128 ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 128

ಸಾರ

ತಾಯಂದಿರು ಚೀರಿ ಪ್ರತಿಭಟಿಸಿದರೂ ಯಾಜಕನು ಜಂತುವನ್ನು ಬಲಾತ್ಕಾರವಾಗಿ ಯಜ್ಞಕ್ಕೆ ಆಹುತಿಯನ್ನಾಗಿತ್ತುದು; ಹೋಮಧೂಮವನ್ನು ಸೇವಿಸಿ ಗರ್ಭಿಣಿಯರಾದ ರಾಜಪತ್ನಿಯರಲ್ಲಿ ಒಂದು ನೂರು ಮಕ್ಕಳು ಜನಿಸುವುದು; ಜಂತುವು ಹಿರಿಯವನಾಗಿ ಚಿಹ್ನೆಯೊಂದಿಗೆ ಅವನದೇ ತಾಯಿಯಲ್ಲಿ ಪುನಃ ಜನಿಸಿದುದು (1-9). ರಾಜ ಸೋಮಕನು ಮರಣ ಹೊಂದಿದಾಗ ತನ್ನ ಪುರೋಹಿತನು ನರಕದಲ್ಲಿ ನರಳುತ್ತಿರುವುದನ್ನು ನೋಡಿ, ಅವನಿಗೆ ಕೊಡುವ ಶಿಕ್ಷೆಯನ್ನು ತನಗೆ ಕೊಡಬೇಕೆಂದು ಧರ್ಮರಾಜನಿಗೆ ಕೇಳಿದುದು (10-12). ಒಬ್ಬನು ಮಾಡಿದುದರ ಫಲವನ್ನು ಇನ್ನೊಬ್ಬನು ಅನುಭವಿಸಲಿಕ್ಕಾಗುವುದಿಲ್ಲವೆಂದು ಧರ್ಮನು ಹೇಳಲು ಸೋಮಕನು ತನ್ನ ಪುರೋಹಿತನೊಂದಿಗೆ ತಾನೂ ಇದ್ದುಕೊಂಡು ನರಕವನ್ನು ಅನುಭವಿಸಿ ನಂತರ ಸದ್ಗತಿಯನ್ನು ಪಡೆದುದು (13-19).

03128001 ಸೋಮಕ ಉವಾಚ।
03128001a ಬ್ರಹ್ಮನ್ಯದ್ಯದ್ಯಥಾ ಕಾರ್ಯಂ ತತ್ತತ್ಕುರು ತಥಾ ತಥಾ।
03128001c ಪುತ್ರಕಾಮತಯಾ ಸರ್ವಂ ಕರಿಷ್ಯಾಮಿ ವಚಸ್ತವ।।

ಸೋಮಕನು ಹೇಳಿದನು: “ಬ್ರಹ್ಮನ್! ಯಾವ್ಯಾವಾಗ ಏನೇನನ್ನು ಮಾಡಬೇಕೋ ಹಾಗೆಯೇ ಮಾಡು. ಮಕ್ಕಳನ್ನು ಪಡೆಯುವ ಆಸೆಯಿಂದ ನೀನು ಹೇಳಿದುದೆಲ್ಲವನ್ನೂ ಮಾಡುತ್ತೇನೆ.””

03128002 ಲೋಮಶ ಉವಾಚ।
03128002a ತತಃ ಸ ಯಾಜಯಾಮಾಸ ಸೋಮಕಂ ತೇನ ಜಂತುನಾ।
03128002c ಮಾತರಸ್ತು ಬಲಾತ್ಪುತ್ರಮಪಾಕರ್ಷುಃ ಕೃಪಾನ್ವಿತಾಃ।।

ಲೋಮಶನು ಹೇಳಿದನು: “ಅನಂತರ ಅವನು ಸೋಮಕನಿಗಾಗಿ ಜಂತುವನ್ನು ಆಹುತಿಯನ್ನಾಗಿತ್ತನು. ಆದರೆ ಕೃಪಾನ್ವಿತ ತಾಯಂದಿರು ಆ ಬಾಲಕನನ್ನು ಬಲಾತ್ಕಾರವಾಗಿ ಎಳೆದಿಟ್ಟುಕೊಂಡರು.

03128003a ಹಾ ಹತಾಃ ಸ್ಮೇತಿ ವಾಶಂತ್ಯಸ್ತೀವ್ರಶೋಕಸಮನ್ವಿತಾಃ।
03128003c ತಂ ಮಾತರಃ ಪ್ರತ್ಯಕರ್ಷನ್ಗೃಹೀತ್ವಾ ದಕ್ಷಿಣೇ ಕರೇ।।
03128003e ಸವ್ಯೇ ಪಾಣೌ ಗೃಹೀತ್ವಾ ತು ಯಾಜಕೋಽಪಿ ಸ್ಮ ಕರ್ಷತಿ।।

“ಅಯ್ಯೋ ನಾವು ನಾಶಗೊಂಡೆವು!” ಎಂದು ತೀವ್ರ ಶೋಕಸಮಾನ್ವಿತರಾಗಿ ಆ ತಾಯಂದಿರು ಅವನ ಬಲಗೈಯನ್ನು ಹಿಡಿದು ಎಳೆದರು. ಆದರೆ ಯಾಜಕನು ಅವನ ಎಡಗೈಯನ್ನು ಹಿಡಿದು ಹಿಂದಕ್ಕೆ ಎಳೆದುಕೊಂಡನು.

03128004a ಕುರರೀಣಾಮಿವಾರ್ತಾನಾಮಪಾಕೃಷ್ಯ ತು ತಂ ಸುತಂ।
03128004c ವಿಶಸ್ಯ ಚೈನಂ ವಿಧಿನಾ ವಪಾಮಸ್ಯ ಜುಹಾವ ಸಃ।।

ಚೀರಾಡುತ್ತಿರುವ ಆರ್ತರಿಂದ ಆ ಮಗನನನ್ನು ಎಳೆದು ವಿಧಿವತ್ತಾಗಿ ಅವನನ್ನು ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು.

03128005a ವಪಾಯಾಂ ಹೂಯಮಾನಾಯಾಂ ಗಂಧಮಾಘ್ರಾಯ ಮಾತರಃ।
03128005c ಆರ್ತಾ ನಿಪೇತುಃ ಸಹಸಾ ಪೃಥಿವ್ಯಾಂ ಕುರುನಂದನ।।
03128005e ಸರ್ವಾಶ್ಚ ಗರ್ಭಾನಲಭಂಸ್ತತಸ್ತಾಃ ಪಾರ್ಥಿವಾಂಗನಾಃ।।

ಕುರುನಂದನ! ಅವನ ದೇಹವನ್ನು ಆಹುತಿಯನ್ನಾಗಿ ಕೊಡುತ್ತಿರುವಾಗ ಆರ್ತ ತಾಯಂದಿರು ಆ ಹೊಗೆಯನ್ನು ಸೇವಿಸಿ ತಕ್ಷಣವೇ ಭುವಿಯ ಮೇಲೆ ಉರುಳಿ ಬಿದ್ದರು. ಅನಂತರ ರಾಜನ ಪತ್ನಿಯರೆಲ್ಲರೂ ಗರ್ಭವತಿಯರಾದರು.

03128006a ತತೋ ದಶಸು ಮಾಸೇಷು ಸೋಮಕಸ್ಯ ವಿಶಾಂ ಪತೇ।
03128006c ಜಜ್ಞೇ ಪುತ್ರಶತಂ ಪೂರ್ಣಂ ತಾಸು ಸರ್ವಾಸು ಭಾರತ।।

ಭಾರತ! ವಿಶಾಂಪತೇ! ಹತ್ತು ತಿಂಗಳಿನ ನಂತರ ಸೋಮಕನಿಗೆ ಅವರೆಲ್ಲರಲ್ಲಿ ಸಂಪೂರ್ಣವಾಗಿ ಒಂದು ನೂರು ಮಕ್ಕಳು ಜನಿಸಿದರು.

03128007a ಜಂತುರ್ಜ್ಯೇಷ್ಠಃ ಸಮಭವಜ್ಜನಿತ್ರ್ಯಾಮೇವ ಭಾರತ।
03128007c ಸ ತಾಸಾಮಿಷ್ಟ ಏವಾಸೀನ್ನ ತಥಾನ್ಯೇ ನಿಜಾಃ ಸುತಾಃ।।

ಭಾರತ! ಅದೇ ತಾಯಿಯಲ್ಲಿ ಜಂತುವು ಹಿರಿಯವನಾಗಿ ಜನಿಸಿದನು. ಮತ್ತು ಅವರೆಲ್ಲರೂ ತಮ್ಮದೇ ಮಕ್ಕಳಿಗಿಂತ ಅಧಿಕವಾಗಿ ಅವನನ್ನು ಪ್ರೀತಿಸಿದರು.

03128008a ತಚ್ಚ ಲಕ್ಷಣಮಸ್ಯಾಸೀತ್ಸೌವರ್ಣಂ ಪಾರ್ಶ್ವ ಉತ್ತರೇ।
03128008c ತಸ್ಮಿನ್ಪುತ್ರಶತೇ ಚಾಗ್ರ್ಯಃ ಸ ಬಭೂವ ಗುಣೈರ್ಯುತಃ।।

ಅವನ ಎಡಭಾಗದಲ್ಲಿ ಬಂಗಾರದ ಚಿಹ್ನೆಯಿತ್ತು. ಗುಣಗಳಿಂದ ಸಮಾಯುಕ್ತನಾಗಿ ಅವನು ನೂರು ಮಕ್ಕಳಲ್ಲಿ ಅಗ್ರನೆನಿಸಿಕೊಂಡನು.

03128009a ತತಃ ಸ ಲೋಕಮಗಮತ್ಸೋಮಕಸ್ಯ ಗುರುಃ ಪರಂ।
03128009c ಅಥ ಕಾಲೇ ವ್ಯತೀತೇ ತು ಸೋಮಕೋಽಪ್ಯಗಮತ್ಪರಂ।।

ಅನಂತರ ಸೋಮಕನ ಗುರುವು ಪರಮ ಲೋಕವನ್ನು ಸೇರಿದನು. ಕಾಲಕಳೆದಂತೆ ಸೋಮಕನೂ ಕೂಡ ಪರಮ ಗತಿಯನ್ನು ಹೊಂದಿದನು.

03128010a ಅಥ ತಂ ನರಕೇ ಘೋರೇ ಪಚ್ಯಮಾನಂ ದದರ್ಶ ಸಃ।
03128010c ತಮಪೃಚ್ಚತ್ಕಿಮರ್ಥಂ ತ್ವಂ ನರಕೇ ಪಚ್ಯಸೇ ದ್ವಿಜ।।

ಅಲ್ಲಿ ಅವನು ಘೋರ ನರಕದಲ್ಲಿ ಸುಡುತ್ತಿರುವುದನ್ನು ಕಂಡನು. ಆಗ ನೀನು ಏಕೆ ನರಕದಲ್ಲಿ ಸುಡುತ್ತಿದ್ದೀಯೆ ಎಂದು ಆ ದ್ವಿಜನನ್ನು ಕೇಳಿದನು.

03128011a ತಮಬ್ರವೀದ್ಗುರುಃ ಸೋಽಥ ಪಚ್ಯಮಾನೋಽಗ್ನಿನಾ ಭೃಶಂ।
03128011c ತ್ವಂ ಮಯಾ ಯಾಜಿತೋ ರಾಜಂಸ್ತಸ್ಯೇದಂ ಕರ್ಮಣಃ ಫಲಂ।।

ಆಗ ಅಗ್ನಿಯಲ್ಲಿ ಚೆನ್ನಾಗಿ ಸುಡುತ್ತಿರುವ ಅವನ ಗುರುವು ಹೇಳಿದನು: “ರಾಜನ್! ನಿನಗೋಸ್ಕರ ನಾನು ಆ ಯಜ್ಞವನ್ನು ನಡೆಸಿದೆ. ಆ ಕರ್ಮದ ಫಲವೇ ಇದು!”

03128012a ಏತಚ್ಛೃತ್ವಾ ಸ ರಾಜರ್ಷಿರ್ಧರ್ಮರಾಜಾನಮಬ್ರವೀತ್।
03128012c ಅಹಮತ್ರ ಪ್ರವೇಕ್ಷ್ಯಾಮಿ ಮುಚ್ಯತಾಂ ಮಮ ಯಾಜಕಃ।।
03128012e ಮತ್ಕೃತೇ ಹಿ ಮಹಾಭಾಗಃ ಪಚ್ಯತೇ ನರಕಾಗ್ನಿನಾ।।

ಇದನ್ನು ಕೇಳಿದ ಆ ರಾಜರ್ಷಿಯು ಧರ್ಮರಾಜನಿಗೆ ಹೇಳಿದನು: “ನನ್ನ ಯಾಜಕನನ್ನು ಬಿಡುಗಡೆಮಾಡು. ನಾನು ಅವನ ಜಾಗಕ್ಕೆ ಹೋಗುತ್ತೇನೆ. ನನಗಾಗಿ ಮಾಡಿದ ಕಾರ್ಯದಿಂದಲೇ ಆ ಮಹಾಭಾಗನು ನರಕಾಗ್ನಿಯಲ್ಲಿ ಸುಡುತ್ತಿದ್ದಾನೆ.”

03128013 ಧರ್ಮ ಉವಾಚ।
03128013a ನಾನ್ಯಃ ಕರ್ತುಃ ಫಲಂ ರಾಜನ್ನುಪಭುಂಕ್ತೇ ಕದಾ ಚನ।
03128013c ಇಮಾನಿ ತವ ದೃಶ್ಯಂತೇ ಫಲಾನಿ ದದತಾಂ ವರ।।

ಧರ್ಮನು ಹೇಳಿದನು: “ರಾಜನ್! ಒಬ್ಬನು ಮಾಡಿದುದರ ಫಲವನ್ನು ಇನ್ನೊಬ್ಬನು ಎಂದೂ ಅನುಭವಿಸುವುದಿಲ್ಲ. ದಾನಿಗಳಲ್ಲಿ ಶ್ರೇಷ್ಠ! ನೀನು ನೋಡುತ್ತಿರುವುದು ನಿನ್ನ ಫಲಗಳು.”

03128014 ಸೋಮಕ ಉವಾಚ।
03128014a ಪುಣ್ಯಾನ್ನ ಕಾಮಯೇ ಲೋಕಾನೃತೇಽಹಂ ಬ್ರಹ್ಮವಾದಿನಂ।
03128014c ಇಚ್ಚಾಮ್ಯಹಮನೇನೈವ ಸಹ ವಸ್ತುಂ ಸುರಾಲಯೇ।।
03128015a ನರಕೇ ವಾ ಧರ್ಮರಾಜ ಕರ್ಮಣಾಸ್ಯ ಸಮೋ ಹ್ಯಹಂ।
03128015c ಪುಣ್ಯಾಪುಣ್ಯಫಲಂ ದೇವ ಸಮಮಸ್ತ್ವಾವಯೋರಿದಂ।।

ಸೋಮಕನು ಹೇಳಿದನು: “ಈ ಬ್ರಹ್ಮವಾದಿನಿಯಿಲ್ಲದೇ ನಾನು ಲೋಕದ ಪುಣ್ಯಗಳನ್ನು ಬಯಸುವುದಿಲ್ಲ. ಧರ್ಮರಾಜ! ಇವನೊಟ್ಟಿಗೆ ವಾಸಿಸಲು - ಸುರಾಲಯವಿರಲಿ ಅಥವಾ ನರಕದಲ್ಲಿರಲಿ – ಬಯಸುತ್ತೇನೆ. ಇವನ ಕರ್ಮವೂ ನನ್ನ ಕರ್ಮವೂ ಒಂದೇ. ದೇವ! ಪುಣ್ಯವಾಗಿರಲಿ ಅಪುಣ್ಯವಾಗಿರಲಿ ನಾವಿಬ್ಬರು ಒಂದೇ ಫಲವನ್ನು ಹಂಚಿಕೊಳ್ಳಬೇಕು.”

03128016 ಧರ್ಮ ಉವಾಚ।
03128016a ಯದ್ಯೇವಮೀಪ್ಸಿತಂ ರಾಜನ್ಭುಂಕ್ಷ್ವಾಸ್ಯ ಸಹಿತಃ ಫಲಂ।
03128016c ತುಲ್ಯಕಾಲಂ ಸಹಾನೇನ ಪಶ್ಚಾತ್ಪ್ರಾಪ್ಸ್ಯಸಿ ಸದ್ಗತಿಂ।।

ಧರ್ಮನು ಹೇಳಿದನು: “ರಾಜನ್! ಅದನ್ನೇ ನೀನು ಬಯಸುವೆಯಾದರೆ ಅವನೊಂದಿಗೆ ಅವನ ಫಲವನ್ನು ಅಷ್ಟೇ ಕಾಲ ಅನುಭವಿಸು. ಅನಂತರ ಸದ್ಗತಿಯನ್ನು ಹೊಂದುತ್ತೀಯೆ.””

03128017 ಲೋಮಶ ಉವಾಚ।
03128017a ಸ ಚಕಾರ ತಥಾ ಸರ್ವಂ ರಾಜಾ ರಾಜೀವಲೋಚನಃ।
03128017c ಪುನಶ್ಚ ಲೇಭೇ ಲೋಕಾನ್ಸ್ವಾನ್ಕರ್ಮಣಾ ನಿರ್ಜಿತಾಂ ಶುಭಾನ್।।
03128017e ಸಹ ತೇನೈವ ವಿಪ್ರೇಣ ಗುರುಣಾ ಸ ಗುರುಪ್ರಿಯಃ।।

ಲೋಮಶನು ಹೇಳಿದನು: “ಆ ರಾಜೀವಲೋಚನ ರಾಜನು ಹಾಗೆಯೇ ಎಲ್ಲವನ್ನೂ ಮಾಡಿದನು ಮತ್ತು ಗುರುಪ್ರಿಯನಾದ ಅವನು ಆ ವಿಪ್ರ ಗುರುವಿನೊಂದಿಗೆ ಪುನಃ ತನ್ನ ಕರ್ಮಗಳಿಂದ ಗೆದ್ದಿದ್ದ ಶುಭ ಲೋಕಗಳನ್ನು ಪಡೆದನು.

03128018a ಏಷ ತಸ್ಯಾಶ್ರಮಃ ಪುಣ್ಯೋ ಯ ಏಷೋಽಗ್ರೇ ವಿರಾಜತೇ।
03128018c ಕ್ಷಾಂತ ಉಷ್ಯಾತ್ರ ಷಡ್ರಾತ್ರಂ ಪ್ರಾಪ್ನೋತಿ ಸುಗತಿಂ ನರಃ।।

ನಮಗೆ ತೋರುತ್ತಿರುವ ಇದೇ ಅವನ ಪುಣ್ಯಾಶ್ರಮ. ಇಲ್ಲಿ ಆರು ರಾತ್ರಿಗಳನ್ನು ಕಳೆದವನು ಒಳ್ಳೆಯ ಗತಿಯನ್ನು ಹೊಂದುತ್ತಾನೆ.

03128019a ಏತಸ್ಮಿನ್ನಪಿ ರಾಜೇಂದ್ರ ವತ್ಸ್ಯಾಮೋ ವಿಗತಜ್ವರಾಃ।
03128019c ಷಡ್ರಾತ್ರಂ ನಿಯತಾತ್ಮಾನಃ ಸಜ್ಜೀಭವ ಕುರೂದ್ವಹ।।

ಕುರೂದ್ವಹ! ರಾಜೇಂದ್ರ! ಇಲ್ಲಿ ನಾವೂ ಕೂಡ ಚಿಂತೆಯಿಲ್ಲದೇ ನಿಯತಾತ್ಮರಾಗಿ ಆರು ರಾತ್ರಿಗಳನ್ನು ಕಳೆಯೋಣ! ಅಣಿಯಾಗು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನೇ ಅಷ್ಟವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಜಂತೂಪಖ್ಯಾನದಲ್ಲಿ ನೂರಾಇಪ್ಪತ್ತೆಂಟನೆಯ ಅಧ್ಯಾಯವು.