ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 119
ಸಾರ
ಯುಧಿಷ್ಠಿರನ ಮೇಲಿನ ಅನುಕಂಪದಿಂದ ಬಲರಾಮನು ದುರ್ಯೋಧನನನ್ನು ನಿಂದಿಸುವುದು; ಸೇಡು ತೀರಿಸಿಕೊಳ್ಳಬೇಕೆನ್ನುವುದು (1-22).
03119001 ಜನಮೇಜಯ ಉವಾಚ।
03119001a ಪ್ರಭಾಸತೀರ್ಥಂ ಸಂಪ್ರಾಪ್ಯ ವೃಷ್ಣಯಃ ಪಾಂಡವಾಸ್ತಥಾ।
03119001c ಕಿಮಕುರ್ವನ್ಕಥಾಶ್ಚೈಷಾಂ ಕಾಸ್ತತ್ರಾಸಂಸ್ತಪೋಧನ।।
ಜನಮೇಜಯನು ಹೇಳಿದನು: “ತಪೋಧನ! ಪ್ರಭಾಸತೀರ್ಥದಲ್ಲಿ ವೃಷ್ಣಿಗಳೂ ಪಾಂಡವರೂ ಸೇರಿದಾಗ ಅವರು ಅಲ್ಲಿ ಏನು ಮಾಡಿದರು? ಯಾವ ವಿಷಯದ ಕುರಿತು ಮಾತನಾಡಿದರು?
03119002a ತೇ ಹಿ ಸರ್ವೇ ಮಹಾತ್ಮಾನಃ ಸರ್ವಶಾಸ್ತ್ರವಿಶಾರದಾಃ।
03119002c ವೃಷ್ಣಯಃ ಪಾಂಡವಾಶ್ಚೈವ ಸುಹೃದಶ್ಚ ಪರಸ್ಪರಂ।।
ಅವರೆಲ್ಲರೂ ಮಹಾತ್ಮರು ಮತ್ತು ಸರ್ವ ಶಾಸ್ತ್ರ ವಿಶಾರದರು. ವೃಷ್ಣಿಗಳೂ ಪಾಂಡವರೂ ಪರಸ್ಪರ ಸುಹೃದಯಿಗಳು.”
03119003 ವೈಶಂಪಾಯನ ಉವಾಚ।
03119003a ಪ್ರಭಾಸತೀರ್ಥಂ ಸಂಪ್ರಾಪ್ಯ ಪುಣ್ಯಂ ತೀರ್ಥಂ ಮಹೋದಧೇಃ।
03119003c ವೃಷ್ಣಯಃ ಪಾಂಡವಾನ್ವೀರಾನ್ಪರಿವಾರ್ಯೋಪತಸ್ಥಿರೇ।।
ವೈಶಂಪಾಯನನು ಹೇಳಿದನು: “ಸಾಗರ ತೀರದಲ್ಲಿ ಪುಣ್ಯ ತೀರ್ಥ ಪ್ರಭಾಸತೀರ್ಥದಲ್ಲಿ ಸೇರಿದಾಗ ವೃಷ್ಣಿಗಳು ವೀರ ಪಾಂಡವರನ್ನು ಸುತ್ತುವರೆದು ಗೌರವಿಸಿದರು.
03119004a ತತೋ ಗೋಕ್ಷೀರಕುಂದೇಂದುಮೃಣಾಲರಜತಪ್ರಭಃ।
03119004c ವನಮಾಲೀ ಹಲೀ ರಾಮೋ ಬಭಾಷೇ ಪುಷ್ಕರೇಕ್ಷಣಂ।।
ಆಗ ಹಸುವಿನ ಹಾಲಿನಂತೆ, ಮಲ್ಲಿಗೆಯಂತೆ, ಚಂದ್ರನಂತೆ, ಕಮಲದ ಎಳೆಯಂತೆ ಬಿಳಿಯಾಗಿ ಹೊಳೆಯುತ್ತಿದ್ದ ವನಮಾಲಿ, ಹಲಾಯುಧ ರಾಮನು ಪುಷ್ಕರೇಕ್ಷಣ ಕೃಷ್ಣನಿಗೆ ಹೇಳಿದನು:
03119005a ನ ಕೃಷ್ಣ ಧರ್ಮಶ್ಚರಿತೋ ಭವಾಯ। ಜಂತೋರಧರ್ಮಶ್ಚ ಪರಾಭವಾಯ।
03119005c ಯುಧಿಷ್ಠಿರೋ ಯತ್ರ ಜಟೀ ಮಹಾತ್ಮಾ। ವನಾಶ್ರಯಃ ಕ್ಲಿಶ್ಯತಿ ಚೀರವಾಸಾಃ।।
“ಕೃಷ್ಣ! ಮಹಾತ್ಮ ಯುಧಿಷ್ಠಿರನು ಜಟಾಧಾರಿಯಾಗಿ ಚೀರವಸ್ತ್ರಗಳನ್ನು ಧರಿಸಿ ವನವನ್ನಾಶ್ರಯಿಸಿ ಕಷ್ಟಪಡುತ್ತಿದ್ದಾನೆ ಎಂದರೆ ಧರ್ಮದಲ್ಲಿ ನಡೆಯುವವರಿಗೆ ಜಯವಾಗಲೀ ಅಧರ್ಮದಲ್ಲಿ ನಡೆಯುವವರಿಗೆ ಪರಾಭವವಾಗಲೀ ಇಲ್ಲವೆಂದಲ್ಲವೇ!
03119006a ದುರ್ಯೋಧನಶ್ಚಾಪಿ ಮಹೀಂ ಪ್ರಶಾಸ್ತಿ। ನ ಚಾಸ್ಯ ಭೂಮಿರ್ವಿವರಂ ದದಾತಿ।
03119006c ಧರ್ಮಾದಧರ್ಮಶ್ಚರಿತೋ ಗರೀಯಾನ್। ಇತೀವ ಮನ್ಯೇತ ನರೋಽಲ್ಪಬುದ್ಧಿಃ।।
ದುರ್ಯೋಧನನು ಭೂಮಿಯನ್ನು ಆಳುತ್ತಿದ್ದಾನೆ. ಆದರೆ ಭೂಮಿಯು ಅವನನ್ನು ಕಬಳಿಸುವುದಿಲ್ಲ. ಇದರಿಂದ ಅಲ್ಪಬುದ್ಧಿ ನರನು ಧರ್ಮದಲ್ಲಿ ನಡೆಯುವುದಕ್ಕಿಂತ ಅಧರ್ಮದಲ್ಲಿ ನಡೆಯುವುದೇ ಲೇಸು ಎಂದು ಅಂದುಕೊಳ್ಳಬಹುದು.
03119007a ದುರ್ಯೋಧನೇ ಚಾಪಿ ವಿವರ್ಧಮಾನೇ। ಯುಧಿಷ್ಠಿರೇ ಚಾಸುಖ ಆತ್ತರಾಜ್ಯೇ।
03119007c ಕಿಂ ನ್ವದ್ಯ ಕರ್ತವ್ಯಮಿತಿ ಪ್ರಜಾಭಿಃ। ಶಂಕಾ ಮಿಥಃ ಸಂಜನಿತಾ ನರಾಣಾಂ।।
ದುರ್ಯೋಧನನು ಅಭಿವೃದ್ಧಿ ಹೊಂದುತ್ತಿದ್ದಾನೆ ಮತ್ತು ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡು ಅಸುಖಿಯಾಗಿದ್ದಾನೆ ಎಂದರೆ ಸಾಧಾರಣ ಜನರು ಏಳಿಗೆ ಹೊಂದಲು ಏನು ಮಾಡಬೇಕು ಎಂದು ಮನುಷ್ಯರಲ್ಲಿ ಒಂದು ಶಂಖೆಯು ಮೂಡುವುದಿಲ್ಲವೇ?
03119008a ಅಯಂ ಹಿ ಧರ್ಮಪ್ರಭವೋ ನರೇಂದ್ರೋ। ಧರ್ಮೇ ರತಃ ಸತ್ಯಧೃತಿಃ ಪ್ರದಾತಾ।
03119008c ಚಲೇದ್ಧಿ ರಾಜ್ಯಾಚ್ಚ ಸುಖಾಚ್ಚ ಪಾರ್ಥೋ। ಧರ್ಮಾದಪೇತಶ್ಚ ಕಥಂ ವಿವರ್ಧೇತ್।।
ಧರ್ಮವೇ ಬಲವಾಗಿದ್ದ, ಧರ್ಮರತನಾದ, ಸತ್ಯಧೃತಿಯಾದ, ದಾನಿಯಾದ ಈ ರಾಜನು ರಾಜ್ಯವನ್ನು ಕಳೆದುಕೊಂಡನೆಂದರೆ, ಪಾರ್ಥರು ಏಳಿಗೆ ಹೊಂದಬೇಕೆಂದರೆ ಅವರು ಧರ್ಮದ ದಾರಿಯನ್ನು ಬಿಡಬೇಕೇ?
03119009a ಕಥಂ ನು ಭೀಷ್ಮಶ್ಚ ಕೃಪಶ್ಚ ವಿಪ್ರೋ। ದ್ರೋಣಶ್ಚ ರಾಜಾ ಚ ಕುಲಸ್ಯ ವೃದ್ಧಃ।
03119009c ಪ್ರವ್ರಾಜ್ಯ ಪಾರ್ಥಾನ್ಸುಖಮಾಪ್ನುವಂತಿ। ಧಿಕ್ಪಾಪಬುದ್ಧೀನ್ಭರತಪ್ರಧಾನಾನ್।।
ಪಾರ್ಥರನ್ನು ಹೊರಗಟ್ಟಿ ಹೇಗೆ ತಾನೇ ಭೀಷ್ಮ, ವಿಪ್ರರಾದ ಕೃಪ ದ್ರೋಣರು, ಕುಲದ ವೃದ್ಧ ರಾಜನು ಸುಖವನ್ನು ಹೊಂದಿದ್ದಾರೆ? ಭರತ ಪ್ರಧಾನರ ಪಾಪಬುದ್ಧಿಗೆ ಧಿಕ್ಕಾರ!
03119010a ಕಿಂ ನಾಮ ವಕ್ಷ್ಯತ್ಯವನಿಪ್ರಧಾನಃ। ಪಿತೄನ್ಸಮಾಗಮ್ಯ ಪರತ್ರ ಪಾಪಃ।
03119010c ಪುತ್ರೇಷು ಸಮ್ಯಕ್ಚರಿತಂ ಮಯೇತಿ। ಪುತ್ರಾನಪಾಪಾನವರೋಪ್ಯ ರಾಜ್ಯಾತ್।।
ಪಾಪವೆಸಗದೇ ಇದ್ದ ಮಕ್ಕಳನ್ನು ರಾಜ್ಯದಿಂದ ಹೊರಹಾಕಿ ರಾಜನು ತನ್ನ ಪಿತೃಗಳನ್ನು ಸೇರಿದಾಗ ಏನು ಹೇಳುತ್ತಾನೆ? ತಾನು ಇನ್ನೊಬ್ಬರ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಪಾಪವೆಸಗಿದ್ದೇನೆಂದೇ?
03119011a ನಾಸೌ ಧಿಯಾ ಸಂಪ್ರತಿಪಶ್ಯತಿ ಸ್ಮ। ಕಿಂ ನಾಮ ಕೃತ್ವಾಹಮಚಕ್ಷುರೇವಂ।
03119011c ಜಾತಃ ಪೃಥಿವ್ಯಾಮಿತಿ ಪಾರ್ಥಿವೇಷು। ಪ್ರವ್ರಾಜ್ಯ ಕೌಂತೇಯಮಥಾಪಿ ರಾಜ್ಯಾತ್।।
ಪಾರ್ಥಿವರಲ್ಲಿ ಕುರುಡನಾಗಿ ಹುಟ್ಟಿದ ತಾನು ತನ್ನ ಬುದ್ಧಿಯ ಕಣ್ಣುಗಳಿಂದ ನೋಡದೇ ಕೌಂತೇಯರನ್ನು ರಾಜ್ಯದಿಂದ ಹೊರ ಹಾಕಿದೆನೆಂದು ಹೇಳುತ್ತಾನೆಯೇ?
03119012a ನೂನಂ ಸಮೃದ್ಧಾನ್ಪಿತೃಲೋಕಭೂಮೌ। ಚಾಮೀಕರಾಭಾನ್ ಕ್ಷಿತಿಜಾನ್ ಪ್ರಫುಲ್ಲಾನ್।
03119012c ವಿಚಿತ್ರವೀರ್ಯಸ್ಯ ಸುತಃ ಸಪುತ್ರಃ। ಕೃತ್ವಾ ನೃಶಂಸಂ ಬತ ಪಶ್ಯತಿ ಸ್ಮ।।
ತನ್ನ ಪುತ್ರರೊಂದಿಗೆ ವಿಚಿತ್ರವೀರ್ಯನ ಮಗನು ಪಿತೃಲೋಕದ ನೆಲದಲ್ಲಿ ಸಮೃದ್ಧವಾಗಿ ಚಿಗುರುವ ಬಂಗಾರದ ಬಣ್ಣದ ಮರಗಳನ್ನು ಖಂಡಿತವಾಗಿಯೂ ನೋಡುತ್ತಾನೆ.
03119013a ವ್ಯೂಢೋತ್ತರಾಂಸಾನ್ಪೃಥುಲೋಹಿತಾಕ್ಷಾನ್। ನೇಮಾನ್ಸ್ಮ ಪೃಚ್ಚನ್ಸ ಶೃಣೋತಿ ನೂನಂ।
03119013c ಪ್ರಸ್ಥಾಪಯದ್ಯತ್ಸ ವನಂ ಹ್ಯಶಂಕೋ। ಯುಧಿಷ್ಠಿರಂ ಸಾನುಜಮಾತ್ತಶಸ್ತ್ರಂ।।
ಆ ಎತ್ತರ ಮತ್ತು ಅಗಲ ಭುಜಗಳನ್ನು ಹೊಂದಿದ, ಅಗಲವಾದ ಕೆಂಪು ಕಣ್ಣುಗಳುಳ್ಳವರನ್ನು ಕೇಳುವ ಅವಶ್ಯಕತೆಯಿಲ್ಲ. ಯಾಕೆಂದರೆ ಅವರು ಶಸ್ತ್ರಗಳನ್ನು ಪಡೆದ ಯುಧಿಷ್ಠಿರನನ್ನು ಅವನ ತಮ್ಮಂದಿರನ್ನು ಶಂಕೆಯಿಲ್ಲದೇ ಅರಣ್ಯಕ್ಕೆ ಅಟ್ಟಿದರೆಂದು ಉತ್ತರಿಸುತ್ತಾರೆ.
03119014a ಯೋಽಯಂ ಪರೇಷಾಂ ಪೃತನಾಂ ಸಮೃದ್ಧಾಂ। ನಿರಾಯುಧೋ ದೀರ್ಘಭುಜೋ ನಿಹನ್ಯಾತ್।
03119014c ಶ್ರುತ್ವೈವ ಶಬ್ಧಂ ಹಿ ವೃಕೋದರಸ್ಯ। ಮುಂಚಂತಿ ಸೈನ್ಯಾನಿ ಶಕೃತ್ಸಮೂತ್ರಂ।।
ಈ ದೀರ್ಘಭುಜಗಳ ವೃಕೋದರನು ಆ ಶತ್ರುಗಳ ಸಮೃದ್ಧ ಸೇನೆಯನ್ನು ನಿರಾಯುಧನಾಗಿಯೇ ಸದೆಬಡಿಯುತ್ತಾನೆ! ಅವನ ಯುದ್ಧಗರ್ಜನೆಯನ್ನು ಕೇಳಿದ ಸೇನೆಗಳು ಮಲ ಮೂತ್ರಗಳ ವಿಸರ್ಜನೆ ಮಾಡುತ್ತಾರೆ!
03119015a ಸ ಕ್ಷುತ್ಪಿಪಾಸಾಧ್ವಕೃಶಸ್ತರಸ್ವೀ। ಸಮೇತ್ಯ ನಾನಾಯುಧಬಾಣಪಾಣಿಃ।
03119015c ವನೇ ಸ್ಮರನ್ವಾಸಮಿಮಂ ಸುಘೋರಂ। ಶೇಷಂ ನ ಕುರ್ಯಾದಿತಿ ನಿಶ್ಚಿತಂ ಮೇ।।
ಹಸಿವೆ, ಬಾಯಾರಿಕೆ ಮತ್ತು ಪ್ರಯಾಣದಿಂದ ಕೃಶನಾಗಿರುವ ಈ ತರಸ್ವಿಯು ಆಯುಧ ಬಾಣಗಳನ್ನು ಹಿಡಿದು ಅವರನ್ನು ಎದುರಿಸಿದಾಗ ಘೋರತರವಾದ ಈ ಅರಣ್ಯವಾಸವನ್ನು ನೆನಪಿಸಿಕೊಂಡು ಅವರನ್ನು ನಿಃಶೇಷಗೊಳಿಸುತ್ತಾನೆ ಎನ್ನುವುದು ನನಗೆ ಖಂಡಿತವೆನಿಸುತ್ತದೆ.
03119016a ನ ಹ್ಯಸ್ಯ ವೀರ್ಯೇಣ ಬಲೇನ ಕಶ್ಚಿತ್। ಸಮಃ ಪೃಥಿವ್ಯಾಂ ಭವಿತಾ ನರೇಷು।
03119016c ಶೀತೋಷ್ಣವಾತಾತಪಕರ್ಶಿತಾಂಗೋ। ನ ಶೇಷಮಾಜಾವಸುಹೃತ್ಸು ಕುರ್ಯಾತ್।।
ಇವನ ವೀರ್ಯ ಮತ್ತು ಬಲಕ್ಕೆ ಸರಿಸಾಟಿಯಾದವನು ಎಂದೂ ಈ ಪೃಥ್ವಿಯ ರಾಜರಲ್ಲಿ ಇರಲಿಲ್ಲ ಮತ್ತು ಇರಲಾರರು! ಛಳಿ, ಸೆಖೆ, ಗಾಳಿ ಮತ್ತು ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಇವನು ರಣರಂಗದಲ್ಲಿ ತನ್ನ ಶತ್ರುಗಳು ಉಳಿಯದಂತೆ ಮಾಡುತ್ತಾನೆ!
03119017a ಪ್ರಾಚ್ಯಾಂ ನೃಪಾನೇಕರಥೇನ ಜಿತ್ವಾ। ವೃಕೋದರಃ ಸಾನುಚರಾನ್ರಣೇಷು।
03119017c ಸ್ವಸ್ತ್ಯಾಗಮದ್ಯೋಽತಿರಥಸ್ತರಸ್ವೀ। ಸೋಽಯಂ ವನೇ ಕ್ಲಿಶ್ಯತಿ ಚೀರವಾಸಾಃ।।
ರಥದಲ್ಲಿ ಏಕಾಂಗಿಯಾಗಿದ್ದು ಪೂರ್ವದಿಕ್ಕಿನ ರಾಜರನ್ನು ರಣದಲ್ಲಿ ಅನುಚರರೊಂದಿಗೆ ಗೆದ್ದನಂತರ ಸ್ವಾಗತಿಸಲ್ಪಟ್ಟ ಆ ಅತಿರಥ, ತರಸ್ವೀ ವೃಕೋದರನು ಇಂದು ವನದಲ್ಲಿ ಚೀರವನ್ನು ಧರಿಸಿಕೊಂಡು ಕಷ್ಟಪಡುತ್ತಿದ್ದಾನೆ!
03119018a ಯೋ ದಂತಕೂರೇ ವ್ಯಜಯನ್ನೃದೇವಾನ್। ಸಮಾಗತಾನ್ದಾಕ್ಷಿಣಾತ್ಯಾನ್ಮಹೀಪಾನ್।
03119018c ತಂ ಪಶ್ಯತೇಮಂ ಸಹದೇವಮದ್ಯ। ತಪಸ್ವಿನಂ ತಾಪಸವೇಷರೂಪಂ।।
ದಂತಕೂರದಲ್ಲಿ ಸೇರಿದ್ದ ದಕ್ಷಿಣಾತ್ಯದ ಮಹೀಪಾಲ ರಾಜರುಗಳನ್ನು ಸೋಲಿಸಿದ ಈ ಸಹದೇವನು ಇಂದು ತಪಸ್ವಿಗಳಂತೆ ತಾಪಸವೇಷ ಧರಿಸಿದುದನ್ನು ನೋಡು!
03119019a ಯಃ ಪಾರ್ಥಿವಾನೇಕರಥೇನ ವೀರೋ। ದಿಶಂ ಪ್ರತೀಚೀಂ ಪ್ರತಿ ಯುದ್ಧಶೌಂಡಃ।
03119019c ಸೋಽಯಂ ವನೇ ಮೂಲಫಲೇನ ಜೀವಂ। ಜಟೀ ಚರತ್ಯದ್ಯ ಮಲಾಚಿತಾಂಗಃ।।
ಒಂಟಿಯಾಗಿ ರಥದಲ್ಲಿ ಕುಳಿತು ಪಶ್ಚಿಮದಿಕ್ಕಿನಲ್ಲಿದ್ದ ಯುದ್ಧದ ಮತ್ತೇರಿದ್ದ ರಾಜರುಗಳನ್ನು ಸೋಲಿಸಿದ ವೀರನು ಈ ವನದಲ್ಲಿ ಇಂದು ಜಟಾಧಾರಿಯಾಗಿ, ಮಲಿನಾಂಗನಾಗಿ ಸಂಚರಿಸುತ್ತಾ, ಫಲಮೂಲಗಳಿಂದ ಜೀವನವನ್ನು ನಡೆಸುತ್ತಿದ್ದಾನಲ್ಲಾ!
03119020a ಸತ್ರೇ ಸಮೃದ್ಧೇಽತಿ ರಥಸ್ಯ ರಾಜ್ಞೋ। ವೇದೀತಲಾದುತ್ಪತಿತಾ ಸುತಾ ಯಾ।
03119020c ಸೇಯಂ ವನೇ ವಾಸಮಿಮಂ ಸುದುಃಖಂ। ಕಥಂ ಸಹತ್ಯದ್ಯ ಸತೀ ಸುಖಾರ್ಹಾ।।
ಸಮೃದ್ಧವಾದ ಸತ್ರದ ವೇದಿಯಿಂದ ಉತ್ಪನ್ನಳಾದ ಅತಿರಥ ರಾಜನ ಮಗಳು, ಸುಖಾರ್ಹಳಾದ ಈ ಸತಿಯು ಹೇಗೆ ತಾನೇ ಈ ವನವಾಸದ ದುಃಖವನ್ನು ಇಂದು ಸಹಿಸಿಕೊಂಡಿದ್ದಾಳೆ?
03119021a ತ್ರಿವರ್ಗಮುಖ್ಯಸ್ಯ ಸಮೀರಣಸ್ಯ। ದೇವೇಶ್ವರಸ್ಯಾಪ್ಯಥ ವಾಶ್ವಿನೋಶ್ಚ।
03119021c ಏಷಾಂ ಸುರಾಣಾಂ ತನಯಾಃ ಕಥಂ ನು। ವನೇ ಚರಂತ್ಯಲ್ಪಸುಖಾಃ ಸುಖಾರ್ಹಾಃ।।
ತ್ರಿವರ್ಗಮುಖ್ಯನ, ಸಮೀರಣನ, ದೇವೇಶ್ವರನ ಮತ್ತು ಅಶ್ವಿನಿಯರ - ಈ ಸುರರ ಮಕ್ಕಳು, ಸುಖಕ್ಕೆ ಅರ್ಹರಾಗಿದ್ದರೂ, ಹೇಗೆ ತಾನೇ ಕಷ್ಟಕರ ಅರಣ್ಯದಲ್ಲಿ ಅಲೆಯುತ್ತಿದ್ದಾರೆ?
03119022a ಜಿತೇ ಹಿ ಧರ್ಮಸ್ಯ ಸುತೇ ಸಭಾರ್ಯೇ। ಸಭ್ರಾತೃಕೇ ಸಾನುಚರೇ ನಿರಸ್ತೇ।
03119022c ದುರ್ಯೋಧನೇ ಚಾಪಿ ವಿವರ್ಧಮಾನೇ। ಕಥಂ ನ ಸೀದತ್ಯವನಿಃ ಸಶೈಲಾ।।
ಹೆಂಡತಿಯೊಂದಿಗೆ ಧರ್ಮಜನನನ್ನು ಗೆದ್ದು, ತಮ್ಮಂದಿರು ಮತ್ತು ಅನುಯಾಯಿಗಳೊಂದಿಗೆ ಅವನನ್ನು ಹೊರಗಟ್ಟಿಯೂ ದುರ್ಯೋಧನನು ಅಭಿವೃದ್ಧಿಹೊಂದುತ್ತಿದ್ದಾನಾದರೂ ಗಿರಿಶಿಖರಗಳೊಡನೆ ಈ ಭೂಮಿಯು ಏಕೆ ನಾಶವಾಗುತ್ತಿಲ್ಲ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಪ್ರಭಾಸೇ ಯಾದವಪಾಂಡವಸಮಾಗಮೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಪ್ರಭಾಸದಲ್ಲಿ ಯಾದವಪಾಂಡವಸಮಾಗಮದಲ್ಲಿ ನೂರಾಹತ್ತೊಂಭತ್ತನೆಯ ಅಧ್ಯಾಯವು.