ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 144
ಸಾರ
ಚಂಡಮಾರುತಕ್ಕೆ ಸಿಲುಕಿದ ದ್ರೌಪದಿಯು ಮೂರ್ಛಿತಳಾದುದು (1-5). ಯುಧಿಷ್ಠಿರನ ವಿಲಾಪ (6-15). ದ್ರೌಪದಿಯು ಎಚ್ಚರಗೊಳ್ಳಲು, ಭೀಮನು ಘಟೋತ್ಕಚನನ್ನು ಸ್ಮರಿಸಿ ಕರೆಸಿಕೊಂಡಿದುದು (16-27).
03144001 ವೈಶಂಪಾಯನ ಉವಾಚ।
03144001a ತತಃ ಪ್ರಯಾತಮಾತ್ರೇಷು ಪಾಂಡವೇಷು ಮಹಾತ್ಮಸು।
03144001c ಪದ್ಭ್ಯಾಮನುಚಿತಾ ಗಂತುಂ ದ್ರೌಪದೀ ಸಮುಪಾವಿಶತ್।।
ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ಅನಂತರ ಪ್ರಯಾಣಮಾಡುತ್ತಿದ್ದರಷ್ಟೇ ಕಾಲ್ನಡುಗೆಗೆ ಅನುಚಿತಳಾದ ದ್ರೌಪದಿಯು ಕುಸಿದು ಬಿದ್ದಳು.
03144002a ಶ್ರಾಂತಾ ದುಃಖಪರೀತಾ ಚ ವಾತವರ್ಷೇಣ ತೇನ ಚ।
03144002c ಸೌಕುಮಾರ್ಯಾಚ್ಚ ಪಾಂಚಾಲೀ ಸಮ್ಮುಮೋಹ ಯಶಸ್ವಿನೀ।।
ಭಿರುಗಾಳಿ ಮತ್ತು ಮಳೆಗೆ ಸಿಲುಕಿ ಆಯಾಸಗೊಂಡವಳೂ ದುಃಖಿತಳೂ ಆದ ಆ ಸುಕುಮಾರಿ ಯಶಸ್ವಿನೀ ಪಾಂಚಾಲಿಯು ಮೂರ್ಛೆತಪ್ಪಿ ಬಿದ್ದಳು.
03144003a ಸಾ ಪಾತ್ಯಮಾನಾ ಮೋಹೇನ ಬಾಹುಭ್ಯಾಮಸಿತೇಕ್ಷಣಾ।
03144003c ವೃತ್ತಾಭ್ಯಾಮನುರೂಪಾಭ್ಯಾಮೂರೂ ಸಮವಲಂಬತ।।
ಮೂರ್ಛೆತಪ್ಪಿ ಬಿದ್ದ ಆ ಕಪ್ಪು ಕಣ್ಣಿನವಳು ತನ್ನ ಎರಡೂ ತೋಳುಗಳಿಂದ ತೊಡೆಗಳನ್ನು ಬಳಸಿ ಹಿಡಿದು ಬಿದ್ದಳು.
03144004a ಆಲಂಬಮಾನಾ ಸಹಿತಾವೂರೂ ಗಜಕರೋಪಮೌ।
03144004c ಪಪಾತ ಸಹಸಾ ಭೂಮೌ ವೇಪಂತೀ ಕದಲೀ ಯಥಾ।।
ಆನೆಯ ಸೊಂಡಿಲಿನಂತಿದ್ದ ಆ ತೊಡೆಗಳನ್ನು ಹಿಡಿದು ನಡುಗುತ್ತಾ ಬಾಳೆಯ ಮರದಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು.
03144005a ತಾಂ ಪತಂತೀಂ ವರಾರೋಹಾಂ ಸಜ್ಜಮಾನಾಂ ಲತಾಮಿವ।
03144005c ನಕುಲಃ ಸಮಭಿದ್ರುತ್ಯ ಪರಿಜಗ್ರಾಹ ವೀರ್ಯವಾನ್।।
ಬಳ್ಳಿಯಂತೆ ಬಗ್ಗಿ ಬೀಳುತ್ತಿರುವ ಆ ವರಾರೋಹೆಯನ್ನು ನೋಡಿದ ವೀರ್ಯವಾನ್ ನಕುಲನು ಬೇಗನೇ ಹೋಗಿ ಅವಳನ್ನು ಹಿಡಿದುಕೊಂಡನು.
03144006 ನಕುಲ ಉವಾಚ।
03144006a ರಾಜನ್ಪಾಂಚಾಲರಾಜಸ್ಯ ಸುತೇಯಮಸಿತೇಕ್ಷಣಾ।
03144006c ಶ್ರಾಂತಾ ನಿಪತಿತಾ ಭೂಮೌ ತಾಮವೇಕ್ಷಸ್ವ ಭಾರತ।।
ನಕುಲನು ಹೇಳಿದನು: “ರಾಜನ್! ಪಾಂಚಾಲರಾಜನ ಮಗಳು ಕಪ್ಪು ಕಣ್ಣಿನವಳು ಆಯಾಸಗೊಂಡು ನೆಲದ ಮೇಲೆ ಬಿದ್ದಿದ್ದಾಳೆ. ಭಾರತ! ಅವಳನ್ನು ಸ್ವಲ್ಪ ನೋಡಿಕೋ!
03144007a ಅದುಃಖಾರ್ಹಾ ಪರಂ ದುಃಖಂ ಪ್ರಾಪ್ತೇಯಂ ಮೃದುಗಾಮಿನೀ।
03144007c ಆಶ್ವಾಸಯ ಮಹಾರಾಜ ತಾಮಿಮಾಂ ಶ್ರಮಕರ್ಶಿತಾಂ।।
ದುಃಖಕ್ಕೆ ಅರ್ಹಳಾಗಿರದ ಈ ಮೃದುವಾಗಿ ನಡೆಯುವವಳು ಪರಮ ದುಃಖವನ್ನು ಹೊಂದಿದ್ದಾಳೆ. ಮಹಾರಾಜ! ಆಯಾಸಗೊಂಡು ಪೀಡಿತಳಾದ ಇವಳಿಗೆ ಆಶ್ವಾಸನೆ ನೀಡು.””
03144008 ವೈಶಂಪಾಯನ ಉವಾಚ।
03144008a ರಾಜಾ ತು ವಚನಾತ್ತಸ್ಯ ಭೃಶಂ ದುಃಖಸಮನ್ವಿತಃ।
03144008c ಭೀಮಶ್ಚ ಸಹದೇವಶ್ಚ ಸಹಸಾ ಸಮುಪಾದ್ರವನ್।।
ವೈಶಂಪಾಯನನು ಹೇಳಿದನು: “ಅವನ ಮಾತುಗಳಿಂದ ರಾಜನು ತುಂಬಾ ದುಃಖಭರಿತನಾದನು. ಭೀಮನೂ ಸಹದೇವನೂ ತಕ್ಷಣವೇ ಅವಳ ಬಳಿ ಓಡಿ ಬಂದರು.
03144009a ತಾಮವೇಕ್ಷ್ಯ ತು ಕೌಂತೇಯೋ ವಿವರ್ಣವದನಾಂ ಕೃಶಾಂ।
03144009c ಅಮ್ಕಮಾನೀಯ ಧರ್ಮಾತ್ಮಾ ಪರ್ಯದೇವಯದಾತುರಃ।।
ಬಡಕಲಾಗಿದ್ದ ಆಯಾಸಗೊಂಡು ಮುಖದ ಬಣ್ಣವನ್ನೇ ಕಳೆದುಕೊಂಡಿದ್ದ ಅವಳನ್ನು ನೋಡಿದ ಕೌಂತೇಯನು ಅವಳನ್ನು ತನ್ನ ತೊಡೆಯ ಮೇಲೆ ಎತ್ತಿಟ್ಟುಕೊಂಡು ದುಃಖದಿಂದ ವಿಲಪಿಸಿದನು.
03144010a ಕಥಂ ವೇಶ್ಮಸು ಗುಪ್ತೇಷು ಸ್ವಾಸ್ತೀರ್ಣಶಯನೋಚಿತಾ।
03144010c ಶೇತೇ ನಿಪತಿತಾ ಭೂಮೌ ಸುಖಾರ್ಹಾ ವರವರ್ಣಿನೀ।।
“ಚೆನ್ನಾಗಿ ಹಾಸಿದ ಹಾಸಿಗೆಯ ಮೇಲೆ ಪಹರಿಗಳಿರುವ ಮನೆಯಲ್ಲಿ ಮಲಗುವ ಸುಖಕ್ಕೆ ಅರ್ಹಳಾದ ಈ ವರವರ್ಣಿನಿಯು ಈಗ ಹೇಗೆ ಭೂಮಿಯ ಮೇಲೆ ಬಿದ್ದು ಮಲಗಿದ್ದಾಳೆ?
03144011a ಸುಕುಮಾರೌ ಕಥಂ ಪಾದೌ ಮುಖಂ ಚ ಕಮಲಪ್ರಭಂ।
03144011c ಮತ್ಕೃತೇಽದ್ಯ ವರಾರ್ಹಾಯಾಃ ಶ್ಯಾಮತಾಂ ಸಮುಪಾಗತಂ।।
ವರಗಳಿಗೆ ಅರ್ಹಳಾದ ಇವಳ ಕೋಮಲವಾದ ಕಾಲುಗಳು ಮತ್ತು ಕಮಲದಂತಿದ್ದ ಮುಖ ನಾನು ಮಾಡಿದ ಕರ್ಮಗಳಿಂದಾಗಿ ಇಂದು ಹೇಗೆ ಕಪ್ಪಾಗಿವೆ?
03144012a ಕಿಮಿದಂ ದ್ಯೂತಕಾಮೇನ ಮಯಾ ಕೃತಮಬುದ್ಧಿನಾ।
03144012c ಆದಾಯ ಕೃಷ್ಣಾಂ ಚರತಾ ವನೇ ಮೃಗಗಣಾಯುತೇ।।
ನನ್ನ ದ್ಯೂತವನ್ನಾಡುವ ಚಟದಿಂದ ಬುದ್ಧಿಯನ್ನು ಉಪಯೋಗಿಸದೇ ಮಾಡಿದ ಕರ್ಮದ ಮೂಲಕ ಕೃಷ್ಣೆಗೆ ಈ ಮೃಗಗಣಗಳಿಂದ ಕೂಡಿದ ವನದಲ್ಲಿ ತಿರುಗುವ ಪರಿಸ್ಥಿತಿಯನ್ನು ನಾನೇಕೆ ತಂದುಕೊಟ್ಟೆ?
03144013a ಸುಖಂ ಪ್ರಾಪ್ಸ್ಯತಿ ಪಾಂಚಾಲೀ ಪಾಂಡವಾನ್ಪ್ರಾಪ್ಯ ವೈ ಪತೀನ್।
03144013c ಇತಿ ದ್ರುಪದರಾಜೇನ ಪಿತ್ರಾ ದತ್ತಾಯತೇಕ್ಷಣಾ।।
ಪಾಂಡವರನ್ನು ಗಂಡಂದಿರನ್ನಾಗಿ ಪಡೆದ ದ್ರೌಪದಿಯು ಇನ್ನು ಸುಖವನ್ನೇ ಹೊಂದುತ್ತಾಳೆ ಎಂದು ಹೇಳಿ ದ್ರುಪದರಾಜನು ಈ ಕಪ್ಪುಕಣ್ಣಿನವಳನ್ನು ಕೊಟ್ಟಿದ್ದನು.
03144014a ತತ್ಸರ್ವಮನವಾಪ್ಯೈವ ಶ್ರಮಶೋಕಾದ್ಧಿ ಕರ್ಶಿತಾ।
03144014c ಶೇತೇ ನಿಪತಿತಾ ಭೂಮೌ ಪಾಪಸ್ಯ ಮಮ ಕರ್ಮಭಿಃ।।
ಹಾಗೆ ಏನನ್ನೂ ಇವಳು ಪಡೆಯಲಿಲ್ಲ. ನನ್ನ ಪಾಪ ಕರ್ಮಗಳಿಂದಾಗಿ ಆಯಾಸ ಮತ್ತು ಶೋಕದಿಂದ ಸೊರಗಿ ಇವಳು ಬಿದ್ದು ನೆಲದಮೇಲೆ ಮಲಗಿಕೊಂಡಿದ್ದಾಳೆ!”
03144015a ತಥಾ ಲಾಲಪ್ಯಮಾನೇ ತು ಧರ್ಮರಾಜೇ ಯುಧಿಷ್ಠಿರೇ।
03144015c ಧೌಮ್ಯಪ್ರಭೃತಯಃ ಸರ್ವೇ ತತ್ರಾಜಗ್ಮುರ್ದ್ವಿಜೋತ್ತಮಾಃ।।
ಈ ರೀತಿಯಾಗಿ ಧರ್ಮರಾಜ ಯುಧಿಷ್ಠಿರನು ವಿಲಪಿಸುತ್ತಿರಲು ಧೌಮ್ಯನೇ ಮೊದಲಾದ ಎಲ್ಲ ಬ್ರಾಹ್ಮಣೋತ್ತಮರೂ ಅಲ್ಲಿಗೆ ಬಂದರು.
03144016a ತೇ ಸಮಾಶ್ವಾಸಯಾಮಾಸುರಾಶೀರ್ಭಿಶ್ಚಾಪ್ಯಪೂಜಯನ್।
03144016c ರಕ್ಷೋಘ್ನಾಂಶ್ಚ ತಥಾ ಮಂತ್ರಾಂ ಜೇಪುಶ್ಚಕ್ರುಶ್ಚ ತೇ ಕ್ರಿಯಾಃ।।
ಅವನಿಗೆ ಆಶ್ವಾಸನೆಯಿತ್ತು ಆಶೀರ್ವಚನಗಳಿಂದ ಗೌರವಿಸಿ ರಾಕ್ಷೋಘ್ನ ಮತ್ತು ಹಾಗೆಯೇ ಇತರ ಮಂತ್ರಗಳನ್ನು ಜಪಿಸಿದರು ಮತ್ತು ಕ್ರಿಯೆಗಳನ್ನು ನಡೆಸಿದರು.
03144017a ಪಠ್ಯಮಾನೇಷು ಮಂತ್ರೇಷು ಶಾಂತ್ಯರ್ಥಂ ಪರಮರ್ಷಿಭಿಃ।
03144017c ಸ್ಪೃಶ್ಯಮಾನಾ ಕರೈಃ ಶೀತೈಃ ಪಾಂಡವೈಶ್ಚ ಮುಹುರ್ಮುಹುಃ।।
03144018a ಸೇವ್ಯಮಾನಾ ಚ ಶೀತೇನ ಜಲಮಿಶ್ರೇಣ ವಾಯುನಾ।
03144018c ಪಾಂಚಾಲೀ ಸುಖಮಾಸಾದ್ಯ ಲೇಭೇ ಚೇತಃ ಶನೈಃ ಶನೈಃ।।
ಶಾಂತಿಗೋಸ್ಕರವಾಗಿ ಆ ಪರಮಋಷಿಗಳು ಈ ರೀತಿ ಮಂತ್ರಗಳನ್ನು ಪಠಿಸುತ್ತಿರಲು ಪಾಂಡವರು ತಮ್ಮ ಶೀತಲ ಕೈಗಳಿಂದ ಅವಳನ್ನು ಮತ್ತೆ ಮತ್ತೆ ಸವರುತ್ತಿರಲು, ಜಲಮಿಶ್ರಣವಾದ ತಣ್ಣಗಿನ ಗಾಳಿಯು ಬೀಸುತ್ತಿರಲು ಸುಖವನ್ನು ಹೊಂದಿದ ಪಾಂಚಾಲಿಯು ಮೆಲ್ಲನೇ ಚೇತರಿಸಿಕೊಂಡಳು.
03144019a ಪರಿಗೃಹ್ಯ ಚ ತಾಂ ದೀನಾಂ ಕೃಷ್ಣಾಮಜಿನಸಂಸ್ತರೇ।
03144019c ತದಾ ವಿಶ್ರಾಮಯಾಮಾಸುರ್ಲಬ್ಧಸಂಜ್ಞಾಂ ತಪಸ್ವಿನೀಂ।।
ಕೃಷ್ಣಾಜಿನವನ್ನು ಹಾಸಿ ಅದರ ಮೇಲೆ ಕೃಷ್ಣೆ ದ್ರೌಪದಿಯನ್ನು ಮಲಗಿಸಿದರು ಮತ್ತು ಆ ತಪಸ್ವಿನಿಯು ಸಂಪೂರ್ಣವಾಗಿ ಎಚ್ಚರವಾಗುವವರೆಗೆ ವಿಶ್ರಾಂತಿಯನ್ನು ನೀಡಿದರು.
03144020a ತಸ್ಯಾ ಯಮೌ ರಕ್ತತಲೌ ಪಾದೌ ಪೂಜಿತಲಕ್ಷಣೌ।
03144020c ಕರಾಭ್ಯಾಂ ಕಿಣಜಾತಾಭ್ಯಾಂ ಶನಕೈಃ ಸಂವವಾಹತುಃ।।
ಅವಳಿ ನಕುಲ ಸಹದೇವರು ಕೆಳ ಕೆಂಪಾಗಿದ್ದ, ಮಂಗಳ ಲಕ್ಷಣಗಳಿಂದ ಕೂಡಿದ್ದ ಅವಳ ಪಾದಗಳನ್ನು ತಮ್ಮ ಎರಡೂ ಕೈಗಳಿಂದ ಮೆಲ್ಲನೆ ಒತ್ತುತ್ತಿದ್ದರು.
03144021a ಪರ್ಯಾಶ್ವಾಸಯದಪ್ಯೇನಾಂ ಧರ್ಮರಾಜೋ ಯುಧಿಷ್ಠಿರಃ।
03144021c ಉವಾಚ ಚ ಕುರುಶ್ರೇಷ್ಠೋ ಭೀಮಸೇನಮಿದಂ ವಚಃ।।
ಧರ್ಮರಾಜ ಯುಧಿಷ್ಠಿರನು ಅವಳಿಗೆ ಸಾಂತ್ವನವನ್ನು ನೀಡಿದನು. ಆಗ ಆ ಕುರುಶ್ರೇಷ್ಠನು ಭೀಮನಿಗೆ ಈ ಮಾತುಗಳನ್ನಾಡಿದನು.
03144022a ಬಹವಃ ಪರ್ವತಾ ಭೀಮ ವಿಷಮಾ ಹಿಮದುರ್ಗಮಾಃ।
03144022c ತೇಷು ಕೃಷ್ಣಾ ಮಹಾಬಾಹೋ ಕಥಂ ನು ವಿಚರಿಷ್ಯತಿ।।
“ಮಹಾಬಾಹು ಬೀಮ! ಬಹಳಷ್ಟು ವಿಷಮವಾದ ಹಿಮದಿಂದ ಕೂಡಿ ದುರ್ಗಮವಾದ ಪರ್ವತಗಳಿವೆ. ಕೃಷ್ಣೆಯು ಹೇಗೆತಾನೇ ಅವುಗಳನ್ನು ಏರಿ ಪ್ರಯಾಣಿಸಬಲ್ಲಳು?”
03144023 ಭೀಮಸೇನ ಉವಾಚ।
03144023a ತ್ವಾಂ ರಾಜನ್ರಾಜಪುತ್ರೀಂ ಚ ಯಮೌ ಚ ಪುರುಷರ್ಷಭೌ।
03144023c ಸ್ವಯಂ ನೇಷ್ಯಾಮಿ ರಾಜೇಂದ್ರ ಮಾ ವಿಷಾದೇ ಮನಃ ಕೃಥಾಃ।।
ಭೀಮಸೇನನು ಹೇಳಿದನು: “ರಾಜನ್! ರಾಜೇಂದ್ರ! ನಿನ್ನನ್ನು, ರಾಜಪುತ್ರಿಯನ್ನು ಮತ್ತು ಪುರುಷರ್ಷಭರಾದ ಈ ನಕುಲ ಸಹದೇವರನ್ನು ಸ್ವಯಂ ನಾನೇ ಎತ್ತಿಕೊಂಡು ಹೋಗುತ್ತೇನೆ. ನಿನ್ನ ಮನಸ್ಸು ದುಃಖಿಸದಿರಲಿ!
03144024a ಅಥ ವಾಸೌ ಮಯಾ ಜಾತೋ ವಿಹಗೋ ಮದ್ಬಲೋಪಮಃ।
03144024c ವಹೇದನಘ ಸರ್ವಾನ್ನೋ ವಚನಾತ್ತೇ ಘತೋತ್ಕಚಃ।।
ಅಥವಾ ಅನಘ! ನೀನು ಹೇಳುವುದಾದರೆ ನನ್ನ ಹಾಗೆಯೇ ಬಲಶಾಲಿಯಾದ, ಹಾರಿಹೋಗಬಲ್ಲ ನನ್ನ ಮಗ ಘಟೋತ್ಕನು ನಮ್ಮೆಲ್ಲರನ್ನೂ ಎತ್ತಿಕೊಂಡು ಹೋಗುತ್ತಾನೆ.””
03144025 ವೈಶಂಪಾಯನ ಉವಾಚ।
03144025a ಅನುಜ್ಞಾತೋ ಧರ್ಮರಾಜ್ಞಾ ಪುತ್ರಂ ಸಸ್ಮಾರ ರಾಕ್ಷಸಂ।
03144025c ಘಟೋತ್ಕಚಶ್ಚ ಧರ್ಮಾತ್ಮಾ ಸ್ಮೃತಮಾತ್ರಃ ಪಿತುಸ್ತದಾ।।
03144025e ಕೃತಾಂಜಲಿರುಪಾತಿಷ್ಠದಭಿವಾದ್ಯಾಥ ಪಾಂಡವಾನ್।।
ವೈಶಂಪಾಯನನು ಹೇಳಿದನು: “ಧರ್ಮರಾಜನ ಅನುಮತಿಯನ್ನು ಪಡೆದು ಅವನು ತನ್ನ ರಾಕ್ಷಸ ಮಗನನ್ನು ಸ್ಮರಿಸಿದನು. ತನ್ನ ತಂದೆಯು ಸ್ಮರಿಸಿದ ಕೂಡಲೇ ಧರ್ಮಾತ್ಮ ಘಟೋತ್ಕಚನು ಕೈಜೋಡಿಸಿ ಪಾಂಡವರಿಗೆ ನಮಸ್ಕರಿಸಿ ನಿಂತುಕೊಂಡನು.
03144026a ಬ್ರಾಹ್ಮಣಾಂಶ್ಚ ಮಹಾಬಾಹುಃ ಸ ಚ ತೈರಭಿನಂದಿತಃ।
03144026c ಉವಾಚ ಭೀಮಸೇನಂ ಸ ಪಿತರಂ ಸತ್ಯವಿಕ್ರಮಃ।।
ಆ ಮಹಾಬಾಹುವು ಬ್ರಾಹ್ಮಣರಿಗೂ ವಂದಿಸಿದನು ಮತ್ತು ಅವರಿಂದ ಸ್ವಾಗತಿಸಲ್ಪಟ್ಟನು. ಆ ಸತ್ಯವಿಕ್ರಮನು ತನ್ನ ತಂದೆ ಭೀಮಸೇನನಿಗೆ ಹೇಳಿದನು:
03144027a ಸ್ಮೃತೋಽಸ್ಮಿ ಭವತಾ ಶೀಘ್ರಂ ಶುಶ್ರೂಷುರಹಮಾಗತಃ।
03144027c ಆಜ್ಞಾಪಯ ಮಹಾಬಾಹೋ ಸರ್ವಂ ಕರ್ತಾಸ್ಮ್ಯಸಂಶಯಂ।।
03144027e ತಚ್ಛೃತ್ವಾ ಭೀಮಸೇನಸ್ತು ರಾಕ್ಷಸಂ ಪರಿಷಸ್ವಜೇ।।
“ನೀನು ನನ್ನನ್ನು ಸ್ಮರಿಸಿದ ಕೂಡಲೇ ನಿನ್ನ ಸೇವೆಗೆಂದು ಇಲ್ಲಿಗೆ ಬಂದಿದ್ದೇನೆ. ಮಹಾಬಾಹೋ! ಆಜ್ಞಾಪಿಸು. ಎಲ್ಲವನ್ನೂ ನಿಸ್ಸಂಶಯವಾಗಿ ಮಾಡುತ್ತೇನೆ.” ಅದನ್ನು ಕೇಳಿದ ಭೀಮಸೇನನು ಆ ರಾಕ್ಷಸನನ್ನು ಬಿಗಿದಪ್ಪಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತ್ನಾಲ್ಕನೆಯ ಅಧ್ಯಾಯವು.