132 ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 132

ಸಾರ

ಲೋಮಶನು ಅಷ್ಟಾವಕ್ರ ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದುದು (1-5). ತಾಯಿ ಸುಜಾತಳ ಹೊಟ್ಟಿಯಲ್ಲಿರುವಾಗಲೇ ಉದ್ದಾಲಕನ ಅಳಿಯ ಕಹೋಡನ ಮಗನು ತಂದೆಯ ಅವಹೇಳನ ಮಾಡಿದುದರಿಂದ ಎಂಟು ಕಡೆ ವಕ್ರನಾಗಿ ಹುಟ್ಟು ಎಂದು ತಂದೆಯಿಂದ ಶಪಿಸಲ್ಪಟ್ಟು ಅಷ್ಟಾವಕ್ರನೆನಿಸಿಕೊಂಡಿದ್ದುದು (6-10). ಪತ್ನಿಯ ಬೇಡಿಕೆಯಂತೆ ವಿತ್ತವನ್ನರಸಿ ಹೋದ ಕಹೋಡನು ಜನಕನ ಆಸ್ಥಾನದಲ್ಲಿದ್ದ ವಾದವಿದು ಬಂದಿಯಿಂದ ಸೋತು ಸಮುದ್ರದಲ್ಲಿ ಮುಳುಗಿಸಲ್ಪಟ್ಟಿದುದು (11-13). ಈ ವಿಷಯವನ್ನು ಅಷ್ಟಾವಕ್ರನಿಂದ ಮುಚ್ಚಿಟ್ಟಿದುದು; ಅಷ್ಟಾವಕ್ರನು ಅಜ್ಜ ಉದ್ದಾಲಕನನ್ನೇ ತನ್ನ ತಂದೆಯೆಂದೂ, ತನ್ನ ವಯಸ್ಸಿನ ಸೋದರಮಾವ ಶ್ವೇತಕೇತುವನ್ನು ಸಹೋದರನೆಂದೂ ತಿಳಿದುಕೊಂಡು ನಡೆದುಕೊಂಡಿದುದು (14-15). ಹನ್ನೆರಡನೆಯ ವರ್ಷದಲ್ಲಿ ಸತ್ಯ ಸಂಗತಿಯನ್ನು ತಿಳಿದ ಅಷ್ಟಾವಕ್ರನು ಬಂದಿಯನ್ನು ಸೋಲಿಸಲು ಶ್ವೇತಕೇತುವಿನೊಡನೆ ಜನಕನ ಆಸ್ಥಾನಕ್ಕೆ ಹೋದುದು (16-20).

03132001 ಲೋಮಶ ಉವಾಚ।
03132001a ಯಃ ಕಥ್ಯತೇ ಮಂತ್ರವಿದಗ್ರ್ಯಬುದ್ಧಿರ್। ಔದ್ದಾಲಕಿಃ ಶ್ವೇತಕೇತುಃ ಪೃಥಿವ್ಯಾಂ।
03132001c ತಸ್ಯಾಶ್ರಮಂ ಪಶ್ಯ ನರೇಂದ್ರ ಪುಣ್ಯಂ। ಸದಾಫಲೈರುಪಪನ್ನಂ ಮಹೀಜೈಃ।।

ಲೋಮಶನು ಹೇಳಿದನು: “ನರೇಂದ್ರ! ಮಂತ್ರವಿದು ಬುದ್ಧಿವಂತ ಔದ್ದಾಲಕಿ ಶ್ವೇತಕೇತು ಎಂದು ಹೇಳುತ್ತಾರಲ್ಲ ಅವನ ಪುಣ್ಯ ಆಶ್ರಮವನ್ನು ನೋಡು. ಭೂಮಿಯಲ್ಲಿ ಬೆಳೆದ ವೃಕ್ಷಗಳು ಸದಾ ಹಣ್ಣುಗಳಿಂದ ತುಂಬಿವೆ.

03132002a ಸಾಕ್ಷಾದತ್ರ ಶ್ವೇತಕೇತುರ್ದದರ್ಶ। ಸರಸ್ವತೀಂ ಮಾನುಷದೇಹರೂಪಾಂ।
03132002c ವೇತ್ಸ್ಯಾಮಿ ವಾಣೀಮಿತಿ ಸಂಪ್ರವೃತ್ತಾಂ। ಸರಸ್ವತೀಂ ಶ್ವೇತಕೇತುರ್ಬಭಾಷೇ।।

ಇಲ್ಲಿ ಶ್ವೇತಕೇತುವು ಮನುಷ್ಯದೇಹರೂಪಿಣಿ ಸಾಕ್ಷಾತ್ ಸರಸ್ವತಿಯನ್ನು ನೋಡಿದನು. ಇಲ್ಲಿದ್ದ ಸರಸ್ವತಿಯಲ್ಲಿ ಶ್ವೇತಕೇತುವು ವಾಣಿಯು ನನಗೆ ತಿಳಿಯುವಂತಾಗಲಿ ಎಂದು ಕೇಳಿಕೊಂಡನು.

03132003a ತಸ್ಮಿನ್ಕಾಲೇ ಬ್ರಹ್ಮವಿದಾಂ ವರಿಷ್ಠಾವ್। ಆಸ್ತಾಂ ತದಾ ಮಾತುಲಭಾಗಿನೇಯೌ।
03132003c ಅಷ್ಟಾವಕ್ರಶ್ಚೈವ ಕಹೋಡಸೂನುರ್। ಔದ್ದಾಲಕಿಃ ಶ್ವೇತಕೇತುಶ್ಚ ರಾಜನ್।।

ರಾಜನ್! ಆ ಕಾಲದಲ್ಲಿ ಇವರಿಬ್ಬರು ಬ್ರಹ್ಮವಿದರಲ್ಲಿ ವರಿಷ್ಠರಾಗಿದ್ದರು - ಮಾವ ಅಳಿಯರಾದ ಕಹೋಡನ ಮಗ ಅಷ್ಟಾವಕ್ರ ಮತ್ತು ಉದ್ದಾಲಕನ ಮಗ ಶ್ವೇತಕೇತು.

03132004a ವಿದೇಹರಾಜಸ್ಯ ಮಹೀಪತೇಸ್ತೌ। ವಿಪ್ರಾವುಭೌ ಮಾತುಲಭಾಗಿನೇಯೌ।
03132004c ಪ್ರವಿಶ್ಯ ಯಜ್ಞಾಯತನಂ ವಿವಾದೇ। ಬಂದಿಂ ನಿಜಗ್ರಾಹತುರಪ್ರಮೇಯಂ।।

ಅವರಿಬ್ಬರು ಮಾವ-ಅಳಿಯರಾದ ವಿಪ್ರರು ಮಹೀಪತಿ ವಿದೇಹರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ಅಪ್ರಮೇಯನಾದ ಬಂದಿಯನ್ನು ವಿವಾದದಲ್ಲಿ ಸೋಲಿಸಿದರು.”

03132005 ಯುಧಿಷ್ಠಿರ ಉವಾಚ।
03132005a ಕಥಂಪ್ರಭಾವಃ ಸ ಬಭೂವ ವಿಪ್ರಸ್। ತಥಾಯುಕ್ತಂ ಯೋ ನಿಜಗ್ರಾಹ ಬಂದಿಂ।
03132005c ಅಷ್ಟಾವಕ್ರಃ ಕೇನ ಚಾಸೌ ಬಭೂವ। ತತ್ಸರ್ವಂ ಮೇ ಲೋಮಶ ಶಂಸ ತತ್ತ್ವಂ।।

ಯುಧಿಷ್ಠಿರನು ಹೇಳಿದನು: “ಲೋಮಶ! ಬಂದಿಯನ್ನು ಸೋಲಿಸಿದ ಆ ವಿಪ್ರನ ಪ್ರಭಾವವೇನಿತ್ತು? ಗುಣಗಳೇನಿದ್ದವು? ಅವನಿಗೆ ಅಷ್ಟಾವಕ್ರನೆಂಬ ಹೆಸರು ಏಕೆ ಬಂದಿತು? ಅವೆಲ್ಲವನ್ನು ನನಗೆ ಹೇಳು.”

03132006 ಲೋಮಶ ಉವಾಚ।
03132006a ಉದ್ದಾಲಕಸ್ಯ ನಿಯತಃ ಶಿಷ್ಯ ಏಕೋ। ನಾಮ್ನಾ ಕಹೋಡೇತಿ ಬಭೂವ ರಾಜನ್।
03132006c ಶುಶ್ರೂಷುರಾಚಾರ್ಯವಶಾನುವರ್ತೀ। ದೀರ್ಘಂ ಕಾಲಂ ಸೋಽಧ್ಯಯನಂ ಚಕಾರ।।

ಲೋಮಶನು ಹೇಳಿದನು: “ರಾಜನ್! ಉದ್ದಾಲಕನಿಗೆ ಕಹೋಡ ಎನ್ನುವ ಓರ್ವ ನಿಯತನಾದ ಶಿಷ್ಯನಿದ್ದನು. ವಶಾನುವರ್ತಿಯಾದ ಅವನು ದೀರ್ಘಕಾಲದವರೆಗೆ ಆಚಾರ್ಯನ ಶುಶ್ರೂಷೆಯನ್ನು ಮಾಡಿ ಅಧ್ಯಯನ ನಿರತನಾಗಿದ್ದನು.

03132007a ತಂ ವೈ ವಿಪ್ರಾಃ ಪರ್ಯಭವಂಶ್ಚ ಶಿಷ್ಯಾಸ್। ತಂ ಚ ಜ್ಞಾತ್ವಾ ವಿಪ್ರಕಾರಂ ಗುರುಃ ಸಃ।
03132007c ತಸ್ಮೈ ಪ್ರಾದಾತ್ಸದ್ಯ ಏವ ಶ್ರುತಂ ಚ। ಭಾರ್ಯಾಂ ಚ ವೈ ದುಹಿತರಂ ಸ್ವಾಂ ಸುಜಾತಾಂ।।

ಅವನ ಸುತ್ತಲೂ ಇನ್ನೂ ಅನೇಕ ವಿಪ್ರರಿದ್ದರೂ ಗುರುವು ಇವನಲ್ಲಿ ವಿಪ್ರನ ಚಿಹ್ನೆಯನ್ನು ಗುರುತಿಸಿ, ಅವನಿಗೆ ಆಗಲೇ ತಾನು ತಿಳಿದುದೆಲ್ಲವನ್ನೂ ಮತ್ತು ತನ್ನ ಮಗಳು ಸುಜಾತಳನ್ನು ಪತ್ನಿಯನ್ನಾಗಿಯೂ ನೀಡಿದನು.

03132008a ತಸ್ಯಾ ಗರ್ಭಃ ಸಮಭವದಗ್ನಿಕಲ್ಪಃ। ಸೋಽಧೀಯಾನಂ ಪಿತರಮಥಾಭ್ಯುವಾಚ।
03132008c ಸರ್ವಾಂ ರಾತ್ರಿಮಧ್ಯಯನಂ ಕರೋಷಿ। ನೇದಂ ಪಿತಃ ಸಮ್ಯಗಿವೋಪವರ್ತತೇ।।

ಅವಳಿಗೆ ಅಗ್ನಿಸಮಾನವಾದ ಗರ್ಭವಾಯಿತು. ಅದು ಅಧ್ಯಯನ ಮಾಡುತ್ತಿರುವ ತನ್ನ ತಂದೆಗೆ ಹೇಳಿತು: “ತಂದೇ! ರಾತ್ರಿಯಿಡೀ ಅಧ್ಯಯನವನ್ನು ಮಾಡುತ್ತಿರುತ್ತೀಯೆ. ಆದರೂ ನಿನಗೆ ಸರಿಯಾಗಿ ಬರುತ್ತಿಲ್ಲ!”

03132009a ಉಪಾಲಬ್ಧಃ ಶಿಷ್ಯಮಧ್ಯೇ ಮಹರ್ಷಿಃ। ಸ ತಂ ಕೋಪಾದುದರಸ್ಥಂ ಶಶಾಪ।
03132009c ಯಸ್ಮಾತ್ಕುಕ್ಷೌ ವರ್ತಮಾನೋ ಬ್ರವೀಷಿ। ತಸ್ಮಾದ್ವಕ್ರೋ ಭವಿತಾಸ್ಯಷ್ಟಕೃತ್ವಃ।।

ಶಿಷ್ಯರ ಮಧ್ಯದಲ್ಲಿ ಅಪಮಾನಿತಗೊಂಡ ಆ ಮಹರ್ಷಿಯು ಕೋಪದಿಂದ ಹೊಟ್ಟೆಯಲ್ಲಿದ್ದವನಿಗೆ ಶಾಪವನ್ನಿತ್ತನು - “ಹೊಟ್ಟೆಯಲ್ಲಿರುವಾಗಲೇ ಮಾತನಾಡಲು ತೊಡಗಿದ ನೀನು ಎಂಟು ಕಡೆಗಳಲ್ಲಿ ವಕ್ರನಾಗುತ್ತೀಯೆ!”

03132010a ಸ ವೈ ತಥಾ ವಕ್ರ ಏವಾಭ್ಯಜಾಯದ್। ಅಷ್ಟಾವಕ್ರಃ ಪ್ರಥಿತೋ ವೈ ಮಹರ್ಷಿಃ।
03132010c ತಸ್ಯಾಸೀದ್ವೈ ಮಾತುಲಃ ಶ್ವೇತಕೇತುಃ। ಸ ತೇನ ತುಲ್ಯೋ ವಯಸಾ ಬಭೂವ।।

ಅವನು ಹಾಗೆಯೇ ವಕ್ರನಾಗಿ ಹುಟ್ಟಿದನು. ಆ ಮಹರ್ಷಿಯು ಅಷ್ಟಾವಕ್ರನೆಂದು ಪ್ರಥಿತನಾದನು. ಅವನ ಸೋದರ ಮಾವನು ಶ್ವೇತಕೇತು. ಅವರಿಬ್ಬರೂ ಒಂದೇ ವಯಸ್ಸಿನವರಾಗಿದ್ದರು.

03132011a ಸಂಪೀಡ್ಯಮಾನಾ ತು ತದಾ ಸುಜಾತಾ। ವಿವರ್ಧಮಾನೇನ ಸುತೇನ ಕುಕ್ಷೌ।
03132011c ಉವಾಚ ಭರ್ತಾರಮಿದಂ ರಹೋಗತಾ। ಪ್ರಸಾದ್ಯ ಹೀನಂ ವಸುನಾ ಧನಾರ್ಥಿನೀ।।

ಹೊಟ್ಟೆಯಲ್ಲಿ ಮಗನು ಬೆಳೆಯುತ್ತಿರುವಾಗ ಸುಜಾತಳು ತುಂಬಾ ದುಃಖಿತಳಾಗಿದ್ದಳು. ಸಂಪತ್ತನ್ನು ಬಯಸಿದ ಅವಳು ಬಡವನಾದ ತನ್ನ ಪತಿಗೆ ನೋವಾಗದಂತೆ ಹೇಳಿದಳು:

03132012a ಕಥಂ ಕರಿಷ್ಯಾಮ್ಯಧನಾ ಮಹರ್ಷೇ। ಮಾಸಶ್ಚಾಯಂ ದಶಮೋ ವರ್ತತೇ ಮೇ।
03132012c ನ ಚಾಸ್ತಿ ತೇ ವಸು ಕಿಂ ಚಿತ್ಪ್ರಜಾತಾ। ಯೇನಾಹಮೇತಾಮಾಪದಂ ನಿಸ್ತರೇಯಂ।।

“ಮಹರ್ಷೇ! ನಾವು ಸಂಪತ್ತಿಲ್ಲದೇ ಹೇಗೆ ಬದುಕೋಣ? ಇದು ನನ್ನ ಗರ್ಭದ ಹತ್ತನೆಯ ತಿಂಗಳು. ಮಗುವು ಹುಟ್ಟಿದ ನಂತರ ಬರುವ ಆಪತ್ತನ್ನು ನಿವಾರಿಸಿಕೊಳ್ಳಲು ನಿನ್ನಲ್ಲಿ ಏನೂ ಹಣವಿಲ್ಲವಲ್ಲ!”

03132013a ಉಕ್ತಸ್ತ್ವೇವಂ ಭಾರ್ಯಯಾ ವೈ ಕಹೋಡೋ। ವಿತ್ತಸ್ಯಾರ್ಥೇ ಜನಕಮಥಾಭ್ಯಗಚ್ಚತ್।
03132013c ಸ ವೈ ತದಾ ವಾದವಿದಾ ನಿಗೃಹ್ಯ। ನಿಮಜ್ಜಿತೋ ಬಂದಿನೇಹಾಪ್ಸು ವಿಪ್ರಃ।।

ಹೆಂಡತಿಯು ಹೀಗೆ ಹೇಳಲು ಕಹೋಡನು ವಿತ್ತವನ್ನರಸಿ ಜನಕನಲ್ಲಿಗೆ ಹೋದನು. ಆದರೆ ಅಲ್ಲಿ ವಾದವಿದು ಬಂದಿಯು ಆ ವಿಪ್ರನನ್ನು ಸೋಲಿಸಿ ಸಮುದ್ರದಲ್ಲಿ ಮುಳುಗಿಸಿದನು.

03132014a ಉದ್ದಾಲಕಸ್ತಂ ತು ತದಾ ನಿಶಮ್ಯ। ಸೂತೇನ ವಾದೇಽಪ್ಸು ತಥಾ ನಿಮಜ್ಜಿತಂ।
03132014c ಉವಾಚ ತಾಂ ತತ್ರ ತತಃ ಸುಜಾತಾಂ। ಅಷ್ಟಾವಕ್ರೇ ಗೂಹಿತವ್ಯೋಽಯಮರ್ಥಃ।।

ಕಹೋಡನು ಸೂತನಿಂದ ಸೋಲಿಸಲ್ಪಟ್ಟು ಸಮುದ್ರದಲ್ಲಿ ಮುಳುಗಿಸಲ್ಪಟ್ಟ ಎಂಬ ವಾರ್ತೆಯನ್ನು ಉದ್ದಾಲಕನು ಪಡೆದನು. ಆಗ ಅವನು ಅಲ್ಲಿಯೇ ಸುಜಾತಳಿಗೆ ಹೇಳಿದನು: “ಈ ಸಂಗತಿಯನ್ನು ಅಷ್ಟಾವಕ್ರನಿಂದ ಮುಚ್ಚಿಡಬೇಕು.”

03132015a ರರಕ್ಷ ಸಾ ಚಾಪ್ಯತಿ ತಂ ಸುಮಂತ್ರಂ। ಜಾತೋಽಪ್ಯೇವಂ ನ ಸ ಶುಶ್ರಾವ ವಿಪ್ರಃ।
03132015c ಉದ್ದಾಲಕಂ ಪಿತೃವಚ್ಚಾಪಿ ಮೇನೇ। ಅಷ್ಟಾವಕ್ರೋ ಭ್ರಾತೃವಚ್ಶ್ವೇತಕೇತುಂ।।

ಅವಳಾದರೂ ಈ ವಿಷಯವನ್ನು ಗೌಪ್ಯವಾಗಿಯೇ ರಕ್ಷಿಸಿದಳು. ಹುಟ್ಟಿದ ನಂತರವೂ ಆ ವಿಪ್ರನು ಏನನ್ನೂ ಕೇಳಲಿಲ್ಲ. ಅಷ್ಟಾವಕ್ರನು ಉದ್ದಾಲಕನನ್ನೇ ತಂದೆಯೆಂದು ಮತ್ತು ಶ್ವೇತಕೇತುವನ್ನು ಸಹೋದರನೆಂದು ತಿಳಿದನು.

03132016a ತತೋ ವರ್ಷೇ ದ್ವಾದಶೇ ಶ್ವೇತಕೇತುರ್। ಅಷ್ಟಾವಕ್ರಂ ಪಿತುರಂಕೇ ನಿಸನ್ನಂ।
03132016c ಅಪಾಕರ್ಷದ್ಗೃಹ್ಯ ಪಾಣೌ ರುದಂತಂ। ನಾಯಂ ತವಾಂಕಃ ಪಿತುರಿತ್ಯುಕ್ತವಾಂಶ್ಚ।।

ಹನ್ನೆರಡು ವರ್ಷಗಳಾದಾಗ ಅಷ್ಟಾವಕ್ರನು ತಂದೆಯ ತೊಡೆಯಮೇಲೆ ಕುಳಿತುಕೊಂಡಿದ್ದಾಗ ಶ್ವೇತಕೇತುವು ಅವನ ಕೈಗಳನ್ನು ಹಿಡಿದೆಳೆದು ಅಳುತ್ತಿರುವವನಿಗೆ “ಇದು ನಿನ್ನ ತಂದೆಯ ತೊಡೆಯಲ್ಲ!” ಎಂದನು.

03132017a ಯತ್ತೇನೋಕ್ತಂ ದುರುಕ್ತಂ ತತ್ತದಾನೀಂ। ಹೃದಿ ಸ್ಥಿತಂ ತಸ್ಯ ಸುದುಃಖಮಾಸೀತ್।
03132017c ಗೃಹಂ ಗತ್ವಾ ಮಾತರಂ ರೋದಮಾನಃ। ಪಪ್ರಚ್ಚೇದಂ ಕ್ವ ನು ತಾತೋ ಮಮೇತಿ।।

ಕೆಟ್ಟದಾಗಿ ಹೇಳಲ್ಪಟ್ಟ ಆ ಮಾತು ಅವನ ಹೃದಯದಲ್ಲಿ ನೆಲೆಮಾಡಿತು ಮತ್ತು ಅವನು ಬಹಳ ದುಃಖಿತನಾದನು. ಮನೆಗೆ ಹೋಗಿ ಅಳುತ್ತಾ ತಾಯಿಯಲ್ಲಿ ಕೇಳಿದನು: “ನನ್ನ ತಂದೆ ಯಾರು?”

03132018a ತತಃ ಸುಜಾತಾ ಪರಮಾರ್ತರೂಪಾ। ಶಾಪಾದ್ಭೀತಾ ಸರ್ವಮೇವಾಚಚಕ್ಷೇ।
03132018c ತದ್ವೈ ತತ್ತ್ವಂ ಸರ್ವಮಾಜ್ಞಾಯ ಮಾತುರ್। ಇತ್ಯಬ್ರವೀಚ್ಛ್ವೇತಕೇತುಂ ಸ ವಿಪ್ರಃ।।

ಆಗ ಸುಜಾತಳು ಪರಮ ದುಃಖಿತಳಾಗಿ ಅವನ ಶಾಪಕ್ಕೆ ಹೆದರಿ ಎಲ್ಲವನ್ನೂ ಅವನಿಗೆ ಹೇಳಿದಳು. ಅವನ ತಾಯಿಯಿಂದ ಸತ್ಯವೆಲ್ಲವನ್ನೂ ತಿಳಿದನಂತರ ಆ ಬ್ರಾಹ್ಮಣನು ಶ್ವೇತಕೇತುವಿಗೆ ಹೇಳಿದನು:

03132019a ಗಚ್ಚಾವ ಯಜ್ಞಂ ಜನಕಸ್ಯ ರಾಜ್ಞೋ। ಬಹ್ವಾಶ್ಚರ್ಯಃ ಶ್ರೂಯತೇ ತಸ್ಯ ಯಜ್ಞಃ।
03132019c ಶ್ರೋಷ್ಯಾವೋಽತ್ರ ಬ್ರಾಹ್ಮಣಾನಾಂ ವಿವಾದಂ। ಅನ್ನಂ ಚಾಗ್ರ್ಯಂ ತತ್ರ ಭೋಕ್ಷ್ಯಾವಹೇ ಚ।
03132019e ವಿಚಕ್ಷಣತ್ವಂ ಚ ಭವಿಷ್ಯತೇ ನೌ। ಶಿವಶ್ಚ ಸೌಮ್ಯಶ್ಚ ಹಿ ಬ್ರಹ್ಮಘೋಷಃ।।

“ನಾವಿಬ್ಬರೂ ರಾಜ ಜನಕನ ಯಜ್ಞಕ್ಕೆ ಹೋಗೋಣ. ಅವನ ಯಜ್ಞವು ಬಹುದಾಶ್ಚರ್ಯವೆಂದು ಕೇಳಿದ್ದೇವೆ. ಅಲ್ಲಿ ಬ್ರಾಹ್ಮಣರ ವಿವಾದವನ್ನು ಕೇಳೋಣ. ಅಲ್ಲಿ ಉತ್ತಮ ಊಟವನ್ನು ಮಾಡೋಣ. ಬ್ರಹ್ಮಘೋಷವು ಮಂಗಳಕರ ಮತ್ತು ಸೌಮ್ಯ. ಇದರಿಂದ ನಮ್ಮ ತಿಳುವಳಿಕೆಯೂ ವೃದ್ಧಿಯಾಗುತ್ತದೆ.”

03132020a ತೌ ಜಗ್ಮತುರ್ಮಾತುಲಭಾಗಿನೇಯೌ। ಯಜ್ಞಂ ಸಮೃದ್ಧಂ ಜನಕಸ್ಯ ರಾಜ್ಞಃ।
03132020c ಅಷ್ಟಾವಕ್ರಃ ಪಥಿ ರಾಜ್ಞಾ ಸಮೇತ್ಯ। ಉತ್ಸಾರ್ಯಮಾಣೋ ವಾಕ್ಯಮಿದಂ ಜಗಾದ।।

ಆ ಇಬ್ಬರು ಮಾವ-ಅಳಿಯಂದಿರು ರಾಜ ಜನಕನ ಸಮೃದ್ಧ ಯಜ್ಞಕ್ಕೆ ಹೋದರು. ದಾರಿಯಲ್ಲಿ ಅವರನ್ನು ತಡೆಗಟ್ಟಲು, ರಾಜನನ್ನು ಭೇಟಿಮಾಡಿ ಅಷ್ಟಾವಕ್ರನು ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ದ್ವಾಂತ್ರಿಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ತೆರಡನೆಯ ಅಧ್ಯಾಯವು.