿಂದ ಬಳ್ಳಿಗಳ ಗಂಟುಗಳನ್ನು ಹರಿದು ಆಟವಾಡುತ್ತಾ ಪ್ರಿಯೆಯ ಮನೋರಥವನ್ನು ಪೂರೈಸಲೋಸುಗ ಮದಿಸಿದ ಆನೆಯ ನಡುಗೆಯಲ್ಲಿ, ಮದಿಸಿದ ಆನೆಯ ವೇಗದಲ್ಲಿ, ಮದಿಸಿದ ಆನೆಯಂತೆ ತಾಮ್ರದ ಬಣ್ಣದ ಕಣ್ಣುಗಳಿರುವ ಅವನು ಇನ್ನೊಂದು ಮದಿಸಿದ ಆನೆಯನ್ನು ಎದುರಿಸಬಲ್ಲನೋ ಎನ್ನುವಂತೆ ಮುದುವರೆಯುತ್ತಿದ್ದ ಆ ಸುಂದರ ಕಣ್ಣಿನ, ತರುಣ ಸಿಂಹದಂತೆ ದೇಹವನ್ನು ಹೊಂದಿದ್ದ, ಬಂಗಾರದ ತಾಳವೃಕ್ಷದಂತೆ ಎತ್ತರವಾಗಿದ್ದ, ವಾಯುಪುತ್ರ ಶ್ರೀಮಾನ್ ಕೌಂತೇಯನನ್ನು ಅದೃಶ್ಯರಾಗಿ ತಮ್ಮ ಸಂಗಾತಿಗಳೊಡನೆ ಕುಳಿತು ಕಾಮಚೇಷ್ಟೆಗಳಲ್ಲಿ ತೊಡಗಿದ್ದ ಯಕ್ಷರೂ ಗಂಧರ್ವರೂ ನೋಡಿದರು.

03146033a ನವಾವತಾರಂ ರೂಪಸ್ಯ ವಿಕ್ರೀಣನ್ನಿವ ಪಾಂಡವಃ।
03146033c ಚಚಾರ ರಮಣೀಯೇಷು ಗಂಧಮಾದನಸಾನುಷು।।

ರೂಪದ ಹೊಸ ಅವತಾರವನ್ನೇ ಮಾರಾಟಕ್ಕಿಟ್ಟಿದ್ದಾನೋ ಎನ್ನುವಂತೆ ಆ ಪಾಂಡವನು ರಮಣೀಯ ಗಂಧಮಾದನದ ಕಣಿವೆಗಳಲ್ಲಿ ಮುಂದುವರೆದನು.

03146034a ಸಂಸ್ಮರನ್ವಿವಿಧಾನ್ಕ್ಲೇಶಾನ್ದುರ್ಯೋಧನಕೃತಾನ್ಬಹೂನ್।
03146034c ದ್ರೌಪದ್ಯಾ ವನವಾಸಿನ್ಯಾಃ ಪ್ರಿಯಂ ಕರ್ತುಂ ಸಮುದ್ಯತಃ।।

ವನವಾಸಿನಿಯಾಗಿದ್ದ ದ್ರೌಪದಿಗೆ ಪ್ರಿಯವಾದುದನ್ನು ಮಾಡಲೋಸುಗ ಹೊರಟ ಅವನು ದುರ್ಯೋಧನನು ನೀಡಿದ್ದ ಹಲವಾರು ಕಷ್ಟಗಳನ್ನು ನೆನಪಿಸಿಕೊಂಡನು.

03146035a ಸೋಽಚಿಂತಯದ್ಗತೇ ಸ್ವರ್ಗಮರ್ಜುನೇ ಮಯಿ ಚಾಗತೇ।
03146035c ಪುಷ್ಪಹೇತೋಃ ಕಥಂ ನ್ವಾರ್ಯಃ ಕರಿಷ್ಯತಿ ಯುಧಿಷ್ಠಿರಃ।।

ಹಾಗೆಯೇ ಚಿಂತಿಸತೊಡಗಿದನು: “ಅರ್ಜುನನು ಸ್ವರ್ಗಕ್ಕೆ ಹೋದಮೇಲೆ ಮತ್ತು ನಾನೂ ಕೂಡ ಈ ಹೂವಿನ ಕಾರಣದಿಂದ ಹೋದನಂತರ ಆರ್ಯ ಯುಧಿಷ್ಠಿರನು ಏನು ಮಾಡುತ್ತಾನೆ?

03146036a ಸ್ನೇಹಾನ್ನರವರೋ ನೂನಮವಿಶ್ವಾಸಾದ್ವನಸ್ಯ ಚ।
03146036c ನಕುಲಂ ಸಹದೇವಂ ಚ ನ ಮೋಕ್ಷ್ಯತಿ ಯುಧಿಷ್ಠಿರಃ।।

ಅವರಿಬ್ಬರ ಮೇಲಿನ ಪ್ರೀತಿಯಿಂದ ಮತ್ತು ವನದ ಕುರಿತು ಅವನಿಗಿದ್ದ ಅವಿಶ್ವಾಸದಿಂದ ನರವರ ಯುಧಿಷ್ಠಿರನು ನಕುಲ ಸಹದೇವರನ್ನೂ ಕಳುಹಿಸಿಕೊಡಲಾರ!

03146037a ಕಥಂ ನು ಕುಸುಮಾವಾಪ್ತಿಃ ಸ್ಯಾಚ್ಛೀಘ್ರಮಿತಿ ಚಿಂತಯನ್।
03146037c ಪ್ರತಸ್ಥೇ ನರಶಾರ್ದೂಲಃ ಪಕ್ಷಿರಾಡಿವ ವೇಗಿತಃ।।
03146038a ಕಂಪಯನ್ಮೇದಿನೀಂ ಪದ್ಭ್ಯಾಂ ನಿರ್ಘಾತ ಇವ ಪರ್ವಸು।
03146038c ತ್ರಾಸಯನ್ಗಜಯೂಥಾನಿ ವಾತರಂಹಾ ವೃಕೋದರಃ।।
03146039a ಸಿಂಹವ್ಯಾಘ್ರಗಣಾಂಶ್ಚೈವ ಮರ್ದಮಾನೋ ಮಹಾಬಲಃ।
03146039c ಉನ್ಮೂಲಯನ್ಮಹಾವೃಕ್ಷಾನ್ಪೋಥಯಂಶ್ಚೋರಸಾ ಬಲೀ।।
03146040a ಲತಾವಲ್ಲೀಶ್ಚ ವೇಗೇನ ವಿಕರ್ಷನ್ಪಾಂಡುನಂದನಃ।
03146040c ಉಪರ್ಯುಪರಿ ಶೈಲಾಗ್ರಮಾರುರುಕ್ಷುರಿವ ದ್ವಿಪಃ।।
03146040e ವಿನರ್ದಮಾನೋಽತಿಭೃಶಂ ಸವಿದ್ಯುದಿವ ತೋಯದಃ।।

ಅತಿ ಶೀಘ್ರದಲ್ಲಿ ಈ ಹೂವುಗಳನ್ನು ಹೇಗೆ ಪಡೆಯಲಿ?” ಎಂದು ಚಿಂತಿಸುತ್ತಾ ಆ ನರಶಾರ್ದೂಲನು ಪಕ್ಷಿರಾಜನಂತೆ ವೇಗದಿಂದ, ತನ್ನ ಹೆಜ್ಜೆಗಳ ಹೊಡೆತಕ್ಕೆ ಸಿಲುಕಿ ಪರ್ವಕಾಲವೋ ಎನ್ನುವಂತೆ ಭೂಮಿಯನ್ನು ನಡುಗಿಸುತ್ತಾ, ಆನೆಗಳ ಹಿಂಡುಗಳನ್ನು ಬೆದರಿಸುತ್ತಾ ನಡೆದನು. ಹುಲಿ-ಸಿಂಹಗಳನ್ನು ಹೊಡೆಯುತ್ತಾ, ತನ್ನ ಎದೆಯೊಡ್ಡಿ ಮಹಾ ಮರಗಳನ್ನು ಕಿತ್ತೆಸೆಯುತ್ತಾ, ಬಳ್ಳಿಗಳನ್ನು ಹರಿಯುತ್ತಾ ವೇಗದಿಂದ ಆ ಮಹಾಬಲಿ ಪಾಂಡುನಂದನ ವೃಕೋದರನು, ಪರ್ವತದ ತುದಿಗೆ ಹೋಗಲು ಮೇಲಿಂದ ಮೇಲೆ ಹತ್ತುತ್ತಿದ್ದ ಮಿಂಚಿನ ಅಂಚುಗಳ ಮೋಡದಂತೆ ಘರ್ಜಿಸುತ್ತಾ ಮುಂದುವರೆದನು.

03146041a ತಸ್ಯ ಶಬ್ಧೇನ ಘೋರೇಣ ಧನುರ್ಘೋಷೇಣ ಚಾಭಿಭೋ।
03146041c ತ್ರಸ್ತಾನಿ ಮೃಗಯೂಥಾನಿ ಸಮಂತಾದ್ವಿಪ್ರದುದ್ರುವುಃ।।

ವಿಭೋ! ಅವನ ಆ ಘೋರ ಶಬ್ಧ ಮತ್ತು ಧನುರ್ಘೋಷವನ್ನು ಕೇಳಿ ಮೃಗಗಳ ಹಿಂಡುಗಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದವು.

03146042a ಅಥಾಪಶ್ಯನ್ಮಹಾಬಾಹುರ್ಗಂಧಮಾದನಸಾನುಷು।
03146042c ಸುರಮ್ಯಂ ಕದಲೀಷಂಡಂ ಬಹುಯೋಜನವಿಸ್ತೃತಂ।।

ಆಗ ಆ ಮಹಾಬಾಹುವು ಗಂಧಮಾದನ ಪರ್ವತದ ಕಂದರದಲ್ಲಿ ಸುಂದರವಾಗಿದ್ದ ಬಹುಯೋಜನ ವಿಸ್ತಾರವಾಗಿದ್ದ ಒಂದು ಬಾಳೆಯ ವನವನ್ನು ಕಂಡನು.

03146043a ತಮಭ್ಯಗಚ್ಚದ್ವೇಗೇನ ಕ್ಷೋಭಯಿಷ್ಯನ್ಮಹಾಬಲಃ।
03146043c ಮಹಾಗಜ ಇವಾಸ್ರಾವೀ ಪ್ರಭಂಜನ್ವಿವಿಧಾನ್ದ್ರುಮಾನ್।।

ಮಹಾಬಲಿ ಭೀಮನು ಅದನ್ನು ನಾಶಗೊಳಿಸಲು ವೇಗದಿಂದ ಅಲ್ಲಿಗೆ ಹೋಗಿ ಕೆನ್ನೆಯೊಡೆದ ಮಹಾ ಆನೆಯಂತೆ ಹಲವಾರು ಬಾಳೆಯ ಮರಗಳನ್ನು ತುಳಿದು ಧ್ವಂಸ ಮಾಡಿದನು.

03146044a ಉತ್ಪಾಟ್ಯ ಕದಲೀಸ್ಕಂಧಾನ್ಬಹುತಾಲಸಮುಚ್ಚ್ರಯಾನ್।
03146044c ಚಿಕ್ಷೇಪ ತರಸಾ ಭೀಮಃ ಸಮಂತಾದ್ಬಲಿನಾಂ ವರಃ।।

ಬಲಶಾಲಿಗಳಲ್ಲಿಯೇ ಶ್ರೇಷ್ಠ ಭೀಮನು ತಾಳೆಯ ಮರಗಳಂತೆ ಎತ್ತರವಾಗಿದ್ದ ಹಲವಾರು ಬಾಳೆಯ ಮರಗಳನ್ನು ಕಿತ್ತು ಎಲ್ಲೆಡೆಯಲ್ಲಿಯೂ ಎಸೆದನು.

03146045a ತತಃ ಸತ್ತ್ವಾನ್ಯುಪಾಕ್ರಾಮನ್ಬಹೂನಿ ಚ ಮಹಾಂತಿ ಚ।
03146045c ರುರುವಾರಣಸಂಘಾಶ್ಚ ಮಹಿಷಾಶ್ಚ ಜಲಾಶ್ರಯಾಃ।।

ಆಗ ಅಲ್ಲಿಂದ ಹಲವಾರು ಮಹಾ ಮೃಗಗಳು - ರುರು ಜಿಂಕೆಗಳು, ಎಮ್ಮೆಗಳು, ಮಂಗಗಳು ಮತ್ತು ನೀರಿನಲ್ಲಿರುವ ಪ್ರಾಣಿಗಳು - ಹೊರಗೆ ಓಡಿಬಂದವು.

03146046a ಸಿಂಹವ್ಯಾಘ್ರಾಶ್ಚ ಸಂಕ್ರುದ್ಧಾ ಭೀಮಸೇನಮಭಿದ್ರವನ್।
03146046c ವ್ಯಾದಿತಾಸ್ಯಾ ಮಹಾರೌದ್ರಾ ವಿನದಂತೋಽತಿಭೀಷಣಾಃ।।

ಸಿಟ್ಟಿಗೆದ್ದ ಹುಲಿ-ಸಿಂಹಗಳು ಮಹಾರೌದ್ರವಾಗಿ ಘರ್ಜಿಸುತ್ತ ಅತಿಭೀಷಣರಾಗಿ ಭೀಮಸೇನನ ಮೇಲೆ ಎರಗಿದವು.

03146047a ತತೋ ವಾಯುಸುತಃ ಕ್ರೋಧಾತ್ಸ್ವಬಾಹುಬಲಮಾಶ್ರಿತಃ।
03146047c ಗಜೇನಾಘ್ನನ್ಗಜಂ ಭೀಮಃ ಸಿಂಹಂ ಸಿಂಹೇನ ಚಾಭಿಭೂಃ।
03146047e ತಲಪ್ರಹಾರೈರನ್ಯಾಂಶ್ಚ ವ್ಯಹನತ್ಪಾಂಡವೋ ಬಲೀ।।

ಆಗ ವಾಯುಸುತ ಭೀಮನು ಸಿಟ್ಟಿನಿಂದ ತನ್ನ ಬಾಹುಬಲದಿಂದ ಆನೆಗಳನ್ನು ಆನೆಗಳಿಂದ ಹೊಡೆದು, ಸಿಂಹಗಳನ್ನು ಸಿಂಹಗಳಿಂದ ಹೊಡೆದು ಮತ್ತು ಇತರ ಪ್ರಾಣಿಗಳನ್ನು ತನ್ನ ಅಂಗೈಗಳಿಂದ ಹೊಡೆದು ಸಾಯಿಸಿದನು.

03146048a ತೇ ಹನ್ಯಮಾನಾ ಭೀಮೇನ ಸಿಂಹವ್ಯಾಘ್ರತರಕ್ಷವಃ।
03146048c ಭಯಾದ್ವಿಸಸೃಪುಃ ಸರ್ವೇ ಶಕೃನ್ಮೂತ್ರಂ ಚ ಸುಸ್ರುವುಃ।।

ಈ ರೀತಿ ಸಾಯಿಸುತ್ತಿದ್ದ ಭೀಮನನ್ನು ನೋಡಿ ಸಿಂಹ, ಹುಲಿ ಮತ್ತು ಹಯೀನಗಳೆಲ್ಲವೂ ಭಯದಿಂದ ಮಲಮೂತ್ರಗಳನ್ನು ವಿಸರ್ಜಿಸುತ್ತಾ ಹಿಂದೆಸರಿದವು.

03146049a ಪ್ರವಿವೇಶ ತತಃ ಕ್ಷಿಪ್ರಂ ತಾನಪಾಸ್ಯ ಮಹಾಬಲಃ।
03146049c ವನಂ ಪಾಂಡುಸುತಃ ಶ್ರೀಮಾಂ ಶಬ್ಧೇನಾಪೂರಯನ್ದಿಶಃ।।
03146050a ತೇನ ಶಬ್ಧೇನ ಚೋಗ್ರೇಣ ಭೀಮಸೇನರವೇಣ ಚ।
03146050c ವನಾಂತರಗತಾಃ ಸರ್ವೇ ವಿತ್ರೇಸುರ್ಮೃಗಪಕ್ಷಿಣಃ।।
03146051a ತಂ ಶಬ್ಧಂ ಸಹಸಾ ಶ್ರುತ್ವಾ ಮೃಗಪಕ್ಷಿಸಮೀರಿತಂ।
03146051c ಜಲಾರ್ದ್ರಪಕ್ಷಾ ವಿಹಗಾಃ ಸಮುತ್ಪೇತುಃ ಸಹಸ್ರಶಃ।।

ಹೀಗೆ ಅವುಗಳನ್ನು ಅಲ್ಲಿಂದ ಓಡಿಸಿದ ನಂತರ ಆ ಮಹಾಬಲಿ ಶ್ರೀಮಾನ್ ಪಾಂಡುವಿನ ಮಗನು ಆ ವನದ ಎಲ್ಲ ದಿಕ್ಕುಗಳಲ್ಲಿಯೂ ಮೊಳಗುವಂತೆ ಜೋರಾಗಿ ಗರ್ಜಿಸಿದನು. ನರವರ ಭೀಮಸೇನನ ಆ ಉಗ್ರ ಶಬ್ಧವು ವನದಲ್ಲಿದ್ದ ಸರ್ವ ಮೃಗ-ಪಕ್ಷಿಗಳನ್ನೂ ಹೆದರಿಸಿತು. ಆ ಶಬ್ಧವನ್ನು ಕೇಳಿ ತಕ್ಷಣವೇ ಮೃಗ-ಪಕ್ಷಿಗಳು, ನೀರಿನಲ್ಲಿದ್ದ ಪಕ್ಷಿಗಳೂ ಸೇರಿ ಸಹಸ್ರಾರು ಸಂಖ್ಯೆಗಳಲ್ಲಿ ತಮ್ಮ ಒದ್ದೆ ರೆಕ್ಕೆಗಳೊಡನೆ ಮೇಲಕ್ಕೆ ಹಾರಿದವು.

03146052a ತಾನೌದಕಾನ್ಪಕ್ಷಿಗಣಾನ್ನಿರೀಕ್ಷ್ಯ ಭರತರ್ಷಭಃ।
03146052c ತಾನೇವಾನುಸರನ್ರಮ್ಯಂ ದದರ್ಶ ಸುಮಹತ್ಸರಃ।।
03146053a ಕಾಂಚನೈಃ ಕದಲೀಷಂಡೈರ್ಮಂದಮಾರುತಕಂಪಿತೈಃ।
03146053c ವೀಜ್ಯಮಾನಮಿವಾಕ್ಷೋಭ್ಯಂ ತೀರಾಂತರವಿಸರ್ಪಿಭಿಃ।।

ಆ ಜಲಪಕ್ಷಿಗಳನ್ನು ಕಂಡ ಭರತರ್ಷಭನು ಅವುಗಳನ್ನೇ ಅನುಸರಿಸಿ ಹೋಗಿ ಅತಿ ದೊಡ್ಡ ರಮ್ಯ ಸರೋವರವನ್ನು ಕಂಡನು. ದಡದ ಮೇಲೆ ಬೆಳೆದಿದ್ದ ಬಾಳೆಯ ಮರದ ಎಲೆಗಳು ಗಾಳಿಯನ್ನು ಬೀಸುತ್ತಿರಲು ನಿಧಾನವಾಗಿ ಅಲೆಗಳು ಆ ಸರೋವರದಲ್ಲಿ ಕಾಣುತ್ತಿದ್ದವು.

03146054a ತತ್ಸರೋಽಥಾವತೀರ್ಯಾಶು ಪ್ರಭೂತಕಮಲೋತ್ಪಲಂ।
03146054c ಮಹಾಗಜ ಇವೋದ್ದಾಮಶ್ಚಿಕ್ರೀಡ ಬಲವದ್ಬಲೀ।
03146054e ವಿಕ್ರೀಡ್ಯ ತಸ್ಮಿನ್ಸುಚಿರಮುತ್ತತಾರಾಮಿತದ್ಯುತಿಃ।।

ತಕ್ಷಣವೇ ಅವನು ಕೆಂಪು ಮತ್ತು ನೀಲಿ ಕಮಲಗಳುಳ್ಳ ಆ ಸರೋವರಕ್ಕೆ ಧುಮುಕಿದನು ಮತ್ತು ಆ ಮಹಾಬಲಶಾಲಿಯು, ಬಂಧನವಿಲ್ಲದ ಮಹಾಗಜದಂತೆ ನೀರನ್ನು ಸೋಕಿ ಬಹಳ ಹೊತ್ತು ಆಡಿ ಸರೋವರದಿಂದ ಮೇಲೆದ್ದನು.

03146055a ತತೋಽವಗಾಹ್ಯ ವೇಗೇನ ತದ್ವನಂ ಬಹುಪಾದಪಂ।
03146055c ದಧ್ಮೌ ಚ ಶಂಖಂ ಸ್ವನವತ್ಸರ್ವಪ್ರಾಣೇನ ಪಾಂಡವಃ।।

ಅನಂತರ ವೇಗದಲ್ಲಿ ಆ ದಟ್ಟ ಅರಣ್ಯವನ್ನು ಹೊಕ್ಕು ಪಾಂಡವನು ಜೋರಾಗಿ ತನ್ನ ಶಂಖವನ್ನು ಊದಿದನು.

03146056a ತಸ್ಯ ಶಂಖಸ್ಯ ಶಬ್ಧೇನ ಭೀಮಸೇನರವೇಣ ಚ।
03146056c ಬಾಹುಶಬ್ಧೇನ ಚೋಗ್ರೇಣ ನರ್ದಂತೀವ ಗಿರೇರ್ಗುಹಾಃ।।

ಭೀಮಸೇನನ ಶಂಖದ ಧ್ವನಿ ಮತ್ತು ಕೂಗು ಬಹಳಷ್ಟು ಧ್ವನಿಗಳಾಗಿ ಆ ಗಿರಿಯ ಗುಹೆಗಳಿಂದ ಪ್ರತಿಧ್ವನಿಸಿತು.

03146057a ತಂ ವಜ್ರನಿಷ್ಪೇಷಸಮಮಾಸ್ಫೋಟಿತರವಂ ಭೃಶಂ।
03146057c ಶ್ರುತ್ವಾ ಶೈಲಗುಹಾಸುಪ್ತೈಃ ಸಿಂಹೈರ್ಮುಕ್ತೋ ಮಹಾಸ್ವನಃ।।
03146058a ಸಿಂಹನಾದಭಯತ್ರಸ್ತೈಃ ಕುಂಜರೈರಪಿ ಭಾರತ।
03146058c ಮುಕ್ತೋ ವಿರಾವಃ ಸುಮಹಾನ್ಪರ್ವತೋ ಯೇನ ಪೂರಿತಃ।।

ವಜ್ರಾಯುಧದಿಂದ ತಟ್ಟುತ್ತಿರುವಂತಿದ್ದ ಆ ಗುಡುಗಿನ ಶಬ್ಧವನ್ನು ಕೇಳಿ ಗುಹೆಗಳಲ್ಲಿ ಮಲಗಿದ್ದ ಸಿಂಹಗಳು ಎಚ್ಚೆತ್ತು ಜೋರಾಗಿ ಗರ್ಜಿಸಿದವು. ಆ ಸಿಂಹಗಳ ಗರ್ಜನೆಯು ಆನೆಗಳನ್ನು ಹೆದರಿಸಲು, ಭಾರತ, ಆನೆಗಳ ಘೀಳಿನ ಧ್ವನಿಯು ಪರ್ವತವನ್ನು ತುಂಬಿತು.

03146059a ತಂ ತು ನಾದಂ ತತಃ ಶ್ರುತ್ವಾ ಸುಪ್ತೋ ವಾನರಪುಂಗವಃ।
03146059c ಪ್ರಾಜೃಂಭತ ಮಹಾಕಾಯೋ ಹನೂಮಾನ್ನಾಮ ವಾನರಃ।।

ಆಗ ಅವನ ಆ ನಾದವನ್ನು ಕೇಳಿ ಮಲಗಿದ್ದ ಮಹಾಕಾಯ, ಹನೂಮಾನ್ ಎಂಬ ಹೆಸರಿನ ವಾನರ ಪುಂಗವ ವಾನರನು ಆಕಳಿಸಿದನು.

03146060a ಕದಲೀಷಂಡಮಧ್ಯಸ್ಥೋ ನಿದ್ರಾವಶಗತಸ್ತದಾ।
03146060c ಜೃಂಭಮಾಣಃ ಸುವಿಪುಲಂ ಶಕ್ರಧ್ವಜಮಿವೋಚ್ಚ್ರಿತಂ।।
03146060e ಆಸ್ಫೋಟಯತ ಲಾಂಗೂಲಮಿಂದ್ರಾಶನಿಸಮಸ್ವನಂ।।
03146061a ತಸ್ಯ ಲಾಂಗೂಲನಿನದಂ ಪರ್ವತಃ ಸ ಗುಹಾಮುಖೈಃ।
03146061c ಉದ್ಗಾರಮಿವ ಗೌರ್ನರ್ದಮುತ್ಸಸರ್ಜ ಸಮಂತತಃ।।

ಬಾಳೆಯ ಮರಗಳ ಮಧ್ಯೆ ಮಲಗಿದ್ದ ಇಂದ್ರನ ಧ್ವಜದಷ್ಟು ಎತ್ತರವಾಗಿದ್ದ ಆ ಅತಿ ದೊಡ್ಡ ವಾನರನು ಆಕಳಿಸಿ ವಜ್ರದಂತಿರುವ ತನ್ನ ಬಾಲವನ್ನು ನೆಲಕ್ಕೆ ಹೊಡೆದನು. ಹೀಗೆ ಅವನು ಬಾಲವನ್ನು ಹೊಡೆದಿದ್ದುದರ ಧ್ವನಿಯು ಪರ್ವತದ ಕಣಿವೆಗಳಲೆಲ್ಲ ಪ್ರತಿಧ್ವನಿಸಿತು.

03146062a ಸ ಲಾಂಗೂಲರವಸ್ತಸ್ಯ ಮತ್ತವಾರಣನಿಸ್ವನಂ।
03146062c ಅಂತರ್ಧಾಯ ವಿಚಿತ್ರೇಷು ಚಚಾರ ಗಿರಿಸಾನುಷು।।

ಮದಿಸಿದ ಆನೆಗಳ ಘೀಳನ್ನೂ ಮುಚ್ಚಿಸುವ ಅವನ ಬಾಲದ ಹೊಡೆತದ ಗುಡುಗಿನ ಧ್ವನಿಯು ಬಣ್ಣ ಬಣ್ಣದ ಗಿರಿಶಿಖರಗಳಲ್ಲಿ ಮೊಳಗಿತು.

03146063a ಸ ಭೀಮಸೇನಸ್ತಂ ಶ್ರುತ್ವಾ ಸಂಪ್ರಹೃಷ್ಟತನೂರುಹಃ।
03146063c ಶಬ್ಧಪ್ರಭವಮನ್ವಿಚ್ಚಂಶ್ಚಚಾರ ಕದಲೀವನಂ।।

ಅದನ್ನು ಕೇಳಿದ ಭೀಮಸೇನನ ದೇಹದಮೇಲಿನ ಕೂದಲುಗಳು ಎದ್ದುನಿಂತವು. ಆ ಶಬ್ಧವು ಎಲ್ಲಿಂದ ಬಂದಿತೆಂದು ಅವನು ಇಡೀ ಬಾಳೆಯ ವನವನ್ನು ಹುಡುಕಾಡಿದನು.

03146064a ಕದಲೀವನಮಧ್ಯಸ್ಥಮಥ ಪೀನೇ ಶಿಲಾತಲೇ।
03146064c ಸ ದದರ್ಶ ಮಹಾಬಾಹುರ್ವಾನರಾಧಿಪತಿಂ ಸ್ಥಿತಂ।।
03146065a ವಿದ್ಯುತ್ಸಂಘಾತದುಷ್ಪ್ರೇಕ್ಷ್ಯಂ ವಿದ್ಯುತ್ಸಂಘಾತಪಿಂಗಲಂ।
03146065c ವಿದ್ಯುತ್ಸಂಘಾತಸದೃಶಂ ವಿದ್ಯುತ್ಸಂಘಾತಚಂಚಲಂ।।

ಆಗ ಆ ಮಹಾಬಾಹುವು ಬಾಳೆಯ ವನದ ಮಧ್ಯದಲ್ಲಿ ಒಂದು ಕಲ್ಲಿನ ಗಸೆಯ ಮೇಲೆ ಕಣ್ಣು ಕೋರೆಗೊಳಿಸುವ ಮಿಂಚಿನಂತೆ ಹೊಳೆಯುತ್ತಾ, ಮಿಂಚಿನಂತೆ ಹಳದೀ ಬಣ್ಣದ, ಮಿಂಚಿನಂತೆ ಕಾಣುತ್ತಿದ್ದ, ಮಿಂಚಿನಂತೆ ಚಂಚಲನಾಗಿ ಕುಳಿತಿದ್ದ ವಾನರಾಧಿಪತಿಯನ್ನು ನೋಡಿದನು.

03146066a ಬಾಹುಸ್ವಸ್ತಿಕವಿನ್ಯಸ್ತಪೀನಃರಸ್ವಶಿರೋಧರಂ।
03146066c ಸ್ಕಂಧಭೂಯಿಷ್ಠಕಾಯತ್ವಾತ್ತನುಮಧ್ಯಕಟೀತಟಂ।।
03146067a ಕಿಂ ಚಿಚ್ಚಾಭುಗ್ನಶೀರ್ಷೇಣ ದೀರ್ಘರೋಮಾಂಚಿತೇನ ಚ।
03146067c ಲಾಂಗೂಲೇನೋರ್ಧ್ವಗತಿನಾ ಧ್ವಜೇನೇವ ವಿರಾಜಿತಂ।।

ಅವನ ಬಲಿಷ್ಠ ಕುಳ್ಳಗಿನ ಕತ್ತು ತೋಳುಗಳ ಮೇಲೆ ನಿಂತಿತ್ತು, ಅವನ ವಿಶಾಲ ಬಾಹುಗಳ ಕೆಳಗೆ ಸೊಂಟವು ಅತ್ಯಂತ ಸಣ್ಣದಾಗಿತ್ತು ಮತ್ತು ಉದ್ದವಾದ ಕೂದಲುಗಳಿಂದ ಕೂಡಿದ ಬಾಲವು ತುದಿಯಲ್ಲಿ ಸ್ವಲ್ಪ ಬಾಗಿದ್ದು, ಎತ್ತರದ ಬಾವುಟದಂತೆ ಹೊಳೆಯುತ್ತಿತ್ತು.

03146068a ರಕ್ತೋಷ್ಠಂ ತಾಮ್ರಜಿಹ್ವಾಸ್ಯಂ ರಕ್ತಕರ್ಣಂ ಚಲದ್ಭ್ರುವಂ।
03146068c ವದನಂ ವೃತ್ತದಂಷ್ಟ್ರಾಗ್ರಂ ರಶ್ಮಿವಂತಮಿವೋಡುಪಂ।।

ಚಂದ್ರನಂತೆ ಹೊಳೆಯುತ್ತಿದ್ದ ಅವನ ಮುಖದಲ್ಲಿ ಕೆಂಪು ತುಟಿಗಳು, ತಾಮ್ರದಂತೆ ಕೆಂಪಾಗಿದ್ದ ನಾಲಿಗೆಗಳು, ಗುಲಾಬಿ ಬಣ್ಣದ ಕಿವಿಗಳು, ಮೊನಚಾದ ಹುಬ್ಬುಗಳು, ಮತ್ತು ಮೊಂಡಾದ ಹೊರಚಾಚಿದ ಕೋರೆದಾಡೆಗಳಿದ್ದವು.

03146069a ವದನಾಭ್ಯಂತರಗತೈಃ ಶುಕ್ಲಭಾಸೈರಲಂಕೃತಂ।
03146069c ಕೇಸರೋತ್ಕರಸಮ್ಮಿಶ್ರಮಶೋಕಾನಾಮಿವೋತ್ಕರಂ।।

ಅವನ ಬಾಯಿಯೊಳಗಿದ್ದ ಹಲ್ಲುಗಳು ಹೊಳೆಯುತ್ತಿದ್ದವು ಮತ್ತು ಅಶೋಕ ಪುಷ್ಪಗಳಂತೆ ಅವನ ಕಿತ್ತಳೆ ಬಣ್ಣದ ಕೂದಲು ಮುಖದ ಮೇಲೆ ರಾರಾಜಿಸುತ್ತಿತ್ತು.

03146070a ಹಿರಣ್ಮಯೀನಾಂ ಮಧ್ಯಸ್ಥಂ ಕದಲೀನಾಂ ಮಹಾದ್ಯುತಿಂ।
03146070c ದೀಪ್ಯಮಾನಂ ಸ್ವವಪುಷಾ ಅರ್ಚಿಷ್ಮಂತಮಿವಾನಲಂ।।
03146071a ನಿರೀಕ್ಷಂತಮವಿತ್ರಸ್ತಂ ಲೋಚನೈರ್ಮಧುಪಿಂಗಲೈಃ।

ಬಂಗಾರದ ಬಣ್ಣದ ಬಾಳೆಯ ವನದ ಮಧ್ಯದಲ್ಲಿ ಉರಿಯುತ್ತಿರುವ ಬೆಂಕಿಯಂತೆ ತನ್ನ ದೇಹದ ಬೆಳಕಿನಿಂದಲೇ ಬೆಳಗುತ್ತಾ ಜೇನುಹನಿಯ ಬಣ್ಣದ ಕಣ್ಣುಗಳಿಂದ ಯಾರನ್ನೋ ನಿರೀಕ್ಷಿಸುತ್ತಿರುವಂತೆ ಅಲ್ಲಿ ಕುಳಿತುಕೊಂಡಿದ್ದನು.

03146071c ತಂ ವಾನರವರಂ ವೀರಮತಿಕಾಯಂ ಮಹಾಬಲಂ।।
03146072a ಅಥೋಪಸೃತ್ಯ ತರಸಾ ಭೀಮೋ ಭೀಮಪರಾಕ್ರಮಃ।
03146072c ಸಿಂಹನಾದಂ ಸಮಕರೋದ್ಬೋಧಯಿಷ್ಯನ್ಕಪಿಂ ತದಾ।।
03146073a ತೇನ ಶಬ್ಧೇನ ಭೀಮಸ್ಯ ವಿತ್ರೇಸುರ್ಮೃಗಪಕ್ಷಿಣಃ।

ಆಗ ಭೀಮ ಪರಾಕ್ರಮಿ ಭೀಮನು ಬೇಗನೇ ಆ ವಾನರಶ್ರೇಷ್ಠ, ವೀರ, ಅತಿಕಾಯ, ಮಹಾಬಲನ ಹತ್ತಿರ ಹೋಗಿ ಆ ಕಪಿಗೆ ಕೇಳುವಂತೆ ಜೋರಾಗಿ ಸಿಂಹನಾದವನ್ನು ಮಾಡಿದನು. ಆ ಭೀಮನ ಶಬ್ಧದಿಂದ ಮೃಗಪಕ್ಷಿಗಳು ಗಡಗಡನೆ ನಡುಗಿದವು.

03146073c ಹನೂಮಾಂಶ್ಚ ಮಹಾಸತ್ತ್ವ ಈಷದುನ್ಮೀಲ್ಯ ಲೋಚನೇ।।
03146073e ಅವೈಕ್ಷದಥ ಸಾವಜ್ಞಂ ಲೋಚನೈರ್ಮಧುಪಿಂಗಲೈಃ।।

ಮಹಾಸತ್ವಶಾಲಿ ಹನುಮಂತನು ಕಣ್ಣನ್ನು ಸ್ವಲ್ಪವೇ ತೆರೆದು ತನ್ನ ಜೇನಿನ ಬಣ್ಣದ ಕಣ್ಣುಗಳಿಂದ ತಿರಸ್ಕಾರಭಾವದಿಂದ ದೃಷ್ಟಿಯನ್ನು ಕೆಳಮಾಡಿ ನೋಡಿದನು.

03146074a ಸ್ಮಿತೇನಾಭಾಷ್ಯ ಕೌಂತೇಯಂ ವಾನರೋ ನರಮಬ್ರವೀತ್।
03146074c ಕಿಮರ್ಥಂ ಸರುಜಸ್ತೇಽಹಂ ಸುಖಸುಪ್ತಃ ಪ್ರಬೋಧಿತಃ।।

ಮುಗುಳ್ನಗುತ್ತಾ ಆ ವಾನರನು ನರ ಕೌಂತೇಯನಿಗೆ ಹೇಳಿದನು: “ಆರೋಗ್ಯ ಚೆನ್ನಾಗಿಲ್ಲದೇ ಸುಖ ನಿದ್ದೆಯನ್ನು ಮಾಡುತ್ತಿರುವ ನನ್ನನ್ನು ನೀನು ಏಕೆ ಎಬ್ಬಿಸಿದೆ?

03146075a ನನು ನಾಮ ತ್ವಯಾ ಕಾರ್ಯಾ ದಯಾ ಭೂತೇಷು ಜಾನತಾ।
03146075c ವಯಂ ಧರ್ಮಂ ನ ಜಾನೀಮಸ್ತಿರ್ಯಗ್ಯೋನಿಂ ಸಮಾಶ್ರಿತಾಃ।।

ತಿಳಿದಿರುವ ನೀನು ಎಲ್ಲ ಜೀವಿಗಳಿಗೂ ದಯೆಯನ್ನು ತೋರಬಾರದೇ? ಪ್ರಾಣಿಯೋನಿಯಲ್ಲಿ ಹುಟ್ಟಿದ ನಮಗೆ ಧರ್ಮವೇನೆಂದು ತಿಳಿಯದು.

03146076a ಮನುಷ್ಯಾ ಬುದ್ಧಿಸಂಪನ್ನಾ ದಯಾಂ ಕುರ್ವಂತಿ ಜಂತುಷು।
03146076c ಕ್ರೂರೇಷು ಕರ್ಮಸು ಕಥಂ ದೇಹವಾಕ್ಚಿತ್ತದೂಷಿಷು।।
03146076e ಧರ್ಮಘಾತಿಷು ಸಜ್ಜಂತೇ ಬುದ್ಧಿಮಂತೋ ಭವದ್ವಿಧಾಃ।।

ಆದರೆ ಬುದ್ಧಿಸಂಪನ್ನರಾದ ಮನುಷ್ಯರು ಜೀವಿಗಳಿಗೆ ದಯೆಯನ್ನು ತೋರಿಸುತ್ತಾರೆ. ಬುದ್ಧಿವಂತನಾದ ನೀನು ಹೇಗೆ ತಾನೆ ದೇಹ, ಮಾತು ಮತ್ತು ಮನಸ್ಸುಗಳನ್ನು ಕಲುಷಿತಗೊಳಿಸುವ ಕ್ರೂರಕರ್ಮವನ್ನೆಸಗಿ ಧರ್ಮವನ್ನು ಘಾತಿಗೊಳಿಸುತ್ತಿರುವೆ?

03146077a ನ ತ್ವಂ ಧರ್ಮಂ ವಿಜಾನಾಸಿ ವೃದ್ಧಾ ನೋಪಾಸಿತಾಸ್ತ್ವಯಾ।
03146077c ಅಲ್ಪಬುದ್ಧಿತಯಾ ವನ್ಯಾನುತ್ಸಾದಯಸಿ ಯನ್ಮೃಗಾನ್।।

ನಿನಗೆ ಧರ್ಮವೆನ್ನುವುದೇನೆಂದು ತಿಳಿದಿಲ್ಲ ಮತ್ತು ನೀನು ವೃದ್ಧರ ಸೇವೆಯನ್ನು ಮಾಡಿದಂತಿಲ್ಲ. ನಿನ್ನ ಅಲ್ಪಬುದ್ಧಿಯಿಂದ ವನದಲ್ಲಿ ವಾಸಿಸುವ ಮೃಗಗಳನ್ನು ಮೇಲೆಬ್ಬಿಸುತ್ತಿದ್ದೀಯೆ.

03146078a ಬ್ರೂಹಿ ಕಸ್ತ್ವಂ ಕಿಮರ್ಥಂ ವಾ ವನಂ ತ್ವಮಿದಮಾಗತಃ।
03146078c ವರ್ಜಿತಂ ಮಾನುಷೈರ್ಭಾವೈಸ್ತಥೈವ ಪುರುಷೈರಪಿ।।

ಹೇಳು! ನೀನು ಯಾರು? ಮತ್ತು ಮನುಷ್ಯರು ಬಾರದೇ ಇರುವ ಈ ವನಕ್ಕೆ ಏಕೆ ಬಂದಿದ್ದೀಯೆ?

03146079a ಅತಃ ಪರಮಗಮ್ಯೋಽಯಂ ಪರ್ವತಃ ಸುದುರಾರುಹಃ।
03146079c ವಿನಾ ಸಿದ್ಧಗತಿಂ ವೀರ ಗತಿರತ್ರ ನ ವಿದ್ಯತೇ।।

ಇಲ್ಲಿಂದ ಮುಂದೆ ಈ ಪರ್ವತವನ್ನೇರಲು ಸಾಧ್ಯವಿಲ್ಲ. ವೀರ! ಸಿದ್ಧರಿಗಲ್ಲದೇ ಬೇರೆ ಯಾರಿಗೂ ಹೋಗಲಿಕ್ಕೆ ಆಗುವುದಿಲ್ಲ. ನಿನಗೆ ಮುಂದೆ ಹೋಗಲಿಕ್ಕೆ ಏನೂ ಇಲ್ಲ.

03146080a ಕಾರುಣ್ಯಾತ್ಸೌಹೃದಾಚ್ಚೈವ ವಾರಯೇ ತ್ವಾಂ ಮಹಾಬಲ।
03146080c ನಾತಃ ಪರಂ ತ್ವಯಾ ಶಕ್ಯಂ ಗಂತುಮಾಶ್ವಸಿಹಿ ಪ್ರಭೋ।।

ಮಹಾಬಲಶಾಲಿಯೇ! ನಿನ್ನ ಮೇಲಿನ ಕರುಣೆಯಿಂದಾಗಿ ಮತ್ತು ಮಿತ್ರತ್ವದಿಂದಾಗಿ ನಾನು ನಿನ್ನನ್ನು ತಡೆಯುತ್ತಿದ್ದೇನೆ. ಪ್ರಭೋ! ಇಲ್ಲಿಂದ ಮುಂದೆ ನಿನಗೆ ಹೋಗಲು ಸಾಧ್ಯವಿಲ್ಲ. ಇಲ್ಲಿಯೇ ನಿಲ್ಲು.

03146081a ಇಮಾನ್ಯಮೃತಕಲ್ಪಾನಿ ಮೂಲಾನಿ ಚ ಫಲಾನಿ ಚ।
03146081c ಭಕ್ಷಯಿತ್ವಾ ನಿವರ್ತಸ್ವ ಗ್ರಾಃಯಂ ಯದಿ ವಚೋ ಮಮ।।

ನನ್ನ ಮಾತನ್ನು ಸ್ವೀಕರಿಸುವೆ ಎಂದಾದರೆ ಅಮೃತಕ್ಕೆ ಸಮಾನವಾದ ಈ ಫಲ ಮೂಲಗಳನ್ನು ತಿಂದು ಹಿಂದಿರುಗು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಭೀಮಕದಲೀಶಂಡಪ್ರವೇಶೇ ಷಟ್‌ಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಭೀಮಕದಲೀಶಂಡಪ್ರವೇಶವೆಂಬ ನೂರಾನಲ್ವತ್ತಾರನೆಯ ಅಧ್ಯಾಯವು.