ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 120
ಸಾರ
ಸಾತ್ಯಕಿಯು ತನ್ನ ಮತ್ತು ಇತರ ವೃಷ್ಣಿಗಳ ಪರಾಕ್ರಮವನ್ನು ಹೇಳಿಕೊಳ್ಳುವುದು (1-21). ಕೃಷ್ಣ-ಯುಧಿಷ್ಠಿರರು ಯುದ್ಧದ ಕುರಿತು ನಂತರ ಯೋಚಿಸಬೇಕೆಂದು ಹೇಳಿದುದು; ತೀರ್ಥಯಾತ್ರೆಯು ಮುಂದುವರೆದುದು (22-30).
03120001 ಸಾತ್ಯಕಿರುವಾಚ।
03120001a ನ ರಾಮ ಕಾಲಃ ಪರಿದೇವನಾಯ। ಯದುತ್ತರಂ ತತ್ರ ತದೇವ ಸರ್ವೇ।
03120001c ಸಮಾಚರಾಮೋ ಹ್ಯನತೀತಕಾಲಂ। ಯುಧಿಷ್ಠಿರೋ ಯದ್ಯಪಿ ನಾಹ ಕಿಂ ಚಿತ್।।
ಸಾತ್ಯಕಿಯು ಹೇಳಿದನು: “ರಾಮ! ಪರಿವೇದನೆ ಪಡುವ ಕಾಲವಿದಲ್ಲ! ಅದನ್ನು ಅವರೆಲ್ಲರೂ ಅನಂತರ ಮಾಡುತ್ತಾರೆ. ಒಂದು ವೇಳೆ ಯುಧಿಷ್ಠಿರನು ಏನನ್ನೂ ಹೇಳದಿದ್ದರೂ, ಈಗಿನ ಮತ್ತು ಹಿಂದಿನ ವಿಷಯಗಳ ಕುರಿತು ನಾವು ಯೋಚಿಸಬೇಕು.
03120002a ಯೇ ನಾಥವಂತೋ ಹಿ ಭವಂತಿ ಲೋಕೇ। ತೇ ನಾತ್ಮನಾ ಕರ್ಮ ಸಮಾರಭಂತೇ।
03120002c ತೇಷಾಂ ತು ಕಾರ್ಯೇಷು ಭವಂತಿ ನಾಥಾಃ। ಶೈಬ್ಯಾದಯೋ ರಾಮ ಯಥಾ ಯಯಾತೇಃ।।
ಲೋಕದಲ್ಲಿ ಅನಾಥರಾಗಿಲ್ಲದಿರುವವರು ತಾವಾಗಿಯೇ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ರಾಮ! ಇವರ ಕೆಲಸದಲ್ಲಿ ಯಯಾತಿಗೆ ಶೈಬ್ಯನಿದ್ದಹಾಗೆ ನಾಥರಿದ್ದಾರೆ.
03120003a ಯೇಷಾಂ ತಥಾ ರಾಮ ಸಮಾರಭಂತೇ। ಕಾರ್ಯಾಣಿ ನಾಥಾಃ ಸ್ವಮತೇನ ಲೋಕೇ।
03120003c ತೇ ನಾಥವಂತಃ ಪುರುಷಪ್ರವೀರಾ। ನಾನಾಥವತ್ಕೃಚ್ಚ್ರಮವಾಪ್ನುವಂತಿ।।
ರಾಮ! ಲೋಕದಲ್ಲಿ ಅಂಥವರ ಕಾರ್ಯವನ್ನು ನಾಥರೇ ತಮ್ಮ ಅಭಿಪ್ರಾಯದಂತೆ ಪ್ರಾರಂಭಿಸುತ್ತಾರೆ. ಈ ಪುರುಷಪ್ರವೀರರು ನಾಥವಂತರು. ಅನಾಥರಂತೆ ದುಃಖಪಡಬೇಕಾದುದಿಲ್ಲ.
03120004a ಕಸ್ಮಾದಯಂ ರಾಮಜನಾರ್ದನೌ ಚ। ಪ್ರದ್ಯುಮ್ನಸಾಂಬೌ ಚ ಮಯಾ ಸಮೇತೌ।
03120004c ವಸತ್ಯರಣ್ಯೇ ಸಹ ಸೋದರೀಯೈಸ್। ತ್ರೈಲೋಕ್ಯನಾಥಾನಧಿಗಮ್ಯ ನಾಥಾನ್।।
ಮೂರು ಲೋಕಗಳಿಗೂ ನಾಥರಾದ ಈ ರಾಮ, ಜನಾರ್ದನರಿಬ್ಬರು, ಪ್ರದ್ಯುಮ್ನ ಮತ್ತು ಸಾಂಬರು ಹಾಗೂ ಜೊತೆಗೆ ನನ್ನನ್ನೂ ನಾಥರನ್ನಾಗಿ ಪಡೆದಿರುವ ಇವನು ಏಕೆ ಸೋದರರೊಂದಿಗೆ ವನವಾಸ ಮಾಡಬೇಕು?
03120005a ನಿರ್ಯಾತು ಸಾಧ್ವದ್ಯ ದಶಾರ್ಹಸೇನಾ। ಪ್ರಭೂತನಾನಾಯುಧಚಿತ್ರವರ್ಮಾ।
03120005c ಯಮಕ್ಷಯಂ ಗಚ್ಚತು ಧಾರ್ತರಾಷ್ಟ್ರಃ। ಸಬಾಂಧವೋ ವೃಷ್ಣಿಬಲಾಭಿಭೂತಃ।।
ಇಂದೇ ನಾನಾ ಆಯುಧಗಳನ್ನು, ಬಣ್ಣದ ಕವಚಗಳನ್ನೂ ಧರಿಸಿ ದಶಾರ್ಹರ ಸೇನೆಯು ಹೊರಡಲಿ. ವೃಷ್ಣಿಬಲಕ್ಕೆ ಸೋತು ಧಾರ್ತರಾಷ್ಟ್ರರು ತಮ್ಮ ಬಾಂಧವರೊಂದಿಗೆ ಯಮಲೋಕಕ್ಕೆ ಹೋಗಲಿ.
03120006a ತ್ವಂ ಹ್ಯೇವ ಕೋಪಾತ್ಪೃಥಿವೀಮಪೀಮಾಂ। ಸಂವೇಷ್ಟಯೇಸ್ತಿಷ್ಠತು ಶಾಂರ್ಙ್ಗಧನ್ವಾ।
03120006c ಸ ಧಾರ್ತರಾಷ್ಟ್ರಂ ಜಹಿ ಸಾನುಬಂಧಂ। ವೃತ್ರಂ ಯಥಾ ದೇವಪತಿರ್ಮಹೇಂದ್ರಃ।।
ನೀನೊಬ್ಬನೇ ಕುಪಿತನಾದರೆ ಈ ಪೃಥ್ವಿಯನ್ನೇ ಮುತ್ತಿಗೆ ಹಾಕಬಹುದು, ಇನ್ನು ಶಾಂರ್ಙ್ಗಧನ್ವಿಯ ನಿಲುವು ಏನಿರಬಹುದು? ದೇವಪತಿ ಮಹೇಂದ್ರನು ವೃತ್ರನನ್ನು ಹೇಗೋ ಹಾಗೆ ಬಂಧುಗಳೊಡನೆ ಧಾರ್ತರಾಷ್ಟ್ರರನ್ನು ಸಂಹರಿಸು.
03120007a ಭ್ರಾತಾ ಚ ಮೇ ಯಶ್ಚ ಸಖಾ ಗುರುಶ್ಚ। ಜನಾರ್ದನಸ್ಯಾತ್ಮಸಮಶ್ಚ ಪಾರ್ಥಃ।
03120007c ಯದರ್ಥಮಭ್ಯುದ್ಯತಮುತ್ತಮಂ ತತ್। ಕರೋತಿ ಕರ್ಮಾಗ್ರ್ಯಮಪಾರಣೀಯಂ।।
ಪಾರ್ಥನು ನನಗೆ ಅಣ್ಣನಿದ್ದಂತೆ, ಸಖನಂತೆ ಮತ್ತು ಗುರುವೂ ಹೌದು ಮತ್ತು ಜನಾರ್ದನನ ಆತ್ಮ ಸಮ. ಆದುದರಿಂದ ನಮ್ಮ ಮುಂದೆ ಈಗಲೇ ಮಾಡಬೇಕಾದ ಉತ್ತಮ ಕಾರ್ಯವಿದೆ. ಆ ಅಪಾರ ಕಾರ್ಯವನ್ನು ಮಾಡು.
03120008a ತಸ್ಯಾಸ್ತ್ರವರ್ಷಾಣ್ಯಹಮುತ್ತಮಾಸ್ತ್ರೈರ್। ವಿಹತ್ಯ ಸರ್ವಾಣಿ ರಣೇಽಭಿಭೂಯ।
03120008c ಕಾಯಾಚ್ಛಿರಃ ಸರ್ಪವಿಷಾಗ್ನಿಕಲ್ಪೈಃ। ಶರೋತ್ತಮೈರುನ್ಮಥಿತಾಸ್ಮಿ ರಾಮ।।
ಅವನ ಅಸ್ತ್ರಗಳ ಮಳೆಯನ್ನು ನನ್ನ ಉತ್ತಮ ಅಸ್ತ್ರಗಳಿಂದ ಎದುರಿಸಿ ರಣದಲ್ಲಿ ಅವರೆಲ್ಲರನ್ನೂ ಸಂಹರಿಸುತ್ತೇನೆ. ರಾಮ! ಅಗ್ನಿಯಂಥಹ ಸರ್ಪವಿಷಗಳಂತಿರುವ ನನ್ನ ಉತ್ತಮ ಶರಗಳಿಂದ ಅವನ ದೇಹದಿಂದ ಶಿರವನ್ನು ತುಂಡರಿಸುತ್ತೇನೆ.
03120009a ಖಡ್ಗೇನ ಚಾಹಂ ನಿಶಿತೇನ ಸಂಖ್ಯೇ। ಕಾಯಾಚ್ಛಿರಸ್ತಸ್ಯ ಬಲಾತ್ಪ್ರಮಥ್ಯ।
03120009c ತತೋಽಸ್ಯ ಸರ್ವಾನನುಗಾನ್ ಹನಿಷ್ಯೇ। ದುರ್ಯೋಧನಂ ಚಾಪಿ ಕುರೂಂಶ್ಚ ಸರ್ವಾನ್।।
ಯುದ್ಧದಲ್ಲಿ ನನ್ನ ಹರಿತಾದ ಖಡ್ಗದಿಂದ ಬಲಪ್ರಯೋಗಿಸಿ ಅವನ ಶರೀರದಿಂದ ಶಿರವನ್ನು ತುಂಡರಿಸುತ್ತೇನೆ. ಅನಂತರ ದುರ್ಯೋಧನ ಮತ್ತು ಅವನ ಎಲ್ಲ ಅನುಯಾಯಿಗಳನ್ನೂ, ಕುರುಗಳೆಲ್ಲರನ್ನೂ ಕೊಲ್ಲುತ್ತೇನೆ.
03120010a ಆತ್ತಾಯುಧಂ ಮಾಮಿಹ ರೌಹಿಣೇಯ। ಪಶ್ಯಂತು ಭೌಮಾ ಯುಧಿ ಜಾತಹರ್ಷಾಃ।
03120010c ನಿಘ್ನಂತಮೇಕಂ ಕುರುಯೋಧಮುಖ್ಯಾನ್। ಕಾಲೇ ಮಹಾಕಕ್ಷಮಿವಾಂತಕಾಗ್ನಿಃ।।
ರೋಹಿಣಿಯ ಮಗನೇ! ಆಯುಧಗಳನ್ನು ಹಿಡಿದು ಯುದ್ಧಕ್ಕೆ ಸದ್ಧನಾದ ನನ್ನನ್ನು ಭೂಮಿಯ ಮೇಲಿರುವವರು ಸಂತೋಷದಿಂದ ನೋಡಲಿ. ಯುಗಾಂತದಲ್ಲಿ ಕಾಲಾಗ್ನಿಯು ಒಣಗಿದ ಮರವನ್ನು ಹೇಗೋ ಹಾಗೆ ಒಬ್ಬನೇ ಕುರುಯೋಧಮುಖ್ಯರನ್ನು ಸಂಹರಿಸುತ್ತೇನೆ.
03120011a ಪ್ರದ್ಯುಮ್ನಮುಕ್ತಾನ್ನಿಶಿತಾನ್ನ ಶಕ್ತಾಃ। ಸೋಢುಂ ಕೃಪದ್ರೋಣವಿಕರ್ಣಕರ್ಣಾಃ।
03120011c ಜಾನಾಮಿ ವೀರ್ಯಂ ಚ ತವಾತ್ಮಜಸ್ಯ। ಕಾರ್ಷ್ಣಿರ್ಭವತ್ಯೇಷ ಯಥಾ ರಣಸ್ಥಃ।।
ಪ್ರದ್ಯುಮ್ನನ ಹರಿತಾದ ಶರಗಳನ್ನು ಕೃಪ, ದ್ರೋಣ, ವಿಕರ್ಣ ಮತ್ತು ಕರ್ಣರು ಎದುರಿಸಲು ಶಕ್ತರಿಲ್ಲ. ಈ ನಿನ್ನ ಮಗ, ಕೃಷ್ಣನ ವೀರ ಮಗನು ರಣರಂಗದಲ್ಲಿ ನಿಲ್ಲುತ್ತಾನೆ ಎಂದು ನಾನು ತಿಳಿದಿದ್ದೇನೆ.
03120012a ಸಾಂಬಃ ಸಸೂತಂ ಸರಥಂ ಭುಜಾಭ್ಯಾಂ। ದುಃಶಾಸನಂ ಶಾಸ್ತು ಬಲಾತ್ಪ್ರಮಥ್ಯ।
03120012c ನ ವಿದ್ಯತೇ ಜಾಂಬವತೀಸುತಸ್ಯ। ರಣೇಽವಿಷಃಯಂ ಹಿ ರಣೋತ್ಕಟಸ್ಯ।।
ಸಾಂಬನು ತನ್ನ ತೋಳುಗಳ ಬಲದಿಂದ ಸೂತ ಮತ್ತು ರಥಗಳೊಂದಿಗೆ ದುಃಶಾಸನನನ್ನು ಕೊಂದು ಶಿಕ್ಷಿಸಲಿ. ರಣೋತ್ಕಟ ಜಾಂಬವತೀಸುತನಿಗೆ ರಣರಂಗದಲ್ಲಿ ಸಹಿಸಲಸಾಧ್ಯವಾದುದು ಏನೂ ತಿಳಿದಿಲ್ಲ.
03120013a ಏತೇನ ಬಾಲೇನ ಹಿ ಶಂಬರಸ್ಯ। ದೈತ್ಯಸ್ಯ ಸೈನ್ಯಂ ಸಹಸಾ ಪ್ರಣುನ್ನಂ।
03120013c ವೃತ್ತೋರುರತ್ಯಾಯತಪೀನಬಾಹುರ್। ಏತೇನ ಸಂಖ್ಯೇ ನಿಹತೋಽಶ್ವಚಕ್ರಃ।।
03120013e ಕೋ ನಾಮ ಸಾಂಬಸ್ಯ ರಣೇ ಮನುಷ್ಯೋ। ಗತ್ವಾಂತರಂ ವೈ ಭುಜಯೋರ್ಧರೇತ।।
ಬಾಲಕನಾಗಿರುವಾಗಲೇ ಇವನು ದೈತ್ಯ ಶಂಬರನ ಸೇನೆಯನ್ನು ಕ್ಷಣದಲ್ಲಿಯೇ ನಾಶಗೊಳಿಸಿದನು. ಗುಂಡಾದ ತೊಡೆಗಳ ಮತ್ತು ನೀಳಬಾಹುಗಳ ಅಶ್ವಚಕ್ರನನ್ನೂ ರಣದಲ್ಲಿ ಇವನು ಸಂಹರಿಸಿದನು. ರಣರಂಗದಲ್ಲಿ ಸಾಂಬನ ಭುಜಗಳ ಮಧ್ಯೆ ಸಿಲುಕಿ, ದೀರ್ಘಕಾಲ ಉಳಿದುಕೊಂಡ ಮನುಷ್ಯರಾದರೂ ಯಾರಿದ್ದಾರೆ?
03120014a ಯಥಾ ಪ್ರವಿಶ್ಯಾಂತರಮಂತಕಸ್ಯ। ಕಾಲೇ ಮನುಷ್ಯೋ ನ ವಿನಿಷ್ಕ್ರಮೇತ।
03120014c ತಥಾ ಪ್ರವಿಶ್ಯಾಂತರಮಸ್ಯ ಸಂಖ್ಯೇ। ಕೋ ನಾಮ ಜೀವನ್ಪುನರಾವ್ರಜೇತ।।
ಕಾಲ ಬಂದು ಯಮನ ಮಧ್ಯೆ ಪ್ರವೇಶಿಸಿದ ಯಾವ ಮನುಷ್ಯನೂ ಹೇಗೆ ಹೊರಬರಲಾರನೋ ಹಾಗೆ ಯುದ್ಧದಲ್ಲಿ ಅವನ ಹತ್ತಿರ ಬಂದು, ತನ್ನ ಜೀವದೊಂದಿಗೆ ಉಳಿದುಕೊಂಡವರು ಯಾರಿದ್ದಾರೆ?
03120015a ದ್ರೋಣಂ ಚ ಭೀಷ್ಮಂ ಚ ಮಹಾರಥೌ ತೌ। ಸುತೈರ್ವೃತಂ ಚಾಪ್ಯಥ ಸೋಮದತ್ತಂ।
03120015c ಸರ್ವಾಣಿ ಸೈನ್ಯಾನಿ ಚ ವಾಸುದೇವಃ। ಪ್ರಧಕ್ಷ್ಯತೇ ಸಾಯಕವಹ್ನಿಜಾಲೈಃ।।
ನಮ್ಮ ವಾಸುದೇವನು ತನ್ನ ಬೆಂಕಿಯಂತಹ ಬಾಣಗಳಿಂದ ಮಹಾರಥಿ ದ್ರೋಣ-ಭೀಷ್ಮರನ್ನು, ತನ್ನ ಮಕ್ಕಳೊಂದಿಗೆ ಸೋಮದತ್ತನನ್ನೂ ಮತ್ತು ಅವರ ಸೈನ್ಯಗಳೆಲ್ಲವನ್ನೂ ಸುಟ್ಟು ಉರುಳಿಸುತ್ತಾನೆ.
03120016a ಕಿಂ ನಾಮ ಲೋಕೇಷ್ವವಿಷಹ್ಯಮಸ್ತಿ। ಕೃಷ್ಣಸ್ಯ ಸರ್ವೇಷು ಸದೈವತೇಷು।
03120016c ಆತ್ತಾಯುಧಸ್ಯೋತ್ತಮಬಾಣಪಾಣೇಶ್। ಚಕ್ರಾಯುಧಸ್ಯಾಪ್ರತಿಮಸ್ಯ ಯುದ್ಧೇ।।
ತನ್ನ ಧನುಸ್ಸು, ಬಾಣಗಳು ಮತ್ತು ಚಕ್ರಾಯುಧವನ್ನು ಹಿಡಿದು ಗುರಿಯಿಟ್ಟ ಯುದ್ಧದಲ್ಲಿ ಸರಿಸಾಟಿಯಿಲ್ಲದ ಕೃಷ್ಣನಿಗೆ ದೇವತೆಗಳೊಡನೆ ಸರ್ವ ಲೋಕಗಳೂ ಸೇರಿ ಏನುತಾನೆ ಅಸಾಧ್ಯ?
03120017a ತತೋಽನಿರುದ್ಧೋಽಪ್ಯಸಿಚರ್ಮಪಾಣಿರ್। ಮಹೀಮಿಮಾಂ ಧಾರ್ತರಾಷ್ಟ್ರೈರ್ವಿಸಂಜ್ಞೈಃ।
03120017c ಹೃತೋತ್ತಮಾಂಗೈರ್ನಿಹತೈಃ ಕರೋತು। ಕೀರ್ಣಾಂ ಕುಶೈರ್ವೇದಿಮಿವಾಧ್ವರೇಷು।।
ಅನಂತರ ಅನಿರುದ್ಧನು ಖಡ್ಗ ತೋಮರಗಳನ್ನು ಹಿಡಿದು ಈ ಭೂಮಿಯನ್ನು ಮೂರ್ಛೆತಪ್ಪಿ, ಅಂಗಾಗಳನ್ನು ತುಂಡರಿಸಿ ಕೊಂದು ಧಾರ್ತರಾಷ್ಟ್ರರಿಂದ, ಯಜ್ಞವೇದಿಯನ್ನು ದರ್ಬೆಗಳಿಂದ ತುಂಬಿಸುವಂತೆ ತುಂಬಿಸುತ್ತಾನೆ.
03120018a ಗದೋಲ್ಮುಕೌ ಬಾಹುಕಭಾನುನೀಥಾಃ। ಶೂರಶ್ಚ ಸಂಖ್ಯೇ ನಿಶಠಃ ಕುಮಾರಃ।
03120018c ರಣೋತ್ಕಟೌ ಸಾರಣಚಾರುದೇಷ್ಣೌ। ಕುಲೋಚಿತಂ ವಿಪ್ರಥಯಂತು ಕರ್ಮ।।
ಗದ, ಉಲ್ಮುಕ, ಬಾಹುಕ, ಭಾನು, ನೀಥ, ರಣಶೂರ ಬಾಲಕ ನಿಷಠ, ರಣೋತ್ಕಟ ಸಾರಣ ಮತ್ತು ಚಾರುದೇಷ್ಣರು ತಮ್ಮ ಕುಲಕ್ಕೆ ತಕ್ಕುದಾದ ಕಾರ್ಯಗಳನ್ನೆಸಗುತ್ತಾರೆ.
03120019a ಸವೃಷ್ಣಿಭೋಜಾಂಧಕಯೋಧಮುಖ್ಯಾ। ಸಮಾಗತಾ ಕ್ಷತ್ರಿಯಶೂರಸೇನಾ।
03120019c ಹತ್ವಾ ರಣೇ ತಾಂಧೃತರಾಷ್ಟ್ರಪುತ್ರಾಽಲ್। ಲೋಕೇ ಯಶಃ ಸ್ಫೀತಮುಪಾಕರೋತು।।
ವೃಷ್ಣಿ-ಅಂಧಕ-ಭೋಜ ಯೋಧಮುಖ್ಯರೂ ಸೇರಿ ಇಲ್ಲಿ ಸೇರಿರುವ ಕ್ಷತ್ರಿಯ ಸೇನಾಶೂರರು ರಣರಂಗದಲ್ಲಿ ಆ ಧೃತರಾಷ್ಟ್ರನ ಮಕ್ಕಳನ್ನು ಕೊಂದು ಲೋಕದಲ್ಲಿ ಉತ್ತಮ ಯಶಸ್ಸನ್ನು ಗಳಿಸಬೇಕು.
03120020a ತತೋಽಭಿಮನ್ಯುಃ ಪೃಥಿವೀಂ ಪ್ರಶಾಸ್ತು। ಯಾವದ್ವ್ರತಂ ಧರ್ಮಭೃತಾಂ ವರಿಷ್ಠಃ।
03120020c ಯುಧಿಷ್ಠಿರಃ ಪಾರಯತೇ ಮಹಾತ್ಮಾ। ದ್ಯೂತೇ ಯಥೋಕ್ತಂ ಕುರುಸತ್ತಮೇನ।।
ಧರ್ಮಭೃತ ವರಿಷ್ಠ ಮಹಾತ್ಮ ಕುರುಸತ್ತಮ ಯುಧಿಷ್ಠಿರನು ದ್ಯೂತದಲ್ಲಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತಿದ್ದರೆ ಅಭಿಮನ್ಯುವು ಈ ಭೂಮಿಯನ್ನು ಆಳಲಿ.
03120021a ಅಸ್ಮತ್ಪ್ರಮುಕ್ತೈರ್ವಿಶಿಖೈರ್ಜಿತಾರಿಸ್। ತತೋ ಮಹೀಂ ಭೋಕ್ಷ್ಯತಿ ಧರ್ಮರಾಜಃ।
03120021c ನಿರ್ಧಾರ್ತರಾಷ್ಟ್ರಾಂ ಹತಸೂತಪುತ್ರಾಂ। ಏತದ್ಧಿ ನಃ ಕೃತ್ಯತಮಂ ಯಶಶ್ಯಂ।।
ನಾವು ಬಿಟ್ಟ ಬಾಣಗಳಿಂದ ಅವನ ಶತ್ರುಗಳು ಹತರಾದ ನಂತರ ಧರ್ಮರಾಜನು ಭೂಮಿಯನ್ನು ಭೋಗಿಸುತ್ತಾನೆ. ಧಾರ್ತರಾಷ್ಟ್ರರು ಇಲ್ಲದಹಾಗೆ ಮಾಡುವುದು ಮತ್ತು ಸೂತಪುತ್ರನನ್ನು ಸಂಹರಿಸುವುದು ನಾವು ಮಾಡಬೇಕಾದ ಯಶಸ್ವೀ ಮತ್ತು ಅತ್ಯಂತ ಒಳ್ಳೆಯ ಕಾರ್ಯವೆಂದು ತಿಳಿಯಿರಿ.”
03120022 ವಾಸುದೇವ ಉವಾಚ।
03120022a ಅಸಂಶಯಂ ಮಾಧವ ಸತ್ಯಮೇತದ್। ಗೃಹ್ಣೀಮ ತೇ ವಾಕ್ಯಮದೀನಸತ್ತ್ವ।
03120022c ಸ್ವಾಭ್ಯಾಂ ಭುಜಾಭ್ಯಾಮಜಿತಾಂ ತು ಭೂಮಿಂ। ನೇಚ್ಚೇತ್ಕುರೂಣಾಮೃಷಭಃ ಕಥಂ ಚಿತ್।।
ವಾಸುದೇವನು ಹೇಳಿದನು: “ಮಾಧವ! ಇದು ಸತ್ಯವೆನ್ನುವುದರಲ್ಲಿ ಸಂಶಯವೇ ಇಲ್ಲ! ಅದೀನಸತ್ವ! ನಿನ್ನ ಮಾತುಗಳನ್ನು ಸ್ವೀಕರಿಸುತ್ತೇವೆ. ತಮ್ಮದೇ ಭುಜಬಲದಿಂದ ಗೆಲ್ಲದ ಭೂಮಿಯನ್ನು ಕುರುವೃಷಭನು ಹೇಗೂ ಒಪ್ಪುವುದಿಲ್ಲ.
03120023a ನ ಹ್ಯೇಷ ಕಾಮಾನ್ನ ಭಯಾನ್ನ ಲೋಭಾದ್। ಯುಧಿಷ್ಠಿರೋ ಜಾತು ಜಹ್ಯಾತ್ಸ್ವಧರ್ಮಂ।
03120023c ಭೀಮಾರ್ಜುನೌ ಚಾತಿರಥೌ ಯಮೌ ವಾ। ತಥೈವ ಕೃಷ್ಣಾ ದ್ರುಪದಾತ್ಮಜೇಯಂ।।
ಕಾಮದಿಂದಾಗಲೀ, ಭಯದಿಂದಾಗಲೀ ಅಥವಾ ಲೋಭದಿಂದಾಗಲೀ ಯುಧಿಷ್ಠಿರನು ತನ್ನ ಧರ್ಮವನ್ನು ಬಿಡುವುದಿಲ್ಲ. ಹಾಗೆಯೇ ಭೀಮಾರ್ಜುನರೂ, ಅತಿರಥ ಯಮಳರೂ, ದ್ರುಪದನ ಮಗಳು ಕೃಷ್ಣೆಯೂ ಕೂಡ.
03120024a ಉಭೌ ಹಿ ಯುದ್ಧೇಽಪ್ರತಿಮೌ ಪೃಥಿವ್ಯಾಂ। ವೃಕೋದರಶ್ಚೈವ ಧನಂಜಯಶ್ಚ।
03120024c ಕಸ್ಮಾನ್ನ ಕೃತ್ಸ್ನಾಂ ಪೃಥಿವೀಂ ಪ್ರಶಾಸೇನ್। ಮಾದ್ರೀಸುತಾಭ್ಯಾಂ ಚ ಪುರಸ್ಕೃತೋಽಯಂ।।
ಈ ಭೂಮಿಯಲ್ಲಿಯೇ ವೃಕೋದರ ಧನಂಜಯರಿಬ್ಬರೂ ಯುದ್ಧದಲ್ಲಿ ಅಪ್ರತಿಮರು. ಈ ಇಬ್ಬರೂ ಮಾದ್ರೀಸುತರಿಂದ ಪುರಸ್ಕೃತನಾದವನೇ ಈ ಇಡೀ ಪೃಥ್ವಿಯನ್ನು ಏಕೆ ಆಳಬಾರದು?
03120025a ಯದಾ ತು ಪಾಂಚಾಲಪತಿರ್ಮಹಾತ್ಮಾ। ಸಕೇಕಯಶ್ಚೇದಿಪತಿರ್ವಯಂ ಚ।
03120025c ಯೋತ್ಸ್ಯಾಮ ವಿಕ್ರಮ್ಯ ಪರಾಂಸ್ತದಾ ವೈ। ಸುಯೋಧನಸ್ತ್ಯಕ್ಷ್ಯತಿ ಜೀವಲೋಕಂ।।
ಮಹಾತ್ಮ ಪಾಂಚಾಲರಾಜ, ಕೇಕಯ ಮತ್ತು ಚೇದಿರಾಜರು ಮತ್ತು ನಾವೂ ಕೂಡ ಒಂದಾಗಿ ವಿಕ್ರಮದಿಂದ ಶತ್ರುಗಳ ಮೇಲೆ ಧಾಳಿಮಾಡಿದರೆ ಸುಯೋಧನನು ಜೀವಲೋಕವನ್ನು ತೊರೆಯುತ್ತಾನೆ.”
03120026 ಯುಧಿಷ್ಠಿರ ಉವಾಚ।
03120026a ನೈತಚ್ಚಿತ್ರಂ ಮಾಧವ ಯದ್ಬ್ರವೀಷಿ। ಸತ್ಯಂ ತು ಮೇ ರಕ್ಷ್ಯತಮಂ ನ ರಾಜ್ಯಂ।
03120026c ಕೃಷ್ಣಸ್ತು ಮಾಂ ವೇದ ಯಥಾವದೇಕಃ। ಕೃಷ್ಣಂ ಚ ವೇದಾಹಮಥೋ ಯಥಾವತ್।।
ಯುಧಿಷ್ಠಿರನು ಹೇಳಿದನು: “ಮಾಧವ! ನೀನು ಹೇಳುತ್ತಿರುವುದು ಸರಿಯಾದದ್ದೇ. ನನಗೆ ರಾಜ್ಯಕ್ಕಿಂತಲೂ ಸತ್ಯವನ್ನು ರಕ್ಷಿಸುವುದು ಮುಖ್ಯ. ನನ್ನಲ್ಲಿರುವ ವಿಚಾರಗಳು ಕೃಷ್ಣನಿಗೇ ಗೊತ್ತು. ಮತ್ತು ಕೃಷ್ಣನನ್ನೂ ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ.
03120027a ಯದೈವ ಕಾಲಂ ಪುರುಷಪ್ರವೀರೋ। ವೇತ್ಸ್ಯತ್ಯಯಂ ಮಾಧವ ವಿಕ್ರಮಸ್ಯ।
03120027c ತದಾ ರಣೇ ತ್ವಂ ಚ ಶಿನಿಪ್ರವೀರ। ಸುಯೋಧನಂ ಜೇಷ್ಯಸಿ ಕೇಶವಶ್ಚ।।
ಮಾಧವ! ಕೇಶವ! ಯಾವಾಗ ಪುರುಷಪ್ರವೀರರು ಇದು ವಿಕ್ರಮವನ್ನು ತೋರಿಸಲು ಸರಿಯಾದ ಸಮಯವೆಂದು ತಿಳಿದುಕೊಳ್ಳುತ್ತಾರೋ ಆಗ ರಣದಲ್ಲಿ ನೀನೂ ಶಿನಿಪ್ರವೀರನೂ ಸುಯೋಧನನನ್ನು ಗೆಲ್ಲುವಿರಿ.
03120028a ಪ್ರತಿಪ್ರಯಾಂತ್ವದ್ಯ ದಶಾರ್ಹವೀರಾ। ದೃಢೋಽಸ್ಮಿ ನಾಥೈರ್ನರಲೋಕನಾಥೈಃ।
03120028c ಧರ್ಮೇಽಪ್ರಮಾದಂ ಕುರುತಾಪ್ರಮೇಯಾ। ದ್ರಷ್ಟಾಸ್ಮಿ ಭೂಯಃ ಸುಖಿನಃ ಸಮೇತಾನ್।।
ಈಗ ದಶಾರ್ಹ ವೀರರು ಹಿಂದಿರುಗಲಿ. ನಾನು ನರಲೋಕನಾಥರಿಂದ ರಕ್ಷಿಸಲ್ಪಟ್ಟಿದ್ದೇನೆ ಎನ್ನುವುದು ಧೃಡ! ಅಪ್ರಮೇಯರೇ! ಧರ್ಮವನ್ನು ಪಾಲಿಸಿ! ಇನ್ನೊಮ್ಮೆ ಸಂತೋಷದ ಸಮಯದಲ್ಲಿ ಒಂದಾಗೋಣ!””
03120029 ವೈಶಂಪಾಯನ ಉವಾಚ।
03120029a ತೇಽನ್ಯೋನ್ಯಮಾಮಂತ್ರ್ಯ ತಥಾಭಿವಾದ್ಯ। ವೃದ್ಧಾನ್ಪರಿಸ್ವಜ್ಯ ಶಿಶೂಂಶ್ಚ ಸರ್ವಾನ್।
03120029c ಯದುಪ್ರವೀರಾಃ ಸ್ವಗೃಹಾಣಿ ಜಗ್ಮೂ। ರಾಜಾಪಿ ತೀರ್ಥಾನ್ಯನುಸಂಚಚಾರ।।
ವೈಶಂಪಾಯನನು ಹೇಳಿದನು: “ಅವರು ಅನ್ಯೋನ್ಯರನ್ನು ಕರೆದು ಅಭಿವಂದಿಸಿ ವೃದ್ಧರನ್ನೂ ಮಕ್ಕಳನ್ನೂ ಎಲ್ಲರನ್ನೂ ಆಲಂಗಿಸಿ ಯದುಪ್ರವೀರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ರಾಜನಾದರೋ ಅನ್ಯ ತೀರ್ಥಗಳಿಗೆ ಮುಂದುವರೆದನು.
03120030a ವಿಸೃಜ್ಯ ಕೃಷ್ಣಂ ತ್ವಥ ಧರ್ಮರಾಜೋ। ವಿದರ್ಭರಾಜೋಪಚಿತಾಂ ಸುತೀರ್ಥಾಂ।
03120030c ಸುತೇನ ಸೋಮೇನ ವಿಮಿಶ್ರಿತೋದಾಂ। ತತಃ ಪಯೋಷ್ಣೀಂ ಪ್ರತಿ ಸ ಹ್ಯುವಾಸ।।
ಕೃಷ್ಣನು ಹೊರಟುಹೋದ ನಂತರ ಧರ್ಮರಾಜನು ವಿದರ್ಭರಾಜನಿಂದ ವಿರಚಿತ ಉತ್ತಮ ತೀರ್ಥಗಳಿಗೆ ಹೊರಟನು. ಅಲ್ಲಿಯೇ ಸೋಮವನ್ನು ಕಡೆಯುವಾಗ ಬಿದ್ದ ಸೋಮದಿಂದ ಮಿಶ್ರಿತ ಪಯೋಷ್ಣಿ ನದಿಯು ಹರಿಯುತ್ತದೆ.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಪ್ರಭಾಸೇ ಯಾದವಪಾಂಡವಸಮಾಗಮೇ ವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಪ್ರಭಾಸದಲ್ಲಿ ಯಾದವಪಾಂಡವಸಮಾಗಮದಲ್ಲಿ ನೂರಾಇಪ್ಪತ್ತನೆಯ ಅಧ್ಯಾಯವು.