126 ಲೋಮಶತೀರ್ಥಯಾತ್ರಾಯಾಂ ಮಾಂಧಾತೋಪಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 126

ಸಾರ

ರಾಜಾ ಮಾಂಧಾತನು ಆ ಹೆಸರನ್ನು ಹೇಗೆ ಪಡೆದನು ಎಂದು ಕೇಳಲು ಲೋಮಶನು ಯುಧಿಷ್ಠಿರನಿಗೆ ಮಾಂಧಾತ ಚರಿತ್ರೆಯನ್ನು ಪ್ರಾರಂಭಿಸಿದುದು (1-4). ಮಕ್ಕಳಿಲ್ಲದ ಇಕ್ಷ್ವಾಕುವಂಶದ ರಾಜ ಯುವನಾಶ್ವನು ರಾಜ್ಯವನ್ನು ಮಂತ್ರಿಗಳಿಗೊಪ್ಪಿಸಿ ವನದಲ್ಲಿ ವಾಸಿಸುತ್ತಿರಲು ಒಂದು ರಾತ್ರಿ ಬಾಯಾರಿಕೆಯಿಂದ ಬಳಲಿ ಭೃಗುವಿನ ಆಶ್ರಮವನ್ನು ಪ್ರವೇಶಿಸಿದುದು (5-8). ಅದೇ ರಾತ್ರಿ ಯುವನಾಶ್ವನ ಪತ್ನಿಯು ಕುಡಿದು ಇಂದ್ರಸಮಾನ ಪುತ್ರನನ್ನು ಪಡೆಯಲೆಂದು ಭೃಗುವು ಯಾಗಮಾಡಿ, ಕಲಶದಲ್ಲಿ ಅಭಿಮಂತ್ರಿಸಿಟ್ಟ ನೀರನ್ನು ತಿಳಿಯದೆಯೇ ಯುವನಾಶ್ವನು ಕುಡಿದುದು (9-15). ವಿಷಯವನ್ನು ತಿಳಿದ ಭೃಗುವು ನೀನೇ ಮಹಾಬಲಿ ಮಗನಿಗೆ ಜನ್ಮ ನೀಡುತ್ತೀಯೆ ಎನ್ನುವುದು (16-24). ನೂರು ವರ್ಷಗಳ ನಂತರ ಯುವನಾಶ್ವನ ಎಡಭಾಗವು ಸೀಳಿ ಮಹಾತೇಜಸ್ವಿ ಮಗನು ಹೊರಬರಲು, ಇಂದ್ರನು ತನ್ನ ತೋರುಬೆರಳನ್ನಿಟ್ಟು, ತನ್ನಿಂದ ಪೋಷಣೆಯನ್ನು ಪಡೆದ ಅವನನ್ನು ಮಾಂಧಾತನೆಂದು ಕರೆದುದು (25-28). ಮಾಂಧಾತನ ರಾಜ್ಯಭಾರ (29-43).

03126001 ಯುಧಿಷ್ಠಿರ ಉವಾಚ।
03126001a ಮಾಂಧಾತಾ ರಾಜಶಾರ್ದೂಲಸ್ತ್ರಿಷು ಲೋಕೇಷು ವಿಶ್ರುತಃ।
03126001c ಕಥಂ ಜಾತೋ ಮಹಾಬ್ರಹ್ಮನ್ಯೌವನಾಶ್ವೋ ನೃಪೋತ್ತಮಃ।।
03126001e ಕಥಂ ಚೈತಾಂ ಪರಾಂ ಕಾಷ್ಠಾಂ ಪ್ರಾಪ್ತವಾನಮಿತದ್ಯುತಿಃ।।

ಯುಧಿಷ್ಠಿರನು ಹೇಳಿದನು: “ರಾಜಶಾರ್ದೂಲ ಮಾಂಧಾತನು ಮೂರು ಲೋಕಗಳಲ್ಲಿಯೂ ವಿಶ್ರುತನಾಗಿದ್ದನು. ಮಹಾಬ್ರಾಹ್ಮಣ! ಆ ನೃಪೋತ್ತಮ ಯೌವನಾಶ್ವನು ಹೇಗೆ ಹುಟ್ಟಿದ? ಮತ್ತು ಆ ಅಮಿತದ್ಯುತಿಯು ತನ್ನ ಪರಾಕಾಷ್ಟೆಯನ್ನು ಹೇಗೆ ತಲುಪಿದನು?

03126002a ಯಸ್ಯ ಲೋಕಾಸ್ತ್ರಯೋ ವಶ್ಯಾ ವಿಷ್ಣೋರಿವ ಮಹಾತ್ಮನಃ।
03126002c ಏತದಿಚ್ಚಾಮ್ಯಹಂ ಶ್ರೋತುಂ ಚರಿತಂ ತಸ್ಯ ಧೀಮತಃ।।
03126003a ಯಥಾ ಮಾಂಧಾತೃಶಬ್ದಶ್ಚ ತಸ್ಯ ಶಕ್ರಸಮದ್ಯುತೇಃ।
03126003c ಜನ್ಮ ಚಾಪ್ರತಿವೀರ್ಯಸ್ಯ ಕುಶಲೋ ಹ್ಯಸಿ ಭಾಷಿತುಂ।।

ಮೂರು ಲೋಕಗಳೂ ವಿಷ್ಣುವಿನಲ್ಲಿರುವಂತೆ ಆ ಮಹಾತ್ಮನ ವಶದಲ್ಲಿದ್ದವು. ಆ ಧೀಮಂತನ ಚರಿತ್ರೆಯನ್ನು ಕೇಳಲು ಬಯಸುತ್ತೇನೆ. ಆ ಶಕ್ರಸಮದ್ಯುತಿ, ಅಪ್ರತಿಮವೀರನು ಹುಟ್ಟಿದಾಗ ಮಾಂಧಾತ ಎನ್ನುವ ಹೆಸರನ್ನು ಹೇಗೆ ಪಡೆದನು? ನೀನು ಹೇಳುವುದರಲ್ಲಿ ಕುಶಲನಾಗಿದ್ದೀಯೆ!”

03126004 ಲೋಮಶ ಉವಾಚ।
03126004a ಶೃಣುಷ್ವಾವಹಿತೋ ರಾಜನ್ರಾಜ್ಞಸ್ತಸ್ಯ ಮಹಾತ್ಮನಃ।
03126004c ಯಥಾ ಮಾಂಧಾತೃಶಬ್ದೋ ವೈ ಲೋಕೇಷು ಪರಿಗೀಯತೇ।।

ಲೋಮಶನು ಹೇಳಿದನು: “ಆ ರಾಜ ಮಹಾತ್ಮನನ್ನು ಲೋಕವು ಮಾಂಧಾತ ಎನ್ನುವ ಹೆಸರಿನಿಂದ ಏಕೆ ಕರೆಯುತ್ತದೆ ಎನ್ನುವುದನ್ನು ಗಮನವಿಟ್ಟು ಕೇಳು ರಾಜನ್!

03126005a ಇಕ್ಷ್ವಾಕುವಂಶಪ್ರಭವೋ ಯುವನಾಶ್ವೋ ಮಹೀಪತಿಃ।
03126005c ಸೋಽಯಜತ್ಪೃಥಿವೀಪಾಲ ಕ್ರತುಭಿರ್ಭೂರಿದಕ್ಷಿಣೈಃ।।

ಇಕ್ಷ್ವಾಕು ವಂಶದಲ್ಲಿ ಯುವನಾಶ್ವ ಎನ್ನುವ ಮಹೀಪತಿಯು ಹುಟ್ಟಿದ್ದನು. ಆ ಪೃಥ್ವೀಪಾಲನು ಭೂರಿದಕ್ಷಿಣೆಗಳನ್ನೊಡಗೂಡಿದ ಕ್ರತುವಿಗೆ ಯಜಮಾನನಾಗಿದ್ದನು.

03126006a ಅಶ್ವಮೇಧಸಹಸ್ರಂ ಚ ಪ್ರಾಪ್ಯ ಧರ್ಮಭೃತಾಂ ವರಃ।
03126006c ಅನ್ಯೈಶ್ಚ ಕ್ರತುಭಿರ್ಮುಖ್ಯೈರ್ವಿವಿಧೈರಾಪ್ತದಕ್ಷಿಣೈಃ।।

ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಸಾವಿರ ಅಶ್ವಮೇಧಗಳನ್ನು ಪೂರೈಸಿ, ಇನ್ನೂ ಇತರ ಪ್ರಮುಖ ಕ್ರತುಗಳನ್ನು ಆಪ್ತರು ಮತ್ತು ದಕ್ಷಿಣೆಗಳೊಂದಿಗೆ ಕೈಗೊಂಡನು.

03126007a ಅನಪತ್ಯಸ್ತು ರಾಜರ್ಷಿಃ ಸ ಮಹಾತ್ಮಾ ದೃಢವ್ರತಃ।
03126007c ಮಂತ್ರಿಷ್ವಾಧಾಯ ತದ್ರಾಜ್ಯಂ ವನನಿತ್ಯೋ ಬಭೂವ ಹ।।

ಆದರೆ ಆ ದೃಢವ್ರತ ಮಹಾತ್ಮ ರಾಜರ್ಷಿಗೆ ಮಕ್ಕಳಿರಲಿಲ್ಲ. ಆ ರಾಜ್ಯವನ್ನು ಮಂತ್ರಿಗಳಿಗೊಪ್ಪಿಸಿ ಅವನು ವನದಲ್ಲಿಯೇ ನಿತ್ಯ ವಾಸಿಸತೊಡಗಿದನು.

03126008a ಶಾಸ್ತ್ರದೃಷ್ಟೇನ ವಿಧಿನಾ ಸಮ್ಯೋಜ್ಯಾತ್ಮಾನಮಾತ್ಮನಾ।
03126008c ಪಿಪಾಸಾಶುಷ್ಕಹೃದಯಃ ಪ್ರವಿವೇಶಾಶ್ರಮಂ ಭೃಗೋಃ।।

ತನ್ನನ್ನು ಶಾಸ್ತ್ರಗಳಲ್ಲಿ ಹೇಳಿದ ವಿಧಿಗಳಿಗೆ ತೊಡಗಿಸಿಕೊಂಡು, ಬಾಯಾರಿಕೆಯಿಂದ ಒಣಗಿದ ಹೃದಯದವನಾಗಿ ಅವನು ಭೃಗುವಿನ ಆಶ್ರಮವನ್ನು ಪ್ರವೇಶಿಸಿದನು.

03126009a ತಾಮೇವ ರಾತ್ರಿಂ ರಾಜೇಂದ್ರ ಮಹಾತ್ಮಾ ಭೃಗುನಂದನಃ।
03126009c ಇಷ್ಟಿಂ ಚಕಾರ ಸೌದ್ಯುಮ್ನೇರ್ಮಹರ್ಷಿಃ ಪುತ್ರಕಾರಣಾತ್।।

ರಾಜೇಂದ್ರ! ಅದೇ ರಾತ್ರಿ ಮಹಾತ್ಮ ಮಹರ್ಷಿ ಭೃಗುನಂದನನು ಸೌಧ್ಯುಮ್ನಿಗೆ1 ಮಕ್ಕಳಾಗಲೆಂಬ ಕಾರಣದಿಂದ ಯಾಗವನ್ನು ನಡೆಸಿದ್ದನು.

03126010a ಸಂಭೃತೋ ಮಂತ್ರಪೂತೇನ ವಾರಿಣಾ ಕಲಶೋ ಮಹಾನ್।
03126010c ತತ್ರಾತಿಷ್ಠತ ರಾಜೇಂದ್ರ ಪೂರ್ವಮೇವ ಸಮಾಹಿತಃ।।
03126010e ಯತ್ಪ್ರಾಶ್ಯ ಪ್ರಸವೇತ್ತಸ್ಯ ಪತ್ನೀ ಶಕ್ರಸಮಂ ಸುತಂ।।

ಒಂದು ದೊಡ್ಡ ಕಲಶದಲ್ಲಿ ನೀರನ್ನು ತುಂಬಿ ಮಂತ್ರಗಳಿಂದ ಶುದ್ಧೀಕರಿಸಲಾಗಿತ್ತು. ರಾಜೇಂದ್ರ! ಅದನ್ನು ಕುಡಿದು ಅವನ ಪತ್ನಿಯು ಶಕ್ರನ ಸಮನಾದ ಮಗನನ್ನು ಪಡೆಯಲೆಂದು ಮೊದಲೇ ಮಂತ್ರಗಳಿಂದ ಶುದ್ದೀಕರಿಸಿದ ನೀರನ್ನು ದೊಡ್ಡ ಕಲಶದಲ್ಲಿ ತುಂಬಿಸಿಡಲಾಗಿತ್ತು.

03126011a ತಂ ನ್ಯಸ್ಯ ವೇದ್ಯಾಂ ಕಲಶಂ ಸುಷುಪುಸ್ತೇ ಮಹರ್ಷಯಃ।
03126011c ರಾತ್ರಿಜಾಗರಣಶ್ರಾಂತಾಃ ಸೌದ್ಯುಮ್ನಿಃ ಸಮತೀತ್ಯ ತಾನ್।।
03126012a ಶುಷ್ಕಕಂಠಃ ಪಿಪಾಸಾರ್ತಃ ಪಾಣೀಯಾರ್ಥೀ ಭೃಶಂ ನೃಪಃ।
03126012c ತಂ ಪ್ರವಿಶ್ಯಾಶ್ರಮಂ ಶ್ರಾಂತಃ ಪಾಣೀಯಂ ಸೋಽಭ್ಯಯಾಚತ।।

ಅದನ್ನು ವೇದಿಕೆಯ ಮೇಲಿಟ್ಟು ರಾತ್ರಿಯಿಡೀ ಜಾಗರಣೆ ಮಾಡಿ ಆಯಾಸಗೊಂಡಿದ್ದ ಮಹರ್ಷಿಗಳು ಮಲಗಿದ್ದಾಗ ಅಲ್ಲಿಗೆ ಸೌದ್ಯುಮ್ನಿಯು ಬಂದನು. ಅ ರಾಜನು ಕಂಠವೊಣಗಿ, ಅತಿ ಬಾಯಾರಿಕೆಯಿಂದ ನೀರನ್ನು ಅರಸುತ್ತಾ ಆ ಆಶ್ರಮವನ್ನು ಆಯಾಸದಿಂದ ಪ್ರವೇಶಿಸಿ ನೀರನ್ನು ಕೇಳಿದನು.

03126013a ತಸ್ಯ ಶ್ರಾಂತಸ್ಯ ಶುಷ್ಕೇಣ ಕಂಠೇನ ಕ್ರೋಶತಸ್ತದಾ।
03126013c ನಾಶ್ರೌಷೀತ್ಕಶ್ಚನ ತದಾ ಶಕುನೇರಿವ ವಾಶಿತಂ।।

ಆದರೆ ಆಯಾಸಗೊಂಡ ರಾಜನು ಒಣಗಿದ ಕಂಠದಿಂದ ನೀರನ್ನು ಯಾಚಿಸಿದ ಕೂಗು ಯಾರಿಗೂ ಕೇಳಲಿಲ್ಲ. ಅದು ಹಕ್ಕಿಯ ಕೂಗಿನಂತೆ ಕ್ಷೀಣವಾಗಿತ್ತು.

03126014a ತತಸ್ತಂ ಕಲಶಂ ದೃಷ್ಟ್ವಾ ಜಲಪೂರ್ಣಂ ಸ ಪಾರ್ಥಿವಃ।
03126014c ಅಭ್ಯದ್ರವತ ವೇಗೇನ ಪೀತ್ವಾ ಚಾಂಭೋ ವ್ಯವಾಸೃಜತ್।।

ಆಗ ನೀರಿನಿಂದ ತುಂಬಿದ್ದ ಕಲಶವನ್ನು ನೋಡಿ ಆ ರಾಜನು ಬೇಗನೆ ಅಲ್ಲಿಗೆ ಓಡಿ ಹೋಗಿ ನೀರನ್ನು ಕುಡಿದು ಉಳಿದುದನ್ನು ಚೆಲ್ಲಿದನು.

03126015a ಸ ಪೀತ್ವಾ ಶೀತಲಂ ತೋಯಂ ಪಿಪಾಸಾರ್ತೋ ಮಹೀಪತಿಃ।
03126015c ನಿರ್ವಾಣಮಗಮದ್ಧೀಮಾನ್ಸುಸುಖೀ ಚಾಭವತ್ತದಾ।।

ಆ ತಣ್ಣಗಿನ ನೀರನ್ನು ಕುಡಿದು ಬಾಯಾರಿಸಿಕೊಂಡ ಧೀಮಂತ ರಾಜನು ಸಂತೋಷದಿಂದ ಅಲ್ಲಿಯೇ ಗಾಢ ನಿದ್ರೆ ಮಾಡಿದನು.

03126016a ತತಸ್ತೇ ಪ್ರತ್ಯಬುಧ್ಯಂತ ಋಷಯಃ ಸನರಾಧಿಪಾಃ।
03126016c ನಿಸ್ತೋಯಂ ತಂ ಚ ಕಲಶಂ ದದೃಶುಃ ಸರ್ವ ಏವ ತೇ।।

ರಾಜನೊಂದಿಗೆ ಎಚ್ಚರಗೊಂಡ ಋಷಿಗಳು ಎಲ್ಲರೂ ಕಲಶದಿಂದ ನೀರು ಬರಿದಾಗಿದ್ದುದನ್ನು ಕಂಡರು.

03126017a ಕಸ್ಯ ಕರ್ಮೇದಮಿತಿ ಚ ಪರ್ಯಪೃಚ್ಚನ್ಸಮಾಗತಾಃ।
03126017c ಯುವನಾಶ್ವೋ ಮಯೇತ್ಯೇವ ಸತ್ಯಂ ಸಮಭಿಪದ್ಯತ।।

ಅವರೆಲ್ಲರೂ ಒಟ್ಟಿಗೆ “ಇದು ಯಾರ ಕಾರ್ಯ?” ಎಂದು ಕೇಳಲು ಯುವನಾಶ್ವನು “ನಾನೇ ಅದನ್ನು ಮಾಡಿದ್ದುದು” ಎಂದು ಸತ್ಯವನ್ನು ಹೇಳಿದನು.

03126018a ನ ಯುಕ್ತಮಿತಿ ತಂ ಪ್ರಾಹ ಭಗವಾನ್ಭಾರ್ಗವಸ್ತದಾ।
03126018c ಸುತಾರ್ಥಂ ಸ್ಥಾಪಿತಾ ಹ್ಯಾಪಸ್ತಪಸಾ ಚೈವ ಸಂಭೃತಾಃ।।

ಆಗ ಭಗವಾನ್ ಭಾರ್ಗವನು “ಅದು ಸರಿಯಲ್ಲ! ಈ ನೀರನ್ನು ತಪಸ್ಸಿನಿಂದ ಸಂಗ್ರಹಿಸಿ ನಿನ್ನ ಮಗನಿಗೋಸ್ಕರವಾಗಿ ಇಡಲಾಗಿತ್ತು” ಎಂದನು.

03126019a ಮಯಾ ಹ್ಯತ್ರಾಹಿತಂ ಬ್ರಹ್ಮ ತಪ ಆಸ್ಥಾಯ ದಾರುಣಂ।
03126019c ಪುತ್ರಾರ್ಥಂ ತವ ರಾಜರ್ಷೇ ಮಹಾಬಲಪರಾಕ್ರಮ।।

“ರಾಜರ್ಷೇ! ನಿನಗೆ ಮಹಾಬಲ ಪರಾಕ್ರಮಿಯಾದ ಮಗನಾಗಲೆಂದು ದಾರುಣವಾದ ತಪಸ್ಸಿನ ನಂತರ ಒಬ್ಬ ಬ್ರಾಹ್ಮಣನನ್ನು ಅದಕ್ಕೆ ನಿಯೋಗಿಸಿದ್ದೆ.

03126020a ಮಹಾಬಲೋ ಮಹಾವೀರ್ಯಸ್ತಪೋಬಲಸಮನ್ವಿತಃ।
03126020c ಯಃ ಶಕ್ರಮಪಿ ವೀರ್ಯೇಣ ಗಮಯೇದ್ಯಮಸಾದನಂ।।

ತನ್ನ ವೀರ್ಯದಿಂದ ಶಕ್ರನನ್ನೂ ಯಮಸದನಕ್ಕೆ ಕಳುಹಿಸಬಲ್ಲ ತಪೋಬಲಸಮನ್ವಿತನಾದ, ಮಹಾಬಲಶಾಲಿ, ಮಹಾವೀರ ಮಗನಿಗಾಗಿ.

03126021a ಅನೇನ ವಿಧಿನಾ ರಾಜನ್ಮಯೈತದುಪಪಾದಿತಂ।
03126021c ಅಬ್ಭಕ್ಷಣಂ ತ್ವಯಾ ರಾಜನ್ನಯುಕ್ತಂ ಕೃತಮದ್ಯ ವೈ।।

ರಾಜನ್! ಈ ವಿಧಿಯಿಂದ ಅದನ್ನು ತಯಾರಿಸಿದ್ದೆ. ರಾಜನ್! ಇಂದು ನೀನು ಅದನ್ನು ಕುಡಿದಿದ್ದುದು ಸರಿಯಲ್ಲ!

03126022a ನ ತ್ವದ್ಯ ಶಕ್ಯಮಸ್ಮಾಭಿರೇತತ್ಕರ್ತುಮತೋಽನ್ಯಥಾ।
03126022c ನೂನಂ ದೈವಕೃತಂ ಹ್ಯೇತದ್ಯದೇವಂ ಕೃತವಾನಸಿ।।

ಆದರೆ ಇಂದು ನೀನು ಮಾಡಿದ್ದುದನ್ನು ಬೇರೆಯಾಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನೀನು ಏನು ಮಾಡಿದೆಯೋ ಅದು ದೈವವೇ ನಡೆಸಿದ್ದುದು.

03126023a ಪಿಪಾಸಿತೇನ ಯಾಃ ಪೀತಾ ವಿಧಿಮಂತ್ರಪುರಸ್ಕೃತಾಃ।
03126023c ಆಪಸ್ತ್ವಯಾ ಮಹಾರಾಜ ಮತ್ತಪೋವೀರ್ಯಸಂಭೃತಾಃ।।
03126023e ತಾಭ್ಯಸ್ತ್ವಮಾತ್ಮನಾ ಪುತ್ರಮೇವಂವೀರ್ಯಂ ಜನಿಷ್ಯಸಿ।।

ವಿಧಿವತ್ತಾಗಿ ಮಂತ್ರ ಪುರಸ್ಕೃತಗೊಂಡ ನನ್ನ ತಪೋವೀರ್ಯದಿಂದ ತುಂಬಿದ ಆ ನೀರನ್ನು ಬಾಯಾರಿಕೆಯಿಂದ ನೀನು ಕುಡಿದಿದ್ದುದರಿಂದ, ಮಹಾರಾಜ! ಅಂಥಹ ಮಹಾವೀರ ಪುತ್ರನು ನಿನ್ನಲ್ಲಿಯೇ ಹುಟ್ಟುತ್ತಾನೆ.

03126024a ವಿಧಾಸ್ಯಾಮೋ ವಯಂ ತತ್ರ ತವೇಷ್ಟಿಂ ಪರಮಾದ್ಭುತಾಂ।
03126024c ಯಥಾ ಶಕ್ರಸಮಂ ಪುತ್ರಂ ಜನಯಿಷ್ಯಸಿ ವೀರ್ಯವಾನ್।।

ಈ ಪರಮಾದ್ಭುತ ಇಷ್ಟಿಯನ್ನು ನಿನಗೋಸ್ಕರ ನಾವೇ ಮಾಡುತ್ತೇವೆ. ಇದರಿಂದ ವೀರ್ಯವಂತ ನೀನು ಇಂದ್ರಸಮ ಮಗನಿಗೆ ಜನ್ಮನೀಡುತ್ತೀಯೆ.”

03126025a ತತೋ ವರ್ಷಶತೇ ಪೂರ್ಣೇ ತಸ್ಯ ರಾಜ್ಞೋ ಮಹಾತ್ಮನಃ।
03126025c ವಾಮಂ ಪಾರ್ಶ್ವಂ ವಿನಿರ್ಭಿದ್ಯ ಸುತಃ ಸೂರ್ಯ ಇವಾಪರಃ।।
03126026a ನಿಶ್ಚಕ್ರಾಮ ಮಹಾತೇಜಾ ನ ಚ ತಂ ಮೃತ್ಯುರಾವಿಶತ್।
03126026c ಯುವನಾಶ್ವಂ ನರಪತಿಂ ತದದ್ಭುತಮಿವಾಭವತ್।।

ಒಂದು ನೂರು ವರ್ಷಗಳು ತುಂಬಿದ ನಂತರ ಆ ಮಹಾತ್ಮ ರಾಜನ ಎಡಭಾಗವು ಸೀಳಿ ಇನ್ನೊಬ್ಬ ಸೂರ್ಯನಂತೆ ಪ್ರಕಾಶಿಸುವ ಮಹಾತೇಜಸ್ವಿ ಮಗನು ಹೊರಬಂದನು. ಆದರೆ ನರಪತಿ ಯುವನಾಶ್ವನು ಸಾಯಲಿಲ್ಲ ಎನ್ನುವುದೇ ಅದಕ್ಕಿಂತಲೂ ಅದ್ಭುತವಾಗಿದ್ದಿತು.

03126027a ತತಃ ಶಕ್ರೋ ಮಹಾತೇಜಾಸ್ತಂ ದಿದೃಕ್ಷುರುಪಾಗಮತ್।
03126027c ಪ್ರದೇಶಿನೀಂ ತತೋಽಸ್ಯಾಸ್ಯೇ ಶಕ್ರಃ ಸಮಭಿಸಂದಧೇ।।

ಆಗ ಮಹಾತೇಜಸ್ವಿ ಇಂದ್ರನು ಅವನನ್ನು ನೋಡಲು ಬಂದನು. ಇಂದ್ರನು ತನ್ನ ತೋರುಬೆರಳನ್ನು ಆ ಶಿಶುವಿನ ಬಾಯಲ್ಲಿಟ್ಟು ಹೇಳಿದನು:

03126028a ಮಾಮಯಂ ಧಾಸ್ಯತೀತ್ಯೇವಂ ಪರಿಭಾಷ್ಟಃ ಸ ವಜ್ರಿಣಾ।
03126028c ಮಾಂಧಾತೇತಿ ಚ ನಾಮಾಸ್ಯ ಚಕ್ರುಃ ಸೇಂದ್ರಾ ದಿವೌಕಸಃ।।

“ಇವನು ನನ್ನಿಂದ ಪೋಷಣೆಯನ್ನು ಪಡೆಯಲಿ!” ಆದುದರಿಂದ ಇಂದ್ರನೊಂದಿಗೆ ಇತರ ದೇವತೆಗಳು ಅವನಿಗೆ ಮಾಂಧಾತ ಎಂಬ ಹೆಸರನ್ನಿತ್ತರು.

03126029a ಪ್ರದೇಶಿನೀಂ ಶಕ್ರದತ್ತಾಮಾಸ್ವಾದ್ಯ ಸ ಶಿಶುಸ್ತದಾ।
03126029c ಅವರ್ಧತ ಮಹೀಪಾಲ ಕಿಷ್ಕೂಣಾಂ ಚ ತ್ರಯೋದಶ।।

ಮಹಾರಾಜ! ಇಂದ್ರನು ನೀಡಿದ ತೋರುಬೆರಳನ್ನು ಚೀಪಿದ ಆ ಶಿಶುವು ಹದಿಮೂರು ಕಿಷ್ಕೂಣದಷ್ಟು ಬೆಳೆಯಿತು.

03126030a ವೇದಾಸ್ತಂ ಸಧನುರ್ವೇದಾ ದಿವ್ಯಾನ್ಯಸ್ತ್ರಾಣಿ ಚೇಶ್ವರಂ।
03126030c ಉಪತಸ್ಥುರ್ಮಹಾರಾಜ ಧ್ಯಾತಮಾತ್ರಾಣಿ ಸರ್ವಶಃ।।

ಮಹಾರಾಜ! ಧನುರ್ವೇದದೊಂದಿಗೆ ವೇದಗಳು, ದಿವ್ಯಾಸ್ತ್ರಗಳು ಎಲ್ಲವೂ ಆ ರಾಜನಿಗೆ, ಕೇವಲ ನೆನೆಸಿಕೊಂಡಿದ್ದಕ್ಕೇ, ಕಾಣಿಸಿಕೊಂಡವು.

03126031a ಧನುರಾಜಗವಂ ನಾಮ ಶರಾಃ ಶೃಂಗೋದ್ಭವಾಶ್ಚ ಯೇ।
03126031c ಅಭೇದ್ಯಂ ಕವಚಂ ಚೈವ ಸದ್ಯಸ್ತಮುಪಸಂಶ್ರಯನ್।।

ಅಜಗವ ಎಂಬ ಹೆಸರಿನ ಧನುಸ್ಸು, ಶೃಂಗದಿಂದ ಮಾಡಲ್ಪಟ್ಟ ಬಾಣ, ಮತ್ತು ಅಭೇದ್ಯ ಕವಚಗಳು ತಕ್ಷಣವೇ ಅವನ ವಶವಾದವು.

03126032a ಸೋಽಭಿಷಿಕ್ತೋ ಮಘವತಾ ಸ್ವಯಂ ಶಕ್ರೇಣ ಭಾರತ।
03126032c ಧರ್ಮೇಣ ವ್ಯಜಯಲ್ಲೋಕಾಂಸ್ತ್ರೀನ್ವಿಷ್ಣುರಿವ ವಿಕ್ರಮೈಃ।।

ಭಾರತ! ಮಘವತ ಇಂದ್ರನೇ ಅವನನ್ನು ಅಭಿಷೇಕಿಸಿದನು ಮತ್ತು ವಿಕ್ರಮದಿಂದ ವಿಷ್ಣುವು ಹೇಗೋ ಹಾಗೆ ಧರ್ಮದಿಂದ ಮೂರು ಲೋಕಗಳನ್ನೂ ಗೆದ್ದನು.

03126033a ತಸ್ಯಾಪ್ರತಿಹತಂ ಚಕ್ರಂ ಪ್ರಾವರ್ತತ ಮಹಾತ್ಮನಃ।
03126033c ರತ್ನಾನಿ ಚೈವ ರಾಜರ್ಷಿಂ ಸ್ವಯಮೇವೋಪತಸ್ಥಿರೇ।।

ಆ ಮಹಾತ್ಮನ ಚಕ್ರವು ಅಪ್ರತಿಹತವಾಗಿ ಉರುಳಿತು ಮತ್ತು ತಮ್ಮ ಇಚ್ಛೆಯಿಂದಲೇ ರತ್ನಗಳು ರಾಜರ್ಷಿಗೆ ಬಂದು ಸೇರಿದವು.

03126034a ತಸ್ಯೇಯಂ ವಸುಸಂಪೂರ್ಣಾ ವಸುಧಾ ವಸುಧಾಧಿಪ।
03126034c ತೇನೇಷ್ಟಂ ವಿವಿಧೈರ್ಯಜ್ಞೈರ್ಬಹುಭಿಃ ಸ್ವಾಪ್ತದಕ್ಷಿಣೈಃ।।

ವಸುಧಾಧಿಪ! ಸಂಪತ್ತಿನಿಂದ ತುಂಬಿದ ಈ ಭೂಮಿಯು ಸಂಪೂರ್ಣವಾಗಿ ಅವನದ್ದಾಗಿತ್ತು. ಬಹಳಷ್ಟು ದಕ್ಷಿಣೆಗಳಿಂದ ಕೂಡಿದ ಅನೇಕ ವಿವಿಧ ಯಜ್ಞಗಳನ್ನು ಅವನು ನೆರವೇರಿಸಿದನು.

03126035a ಚಿತಚೈತ್ಯೋ ಮಹಾತೇಜಾ ಧರ್ಮಂ ಪ್ರಾಪ್ಯ ಚ ಪುಷ್ಕಲಂ।
03126035c ಶಕ್ರಸ್ಯಾರ್ಧಾಸನಂ ರಾಜಽಲ್ಲಬ್ಧವಾನಮಿತದ್ಯುತಿಃ।।

ರಾಜನ್! ಸಾಕಷ್ಟು ಯಾಗಚೈತ್ಯಗಳನ್ನು ಮತ್ತು ಧರ್ಮವನ್ನು ಸಂಪಾದಿಸಿದ ಆ ಮಹಾತೇಜಸ್ವಿ ಅಮಿತದ್ಯುತಿಯು ಇಂದ್ರನ ಅರ್ಧ ಸಿಂಹಾಸನವನ್ನು ಪಡೆದನು.

03126036a ಏಕಾಹ್ನಾ ಪೃಥಿವೀ ತೇನ ಧರ್ಮನಿತ್ಯೇನ ಧೀಮತಾ।
03126036c ನಿರ್ಜಿತಾ ಶಾಸನಾದೇವ ಸರತ್ನಾಕರಪತ್ತನಾ।।

ಆ ಧರ್ಮನಿತ್ಯ ಧೀಮಂತನು ಒಂದೇ ಒಂದು ದಿನದಲ್ಲಿ ರತ್ನಗಳ ಗಣಿ ಮತ್ತು ಪಟ್ಟಣಗಳೊಡನೆ ಇಡೀ ಭೂಮಿಯನ್ನೇ ತನ್ನ ಶಾಸನದಡಿಯಲ್ಲಿ ತಂದನು.

03126037a ತಸ್ಯ ಚಿತ್ಯೈರ್ಮಹಾರಾಜ ಕ್ರತೂನಾಂ ದಕ್ಷಿಣಾವತಾಂ।
03126037c ಚತುರಂತಾ ಮಹೀ ವ್ಯಾಪ್ತಾ ನಾಸೀತ್ಕಿಂ ಚಿದನಾವೃತಂ।।

ಮಹಾರಾಜ! ನಾಲ್ಕು ಮೂಲೆಗಳನ್ನು ಹೊಂದಿದ್ದ ಭೂಮಿಯು ಭೂರಿದಕ್ಷಿಣೆಗಳಿಂದ ಅವನು ನೆರವೇರಿಸಿದ್ದ ಕ್ರತುಗಳ ಯಾಗವೇದಿಕೆಗಳಿಂದ ತುಂಬಿಹೋಗಿತ್ತು. ಒಂದು ಸ್ಥಳವೂ ಬಿಟ್ಟಿರಲಿಲ್ಲ.

03126038a ತೇನ ಪದ್ಮಸಹಸ್ರಾಣಿ ಗವಾಂ ದಶ ಮಹಾತ್ಮನಾ।
03126038c ಬ್ರಾಹ್ಮಣೇಭ್ಯೋ ಮಹಾರಾಜ ದತ್ತಾನೀತಿ ಪ್ರಚಕ್ಷತೇ।।

ಮಹಾರಾಜ! ಆ ಮಹಾತ್ಮನು ಸಹಸ್ರಾರು ಪದ್ಮಗಳಷ್ಟು ಹಸುಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತ ಎಂದು ಹೇಳುತ್ತಾರೆ.

03126039a ತೇನ ದ್ವಾದಶವಾರ್ಷಿಕ್ಯಾಮನಾವೃಷ್ಟ್ಯಾಂ ಮಹಾತ್ಮನಾ।
03126039c ವೃಷ್ಟಂ ಸಸ್ಯವಿವೃದ್ಧ್ಯರ್ಥಂ ಮಿಷತೋ ವಜ್ರಪಾಣಿನಃ।।

ಹನ್ನೆರಡು ವರ್ಷಗಳ ಅನಾವೃಷ್ಟಿಯಾದಾಗ ಆ ಮಹಾತ್ಮನು ಸಸ್ಯಗಳು ಬೆಳೆಯಲೋಸುಗ ಇಂದ್ರನು ನೋಡುತ್ತಿದ್ದಂತೆಯೇ ಮಳೆಯನ್ನು ಸುರಿಸಿದನು.

03126040a ತೇನ ಸೋಮಕುಲೋತ್ಪನ್ನೋ ಗಾಂಧಾರಾಧಿಪತಿರ್ಮಹಾನ್।
03126040c ಗರ್ಜನ್ನಿವ ಮಹಾಮೇಘಃ ಪ್ರಮಥ್ಯ ನಿಹತಃ ಶರೈಃ।।

ರಾಜನ್! ಆ ಸೋಮಕುಲೋತ್ಪನ್ನನು ಮಹಾಮೇಘಗಳಂತಿರುವ ಬಾಣಗಳಿಂದ ಮಹಾ ಗಾಂಧಾರಾಧಿಪತಿಯನ್ನು ವಶಪಡಿಸಿಕೊಂಡನು.

03126041a ಪ್ರಜಾಶ್ಚತುರ್ವಿಧಾಸ್ತೇನ ಜಿತಾ ರಾಜನ್ಮಹಾತ್ಮನಾ।
03126041c ತೇನಾತ್ಮತಪಸಾ ಲೋಕಾಃ ಸ್ಥಾಪಿತಾಶ್ಚಾಪಿ ತೇಜಸಾ।।

ರಾಜನ್! ಆ ಮಹಾತ್ಮನು ಚತುರ್ವಿಧ ಪ್ರಜೆಗಳನ್ನು ಗೆದ್ದು ಆತ್ಮತಪಸ್ಸಿನ ತೇಜಸ್ಸಿನಿಂದ ಲೋಕಗಳಲ್ಲಿ ತನ್ನ ಶಾಸನವನ್ನು ಸ್ಥಾಪಿಸಿದನು.

03126042a ತಸ್ಯೈತದ್ದೇವಯಜನಂ ಸ್ಥಾನಮಾದಿತ್ಯವರ್ಚಸಃ।
03126042c ಪಶ್ಯ ಪುಣ್ಯತಮೇ ದೇಶೇ ಕುರುಕ್ಷೇತ್ರಸ್ಯ ಮಧ್ಯತಃ।।

ಇದೇ ಸ್ಥಳದಲ್ಲಿ ಆ ಆದಿತ್ಯವರ್ಚಸನು ದೇವಯಜ್ಞಗಳನ್ನು ಮಾಡಿದನು. ಕುರುಕ್ಷೇತ್ರದ ಮಧ್ಯದಲ್ಲಿರುವ ಈ ಪುಣ್ಯತಮ ಪ್ರದೇಶವನ್ನು ನೋಡು!

03126043a ಏತತ್ತೇ ಸರ್ವಮಾಖ್ಯಾತಂ ಮಾಂಧಾತುಶ್ಚರಿತಂ ಮಹತ್।
03126043c ಜನ್ಮ ಚಾಗ್ರ್ಯಂ ಮಹೀಪಾಲ ಯನ್ಮಾಂ ತ್ವಂ ಪರಿಪೃಚ್ಚಸಿ।।

ಮಹೀಪಾಲ! ನೀನು ನನಗೆ ಕೇಳಿದಂತೆ ಅವನ ಹುಟ್ಟಿನಿಂದ ಮೊದಲಾಗಿ ಈ ಮಾಂಧಾತನ ಮಹಾ ಚರಿತ್ರೆಯನ್ನು ಸಂಪೂರ್ಣವಾಗಿ ಹೇಳಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಮಾಂಧಾತೋಪಖ್ಯಾನೇ ಷಡ್ವಿವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಮಾಂಧಾತೋಪಖ್ಯಾನದಲ್ಲಿ ನೂರಾಇಪ್ಪತ್ತಾರನೆಯ ಅಧ್ಯಾಯವು.


  1. ಯುವನಾಶ್ವ . ↩︎