127 ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 127

ಸಾರ

ರಾಜ ಸೋಮಕನಿಗೆ ವೃದ್ಧಾಪ್ಯದಲ್ಲಿ ಅವನ ನೂರು ಪತ್ನಿಯರಲ್ಲಿ ಜಂತು ಎಂಬ ಹೆಸರಿನ ಪುತ್ರನೋರ್ವನು ಜನಿಸಿದ್ದುದು; ಎಲ್ಲ ತಾಯಂದಿರೂ ಅವನನ್ನು ಮುದ್ದಿಸಿ ಬೆಳೆಸುವುದು; ಇರುವೆ ಕಚ್ಚಿ ಅತ್ತ ಜಂತುವನ್ನು ನೋಡಿ ಎಲ್ಲ ತಾಯಂದಿರೂ ರೋದನ ಮಾಡಿದುದನ್ನು ಕೇಳಿ ರೋಷಗೊಂಡ ರಾಜನು ಪುರೋಹಿತರಲ್ಲಿ “ಒಬ್ಬನೇ ಮಗನಿರುವುದಕ್ಕಿಂದ ಮಕ್ಕಳಿಲ್ಲದಿರುವುದೇ ಒಳ್ಳೆಯದು” ಎಂದು ಹೇಳಿ ನೂರು ಮಕ್ಕಳನ್ನು ಪಡೆಯುವ ವಿಧಾನ ಯಾವುದಾದರೂ ಇದೆಯೇ ಎಂದು ಕೇಳುವುದು (1-16). ಜಂತುವನ್ನು ಆಹುತಿಯನ್ನಾಗಿತ್ತು ಯಾಗಮಾಡಿ ಅದರ ಧೂಮವನ್ನು ರಾಜಪತ್ನಿಯರು ಸೇವಿಸಿದರೆ ನೂರು ಮಕ್ಕಳಾಗುತ್ತಾರೆ ಎಂದು ಋತ್ವಿಜರು ಸೂಚಿಸುವುದು (17-21).

03127001 ಯುಧಿಷ್ಠಿರ ಉವಾಚ।
03127001a ಕಥಂವೀರ್ಯಃ ಸ ರಾಜಾಭೂತ್ಸೋಮಕೋ ವದತಾಂ ವರ।
03127001c ಕರ್ಮಾಣ್ಯಸ್ಯ ಪ್ರಭಾವಂ ಚ ಶ್ರೋತುಮಿಚ್ಚಾಮಿ ತತ್ತ್ವತಃ।।

ಯುಧಿಷ್ಠಿರನು ಹೇಳಿದನು: “ಮಾತುಗಾರರಲ್ಲಿ ಶ್ರೇಷ್ಠನೇ! ರಾಜಾ ಸೋಮಕನು ಎಂಥಹ ವೀರ್ಯವಂತನಾಗಿದ್ದನು? ಅವನ ಕರ್ಮಗಳ ಮತ್ತು ಪ್ರಭಾವದ ಕುರಿತು ನಿನ್ನಿಂದ ಕೇಳ ಬಯಸುತ್ತೇನೆ.”

03127002 ಲೋಮಶ ಉವಾಚ।
03127002a ಯುಧಿಷ್ಠಿರಾಸೀನ್ನೃಪತಿಃ ಸೋಮಕೋ ನಾಮ ಧಾರ್ಮಿಕಃ।
03127002c ತಸ್ಯ ಭಾರ್ಯಾಶತಂ ರಾಜನ್ಸದೃಶೀನಾಮಭೂತ್ತದಾ।।

ಲೋಮಶನು ಹೇಳಿದನು: “ಯುಧಿಷ್ಠಿರ! ರಾಜನ್! ಸೋಮಕ ಎಂಬ ಹೆಸರಿನ ಧಾರ್ಮಿಕ ರಾಜನಿದ್ದನು. ಅವನಿಗೆ ಸದೃಶರಾದ ನೂರು ಪತ್ನಿಯರಿದ್ದರು.

03127003a ಸ ವೈ ಯತ್ನೇನ ಮಹತಾ ತಾಸು ಪುತ್ರಂ ಮಹೀಪತಿಃ।
03127003c ಕಂ ಚಿನ್ನಾಸಾದಯಾಮಾಸ ಕಾಲೇನ ಮಹತಾ ಅಪಿ।।

ಆದರೆ ಆ ಮಹೀಪತಿಯು ಎಷ್ಟು ಪ್ರಯತ್ನಿಸಿದರೂ ಬಹಳ ಕಾಲದವರೆಗೆ ಅವರಲ್ಲಿ ಮಗನನ್ನು ಪಡೆಯಲಾಗಲಿಲ್ಲ.

03127004a ಕದಾ ಚಿತ್ತಸ್ಯ ವೃದ್ಧಸ್ಯ ಯತಮಾನಸ್ಯ ಯತ್ನತಃ।
03127004c ಜಂತುರ್ನಾಮ ಸುತಸ್ತಸ್ಮಿನ್ಸ್ತ್ರೀಶತೇ ಸಮಜಾಯತ।।

ಹೀಗೆ ಅವನು ಪ್ರಯತ್ನಿಸುತ್ತಿರಲು, ವೃದ್ಧಾಪ್ಯದಲ್ಲಿ ಜಂತು ಎನ್ನುವ ಓರ್ವ ಮಗನು ಆ ನೂರು ಸ್ತ್ರೀಯರಲ್ಲಿ ಹುಟ್ಟಿದನು.

03127005a ತಂ ಜಾತಂ ಮಾತರಃ ಸರ್ವಾಃ ಪರಿವಾರ್ಯ ಸಮಾಸತೇ।
03127005c ಸತತಂ ಪೃಷ್ಠತಃ ಕೃತ್ವಾ ಕಾಮಭೋಗಾನ್ವಿಶಾಂ ಪತೇ।।

ವಿಶಾಂಪತೇ! ಅವನು ಹುಟ್ಟಿದಾಗ ಎಲ್ಲ ತಾಯಂದಿರೂ ಅವನನ್ನು ಸುತ್ತುವರೆದು ಸದಾಕಾಲವೂ ಅವನನ್ನು ಎತ್ತಿ ಹಿಡಿದು ಅವನ ಕಾಮಭೋಗಗಳನ್ನೆಲ್ಲಾ ಪೂರೈಸುತ್ತಿದ್ದರು.

03127006a ತತಃ ಪಿಪೀಲಿಕಾ ಜಂತುಂ ಕದಾ ಚಿದದಶತ್ಸ್ಫಿಜಿ।
03127006c ಸ ದಷ್ಟೋ ವ್ಯನದದ್ರಾಜಂಸ್ತೇನ ದುಃಖೇನ ಬಾಲಕಃ।।

ರಾಜನ್! ಒಂದು ದಿನ ಜಂತುವಿನ ಕುಂಡೆಯನ್ನು ಒಂದು ಇರುವೆಯು ಕಚ್ಚಿತು ಮತ್ತು ಅದರಿಂದ ದುಃಖಿತನಾದ ಬಾಲಕನು ನೋವಿನಿಂದ ಕಿರುಚಿದನು.

03127007a ತತಸ್ತಾ ಮಾತರಃ ಸರ್ವಾಃ ಪ್ರಾಕ್ರೋಶನ್ಭೃಶದುಃಖಿತಾಃ।
03127007c ಪರಿವಾರ್ಯ ಜಂತುಂ ಸಹಿತಾಃ ಸ ಶಬ್ಧಸ್ತುಮುಲೋಽಭವತ್।।

ಆಗ ಅವನ ಎಲ್ಲ ತಾಯಂದಿರೂ ಬಹು ದುಃಖಿತರಾಗಿ ಜಂತುವನ್ನು ಸುತ್ತುವರಿದು ಅವನೊಂದಿಗೆ ರೋದಿಸಿದರು, ಮತ್ತು ಅವರ ರೋದನೆಯು ಜೋರಾಗಿ ಕೇಳಿಸುತ್ತಿತ್ತು.

03127008a ತಮಾರ್ತನಾದಂ ಸಹಸಾ ಶುಶ್ರಾವ ಸ ಮಹೀಪತಿಃ।
03127008c ಅಮಾತ್ಯಪರಿಷನ್ಮಧ್ಯೇ ಉಪವಿಷ್ಟಃ ಸಹರ್ತ್ವಿಜೈಃ।।

ಅಮಾತ್ಯರು ಮತ್ತು ಪುರೋಹಿತರ ಮಧ್ಯೆ ಸಮಾಲೋಚನೆಯಲ್ಲಿ ಕುಳಿತಿದ್ದ ರಾಜನು ಒಮ್ಮೆಗೇ ಬಂದ ಆ ಅರ್ತನಾದವನ್ನು ಕೇಳಿದನು.

03127009a ತತಃ ಪ್ರಸ್ಥಾಪಯಾಮಾಸ ಕಿಮೇತದಿತಿ ಪಾರ್ಥಿವಃ।
03127009c ತಸ್ಮೈ ಕ್ಷತ್ತಾ ಯಥಾವೃತ್ತಮಾಚಚಕ್ಷೇ ಸುತಂ ಪ್ರತಿ।।

ತಕ್ಷಣವೇ ರಾಜನು ಅದೇನೆಂದು ಕಂಡುಕೊಂಡುಬರಲು ಸೇವಕನನ್ನು ಕಳುಹಿಸಲು, ಆ ಸೇವಕನು ಹಿಂದಿರುಗಿ ಬಂದು ಅವನ ಮಗನಿಗಾದುದರ ಕುರಿತು ವರದಿಮಾಡಿದನು.

03127010a ತ್ವರಮಾಣಃ ಸ ಚೋತ್ಥಾಯ ಸೋಮಕಃ ಸಹ ಮಂತ್ರಿಭಿಃ।
03127010c ಪ್ರವಿಶ್ಯಾಂತಃಪುರಂ ಪುತ್ರಮಾಶ್ವಾಸಯದರಿಂದಮಃ।।

ಆ ಅರಿಂದಮ ಸೋಮಕನು ಮಂತ್ರಿಗಳೊಡನೆ ಅವಸರದಿಂದ ಮೇಲೆದ್ದು ಅಂತಃಪುರವನ್ನು ಹೊಕ್ಕು ಮಗನನ್ನು ಸಂತೈಸಿದನು.

03127011a ಸಾಂತ್ವಯಿತ್ವಾ ತು ತಂ ಪುತ್ರಂ ನಿಷ್ಕ್ರಮ್ಯಾಂತಃಪುರಾನ್ನೃಪಃ।
03127011c ಋತ್ವಿಜೈಃ ಸಹಿತೋ ರಾಜನ್ಸಹಾಮಾತ್ಯ ಉಪಾವಿಶತ್।।

ಮಗನನ್ನು ಸಂತವಿಸಿ ರಾಜನು ಅಂತಃಪುರದಿಂದ ಹೊರಬಂದನು ಮತ್ತು ರಾಜನ್! ತನ್ನ ಋತ್ವಿಜ ಮತ್ತು ಅಮಾತ್ಯರೊಂದಿಗೆ ಕುಳಿತುಕೊಂಡನು.

03127012 ಸೋಮಕ ಉವಾಚ।
03127012a ಧಿಗಸ್ತ್ವಿಹೈಕಪುತ್ರತ್ವಮಪುತ್ರತ್ವಂ ವರಂ ಭವೇತ್।
03127012c ನಿತ್ಯಾತುರತ್ವಾದ್ಭೂತಾನಾಂ ಶೋಕ ಏವೈಕಪುತ್ರತಾ।।

ಸೋಮಕನು ಹೇಳಿದನು: “ಒಬ್ಬನೇ ಮಗನಿದ್ದುದಕ್ಕೆ ಧಿಕ್ಕಾರ! ಇದಕ್ಕಿಂತಲೂ ಮಕ್ಕಳೇ ಇಲ್ಲದಿದ್ದರೆ ಒಳ್ಳೆಯದಾಗಿರುತ್ತಿತ್ತು. ಎಲ್ಲ ಜೀವಿಗಳಿಗೂ ನಿತ್ಯವೂ ಒಂದಿಲ್ಲೊಂದು ತೊಂದರೆಯಿರುವುದರಿಂದ ಒಬ್ಬನೇ ಮಗನಿದ್ದರೆ ಶೋಕವು ತಪ್ಪಿದ್ದಲ್ಲ.

03127013a ಇದಂ ಭಾರ್ಯಾಶತಂ ಬ್ರಹ್ಮನ್ಪರೀಕ್ಷ್ಯೋಪಚಿತಂ ಪ್ರಭೋ।
03127013c ಪುತ್ರಾರ್ಥಿನಾ ಮಯಾ ವೋಢಂ ನ ಚಾಸಾಂ ವಿದ್ಯತೇ ಪ್ರಜಾ।।

ಬ್ರಾಹ್ಮಣ! ಮಕ್ಕಳಾಗಲೆಂದು ಸರಿಯಾಗಿ ಪರೀಕ್ಷೆಮಾಡಿಯೇ ಈ ನೂರು ಪತ್ನಿಯರನ್ನು ನಾನು ವರಿಸಿದರೂ ಯಾರೂ ಮಕ್ಕಳನ್ನು ಪಡೆಯಲಿಲ್ಲ!

03127014a ಏಕಃ ಕಥಂ ಚಿದುತ್ಪನ್ನಃ ಪುತ್ರೋ ಜಂತುರಯಂ ಮಮ।
03127014c ಯತಮಾನಸ್ಯ ಸರ್ವಾಸು ಕಿಂ ನು ದುಃಖಮತಃ ಪರಂ।।

ಅವರೆಲ್ಲರ ಮೇಲೆ ಪ್ರಯತ್ನಿಸಿದರೂ ಹೇಗೋ ಈ ಜಂತುವು ನನ್ನ ಮಗನಾಗಿ ಹುಟ್ಟಿದನು. ಇದಕ್ಕಿಂತ ಪರಮ ದುಃಖವು ಇನ್ನ್ಯಾವುದಿರಬಹುದು?

03127015a ವಯಶ್ಚ ಸಮತೀತಂ ಮೇ ಸಭಾರ್ಯಸ್ಯ ದ್ವಿಜೋತ್ತಮ।
03127015c ಆಸಾಂ ಪ್ರಾಣಾಃ ಸಮಾಯತ್ತಾ ಮಮ ಚಾತ್ರೈಕಪುತ್ರಕೇ।।

ದ್ವಿಜೋತ್ತಮ! ನನ್ನ ಮತ್ತು ನನ್ನ ಪತ್ನಿಯರ ವಯಸ್ಸು ಮೀರಿಯಾಗಿದೆ. ಅವರಂತೆ ನನ್ನ ಪ್ರಾಣವೂ ಕೂಡ ಈ ಓರ್ವ ಮಗನ ಮೇಲೆ ನಿಂತಿದೆ.

03127016a ಸ್ಯಾನ್ನು ಕರ್ಮ ತಥಾ ಯುಕ್ತಂ ಯೇನ ಪುತ್ರಶತಂ ಭವೇತ್।
03127016c ಮಹತಾ ಲಘುನಾ ವಾಪಿ ಕರ್ಮಣಾ ದುಷ್ಕರೇಣ ವಾ।।

ನೂರು ಮಕ್ಕಳಾಗುವ ಬೇರೆ ಯಾವುದಾದರೂ, ಎಷ್ಟೇ ದೊಡ್ಡದಾಗಲೀ, ಸಣ್ಣದಾಗಲೀ ಅಥವಾ ದುಷ್ಕರವಾಗಿರಲೀ, ಕರ್ಮವಿಲ್ಲವೇ?”

03127017 ಋತ್ವಿಗುವಾಚ।
03127017a ಅಸ್ತಿ ವೈ ತಾದೃಶಂ ಕರ್ಮ ಯೇನ ಪುತ್ರಶತಂ ಭವೇತ್।
03127017c ಯದಿ ಶಕ್ನೋಷಿ ತತ್ಕರ್ತುಮಥ ವಕ್ಷ್ಯಾಮಿ ಸೋಮಕ।।

ಋತ್ವಿಜನು ಹೇಳಿದನು: “ನೀನು ಬಯಸಿದಂತೆ ನೂರು ಪುತ್ರರನ್ನು ಪಡೆಯುವ ಒಂದು ಕರ್ಮವಿದ್ದೇ ಇದೆ. ಸೋಮಕ! ನೀನು ಮಾಡುವೆಯಂತಾದರೆ ನಾನು ಆ ಕರ್ಮದ ಕುರಿತು ಹೇಳುತ್ತೇನೆ.”

03127018 ಸೋಮಕ ಉವಾಚ।
03127018a ಕಾರ್ಯಂ ವಾ ಯದಿ ವಾಕಾರ್ಯಂ ಯೇನ ಪುತ್ರಶತಂ ಭವೇತ್।
03127018c ಕೃತಮೇವ ಹಿ ತದ್ವಿದ್ಧಿ ಭಗವಾನ್ಪ್ರಬ್ರವೀತು ಮೇ।।

ಸೋಮಕನು ಹೇಳಿದನು: “ಕಾರ್ಯವನ್ನು ಮಾಡಬಹುದೋ ಅಥವಾ ಮಾಡಬಾರದೋ - ನೂರು ಮಕ್ಕಳನ್ನು ಪಡೆಯುವ ಕಾರ್ಯವಿದ್ದರೆ ಹೇಳು. ಭಗವಾನ್! ಆ ವಿಧಿಯ ಕುರಿತು ನನಗೆ ವಿವರಿಸಿ ಹೇಳು.”

03127019 ಋತ್ವಿಗುವಾಚ।
03127019a ಯಜಸ್ವ ಜಂತುನಾ ರಾಜಂಸ್ತ್ವಂ ಮಯಾ ವಿತತೇ ಕ್ರತೌ।
03127019c ತತಃ ಪುತ್ರಶತಂ ಶ್ರೀಮದ್ಭವಿಷ್ಯತ್ಯಚಿರೇಣ ತೇ।।

ಋತ್ವಿಜನು ಹೇಳಿದನು: “ರಾಜನ್! ನಾನು ಆ ಕ್ರತುವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಜಂತುವನ್ನು ಆಹುತಿಯನ್ನಾಗಿ ನೀಡು. ತಕ್ಷಣವೇ ನೀನು ನೂರು ಶ್ರೀಮಂತ ಮಕ್ಕಳನ್ನು ಪಡೆಯುತ್ತೀಯೆ.

03127020a ವಪಾಯಾಂ ಹೂಯಮಾನಾಯಾಂ ಧೂಮಮಾಘ್ರಾಯ ಮಾತರಃ।
03127020c ತತಸ್ತಾಃ ಸುಮಹಾವೀರ್ಯಾಂ ಜನಯಿಷ್ಯಂತಿ ತೇ ಸುತಾನ್।।

ಅವನ ಕೊಬ್ಬನ್ನು ಆಹುತಿಯನ್ನಾಗಿ ನೀಡುವಾಗ ತಾಯಂದಿರು ಹೊಗೆಯನ್ನು ಸೇವಿಸಬೇಕು. ಆಗ ಅವರಲ್ಲಿ ನಿನಗೆ ಮಹಾವೀರರಾದ ಮಕ್ಕಳು ಜನಿಸುತ್ತಾರೆ.

03127021a ತಸ್ಯಾಮೇವ ತು ತೇ ಜಂತುರ್ಭವಿತಾ ಪುನರಾತ್ಮಜಃ।
03127021c ಉತ್ತರೇ ಚಾಸ್ಯ ಸೌವರ್ಣಂ ಲಕ್ಷ್ಮ ಪಾರ್ಶ್ವೇ ಭವಿಷ್ಯತಿ।।

ಜಂತುವು ನಿನ್ನ ಮಗನಾಗಿ ಅವಳಲ್ಲಿಯೇ ಪುನಃ ಹುಟ್ಟುತ್ತಾನೆ. ಅವನ ಎಡಬದಿಯಲ್ಲಿ ಬಂಗಾರದ ಚಿಹ್ನೆಯು ಇರುವುದು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಜಂತೂಪಖ್ಯಾನದಲ್ಲಿ ನೂರಾಇಪ್ಪತ್ತೇಳನೆಯ ಅಧ್ಯಾಯವು.