ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 116
ಸಾರ
ಜಮದಗ್ನಿಯು ರಾಜ ಪ್ರಸೇನಜಿತನ ಮಗಳು ರೇಣುಕೆಯನ್ನು ಮದುವೆಯಾಗಿ ರಾಮನನ್ನೂ ಸೇರಿ ಐವರು ಕುಮಾರರನ್ನು ಪಡೆದುದು (1-4). ರೇಣುಕೆಯ ಚ್ಯುತಳಾಗಿದ್ದಾಳೆಂದು ಜಮದಗ್ನಿಯು ಅವಳನ್ನು ಕೊಲ್ಲಲು ತನ್ನ ಮೊದಲ ನಾಲ್ವರು ಮಕ್ಕಳು - ರುಮಣ್ವಂತ, ಸುಷೇಣ, ವಸು ಮತ್ತು ವಿಶ್ವಾವಸು - ಮಕ್ಕಳಿಗೆ ಆಜ್ಞಾಪಿಸುವುದು; ಅವರು ಹಾಗೆ ನಡೆದುಕೊಳ್ಳದೇ ಇರಲು, ಅವರನ್ನು ಶಪಿಸಿದುದು (5-12). ತಂದೆಯ ಆಜ್ಞೆಯನ್ನು ಪಾಲಿಸಿದ ರಾಮನಿಗೆ ಜಮದಗ್ನಿಯು ವರಗಳನ್ನಿತ್ತುದು (13-18). ಕಾರ್ತವೀರ್ಯನೊಂದಿಗೆ ರಾಮನ ಯುದ್ಧ; ಕಾರ್ತವೀರ್ಯನ ಜನರು ಜಮದಗ್ನಿಯನ್ನು ಸಂಹರಿಸಿದುದು; ರಾಮನ ಪಿತೃಶೋಕ (19-29).
03116001 ಅಕೃತವ್ರಣ ಉವಾಚ।
03116001a ಸ ವೇದಾಧ್ಯಯನೇ ಯುಕ್ತೋ ಜಮದಗ್ನಿರ್ಮಹಾತಪಾಃ।
03116001c ತಪಸ್ತೇಪೇ ತತೋ ದೇವಾನ್ನಿಯಮಾದ್ವಶಮಾನಯತ್।।
ಅಕೃತವ್ರಣನು ಹೇಳಿದನು: “ಆ ಮಹಾತಪಸ್ವಿ ಜಮದಗ್ನಿಯು ವೇದಾಧ್ಯಯನದಲ್ಲಿ ನಿರತನಾಗಿ ತಪಸ್ಸನ್ನು ತಪಿಸಿ ತನ್ನ ನಿಯಮದಿಂದ ದೇವತೆಗಳನ್ನೂ ವಶಪಡಿಸಿಕೊಂಡನು.
03116002a ಸ ಪ್ರಸೇನಜಿತಂ ರಾಜನ್ನಧಿಗಮ್ಯ ನರಾಧಿಪಂ।
03116002c ರೇಣುಕಾಂ ವರಯಾಮಾಸ ಸ ಚ ತಸ್ಮೈ ದದೌ ನೃಪಃ।।
ರಾಜನ್! ಅವನು ನರಾಧಿಪ ಪ್ರಸೇನಜಿತನಲ್ಲಿಗೆ ಹೋಗಿ ರೇಣುಕೆಯನ್ನು ವರಿಸಿದನು. ರಾಜನು ಅವಳನ್ನು ಅವನಿಗೆ ಕೊಟ್ಟನು.
03116003a ರೇಣುಕಾಂ ತ್ವಥ ಸಂಪ್ರಾಪ್ಯ ಭಾರ್ಯಾಂ ಭಾರ್ಗವನಂದನಃ।
03116003c ಆಶ್ರಮಸ್ಥಸ್ತಯಾ ಸಾರ್ಧಂ ತಪಸ್ತೇಪೇಽನುಕೂಲಯಾ।।
ರೇಣುಕೆಯನ್ನು ಪತ್ನಿಯಾಗಿ ಪಡೆದ ಭಾರ್ಗವನಂದನನು ಆ ಅನುಕೂಲೆಯೊಂದಿಗೆ ತನ್ನ ಆಶ್ರಮದಲ್ಲಿ ಇನ್ನೂ ಹೆಚ್ಚು ತಪಸ್ಸನ್ನು ತಪಿಸಿದನು.
03116004a ತಸ್ಯಾಃ ಕುಮಾರಾಶ್ಚತ್ವಾರೋ ಜಜ್ಞಿರೇ ರಾಮಪಂಚಮಾಃ।
03116004c ಸರ್ವೇಷಾಮಜಘನ್ಯಸ್ತು ರಾಮ ಆಸೀಜ್ಜಘನ್ಯಜಃ।।
ಅವಳಲ್ಲಿ ನಾಲ್ಕು ಕುಮಾರರು ಜನಿಸಿದರು. ರಾಮನು ಐದನೆಯವನು. ಎಲ್ಲರಿಗಿಂತ ಕಡೆಯವನಾಗಿದ್ದರೂ ರಾಮನು ಎಲ್ಲದರಲ್ಲಿಯೂ ಎಲ್ಲರಿಗಿಂತ ಮೊದಲನೆಯವನಾಗಿದ್ದನು.
03116005a ಫಲಾಹಾರೇಷು ಸರ್ವೇಷು ಗತೇಷ್ವಥ ಸುತೇಷು ವೈ।
03116005c ರೇಣುಕಾ ಸ್ನಾತುಮಗಮತ್ಕದಾ ಚಿನ್ನಿಯತವ್ರತಾ।।
ಒಮ್ಮೆ ಮಕ್ಕಳೆಲ್ಲರೂ ಹಣ್ಣು ಹುಡುಕಿ ತರಲು ಹೋಗಿದ್ದಾಗ ನಿಯತವ್ರತೆ ರೇಣುಕೆಯು ಸ್ನಾನಕ್ಕೆಂದು ಹೋದಳು.
03116006a ಸಾ ತು ಚಿತ್ರರಥಂ ನಾಮ ಮಾರ್ತ್ತಿಕಾವತಕಂ ನೃಪಂ।
03116006c ದದರ್ಶ ರೇಣುಕಾ ರಾಜನ್ನಾಗಚ್ಚಂತೀ ಯದೃಚ್ಚಯಾ।।
03116007a ಕ್ರೀಡಂತಂ ಸಲಿಲೇ ದೃಷ್ಟ್ವಾ ಸಭಾರ್ಯಂ ಪದ್ಮಮಾಲಿನಂ।
03116007c ಋದ್ಧಿಮಂತಂ ತತಸ್ತಸ್ಯ ಸ್ಪೃಹಯಾಮಾಸ ರೇಣುಕಾ।।
ರಾಜನ್! ಆ ರೇಣುಕೆಯಾದರೋ ಬರುತ್ತಿರುವಾಗ ಚಿತ್ರರಥನೆಂಬ ಹೆಸರಿನ ಮಾರ್ತ್ತಿಕಾವತಕದ ರಾಜನನ್ನು ನೋಡಿದಳು. ಸರೋವರದಲ್ಲಿ ಭಾರ್ಯೆಯರೊಂದಿಗೆ ಆಡುತ್ತಿದ್ದ ಆ ಶ್ರೀಮಂತ ಪದ್ಮಮಾಲಿನಿಯನ್ನು ನೋಡಿ ರೇಣುಕೆಯು ಅವನ ಸಾಮೀಪ್ಯವನ್ನು ಬಯಸಿದಳು.
03116008a ವ್ಯಭಿಚಾರಾತ್ತು ಸಾ ತಸ್ಮಾತ್ಕ್ಲಿನ್ನಾಂಭಸಿ ವಿಚೇತನಾ।
03116008c ಪ್ರವಿವೇಶಾಶ್ರಮಂ ತ್ರಸ್ತಾ ತಾಂ ವೈ ಭರ್ತಾನ್ವಬುಧ್ಯತ।।
ಆ ವ್ಯಭಿಚಾರದಿಂದ ಬುದ್ಧಿಕಳೆದುಕೊಂಡ ಅವಳು ನೀರಿನಲ್ಲಿ ಒದ್ದೆಯಾಗಿ ನಡುಗುತ್ತಾ ಆಶ್ರಮವನ್ನು ಪ್ರವೇಶಿಸಿದಳು. ಅವಳ ಗಂಡನು ಎಲ್ಲವನ್ನೂ ತಿಳಿದುಕೊಂಡನು.
03116009a ಸ ತಾಂ ದೃಷ್ಟ್ವಾ ಚ್ಯುತಾಂ ಧೈರ್ಯಾದ್ಬ್ರಾಹ್ಮ್ಯಾ ಲಕ್ಷ್ಮ್ಯಾ ವಿವರ್ಜಿತಾಂ।
03116009c ಧಿಕ್ಶಬ್ಧೇನ ಮಹಾತೇಜಾ ಗರ್ಹಯಾಮಾಸ ವೀರ್ಯವಾನ್।।
ಅವಳು ತನ್ನ ಧೈರ್ಯದಿಂದ ಚ್ಯುತಳಾಗಿದ್ದಾಳೆ ಮತ್ತು ತನ್ನ ಬ್ರಹ್ಮಲಕ್ಷ್ಮಿಯನ್ನು ತೊರೆದಿದ್ದಾಳೆ ಎಂದು ತಿಳಿದ ಆ ವೀರ್ಯವಂತ ಮಹಾತೇಜಸ್ವಿಯು ಅವಳನ್ನು ಧಿಕ್ಕರಿಸುವ ಮಾತುಗಳಿಂದ ಜರೆದನು.
03116010a ತತೋ ಜ್ಯೇಷ್ಠೋ ಜಾಮದಗ್ನ್ಯೋ ರುಮಣ್ವಾನ್ನಾಮ ನಾಮತಃ।
03116010c ಆಜಗಾಮ ಸುಷೇಣಶ್ಚ ವಸುರ್ವಿಶ್ವಾವಸುಸ್ತಥಾ।।
ಆಗ ರುಮಣ್ವಂತ ಎಂಬ ಹೆಸರಿನ ಜಮದಗ್ನಿಯ ಜ್ಯೇಷ್ಠ ಪುತ್ರನೂ, ಹಾಗೆಯೇ ಸುಷೇಣನೂ, ವಸುವೂ ಮತ್ತು ವಿಶ್ವಾವಸುವೂ ಬಂದರು.
03116011a ತಾನಾನುಪೂರ್ವ್ಯಾದ್ಭಗವಾನ್ವಧೇ ಮಾತುರಚೋದಯತ್।
03116011c ನ ಚ ತೇ ಜಾತಸಮ್ಮೋಹಾಃ ಕಿಂ ಚಿದೂಚುರ್ವಿಚೇತಸಃ।।
ಆ ಭಗವಾನನು ಅವರಲ್ಲಿ ಅನುಕ್ರಮವಾಗಿ ಒಬ್ಬಬ್ಬರಲ್ಲಿಯೂ ತಾಯಿಯನ್ನು ವಧಿಸಲು ಅಜ್ಞಾಪಿಸಿದನು. ಆದರೆ ತಾಯಿಯ ಮೇಲಿನ ಮೋಹದಿಂದ ಬುದ್ಧಿಕಳೆದುಕೊಂಡ ಅವರು ಯಾರೂ ಉತ್ತರಿಸಲಿಲ್ಲ.
03116012a ತತಃ ಶಶಾಪ ತಾನ್ಕೋಪಾತ್ತೇ ಶಪ್ತಾಶ್ಚೇತನಾಂ ಜಹುಃ।
03116012c ಮೃಗಪಕ್ಷಿಸಧರ್ಮಾಣಃ ಕ್ಷಿಪ್ರಮಾಸಂ ಜಡೋಪಮಾಃ।।
ಆಗ ಕೋಪದಿಂದ ಅವರನ್ನು ಶಪಿಸಿದನು. ಅವರು ಶಾಪದಿಂದ ತಮ್ಮ ಚೇತನಗಳನ್ನು ಕಳೆದುಕೊಂಡು ತಕ್ಷಣವೇ ಮೃಗಪಕ್ಷಿಗಳಂತೆ ಮತ್ತು ಜಡವಸ್ತುಗಳಂತೆ ವರ್ತಿಸತೊಡಗಿದರು.
03116013a ತತೋ ರಾಮೋಽಭ್ಯಗಾತ್ಪಶ್ಚಾದಾಶ್ರಮಂ ಪರವೀರಹಾ।
03116013c ತಮುವಾಚ ಮಹಾಮನ್ಯುರ್ಜಮದಗ್ನಿರ್ಮಹಾತಪಾಃ।।
ಅನಂತರ ಅಲ್ಲಿಗೆ ಪರವೀರಹ ರಾಮನು ಆಶ್ರಮಕ್ಕೆ ಬಂದನು. ಮಹಾತಪಸ್ವಿ ಜಮದಗ್ನಿಯು ಮಹಾಕೋಪದಿಂದ ಅವನಿಗೆ ಹೇಳಿದನು:
03116014a ಜಹೀಮಾಂ ಮಾತರಂ ಪಾಪಾಂ ಮಾ ಚ ಪುತ್ರ ವ್ಯಥಾಂ ಕೃಥಾಃ।
03116014c ತತ ಆದಾಯ ಪರಶುಂ ರಾಮೋ ಮಾತುಃ ಶಿರೋಽಹರತ್।।
“ಮಗಾ! ಈ ಪಾಪಿ ತಾಯಿಯನ್ನು ಕೊಲ್ಲು. ವ್ಯಥೆಮಾಡಬೇಡ!” ಆಗ ರಾಮನು ಕೊಡಲಿಯನ್ನು ಹಿಡಿದು ತಾಯಿಯ ತಲೆಯನ್ನು ಕಡಿದನು.
03116015a ತತಸ್ತಸ್ಯ ಮಹಾರಾಜ ಜಮದಗ್ನೇರ್ಮಹಾತ್ಮನಃ।
03116015c ಕೋಪೋ ಅಗಚ್ಚತ್ಸಹಸಾ ಪ್ರಸನ್ನಶ್ಚಾಬ್ರವೀದಿದಂ।।
ಮಹಾರಾಜ! ಆಗ ಮಹಾತ್ಮ ಜಮದಗ್ನಿಯ ಕೋಪವು ತಕ್ಷಣವೇ ಕಡಿಮೆಯಾಯಿತು ಮತ್ತು ಪ್ರಸನ್ನನಾಗಿ ಅವನು ಹೇಳಿದನು:
03116016a ಮಮೇದಂ ವಚನಾತ್ತಾತ ಕೃತಂ ತೇ ಕರ್ಮ ದುಷ್ಕರಂ।
03116016c ವೃಣೀಷ್ವ ಕಾಮಾನ್ಧರ್ಮಜ್ಞ ಯಾವತೋ ವಾಂಚಸೇ ಹೃದಾ।।
“ಮಗೂ! ನನ್ನ ಈ ಮಾತಿನಂತೆ ನೀನು ಈ ದುಷ್ಕರ ಕೆಲಸವನ್ನು ಮಾಡಿದ್ದೀಯೆ! ಧರ್ಮಜ್ಞ! ನಿನ್ನ ಹೃದಯದಲ್ಲಿ ಎಷ್ಟನ್ನು ಬಯಸುತ್ತೀಯೋ ಅಷ್ಟು ವರಗಳನ್ನು ಕೇಳು!”
03116017a ಸ ವವ್ರೇ ಮಾತುರುತ್ಥಾನಮಸ್ಮೃತಿಂ ಚ ವಧಸ್ಯ ವೈ।
03116017c ಪಾಪೇನ ತೇನ ಚಾಸ್ಪರ್ಶಂ ಭ್ರಾತೄಣಾಂ ಪ್ರಕೃತಿಂ ತಥಾ।।
ಅವನು ತಾಯಿಯು ಎದ್ದೇಳಲೆಂದೂ, ವಧೆಯನ್ನು ಮರೆಯುವಂತೆಯೂ, ಪಾಪವು ತನಗೆ ತಾಗದಿರಲೆಂದೂ, ಮತ್ತು ತನ್ನ ಸಹೋದರರು ತಮ್ಮ ಹಿಂದಿನ ಸ್ವಭಾವಕ್ಕೆ ಹಿಂದಿರುಗಲೆಂದೂ ಕೇಳಿಕೊಂಡನು.
03116018a ಅಪ್ರತಿದ್ವಂದ್ವತಾಂ ಯುದ್ಧೇ ದೀರ್ಘಮಾಯುಶ್ಚ ಭಾರತ।
03116018c ದದೌ ಚ ಸರ್ವಾನ್ಕಾಮಾಂಸ್ತಾಂ ಜಮದಗ್ನಿರ್ಮಹಾತಪಾಃ।।
ಭಾರತ! ಮಹಾತಪಸ್ವಿ ಜಮದಗ್ನಿಯು ದ್ವಂದ್ವಯುದ್ಧದಲ್ಲಿ ಅಜೇಯತ್ವವನ್ನೂ, ದೀರ್ಘಾಯುಸ್ಸನ್ನೂ ಮತ್ತು ಅವನು ಬಯಸಿದುದೆಲ್ಲವನ್ನೂ ನೀಡಿದನು.
03116019a ಕದಾ ಚಿತ್ತು ತಥೈವಾಸ್ಯ ವಿನಿಷ್ಕ್ರಾಂತಾಃ ಸುತಾಃ ಪ್ರಭೋ।
03116019c ಅಥಾನೂಪಪತಿರ್ವೀರಃ ಕಾರ್ತವೀರ್ಯೋಽಭ್ಯವರ್ತತ।।
ಪ್ರಭೂ! ಅನಂತರ ಒಂದು ದಿನ ಅವನ ಮಕ್ಕಳೆಲ್ಲರೂ ಹೊರಗೆ ಹೋಗಿದ್ದಾಗ ಕರಾವಳಿಯ ರಾಜ ಕಾರ್ತವೀರ್ಯನು ಅಲ್ಲಿಗೆ ಆಗಮಿಸಿದನು.
03116020a ತಮಾಶ್ರಮಪದಂ ಪ್ರಾಪ್ತಮೃಷೇರ್ಭಾರ್ಯಾ ಸಮರ್ಚಯತ್।
03116020c ಸ ಯುದ್ಧಮದಸಮ್ಮತ್ತೋ ನಾಭ್ಯನಂದತ್ತಥಾರ್ಚನಂ।।
ಅವನು ಆಶ್ರಮಕ್ಕೆ ಬಂದಾಗ ಋಷಿಪತ್ನಿಯು ಅವನನ್ನು ಅರ್ಚಿಸಿದಳು. ಆದರೆ ಆ ಯುದ್ಧಮದಸಮ್ಮತ್ತನು ಅವಳ ಆತಿಥ್ಯವನ್ನು ಸ್ವೀಕರಿಸಲಿಲ್ಲ.
03116021a ಪ್ರಮಥ್ಯ ಚಾಶ್ರಮಾತ್ತಸ್ಮಾದ್ಧೋಮಧೇನ್ವಾಸ್ತದಾ ಬಲಾತ್।
03116021c ಜಹಾರ ವತ್ಸಂ ಕ್ರೋಶಂತ್ಯಾ ಬಭಂಜ ಚ ಮಹಾದ್ರುಮಾನ್।।
ಅವನು ಆಶ್ರಮವನ್ನು ಧ್ವಂಸಮಾಡಿ, ಕೂಗುತ್ತಿರುವ ಹೋಮಧೇನುವಿನ ಕರುವನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಾ ಮಹಾವೃಕ್ಷಗಳನ್ನು ಕಡಿದುರುಳಿಸಿದನು.
03116022a ಆಗತಾಯ ಚ ರಾಮಾಯ ತದಾಚಷ್ಟ ಪಿತಾ ಸ್ವಯಂ।
03116022c ಗಾಂ ಚ ರೋರೂಯತೀಂ ದೃಷ್ಟ್ವಾ ಕೋಪೋ ರಾಮಂ ಸಮಾವಿಶತ್।।
ರಾಮನು ಮರಳಿ ಬಂದಾಗ ಸ್ವಯಂ ತಂದೆಯು ಎಲ್ಲವನ್ನೂ ಹೇಳಿದನು ಮತ್ತು ಕೂಗುತ್ತಿರುವ ಗೋವನ್ನು ನೋಡಿ ರಾಮನು ಕೋಪದಿಂದ ಆವೇಶಗೊಂಡನು,
03116023a ಸ ಮನ್ಯುವಶಮಾಪನ್ನಃ ಕಾರ್ತವೀರ್ಯಮುಪಾದ್ರವತ್।
03116023c ತಸ್ಯಾಥ ಯುಧಿ ವಿಕ್ರಮ್ಯ ಭಾರ್ಗವಃ ಪರವೀರಹಾ।।
ಕೋಪಾವಿಷ್ಟನಾದ ಪರವೀರಹ ಭಾರ್ಗವನು ಕಾರ್ತವೀರ್ಯನನ್ನು ಆಕ್ರಮಣಮಾಡಿ ಅವನೊಂದಿಗೆ ಯುದ್ಧದಲ್ಲಿ ತೊಡಗಿದನು.
03116024a ಚಿಚ್ಚೇದ ನಿಶಿತೈರ್ಭಲ್ಲೈರ್ಬಾಹೂನ್ಪರಿಘಸನ್ನಿಭಾನ್।
03116024c ಸಹಸ್ರಸಮ್ಮಿತಾನ್ರಾಜನ್ಪ್ರಗೃಹ್ಯ ರುಚಿರಂ ಧನುಃ।।
ರಾಜನ್! ತನ್ನ ಉತ್ತಮ ಧನುಸ್ಸನ್ನು ಹಿಡಿದು ಹರಿತವಾದ ಬಾಣಗಳಿಂದ ಪರಿಘಗಳಂತಿದ್ದ ಅವನ ಸಹಸ್ರ ಬಾಹುಗಳನ್ನು ಕತ್ತರಿಸಿದನು.
03116025a ಅರ್ಜುನಸ್ಯಾಥ ದಾಯಾದಾ ರಾಮೇಣ ಕೃತಮನ್ಯವಃ।
03116025c ಆಶ್ರಮಸ್ಥಂ ವಿನಾ ರಾಮಂ ಜಮದಗ್ನಿಮುಪಾದ್ರವನ್।।
ರಾಮನ ಮೇಲೆ ಕುಪಿತರಾಗಿ ಅರ್ಜುನನ ದಾಯಾದಿಗಳು ರಾಮನಿಲ್ಲದಿದ್ದಾಗ ಆಶ್ರಮದಲ್ಲಿದ್ದ ಜಮದಗ್ನಿಯ ಮೇಲೆ ದಾಳಿಮಾಡಿದರು.
03116026a ತೇ ತಂ ಜಘ್ನುರ್ಮಹಾವೀರ್ಯಮಯುಧ್ಯಂತಂ ತಪಸ್ವಿನಂ।
03116026c ಅಸಕೃದ್ರಾಮ ರಾಮೇತಿ ವಿಕ್ರೋಶಂತಮನಾಥವತ್।।
ಅವರು ಯುದ್ಧಮಾಡಲು ನಿರಾಕರಿಸಿದ ಆ ತಪಸ್ವಿಯನ್ನು, “ರಾಮಾ ರಾಮಾ” ಎಂದು ಕೂಗುತ್ತಿರುವಾಗಲೇ, ಯಾರ ರಕ್ಷಣೆಯಲ್ಲಿಯೂ ಇಲ್ಲದಿರುವಾಗ ಸಂಹರಿಸಿದರು.
03116027a ಕಾರ್ತವೀರ್ಯಸ್ಯ ಪುತ್ರಾಸ್ತು ಜಮದಗ್ನಿಂ ಯುಧಿಷ್ಠಿರ।
03116027c ಘಾತಯಿತ್ವಾ ಶರೈರ್ಜಗ್ಮುರ್ಯಥಾಗತಮರಿಂದಮಾಃ।।
ಯುಧಿಷ್ಠಿರ! ಕಾರ್ತವೀರ್ಯನ ಆ ಅರಿಂದಮ ಪುತ್ರರು ಜಮದಗ್ನಿಯನ್ನು ಬಾಣಗಳಿಂದ ಕೊಂದು ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
03116028a ಅಪಕ್ರಾಂತೇಷು ಚೈತೇಷು ಜಮದಗ್ನೌ ತಥಾಗತೇ।
03116028c ಸಮಿತ್ಪಾಣಿರುಪಾಗಚ್ಚದಾಶ್ರಮಂ ಭೃಗುನಂದನಃ।।
ಜಮದಗ್ನಿಯನ್ನು ಹಾಗೆಯೇ ಬಿಟ್ಟು ಅವರು ಹೊರಟುಹೋದನಂತರ ಸಮಿತ್ತುಗಳನ್ನು ಹಿಡಿದು ಭೃಗುನಂದನನು ಆಶ್ರಮಕ್ಕೆ ಮರಳಿದನು.
03116029a ಸ ದೃಷ್ಟ್ವಾ ಪಿತರಂ ವೀರಸ್ತಥಾ ಮೃತ್ಯುವಶಂ ಗತಂ।
03116029c ಅನರ್ಹಂತಂ ತಥಾಭೂತಂ ವಿಲಲಾಪ ಸುದುಃಖಿತಃ।।
ಮೃತ್ಯುವಶನಾಗಿದ್ದ ತನ್ನ ತಂದೆಯನ್ನು ನೋಡಿ ಆ ವೀರನು ಅನರ್ಹನಾದವನಿಗೆ ಹೀಗಾಗಿದ್ದುದನ್ನು ಕಂಡು ಬಹಳ ದುಃಖಿತನಾಗಿ ವಿಲಪಿಸಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಷೋಡಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನಾರನೆಯ ಅಧ್ಯಾಯವು.