ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 143
ಸಾರ
ಗಂಧಮಾದನ ಪರ್ವತವನ್ನು ಏರುವಾಗ ಚಂಡಮಾರುತಕ್ಕೆ ಪಾಂಡವರು ಸಿಲುಕಿದುದು (1-21).
03143001 ವೈಶಂಪಾಯನ ಉವಾಚ।
03143001a ತೇ ಶೂರಾಸ್ತತಧನ್ವಾನಸ್ತೂಣವಂತಃ ಸಮಾರ್ಗಣಾಃ।
03143001c ಬದ್ಧಗೋಧಾಂಗುಲಿತ್ರಾಣಾಃ ಖದ್ಗವಂತೋಽಮಿತೌಜಸಃ।।
03143002a ಪರಿಗೃಹ್ಯ ದ್ವಿಜಶ್ರೇಷ್ಠಾಂ ಶ್ರೇಷ್ಠಾಃ ಸರ್ವಧನುಷ್ಮತಾಂ।
03143002c ಪಾಂಚಾಲೀಸಹಿತಾ ರಾಜನ್ಪ್ರಯಯುರ್ಗಂಧಮಾದನಂ।।
ವೈಶಂಪಾಯನನು ಹೇಳಿದನು: “ರಾಜನ್! ಅನಂತರ ಆ ಅಮಿತೌಜಸ ಎಲ್ಲ ಧನುಷ್ಮತರಲ್ಲಿಯೂ ಶ್ರೇಷ್ಠರಾದ ಶೂರ ಧನ್ವಿಗಳು ಬಾಣ-ಬತ್ತಳಿಕೆಗಳನ್ನು ಏರಿಸಿಕೊಂಡು, ಬೆರಳು ಮತ್ತು ಕೈಗಳಿಗೆ ಪಟ್ಟಿಗಳನ್ನು ಕಟ್ಟಿಕೊಂಡು, ಖಡ್ಗಗಳನ್ನು ಧರಿಸಿ ಬ್ರಾಹ್ಮಣಶ್ರೇಷ್ಠರನ್ನು ಕರೆದುಕೊಂಡು ಪಾಂಚಾಲಿಯ ಸಹಿತ ಗಂಧಮಾದನ ಪರ್ವತದ ಕಡೆ ಹೊರಟರು.
03143003a ಸರಾಂಸಿ ಸರಿತಶ್ಚೈವ ಪರ್ವತಾಂಶ್ಚ ವನಾನಿ ಚ।
03143003c ವೃಕ್ಷಾಂಶ್ಚ ಬಹುಲಚ್ಚಾಯಾನ್ದದೃಶುರ್ಗಿರಿಮೂರ್ಧನಿ।।
03143003e ನಿತ್ಯಪುಷ್ಪಫಲಾನ್ದೇಶಾನ್ದೇವರ್ಷಿಗಣಸೇವಿತಾನ್।।
ಅವರು ಸರೋವರಗಳನ್ನು, ನದಿಗಳನ್ನು, ಪರ್ವತಗಳನ್ನು, ಪರ್ವತಗಳ ಮೇಲೆ ಬಹಳಷ್ಟು ನೆರಳನ್ನು ನೀಡುವ ಮತ್ತು ನಿತ್ಯವೂ ಪುಷ್ಪ-ಫಲಗಳನ್ನು ನೀಡುವ ಮರಗಳುಳ್ಳ ವನಗಳನ್ನು, ದೇವರ್ಷಿಗಣಗಳು ಸೇವಿಸುತ್ತಿರುವ ಪ್ರದೇಶಗಳನ್ನು ಕಂಡರು.
03143004a ಆತ್ಮನ್ಯಾತ್ಮಾನಮಾಧಾಯ ವೀರಾ ಮೂಲಫಲಾಶನಾಃ।
03143004c ಚೇರುರುಚ್ಚಾವಚಾಕಾರಾನ್ದೇಶಾನ್ವಿಷಮಸಂಕಟಾನ್।।
03143004e ಪಶ್ಯಂತೋ ಮೃಗಜಾತಾನಿ ಬಹೂನಿ ವಿವಿಧಾನಿ ಚ।।
ತಮ್ಮ ಆತ್ಮಗಳಲ್ಲಿ ಆತ್ಮವನ್ನಿಟ್ಟುಕೊಂಡು ಆ ವೀರರು ಫಲಮೂಲಗಳನ್ನು ತಿಂದುಕೊಂಡು, ಎತ್ತರ ತಗ್ಗುಗಳಿರುವ ವಿಷಮ ಪ್ರದೇಶಗಳನ್ನು ಕಷ್ಟಗಳಿಂದ ಪಾರುಮಾಡಿಕೊಂಡು ಬಹಳ ವಿಧದ ಜಾತಿಗಳ ಮೃಗಗಳನ್ನು ನೋಡುತ್ತಾ ಮುಂದುವರೆದರು.
03143005a ಋಷಿಸಿದ್ಧಾಮರಯುತಂ ಗಂಧರ್ವಾಪ್ಸರಸಾಂ ಪ್ರಿಯಂ।
03143005c ವಿವಿಶುಸ್ತೇ ಮಹಾತ್ಮಾನಃ ಕಿನ್ನರಾಚರಿತಂ ಗಿರಿಂ।।
ಆ ಮಹಾತ್ಮರು ಹೀಗೆ ಮುಂದುವರೆದು ಋಷಿ, ಸಿದ್ಧ, ಅಮರರಿಂದ ಕೂಡಿದ, ಗಂಧರ್ವ-ಅಪ್ಸರೆಯರಿಗೆ ಪ್ರಿಯವಾದ ಕಿನ್ನರರು ಸಂಚರಿಸುತ್ತಿರುವ ಗಿರಿಯನ್ನು ಪ್ರವೇಶಿಸಿದರು.
03143006a ಪ್ರವಿಶತ್ಸ್ವಥ ವೀರೇಷು ಪರ್ವತಂ ಗಂಧಮಾದನಂ।
03143006c ಚಂಡವಾತಂ ಮಹದ್ವರ್ಷಂ ಪ್ರಾದುರಾಸೀದ್ವಿಶಾಂ ಪತೇ।।
ವಿಶಾಂಪತೇ! ಆ ವೀರರು ಗಂಧಮಾದನ ಪರ್ವತವನ್ನು ಪ್ರವೇಶಿಸುತ್ತಿರುವಾಗ ಅಲ್ಲಿ ಮಳೆಯನ್ನು ಸುರಿಸುವ ಮಹಾ ಚಂಡಮಾರುತವು ಬೀಸಿತು.
03143007a ತತೋ ರೇಣುಃ ಸಮುದ್ಭೂತಃ ಸಪತ್ರಬಹುಲೋ ಮಹಾನ್।
03143007c ಪೃಥಿವೀಂ ಚಾಂತರಿಕ್ಷಂ ಚ ದ್ಯಾಂ ಚೈವ ತಮಸಾವೃಣೋತ್।।
ಬಹಳಷ್ಟು ಧೂಳು ತರಗೆಲೆಗಳಿಂದ ಕೂಡಿದ ಮಹಾ ಚಂಡಮಾರುತವು ಭೂಮಿ-ಅಂತರಿಕ್ಷಗಳನ್ನು ಮುಚ್ಚುತ್ತದೆಯೋ ಎನ್ನುವಂತೆ ಎದ್ದಿತು.
03143008a ನ ಸ್ಮ ಪ್ರಜ್ಞಾಯತೇ ಕಿಂ ಚಿದಾವೃತೇ ವ್ಯೋಮ್ನಿ ರೇಣುನಾ।
03143008c ನ ಚಾಪಿ ಶೇಕುಸ್ತೇ ಕರ್ತುಮನ್ಯೋನ್ಯಸ್ಯಾಭಿಭಾಷಣಂ।।
ಆಕಾಶವು ಧೂಳಿನಿಂದ ಮುಚ್ಚಿಕೊಂಡಿರಲು ಏನೂ ಕಾಣುತ್ತಿರಲಿಲ್ಲ. ಅವರು ಪರಸ್ಪರರಲ್ಲಿ ಮಾತನಾಡಲೂ ಸಾಧ್ಯವಾಗಲಿಲ್ಲ.
03143009a ನ ಚಾಪಶ್ಯಂತ ತೇಽನ್ಯೋನ್ಯಂ ತಮಸಾ ಹತಚಕ್ಷುಷಃ।
03143009c ಆಕೃಷ್ಯಮಾಣಾ ವಾತೇನ ಸಾಶ್ಮಚೂರ್ಣೇನ ಭಾರತ।।
ಭಾರತ! ಅವರ ಕಣ್ಣುಗಳು ಕತ್ತಲೆಯಿಂದ ಕುರುಡಾಗಿ ಒಬ್ಬರನ್ನೊಬ್ಬರು ನೋಡಲಿಕ್ಕೂ ಆಗಲಿಲ್ಲ ಮತ್ತು ಕಲ್ಲು-ಧೂಳುಗಳಿಂದ ತುಂಬಿದ್ದ ಭಿರುಗಾಳಿಯ ಸೆಳೆತಕ್ಕೆ ಸಿಲುಕಿ ಎಲ್ಲರೂ ಚೆಲ್ಲಾಪಿಲ್ಲಿಯಾದರು.
03143010a ದ್ರುಮಾಣಾಂ ವಾತಭಗ್ನಾನಾಂ ಪತತಾಂ ಭೂತಲೇ ಭೃಶಂ।
03143010c ಅನ್ಯೇಷಾಂ ಚ ಮಹೀಜಾನಾಂ ಶಬ್ಧಃ ಸಮಭವನ್ಮಹಾನ್।।
ಭಿರುಗಾಳಿಗೆ ಸಿಕ್ಕಿ ತುಂಡಾಗಿ ಮರಗಿಡಗಳು ಭೂಮಿಗೆ ರಭಸದಿಂದ ಬೀಳುತ್ತಿರಲು ಕಿವುಡು ಮಾಡುವ ಮಹಾ ಶಬ್ಧವು ಉಂಟಾಯಿತು.
03143011a ದ್ಯೌಃ ಸ್ವಿತ್ಪತತಿ ಕಿಂ ಭೂಮೌ ದೀರ್ಯಂತೇ ಪರ್ವತಾ ನು ಕಿಂ।
03143011c ಇತಿ ತೇ ಮೇನಿರೇ ಸರ್ವೇ ಪವನೇನ ವಿಮೋಹಿತಾಃ।।
ಆ ಭಿರುಗಾಳಿಯಿಂದ ಮೋಹಿತರಾದ ಅವರೆಲ್ಲರೂ ಆಕಾಶವೇ ಭೂಮಿಯ ಮೇಲೆ ಬೀಳುತ್ತಿದೆಯೋ ಅಥವಾ ಪರ್ವತವೇ ಒಡೆದು ಸೀಳಾಗುತ್ತದೆಯೋ ಎಂದು ತಿಳಿದುಕೊಂಡರು.
03143012a ತೇ ಯಥಾನಂತರಾನ್ವೃಕ್ಷಾನ್ವಲ್ಮೀಕಾನ್ವಿಷಮಾಣಿ ಚ।
03143012c ಪಾಣಿಭಿಃ ಪರಿಮಾರ್ಗಂತೋ ಭೀತಾ ವಾಯೋರ್ನಿಲಿಲ್ಯಿರೇ।।
ಆ ಚಂಡಮಾರುತಕ್ಕೆ ಹೆದರಿ ಅವರು ಅಲ್ಲಲ್ಲಿ ಕೈಚಾಚಿ ಹುಡುಕಾಡಿ ಹತ್ತಿರ ಸಿಕ್ಕಿದ ಮರವನ್ನೋ, ಹುತ್ತವನ್ನೋ, ಅಥವಾ ಬಿಲಗಳನ್ನೋ ಹಿಡಿದು ಕೆಳಗೆ ಬಿದ್ದರು.
03143013a ತತಃ ಕಾರ್ಮುಕಮುದ್ಯಮ್ಯ ಭೀಮಸೇನೋ ಮಹಾಬಲಃ।
03143013c ಕೃಷ್ಣಾಮಾದಾಯ ಸಂಗತ್ಯಾ ತಸ್ಥಾವಾಶ್ರಿತ್ಯ ಪಾದಪಂ।।
ಆಗ ಮಹಾಬಲಿ ಭೀಮಸೇನನು ತನ್ನ ಧನುಸ್ಸನ್ನು ಎತ್ತಿ ಹಿಡಿದು ಹೇಗೋ ಮಾಡಿ ದ್ರೌಪದಿಯನ್ನು ಹಿಡಿದುಕೊಂಡು ಒಂದು ಮರದ ಕೆಳಗೆ ಆಶ್ರಯಪಡೆದನು.
03143014a ಧರ್ಮರಾಜಶ್ಚ ಧೌಮ್ಯಶ್ಚ ನಿಲಿಲ್ಯಾತೇ ಮಹಾವನೇ।
03143014c ಅಗ್ನಿಹೋತ್ರಾಣ್ಯುಪಾದಾಯ ಸಹದೇವಸ್ತು ಪರ್ವತೇ।।
ಧರ್ಮರಾಜ ಮತ್ತು ಧೌಮ್ಯರು ಮಹಾವನದಲ್ಲಿ ಮಲಗಿಕೊಂಡರು ಮತ್ತು ಅಗ್ನಿಹೋತ್ರವನ್ನು ಹಿಡಿದುಕೊಂಡಿದ್ದ ಸಹದೇವನು ಪರ್ವತದ ಮೇಲೆ ನಿಂತುಕೊಂಡನು.
03143015a ನಕುಲೋ ಬ್ರಾಹ್ಮಣಾಶ್ಚಾನ್ಯೇ ಲೋಮಶಶ್ಚ ಮಹಾತಪಾಃ।
03143015c ವೃಕ್ಷಾನಾಸಾದ್ಯ ಸಂತ್ರಸ್ತಾಸ್ತತ್ರ ತತ್ರ ನಿಲಿಲ್ಯಿರೇ।।
ನಕುಲ, ಮಹಾತಪಸ್ವಿ ಲೋಮಶ ಮತ್ತು ಇತರ ಬ್ರಾಹ್ಮಣರು ಅಲ್ಲಾಡುತ್ತಿರುವ ಮರಗಳನ್ನು ಹಿಡಿದು ಅಲ್ಲಲ್ಲಿ ಮಲಗಿಕೊಂಡಿದ್ದರು.
03143016a ಮಂದೀಭೂತೇ ಚ ಪವನೇ ತಸ್ಮಿನ್ರಜಸಿ ಶಾಮ್ಯತಿ।
03143016c ಮಹದ್ಭಿಃ ಪೃಷತೈಸ್ತೂರ್ಣಂ ವರ್ಷಮಭ್ಯಾಜಗಾಮ ಹ।।
ಆಗ ಗಾಳಿಯು ಕಡಿಮೆಯಾಗಿ, ಧೂಳು ಕೆಳಗೆ ಕುಳಿತುಕೊಳ್ಳಲು, ದೊಡ್ಡ ಮೋಡವೇ ಒಡೆದಂತೆ ಜೋರಾಗಿ ಧಾರಾಕಾರವಾಗಿ ಮಳೆಸುರಿಯಿತು.
03143017a ತತೋಽಶ್ಮಸಹಿತಾ ಧಾರಾಃ ಸಂವೃಣ್ವಂತ್ಯಃ ಸಮಂತತಃ।
03143017c ಪ್ರಪೇತುರನಿಶಂ ತತ್ರ ಶೀಘ್ರವಾತಸಮೀರಿತಾಃ।।
ಆನೆಕಲ್ಲುಗಳ ಸಹಿತ ಭಿರುಗಾಳಿಯ ಹೊಡೆತಕ್ಕೆ ಸಿಕ್ಕು ಸುರಿಯುತ್ತಿರುವ ಮಳೆಯಿಂದ ತಕ್ಷಣವೇ ಭೂಮಿಯ ಮೇಲೆ ಎಲ್ಲಕಡೆಯಲ್ಲಿಯೂ ನೀರಿನ ಪ್ರವಾಹ ತುಂಬಿಕೊಂಡಿತು.
03143018a ತತಃ ಸಾಗರಗಾ ಆಪಃ ಕೀರ್ಯಮಾಣಾಃ ಸಮಂತತಃ।
03143018c ಪ್ರಾದುರಾಸನ್ಸಕಲುಸಾಃ ಫೇನವತ್ಯೋ ವಿಶಾಂ ಪತೇ।।
ವಿಶಾಂಪತೇ! ನದಿಗಳು ನೀರಿನಿಂದ ತುಂಬಿಕೊಂಡು ಕೆಸರು ಮತ್ತು ನೊರೆಗಳಿಂದ ಕೂಡಿದ ನೀರಿನ ಪ್ರವಾಹಗಳು ಎಲ್ಲ ಕಡೆಯಿಂದಲೂ ಹರಿಯತೊಡಗಿದವು.
03143019a ವಹಂತ್ಯೋ ವಾರಿ ಬಹುಲಂ ಫೇನೋಡುಪಪರಿಪ್ಲುತಂ।
03143019c ಪರಿಸಸ್ರುರ್ಮಹಾಶಬ್ಧಾಃ ಪ್ರಕರ್ಷಂತ್ಯೋ ಮಹೀರುಹಾನ್।।
ಜೋರಾಗಿ ರಭಸದಿಂದ ಹರಿಯುತ್ತಿರುವ ಆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಮರಗಳು ಮತ್ತು ಮಣ್ಣು ತುಂಬಿಕೊಂಡಿದ್ದವು.
03143020a ತಸ್ಮಿನ್ನುಪರತೇ ವರ್ಷೇ ವಾತೇ ಚ ಸಮತಾಂ ಗತೇ।
03143020c ಗತೇ ಹ್ಯಂಭಸಿ ನಿಮ್ನಾನಿ ಪ್ರಾದುರ್ಭೂತೇ ದಿವಾಕರೇ।।
03143021a ನಿರ್ಜಗ್ಮುಸ್ತೇ ಶನೈಃ ಸರ್ವೇ ಸಮಾಜಗ್ಮುಶ್ಚ ಭಾರತ।
03143021c ಪ್ರತಸ್ಥುಶ್ಚ ಪುನರ್ವೀರಾಃ ಪರ್ವತಂ ಗಂಧಮಾದನಂ।।
ಮಳೆಯು ನಿಂತು, ಗಾಳಿಯು ಕಡಿಮೆಯಾಗಿ, ನೀರು ಕೆಳಗೆ ಹರಿದು ಹೋದ ನಂತರ ಸೂರ್ಯನು ಪುನಃ ಕಾಣಿಸಿಕೊಂಡನು ಮತ್ತು ಆ ವೀರರೆಲ್ಲರೂ ಮತ್ತೆ ಒಂದುಗೂಡಿಕೊಂಡು ಗಂಧಮಾದನ ಪರ್ವತವನ್ನು ಏರತೊಡಗಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ತ್ರಿಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತ್ಮೂರನೆಯ ಅಧ್ಯಾಯವು.