121 ಲೋಮಶತೀರ್ಥಯಾತ್ರಾಯಾಂ ಸೌಕನ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 121

ಸಾರ

ಯುಧಿಷ್ಠಿರನು ಸಹೋದರರೊಂದಿಗೆ ಪಯೋಷ್ಣಿಯಲ್ಲಿ ಸ್ನಾನ ಮಾಡಿದುದು (1-15). ನರ್ಮದಾ ನದಿಯ ಬಳಿ ಯುಧಿಷ್ಠಿರನು ಕೇಳಲು ಲೋಮಶನು ಚ್ಯವನ ಮಹರ್ಷಿಯು ಅಶ್ವಿನಿಯರಿಗೆ ಸೋಮವನ್ನಿತ್ತ ಚರಿತ್ರೆಯನ್ನು ಪ್ರಾರಂಭಿಸಿದುದು (16-23).

03121001 ಲೋಮಶ ಉವಾಚ।
03121001a ನೃಗೇಣ ಯಜಮಾನೇನ ಸೋಮೇನೇಹ ಪುರಂದರಃ।
03121001c ತರ್ಪಿತಃ ಶ್ರೂಯತೇ ರಾಜನ್ಸ ತೃಪ್ತೋ ಮದಮಭ್ಯಗಾತ್।।

ಲೋಮಶನು ಹೇಳಿದನು: “ರಾಜನ್! ಇಲ್ಲಿ ನೃಗನು ಯಜಮಾನನಾಗಿ ಸೋಮದಿಂದ ಪುರಂದರ ಇಂದ್ರನನ್ನು ತೃಪ್ತಿಪಡಿಸಿದನೆಂದೂ ಮತ್ತು ಮತ್ತೇರುವಷ್ಟು ಕುಡಿದು ತೃಪ್ತನಾದನೆಂದೂ ಕೇಳಿದ್ದೇವೆ.

03121002a ಇಹ ದೇವೈಃ ಸಹೇಂದ್ರೈರ್ಹಿ ಪ್ರಜಾಪತಿಭಿರೇವ ಚ।
03121002c ಇಷ್ಟಂ ಬಹುವಿಧೈರ್ಯಜ್ಞೈರ್ಮಹದ್ಭಿರ್ಭೂರಿದಕ್ಷಿಣೈಃ।।

ಇಲ್ಲಿಯೇ ಇಂದ್ರನೂ ಸೇರಿ ದೇವತೆಗಳು ಮತ್ತು ಪ್ರಜಾಪತಿಯೂ ಕೂಡ ಬಹಳ ಭೂರಿದಕ್ಷಿಣೆಗಳನ್ನಿತ್ತು ಬಹುವಿಧದ ಯಜ್ಞಗಳನ್ನು ಮಾಡಿದರು.

03121003a ಆಮೂರ್ತರಯಸಶ್ಚೇಹ ರಾಜಾ ವಜ್ರಧರಂ ಪ್ರಭುಂ।
03121003c ತರ್ಪಯಾಮಾಸ ಸೋಮೇನ ಹಯಮೇಧೇಷು ಸಪ್ತಸು।।

ಇಲ್ಲಿಯೇ ರಾಜಾ ಆಮೂರ್ತರಯಸನು ಪ್ರಭೂ ವಜ್ರಧರ ಇಂದ್ರನನ್ನು ಏಳು ಅಶ್ವಮೇಧಯಾಗಗಳಲ್ಲಿ ಸೋಮವನ್ನಿತ್ತು ತೃಪ್ತಿಪಡಿಸಿದನು.

03121004a ತಸ್ಯ ಸಪ್ತಸು ಯಜ್ಞೇಷು ಸರ್ವಮಾಸೀದ್ಧಿರಣ್ಮಯಂ।
03121004c ವಾನಸ್ಪತ್ಯಂ ಚ ಭೌಮಂ ಚ ಯದ್ದ್ರವ್ಯಂ ನಿಯತಂ ಮಖೇ।।

ಯಾವಾಗಲೂ ಯಜ್ಞಗಳಲ್ಲಿ ಮರದಿಂದ ಅಥವಾ ಮಣ್ಣಿನಿಂದ ಮಾಡಿರುತ್ತಿದ್ದ ಎಲ್ಲ ದ್ರವ್ಯಗಳೂ ಅವನ ಏಳೂ ಯಜ್ಞಗಳಲ್ಲಿ ಬಂಗಾರದಿಂದ ಮಾಡಲ್ಪಟ್ಟಿದ್ದವು.

03121005a ತೇಷ್ವೇವ ಚಾಸ್ಯ ಯಜ್ಞೇಷು ಪ್ರಯೋಗಾಃ ಸಪ್ತ ವಿಶ್ರುತಾಃ।
03121005c ಸಪ್ತೈಕೈಕಸ್ಯ ಯೂಪಸ್ಯ ಚಷಾಲಾಶ್ಚೋಪರಿ ಸ್ಥಿತಾಃ।।
03121006a ತಸ್ಯ ಸ್ಮ ಯೂಪಾನ್ಯಜ್ಞೇಷು ಭ್ರಾಜಮಾನಾನ್ ಹಿರಣ್ಮಯಾನ್।
03121006c ಸ್ವಯಮುತ್ಥಾಪಯಾಮಾಸುರ್ದೇವಾಃ ಸೇಂದ್ರಾ ಯುಧಿಷ್ಠಿರ।।

ಅವನ ಯಜ್ಞಗಳಲ್ಲಿಯ ಪ್ರಯೋಗಗಳು ಏಳು ಪ್ರಯೋಗಗಳೆಂದು ವಿಶ್ರುತವಾಗಿವೆ. ಏಳರಲ್ಲಿ ಒಂದೊಂದು ಯೂಪಗಳ ಮೇಲೂ ಉಂಗುರಗಳನ್ನು ಏರಿಸಲಾಗಿತ್ತು1. ಯುಧಿಷ್ಠಿರ! ಅವನ ಯಜ್ಞದಲ್ಲಿ ಇಂದ್ರನೊಂದಿಗೆ ದೇವತೆಗಳು ತಾವೇ ಹೊಳೆಯುತ್ತಿರುವ ಬಂಗಾರದಿಂದ ಮಾಡಿದ್ದ ಯೂಪಗಳನ್ನು ನಿಲ್ಲಿಸಿದ್ದರಂತೆ.

03121007a ತೇಷು ತಸ್ಯ ಮಖಾಗ್ರ್ಯೇಷು ಗಯಸ್ಯ ಪೃಥಿವೀಪತೇಃ।
03121007c ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ।।

ಗಯರಾಜನ ಆ ಉತ್ತಮ ಯಜ್ಞಗಳಲ್ಲಿ ಇಂದ್ರನು ಸೋಮದಿಂದ ಬುದ್ಧಿಕಳೆದುಕೊಂಡನು ಮತ್ತು ದ್ವಿಜಾತಿಯವರು ದಕ್ಷಿಣೆಗಳಿಂದ ಹುಚ್ಚಾದರು.

03121008a ಸಿಕತಾ ವಾ ಯಥಾ ಲೋಕೇ ಯಥಾ ವಾ ದಿವಿ ತಾರಕಾಃ।
03121008c ಯಥಾ ವಾ ವರ್ಷತೋ ಧಾರಾ ಅಸಂಖ್ಯೇಯಾಶ್ಚ ಕೇನ ಚಿತ್।।
03121009a ತಥೈವ ತದಸಂಖ್ಯೇಯಂ ಧನಂ ಯತ್ಪ್ರದದೌ ಗಯಃ।
03121009c ಸದಸ್ಯೇಭ್ಯೋ ಮಹಾರಾಜ ತೇಷು ಯಜ್ಞೇಷು ಸಪ್ತಸು।।

ಭೂಮಿಯಲ್ಲಿರುವ ಮರಳನ್ನು, ಆಕಾಶದಲ್ಲಿ ನಕ್ಷತ್ರಗಳನ್ನು, ಮಳೆಯ ನೀರಿನ ಹನಿಗಳನ್ನು ಹೇಗೆ ಸಂಖ್ಯೆಮಾಡಲಿಕ್ಕಾಗುವುದಿಲ್ಲವೋ ಹಾಗೆ ಆ ಏಳು ಯಜ್ಞಗಳಲ್ಲಿ ಗಯನು ಸದಸ್ಯರಿಗೆ ದಾನವಾಗಿ ನೀಡಿದ ಸಂಪತ್ತು ಅಸಂಖ್ಯವಾಗಿತ್ತು.

03121010a ಭವೇತ್ಸಂಖ್ಯೇಯಮೇತದ್ವೈ ಯದೇತತ್ಪರಿಕೀರ್ತಿತಂ।
03121010c ನ ಸಾ ಶಕ್ಯಾ ತು ಸಂಖ್ಯಾತುಂ ದಕ್ಷಿಣಾ ದಕ್ಷಿಣಾವತಃ।।

ಒಂದು ವೇಳೆ ಮರಳು, ನಕ್ಷತ್ರಗಳು, ಮತ್ತು ಹನಿಗಳನ್ನು ಲೆಕ್ಕಮಾಡಲು ಸಾಧ್ಯವಾಗುತ್ತಿದ್ದರೂ, ಎಣಿಕೆಯಿಂದ ಬಂದ ಸಂಖ್ಯೆಗಿಂತ ಹೆಚ್ಚು ಆ ದಾನಕೊಡುವವನ ದಕ್ಷಿಣೆಯಾಗಿತ್ತು.

03121011a ಹಿರಣ್ಮಯೀಭಿರ್ಗೋಭಿಶ್ಚ ಕೃತಾಭಿರ್ವಿಶ್ವಕರ್ಮಣಾ।
03121011c ಬ್ರಾಹ್ಮಣಾಂಸ್ತರ್ಪಯಾಮಾಸ ನಾನಾದಿಗ್ಭ್ಯಃ ಸಮಾಗತಾನ್।।

ವಿಶ್ವಕರ್ಮನಿಂದ ಮಾಡಿಸಿದ್ದ ಬಂಗಾರದ ಗೋವುಗಳಿಂದ ನಾನಾ ದಿಕ್ಕುಗಳಿಂದ ಬಂದು ಸೇರಿದ್ದ ಬ್ರಾಹ್ಮಣರನ್ನು ಅವನು ತೃಪ್ತಿಪಡಿಸಿದನು.

03121012a ಅಲ್ಪಾವಶೇಷಾ ಪೃಥಿವೀ ಚೈತ್ಯೈರಾಸೀನ್ಮಹಾತ್ಮನಃ।
03121012c ಗಯಸ್ಯ ಯಜಮಾನಸ್ಯ ತತ್ರ ತತ್ರ ವಿಶಾಂ ಪತೇ।।

ವಿಶಾಂಪತೇ! ಮಹಾತ್ಮ ಗಯನ ಯಜಮಾನತ್ವದಲ್ಲಿ ಎಲ್ಲೆಲ್ಲಿಯೂ ಚೈತ್ಯಗಳಿದ್ದು ಭೂಮಿಯೇ ಚಿಕ್ಕದಾಯಿತೆಂದು ತೋರುತ್ತಿತ್ತು.

03121013a ಸ ಲೋಕಾನ್ಪ್ರಾಪ್ತವಾನೈಂದ್ರಾನ್ಕರ್ಮಣಾ ತೇನ ಭಾರತ।
03121013c ಸಲೋಕತಾಂ ತಸ್ಯ ಗಚ್ಚೇತ್ಪಯೋಷ್ಣ್ಯಾಂ ಯ ಉಪಸ್ಪೃಶೇತ್।।

ಭಾರತ! ತನ್ನ ಕರ್ಮಗಳಿಂದ ಅವನು ಇಂದ್ರನ ಲೋಕಗಳನ್ನು ಹೊಂದಿದನು. ಪಯೋಷ್ಣಿಯಲ್ಲಿ ಸ್ನಾನಮಾಡುವವರು ಅವನ ಲೋಕಗಳಿಗೆ ಹೋಗುತ್ತಾರೆ.

03121014a ತಸ್ಮಾತ್ತ್ವಮತ್ರ ರಾಜೇಂದ್ರ ಭ್ರಾತೃಭಿಃ ಸಹಿತೋಽನಘ।
03121014c ಉಪಸ್ಪೃಶ್ಯ ಮಹೀಪಾಲ ಧೂತಪಾಪ್ಮಾ ಭವಿಷ್ಯಸಿ।।

ಅನಘ! ರಾಜೇಂದ್ರ! ಮಹೀಪಾಲ! ಆದುದರಿಂದ ನೀನು ಸಹೋದರರೊಂದಿಗೆ ಇಲ್ಲಿ ಸ್ನಾನಮಾಡಿದರೆ ಪಾಪಗಳನ್ನು ತೊಳೆದಂತಾಗುತ್ತದೆ.””

03121015 ವೈಶಂಪಾಯನ ಉವಾಚ।
03121015a ಸ ಪಯೋಷ್ಣ್ಯಾಂ ನರಶ್ರೇಷ್ಠಃ ಸ್ನಾತ್ವಾ ವೈ ಭ್ರಾತೃಭಿಃ ಸಹ।
03121015c ವೈಡೂರ್ಯಪರ್ವತಂ ಚೈವ ನರ್ಮದಾಂ ಚ ಮಹಾನದೀಂ।।
03121015e ಸಮಾಜಗಾಮ ತೇಜಸ್ವೀ ಭ್ರಾತೃಭಿಃ ಸಹಿತೋಽನಘಃ।।

ವೈಶಂಪಾಯನನು ಹೇಳಿದನು: “ಆ ನರಶ್ರೇಷ್ಠನು ಸಹೋದರರೊಂದಿಗೆ ಪಯೋಷ್ಣಿಯಲ್ಲಿ ಸ್ನಾನಮಾಡಿದನು. ಅನಂತರ, ಆ ಅನಘ ತೇಜಸ್ವಿಯು ವೈಡೂರ್ಯ ಪರ್ವತ ಮತ್ತು ಮಹಾನದಿಗೆ ತನ್ನ ಸಹೋದರರೊಂದಿಗೆ ಹೋದನು.

03121016a ತತೋಽಸ್ಯ ಸರ್ವಾಣ್ಯಾಚಖ್ಯೌ ಲೋಮಶೋ ಭಗವಾನೃಷಿಃ।
03121016c ತೀರ್ಥಾನಿ ರಮಣೀಯಾನಿ ತತ್ರ ತತ್ರ ವಿಶಾಂ ಪತೇ।।

ವಿಶಾಂಪತೇ! ಅಲ್ಲಿ ಅವನಿಗೆ ಭಗವಾನ್ ಋಷಿ ಲೋಮಶನು ಅಲ್ಲಲ್ಲಿದ್ದ ರಮಣೀಯ ತೀರ್ಥಗಳ ಕುರಿತು ಎಲ್ಲವನ್ನೂ ಹೇಳಿದನು.

03121017a ಯಥಾಯೋಗಂ ಯಥಾಪ್ರೀತಿ ಪ್ರಯಯೌ ಭ್ರಾತೃಭಿಃ ಸಹ।
03121017c ದದಮಾನೋಽಸಕೃದ್ವಿತ್ತಂ ಬ್ರಾಹ್ಮಣೇಭ್ಯಃ ಸಹಸ್ರಶಃ।।

ಸಮಯ ಸಿಕ್ಕಹಾಗೆ, ಬೇಕಾದಷ್ಟು ಸಂಪತ್ತನ್ನು ಸಹಸ್ರಾರು ಬ್ರಾಹ್ಮಣರಿಗೆ ಸತ್ಕರಿಸಿ ದಾನವನ್ನಾಗಿತ್ತು ಅವನು ಸಹೋದರರೊಂದಿಗೆ ಪ್ರಯಾಣಿಸಿದನು.

03121018 ಲೋಮಶ ಉವಾಚ।
03121018a ದೇವಾನಾಮೇತಿ ಕೌಂತೇಯ ತಥಾ ರಾಜ್ಞಾಂ ಸಲೋಕತಾಂ।
03121018c ವೈಡೂರ್ಯಪರ್ವತಂ ದೃಷ್ಟ್ವಾ ನರ್ಮದಾಮವತೀರ್ಯ ಚ।।

ಲೋಮಶನು ಹೇಳಿದನು: “ಕೌಂತೇಯ! ವೈಡೂರ್ಯ ಪರ್ವತವನ್ನು ನೋಡಿ ನರ್ಮದಾ ನದಿಗೆ ಇಳಿದವನು ದೇವತೆಗಳ ಮತ್ತು ರಾಜರ ಲೋಕವನ್ನು ಸೇರುತ್ತಾನೆ.

03121019a ಸಂಧಿರೇಷ ನರಶ್ರೇಷ್ಠ ತ್ರೇತಾಯಾ ದ್ವಾಪರಸ್ಯ ಚ।
03121019c ಏತಮಾಸಾದ್ಯ ಕೌಂತೇಯ ಸರ್ವಪಾಪೈಃ ಪ್ರಮುಚ್ಯತೇ।।

ನರಶ್ರೇಷ್ಠ! ಇದು ತ್ರೇತ ಮತ್ತು ದ್ವಾಪರಗಳ ಸಂಧಿ. ಕೌಂತೇಯ! ಇಲ್ಲಿಗೆ ಬಂದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.

03121020a ಏಷ ಶರ್ಯಾತಿಯಜ್ಞಸ್ಯ ದೇಶಸ್ತಾತ ಪ್ರಕಾಶತೇ।
03121020c ಸಾಕ್ಷಾದ್ಯತ್ರಾಪಿಬತ್ಸೋಮಮಶ್ವಿಭ್ಯಾಂ ಸಹ ಕೌಶಿಕಃ।।

ಮಗೂ! ಇಲ್ಲಿ ಕಾಂತಿಯುಕ್ತ ಪ್ರದೇಶದಲ್ಲಿ ಶರ್ಯಾತಿಯ ಯಜ್ಞದಲ್ಲಿ ಸಾಕ್ಷಾತ್ ಅಶ್ವಿನೀ ದೇವತೆಗಳೊಂದಿಗೆ ಕೌಶಿಕ ವಿಶ್ವಾಮಿತ್ರನು ಸೋಮವನ್ನು ಸೇವಿಸಿದ್ದನು.

03121021a ಚುಕೋಪ ಭಾರ್ಗವಶ್ಚಾಪಿ ಮಹೇಂದ್ರಸ್ಯ ಮಹಾತಪಾಃ।
03121021c ಸಂಸ್ತಂಭಯಾಮಾಸ ಚ ತಂ ವಾಸವಂ ಚ್ಯವನಃ ಪ್ರಭುಃ।।
03121021e ಸುಕನ್ಯಾಂ ಚಾಪಿ ಭಾರ್ಯಾಂ ಸ ರಾಜಪುತ್ರೀಮಿವಾಪ್ತವಾನ್।।

ಮಹಾತಪಸ್ವಿ ಭಾರ್ಗವ ಪ್ರಭು ಚ್ಯವನನು ಮಹೇಂದ್ರ ವಾಸವ ಇಂದ್ರನ ಮೇಲೆ ಸಿಟ್ಟಿಗೆದ್ದು ಅವನನ್ನು ಗರಬಡಿಸಿದನು. ಅವನು ರಾಜಪುತ್ರೀ ಸುಕನ್ಯೆಯನ್ನು ಪತ್ನಿಯನ್ನಾಗಿ ಪಡೆದನು.”

03121022 ಯುಧಿಷ್ಠಿರ ಉವಾಚ।
03121022a ಕಥಂ ವಿಷ್ಟಂಭಿತಸ್ತೇನ ಭಗವಾನ್ಪಾಕಶಾಸನಃ।
03121022c ಕಿಮರ್ಥಂ ಭಾರ್ಗವಶ್ಚಾಪಿ ಕೋಪಂ ಚಕ್ರೇ ಮಹಾತಪಾಃ।।

ಯುಧಿಷ್ಠಿರನು ಹೇಳಿದನು: “ಅವನಿಂದ ಹೇಗೆ ಭಗವಾನ್ ಪಾಕಶಾಸನ ಇಂದ್ರನು ಗರಹೊಡೆದಂತಾದನು ಮತ್ತು ಆ ಮಹಾತಪಸ್ವಿ ಭಾರ್ಗವನಾದರೂ ಅವನಲ್ಲಿ ಏಕೆ ಕೋಪಗೊಂಡನು?

03121023a ನಾಸತ್ಯೌ ಚ ಕಥಂ ಬ್ರಹ್ಮನ್ಕೃತವಾನ್ಸೋಮಪೀಥಿನೌ।
03121023c ಏತತ್ಸರ್ವಂ ಯಥಾವೃತ್ತಮಾಖ್ಯಾತು ಭಗವಾನ್ಮಮ।।

ಬ್ರಹ್ಮನ್! ನಾಸತ್ಯ ಅಶ್ವಿನೀ ದೇವತೆಗಳು ಹೇಗೆ ಸೋಮಪಾನ ಮಾಡುವಂತಾದರು? ಭಗವಾನ್! ಇವೆಲ್ಲವನ್ನು ನಡೆದಹಾಗೆ ನನಗೆ ಹೇಳಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ಏಕವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ತೊಂದನೆಯ ಅಧ್ಯಾಯವು.


  1. ಅವನ ಪ್ರತಿಯೊಂದು ಯೂಪದ ಮೇಲೂ ಏಳು ಉಂಗುರಗಳನ್ನು ಏರಿಸಲಾಗಿತ್ತು ಎಂದೂ ಅನುವಾದಿಸಿದ್ದಾರೆ. ↩︎