ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 117
ಸಾರ
ಕ್ಷತ್ರಿಯರೆಲ್ಲರನ್ನೂ ವಧಿಸುವುದಾಗಿ ರಾಮನು ಪ್ರತಿಜ್ಞೆಮಾಡಿದುದು (1-6). ಪರಶುರಾಮನು ೨೧ ಬಾರಿ ಕ್ಷತ್ರಿಯ ನಿರ್ಮೂಲನ ಮಾಡಿ, ಭೂಮಿಯನ್ನು ಬ್ರಾಹ್ಮಣರಿಗಿತ್ತು ಮಹೇಂದ್ರಗಿರಿಯನ್ನು ಸೇರಿದ್ದುದು (7-18).
03117001 ರಾಮ ಉವಾಚ।
03117001a ಮಮಾಪರಾಧಾತ್ತೈಃ ಕ್ಷುದ್ರೈರ್ಹತಸ್ತ್ವಂ ತಾತ ಬಾಲಿಶೈಃ।
03117001c ಕಾರ್ತವೀರ್ಯಸ್ಯ ದಾಯಾದೈರ್ವನೇ ಮೃಗ ಇವೇಷುಭಿಃ।।
ರಾಮನು ಹೇಳಿದನು: “ಅಪ್ಪಾ! ನನ್ನ ಅಪರಾಧದಿಂದಲೇ ಈ ಕ್ಷುದ್ರ ಬಾಲಿಶ ಕಾರ್ತವೀರ್ಯನ ದಾಯದಿಗಳು ವನದಲ್ಲಿ ಮೃಗವನ್ನು ಬಾಣಗಳಿಂದ ಕೊಲ್ಲುವಂತೆ ನಿನ್ನನ್ನು ಕೊಂದಿದ್ದಾರೆ.
03117002a ಧರ್ಮಜ್ಞಸ್ಯ ಕಥಂ ತಾತ ವರ್ತಮಾನಸ್ಯ ಸತ್ಪಥೇ।
03117002c ಮೃತ್ಯುರೇವಂವಿಧೋ ಯುಕ್ತಃ ಸರ್ವಭೂತೇಷ್ವನಾಗಸಃ।।
ಅಪ್ಪಾ! ಸತ್ಯಪಥದಲ್ಲಿ ನಡೆದುಕೊಂಡು ಹೋಗುತ್ತಿರುವ, ಎಲ್ಲ ಭೂತಗಳಿಗೂ ಅನಾಗಸನಾಗಿರುವ ಧರ್ಮಜ್ಞನಾದ ನಿನಗೆ ಈ ರೀತಿಯ ಮೃತ್ಯುವು ಹೇಗೆ ಸರಿಯಾಗುತ್ತದೆ?
03117003a ಕಿಂ ನು ತೈರ್ನ ಕೃತಂ ಪಾಪಂ ಯೈರ್ಭವಾಂಸ್ತಪಸಿ ಸ್ಥಿತಃ।
03117003c ಅಯುಧ್ಯಮಾನೋ ವೃದ್ಧಃ ಸನ್ ಹತಃ ಶರಶತೈಃ ಶಿತೈಃ।।
ತಪಸ್ಥನಾಗಿದ್ದ ಯುದ್ಧಮಾಡದೇ ಇರುವ ವೃದ್ಧನಾದ ನಿನ್ನನ್ನು ನೂರಾರು ಹರಿತ ಬಾಣಗಳಿಂದ ಕೊಂದು ಅವರು ಎಷ್ಟು ಪಾಪಗಳನ್ನು ಸಂಗ್ರಹಿಸಿರಲಿಕ್ಕಿಲ್ಲ?
03117004a ಕಿಂ ನು ತೇ ತತ್ರ ವಕ್ಷ್ಯಂತಿ ಸಚಿವೇಷು ಸುಹೃತ್ಸು ಚ।
03117004c ಅಯುಧ್ಯಮಾನಂ ಧರ್ಮಜ್ಞಮೇಕಂ ಹತ್ವಾನಪತ್ರಪಾಃ।।
ಹೋರಾಡದೇ ಇದ್ದ ಏಕಾಂಗಿಯಾಗಿದ್ದ ಧರ್ಮಜ್ಞನನ್ನು ನಾಚಿಕೆಯಿಲ್ಲದೇ ಕೊಂದ ಅವರು ತಮ್ಮ ಸಚಿವರಿಗೆ ಮತ್ತು ಸ್ನೇಹಿತರಿಗೆ ಏನೆಂದು ಹೇಳುವುದಿಲ್ಲ?””
03117005 ಅಕೃತವ್ರಣ ಉವಾಚ।
03117005a ವಿಲಪ್ಯೈವಂ ಸ ಕರುಣಂ ಬಹು ನಾನಾವಿಧಂ ನೃಪ।
03117005c ಪ್ರೇತಕಾರ್ಯಾಣಿ ಸರ್ವಾಣಿ ಪಿತುಶ್ಚಕ್ರೇ ಮಹಾತಪಾಃ।।
ಅಕೃತವ್ರಣನು ಹೇಳಿದನು: “ನೃಪ! ಈ ರೀತಿ ಆ ಕರುಣಿಯು ನಾನಾವಿಧವಾಗಿ ವಿಲಪಿಸಿದನು ಮತ್ತು ಆ ಮಹಾತಪಸ್ವಿಯು ತಂದೆಯ ಪ್ರೇತಕರ್ಮಗಳೆಲ್ಲವನ್ನೂ ನಡೆಸಿದನು.
03117006a ದದಾಹ ಪಿತರಂ ಚಾಗ್ನೌ ರಾಮಃ ಪರಪುರಂಜಯಃ।
03117006c ಪ್ರತಿಜಜ್ಞೇ ವಧಂ ಚಾಪಿ ಸರ್ವಕ್ಷತ್ರಸ್ಯ ಭಾರತ।।
ಪರಪುರಂಜಯ ರಾಮನು ತಂದೆಯನ್ನು ಅಗ್ನಿಯಲ್ಲಿ ದಹಿಸಿದನು ಮತ್ತು ಭಾರತ! ಕ್ಷತ್ರಿಯರೆಲ್ಲರನ್ನೂ ವಧಿಸುವ ಪ್ರತಿಜ್ಞೆ ಮಾಡಿದನು.
03117007a ಸಂಕ್ರುದ್ಧೋಽತಿಬಲಃ ಶೂರಃ ಶಸ್ತ್ರಮಾದಾಯ ವೀರ್ಯವಾನ್।
03117007c ಜಘ್ನಿವಾನ್ಕಾರ್ತವೀರ್ಯಸ್ಯ ಸುತಾನೇಕೋಽಅಂತಕೋಪಮಃ।।
ಅಂತಕನಂತಿದ್ದ ಆ ಅತಿಬಲ ಶೂರ ವೀರ್ಯವಂತನು ಕೋಪದಿಂದ ಶಸ್ತ್ರವನ್ನು ಹಿಡಿದು ಒಬ್ಬನೇ ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿದನು.
03117008a ತೇಷಾಂ ಚಾನುಗತಾ ಯೇ ಚ ಕ್ಷತ್ರಿಯಾಃ ಕ್ಷತ್ರಿಯರ್ಷಭ।
03117008c ತಾಂಶ್ಚ ಸರ್ವಾನವಾಮೃದ್ನಾದ್ರಾಮಃ ಪ್ರಹರತಾಂ ವರಃ।।
ಕ್ಷತ್ರಿಯರ್ಷಭ! ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಅವರ ಅನುಯಾಯಿ ಕ್ಷತ್ರಿಯರೆಲ್ಲರನ್ನೂ ಸದೆಬಡಿದನು.
03117009a ತ್ರಿಹ್ಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ।
03117009c ಸಮಂತಪಂಚಕೇ ಪಂಚ ಚಕಾರ ರುಧಿರಹ್ರದಾನ್।।
ಇಪ್ಪತ್ತೊಂದು ಬಾರಿ ಭೂಮಿಯಮೇಲೆ ಕ್ಷತ್ರಿಯರಿಲ್ಲದಂತೆ ಮಾಡಿ ಪ್ರಭುವು ಸಮಂತಪಂಚಕದಲ್ಲಿ ರಕ್ತದ ಐದು ಸರೋವರಗಳನ್ನು ನಿರ್ಮಿಸಿದನು.
03117010a ಸ ತೇಷು ತರ್ಪಯಾಮಾಸ ಪಿತೄನ್ಭೃಗುಕುಲೋದ್ವಹಃ।
03117010c ಸಾಕ್ಷಾದ್ದದರ್ಶ ಚರ್ಚೀಕಂ ಸ ಚ ರಾಮಂ ನ್ಯವಾರಯತ್।।
ಆ ಭೃಗುಕುಲೋದ್ವಹನು ಅವುಗಳಿಂದ ಪಿತೃಗಳಿಗೆ ತರ್ಪಣೆಯನ್ನಿತ್ತನು. ಆಗ ಸಾಕ್ಷಾತ್ ಋಚೀಕನು ಅಲ್ಲಿಗೆ ಬಂದು ರಾಮನನ್ನು ತಡೆದನು.
03117011a ತತೋ ಯಜ್ಞೇನ ಮಹತಾ ಜಾಮದಗ್ನ್ಯಃ ಪ್ರತಾಪವಾನ್।
03117011c ತರ್ಪಯಾಮಾಸ ದೇವೇಂದ್ರಮೃತ್ವಿಗ್ಭ್ಯಶ್ಚ ಮಹೀಂ ದದೌ।।
ಅನಂತರ ಮಹಾತ್ಮ ಪ್ರತಾಪಿ ಜಾಮದಗ್ನಿಯು ಮಹಾ ಯಜ್ಞದಿಂದ ದೇವೇಂದ್ರನನ್ನು ತೃಪ್ತಿಪಡಿಸಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿತ್ತನು.
03117012a ವೇದೀಂ ಚಾಪ್ಯದದದ್ಧೈಮೀಂ ಕಶ್ಯಪಾಯ ಮಹಾತ್ಮನೇ।
03117012c ದಶವ್ಯಾಮಾಯತಾಂ ಕೃತ್ವಾ ನವೋತ್ಸೇಧಾಂ ವಿಶಾಂ ಪತೇ।।
ವಿಶಾಂಪತೇ! ಹತ್ತು ಅಳತೆ ಉದ್ದದ ಮತ್ತು ಒಂಭತ್ತು ಅಳತೆ ಎತ್ತರದ ಬಂಗಾರದ ವೇದಿಯನ್ನು ನಿರ್ಮಿಸಿ ಮಹಾತ್ಮ ಕಶ್ಯಪನಿಗೆ ದಾನವಾಗಿತ್ತನು.
03117013a ತಾಂ ಕಶ್ಯಪಸ್ಯಾನುಮತೇ ಬ್ರಾಹ್ಮಣಾಃ ಖಂಡಶಸ್ತದಾ।
03117013c ವ್ಯಭಜಂಸ್ತೇನ ತೇ ರಾಜನ್ಪ್ರಖ್ಯಾತಾಃ ಖಾಂಡವಾಯನಾಃ।।
ಕಶ್ಯಪನ ಅನುಮತಿಯನ್ನು ಪಡೆದು ಬ್ರಾಹ್ಮಣರು ಅದನ್ನು ತುಂಡುತುಂಡುಗಳನ್ನಾಗಿ ಮಾಡಿ ಹಂಚಿಕೊಂಡರು ಮತ್ತು ಆದುದರಿಂದ ರಾಜನ್! ಅವರು ಖಾಂಡವಾಯನರೆಂದು ಪ್ರಖ್ಯಾತರಾದರು.
03117014a ಸ ಪ್ರದಾಯ ಮಹೀಂ ತಸ್ಮೈ ಕಶ್ಯಪಾಯ ಮಹಾತ್ಮನೇ।
03117014c ಅಸ್ಮಿನ್ಮಹೇಂದ್ರೇ ಶೈಲೇಂದ್ರೇ ವಸತ್ಯಮಿತವಿಕ್ರಮಃ।।
ಭೂಮಿಯನ್ನು ಮಹಾತ್ಮ ಕಶ್ಯಪನಿಗಿತ್ತು ಆ ಅಮಿತವಿಕ್ರಮನು ಈ ಮಹೇಂದ್ರ ಗಿರಿಯಲ್ಲಿ ವಾಸಮಾಡುತ್ತಿದ್ದಾನೆ.
03117015a ಏವಂ ವೈರಮಭೂತ್ತಸ್ಯ ಕ್ಷತ್ರಿಯೈರ್ಲೋಕವಾಸಿಭಿಃ।
03117015c ಪೃಥಿವೀ ಚಾಪಿ ವಿಜಿತಾ ರಾಮೇಣಾಮಿತತೇಜಸಾ।।
ಈ ಪ್ರಕಾರವಾಗಿ ಲೋಕದಲ್ಲಿ ವಾಸಿಸುತ್ತಿದ್ದ ಕ್ಷತ್ರಿಯರೊಂದಿಗೆ ಅವನ ವೈರವಿತ್ತು ಮತ್ತು ಹೀಗೆ ಅಮಿತತೇಜಸ್ವಿ ರಾಮನು ಈ ಭೂಮಿಯನ್ನು ಗೆದ್ದನು.”
03117016 ವೈಶಂಪಾಯನ ಉವಾಚ।
03117016a ತತಶ್ಚತುರ್ದಶೀಂ ರಾಮಃ ಸಮಯೇನ ಮಹಾಮನಾಃ।
03117016c ದರ್ಶಯಾಮಾಸ ತಾನ್ವಿಪ್ರಾನ್ಧರ್ಮರಾಜಂ ಚ ಸಾನುಜಂ।।
ವೈಶಂಪಾಯನನು ಹೇಳಿದನು: “ಅನಂತರ ಒಪ್ಪಂದದಂತೆ ಚತುರ್ದಶಿಯಂದು ಮಹಾಮನಸ್ವಿ ರಾಮನು ಆ ವಿಪ್ರರಿಗೂ, ಅನುಜರ ಸಮೇತ ಧರ್ಮರಾಜನಿಗೂ ದರ್ಶನವನ್ನಿತ್ತನು.
03117017a ಸ ತಮಾನರ್ಚ ರಾಜೇಂದ್ರೋ ಭ್ರಾತೃಭಿಃ ಸಹಿತಃ ಪ್ರಭುಃ।
03117017c ದ್ವಿಜಾನಾಂ ಚ ಪರಾಂ ಪೂಜಾಂ ಚಕ್ರೇ ನೃಪತಿಸತ್ತಮಃ।।
ತಮ್ಮಂದಿರೊಡನೆ ಆ ಪ್ರಭು ರಾಜೇಂದ್ರನು ಅವನನ್ನು ಅರ್ಚಿಸಿದನು ಮತ್ತು ಆ ನೃಪತಿಸತ್ತಮನು ಬ್ರಾಹ್ಮಣರಿಗೂ ಪರಮ ಪೂಜೆಯನ್ನು ಗೈದನು.
03117018a ಅರ್ಚಯಿತ್ವಾ ಜಾಮದಗ್ನ್ಯಂ ಪೂಜಿತಸ್ತೇನ ಚಾಭಿಭೂಃ।
03117018c ಮಹೇಂದ್ರ ಉಷ್ಯ ತಾಂ ರಾತ್ರಿಂ ಪ್ರಯಯೌ ದಕ್ಷಿಣಾಮುಖಃ।।
ಜಾಮದಗ್ನಿಯನ್ನು ಅರ್ಚಿಸಿ ಮತ್ತು ಅವನಿಂದ ಗೌರವಿಸಲ್ಪಟ್ಟ ಪ್ರಭುವು ಮಹೇಂದ್ರ ಪರ್ವತದಲ್ಲಿ ಆ ರಾತ್ರಿಯನ್ನು ಕಳೆದು ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಸಪ್ತದಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನೇಳನೆಯ ಅಧ್ಯಾಯವು.