131 ಲೋಮಶತೀರ್ಥಯಾತ್ರಾಯಾಂ ಶ್ಯೇನಕಪೋತೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 131

ಸಾರ

ಗಿಡುಗ-ಉಶೀನರರ ಸಂವಾದ (1-15). ರಾಜನು ಪಾರಿವಾಳಕ್ಕೆ ಸಮನಾದ ತೂಕದ ತನ್ನದೇ ದೇಹದ ಮಾಂಸವನ್ನು ಕೊಡಲು ಸಿದ್ಧನಾಗುವುದು; ಇನ್ನು ತುಂಡುಮಾಡಲು ಮಾಂಸವೇ ಇಲ್ಲವಾಗಲು ತಾನೇ ತಕ್ಕಡಿಯನ್ನೇರುವುದು (16-27). ಇಂದ್ರನು ತನ್ನ ಸ್ವರೂಪವನ್ನು ತಿಳಿಸಿ ವರವನ್ನಿತ್ತುದುದು (28-32).

03131001 ಶ್ಯೇನ ಉವಾಚ।
03131001a ಧರ್ಮಾತ್ಮಾನಂ ತ್ವಾಹುರೇಕಂ ಸರ್ವೇ ರಾಜನ್ಮಹೀಕ್ಷಿತಃ।
03131001c ಸ ವೈ ಧರ್ಮವಿರುದ್ಧಂ ತ್ವಂ ಕಸ್ಮಾತ್ಕರ್ಮ ಚಿಕೀರ್ಷಸಿ।।

ಗಿಡುಗವು ಹೇಳಿತು: “ರಾಜನ್! ಮಹೀಕ್ಷಿತರೆಲ್ಲರೂ ನೀನೊಬ್ಬ ಧರ್ಮಾತ್ಮನೆಂದು ಕರೆಯುತ್ತಾರೆ. ಹಾಗಿರುವಾಗ ಯಾಕೆ ಈ ಧರ್ಮವಿರುದ್ಧವಾದ ಕಾರ್ಯವನ್ನು ಮಾಡಲು ಬಯಸುತ್ತಿದ್ದೀಯೆ?

03131002a ವಿಹಿತಂ ಭಕ್ಷಣಂ ರಾಜನ್ಪೀಡ್ಯಮಾನಸ್ಯ ಮೇ ಕ್ಷುಧಾ।
03131002c ಮಾ ಭಾಂಕ್ಷೀರ್ಧರ್ಮಲೋಭೇನ ಧರ್ಮಮುತ್ಸೃಷ್ಟವಾನಸಿ।।

ರಾಜನ್! ಹಸಿವೆಯಿಂದ ತಳಮಳಿಸುತ್ತಿರುವ ನನ್ನ ಆಹಾರವನ್ನು ತಡೆಯಬೇಡ. ಧರ್ಮದಿಂದ ನನಗಾಗಿರುವ ಆಹಾರವನ್ನು ಕೊಡದೇ ನೀನು ಧರ್ಮವನ್ನೇ ಎಸೆಯುತ್ತಿದ್ದೀಯೆ.”

03131003 ರಾಜೋವಾಚ।
03131003a ಸಂತ್ರಸ್ತರೂಪಸ್ತ್ರಾಣಾರ್ಥೀ ತ್ವತ್ತೋ ಭೀತೋ ಮಹಾದ್ವಿಜ।
03131003c ಮತ್ಸಕಾಶಮನುಪ್ರಾಪ್ತಃ ಪ್ರಾಣಗೃಧ್ನುರಯಂ ದ್ವಿಜಃ।।

ರಾಜನು ಹೇಳಿದನು: “ಮಹಾಪಕ್ಷಿಯೇ! ನಿನ್ನ ಭಯದಿಂದ ನಡುಗುತ್ತಾ ರಕ್ಷಣೆಯನ್ನರಸಿಕೊಂಡು ನನ್ನ ಬಳಿ ಸೇರಿ ಈ ಪಕ್ಷಿಯು ಪ್ರಾಣವನ್ನು ಬೇಡಿಕೊಂಡಿದೆ.

03131004a ಏವಮಭ್ಯಾಗತಸ್ಯೇಹ ಕಪೋತಸ್ಯಾಭಯಾರ್ಥಿನಃ।
03131004c ಅಪ್ರದಾನೇ ಪರೋಽಧರ್ಮಃ ಕಿಂ ತ್ವಂ ಶ್ಯೇನ ಪ್ರಪಶ್ಯಸಿ।।

ಗಿಡುಗವೇ! ಈ ರೀತಿ ಇಲ್ಲಿಗೆ ಬಂದು ಅಭಯವನ್ನು ಯಾಚಿಸುವ ಪಾರಿವಾಳಕ್ಕೆ ಅಭಯವನ್ನು ಕೊಡದೇ ಇದ್ದರೆ ಅದು ಪರಮ ಅಧರ್ಮವಾಗುತ್ತದೆ ಎಂದು ನಿನಗೆ ಕಾಣುತ್ತಿಲ್ಲವೇ?

03131005a ಪ್ರಸ್ಪಂದಮಾನಃ ಸಂಭ್ರಾಂತಃ ಕಪೋತಃ ಶ್ಯೇನ ಲಕ್ಷ್ಯತೇ।
03131005c ಮತ್ಸಕಾಶಂ ಜೀವಿತಾರ್ಥೀ ತಸ್ಯ ತ್ಯಾಗೋ ವಿಗರ್ಹಿತಃ।।

ಗಿಡುಗವೇ! ಈ ಪಾರಿವಾಳವು ಭ್ರಾಂತಗೊಂಡು ನಡುಗುತ್ತಿರುವಂತೆ ಕಾಣುತ್ತಿದೆ. ಜೀವವನ್ನು ಬೇಡಿಕೊಂಡು ನನ್ನ ಬಳಿಬಂದಿರುವ ಇದನ್ನು ತ್ಯಜಿಸುವುದು ನಿಂದನೀಯ.”

03131006 ಶ್ಯೇನ ಉವಾಚ।
03131006a ಆಹಾರಾತ್ಸರ್ವಭೂತಾನಿ ಸಂಭವಂತಿ ಮಹೀಪತೇ।
03131006c ಆಹಾರೇಣ ವಿವರ್ಧಂತೇ ತೇನ ಜೀವಂತಿ ಜಂತವಃ।।

ಗಿಡುಗವು ಹೇಳಿತು: “ಮಹೀಪತೇ! ಸರ್ವಭೂತಗಳೂ (ಇರುವ ಎಲ್ಲವೂ) ಆಹಾರದಿಂದಲೇ ಜೀವಿಸುತ್ತವೆ. ಆಹಾರದಿಂದಲೇ ಬೆಳೆಯುತ್ತವೆ ಮತ್ತು ಅದರಿಂದಲೇ ಜಂತುಗಳು ಜೀವಿಸುತ್ತವೆ.

03131007a ಶಕ್ಯತೇ ದುಸ್ತ್ಯಜೇಽಪ್ಯರ್ಥೇ ಚಿರರಾತ್ರಾಯ ಜೀವಿತುಂ।
03131007c ನ ತು ಭೋಜನಮುತ್ಸೃಜ್ಯ ಶಕ್ಯಂ ವರ್ತಯಿತುಂ ಚಿರಂ।।

ತ್ಯಜಿಸಲು ಕಷ್ಟವಾದ ವಸ್ತುಗಳಿಲ್ಲದೆಯೂ ಮನುಷ್ಯನು ಬಹಳಷ್ಟು ಕಾಲ ಜೀವಿಸಬಹುದು. ಆದರೆ ಆಹಾರವಿಲ್ಲದೇ ಅವನು ಬಹಳಷ್ಟು ಕಾಲ ಜೀವಿಸಿರಲು ಸಾಧ್ಯವಿಲ್ಲ.

03131008a ಭಕ್ಷ್ಯಾದ್ವಿಲೋಪಿತಸ್ಯಾದ್ಯ ಮಮ ಪ್ರಾಣಾ ವಿಶಾಂ ಪತೇ।
03131008c ವಿಸೃಜ್ಯ ಕಾಯಮೇಷ್ಯಂತಿ ಪಂಥಾನಮಪುನರ್ಭವಂ।।

ವಿಶಾಂಪತೇ! ಇಂದು ನನ್ನ ಆಹಾರದಿಂದ ವಂಚಿತನಾದರೆ ನನ್ನ ಪ್ರಾಣವು ದೇಹವನ್ನು ತೊರೆದು ಹಿಂದಿರುಗಿ ಬರಲಿಕ್ಕಾಗದೇ ಇರುವ ದಾರಿಯನ್ನು ಹಿಡಿಯುತ್ತದೆ.

03131009a ಪ್ರಮೃತೇ ಮಯಿ ಧರ್ಮಾತ್ಮನ್ಪುತ್ರದಾರಂ ನಶಿಷ್ಯತಿ।
03131009c ರಕ್ಷಮಾಣಃ ಕಪೋತಂ ತ್ವಂ ಬಹೂನ್ಪ್ರಾಣಾನ್ನಶಿಷ್ಯಸಿ।।

ಧರ್ಮಾತ್ಮನ್! ನಾನು ಮೊದಲೇ ತೀರಿಕೊಂಡರೆ ನನ್ನ ಹೆಂಡತಿ ಮತ್ತು ಮಗು ನಾಶಹೊಂದುತ್ತಾರೆ. ಈ ಪಾರಿವಾಳವನ್ನು ನೀನು ರಕ್ಷಿಸಿದರೆ ಬಹಳಷ್ಟು ಪ್ರಾಣಗಳು ನಾಶಹೊಂದುತ್ತವೆ.

03131010a ಧರ್ಮಂ ಯೋ ಬಾಧತೇ ಧರ್ಮೋ ನ ಸ ಧರ್ಮಃ ಕುಧರ್ಮ ತತ್।
03131010c ಅವಿರೋಧೀ ತು ಯೋ ಧರ್ಮಃ ಸ ಧರ್ಮಃ ಸತ್ಯವಿಕ್ರಮ।।

ಧರ್ಮವನ್ನು ಬಾಧಿಸುವ ಧರ್ಮವು ಧರ್ಮವಲ್ಲ. ಅದು ಕುಧರ್ಮ. ಸತ್ಯವಿಕ್ರಮ! ಧರ್ಮಕ್ಕೆ ಅವಿರೋಧಿಯಾಗಿರುವುದೇ ಧರ್ಮ.

03131011a ವಿರೋಧಿಷು ಮಹೀಪಾಲ ನಿಶ್ಚಿತ್ಯ ಗುರುಲಾಘವಂ।
03131011c ನ ಬಾಧಾ ವಿದ್ಯತೇ ಯತ್ರ ತಂ ಧರ್ಮಂ ಸಮುದಾಚರೇತ್।।

ಮಹೀಪಾಲ! ಎರಡು ವಿಷಯಗಳು ಒಂದಕ್ಕೊಂದು ವಿರೋಧವಾಗಿರುವಾಗ ಯಾವುದು ಹೆಚ್ಚು ಮತ್ತು ಯಾವುದು ಕೀಳು ಎನ್ನುವುದನ್ನು ನಿಶ್ಚಯಿಸು. ಏನನ್ನೂ ಬಾಧಿಸದೇ ಇರುವಂಥ ಧರ್ಮವನ್ನು ಎಲ್ಲರೂ ಆಚರಿಸಬೇಕು.

03131012a ಗುರುಲಾಘವಮಾಜ್ಞಾಯ ಧರ್ಮಾಧರ್ಮವಿನಿಶ್ಚಯೇ।
03131012c ಯತೋ ಭೂಯಾಂಸ್ತತೋ ರಾಜನ್ಕುರು ಧರ್ಮವಿನಿಶ್ಚಯಂ।।

ರಾಜನ್! ಯಾವುದು ಹೆಚ್ಚಿನದು ಮತ್ತು ಯಾವುದು ಕೀಳಾದುದು ಎಂದು ತಿಳಿದು ಧರ್ಮಾಧರ್ಮಗಳನ್ನು ನಿಶ್ಚಯಿಸಿ ಯಾವುದು ಹೆಚ್ಚು ಒಳ್ಳೆಯದನ್ನು ಮಾಡುತ್ತದೆಯೋ ಅದನ್ನೇ ಧರ್ಮವೆಂದು ನಿಶ್ಚಯಿಸಿ ಮಾಡು.”

03131013 ರಾಜೋವಾಚ।
03131013a ಬಹುಕಲ್ಯಾಣಸಮ್ಯುಕ್ತಂ ಭಾಷಸೇ ವಿಹಗೋತ್ತಮ।
03131013c ಸುಪರ್ಣಃ ಪಕ್ಷಿರಾಟ್ಕಿಂ ತ್ವಂ ಧರ್ಮಜ್ಞಶ್ಚಾಸ್ಯಸಂಶಯಂ।।
03131013e ತಥಾ ಹಿ ಧರ್ಮಸಮ್ಯುಕ್ತಂ ಬಹು ಚಿತ್ರಂ ಪ್ರಭಾಷಸೇ।।

ರಾಜನು ಹೇಳಿದನು: “ವಿಹಗೋತ್ತಮ! ನೀನು ತುಂಬಾ ಚೆನ್ನಾಗಿ ಮಾತನಾಡುತ್ತೀಯೆ. ಪಕ್ಷಿರಾಜ! ಸುಂದರ ರೆಕ್ಕೆಗಳನ್ನುಳ್ಳ ನೀನು ಧರ್ಮವನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವಾದರೂ ಏಕೆ? ಧರ್ಮಸಂಯುಕ್ತವಾದ ದೀರ್ಘವಾದ ವಿಚಿತ್ರ ಮಾತುಗಳನ್ನಾಡಿದ್ದೀಯೆ.

03131014a ನ ತೇಽಸ್ತ್ಯವಿದಿತಂ ಕಿಂ ಚಿದಿತಿ ತ್ವಾ ಲಕ್ಷಯಾಮ್ಯಹಂ।
03131014c ಶರಣೈಷಿಣಃ ಪರಿತ್ಯಾಗಂ ಕಥಂ ಸಾಧ್ವಿತಿ ಮನ್ಯಸೇ।।

ನೀನು ಹೇಳಿದುದರಲ್ಲಿ ಅಸತ್ಯವೇನೂ ನನಗೆ ಕಾಣುವುದಿಲ್ಲ. ಶರಣಾರ್ಥಿಯನ್ನು ತ್ಯಜಿಸುವುದು ಒಳ್ಳೆಯದು ಎಂದು ಹೇಗೆ ಹೇಳುತ್ತೀಯೆ?

03131015a ಆಹಾರಾರ್ಥಂ ಸಮಾರಂಭಸ್ತವ ಚಾಯಂ ವಿಹಂಗಮ।
03131015c ಶಕ್ಯಶ್ಚಾಪ್ಯನ್ಯಥಾ ಕರ್ತುಮಾಹಾರೋಽಪ್ಯಧಿಕಸ್ತ್ವಯಾ।।

ಪಕ್ಷಿಯೇ! ಇದೆಲ್ಲವೂ ನೀನು ಆಹಾರವನ್ನು ಹುಡುಕುವುದರಿಂದ ಪ್ರಾರಂಭವಾಯಿತು. ಆದರೆ ನೀನು ಬೇರೆ ರೀತಿಯಲ್ಲಿ ಇನ್ನೂ ಒಳ್ಳೆಯ ಆಹಾರವನ್ನು ಪಡೆಯಲು ಶಕ್ಯನಾಗಿದ್ದೀಯೆ.

03131016a ಗೋವೃಷೋ ವಾ ವರಾಹೋ ವಾ ಮೃಗೋ ವಾ ಮಹಿಷೋಽಪಿ ವಾ।
03131016c ತ್ವದರ್ಥಮದ್ಯ ಕ್ರಿಯತಾಂ ಯದ್ವಾನ್ಯದಭಿಕಾಂಕ್ಷಸೇ।।

ಹಸು, ಹೋರಿ, ಅಥವಾ ಹಂದಿ, ಅಥವಾ ಜಿಂಕೆ ಅಥವಾ ಎಮ್ಮೆಯನ್ನಾದರೂ ಅಥವಾ ನೀನು ಏನನ್ನು ಬಯಸುತ್ತೀಯೋ ಅದನ್ನು ನಿನಗೋಸ್ಕರ ಬಡಿಸುತ್ತೇನೆ.”

03131017 ಶ್ಯೇನ ಉವಾಚ।
03131017a ನ ವರಾಹಂ ನ ಚೋಕ್ಷಾಣಂ ನ ಮೃಗಾನ್ವಿವಿಧಾಂಸ್ತಥಾ।
03131017c ಭಕ್ಷಯಾಮಿ ಮಹಾರಾಜ ಕಿಮನ್ನಾದ್ಯೇನ ತೇನ ಮೇ।।

ಗಿಡುಗವು ಹೇಳಿತು: “ಮಹಾರಾಜ! ನಾನು ಹಂದಿಯಾಗಲೀ, ಎತ್ತುಗಳನ್ನಾಗಲೀ ಅಥವಾ ವಿವಿಧ ರೀತಿಯ ಜಿಂಕೆಗಳನ್ನಾಗಲೀ ತಿನ್ನುವುದಿಲ್ಲ. ಅವುಗಳ ಮಾಂಸವು ನನಗೇತಕ್ಕೆ?

03131018a ಯಸ್ತು ಮೇ ದೈವವಿಹಿತೋ ಭಕ್ಷಃ ಕ್ಷತ್ರಿಯಪುಂಗವ।
03131018c ತಮುತ್ಸೃಜ ಮಹೀಪಾಲ ಕಪೋತಮಿಮಮೇವ ಮೇ।।

ಕ್ಷತ್ರಿಯ ಪುಂಗವ! ದೈವವಿಹಿತವಾದ ಆಹಾರವೇ ನನಗಿರಲಿ. ಮಹೀಪಾಲ! ಈ ಪಾರಿವಾಳವನ್ನೇ ನನಗಾಗಿ ಬಿಟ್ಟುಕೊಡು.

03131019a ಶ್ಯೇನಾಃ ಕಪೋತಾನ್ಖಾದಂತಿ ಸ್ಥಿತಿರೇಷಾ ಸನಾತನೀ।
03131019c ಮಾ ರಾಜನ್ಮಾರ್ಗಮಾಜ್ಞಾಯ ಕದಲೀಸ್ಕಂಧಮಾರುಹ।।

ಗಿಡುಗಗಳು ಪಾರಿವಾಳಗಳನ್ನು ತಿನ್ನುತ್ತವೆ ಎನ್ನುವುದು ಸನಾತನ ಸ್ಥಿತಿ. ರಾಜನ್! ದಾರಿಯನ್ನು ತಿಳಿಯದೇ ಬಾಳೆಯ ಮರವನ್ನು ಹತ್ತಬೇಡ!”

03131020 ರಾಜೋವಾಚ।
03131020a ರಾಜ್ಯಂ ಶಿಬೀನಾಮೃದ್ಧಂ ವೈ ಶಾಧಿ ಪಕ್ಷಿಗಣಾರ್ಚಿತ।
03131020c ಯದ್ವಾ ಕಾಮಯಸೇ ಕಿಂ ಚಿಚ್ಶ್ಯೇನ ಸರ್ವಂ ದದಾನಿ ತೇ।।
03131020e ವಿನೇಮಂ ಪಕ್ಷಿಣಂ ಶ್ಯೇನ ಶರಣಾರ್ಥಿನಮಾಗತಂ।।

ರಾಜನು ಹೇಳಿದನು: “ಪಕ್ಷಿಗಣಗಳಿಂದ ಗೌರವಿಸಲ್ಪಟ್ಟ ನೀನು ಈ ಸಮೃದ್ಧವಾದ ಶಿಬಿರಾಜ್ಯವನ್ನು ಆಳು. ಗಿಡುಗ! ಅಥವಾ ಶರಣಾರ್ಥಿಯಾಗಿ ಬಂದಿರುವ ಈ ಪಕ್ಷಿಯನ್ನು ಬಿಟ್ಟು ನೀನು ಬಯಸುವ ಎಲ್ಲವನ್ನೂ ನಾನು ನಿನಗೆ ಕೊಡುತ್ತೇನೆ.

03131021a ಯೇನೇಮಂ ವರ್ಜಯೇಥಾಸ್ತ್ವಂ ಕರ್ಮಣಾ ಪಕ್ಷಿಸತ್ತಮ।
03131021c ತದಾಚಕ್ಷ್ವ ಕರಿಷ್ಯಾಮಿ ನ ಹಿ ದಾಸ್ಯೇ ಕಪೋತಕಂ।।

ಪಕ್ಷಿಸತ್ತಮ! ನಾನು ಏನು ಮಾಡಿದರೆ ನೀನು ಇದನ್ನು ಬಿಟ್ಟುಬಿಡುತ್ತೀಯೆ ಎನ್ನುವುದನ್ನು ಹೇಳು. ನೀನು ಹೇಳಿದಂತೆ ನಾನು ಮಾಡುತ್ತೇನೆ. ಆದರೆ ಈ ಪಾರಿವಾಳವನ್ನು ಮಾತ್ರ ನಾನು ನಿನಗೆ ಕೊಡುವುದಿಲ್ಲ.”

03131022 ಶ್ಯೇನ ಉವಾಚ।
03131022a ಉಶೀನರ ಕಪೋತೇ ತೇ ಯದಿ ಸ್ನೇಹೋ ನರಾಧಿಪ।
03131022c ಆತ್ಮನೋ ಮಾಂಸಮುತ್ಕೃತ್ಯ ಕಪೋತತುಲಯಾ ಧೃತಂ।।

ಗಿಡುಗವು ಹೇಳಿತು: “ನರಾಧಿಪ! ಉಶೀನರ! ನೀನು ಈ ಪಾರಿವಾಳವನ್ನು ಪ್ರೀತಿಸುತ್ತೀಯಾದರೆ ನಿನ್ನದೇ ಮಾಂಸವನ್ನು ಕಿತ್ತು ಈ ಪಾರಿವಾಳದ ಸರಿಸಮನಾಗಿ ತೂಕಮಾಡು.

03131023a ಯದಾ ಸಮಂ ಕಪೋತೇನ ತವ ಮಾಂಸಂ ಭವೇನ್ನೃಪ।
03131023c ತದಾ ಪ್ರದೇಯಂ ತನ್ಮಹ್ಯಂ ಸಾ ಮೇ ತುಷ್ಟಿರ್ಭವಿಷ್ಯತಿ।।

ರಾಜನ್! ನಿನ್ನ ಮಾಂಸವು ಈ ಪಾರಿವಾಳದ ತೂಕಕ್ಕೆ ಸರಿಸಮವಾದಾಗ ಅದನ್ನು ನೀನು ನನಗೆ ಕೊಡು. ಅದರಿಂದ ನಾನು ಸಂತೃಪ್ತನಾಗುತ್ತೇನೆ.”

03131024 ರಾಜೋವಾಚ।
03131024a ಅನುಗ್ರಹಮಿಮಂ ಮನ್ಯೇ ಶ್ಯೇನ ಯನ್ಮಾಭಿಯಾಚಸೇ।
03131024c ತಸ್ಮಾತ್ತೇಽದ್ಯ ಪ್ರದಾಸ್ಯಾಮಿ ಸ್ವಮಾಂಸಂ ತುಲಯಾ ಧೃತಂ।।

ರಾಜನು ಹೇಳಿದನು: “ಗಿಡುಗವೇ! ನೀನು ಕೇಳುತ್ತಿರುವುದು ನನ್ನ ಅನುಗ್ರಹವೆಂದು ತಿಳಿಯುತ್ತೇನೆ. ಇಂದು ನಾನು ನಿನಗೆ ಇದರ ಸರಿಸಮನಾದ ತೂಕದ ನನ್ನ ಮಾಂಸವನ್ನು ಕೊಡುತ್ತೇನೆ.””

03131025 ಲೋಮಶ ಉವಾಚ।
03131025a ಅಥೋತ್ಕೃತ್ಯ ಸ್ವಮಾಂಸಂ ತು ರಾಜಾ ಪರಮಧರ್ಮವಿತ್।
03131025c ತುಲಯಾಮಾಸ ಕೌಂತೇಯ ಕಪೋತೇನ ಸಹಾಭಿಭೋ।।

ಲೋಮಶನು ಹೇಳಿದನು: “ವಿಭೋ! ಕೌಂತೇಯ! ಆ ಪರಮಧರ್ಮವಿದು ರಾಜನು ತನ್ನ ಮಾಂಸವನ್ನು ಕಿತ್ತು ಪಾರಿವಾಳದ ವಿರುದ್ಧ ತುಲನೆ ಮಾಡಿದನು.

03131026a ಧ್ರಿಯಮಾಣಸ್ತು ತುಲಯಾ ಕಪೋತೋ ವ್ಯತಿರಿಚ್ಯತೇ।
03131026c ಪುನಶ್ಚೋತ್ಕೃತ್ಯ ಮಾಂಸಾನಿ ರಾಜಾ ಪ್ರಾದಾದುಶೀನರಃ।।
03131027a ನ ವಿದ್ಯತೇ ಯದಾ ಮಾಂಸಂ ಕಪೋತೇನ ಸಮಂ ಧೃತಂ।
03131027c ತತ ಉತ್ಕೃತ್ತಮಾಂಸೋಽಸಾವಾರುರೋಹ ಸ್ವಯಂ ತುಲಾಂ।।

ಆದರೆ ತಕ್ಕಡಿಯಲ್ಲಿ ಪಾರಿವಾಳವು ಭಾರವಾಗಿತ್ತು. ಆಗ ರಾಜಾ ಉಶೀನರನು ಪುನಃ ತನ್ನ ಮಾಂಸವನ್ನು ಕಿತ್ತು ಕೊಟ್ಟನು. ಆದರೂ ಅವನ ಮಾಂಸವು ಪಾರಿವಾಳದ ತೂಕಕ್ಕೆ ಸಮನಾಗಲಿಲ್ಲ. ಇನ್ನೂ ತುಂಡುಮಾಡಲು ಮಾಂಸವೇ ಇಲ್ಲದಾಗಲು, ಸ್ವಯಂ ತಾನೇ ತಕ್ಕಡಿಯನ್ನೇರಿದನು.

03131028 ಶ್ಯೇನ ಉವಾಚ।
03131028a ಇಂದ್ರೋಽಹಮಸ್ಮಿ ಧರ್ಮಜ್ಞ ಕಪೋತೋ ಹವ್ಯವಾಡಯಂ।
03131028c ಜಿಜ್ಞಾಸಮಾನೌ ಧರ್ಮೇ ತ್ವಾಂ ಯಜ್ಞವಾಟಮುಪಾಗತೌ।।

ಗಿಡುಗವು ಹೇಳಿತು: “ಧರ್ಮಜ್ಞ! ನಾನು ಇಂದ್ರ ಮತ್ತು ಪಾರಿವಾಳವು ಅಗ್ನಿಯು. ಧರ್ಮದಲ್ಲಿ ನಿನ್ನನ್ನು ಪರೀಕ್ಷಿಸಲು ನಾವೀರ್ವರು ನಿನ್ನ ಯಜ್ಞವಾಟಿಗೆಗೆ ಬಂದಿದ್ದೇವೆ.

03131029a ಯತ್ತೇ ಮಾಂಸಾನಿ ಗಾತ್ರೇಭ್ಯ ಉತ್ಕೃತ್ತಾನಿ ವಿಶಾಂ ಪತೇ।
03131029c ಏಷಾ ತೇ ಭಾಸ್ವರೀ ಕೀರ್ತಿರ್ಲೋಕಾನಭಿಭವಿಷ್ಯತಿ।।

ವಿಶಾಂಪತೇ! ನಿನ್ನ ದೇಹದಿಂದಲೇ ಮಾಂಸವನ್ನು ಕಿತ್ತು ಕೊಟ್ಟಿರುವುದು ನಿನ್ನನ್ನು ಲೋಕದಲ್ಲಿ ಬೆಳಗಿಸಿ ಕೀರ್ತಿವಂತನಾಗಿಸುತ್ತದೆ.

03131030a ಯಾವಲ್ಲೋಕೇ ಮನುಷ್ಯಾಸ್ತ್ವಾಂ ಕಥಯಿಷ್ಯಂತಿ ಪಾರ್ಥಿವ।
03131030c ತಾವತ್ಕೀರ್ತಿಶ್ಚ ಲೋಕಾಶ್ಚ ಸ್ಥಾಸ್ಯಂತಿ ತವ ಶಾಶ್ವತಾಃ।।

ಪಾರ್ಥಿವ! ಎಂದಿನವರೆಗೆ ಲೋಕದಲ್ಲಿ ಮನುಷ್ಯರು ನಿನ್ನ ಕುರಿತು ಹೇಳುತ್ತಿರುತ್ತಾರೋ ಅಲ್ಲಿಯ ವರೆಗೆ ನಿನ್ನ ಕೀರ್ತಿಯು ಲೋಕದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತದೆ.””

03131031 ಲೋಮಶ ಉವಾಚ।
03131031a ತತ್ಪಾಂಡವೇಯ ಸದನಂ ರಾಜ್ಞಸ್ತಸ್ಯ ಮಹಾತ್ಮನಃ।
03131031c ಪಶ್ಯಸ್ವೈತನ್ಮಯಾ ಸಾರ್ಧಂ ಪುಣ್ಯಂ ಪಾಪಪ್ರಮೋಚನಂ।।

ಲೋಮಶನು ಹೇಳಿದನು: “ಪಾಂಡವೇಯ! ಇದು ಆ ಮಹಾತ್ಮ ರಾಜನ ಸದನ. ನನ್ನೊಡನೆ ಆ ಪುಣ್ಯ ಪಾಪಪ್ರಮೋಚನ ಸ್ಥಳವನ್ನು ನೋಡು.

03131032a ಅತ್ರ ವೈ ಸತತಂ ದೇವಾ ಮುನಯಶ್ಚ ಸನಾತನಾಃ।
03131032c ದೃಶ್ಯಂತೇ ಬ್ರಾಹ್ಮಣೈ ರಾಜನ್ಪುಣ್ಯವದ್ಭಿರ್ಮಹಾತ್ಮಭಿಃ।।

ರಾಜನ್! ಇಲ್ಲಿಯೇ ದೇವತೆಗಳು ಮತ್ತು ಸನಾತನ ಮುನಿಗಳು ಸತತವಾಗಿ ಪುಣ್ಯವಾದಿಗಳಾದ ಮಹಾತ್ಮ ಬ್ರಾಹ್ಮಣರಿಗೆ ಕಾಣಿಸಿಕೊಳ್ಳುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಶ್ಯೇನಕಪೋತೀಯೇ ಏಕತ್ರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಶ್ಯೇನಕಪೋತದಲ್ಲಿ ನೂರಾಮೂವತ್ತೊಂದನೆಯ ಅಧ್ಯಾಯವು.