139 ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 139

ಸಾರ

ಅರಾವಸು-ಪರಾವಸು ಇಬ್ಬರೂ ರಾಜಾ ಬೃಹದ್ಯುಮ್ನನ ಸತ್ರದಲ್ಲಿ ವೃತರಾಗಿ ಭಾಗವಹಿಸಿದುದು (1-2). ಒಂದು ರಾತ್ರಿ ಮನೆಗೆ ಬರುವಾಗ ಅರಾವಸುವು ಜಿಂಕೆಯೆಂದು ತಿಳಿದು ರೈಭ್ಯನನ್ನು ಕೊಂದುದು (3-6). ತಮ್ಮ ಪರಾವಸುವಿಗೆ ಬ್ರಹ್ಮಹತ್ಯಾದೋಷದ ವ್ರತವನ್ನು ನಡೆಸೆಂದು ಅರಾವಸುವು ಹೇಳಿ ಯಾಗಕಾರ್ಯದಲ್ಲಿ ತೊಡಗುವುದು (7-10). ಬ್ರಹ್ಮಹತ್ಯೆಯನ್ನು ಪೂರೈಸಿ ಸತ್ರಕ್ಕೆ ಹಿಂದಿರುಗಿದ ಪರಾವಸುವನ್ನು ಅರಾವಸುವು ತನ್ನ ತಂದೆಯನ್ನು ಕೊಂದ ಆರೋಪವನ್ನು ಹೊರಿಸಿ, ಸತ್ರದಿಂದ ಬಹಿಷ್ಕಾರ ಮಾಡಿದುದು (11-14). ಪರಾವಸುವಿಗೆ ಮೆಚ್ಚಿ ದೇವತೆಗಳು ವರಗಳನ್ನಿತ್ತುದು (15-24).

03139001 ಲೋಮಶ ಉವಾಚ।
03139001a ಏತಸ್ಮಿನ್ನೇವ ಕಾಲೇ ತು ಬೃಹದ್ದ್ಯುಮ್ನೋ ಮಹೀಪತಿಃ।
03139001c ಸತ್ರಮಾಸ್ತೇ ಮಹಾಭಾಗೋ ರೈಭ್ಯಯಾಜ್ಯಃ ಪ್ರತಾಪವಾನ್।।

ಲೋಮಶನು ಹೇಳಿದನು: “ಇದೇ ಸಮಯದಲ್ಲಿ ಮಹಾಭಾಗ ರೈಭ್ಯನ ಯಜಮಾನ ಪ್ರತಾಪವಾನ್ ರಾಜಾ ಬೃಹದ್ದ್ಯುಮ್ನನು ಸತ್ರವನ್ನು ಕೈಗೊಂಡನು.

03139002a ತೇನ ರೈಭ್ಯಸ್ಯ ವೈ ಪುತ್ರಾವರ್ವಾವಸುಪರಾವಸೂ।
03139002c ವೃತೌ ಸಹಾಯೌ ಸತ್ರಾರ್ಥೇ ಬೃಹದ್ದ್ಯುಮ್ನೇನ ಧೀಮತಾ।।

ಧೀಮಂತ ಬೃಹದ್ದ್ಯುಮ್ನನು ರೈಭ್ಯನ ಮಕ್ಕಳಾದ ಅರಾವಸು ಮತ್ತು ಪರಾವಸುಗಳಿಬ್ಬರನ್ನೂ ಒಟ್ಟಿಗೇ ಸತ್ರದಲ್ಲಿ ವೃತರನ್ನಾಗಿ ತೆಗೆದುಕೊಂಡನು.

03139003a ತತ್ರ ತೌ ಸಮನುಜ್ಞಾತೌ ಪಿತ್ರಾ ಕೌಂತೇಯ ಜಗ್ಮತುಃ।
03139003c ಆಶ್ರಮೇ ತ್ವಭವದ್ರೈಭ್ಯೋ ಭಾರ್ಯಾ ಚೈವ ಪರಾವಸೋಃ।।

ಕೌಂತೇಯ! ತಂದೆಯ ಅನುಮತಿಯನ್ನು ಪಡೆದು ಅವರಿಬ್ಬರೂ ಅಲ್ಲಿಗೆ ಹೋದರು. ಆಶ್ರಮದಲ್ಲಿ ರೈಭ್ಯ ಮತ್ತು ಪರಾವಸುವಿನ ಪತ್ನಿಯರಿದ್ದರು.

03139004a ಅಥಾವಲೋಕಕೋಽಗಚ್ಚದ್ಗೃಹಾನೇಕಃ ಪರಾವಸುಃ।
03139004c ಕೃಷ್ಣಾಜಿನೇನ ಸಂವೀತಂ ದದರ್ಶ ಪಿತರಂ ವನೇ।।

ಅನಂತರ ಪರಾವಸುವು ಭೇಟಿಯಾಗಲು ಒಬ್ಬನೇ ತನ್ನ ಮನೆಗೆ ಬರುವಾಗ ವನದಲ್ಲಿ ಕಪ್ಪು ಜಿನವನ್ನು ಮುಚ್ಚಿಕೊಂಡಿದ್ದ ತನ್ನ ತಂದೆಯನ್ನು ಕಂಡನು.

03139005a ಜಘನ್ಯರಾತ್ರೇ ನಿದ್ರಾಂಧಃ ಸಾವಶೇಷೇ ತಮಸ್ಯಪಿ।
03139005c ಚರಂತಂ ಗಹನೇಽರಣ್ಯೇ ಮೇನೇ ಸ ಪಿತರಂ ಮೃಗಂ।।

ಆಗ ಬಹಳ ರಾತ್ರಿಯಾಗಿತ್ತು. ರಾತ್ರಿ ಸ್ವಲ್ಪವೇ ಉಳಿದಿತ್ತು. ನಿದ್ದೆಗೆಟ್ಟು ಪ್ರಯಾಣಿಸುತ್ತಿದ್ದ ಅವನು ಗಹನವಾದ ಅರಣ್ಯದಲ್ಲಿ ತನ್ನ ತಂದೆಯನ್ನು ಜಿಂಕೆಯೆಂದು ಅಂದುಕೊಂಡನು.

03139006a ಮೃಗಂ ತು ಮನ್ಯಮಾನೇನ ಪಿತಾ ವೈ ತೇನ ಹಿಂಸಿತಃ।
03139006c ಅಕಾಮಯಾನೇನ ತದಾ ಶರೀರತ್ರಾಣಮಿಚ್ಚತಾ।।

ಜಿಂಕೆಯೆಂದು ತಿಳಿದು ಅವನು ತನ್ನ ತಂದೆಯನ್ನು, ಹಾಗೆ ಮಾಡಬೇಕೆಂದು ಬಯಸಿರಲಿಲ್ಲದಿದ್ದರೂ ತನ್ನ ದೇಹವನ್ನು ಉಳಿಸಿಕೊಳ್ಳಲು, ಕೊಂದನು.

03139007a ಸ ತಸ್ಯ ಪ್ರೇತಕಾರ್ಯಾಣಿ ಕೃತ್ವಾ ಸರ್ವಾಣಿ ಭಾರತ।
03139007c ಪುನರಾಗಮ್ಯ ತತ್ಸತ್ರಮಬ್ರವೀದ್ಭ್ರಾತರಂ ವಚಃ।।

ಭಾರತ! ಅವನು ಅವನ ಪ್ರೇತಕಾರ್ಯಗಳೆಲ್ಲವನ್ನೂ ಮಾಡಿ ಪುನಃ ಸತ್ರಕ್ಕೆ ಹಿಂದಿರುಗಿ ತನ್ನ ತಮ್ಮನಿಗೆ ಹೇಳಿದನು:

03139008a ಇದಂ ಕರ್ಮ ನ ಶಕ್ತಸ್ತ್ವಂ ವೋಢುಮೇಕಃ ಕಥಂ ಚನ।
03139008c ಮಯಾ ತು ಹಿಂಸಿತಸ್ತಾತೋ ಮನ್ಯಮಾನೇನ ತಂ ಮೃಗಂ।।

“ಈ ಕರ್ಮವನ್ನು ನೀನೊಬ್ಬನೇ ಪೂರೈಸಲು ಎಂದೂ ಶಕ್ತನಲ್ಲ. ನಾನಾದರೋ ಜಿಂಕೆಯೆಂದು ತಿಳಿದು ತಂದೆಯನ್ನು ಕೊಂದೆ.

03139009a ಸೋಽಸ್ಮದರ್ಥೇ ವ್ರತಂ ಸಾಧು ಚರ ತ್ವಂ ಬ್ರಹ್ಮಹಿಂಸನಂ।
03139009c ಸಮರ್ಥೋ ಹ್ಯಹಮೇಕಾಕೀ ಕರ್ಮ ಕರ್ತುಮಿದಂ ಮುನೇ।।

ಆದುದರಿಂದ ಬ್ರಹ್ಮಹತ್ಯಾದೋಷದ ವ್ರತವನ್ನು ನೀನು ನಡೆಸಿದರೆ ಒಳ್ಳೆಯದು. ಮುನೇ! ನಾನೊಬ್ಬನೇ ಈ ಕಾರ್ಯವನ್ನು ಮುಗಿಸಲು ಸಮರ್ಥನಾಗಿದ್ದೇನೆ.”

03139010 ಅರ್ವಾವಸುರುವಾಚ।
03139010a ಕರೋತು ವೈ ಭವಾನ್ಸತ್ರಂ ಬೃಹದ್ದ್ಯುಮ್ನಸ್ಯ ಧೀಮತಃ।
03139010c ಬ್ರಹ್ಮಹತ್ಯಾಂ ಚರಿಷ್ಯೇಽಹಂ ತ್ವದರ್ಥಂ ನಿಯತೇಂದ್ರಿಯಃ।।

ಅರ್ವಾವಸುವು ಹೇಳಿದನು: “ಹಾಗಾದರೆ ನೀನೇ ಈ ಧೀಮಂತ ಬೃಹದ್ದ್ಯುಮ್ನನ ಸತ್ರವನ್ನು ಪೂರೈಸು. ನಾನು ನಿನ್ನ ಪರವಾಗಿ ನಿಯತೇಂದ್ರಿಯನಾಗಿದ್ದು ಬ್ರಹ್ಮಹತ್ಯೆಯ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ.””

03139011 ಲೋಮಶ ಉವಾಚ।
03139011a ಸ ತಸ್ಯಾ ಬ್ರಹ್ಮಹತ್ಯಾಯಾಃ ಪಾರಂ ಗತ್ವಾ ಯುಧಿಷ್ಠಿರ।
03139011c ಅರ್ವಾವಸುಸ್ತದಾ ಸತ್ರಮಾಜಗಾಮ ಪುನರ್ಮುನಿಃ।।

ಲೋಮಶನು ಹೇಳಿದನು: “ಯುಧಿಷ್ಠಿರ! ಅವನ ಬ್ರಹ್ಮಹತ್ಯೆಯ ವ್ರತವನ್ನು ಪೂರೈಸಿ ಮುನಿ ಅರಾವಸುವು ಪುನಃ ಸತ್ರಕ್ಕೆ ಹೋದನು.

03139012a ತತಃ ಪರಾವಸುರ್ದೃಷ್ಟ್ವಾ ಭ್ರಾತರಂ ಸಮುಪಸ್ಥಿತಂ।
03139012c ಬೃಹದ್ದ್ಯುಮ್ನಮುವಾಚೇದಂ ವಚನಂ ಪರಿಷದ್ಗತಂ।।

ತನ್ನ ತಮ್ಮನನ್ನು ನೋಡಿದ ಪರಾವಸುವು ಅಲ್ಲಿಯೇ ಪರಿಷತ್ತಿನಲ್ಲಿ ಕುಳಿತಿದ್ದ ಬೃಹದ್ದ್ಯುಮ್ನನಿಗೆ ಈ ಮಾತುಗಳನ್ನಾಡಿದನು:

03139013a ಏಷ ತೇ ಬ್ರಹ್ಮಹಾ ಯಜ್ಞಂ ಮಾ ದ್ರಷ್ಟುಂ ಪ್ರವಿಶೇದಿತಿ।
03139013c ಬ್ರಹ್ಮಹಾ ಪ್ರೇಕ್ಷಿತೇನಾಪಿ ಪೀಡಯೇತ್ತ್ವಾಂ ನ ಸಂಶಯಃ।।

“ಈ ಬ್ರಹ್ಮ ಹಂತಕನಿಗೆ ನಿನ್ನ ಯಜ್ಞವನ್ನು ನೋಡಲು ಒಳಗೆ ಬಿಡಬೇಡ! ಬ್ರಹ್ಮಹತ್ಯಾದೋಷಿಯು ಒಂದು ಕಡೆಗಣ್ಣಿನ ನೋಟದಿಂದಲೇ ನಿನ್ನನ್ನು ಪೀಡಿಸಬಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.”

03139014a ಪ್ರೇಷ್ಯೈರುತ್ಸಾರ್ಯಮಾಣಸ್ತು ರಾಜನ್ನರ್ವಾವಸುಸ್ತದಾ।
03139014c ನ ಮಯಾ ಬ್ರಹ್ಮಹತ್ಯೇಯಂ ಕೃತೇತ್ಯಾಹ ಪುನಃ ಪುನಃ।।

ರಾಜನ್! ಆಗ ಅರಾವಸುವು “ಈ ಬ್ರಹ್ಮಹತ್ಯೆಯನ್ನು ಮಾಡಿದ್ದುದು ನಾನಲ್ಲ। ” ಎಂದು ಪುನಃ ಪುನಃ ಕೂಗಿ ಹೇಳುತ್ತಿದ್ದರೂ ಅವನನ್ನು ರಾಜನ ಸೇವಕರು ಎಳೆದು ಹೊರಹಾಕಿದರು.

03139015a ಉಚ್ಯಮಾನೋಽಸಕೃತ್ಪ್ರೇಷ್ಯೈರ್ಬ್ರಹ್ಮಹನ್ನಿತಿ ಭಾರತ।
03139015c ನೈವ ಸ ಪ್ರತಿಜಾನಾತಿ ಬ್ರಹ್ಮಹತ್ಯಾಂ ಸ್ವಯಂ ಕೃತಾಂ।
03139015e ಮಮ ಭ್ರಾತ್ರಾ ಕೃತಮಿದಂ ಮಯಾ ತು ಪರಿರಕ್ಷಿತಂ।।

ಭಾರತ! ಅವನು ಬ್ರಹ್ಮಹತ್ಯಾಪ್ರಾಯಶ್ಚಿತ್ತವನ್ನು ತನಗಾಗಿ ಮಾಡಿಲ್ಲವೆಂದೂ ಬ್ರಹ್ಮಹತ್ಯೆಯನ್ನು ಸ್ವಯಂ ಅವನು ಮಾಡಿಲ್ಲವೆಂದು ಹೇಳಿದರೂ ಯಾರೂ ಅದನ್ನು ಸ್ವೀಕರಿಸಲಿಲ್ಲ.

03139016a ಪ್ರೀತಾಸ್ತಸ್ಯಾಭವನ್ದೇವಾಃ ಕರ್ಮಣಾರ್ವಾವಸೋರ್ನೃಪ।
03139016c ತಂ ತೇ ಪ್ರವರಯಾಮಾಸುರ್ನಿರಾಸುಶ್ಚ ಪರಾವಸುಂ।।
03139017a ತತೋ ದೇವಾ ವರಂ ತಸ್ಮೈ ದದುರಗ್ನಿಪುರೋಗಮಾಃ।
03139017c ಸ ಚಾಪಿ ವರಯಾಮಾಸ ಪಿತುರುತ್ಥಾನಮಾತ್ಮನಃ।।

ರಾಜನ್! ಅರಾವಸುವಿನ ಕೃತ್ಯದಿಂದ ದೇವತೆಗಳು ಸಂಪ್ರೀತರಾದರು. ಅವರು ಅರಾವಸುವನ್ನು ಮುಖ್ಯ ಪುರೋಹಿತನನ್ನಾಗಿ ನಿಯೋಜಿಸಿ ಪರಾವಸುವನ್ನು ಹೊರಹಾಕಿದರು. ಆಗ ಅಗ್ನಿಯ ಮುಖಂಡತ್ವದಲ್ಲಿ ದೇವತೆಗಳು ಅವನಿಗೆ ವರಗಳನ್ನಿತ್ತರು. ಅವನಾದರೂ ತನ್ನ ತಂದೆಯು ಮೇಲೇಳುವಂತೆ ವರವನ್ನು ಕೇಳಿಕೊಂಡನು.

03139018a ಅನಾಗಸ್ತ್ವಂ ತಥಾ ಭ್ರಾತುಃ ಪಿತುಶ್ಚಾಸ್ಮರಣಂ ವಧೇ।
03139018c ಭರದ್ವಾಜಸ್ಯ ಚೋತ್ಥಾನಂ ಯವಕ್ರೀತಸ್ಯ ಚೋಭಯೋಃ।।

ಹಾಗೆಯೇ ತನ್ನ ಅಣ್ಣನು ತಂದೆಯನ್ನು ವಧಿಸಿದುದನ್ನು ಮರೆತು ತಪ್ಪಿಲ್ಲದಂತಾಗುವಂತೆ ಮತ್ತು ಭರದ್ವಾಜ-ಯವಕ್ರಿ ಇಬ್ಬರೂ ಮೇಲೇಳುವಂತೆ ಕೇಳಿಕೊಂಡನು.

03139019a ತತಃ ಪ್ರಾದುರ್ಬಭೂವುಸ್ತೇ ಸರ್ವ ಏವ ಯುಧಿಷ್ಠಿರ।
03139019c ಅಥಾಬ್ರವೀದ್ಯವಕ್ರೀತೋ ದೇವಾನಗ್ನಿಪುರೋಗಮಾನ್।।

ಯುಧಿಷ್ಠಿರ! ಆಗ ಎಲ್ಲರೂ ಎದ್ದು ಕಾಣಿಸಿಕೊಂಡರು. ಆಗ ಯವಕ್ರಿಯು ಅಗ್ನಿಯನ್ನು ಮುಂದಿಟ್ಟುಕೊಂಡಿದ್ದ ದೇವತೆಗಳಿಗೆ ಹೇಳಿದನು:

03139020a ಸಮಧೀತಂ ಮಯಾ ಬ್ರಹ್ಮ ವ್ರತಾನಿ ಚರಿತಾನಿ ಚ।
03139020c ಕಥಂ ನು ರೈಭ್ಯಃ ಶಕ್ತೋ ಮಾಮಧೀಯಾನಂ ತಪಸ್ವಿನಂ।
03139020e ತಥಾಯುಕ್ತೇನ ವಿಧಿನಾ ನಿಹಂತುಮಮರೋತ್ತಮಾಃ।।

“ಅಮರೋತ್ತಮರೇ! ನಾನು ಬ್ರಹ್ಮನನ್ನು ಕಲಿತಿದ್ದೆ ಮತ್ತು ವ್ರತಗಳನ್ನು ಆಚರಿಸಿದ್ದೆ. ಹಾಗಿದ್ದರೂ ಕಲಿತಿದ್ದ ತಪಸ್ವಿ ರೈಭ್ಯನು ತನ್ನ ಆ ವಿಧಿಯಿಂದ ನನ್ನನ್ನು ಕೆಳಗುರುಳಿಸಲು ಹೇಗೆ ಶಕ್ತನಾದ?”

03139021 ದೇವಾ ಊಚುಃ 03139021a ಮೈವಂ ಕೃಥಾ ಯವಕ್ರೀತ ಯಥಾ ವದಸಿ ವೈ ಮುನೇ।
03139021c ಋತೇ ಗುರುಮಧೀತಾ ಹಿ ಸುಖಂ ವೇದಾಸ್ತ್ವಯಾ ಪುರಾ।।
03139022a ಅನೇನ ತು ಗುರೂನ್ದುಃಖಾತ್ತೋಷಯಿತ್ವಾ ಸ್ವಕರ್ಮಣಾ।
03139022c ಕಾಲೇನ ಮಹತಾ ಕ್ಲೇಶಾದ್ಬ್ರಹ್ಮಾಧಿಗತಮುತ್ತಮಂ।।

ದೇವತೆಗಳು ಹೇಳಿದರು: “ಮುನಿ ಯವಕ್ರಿ! ನೀನು ಹೇಗೆ ಮಾತನ್ನಾಡುತ್ತೀಯೋ ಹಾಗೆ ಮಾಡಬೇಡ. ನೀನು ಹಿಂದೆ ಗುರುವಿಲ್ಲದೇ ವೇದಗಳನ್ನು ಸುಲಭ ಮಾರ್ಗದಲ್ಲಿ ಕಲಿತೆ. ಆದರೆ ರೈಭ್ಯನು ಗುರುವನ್ನು ತನ್ನ ಕೆಲಸಗಳಿಂದ ತೃಪ್ತಿಪಡಿಸಿ ಕಷ್ಟದಲ್ಲಿ ಬಹಳ ದೀರ್ಘ ಕಾಲದಲ್ಲಿ ಅನುತ್ತಮ ಬ್ರಹ್ಮನನ್ನು ಕಲಿತುಕೊಂಡನು.””

03139023 ಲೋಮಶ ಉವಾಚ।
03139023a ಯವಕ್ರೀತಮಥೋಕ್ತ್ವೈವಂ ದೇವಾಃ ಸಾಗ್ನಿಪುರೋಗಮಾಃ।
03139023c ಸಂಜೀವಯಿತ್ವಾ ತಾನ್ಸರ್ವಾನ್ಪುನರ್ಜಗ್ಮುಸ್ತ್ರಿವಿಷ್ಟಪಂ।।

ಲೋಮಶನು ಹೇಳಿದನು: “ಹೀಗೆ ಅಗ್ನಿಯನ್ನು ಮುಂದಿಟ್ಟುಕೊಂಡು ಬಂದಿದ್ದ ದೇವತೆಗಳು ಯವಕ್ರಿಗೆ ಹೇಳಿ ಅವರೆಲ್ಲರನ್ನೂ ಜೀವಂತಗೊಳಿಸಿ ಪುನಃ ದೇವಲೋಕಕ್ಕೆ ತೆರಳಿದರು.

03139024a ಆಶ್ರಮಸ್ತಸ್ಯ ಪುಣ್ಯೋಽಯಂ ಸದಾಪುಷ್ಪಫಲದ್ರುಮಃ।
03139024c ಅತ್ರೋಷ್ಯ ರಾಜಶಾರ್ದೂಲ ಸರ್ವಪಾಪೈಃ ಪ್ರಮೋಕ್ಷ್ಯಸೇ।।

ಇದು ಸದಾ ಫಲಪುಷ್ಪಗಳ ಮರಗಳನ್ನುಳ್ಳ ಅವನ ಆ ಪುಣ್ಯ ಆಶ್ರಮ. ರಾಜಶಾರ್ದೂಲ! ಇಲ್ಲಿ ಉಳಿದುಕೊಳ್ಳುವುದರಿಂದ ನೀನು ಸರ್ವಪಾಪಗಳಿಂದ ಮುಕ್ತಿಹೊಂದುವೆ1.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಏಕೋನಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೊಂಭತ್ತನೆಯ ಅಧ್ಯಾಯವು.


  1. ಮಹಾಭಾರತದಲ್ಲಿರುವ ಯವಕ್ರೀತನ ಕುರಿತಾದ ಈ ಕಥೆಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ಕನ್ನಡದಲ್ಲಿ “ಅಗ್ನಿ ಮತ್ತು ಮಳೆ” ಎಂಬ ನಾಟಕವನ್ನು ರಚಿಸಿದ್ದಾರೆ. ಈ ನಾಟಕದ ಆಧಾರದ ಮೇಲೆ “ಅಗ್ನಿವರ್ಷ” ಎನ್ನುವ ಹಿಂದೀ ಚಿತ್ರಪಟವೂ ಇದೆ. ↩︎