134 ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 134

ಸಾರ

ಬಂದಿನ್ ಮತ್ತು ಅಷ್ಟಾವಕ್ರರ ನಡುವೆ ವಾದ; ಬಂದಿಯ ಸೋಲು (1-21). ಬಂದಿಯು ವರುಣನ ಮಗನೆಂದೂ, ತಂದೆಯ ಯಜ್ಞಕ್ಕೆ ಯೋಗ್ಯ ವಿಪ್ರರನ್ನು ಕಳುಹಿಸುತ್ತಿದ್ದನೆಂದೂ ತಿಳಿದುಬಂದುದು (22-25). ಕಹೋಡನು ಪುನಃ ಬದುಕಿ ಬರುವುದು; ಬಂದಿಯು ಸಾಗರವನ್ನು ಪ್ರವೇಶಿಸಿದುದು (26-39).

03134001 ಅಷ್ಟಾವಕ್ರ ಉವಾಚ।
03134001a ಅತ್ರೋಗ್ರಸೇನಸಮಿತೇಷು ರಾಜನ್। ಸಮಾಗತೇಷ್ವಪ್ರತಿಮೇಷು ರಾಜಸು।
03134001c ನ ವೈ ವಿವಿತ್ಸಾಂತರಮಸ್ತಿ ವಾದಿನಾಂ। ಮಹಾಜಲೇ ಹಂಸನಿನಾದಿನಾಮಿವ।।

ಅಷ್ಟಾವಕ್ರನು ಹೇಳಿದನು: “ರಾಜನ್! ಈ ಉಗ್ರಸೇನೆಯ ಸಮಿತಿಯಲ್ಲಿ ಅಪ್ರತಿಮ ರಾಜರುಗಳ ಸಮಾವೇಶದಲ್ಲಿ ಮಹಾಸರೋವರದಲ್ಲಿ ಹಂಸಗಳ ನಿನಾದದಂತೆ ವಾದಿಗಳಿಗೆ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಕ್ಕಿಲ್ಲ.

03134002a ನ ಮೇಽದ್ಯ ವಕ್ಷ್ಯಸ್ಯತಿವಾದಿಮಾನಿನ್। ಗ್ಲಹಂ ಪ್ರಪನ್ನಃ ಸರಿತಾಮಿವಾಗಮಃ।
03134002c ಹುತಾಶನಸ್ಯೇವ ಸಮಿದ್ಧತೇಜಸಃ। ಸ್ಥಿರೋ ಭವಸ್ವೇಹ ಮಮಾದ್ಯ ಬಂದಿನ್।।

ಅತಿವಾದಿಯೆಂದು ತಿಳಿದವನು ಇಂದು ವೇಗವಾಗಿ ಹರಿಯುತ್ತಿರುವ ನದಿಯಂತೆ ನನ್ನನ್ನು ಕೊಚ್ಚಿಕೊಂಡು ಹೋಗದಿರಲಿ! ಸಮಿತ್ತನ್ನು ಸುಡುತ್ತಿರುವ ಅಗ್ನಿಯ ತೇಜಸ್ಸುಳ್ಳ ನನ್ನ ಮುಂದೆ ಬಂದು ನಿಲ್ಲು ಬಂದಿನ್!”

03134003 ಬಂದ್ಯುವಾಚ।
03134003a ವ್ಯಾಘ್ರಂ ಶಯಾನಂ ಪ್ರತಿ ಮಾ ಪ್ರಬೋಧಯ। ಆಶೀವಿಷಂ ಸೃಕ್ಕಿಣೀ ಲೇಲಿಹಾನಂ।
03134003c ಪದಾಹತಸ್ಯೇವ ಶಿರೋಽಭಿಹತ್ಯ। ನಾದಷ್ಟೋ ವೈ ಮೋಕ್ಷ್ಯಸೇ ತನ್ನಿಬೋಧ।।

ಬಂದಿಯು ಹೇಳಿದನು: “ನಿದ್ದೆಯಲ್ಲಿದ್ದ ಹುಲಿಯನ್ನು ಅಥವಾ ತನ್ನ ಬಾಯಿಯನ್ನು ಸವರುತ್ತಿರುವ ವಿಷಭರಿತ ಹಾವನ್ನು ಕರೆದು ಎಬ್ಬಿಸಬೇಡ! ನಿನ್ನ ಪಾದದಿಂದ ಅವನ ತಲೆಯನ್ನು ಒದ್ದೆಯಾದರೆ ಅದು ಕಚ್ಚದೇ ಇರುವುದಿಲ್ಲ ಎನ್ನುವುದನ್ನು ಚೆನ್ನಾಗಿ ತಿಳಿದುಕೋ!

03134004a ಯೋ ವೈ ದರ್ಪಾತ್ಸಂಹನನೋಪಪನ್ನಃ। ಸುದುರ್ಬಲಃ ಪರ್ವತಮಾವಿಹಂತಿ।
03134004c ತಸ್ಯೈವ ಪಾಣಿಃ ಸನಖೋ ವಿಶೀರ್ಯತೇ। ನ ಚೈವ ಶೈಲಸ್ಯ ಹಿ ದೃಶ್ಯತೇ ವ್ರಣಃ।।

ಗಟ್ಟಿಯಾದ ದೇಹವಿದ್ದರೂ ದುರ್ಬಲನಾಗಿ ದರ್ಪದಿಂದ ಪರ್ವತವನ್ನು ಹೊಡೆದರೆ ಅವನದೇ ಕೈ ಮತ್ತು ಉಗುರುಗಳು ಗಾಯಗೊಳ್ಳುತ್ತವೆ. ಆ ಪರ್ವತದ ಮೇಲೆ ಯಾವುದೇ ರೀತಿಯ ಗಾಯವು ಕಾಣುವುದಿಲ್ಲ.

03134005a ಸರ್ವೇ ರಾಜ್ಞೋ ಮೈಥಿಲಸ್ಯ ಮೈನಾಕಸ್ಯೇವ ಪರ್ವತಾಃ।
03134005c ನಿಕೃಷ್ಟಭೂತಾ ರಾಜಾನೋ ವತ್ಸಾ ಅನದುಹೋ ಯಥಾ।।

ಮಿಥಿಲದ ರಾಜನಿಗೆ ಎಲ್ಲ ರಾಜರುಗಳು ಮೈನಾಕಪರ್ವತದಡಿಯಲ್ಲಿರುವ ಪರ್ವತಗಳಂತೆ. ಎತ್ತಿನ ಎದುರಿಗೆ ಕರುಗಳು ಹೇಗೋ ಹಾಗೆ ಈ ರಾಜರುಗಳು ಅವನಿಗಿಂತ ಚಿಕ್ಕವರು.””

03134006 ಲೋಮಶ ಉವಾಚ।
03134006a ಅಷ್ಟಾವಕ್ರಃ ಸಮಿತೌ ಗರ್ಜಮಾನೋ। ಜಾತಕ್ರೋಧೋ ಬಂದಿನಮಾಹ ರಾಜನ್।
03134006c ಉಕ್ತೇ ವಾಕ್ಯೇ ಚೋತ್ತರಂ ಮೇ ಬ್ರವೀಹಿ। ವಾಕ್ಯಸ್ಯ ಚಾಪ್ಯುತ್ತರಂ ತೇ ಬ್ರವೀಮಿ।।

ಲೋಮಶನು ಹೇಳಿದನು: “ರಾಜನ್! ಆ ಸಮಿತಿಯಲ್ಲಿ ಕ್ರೋಧಿಷ್ಠನಾಗಿ ಅಷ್ಟಾವಕ್ರನು ಗರ್ಜಿಸುತ್ತಾ ಬಂದಿಗೆ ಹೇಳಿದನು: “ನಾನು ಹೇಳುವ ವಾಕ್ಯಕ್ಕೆ ಉತ್ತರವನ್ನು ಕೊಡು. ಮತ್ತು ನೀನು ಹೇಳಿದುದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ.”

03134007 ಬಂದ್ಯುವಾಚ।
03134007a ಏಕ ಏವಾಗ್ನಿರ್ಬಹುಧಾ ಸಮಿಧ್ಯತೇ। ಏಕಃ ಸೂರ್ಯಃ ಸರ್ವಮಿದಂ ಪ್ರಭಾಸತೇ।
03134007c ಏಕೋ ವೀರೋ ದೇವರಾಜೋ ನಿಹಂತಾ। ಯಮಃ ಪಿತೄಣಾಮೀಶ್ವರಶ್ಚೈಕ ಏವ।।

ಬಂದಿಯು ಹೇಳಿದನು: “ಒಂದೇ ಒಂದು ಅಗ್ನಿಯು ಬಹಳ ರೂಪಗಳಲ್ಲಿ ಉರಿಯುತ್ತದೆ. ಒಬ್ಬನೇ ಸೂರ್ಯನು ಇವೆಲ್ಲವನ್ನೂ ಬೆಳಗಿಸುತ್ತಾನೆ. ಒಬ್ಬನೇ ವೀರ ಸಂಹರಿಸುವ ದೇವರಾಜ. ಮತ್ತು ಪಿತೃಗಳ ಈಶ್ವರನೂ ಒಬ್ಬನೇ ಯಮ.”

03134008 ಅಷ್ಟಾವಕ್ರ ಉವಾಚ।
03134008a ದ್ವಾವಿಂದ್ರಾಗ್ನೀ ಚರತೋ ವೈ ಸಖಾಯೌ। ದ್ವೌ ದೇವರ್ಷೀ ನಾರದಃ ಪರ್ವತಶ್ಚ।
03134008c ದ್ವಾವಶ್ವಿನೌ ದ್ವೇ ಚ ರಥಸ್ಯ ಚಕ್ರೇ। ಭಾರ್ಯಾಪತೀ ದ್ವೌ ವಿಹಿತೌ ವಿಧಾತ್ರಾ।।

ಅಷ್ಟಾವಕ್ರನು ಹೇಳಿದನು: “ಇಂದ್ರ ಮತ್ತು ಅಗ್ನಿಗಳೀರ್ವರು ಸಖರಂತೆ ನಡೆಯುತ್ತಾರೆ. ನಾರದ ಪರ್ವತರೆಂಬ ಇಬ್ಬರು ದೇವರ್ಷಿಗಳಿದ್ದಾರೆ. ಅಶ್ವಿನಿಯರಿಬ್ಬರು, ರಥಕ್ಕೆ ಚಕ್ರಗಳೆರಡು, ಮತ್ತು ವಿಧಾತ್ರನು ಪತಿ ಪತ್ನಿಯರೆಂದು ಇಬ್ಬರನ್ನು ಮಾಡಿದನು.”

03134009 ಬಂದ್ಯುವಾಚ।
03134009a ತ್ರಿಃ ಸೂಯತೇ ಕರ್ಮಣಾ ವೈ ಪ್ರಜೇಯಂ। ತ್ರಯೋ ಯುಕ್ತಾ ವಾಜಪೇಯಂ ವಹಂತಿ।
03134009c ಅಧ್ವರ್ಯವಸ್ತ್ರಿಷವಣಾನಿ ತನ್ವತೇ। ತ್ರಯೋ ಲೋಕಾಸ್ತ್ರೀಣಿ ಜ್ಯೋತೀಂಷಿ ಚಾಹುಃ।।

ಬಂದಿಯು ಹೇಳಿದನು: “ಈ ಪ್ರಜೆಗಳು ಮೂರು ಕರ್ಮಗಳಿಂದ ಹುಟ್ಟುತ್ತಾರೆ. ಮೂರು ವೇದಗಳು ಸೇರಿ ವಾಜಪೇಯವೆನಿಸುತ್ತದೆ. ಅಧ್ವರ್ಯರು ಮೂರು ಬಾರಿ ಒತ್ತುತ್ತಾರೆ. ಮೂರು ಲೋಕಗಳು ಮತ್ತು ಮೂರು ಜ್ಯೋತಿಗಳಿವೆ ಎಂದು ಹೇಳುತ್ತಾರೆ.”

03134010 ಅಷ್ಟಾವಕ್ರ ಉವಾಚ।
03134010a ಚತುಷ್ಟಯಂ ಬ್ರಾಹ್ಮಣಾನಾಂ ನಿಕೇತಂ। ಚತ್ವಾರೋ ಯುಕ್ತಾ ಯಜ್ಞಮಿಮಂ ವಹಂತಿ।
03134010c ದಿಶಶ್ಚತಸ್ರಶ್ಚತುರಶ್ಚ ವರ್ಣಾಶ್। ಚತುಷ್ಪದಾ ಗೌರಪಿ ಶಶ್ವದುಕ್ತಾ।।

ಅಷ್ಟಾವಕ್ರನು ಹೇಳಿದನು: “ಬ್ರಾಹ್ಮಣರಿಗೆ ನಾಲ್ಕು ಘಟ್ಟಗಳಿವೆ, ನಾಲ್ವರು ಸೇರಿ ಈ ಯಜ್ಞವನ್ನು ನಡೆಸುತ್ತಾರೆ. ದಿಕ್ಕುಗಳು ನಾಲ್ಕು. ನಾಲ್ಕು ವರ್ಣಗಳು ಮತ್ತು ಗೋವಿಗೆ ನಾಲ್ಕು ಕಾಲುಗಳಿವೆ ಎಂದು ಸದಾ ಹೇಳುತ್ತಾರೆ.”

03134011 ಬಂದ್ಯುವಾಚ।
03134011a ಪಂಚಾಗ್ನಯಃ ಪಂಚಪದಾ ಚ ಪಂಕ್ತ್ತಿರ್। ಯಜ್ಞಾಃ ಪಂಚೈವಾಪ್ಯಥ ಪಂಚೇಂದ್ರಿಯಾಣಿ।
03134011c ದೃಷ್ಟಾ ವೇದೇ ಪಂಚಚೂಡಾಶ್ಚ ಪಂಚ। ಲೋಕೇ ಖ್ಯಾತಂ ಪಂಚನದಂ ಚ ಪುಣ್ಯಂ।।

ಬಂದಿಯು ಹೇಳಿದನು: “ಅಗ್ನಿಗಳು ಐದು ಮತ್ತು ಪಂಕ್ತಿಗೆ ಐದು ಪಾದಗಳು. ಯಜ್ಞಗಳು ಐದು ವಿಧದವು ಮತ್ತು ಇಂದ್ರಿಯಗಳು ಐದು. ವೇದಗಳಲ್ಲಿ ಕಾಣುವವು ಐದು ಮತ್ತು ಚೂಡಗಳೂ ಐದು. ಲೋಕದಲ್ಲಿ ಪುಣ್ಯವೆಂದು ಐದು ನದಿಗಳು ಪ್ರಖ್ಯಾತವಾಗಿವೆ.”

03134012 ಅಷ್ಟಾವಕ್ರ ಉವಾಚ।
03134012a ಷಡಾಧಾನೇ ದಕ್ಷಿಣಾಮಾಹುರೇಕೇ। ಷಡೇವೇಮೇ ಋತವಃ ಕಾಲಚಕ್ರಂ।
03134012c ಷಡಿಂದ್ರಿಯಾಣ್ಯುತ ಷಟ್ಕೃತ್ತಿಕಾಶ್ಚ। ಷಟ್ಸಾದ್ಯಸ್ಕಾಃ ಸರ್ವವೇದೇಷು ದೃಷ್ಟಾಃ।।

ಅಷ್ಟಾವಕ್ರನು ಹೇಳಿದನು: “ಅಗ್ನಿಯನ್ನು ಇಡುವುದಕ್ಕೆ ಆರು ಆಕಳುಗಳನ್ನು ದಾನವನ್ನಾಗಿ ನೀಡಬೇಕು. ಕಾಲಚಕ್ರದಲ್ಲಿ ಆರೇ ಋತುಗಳಿವೆ. ಇಂದ್ರಿಯಗಳು ಆರು. ಕೃತ್ತಿಕಗಳು ಆರು. ಸರ್ವ ವೇದಗಳಲ್ಲಿ ಕಂಡುಬಂದಂತೆ ಸಾಧ್ಯಕರು ಆರು ಮಂದಿ.”

03134013 ಬಂದ್ಯುವಾಚ।
03134013a ಸಪ್ತ ಗ್ರಾಮ್ಯಾಃ ಪಶವಃ ಸಪ್ತ ವನ್ಯಾಃ। ಸಪ್ತ ಚಂದಾಂಸಿ ಕ್ರತುಮೇಕಂ ವಹಂತಿ।
03134013c ಸಪ್ತರ್ಷಯಃ ಸಪ್ತ ಚಾಪ್ಯರ್ಹಣಾನಿ। ಸಪ್ತತಂತ್ರೀ ಪ್ರಥಿತಾ ಚೈವ ವೀಣಾ।।

ಬಂದಿಯು ಹೇಳಿದನು: “ಏಳು ಬಗೆಯ ಪಳಗಿಸಿದ ಮತ್ತು ಏಳು ಬಗೆಯ ವನ್ಯ ಪಶುಗಳಿವೆ. ಏಳು ಚಂದಸ್ಸುಗಳು ಒಂದು ಕ್ರತುವನ್ನು ಮಾಡುತ್ತವೆ. ಋಷಿಗಳು ಏಳು. ಏಳು ಗೌರವಗಳು. ವೀಣೆಯಲ್ಲಿ ಸಪ್ತ ತಂತ್ರಿಗಳಿವೆ ಎಂದು ಪ್ರಥಿತವಾಗಿದೆ.”

03134014 ಅಷ್ಟಾವಕ್ರ ಉವಾಚ।
03134014a ಅಷ್ಟೌ ಶಾಣಾಃ ಶತಮಾನಂ ವಹಂತಿ। ತಥಾಷ್ಟಪಾದಃ ಶರಭಃ ಸಿಂಹಘಾತೀ।
03134014c ಅಷ್ಟೌ ವಸೂಂ ಶುಶ್ರುಮ ದೇವತಾಸು। ಯೂಪಶ್ಚಾಷ್ಟಾಸ್ರಿರ್ವಿಹಿತಃ ಸರ್ವಯಜ್ಞಃ।।

ಅಷ್ಟಾವಕ್ರನು ಹೇಳಿದನು: “ಎಂಟು ಶಾಣಗಳು ಸೇರಿ ಒಂದು ನೂರಾಗುತ್ತದೆ. ಸಿಂಹವನ್ನು ಕೊಲ್ಲುವ ಶರಭಕ್ಕೆ ಎಂಟು ಕಾಲುಗಳಿವೆ. ದೇವತೆಗಳಲ್ಲಿ ವಸುಗಳು ಎಂಟು ಎಂದು ಕೇಳಿದ್ದೇವೆ. ಸರ್ವಯಜ್ಞವು ಎಂಟು ಯೂಪಗಳನ್ನು ಹೊಂದಿದೆ.”

03134015 ಬಂದ್ಯುವಾಚ।
03134015a ನವೈವೋಕ್ತಾಃ ಸಾಮಿಧೇನ್ಯಃ ಪಿತೄಣಾಂ। ತಥಾ ಪ್ರಾಹುರ್ನವಯೋಗಂ ವಿಷರ್ಗಂ।
03134015c ನವಾಕ್ಷರಾ ಬೃಹತೀ ಸಂಪ್ರದಿಷ್ಟಾ। ನವಯೋಗೋ ಗಣನಾಮೇತಿ ಶಶ್ವತ್।।

ಬಂದಿಯು ಹೇಳಿದನು: “ಪಿತೃಗಳಿಗೆ ಒಂಭತ್ತು ಸಾಮಿಧಗಳನ್ನು ಹೇಳುತ್ತಾರೆ. ಸೃಷ್ಟಿಯು ಒಂಭತ್ತು ಹಂತಗಳಲ್ಲಿ ನಡೆಯುತ್ತದೆ ಎಂದು ಹೇಳುತ್ತಾರೆ. ಬೃಹತಿ ಸಂಪ್ರದಿಷ್ಟದಲ್ಲಿ ಒಂಭತ್ತು ಅಕ್ಷರಗಳಿವೆ. ಲೆಕ್ಕದಲ್ಲಿ ಶಾಶ್ವತವಾಗಿ ಒಂಭತ್ತೇ ಇರುವುದು.”

03134016 ಅಷ್ಟಾವಕ್ರ ಉವಾಚ।
03134016a ದಶಾ ದಶೋಕ್ತಾಃ ಪುರುಷಸ್ಯ ಲೋಕೇ। ಸಹಸ್ರಮಾಹುರ್ದಶ ಪೂರ್ಣಂ ಶತಾನಿ।
03134016c ದಶೈವ ಮಾಸಾನ್ಬಿಭ್ರತಿ ಗರ್ಭವತ್ಯೋ। ದಶೇರಕಾ ದಶ ದಾಶಾ ದಶಾರ್ಣಾಃ।।

ಅಷ್ಟಾವಕ್ರನು ಹೇಳಿದನು: “ಲೋಕದಲ್ಲಿ ಪುರುಷನಿಗೆ ಹತ್ತು ದಶೆಗಳಿವೆ ಎಂದು ಹೇಳುತ್ತಾರೆ. ಒಂದು ಸಾವಿರದಲ್ಲಿ ಸಂಪೂರ್ಣವಾಗಿ ಹತ್ತು ನೂರುಗಳಿವೆ ಎಂದು ಹೇಳುತ್ತಾರೆ. ಗರ್ಭವತಿಯು ಹತ್ತು ತಿಂಗಳುಗಳು ಗರ್ಭವನ್ನು ಧರಿಸುತ್ತಾಳೆ. ಇರಕಗಳು ಹತ್ತು. ದಾಶರು ಹತ್ತು ಮತ್ತು ಆರ್ಣರು ಹತ್ತು.”

03134017 ಬಂದ್ಯುವಾಚ।
03134017a ಏಕಾದಶೈಕಾದಶಿನಃ ಪಶೂನಾಂ। ಏಕಾದಶೈವಾತ್ರ ಭವಂತಿ ಯೂಪಾಃ।
03134017c ಏಕಾದಶ ಪ್ರಾಣಭೃತಾಂ ವಿಕಾರಾ। ಏಕಾದಶೋಕ್ತಾ ದಿವಿ ದೇವೇಷು ರುದ್ರಾಃ।।

ಬಂದಿಯು ಹೇಳಿದನು: “ಏಕಾದಶಿಗೆ ಹನ್ನೊಂದು ಪಶುಗಳು, ಅದರಲ್ಲಿ ಹನ್ನೊಂದು ಯೂಪಗಳೂ ಇರುತ್ತವೆ. ಪ್ರಾಣವಿರುವಕ್ಕೆ ವಿಕಾರಗಳು ಹನ್ನೊಂದು. ದಿವಿಯ ದೇವರಲ್ಲಿ ಹನ್ನೊಂದು ರುದ್ರರನ್ನು ಎಣಿಸುತ್ತಾರೆ.”

03134018 ಅಷ್ಟಾವಕ್ರ ಉವಾಚ।
03134018a ಸಂವತ್ಸರಂ ದ್ವಾದಶ ಮಾಸಮಾಹುರ್। ಜಗತ್ಯಾಃ ಪಾದೋ ದ್ವಾದಶೈವಾಕ್ಷರಾಣಿ।
03134018c ದ್ವಾದಶಾಹಃ ಪ್ರಾಕೃತೋ ಯಜ್ಞ ಉಕ್ತೋ। ದ್ವಾದಶಾದಿತ್ಯಾನ್ಕಥಯಂತೀಹ ವಿಪ್ರಾಃ।।

ಅಷ್ಟಾವಕ್ರನು ಹೇಳಿದನು: “ಒಂದು ಸಂವತ್ಸರದಲ್ಲಿ ಹನ್ನೆರಡು ತಿಂಗಳುಗಳಿವೆ ಎಂದು ಹೇಳುತ್ತಾರೆ. ಜಗತಿಯ ಪಾದದಲ್ಲಿ ಅಕ್ಷರಗಳು ಹನ್ನೆರಡು. ಪ್ರಾಕೃತ ಯಜ್ಞವು ಹನ್ನೆರಡು ದಿನಗಳು ನಡೆಯುತ್ತವೆ ಎಂದು ಹೇಳುತ್ತಾರೆ. ವಿಪ್ರರು ಹನ್ನೆರಡು ಆದಿತ್ಯರಿದ್ದಾರೆಂದು ಹೇಳುತ್ತಾರೆ.”

03134019 ಬಂದ್ಯುವಾಚ।
03134019a ತ್ರಯೋದಶೀ ತಿಥಿರುಕ್ತಾ ಮಹೋಗ್ರಾ। ತ್ರಯೋದಶದ್ವೀಪವತೀ ಮಹೀ ಚ।

ಬಂದಿಯು ಹೇಳಿದನು: “ತ್ರಯೋದಶೀ ತಿಥಿಯು ಮಹಾ ಉಗ್ರವೆಂದು ಹೇಳುತ್ತಾರೆ. ಈ ಭೂಮಿಯು ಹದಿಮೂರು ದ್ವೀಪಗಳನ್ನು ಹೊಂದಿದೆ.””

03134020 ಲೋಮಶ ಉವಾಚ।
03134020a ಏತಾವದುಕ್ತ್ವಾ ವಿರರಾಮ ಬಂದೀ। ಶ್ಲೋಕಸ್ಯಾರ್ಧಂ ವ್ಯಾಜಹಾರಾಷ್ಟವಕ್ರಃ।
03134020c ತ್ರಯೋದಶಾಹಾನಿ ಸಸಾರ ಕೇಶೀ। ತ್ರಯೋದಶಾದೀನ್ಯತಿಚ್ಚಂದಾಂಸಿ ಚಾಹುಃ।।

ಲೋಮಶನು ಹೇಳಿದನು: “ಇದನ್ನು ಹೇಳಿ ಬಂದಿಯು ನಿಲ್ಲಿಸಿದನು. ಆ ಶ್ಲೋಕದ ಇನ್ನೊಂದು ಅರ್ಧವನ್ನು ಅಷ್ಟಾವಕ್ರನು ಸಂಪೂರ್ಣಮಾಡಿದನು: “ಕೇಶಿಯು ಹದಿಮೂರು ದಿನಗಳು ಹೋರಾಡಿದನು. ಅತಿಚ್ಚಂದಾಂಸಿಯು ಹದಿಮೂರರಿಂದ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾರೆ.”

03134021a ತತೋ ಮಹಾನುದತಿಷ್ಠನ್ನಿನಾದಸ್। ತೂಷ್ಣೀಂಭೂತಂ ಸೂತಪುತ್ರಂ ನಿಶಮ್ಯ।
03134021c ಅಧೋಮುಖಂ ಧ್ಯಾನಪರಂ ತದಾನೀಂ। ಅಷ್ಟಾವಕ್ರಂ ಚಾಪ್ಯುದೀರ್ಯಂತಮೇವ।।

ಸೂತಪುತ್ರನು ಸುಮ್ಮನಾಗಿದ್ದುದನ್ನು, ಅವನು ತಲೆತಗ್ಗಿಸಿ ನಿಂತಿದುದನ್ನು, ಮತ್ತು ಅಷ್ಟಾವಕ್ರನು ಮುಂದುವರೆದುದನ್ನು ನೋಡಿ ಅತಿ ದೊಡ್ಡ ನಿನಾದವು ಹುಟ್ಟಿಬಂದಿತು.

03134022a ತಸ್ಮಿಂಸ್ತಥಾ ಸಂಕುಲೇ ವರ್ತಮಾನೇ। ಸ್ಫೀತೇ ಯಜ್ಞೇ ಜನಕಸ್ಯಾಥ ರಾಜ್ಞಃ।
03134022c ಅಷ್ಟಾವಕ್ರಂ ಪೂಜಯಂತೋಽಭ್ಯುಪೇಯುರ್। ವಿಪ್ರಾಃ ಸರ್ವೇ ಪ್ರಾಂಜಲಯಃ ಪ್ರತೀತಾಃ।।

ರಾಜ ಜನಕನ ಆ ಸಮೃದ್ಧ ಯಜ್ಞದಲ್ಲಿ ಈ ರೀತಿಯ ತುಮುಲವು ನಡೆಯುತ್ತಿರುವಾಗ, ಎಲ್ಲ ವಿಪ್ರರೂ ಕೈಮುಗಿದು ಅಷ್ಟಾವಕ್ರನನ್ನು ಗೌರವಿಸಲು ಮುಂದಾದರು.

03134023 ಅಷ್ಟಾವಕ್ರ ಉವಾಚ।
03134023a ಅನೇನ ವೈ ಬ್ರಾಹ್ಮಣಾಃ ಶುಶ್ರುವಾಂಸೋ। ವಾದೇ ಜಿತ್ವಾ ಸಲಿಲೇ ಮಜ್ಜಿತಾಃ ಕಿಲ।
03134023c ತಾನೇವ ಧರ್ಮಾನಯಮದ್ಯ ಬಂದೀ। ಪ್ರಾಪ್ನೋತು ಗೃಹ್ಯಾಪ್ಸು ನಿಮಜ್ಜಯೈನಂ।।

ಅಷ್ಟಾವಕ್ರನು ಹೇಳಿದನು: “ವಾದದಲ್ಲಿ ಸೋತ ಅನೇಕ ಬ್ರಾಹ್ಮಣರನ್ನು ಇವನು ನೀರಿನಲ್ಲಿ ಮುಳುಗಿಸಿದ್ದಾನೆ ಎಂದು ಕೇಳಿದ್ದೇನೆ. ಇಂದು ಬಂದಿಯು ಅದೇ ಧರ್ಮವನ್ನು ಅನುಸರಿಸಲಿ. ಅವನನ್ನೂ ಹಿಡಿದು ಮುಳುಗಿಸಿ.”

03134024 ಬಂದ್ಯುವಾಚ।
03134024a ಅಹಂ ಪುತ್ರೋ ವರುಣಸ್ಯೋತ ರಾಜ್ಞಸ್। ತತ್ರಾಸ ಸತ್ರಂ ದ್ವಾದಶವಾರ್ಷಿಕಂ ವೈ।
03134024c ಸತ್ರೇಣ ತೇ ಜನಕ ತುಲ್ಯಕಾಲಂ। ತದರ್ಥಂ ತೇ ಪ್ರಹಿತಾ ಮೇ ದ್ವಿಜಾಗ್ರ್ಯಾಃ।।

ಬಂದಿಯು ಹೇಳಿದನು: “ನಾನು ರಾಜಾ ವರುಣನ ಮಗ. ಅಲ್ಲಿ ಅವನ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿದೆ. ಜನಕ! ನಿನ್ನ ಸತ್ರಕ್ಕೆ ಸರಿಸಮನಾಗಿ ನಡೆಯುತ್ತಿರುವ ಅದಕ್ಕಾಗಿ ನಾನು ದ್ವಿಜಾಗ್ರರನ್ನು ಅಲ್ಲಿಗೆ ಕಳುಹಿಸುತ್ತಿದ್ದೆ.

03134025a ಏತೇ ಸರ್ವೇ ವರುಣಸ್ಯೋತ ಯಜ್ಞಂ। ದ್ರಷ್ಟುಂ ಗತಾ ಇಹ ಆಯಾಂತಿ ಭೂಯಃ।
03134025c ಅಷ್ಟಾವಕ್ರಂ ಪೂಜಯೇ ಪೂಜನೀಯಂ। ಯಸ್ಯ ಹೇತೋರ್ಜನಿತಾರಂ ಸಮೇಷ್ಯೇ।।

ವರುಣನ ಯಜ್ಞವನ್ನು ನೋಡಲು ಹೋಗಿರುವ ಅವರೆಲ್ಲರೂ ಪುನಃ ಹಿಂದಿರುಗಿ ಬರುತ್ತಾರೆ. ಪೂಜನೀಯನಾದ ಅಷ್ಟಾವಕ್ರನನ್ನು ಪೂಜಿಸುತ್ತೇನೆ. ಯಾಕೆಂದರೆ ಅವನ ಕಾರಣದಿಂದ ನಾನು ನನ್ನ ತಂದೆಯನ್ನು ಸೇರುತ್ತೇನೆ.”

03134026 ಅಷ್ಟಾವಕ್ರ ಉವಾಚ।
03134026a ವಿಪ್ರಾಃ ಸಮುದ್ರಾಂಭಸಿ ಮಜ್ಜಿತಾಸ್ತೇ। ವಾಚಾ ಜಿತಾ ಮೇಧಯಾ ಆವಿದಾನಾಃ।
03134026c ತಾಂ ಮೇಧಯಾ ವಾಚಮಥೋಜ್ಜಹಾರ। ಯಥಾ ವಾಚಮವಚಿನ್ವಂತಿ ಸಂತಃ।।

ಅಷ್ಟಾವಕ್ರನು ಹೇಳಿದನು: “ನಿನ್ನಿಂದ ಸಮುದ್ರದಲ್ಲಿ ಮುಳುಗಿಸಲ್ಪಟ್ಟ ವಿಪ್ರರು ಕಲಿತವರಾಗಿದ್ದರೂ ಬುದ್ಧಿ ಮತ್ತು ಮಾತುಗಳಲ್ಲಿ ಸೋತರು. ಸಂತರು ಯೋಚನೆಮಾಡಿ ಮಾತನಾಡುವಂತೆ ನಾನು ಅವರನ್ನು ಮಾತಿನ ಮೂಲಕ ನೀರಿನಿಂದ ಮೇಲೆ ಎತ್ತಿದ್ದೇನೆ.

03134027a ಅಗ್ನಿರ್ದಹಂ ಜಾತವೇದಾಃ ಸತಾಂ ಗೃಹಾನ್। ವಿಸರ್ಜಯಂಸ್ತೇಜಸಾ ನ ಸ್ಮ ಧಾಕ್ಷೀತ್।
03134027c ಬಾಲೇಷು ಪುತ್ರೇಷು ಕೃಪಣಂ ವದತ್ಸು। ತಥಾ ವಾಚಮವಚಿನ್ವಂತಿ ಸಂತಃ।।

ಜಾತವೇದಾಗ್ನಿಯು ಸತ್ಯವಂತರ ಮನೆಗಳನ್ನು ಹೇಗೆ ಸುಡುವುದಿಲ್ಲವೋ ಹಾಗೆ ಬಾಲಕ ಪುತ್ರರು ಕೃಪಣ ಮಾತುಗಳನ್ನಾಡಿದರೆ ಸಂತರು ಆ ಮಾತುಗಳ ಕುರಿತು ಯೋಚಿಸಬೇಕು.

03134028a ಶ್ಲೇಷ್ಮಾತಕೀ ಕ್ಷೀಣವರ್ಚಾಃ ಶೃಣೋಷಿ। ಉತಾಹೋ ತ್ವಾಂ ಸ್ತುತಯೋ ಮಾದಯಂತಿ।
03134028c ಹಸ್ತೀವ ತ್ವಂ ಜನಕ ವಿತುದ್ಯಮಾನೋ। ನ ಮಾಮಿಕಾಂ ವಾಚಮಿಮಾಂ ಶೃಣೋಷಿ।।

ಶ್ಲೇಷ್ಮಾತಕಿಯಿಂದ ನಿನ್ನ ವರ್ಚಸ್ಸು ಕ್ಷೀಣವಾಗಿದೆಯೋ ಅಥವಾ ನೀನು ಕೇಳಿದ ಹೊಗಳಿಕೆಗಳಿಂದ ಮತ್ತೇರಿದೆಯೋ? ಜನಕ! ನೀನು ಮಾವುತನಿಂದ ಸೂಚಿತಗೊಂಡ ಆನೆಯಂತಿದ್ದೀಯೆ. ನನ್ನ ಈ ಮಾತುಗಳನ್ನು ಕೇಳಬೇಡ.”

03134029 ಜನಕ ಉವಾಚ।
03134029a ಶೃಣೋಮಿ ವಾಚಂ ತವ ದಿವ್ಯರೂಪಾಂ। ಅಮಾನುಷೀಂ ದಿವ್ಯರೂಪೋಽಸಿ ಸಾಕ್ಷಾತ್।
03134029c ಅಜೈಷೀರ್ಯದ್ಬಂದಿನಂ ತ್ವಂ ವಿವಾದೇ। ನಿಸೃಷ್ಟ ಏಷ ತವ ಕಾಮೋಽದ್ಯ ಬಂದೀ।।

ಜನಕನು ಹೇಳಿದನು: “ನಿನ್ನ ದಿವ್ಯರೂಪೀ ಮಾತನ್ನು ಕೇಳುತ್ತಿದ್ದೇನೆ. ನೀನು ಅಮಾನುಷಿಯಾಗಿದ್ದು ಸಾಕ್ಷಾತ್ ದಿವ್ಯರೂಪಿಯಾಗಿದ್ದೀಯೆ. ಬಂದಿಯನ್ನು ನೀನು ವಿವಾದದಲ್ಲಿ ಸೋಲಿಸಿದ್ದೀಯೆ. ಈಗ ನೀನು ಬಂದಿಯನ್ನು ನಿನಗಿಷ್ಟವಾದಹಾಗೆ ಬಿಡು.”

03134030 ಅಷ್ಟಾವಕ್ರ ಉವಾಚ।
03134030a ನಾನೇನ ಜೀವತಾ ಕಶ್ಚಿದರ್ಥೋ ಮೇ ಬಂದಿನಾ ನೃಪ।
03134030c ಪಿತಾ ಯದ್ಯಸ್ಯ ವರುಣೋ ಮಜ್ಜಯೈನಂ ಜಲಾಶಯೇ।।

ಅಷ್ಟಾವಕ್ರನು ಹೇಳಿದನು: “ರಾಜನ್! ಈ ಬಂದಿಯು ಜೀವಿತವಿರುವುದರಿಂದ ನನಗೇನೂ ಪ್ರಯೋಜನವಿಲ್ಲ. ವರುಣನು ಅವನ ತಂದೆಯಾದರೆ ಅವನನ್ನು ಜಲಾಶಯದಲ್ಲಿ ಮುಳುಗಿಸು.”

03134031 ಬಂದ್ಯುವಾಚ।
03134031a ಅಹಂ ಪುತ್ರೋ ವರುಣಸ್ಯೋತ ರಾಜ್ಞೋ। ನ ಮೇ ಭಯಂ ಸಲಿಲೇ ಮಜ್ಜಿತಸ್ಯ।
03134031c ಇಮಂ ಮುಹೂರ್ತಂ ಪಿತರಂ ದ್ರಕ್ಷ್ಯತೇಽಯಂ। ಅಷ್ಟಾವಕ್ರಶ್ಚಿರನಷ್ಟಂ ಕಹೋಡಂ।।

ಬಂದಿಯು ಹೇಳಿದನು: “ರಾಜನ್! ನಾನು ವರುಣನ ಮಗ. ನೀರಿನಲ್ಲಿ ಮುಳುಗುವುದಕ್ಕೆ ನನಗೆ ಭಯವಿಲ್ಲ. ಸ್ವಲ್ಪಯೇ ಸಮಯದಲ್ಲಿ ಅಷ್ಟಾವಕ್ರನು ಬಹುಕಾಲದ ಹಿಂದೆ ಕಳೆದುಕೊಂಡಿದ್ದ ತನ್ನ ತಂದೆ ಕಹೋಡನನ್ನು ಕಾಣುತ್ತಾನೆ.””

03134032 ಲೋಮಶ ಉವಾಚ।
03134032a ತತಸ್ತೇ ಪೂಜಿತಾ ವಿಪ್ರಾ ವರುಣೇನ ಮಹಾತ್ಮನಾ।
03134032c ಉದತಿಷ್ಠಂತ ತೇ ಸರ್ವೇ ಜನಕಸ್ಯ ಸಮೀಪತಃ।।

ಲೋಮಶನು ಹೇಳಿದನು: “ಅನಂತರ ಮಹಾತ್ಮ ವರುಣನಿಂದ ಪೂಜಿತರಾದ ವಿಪ್ರರೆಲ್ಲರೂ ಜನಕನ ಮುಂದೆ ಎದ್ದುನಿಂತರು.

03134033 ಕಹೋಡ ಉವಾಚ 03134033a ಇತ್ಯರ್ಥಮಿಚ್ಚಂತಿ ಸುತಾಂ ಜನಾ ಜನಕ ಕರ್ಮಣಾ।
03134033c ಯದಹಂ ನಾಶಕಂ ಕರ್ತುಂ ತತ್ಪುತ್ರಃ ಕೃತವಾನ್ಮಮ।।

ಕಹೋಡನು ಹೇಳಿದನು: “ಜನಕ! ಇದಕ್ಕಾಗಿಯೇ ಜನರು ತಮ್ಮ ಕರ್ಮಗಳಿಂದ ಮಕ್ಕಳನ್ನು ಬಯಸುತ್ತಾರೆ. ನಾನು ಮಾಡಲಿಕ್ಕೆ ಅಸಾಧ್ಯವಾದುದನ್ನು ನನ್ನ ಮಗನು ಮಾಡಿದ್ದಾನೆ.

03134034a ಉತಾಬಲಸ್ಯ ಬಲವಾನುತ ಬಾಲಸ್ಯ ಪಂಡಿತಃ।
03134034c ಉತ ವಾವಿದುಷೋ ವಿದ್ವಾನ್ಪುತ್ರೋ ಜನಕ ಜಾಯತೇ।।

ಜನಕ! ಅಬಲನಿಗೆ ಬಲವಂತನು ಜನಿಸಿದ್ದಾನೆ, ದಡ್ಡನಿಗೆ ಪಂಡಿತನು ಜನಿಸಿದ್ದಾನೆ ಮತ್ತು ತಿಳಿಯದೇ ಇದ್ದವನಿಗೆ ತಿಳಿದ ಮಗನು ಜನಿಸಿದ್ದಾನೆ.”

03134035 ಬಂದ್ಯುವಾಚ।
03134035a ಶಿತೇನ ತೇ ಪರಶುನಾ ಸ್ವಯಮೇವಾಂತಕೋ ನೃಪ।
03134035c ಶಿರಾಂಸ್ಯಪಾಹರತ್ವಾಜೌ ರಿಪೂಣಾಂ ಭದ್ರಮಸ್ತು ತೇ।।

ಬಂದಿಯು ಹೇಳಿದನು: “ಹರಿತ ಪರಶುವಿನಿಂದ ಸ್ವಯಂ ಅಂತಕನು ನಿನ್ನ ಶತ್ರುಗಳ ಶಿರವನ್ನು ಕತ್ತರಿಸುತ್ತಾನೆ. ರಾಜ! ನಿನಗೆ ರಕ್ಷಣೆಯಿರಲಿ!””

03134037 ಲೋಮಶ ಉವಾಚ।
03134036a ಮಹದುಕ್ಥ್ಯಂ ಗೀಯತೇ ಸಾಮ ಚಾಗ್ರ್ಯಂ। ಸಮ್ಯಕ್ಸೋಮಃ ಪೀಯತೇ ಚಾತ್ರ ಸತ್ರೇ।
03134036c ಶುಚೀನ್ಭಾಗಾನ್ಪ್ರತಿಜಗೃಹುಶ್ಚ ಹೃಷ್ಟಾಃ। ಸಾಕ್ಷಾದ್ದೇವಾ ಜನಕಸ್ಯೇಹ ಯಜ್ಞೇ।।

ಲೋಮಶನು ಹೇಳಿದನು: “ಮಹಾ ಉಕ್ಥವನ್ನು ಹಾಗೂ ಮಹಾ ಸಾಮವನ್ನು ಹಾಡಲಾಯಿತು. ಆ ಸತ್ರದಲ್ಲಿ ಚೆನ್ನಾಗಿ ಸೋಮವನ್ನು ಕುಡಿಯಲಾಯಿತು. ಜನಕನ ಯಜ್ಞದಲ್ಲಿ ಸಂತೋಷಗೊಂಡ ಸಾಕ್ಷಾತ್ ದೇವತೆಗಳು ಶುಚಿಯಾದ ತಮ್ಮ ತಮ್ಮ ಭಾಗಗಳನ್ನು ಸ್ವೀಕರಿಸಿದರು.

03134037a ಸಮುತ್ಥಿತೇಷ್ವಥ ಸರ್ವೇಷು ರಾಜನ್। ವಿಪ್ರೇಷು ತೇಷ್ವಧಿಕಂ ಸುಪ್ರಭೇಷು।
03134037c ಅನುಜ್ಞಾತೋ ಜನಕೇನಾಥ ರಾಜ್ಞಾ। ವಿವೇಶ ತೋಯಂ ಸಾಗರಸ್ಯೋತ ಬಂದೀ।।

ರಾಜನ್! ಎಲ್ಲ ವಿಪ್ರರೂ ಮೊದಲಿಗಿಂತ ಪ್ರಕಾಶಮಾನರಾಗಿ ಮೇಲೆದ್ದ ನಂತರ ರಾಜಾ ಜನಕನ ಅನುಜ್ಞೆಯನ್ನು ಪಡೆದು ಬಂದಿಯು ಸಾಗರದ ನೀರನ್ನು ಪ್ರವೇಶಿಸಿದನು.

03134038a ಅಷ್ಟಾವಕ್ರಃ ಪಿತರಂ ಪೂಜಯಿತ್ವಾ। ಸಂಪೂಜಿತೋ ಬ್ರಾಹ್ಮಣೈಸ್ತೈರ್ಯಥಾವತ್।
03134038c ಪ್ರತ್ಯಾಜಗಾಮಾಶ್ರಮಮೇವ ಚಾಗ್ರ್ಯಂ। ಜಿತ್ವಾ ಬಂದಿಂ ಸಹಿತೋ ಮಾತುಲೇನ।।

ಅಷ್ಟಾವಕ್ರನು ತಂದೆಯನ್ನು ಪೂಜಿಸಿ, ಯಥಾವತ್ತಾಗಿ ಬ್ರಾಹ್ಮಣರಿಂದ ಪೂಜಿಸಿಕೊಂಡು, ತನ್ನ ಮಾವನೊಡನೆ ಬಂದಿಯನ್ನು ಸೋಲಿಸಿ ತನ್ನ ಉತ್ತಮ ಆಶ್ರಮಕ್ಕೆ ಹಿಂದಿರುಗಿದನು1.

03134039a ಅತ್ರ ಕೌಂತೇಯ ಸಹಿತೋ ಭ್ರಾತೃಭಿಸ್ತ್ವಂ। ಸುಖೋಷಿತಃ ಸಹ ವಿಪ್ರೈಃ ಪ್ರತೀತಃ।
03134039c ಪುಣ್ಯಾನ್ಯನ್ಯಾನಿ ಶುಚಿಕರ್ಮೈಕಭಕ್ತಿರ್। ಮಯಾ ಸಾರ್ಧಂ ಚರಿತಾಸ್ಯಾಜಮೀಢ।।

ಕೌಂತೇಯ! ಇಲ್ಲಿ ನಿನ್ನ ತಮ್ಮಂದಿರೊಡನೆ ಮತ್ತು ವಿಪ್ರರೊಡನೆ ಸುಖವಾಗಿ ನೀನು ವಾಸಿಸು. ಅಜಮೀಢ! ಅನಂತರ ನನ್ನೊಡನೆ ಶುಚಿಕರ್ಮಗಳು ಮತ್ತು ಭಕ್ತಿಯೊಂದಿಗೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣಮಾಡುವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ಚತುರ್ತ್ರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ತ್ನಾಲ್ಕನೆಯ ಅಧ್ಯಾಯವು.


  1. ಜನಕನು ಅಷ್ಟಾವಕ್ರನ ಶಿಷ್ಯನಾದನು. ಜನಕ-ಅಷ್ಟಾವಕ್ರರ ಸಂವಾದವು ಅಷ್ಟಾವಕ್ರ ಗೀತೆಯೆಂದು ಪ್ರಸಿದ್ಧ ಆಧ್ಯಾತ್ಮಿಕ ಗ್ರಂಥವೆನಿಸಿಕೊಂಡಿದೆ. ↩︎