ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 138
ಸಾರ
ಮಗನ ಮರಣದ ವಿಷಯವನ್ನು ತಿಳಿದು ದುಃಖಿತನಾದ ಭರದ್ವಾಜನು ಅಗ್ನಿಯನ್ನು ಪ್ರವೇಶಿಸಿದುದು (1-19).
03138001 ಲೋಮಶ ಉವಾಚ।
03138001a ಭರದ್ವಾಜಸ್ತು ಕೌಂತೇಯ ಕೃತ್ವಾ ಸ್ವಾಧ್ಯಾಯಮಾಹ್ನಿಕಂ।
03138001c ಸಮಿತ್ಕಲಾಪಮಾದಾಯ ಪ್ರವಿವೇಶ ಸ್ವಮಾಶ್ರಮಂ।।
ಲೋಮಶನು ಹೇಳಿದನು: “ಕೌಂತೇಯ! ಭರದ್ವಾಜನಾದರೋ ಸ್ವಾಧ್ಯಾಯ ಆಹ್ನೀಕಗಳನ್ನು ಪೂರೈಸಿ ಸಮಿತ್ತಿನ ಕಟ್ಟನ್ನು ಹೊತ್ತು ತನ್ನ ಆಶ್ರಮವನ್ನು ಪ್ರವೇಶಿಸಿದನು.
03138002a ತಂ ಸ್ಮ ದೃಷ್ಟ್ವಾ ಪುರಾ ಸರ್ವೇ ಪ್ರತ್ಯುತ್ತಿಷ್ಠಂತಿ ಪಾವಕಾಃ।
03138002c ನ ತ್ವೇನಮುಪತಿಷ್ಠಂತಿ ಹತಪುತ್ರಂ ತದಾಗ್ನಯಃ।।
ಇದಕ್ಕೂ ಹಿಂದೆ ಅವನನ್ನು ನೋಡಿದ ಕೂಡಲೇ ಎದ್ದು ನಿಲ್ಲುವ ಅಗ್ನಿಗಳೆಲ್ಲವೂ ಇಂದು ಅವನ ಮಗನು ಹತನಾದುದರಿಂದ ಅವನನ್ನು ಸ್ವಾಗತಿಸಲು ಎದ್ದು ನಿಲ್ಲಲಿಲ್ಲ.
03138003a ವೈಕೃತಂ ತ್ವಗ್ನಿಹೋತ್ರೇ ಸ ಲಕ್ಷಯಿತ್ವಾ ಮಹಾತಪಾಃ।
03138003c ತಮಂಧಂ ಶೂದ್ರಮಾಸೀನಂ ಗೃಹಪಾಲಮಥಾಬ್ರವೀತ್।।
ಅಗ್ನಿಹೋತ್ರದಲ್ಲಿ ಈ ರೀತಿಯ ವ್ಯತ್ಯಾಸವನ್ನು ಗಮನಿಸಿದ ಆ ಮಹಾತಪಸ್ವಿಯು ಆ ಕುರುಡು ಶೂದ್ರ ಮನೆಕಾವಲಿನವನನ್ನು ಕೇಳಿದನು:
03138004a ಕಿಂ ನು ಮೇ ನಾಗ್ನಯಃ ಶೂದ್ರ ಪ್ರತಿನಂದಂತಿ ದರ್ಶನಂ।
03138004c ತ್ವಂ ಚಾಪಿ ನ ಯಥಾಪೂರ್ವಂ ಕಚ್ಚಿತ್ ಕ್ಷೇಮಮಿಹಾಶ್ರಮೇ।।
“ಶೂದ್ರ! ನನ್ನನ್ನು ನೋಡಿ ಈ ಅಗ್ನಿಗಳು ಏಕೆ ಸ್ವಾಗತಿಸುತ್ತಿಲ್ಲ? ನೀನೂ ಕೂಡ ಹಿಂದಿನಂತಿಲ್ಲ. ಆಶ್ರಮದಲ್ಲಿ ಎಲ್ಲವೂ ಕ್ಷೇಮ ತಾನೇ?
03138005a ಕಚ್ಚಿನ್ನ ರೈಭ್ಯಂ ಪುತ್ರೋ ಮೇ ಗತವಾನಲ್ಪಚೇತನಃ।
03138005c ಏತದಾಚಕ್ಷ್ವ ಮೇ ಶೀಘ್ರಂ ನ ಹಿ ಮೇ ಶುಧ್ಯತೇ ಮನಃ।।
ಅಲ್ಪಬುದ್ಧಿಯ ನನ್ನ ಆ ಮಗನು ರೈಭ್ಯನಲ್ಲಿಗೆ ಹೋಗಲಿಲ್ಲ ತಾನೇ? ನನಗೆ ಬೇಗನೆ ಹೇಳು. ನನ್ನ ಮನಸ್ಸು ಸುಖದಿಂದಿಲ್ಲ!”
03138006 ಶೂದ್ರ ಉವಾಚ।
03138006a ರೈಭ್ಯಂ ಗತೋ ನೂನಮಸೌ ಸುತಸ್ತೇ ಮಂದಚೇತನಃ।
03138006c ತಥಾ ಹಿ ನಿಹತಃ ಶೇತೇ ರಾಕ್ಷಸೇನ ಬಲೀಯಸಾ।।
ಶೂದ್ರನು ಹೇಳಿದನು: “ನಿನ್ನ ಮಂದಚೇತಸ ಮಗನು ರೈಭ್ಯನಲ್ಲಿಗೆ ಹೋದ. ಆದುದರಿಂದಲೇ ಅವನು ಬಲವಂತನಾದ ರಾಕ್ಷಸನಿಂದ ಕೊಲ್ಲಲ್ಪಟ್ಟು ಬಿದ್ದಿದ್ದಾನೆ.
03138007a ಪ್ರಕಾಲ್ಯಮಾನಸ್ತೇನಾಯಂ ಶೂಲಹಸ್ತೇನ ರಕ್ಷಸಾ।
03138007c ಅಗ್ನ್ಯಾಗಾರಂ ಪ್ರತಿ ದ್ವಾರಿ ಮಯಾ ದೋರ್ಭ್ಯಾಂ ನಿವಾರಿತಃ।।
ಶೂಲವನ್ನು ಹಿಡಿದ ರಾಕ್ಷಸನು ಅವನನ್ನು ಅಗ್ನ್ಯಾಗಾರದ ವರೆಗೆ ಬೆನ್ನಟ್ಟಿ ಬಂದ ಮತ್ತು ನಾನು ನಿನ್ನ ಮಗನನ್ನು ನನ್ನ ತೋಳುಗಳಿಂದ ಬಾಗಿಲಲ್ಲಿಯೇ ತಡೆದೆ.
03138008a ತತಃ ಸ ನಿಹತೋ ಹ್ಯತ್ರ ಜಲಕಾಮೋಽಶುಚಿರ್ಧ್ರುವಂ।
03138008c ಸಂಭಾವಿತೋ ಹಿ ತೂರ್ಣೇನ ಶೂಲಹಸ್ತೇನ ರಕ್ಷಸಾ।।
ತುಂಬಾ ಅಶುಚಿಯಾಗಿದ್ದು ನೀರನ್ನು ಹುಡುಕುತ್ತಿದ್ದ ಅವನನ್ನು ಆಗ ಜೋರಾಗಿ ಓಡಿಬಂದ ಆ ರಾಕ್ಷಸನು ಹಿಡಿದಿದ್ದ ಶೂಲದಿಂದ ಅವನನ್ನು ಮುಗಿಸಿದನು.””
03138009 ಲೋಮಶ ಉವಾಚ।
03138009a ಭರದ್ವಾಜಸ್ತು ಶೂದ್ರಸ್ಯ ತಚ್ಛೃತ್ವಾ ವಿಪ್ರಿಯಂ ವಚಃ।
03138009c ಗತಾಸುಂ ಪುತ್ರಮಾದಾಯ ವಿಲಲಾಪ ಸುದುಃಖಿತಃ।।
ಲೋಮಶನು ಹೇಳಿದನು: “ಶೂದ್ರನ ಆ ವಿಪ್ರಿಯ ಮಾತುಗಳನ್ನು ಕೇಳಿದ ಭರದ್ವಾಜನು ತೀರಿಹೋಗಿದ್ದ ಮಗನನ್ನು ಹಿಡಿದೆತ್ತಿ ಬಹಳ ದುಃಖಿತನಾಗಿ ರೋದಿಸಿದನು.
03138010a ಬ್ರಾಹ್ಮಣಾನಾಂ ಕಿಲಾರ್ಥಾಯ ನನು ತ್ವಂ ತಪ್ತವಾಂಸ್ತಪಃ।
03138010c ದ್ವಿಜಾನಾಮನಧೀತಾ ವೈ ವೇದಾಃ ಸಂಪ್ರತಿಭಾಂತ್ವಿತಿ।।
“ದ್ವಿಜರಿಗೆ ಅಧ್ಯಯನ ಮಾಡದೇ ವೇದಗಳು ಪ್ರಕಟವಾಗಲಿ ಎಂದು ಬ್ರಾಹ್ಮಣರಿಗೋಸ್ಕರವಾಗಿ ನೀನು ತಪಸ್ಸನ್ನು ತಪಿಸಲಿಲ್ಲವೇ?
03138011a ತಥಾ ಕಲ್ಯಾಣಶೀಲಸ್ತ್ವಂ ಬ್ರಾಹ್ಮಣೇಷು ಮಹಾತ್ಮಸು।
03138011c ಅನಾಗಾಃ ಸರ್ವಭೂತೇಷು ಕರ್ಕಶತ್ವಮುಪೇಯಿವಾನ್।।
ಹಾಗೆ ನೀನು ಮಹಾತ್ಮ ಬ್ರಾಹ್ಮಣರ ಕಲ್ಯಾಣಕ್ಕಾಗಿಯೇ ನಡೆದುಕೊಂಡೆ. ಸರ್ವ ಭೂತಗಳಿಗೂ ನೀನು ತಪ್ಪಿತಸ್ಥನೆಂದಿರಲಿಲ್ಲ. ಹಾಗಿದ್ದರೂ ಕರ್ಕಶತ್ವವನ್ನು ನಿನ್ನದಾಗಿಸಿಕೊಂಡೆ.
03138012a ಪ್ರತಿಷಿದ್ಧೋ ಮಯಾ ತಾತ ರೈಭ್ಯಾವಸಥದರ್ಶನಾತ್।
03138012c ಗತವಾನೇವ ತಂ ಕ್ಷುದ್ರಂ ಕಾಲಾಂತಕಯಮೋಪಮಂ।।
ಮಗನೇ! ರೈಭ್ಯನ ಮನೆಯ ಬಳಿ ಸುಳಿಯಬೇಡೆಂದು ನಾನು ನಿಷೇದಿಸಿದ್ದೆ. ಆದರೂ ನೀನು ಕಾಲಾಂತಕ ಯಮನಂತಿರುವ ಆ ಕ್ಷುದ್ರನಲ್ಲಿಗೆ ಹೋದೆ.
03138013a ಯಃ ಸ ಜಾನನ್ಮಹಾತೇಜಾ ವೃದ್ಧಸ್ಯೈಕಂ ಮಮಾತ್ಮಜಂ।
03138013c ಗತವಾನೇವ ಕೋಪಸ್ಯ ವಶಂ ಪರಮದುರ್ಮತಿಃ।।
ಆ ಮಹಾತೇಜಸ್ವಿ ಪರಮದುರ್ಮತಿಯು ವೃದ್ಧನಾದ ನನಗೆ ನೀನೊಬ್ಬನೇ ಮಗನೆಂದು ತಿಳಿದಿದ್ದರೂ ಕೋಪಕ್ಕೆ ವಶನಾದನು.
03138014a ಪುತ್ರಶೋಕಮನುಪ್ರಾಪ್ಯ ಏಷ ರೈಭ್ಯಸ್ಯ ಕರ್ಮಣಾ।
03138014c ತ್ಯಕ್ಷ್ಯಾಮಿ ತ್ವಾಮೃತೇ ಪುತ್ರ ಪ್ರಾಣಾನಿಷ್ಟತಮಾನ್ಭುವಿ।।
ರೈಭ್ಯನ ಕೆಲಸದಿಂದಾಗಿ ಈ ಪುತ್ರಶೋಕವು ನನಗೆ ಪ್ರಾಪ್ತವಾಯಿತು. ಪುತ್ರನು ಮೃತನಾದನೆಂದು ನಾನು ಈ ಭೂಮಿಯಲ್ಲಿಯೇ ಬಹಳ ಇಷ್ಟವಾದ ಈ ಪ್ರಾಣವನ್ನೇ ತೊರೆಯುತ್ತೇನೆ.
03138015a ಯಥಾಹಂ ಪುತ್ರಶೋಕೇನ ದೇಹಂ ತ್ಯಕ್ಷ್ಯಾಮಿ ಕಿಲ್ಬಿಷೀ।
03138015c ತಥಾ ಜ್ಯೇಷ್ಠಃ ಸುತೋ ರೈಭ್ಯಂ ಹಿಂಸ್ಯಾಚ್ಛೀಘ್ರಮನಾಗಸಂ।
ಹೇಗೆ ನಾನು ಪುತ್ರಶೋಕದಿಂದ ದುಃಖಿತನಾಗಿ ಈ ದೇಹವನ್ನು ತೊರೆಯುತ್ತೇನೋ ಹಾಗೆ ರೈಭ್ಯನು ತನ್ನ ಹಿರಿಯ ಮಗನ ಹಿಂಸೆಯಿಂದಾಗಿ ಶೀಘ್ರದಲ್ಲಿಯೇ ಸಾವನ್ನು ಹೊಂದುತ್ತಾನೆ.
03138016a ಸುಖಿನೋ ವೈ ನರಾ ಯೇಷಾಂ ಜಾತ್ಯಾ ಪುತ್ರೋ ನ ವಿದ್ಯತೇ।
03138016c ತೇ ಪುತ್ರಶೋಕಮಪ್ರಾಪ್ಯ ವಿಚರಂತಿ ಯಥಾಸುಖಂ।।
ಮಕ್ಕಳೇ ಹುಟ್ಟಿಲ್ಲದ ಜನರು ಸುಖಿಗಳು. ಅಂಥವರು ಪುತ್ರಶೋಕವನ್ನು ಹೊಂದದೇ ಯಥಾಸುಖವಾಗಿ ಹೋಗುತ್ತಿರುತ್ತಾರೆ.
03138017a ಯೇ ತು ಪುತ್ರಕೃತಾಚ್ಛೋಕಾದ್ಭೃಶಂ ವ್ಯಾಕುಲಚೇತಸಃ।
03138017c ಶಪಂತೀಷ್ಟಾನ್ಸಖೀನಾರ್ತಾಸ್ತೇಭ್ಯಃ ಪಾಪತರೋ ನು ಕಃ।।
ಈ ರೀತಿ ಪುತ್ರನ ಸಾವಿನ ಶೋಕದಿಂದ ತುಂಬಾ ವ್ಯಾಕುಲ ಮನಸ್ಕನಾಗಿ ಯಾರು ತಾನೆ ಪಾಪತರನಾಗಿರುವ ತನ್ನ ಮಿತ್ರನಿಗೆ ಶಪಿಸುತ್ತಾನೆ?
03138018a ಪರಾಸುಶ್ಚ ಸುತೋ ದೃಷ್ಟಃ ಶಪ್ತಶ್ಚೇಷ್ಟಃ ಸಖಾ ಮಯಾ।
03138018c ಈದೃಶೀಮಾಪದಂ ಕೋ ನು ದ್ವಿತೀಯೋಽನುಭವಿಷ್ಯತಿ।।
ಸತ್ತಿರುವ ಮಗನನ್ನು ಕಂಡೆನು ಮತ್ತು ನನ್ನ ಶ್ರೇಷ್ಠ ಸಖನನ್ನು ಶಪಿಸಿದೆನು. ಈ ರೀತಿಯ ಆಪತ್ತು ಇನ್ನು ಯಾರಿಗೆ ತಾನೇ ಬರುತ್ತದೆ?”
03138019a ವಿಲಪ್ಯೈವಂ ಬಹುವಿಧಂ ಭರದ್ವಾಜೋಽದಹತ್ಸುತಂ।
03138019c ಸುಸಮಿದ್ಧಂ ತತಃ ಪಶ್ಚಾತ್ಪ್ರವಿವೇಶ ಹುತಾಶನಂ।।
ಹೀಗೆ ಬಹುವಿಧದಲ್ಲಿ ವಿಲಪಿಸಿ ಭರದ್ವಾಜನು ತನ್ನ ಮಗನನ್ನು ಸುಟ್ಟನು ಮತ್ತು ನಂತರ ಚೆನ್ನಾಗಿ ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಅಷ್ಟಾತ್ರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತೆಂಟನೆಯ ಅಧ್ಯಾಯವು.