141 ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 141

ಸಾರ

ಪಾಂಡವರು ದ್ರೌಪದಿಯೊಡನೆ ಸುಬಾಹುವಿನ ರಾಜ್ಯವನ್ನು ದಾಟಿ ಮುಂದುವರೆದುದು (1-30).

03141001 ಯುಧಿಷ್ಠಿರ ಉವಾಚ।
03141001a ಅಂತರ್ಹಿತಾನಿ ಭೂತಾನಿ ರಕ್ಷಾಂಸಿ ಬಲವಂತಿ ಚ।
03141001c ಅಗ್ನಿನಾ ತಪಸಾ ಚೈವ ಶಕ್ಯಂ ಗಂತುಂ ವೃಕೋದರ।।

ಯುಧಿಷ್ಠಿರನು ಹೇಳಿದನು: “ವೃಕೋದರ! ಅಂತರ್ಹಿತ ಭೂತಗಳು ಮತ್ತು ಬಲಾನ್ವಿತ ರಾಕ್ಷಸರಿದ್ದಾರೆ. ಅಗ್ನಿ ಮತ್ತು ತಪಸ್ಸಿನಿಂದ ಹೋಗಲು ಶಕ್ಯರಾಗುತ್ತೇವೆ.

03141002a ಸನ್ನಿವರ್ತಯ ಕೌಂತೇಯ ಕ್ಷುತ್ಪಿಪಾಸೇ ಬಲಾನ್ವಯಾತ್।
03141002c ತತೋ ಬಲಂ ಚ ದಾಕ್ಷ್ಯಂ ಚ ಸಂಶ್ರಯಸ್ವ ಕುರೂದ್ವಹ।।

ಕೌಂತೇಯ! ಬಲವನ್ನುಪಯೋಗಿಸಿ ಹಸಿವೆ ಬಾಯಾರಿಕೆಗಳನ್ನು ನಿವಾರಿಸು. ಕುರೂದ್ವಹ! ಆದುದರಿಂದ ನಿನ್ನ ಬಲ ಮತ್ತು ದಕ್ಷತೆಯನ್ನು ಅವಲಂಬಿಸು.

03141003a ಋಷೇಸ್ತ್ವಯಾ ಶ್ರುತಂ ವಾಕ್ಯಂ ಕೈಲಾಸಂ ಪರ್ವತಂ ಪ್ರತಿ।
03141003c ಬುದ್ಧ್ಯಾ ಪ್ರಪಶ್ಯ ಕೌಂತೇಯ ಕಥಂ ಕೃಷ್ಣಾ ಗಮಿಷ್ಯತಿ।।

ಕೌಂತೇಯ! ಕೈಲಾಸ ಪರ್ವತದ ಕುರಿತು ಕೇಳಿದ ಋಷಿಯ ಮಾತುಗಳನ್ನು ಮನಸ್ಸಿನಲ್ಲಿಯೇ ಚರ್ಚೆಮಾಡಿ, ಕೃಷ್ಣೆಯು ಹೇಗೆ ಹೋಗುತ್ತಾಳೆ ಎನ್ನುವುದನ್ನು ಯೋಚಿಸು.

03141004a ಅಥ ವಾ ಸಹದೇವೇನ ಧೌಮ್ಯೇನ ಚ ಸಹಾಭಿಭೋ।
03141004c ಸೂದೈಃ ಪೌರೋಗವೈಶ್ಚೈವ ಸರ್ವೈಶ್ಚ ಪರಿಚಾರಕೈಃ।।
03141005a ರಥೈರಶ್ವೈಶ್ಚ ಯೇ ಚಾನ್ಯೇ ವಿಪ್ರಾಃ ಕ್ಲೇಶಾಸಹಾಃ ಪಥಿ।
03141005c ಸರ್ವೈಸ್ತ್ವಂ ಸಹಿತೋ ಭೀಮ ನಿವರ್ತಸ್ವಾಯತೇಕ್ಷಣ।।
03141006a ತ್ರಯೋ ವಯಂ ಗಮಿಷ್ಯಾಮೋ ಲಘ್ವಾಹಾರಾ ಯತವ್ರತಾಃ।
03141006c ಅಹಂ ಚ ನಕುಲಶ್ಚೈವ ಲೋಮಶಶ್ಚ ಮಹಾತಪಾಃ।।

ವಿಭೋ! ಭೀಮ! ಆಯತೇಕ್ಷಣ! ಅವಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ನೀನು ಯೋಚಿಸಿದರೆ ಸಹದೇವ ಮತ್ತು ಧೌಮ್ಯರೊಡನೆ ಅಡುಗೆಯವರನ್ನು, ಎಲ್ಲ ಸೇವಕರೂ, ಪರಿಚಾರಕರು, ರಥಗಳು, ಕುದುರೆಗಳು ಮತ್ತು ಮುಂದಿನ ಪ್ರಯಾಣದ ಕಷ್ಟಗಳನ್ನು ಸಹಿಸಲು ಅಶಕ್ತರಾದ ಇತರ ವಿಪ್ರರು ಇವರೆಲ್ಲರೊಂದಿಗೆ ಹಿಂದಿರುಗು. ನಾವು ಮೂವರು - ನಾನು, ನಕುಲ ಮತ್ತು ಮಹಾತಪಸ್ವಿ ಲೋಮಶರು - ಅಲ್ಪಾಹಾರಿಗಳಾಗಿ, ಯತವ್ರತರಾಗಿ ಮುಂದುವರೆಯುತ್ತೇವೆ.

03141007a ಮಮಾಗಮನಮಾಕಾಂಕ್ಷನ್ಗಂಗಾದ್ವಾರೇ ಸಮಾಹಿತಃ।
03141007c ವಸೇಹ ದ್ರೌಪದೀಂ ರಕ್ಷನ್ಯಾವದಾಗಮನಂ ಮಮ।।

ಗಂಗಾದ್ವಾರದಲ್ಲಿ ದ್ರೌಪದಿಯನ್ನು ರಕ್ಷಿಸಿಕೊಂಡು ನಾನು ಬರುವವರೆಗೆ ವಾಸಿಸಿಕೊಂಡಿರು. ನನ್ನ ಬರವನ್ನೇ ನಿರೀಕ್ಷಿಸಿಕೊಂಡಿರು.”

03141008 ಭೀಮ ಉವಾಚ।
03141008a ರಾಜಪುತ್ರೀ ಶ್ರಮೇಣಾರ್ತಾ ದುಃಖಾರ್ತಾ ಚೈವ ಭಾರತ।
03141008c ವ್ರಜತ್ಯೇವ ಹಿ ಕಲ್ಯಾಣೀ ಶ್ವೇತವಾಹದಿದೃಕ್ಷಯಾ।।

ಭೀಮನು ಹೇಳಿದನು: “ಭಾರತ! ರಾಜಪುತ್ರಿಯು ಆಯಾಸಗೊಂಡವಳೂ ದುಃಖಾರ್ತಳೂ ಆಗಿದ್ದಾಳೆ. ಆದರೂ ಈ ಕಲ್ಯಾಣಿಯು ಶ್ವೇತವಾಹನ ಅರ್ಜುನನನ್ನು ನೋಡಲೋಸುಗ ಖಂಡಿತವಾಗಿಯೂ ಪ್ರಯಾಣಮಾಡುತ್ತಾಳೆ.

03141009a ತವ ಚಾಪ್ಯರತಿಸ್ತೀವ್ರಾ ವರ್ಧತೇ ತಮಪಶ್ಯತಃ।
03141009c ಕಿಂ ಪುನಃ ಸಹದೇವಂ ಚ ಮಾಂ ಚ ಕೃಷ್ಣಾಂ ಚ ಭಾರತ।।

ಭಾರತ! ಅರ್ಜುನನನ್ನು ನೋಡದೇ ನಿನಗಾಗಿರುವ ದುಃಖಕ್ಕಿಂತಲೂ ಹೆಚ್ಚು ದುಃಖವು ನನಗೂ, ಸಹದೇವನಿಗೂ ಮತ್ತು ಕೃಷ್ಣೆಗೂ ಆಗಿರುವುದು.

03141010a ರಥಾಃ ಕಾಮಂ ನಿವರ್ತಂತಾಂ ಸರ್ವೇ ಚ ಪರಿಚಾರಕಾಃ।
03141010c ಸೂದಾಃ ಪೌರೋಗವಾಶ್ಚೈವ ಮನ್ಯತೇ ಯತ್ರ ನೋ ಭವಾನ್।।

ನಿನ್ನ ಅಭಿಪ್ರಾಯದಂತೆ ಬೇಕಾದರೆ ರಥಗಳು, ಎಲ್ಲ ಪರಿಚಾರಕರೂ, ಅಡುಗೆಯವರೂ ಮತ್ತು ಅವರ ಮೇಲ್ವಿಚಾರಕರೂ ಹಿಂದಿರುಗಲಿ.

03141011a ನ ಹ್ಯಹಂ ಹಾತುಮಿಚ್ಚಾಮಿ ಭವಂತಮಿಹ ಕರ್ಹಿ ಚಿತ್।
03141011c ಶೈಲೇಽಸ್ಮಿನ್ರಾಕ್ಷಸಾಕೀರ್ಣೇ ದುರ್ಗೇಷು ವಿಷಮೇಷು ಚ।।

ನಾನೂ ಕೂಡ ನಿನ್ನನ್ನು ಈ ರಾಕ್ಷಸರಿಂದ ತುಂಬಿದ, ವಿಷಮ ದುರ್ಗಗಳಿಂದ ಕೂಡಿದ ಪರ್ವತದ ಮೇಲೆ ಬಿಟ್ಟುಬಿಡಲು ಇಚ್ಛಿಸುವುದಿಲ್ಲ.

03141012a ಇಯಂ ಚಾಪಿ ಮಹಾಭಾಗಾ ರಾಜಪುತ್ರೀ ಯತವ್ರತಾ।
03141012c ತ್ವಾಮೃತೇ ಪುರುಷವ್ಯಾಘ್ರ ನೋತ್ಸಹೇದ್ವಿನಿವರ್ತಿತುಂ।।
03141013a ತಥೈವ ಸಹದೇವೋಽಯಂ ಸತತಂ ತ್ವಾಮನುವ್ರತಃ।
03141013c ನ ಜಾತು ವಿನಿವರ್ತೇತ ಮತಜ್ಞೋ ಹ್ಯಹಮಸ್ಯ ವೈ।।

ಪುರುಷವ್ಯಾಘ್ರ! ಈ ಮಹಾಭಾಗೆ, ಯತವ್ರತೆ ರಾಜಪುತ್ರಿಯೂ ಕೂಡ ನೀನಿಲ್ಲದೇ ಹಿಂದಿರುಗಲು ಇಷ್ಟಪಡುವುದಿಲ್ಲ. ಹಾಗೆಯೇ ನಿನ್ನ ಸತತ ಅನುವ್ರತನಾದ ಈ ಸಹದೇವನೂ ಕೂಡ ಹಿಂದಿರುಗಲು ಬಯಸುವುದಲ್ಲ. ಅವನ ಮನಸ್ಸು ಇದೇ ಎಂದು ನನಗೆ ಗೊತ್ತು.

03141014a ಅಪಿ ಚಾತ್ರ ಮಹಾರಾಜ ಸವ್ಯಸಾಚಿದಿದೃಕ್ಷಯಾ।
03141014c ಸರ್ವೇ ಲಾಲಸಭೂತಾಃ ಸ್ಮ ತಸ್ಮಾದ್ಯಾಸ್ಯಾಮಹೇ ಸಹ।।

ಮಹಾರಾಜ! ಅದೂ ಅಲ್ಲದೇ ನಾವೆಲ್ಲರೂ ಕೂಡ ಸವ್ಯಸಾಚಿ ಅರ್ಜುನನನ್ನು ನೋಡಲು ಲಾಲಸರಾಗಿದ್ದೇವೆ. ಆದುದರಿಂದ ನಾವೆಲ್ಲರೂ ಒಟ್ಟಿಗೇ ಪ್ರಯಾಣಮಾಡೋಣ.

03141015a ಯದ್ಯಶಕ್ಯೋ ರಥೈರ್ಗಂತುಂ ಶೈಲೋಽಯಂ ಬಹುಕಂದರಃ।
03141015c ಪದ್ಭಿರೇವ ಗಮಿಷ್ಯಾಮೋ ಮಾ ರಾಜನ್ವಿಮನಾ ಭವ।।

ಬಹಳಷ್ಟು ಕಂದರಗಳಿಂದ ಕೂಡಿದ ಈ ಪರ್ವತವನ್ನು ರಥಗಳ ಮೇಲೆ ಹೋಗಲು ಸಾಧ್ಯವಿಲ್ಲ. ರಾಜನ್! ಕಾಲ್ನಡುಗೆಯಲ್ಲಿಯೇ ಹೋಗೋಣ. ಚಿಂತಿಸಬೇಡ.

03141016a ಅಹಂ ವಹಿಷ್ಯೇ ಪಾಂಚಾಲೀಂ ಯತ್ರ ಯತ್ರ ನ ಶಕ್ಷ್ಯತಿ।
03141016c ಇತಿ ಮೇ ವರ್ತತೇ ಬುದ್ಧಿರ್ಮಾ ರಾಜನ್ವಿಮನಾ ಭವ।।

ಪಾಂಚಾಲಿಯು ಎಲ್ಲೆಲ್ಲಿ ಹೋಗಲು ಅಶಕ್ತಳೋ ಅಲ್ಲಿ ನಾನು ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ನನಗೆ ಹೀಗೆ ಅನ್ನಿಸುತ್ತದೆ. ರಾಜನ್! ಚಿಂತಿಸಬೇಡ!

03141017a ಸುಕುಮಾರೌ ತಥಾ ವೀರೌ ಮಾದ್ರೀನಂದಿಕರಾವುಭೌ।
03141017c ದುರ್ಗೇ ಸಂತಾರಯಿಷ್ಯಾಮಿ ಯದ್ಯಶಕ್ತೌ ಭವಿಷ್ಯತಃ।।

ಸುಕುಮಾರ ವೀರ ಮಾದ್ರೀಪುತ್ರರಿಬ್ಬರನ್ನೂ ಕೂಡ, ಅವರಿಗೆ ಅಶಕ್ತವಾದ ಕಷ್ಟ ಪ್ರದೇಶಗಳಿಗೆ ನಾನು ಎತ್ತಿಕೊಂಡು ಹೋಗುತ್ತೇನೆ.”

03141018 ಯುಧಿಷ್ಠಿರ ಉವಾಚ।
03141018a ಏವಂ ತೇ ಭಾಷಮಾಣಸ್ಯ ಬಲಂ ಭೀಮಾಭಿವರ್ಧತಾಂ।
03141018c ಯಸ್ತ್ವಮುತ್ಸಹಸೇ ವೋಢುಂ ದ್ರೌಪದೀಂ ವಿಪುಲೇಽಧ್ವನಿ।।
03141019a ಯಮಜೌ ಚಾಪಿ ಭದ್ರಂ ತೇ ನೈತದನ್ಯತ್ರ ವಿದ್ಯತೇ।
03141019c ಬಲಂ ಚ ತೇ ಯಶಶ್ಚೈವ ಧರ್ಮಃ ಕೀರ್ತಿಶ್ಚ ವರ್ಧತಾಂ।।
03141020a ಯಸ್ತ್ವಮುತ್ಸಹಸೇ ನೇತುಂ ಭ್ರಾತರೌ ಸಹ ಕೃಷ್ಣಯಾ।
03141020c ಮಾ ತೇ ಗ್ಲಾನಿರ್ಮಹಾಬಾಹೋ ಮಾ ಚ ತೇಽಸ್ತು ಪರಾಭವಃ।।

ಯುಧಿಷ್ಠಿರನು ಹೇಳಿದನು: “ಭೀಮ! ನಿನ್ನ ಈ ಮಾತುಗಳು ನಿನ್ನ ಬಲವನ್ನು ವರ್ಧಿಸುತ್ತವೆ. ದ್ರೌಪದಿಯನ್ನು ಮತ್ತು ನಕುಲ ಸಹದೇವರನ್ನು ಈ ದೂರದ ದಾರಿಯಲ್ಲಿ ಎತ್ತಿಕೊಂಡು ಹೋಗಲು ಉತ್ಸುಕನಾಗಿದ್ದೀಯೆ. ನಿನಗೆ ಮಂಗಳವಾಗಲಿ. ಬೇರೆ ಯಾರಿಗೂ ಈ ರೀತಿ ಮಾಡಲು ಸಾಧ್ಯವಿಲ್ಲ. ಕೃಷ್ಣೆಯೊಂದಿಗೆ ಈ ಸಹೋದರರೀರ್ವರನ್ನೂ ಎತ್ತಿಕೊಂಡು ಒಯ್ದರೆ ನಿನ್ನ ಬಲವೂ, ಯಶಸ್ಸೂ, ಧರ್ಮವೂ, ಕೀರ್ತಿಯೂ ಹೆಚ್ಚಾಗುತ್ತವೆ. ಮಹಾಬಾಹು! ನಿನಗೆ ಆಯಾಸವಾಗದಿರಲಿ ಮತ್ತು ನಿನಗೆ ಸೋಲಾಗದಿರಲಿ.””

03141021 ವೈಶಂಪಾಯನ ಉವಾಚ।
03141021a ತತಃ ಕೃಷ್ಣಾಬ್ರವೀದ್ವಾಕ್ಯಂ ಪ್ರಹಸಂತೀ ಮನೋರಮಾ।
03141021c ಗಮಿಷ್ಯಾಮಿ ನ ಸಂತಾಪಃ ಕಾರ್ಯೋ ಮಾಂ ಪ್ರತಿ ಭಾರತ।।

ವೈಶಂಪಾಯನನು ಹೇಳಿದನು: “ಆಗ ಮನೋರಮೆ ಕೃಷ್ಣೆಯು ನಗುತ್ತಾ ಹೇಳಿದಳು: “ಭಾರತ! ನಾನು ನಡೆಯುತ್ತೇನೆ. ನನ್ನ ಕುರಿತು ಚಿಂತಿಸಬೇಡ.”

03141022 ಲೋಮಶ ಉವಾಚ।
03141022a ತಪಸಾ ಶಕ್ಯತೇ ಗಂತುಂ ಪರ್ವತೋ ಗಂಧಮಾದನಃ।
03141022c ತಪಸಾ ಚೈವ ಕೌಂತೇಯ ಸರ್ವೇ ಯೋಕ್ಷ್ಯಾಮಹೇ ವಯಂ।।
03141023a ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾರ್ಥಿವ।
03141023c ಅಹಂ ಚ ತ್ವಂ ಚ ಕೌಂತೇಯ ದ್ರಕ್ಷ್ಯಾಮಃ ಶ್ವೇತವಾಹನಂ।।

ಲೋಮಶನು ಹೇಳಿದನು: “ಕೌಂತೇಯ! ತಪಸ್ಸಿನಿಂದ ಗಂಧಮಾದನ ಪರ್ವತಕ್ಕೆ ಹೋಗಲು ಸಾಧ್ಯವಾಗುತ್ತದೆ. ಪಾರ್ಥಿವ! ಕೌಂತೇಯ! ನೀನು, ನಾನು, ನಕುಲ, ಸಹದೇವ ಮತ್ತು ಭೀಮಸೇನ ನಾವೆಲ್ಲರೂ ತಪಸ್ಸಿನಲ್ಲಿ ತೊಡಗೋಣ ಮತ್ತು ನಾವು ಶ್ವೇತವಾಹನ ಅರ್ಜುನನನ್ನು ನೋಡಬಹುದು.””

03141024 ವೈಶಂಪಾಯನ ಉವಾಚ।
03141024a ಏವಂ ಸಂಭಾಷಮಾಣಾಸ್ತೇ ಸುಬಾಹೋರ್ವಿಷಯಂ ಮಹತ್।
03141024c ದದೃಶುರ್ಮುದಿತಾ ರಾಜನ್ಪ್ರಭೂತಗಜವಾಜಿಮತ್।।
03141025a ಕಿರಾತತಂಗಣಾಕೀರ್ಣಂ ಕುಣಿಂದಶತಸಂಕುಲಂ।
03141025c ಹಿಮವತ್ಯಮರೈರ್ಜುಷ್ಟಂ ಬಹ್ವಾಶ್ಚರ್ಯಸಮಾಕುಲಂ।।

ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗ ಅವರು ಸಂತೋಷದಿಂದ ಆನೆ ಕುದುರೆಗಳಿಂದ ಕೂಡಿದ, ಕಿರಾತರು ಮತ್ತು ತಂಗಣರು ವಾಸಿಸುವ, ನೂರಾರು ಕುಣಿಂದರು ವಾಸಿಸುವ, ಅಮರರು ಇಷ್ಟಪಡುವ, ಹಿಮಾಲಯದಲ್ಲಿರುವ ಬಹಳ ಅಶ್ಚರ್ಯಕರವಾದ ಸುಬಾಹುವಿನ ಮಹಾ ದೇಶವನ್ನು ಕಂಡರು.

03141026a ಸುಬಾಹುಶ್ಚಾಪಿ ತಾನ್ದೃಷ್ಟ್ವಾ ಪೂಜಯಾ ಪ್ರತ್ಯಗೃಹ್ಣತ।
03141026c ವಿಷಯಾಂತೇ ಕುಣಿಂದಾನಾಮೀಶ್ವರಃ ಪ್ರೀತಿಪೂರ್ವಕಂ।।

ಕುಣಿಂದರ ರಾಜ ಸುಬಾಹುವೂ ಕೂಡ ತನ್ನ ರಾಜ್ಯದ ಗಡಿಯಲ್ಲಿ ಅವರನ್ನು ಕಂಡು ಪ್ರೀತಿಪೂರ್ವಕವಾಗಿ ಪೂಜಿಸಿ ಸ್ವಾಗತಿಸಿದನು.

03141027a ತತ್ರ ತೇ ಪೂಜಿತಾಸ್ತೇನ ಸರ್ವ ಏವ ಸುಖೋಷಿತಾಃ।
03141027c ಪ್ರತಸ್ಥುರ್ವಿಮಲೇ ಸೂರ್ಯೇ ಹಿಮವಂತಂ ಗಿರಿಂ ಪ್ರತಿ।।

ಅವರು ಎಲ್ಲರೂ ಪೂಜಿಸಲ್ಪಟ್ಟು ಅಲ್ಲಿಯೇ ಸುಖದಿಂದ ಉಳಿದುಕೊಂಡರು. ಸೂರ್ಯನು ಬೆಳಕುನೀಡಿದಾಗ ಅವರು ಹಿಮಾಲಯ ಪರ್ವತದ ಕಡೆ ಹೊರಟರು.

03141028a ಇಂದ್ರಸೇನಮುಖಾಂಶ್ಚೈವ ಭೃತ್ಯಾನ್ಪೌರೋಗವಾಂಸ್ತಥಾ।
03141028c ಸೂದಾಂಶ್ಚ ಪರಿಬರ್ಹಂ ಚ ದ್ರೌಪದ್ಯಾಃ ಸರ್ವಶೋ ನೃಪ।।
03141029a ರಾಜ್ಞಃ ಕುಣಿಂದಾಧಿಪತೇಃ ಪರಿದಾಯ ಮಹಾರಥಾಃ।

ರಾಜ! ಆ ಮಹಾರಥಿಗಳು ಇಂದ್ರಸೇನನ ನಾಯಕತ್ವದಲ್ಲಿ ಎಲ್ಲ ಸೇವಕರೂ, ಮೇಲ್ವಿಚಾರಕರೂ, ಅಡುಗೆಯವರೂ ಮತ್ತು ದ್ರೌಪದಿಯ ಪರಿಚಾರಕರೆಲ್ಲರನ್ನೂ ರಾಜ ಕುಣಿಂದಾಧಿಪತಿಗೆ ಒಪ್ಪಿಸಿದರು.

03141029c ಪದ್ಭಿರೇವ ಮಹಾವೀರ್ಯಾ ಯಯುಃ ಕೌರವನಂದನಾಃ।।
03141030a ತೇ ಶನೈಃ ಪ್ರಾದ್ರವನ್ಸರ್ವೇ ಕೃಷ್ಣಯಾ ಸಹ ಪಾಂಡವಾಃ।
03141030c ತಸ್ಮಾದ್ದೇಶಾತ್ಸುಸಂಹೃಷ್ಟಾ ದ್ರಷ್ಟುಕಾಮಾ ಧನಂಜಯಂ।।

ದ್ರೌಪದಿಯೊಡನೆ ಮಹಾವೀರ ಕೌರವನಂದ ಪಾಂಡವರೆಲ್ಲರೂ ಆ ದೇಶದಿಂದ ಕಾಲ್ನಡುಗೆಯಲ್ಲಿ ನಿಧಾನವಾಗಿ, ಧನಂಜಯನನ್ನು ಕಾಣುವ ಸಂತೋಷದಿಂದ ಹೊರಟರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತೊಂದನೆಯ ಅಧ್ಯಾಯವು.