ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 115
ಸಾರ
ಮಹೇಂದ್ರ ಪರ್ವತದಲ್ಲಿ ಯುಧಿಷ್ಠಿರನು ಪರಶುರಾಮ ಶಿಷ್ಯ ಅಕೃತವ್ರಣನನ್ನು ಭೇಟಿಯಾಗಿ ಪರಶುರಾಮನ ಕುರಿತು ಕೇಳಿದುದು (1-8). ಕನ್ಯಕುಬ್ಜದ ರಾಜ ಗಾಧಿಯ ಮಗಳನ್ನು ಮುನಿ ಋಚೀಕನು ವರಿಸಿದ್ದುದು; ಒಂದೇ ಕಿವಿಯು ಕಪ್ಪಾಗಿರುವ ವೇಗವಾಗಿ ಹೋಗಬಲ್ಲ ಒಂದು ಸಾವಿರ ಬಿಳಿ ಕುದುರೆಗಳು ಕನ್ಯಾಶುಲ್ಕವೆಂದು ಹೇಳುವುದು (9-15). ಋಚೀಕನು ವರುಣನಿಂದ ಕುದುರೆಗಳನ್ನು ಪಡೆದು, ಕನ್ಯಾಶುಲ್ಕವಾಗಿ ಕೊಟ್ಟು, ಗಾಧಿಯ ಮಗಳನ್ನು ವಿವಾಹವಾದುದು (16-18). ಮಾವ ಭೃಗುವಲ್ಲಿ ಋಚೀಕನ ಪತ್ನಿಯು ತನ್ನ ತಾಯಿಗೆ ಸಂತಾನವನ್ನು ಕೇಳಿದಾಗ, ಭೃಗುವು ಅವಳಿಗೂ ಅವಳ ತಾಯಿಗೂ ಸಂತಾನದ ವರವನ್ನು ಕೊಟ್ಟಿದುದು; ಋಚೀಕನಿಗೆ ಜಮದಗ್ನಿಯು ಮಗನಾಗಿ ಜನಿಸಿದುದು (19-30).
03115001 ವೈಶಂಪಾಯನ ಉವಾಚ।
03115001a ಸ ತತ್ರ ತಾಮುಷಿತ್ವೈಕಾಂ ರಜನೀಂ ಪೃಥಿವೀಪತಿಃ।
03115001c ತಾಪಸಾನಾಂ ಪರಂ ಚಕ್ರೇ ಸತ್ಕಾರಂ ಭ್ರಾತೃಭಿಃ ಸಹ।।
ವೈಶಂಪಾಯನನು ಹೇಳಿದನು: “ಪೃಥಿವೀಪತಿಯು ಒಂದು ರಾತ್ರಿಯನ್ನು ಅಲ್ಲಿ ಕಳೆದ ನಂತರ, ಸಹೋದರರೊಂದಿಗೆ ತಾಪಸರಿಗೆ ಪರಮ ಸತ್ಕಾರವನ್ನು ಮಾಡಿದನು.
03115002a ಲೋಮಶಶ್ಚಾಸ್ಯ ತಾನ್ಸರ್ವಾನಾಚಖ್ಯೌ ತತ್ರ ತಾಪಸಾನ್।
03115002c ಭೃಗೂನಂಗಿರಸಶ್ಚೈವ ವಾಸಿಷ್ಠಾನಥ ಕಾಶ್ಯಪಾನ್।।
ಲೋಮಶನು ಅಲ್ಲಿರುವ ಎಲ್ಲ ತಾಪಸರನ್ನೂ – ಭೃಗುಗಳನ್ನು, ಅಂಗಿರಸರನ್ನು, ವಾಸಿಷ್ಠರನ್ನು ಮತ್ತು ಕಾಶ್ಯಪರನ್ನು – ಕರೆಯಿಸಿದನು.
03115003a ತಾನ್ಸಮೇತ್ಯ ಸ ರಾಜರ್ಷಿರಭಿವಾದ್ಯ ಕೃತಾಂಜಲಿಃ।
03115003c ರಾಮಸ್ಯಾನುಚರಂ ವೀರಮಪೃಚ್ಚದಕೃತವ್ರಣಂ।।
ಅವರನ್ನು ಭೇಟಿಮಾಡಿದ ರಾಜರ್ಷಿಯು ಅಂಜಲೀಬದ್ಧನಾಗಿ ಅವರಿಗೆ ಅಭಿನಂದಿಸಿದನು, ಮತ್ತು ಪರಶುರಾಮನ ಅನುಚರ ವೀರ ಅಕೃತವ್ರಣನಿಗೆ ಕೇಳಿದನು:
03115004a ಕದಾ ನು ರಾಮೋ ಭಗವಾಂಸ್ತಾಪಸಾನ್ದರ್ಶಯಿಷ್ಯತಿ।
03115004c ತೇನೈವಾಹಂ ಪ್ರಸಂಗೇನ ದ್ರಷ್ಟುಮಿಚ್ಚಾಮಿ ಭಾರ್ಗವಂ।।
“ಭಗವಾನ್ ರಾಮನು ಎಂದು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ? ಅದೇ ಸಮಯದಲ್ಲಿ ನಾನೂ ಕೂಡ ಭಾರ್ಗವನನ್ನು ನೋಡಲು ಬಯಸುತ್ತೇನೆ.”
03115005 ಅಕೃತವ್ರಣ ಉವಾಚ।
03115005a ಆಯಾನೇವಾಸಿ ವಿದಿತೋ ರಾಮಸ್ಯ ವಿದಿತಾತ್ಮನಃ।
03115005c ಪ್ರೀತಿಸ್ತ್ವಯಿ ಚ ರಾಮಸ್ಯ ಕ್ಷಿಪ್ರಂ ತ್ವಾಂ ದರ್ಶಯಿಷ್ಯತಿ।।
ಅಕೃತವ್ರಣನು ಹೇಳಿದನು: “ಅತ್ಮನನ್ನು ತಿಳಿದಿರುವ ರಾಮನಿಗೆ ನೀನು ಬರುತ್ತೀಯೆ ಎಂದು ತಿಳಿದಿದೆ. ರಾಮನಿಗೆ ನಿನ್ನ ಮೇಲೆ ಪ್ರೀತಿಯಿದೆ ಮತ್ತು ಬೇಗನೇ ನಿನಗೆ ಕಾಣಿಸಿಕೊಳ್ಳುತ್ತಾನೆ.
03115006a ಚತುರ್ದಶೀಮಷ್ಟಮೀಂ ಚ ರಾಮಂ ಪಶ್ಯಂತಿ ತಾಪಸಾಃ।
03115006c ಅಸ್ಯಾಂ ರಾತ್ರ್ಯಾಂ ವ್ಯತೀತಾಯಾಂ ಭವಿತ್ರೀ ಚ ಚತುರ್ದಶೀ।।
ಚತುರ್ದಶೀ ಮತ್ತು ಅಷ್ಟಮಿಗಳಲ್ಲಿ ರಾಮನು ತಾಪಸರಿಗೆ ಕಾಣಿಸಿಕೊಳ್ಳುತ್ತಾನೆ. ಈ ರಾತ್ರಿ ಕಳೆದರೆ ಚತುರ್ದಶಿಯಾಗುತ್ತದೆ.”
03115007 ಯುಧಿಷ್ಠಿರ ಉವಾಚ।
03115007a ಭವಾನನುಗತೋ ವೀರಂ ಜಾಮದಗ್ನ್ಯಂ ಮಹಾಬಲಂ।
03115007c ಪ್ರತ್ಯಕ್ಷದರ್ಶೀ ಸರ್ವಸ್ಯ ಪೂರ್ವವೃತ್ತಸ್ಯ ಕರ್ಮಣಃ।।
ಯುಧಿಷ್ಠಿರನು ಹೇಳಿದನು: “ನೀನು ವೀರ ಮಹಾಬಲಿ ಜಾಮದಗ್ನಿಯನ್ನು ಅನುಸರಿಸುತ್ತಿದ್ದೀಯೆ ಮತ್ತು ನೀನು ಅವನು ಹಿಂದೆ ನಡೆಸಿದ ಎಲ್ಲ ಕಾರ್ಯಗಳನ್ನೂ ಪ್ರತ್ಯಕ್ಷವಾಗಿ ಕಂಡಿದ್ದೀಯೆ.
03115008a ಸ ಭವಾನ್ಕಥಯತ್ವೇತದ್ಯಥಾ ರಾಮೇಣ ನಿರ್ಜಿತಾಃ।
03115008c ಆಹವೇ ಕ್ಷತ್ರಿಯಾಃ ಸರ್ವೇ ಕಥಂ ಕೇನ ಚ ಹೇತುನಾ।।
ಆದುದರಿಂದ ಹೇಗೆ ಮತ್ತು ಯಾವ ಕಾರಣಕ್ಕಾಗಿ ರಾಮನು ಕ್ಷತ್ರಿಯರೆಲ್ಲರನ್ನೂ ರಣರಂಗದಲ್ಲಿ ಸೋಲಿಸಿದನು ಎನ್ನುವುದನ್ನು ಹೇಳು.”
03115009 ಅಕೃತವ್ರಣ ಉವಾಚ।
03115009a ಕನ್ಯಕುಬ್ಜೇ ಮಹಾನಾಸೀತ್ಪಾರ್ಥಿವಃ ಸುಮಹಾಬಲಃ।
03115009c ಗಾಧೀತಿ ವಿಶ್ರುತೋ ಲೋಕೇ ವನವಾಸಂ ಜಗಾಮ ಸಃ।।
ಅಕೃತವ್ರಣನು ಹೇಳಿದನು: “ಕನ್ಯಕುಬ್ಜದಲ್ಲಿ ಗಾಧಿ ಎಂದು ಲೋಕದಲ್ಲಿ ವಿಶ್ರುತನಾದ ಮಹಾಬಲಿ ಮಹಾ ರಾಜನಿದ್ದನು. ಅವನು ವನವಾಸಕ್ಕೆ ಹೋದನು.
03115010a ವನೇ ತು ತಸ್ಯ ವಸತಃ ಕನ್ಯಾ ಜಜ್ಞೇಽಪ್ಸರಃಸಮಾ।
03115010c ಋಚೀಕೋ ಭಾರ್ಗವಸ್ತಾಂ ಚ ವರಯಾಮಾಸ ಭಾರತ।।
ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಅಪ್ಸರೆಯಂತಿರುವ ಕನ್ಯೆಯು ಜನಿಸಿದಳು. ಭಾರತ! ಭಾರ್ಗವ ಋಚೀಕನು ಅವಳನ್ನು ವರಿಸಿದನು.
03115011a ತಮುವಾಚ ತತೋ ರಾಜಾ ಬ್ರಾಹ್ಮಣಂ ಸಂಶಿತವ್ರತಂ।
03115011c ಉಚಿತಂ ನಃ ಕುಲೇ ಕಿಂ ಚಿತ್ಪೂರ್ವೈರ್ಯತ್ಸಂಪ್ರವರ್ತಿತಂ।।
ಆಗ ರಾಜನು ಆ ಸಂಶಿತವ್ರತ ಬ್ರಾಹ್ಮಣನಿಗೆ ಹೇಳಿದನು: “ಹಿಂದಿನಿಂದಲೂ ನಡೆದುಕೊಂಡು ಬಂದಂಥಹ ಒಂದು ಒಳ್ಳೆಯ ಸಂಪ್ರದಾಯವು ನಮ್ಮ ಕುಲದಲ್ಲಿದೆ.
03115012a ಏಕತಃ ಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ।
03115012c ಸಹಸ್ರಂ ವಾಜಿನಾಂ ಶುಲ್ಕಮಿತಿ ವಿದ್ಧಿ ದ್ವಿಜೋತ್ತಮ।।
ದ್ವಿಜೋತ್ತಮ! ಒಂದೇ ಕಿವಿಯು ಕಪ್ಪಾಗಿರುವ ವೇಗವಾಗಿ ಹೋಗಬಲ್ಲ ಒಂದು ಸಾವಿರ ಬಿಳಿಯ ಕುದುರೆಗಳು ಕನ್ಯಾಶುಲ್ಕ ಎಂದು ತಿಳಿ1.
03115013a ನ ಚಾಪಿ ಭಗವಾನ್ವಾಚ್ಯೋ ದೀಯತಾಮಿತಿ ಭಾರ್ಗವ।
03115013c ದೇಯಾ ಮೇ ದುಹಿತಾ ಚೇಯಂ ತ್ವದ್ವಿಧಾಯ ಮಹಾತ್ಮನೇ।।
ಭಗವಾನ್ ಭಾರ್ಗವ! ಆದರೂ ಈ ಮಾತನ್ನು ನಿನ್ನಲ್ಲಿ ಹೇಳಬಾರದು. ಏಕೆಂದರೆ ನನ್ನ ಮಗಳನ್ನು ನಿನ್ನಂತಹ ಮಹಾತ್ಮನಿಗೆ ಕೊಡಬೇಕು.”
03115014 ಋಚೀಕ ಉವಾಚ।
03115014a ಏಕತಃಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ।
03115014c ದಾಸ್ಯಾಮ್ಯಶ್ವಸಹಸ್ರಂ ತೇ ಮಮ ಭಾರ್ಯಾ ಸುತಾಸ್ತು ತೇ।।
ಋಚೀಕನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಕೊಡುತ್ತೇನೆ, ಮತ್ತು ನಿನ್ನ ಮಗಳು ನನ್ನ ಪತ್ನಿಯಾಗುವಳು.””
03115015 ಅಕೃತವ್ರಣ ಉವಾಚ।
03115015a ಸ ತಥೇತಿ ಪ್ರತಿಜ್ಞಾಯ ರಾಜನ್ವರುಣಮಬ್ರವೀತ್।
03115015c ಏಕತಃಶ್ಯಾಮಕರ್ಣಾನಾಂ ಪಾಂಡುರಾಣಾಂ ತರಸ್ವಿನಾಂ।।
03115015e ಸಹಸ್ರಂ ವಾಜಿನಾಮೇಕಂ ಶುಲ್ಕಾರ್ಥಂ ಮೇ ಪ್ರದೀಯತಾಂ।।
ಅಕೃತವ್ರಣನು ಹೇಳಿದನು: “ರಾಜನ್! ಹೀಗೆ ಪ್ರತಿಜ್ಞೆಮಾಡಿದ ಅವನು ವರುಣನಿಗೆ ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಶುಲ್ಕವಾಗಿ ನನಗೆ ಕೊಡಬೇಕು.”
03115016a ತಸ್ಮೈ ಪ್ರಾದಾತ್ಸಹಸ್ರಂ ವೈ ವಾಜಿನಾಂ ವರುಣಸ್ತದಾ।
03115016c ತದಶ್ವತೀರ್ಥಂ ವಿಖ್ಯಾತಮುತ್ಥಿತಾ ಯತ್ರ ತೇ ಹಯಾಃ।।
ಆಗ ವರುಣನು ಅವನಿಗೆ ಒಂದು ಸಹಸ್ರ ಕುದುರೆಗಳನ್ನು ಕೊಟ್ಟನು. ಆ ಕುದುರೆಗಳು ಹೊರಬಂದ ಸ್ಥಳವು ಅಶ್ವತೀರ್ಥವೆಂದು ವಿಖ್ಯಾತವಾಗಿದೆ.
03115017a ಗಂಗಾಯಾಂ ಕನ್ಯಕುಬ್ಜೇ ವೈ ದದೌ ಸತ್ಯವತೀಂ ತದಾ।
03115017c ತತೋ ಗಾಧಿಃ ಸುತಾಂ ತಸ್ಮೈ ಜನ್ಯಾಶ್ಚಾಸನ್ಸುರಾಸ್ತದಾ।।
ಅನಂತರ ಗಾಧಿಯು ತನ್ನ ಮಗಳು ಸತ್ಯವತಿಯನ್ನು ಗಂಗಾತೀರದ ಕನ್ಯಕುಬ್ಜದಲ್ಲಿ ಅವನಿಗೆ ಕೊಟ್ಟನು. ಆಗ ದೇವತೆಗಳೂ ವರನ ದಿಬ್ಬಣದಲ್ಲಿ ಇದ್ದರು.
03115017e ಲಬ್ಧ್ವಾ ಹಯಸಹಸ್ರಂ ತು ತಾಂಶ್ಚ ದೃಷ್ಟ್ವಾ ದಿವೌಕಸಃ।।
03115018a ಧರ್ಮೇಣ ಲಬ್ಧ್ವಾ ತಾಂ ಭಾರ್ಯಾಮೃಚೀಕೋ ದ್ವಿಜಸತ್ತಮಃ।
03115018c ಯಥಾಕಾಮಂ ಯಥಾಜೋಷಂ ತಯಾ ರೇಮೇ ಸುಮಧ್ಯಯಾ।।
ಸಾವಿರ ಕುದುರೆಗಳನ್ನು ಪಡೆದು, ದೇವತೆಗಳನ್ನೂ ಕಂಡು, ಮತ್ತು ಧರ್ಮದಿಂದ ಪತ್ನಿಯನ್ನು ಪಡೆದ ದ್ವಿಜಸತ್ತಮ ಋಚೀಕನು ಬಯಸಿದ ಹಾಗೆ ಬೇಕಾದಷ್ಟು ಆ ಸುಮಧ್ಯಮೆಯೊಡನೆ ರಮಿಸಿದನು.
03115019a ತಂ ವಿವಾಹೇ ಕೃತೇ ರಾಜನ್ಸಭಾರ್ಯಮವಲೋಕಕಃ।
03115019c ಆಜಗಾಮ ಭೃಗುಶ್ರೇಷ್ಠಃ ಪುತ್ರಂ ದೃಷ್ಟ್ವಾ ನನಂದ ಚ।।
ರಾಜನ್! ವಿವಾಹದ ನಂತರ ಪತ್ನಿಯೊಂದಿಗೆ ಮಗನನ್ನು ನೋಡಲು ಭೃಗುಶ್ರೇಷ್ಠನು ಬಂದನು ಮತ್ತ ಅವರನ್ನು ನೋಡಿ ಸಂತೋಷಗೊಂಡನು.
03115020a ಭಾರ್ಯಾಪತೀ ತಮಾಸೀನಂ ಗುರುಂ ಸುರಗಣಾರ್ಚಿತಂ।
03115020c ಅರ್ಚಿತ್ವಾ ಪರ್ಯುಪಾಸೀನೌ ಪ್ರಾಂಜಲೀ ತಸ್ಥತುಸ್ತದಾ।।
ಪತಿಪತ್ನಿಯರು ಆ ಸುರಗಣಾರ್ಚಿತ ಗುರುವನ್ನು ಕುಳ್ಳಿರಿಸಿ ಅರ್ಚಿಸಿ ಕೈಜೋಡಿಸಿ ಅವನ ಹತ್ತಿರ ನಿಂತುಕೊಂಡರು.
03115021a ತತಃ ಸ್ನುಷಾಂ ಸ ಭಗವಾನ್ಪ್ರಹೃಷ್ಟೋ ಭೃಗುರಬ್ರವೀತ್।
03115021c ವರಂ ವೃಣೀಷ್ವ ಸುಭಗೇ ದಾತಾ ಹ್ಯಸ್ಮಿ ತವೇಪ್ಸಿತಂ।।
ಆಗ ಸೊಸೆಯನ್ನು ನೋಡಿ ಸಂತೋಷಗೊಂಡ ಭೃಗುವು ಹೇಳಿದನು: “ಸುಭಗೇ! ವರವನ್ನು ಕೇಳು. ನಿನಗೆ ಬೇಕಾದುದನ್ನು ಕೊಡುತ್ತೇನೆ.”
03115022a ಸಾ ವೈ ಪ್ರಸಾದಯಾಮಾಸ ತಂ ಗುರುಂ ಪುತ್ರಕಾರಣಾತ್।
03115022c ಆತ್ಮನಶ್ಚೈವ ಮಾತುಶ್ಚ ಪ್ರಸಾದಂ ಚ ಚಕಾರ ಸಃ।।
ಅವಳು ಆ ಗುರುವಲ್ಲಿ ತನಗೆ ಮತ್ತು ತನ್ನ ತಾಯಿಗೆ ಪುತ್ರರನ್ನು ಕೇಳಿಕೊಂಡಾಗ ಅವನು ಆ ಪ್ರಸಾದವನ್ನು ನೀಡಿದನು.
03115023 ಭೃಗುರುವಾಚ।
03115023a ಋತೌ ತ್ವಂ ಚೈವ ಮಾತಾ ಚ ಸ್ನಾತೇ ಪುಂಸವನಾಯ ವೈ।
03115023c ಆಲಿಂಗೇತಾಂ ಪೃಥಗ್ವೃಕ್ಷೌ ಸಾಶ್ವತ್ಥಂ ತ್ವಮುದುಂಬರಂ।।
ಭೃಗುವು ಹೇಳಿದನು: “ಋತುವಾದ ನಂತರ ನೀನು ಮತ್ತು ನಿನ್ನ ತಾಯಿಯು ಪುಂಸವನ ಸ್ನಾನಮಾಡಿ ಅವಳು ಅಶ್ವತ್ಥ ವೃಕ್ಷವನ್ನೂ ನೀನು ಔದುಂಬರ ವೃಕ್ಷವನ್ನೂ ಆಲಂಗಿಸಬೇಕು.””
03115024a ಆಲಿಂಗನೇ ತು ತೇ ರಾಜಂಶ್ಚಕ್ರತುಃ ಸ್ಮ ವಿಪರ್ಯಯಂ।
03115024c ಕದಾ ಚಿದ್ಭೃಗುರಾಗಚ್ಚತ್ತಂ ಚ ವೇದ ವಿಪರ್ಯಯಂ।।
ಅಕೃತವ್ರಣನು ಹೇಳಿದನು: “ರಾಜನ್! ಆದರೆ ಅವರು ಆಲಿಂಗನ ಮಾಡುವಾಗ ಅದಲು ಬದಲು ಮಾಡಿಕೊಂಡರು. ಈ ವಿಪರ್ಯಾಸವನ್ನು ತಿಳಿದ ಭೃಗುವು ಮತ್ತೊಂದು ದಿನ ಬಂದನು.
03115025a ಅಥೋವಾಚ ಮಹಾತೇಜಾ ಭೃಗುಃ ಸತ್ಯವತೀಂ ಸ್ನುಷಾಂ।
03115025c ಬ್ರಾಹ್ಮಣಃ ಕ್ಷತ್ರವೃತ್ತಿರ್ವೈ ತವ ಪುತ್ರೋ ಭವಿಷ್ಯತಿ।।
03115026a ಕ್ಷತ್ರಿಯೋ ಬ್ರಾಹ್ಮಣಾಚಾರೋ ಮಾತುಸ್ತವ ಸುತೋ ಮಹಾನ್।
03115026c ಭವಿಷ್ಯತಿ ಮಹಾವೀರ್ಯಃ ಸಾಧೂನಾಂ ಮಾರ್ಗಮಾಸ್ಥಿತಃ।।
ಆಗ ಮಹಾತೇಜಸ್ವಿ ಭೃಗುವು ಸೊಸೆ ಸತ್ಯವತಿಗೆ ಹೇಳಿದನು: “ಬ್ರಾಹ್ಮಣನಾಗಿದ್ದರೂ ಕ್ಷತ್ರಿಯನಾಗಿ ವರ್ತಿಸುವ ಮಗನು ನಿನಗೆ ಹುಟ್ಟುತ್ತಾನೆ. ಕ್ಷತ್ರಿಯನಾದರೂ ಮಹಾ ಬ್ರಾಹ್ಮಣನಾಗಿ ನಡೆದುಕೊಳ್ಳುವ, ಮಹಾವೀರನಾಗಿದ್ದರೂ ಸಾಧುಗಳ ಮಾರ್ಗದಲ್ಲಿ ನಡೆಯುವ ಮಗನು ನಿನ್ನ ತಾಯಿಗೆ ಹುಟ್ಟುತ್ತಾನೆ.”
03115027a ತತಃ ಪ್ರಸಾದಯಾಮಾಸ ಶ್ವಶುರಂ ಸಾ ಪುನಃ ಪುನಃ।
03115027c ನ ಮೇ ಪುತ್ರೋ ಭವೇದೀದೃಕ್ಕಾಮಂ ಪೌತ್ರೋ ಭವೇದಿತಿ।।
ಆಗ ಅವಳು ತನ್ನ ಮಾವನನ್ನು ಪುನಃ ಪುನಃ ಕೇಳಿಕೊಂಡಳು: “ಹೀಗೆ ನನ್ನ ಮಗನು ಆಗುವುದು ಬೇಡ. ನನ್ನ ಮೊಮ್ಮಗನು ಹಾಗೆ ಆಗಲಿ.”
03115028a ಏವಮಸ್ತ್ವಿತಿ ಸಾ ತೇನ ಪಾಂಡವ ಪ್ರತಿನಂದಿತಾ।
03115028c ಜಮದಗ್ನಿಂ ತತಃ ಪುತ್ರಂ ಸಾ ಜಜ್ಞೇ ಕಾಲ ಆಗತೇ।।
03115028e ತೇಜಸಾ ವರ್ಚಸಾ ಚೈವ ಯುಕ್ತಂ ಭಾರ್ಗವನಂದನಂ।।
ಪಾಂಡವ! “ಹಾಗೆಯೇ ಆಗಲಿ!” ಎಂದು ಅವನು ಅವಳಿಗೆ ಸಂತೋಷವನ್ನು ತಂದನು. ಕಾಲ ಬಂದಾಗ ಅವಳಿಗೆ ತೇಜಸ್ಸು ಮತ್ತು ವರ್ಚಸ್ಸಿನಿಂದ ಕೂಡಿದ ಭಾರ್ಗವನಂದನ ಜಮದಗ್ನಿಯು ಪುತ್ರನಾಗಿ ಜನಿಸಿದನು.
03115029a ಸ ವರ್ಧಮಾನಸ್ತೇಜಸ್ವೀ ವೇದಸ್ಯಾಧ್ಯಯನೇನ ವೈ।
03115029c ಬಹೂನೃಷೀನ್ಮಹಾತೇಜಾಃ ಪಾಂಡವೇಯಾತ್ಯವರ್ತತ।।
ಪಾಂಡವೇಯ! ಆ ತೇಜಸ್ವಿಯು ವೇದಾಧ್ಯಯನದಲ್ಲಿ ಮಹಾತೇಜಸ್ವಿಗಳಾದ ಬಹಳ ಋಷಿಗಳನ್ನೂ ಮೀರಿ ಬೆಳೆದನು.
03115030a ತಂ ತು ಕೃತ್ಸ್ನೋ ಧನುರ್ವೇದಃ ಪ್ರತ್ಯಭಾದ್ಭರತರ್ಷಭ।
03115030c ಚತುರ್ವಿಧಾನಿ ಚಾಸ್ತ್ರಾಣಿ ಭಾಸ್ಕರೋಪಮವರ್ಚಸಂ।।
ಭರತರ್ಷಭ! ವರ್ಚಸ್ಸಿನಲ್ಲಿ ಭಾಸ್ಕರನಂತಿದ್ದ ಅವನಿಗೆ ಸಂಪೂರ್ಣ ಧನುರ್ವೇದ ಮತ್ತು ನಾಲ್ಕು ವಿಧದ ಶಾಸ್ತ್ರಗಳು ತಾವಾಗಿಯೇ ಬಂದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಪಂಚದಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನೈದನೆಯ ಅಧ್ಯಾಯವು.
-
ಮುಂದೆ ಉದ್ಯೋಗಪರ್ವದಲ್ಲಿ ನಾರದನು ಗಾಲವನ ಕಥೆಯನ್ನು ಹೇಳುವಾಗ ಇದೇ ಪ್ರಸಂಗದ ಉಲ್ಲೇಕವಿದೆ. ↩︎