ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 114
ಸಾರ
ವೈತರಣೀ ನದಿಯ ಮಹಾತ್ಮೆ (1-26).
03114001 ವೈಶಂಪಾಯನ ಉವಾಚ।
03114001a ತತಃ ಪ್ರಯಾತಃ ಕೌಶಿಕ್ಯಾಃ ಪಾಂಡವೋ ಜನಮೇಜಯ।
03114001c ಆನುಪೂರ್ವ್ಯೇಣ ಸರ್ವಾಣಿ ಜಗಾಮಾಯತನಾನ್ಯುತ।।
ವೈಶಂಪಾಯನನು ಹೇಳಿದನು: “ಜನಮೇಜಯ! ಅನಂತರ ಪಾಂಡವನು ಕೌಶಿಕೀ ನದಿಗೆ ಪ್ರಯಾಣ ಮಾಡಿ ಒಂದಾದ ನಂತರ ಇನ್ನೊಂದರಂತೆ ಎಲ್ಲ ಪುಣ್ಯಕ್ಷೇತ್ರಗಳಿಗೆ ಹೋದನು.
03114002a ಸ ಸಾಗರಂ ಸಮಾಸಾದ್ಯ ಗಂಗಾಯಾಃ ಸಂಗಮೇ ನೃಪ।
03114002c ನದೀಶತಾನಾಂ ಪಂಚಾನಾಂ ಮಧ್ಯೇ ಚಕ್ರೇ ಸಮಾಪ್ಲವಂ।।
ನೃಪ! ಅವನು ಸಾಗರವನ್ನು ತಲುಪಿ ಗಂಗಾ ಸಂಗಮದಲ್ಲಿ ಐನೂರು ನದಿಗಳ ಮಧ್ಯೆ ಸ್ನಾನಮಾಡಿದನು.
03114003a ತತಃ ಸಮುದ್ರತೀರೇಣ ಜಗಾಮ ವಸುಧಾಧಿಪಃ।
03114003c ಭ್ರಾತೃಭಿಃ ಸಹಿತೋ ವೀರಃ ಕಲಿಂಗಾನ್ಪ್ರತಿ ಭಾರತ।।
ಭಾರತ! ಅನಂತರ ವೀರ ವಸುಧಾಧಿಪನು ಸಹೋದರರೊಂದಿಗೆ ಸಮುದ್ರತೀರದಲ್ಲಿ ಕಲಿಂಗ ದೇಶದ ಕಡೆ ಪ್ರಯಾಣ ಮಾಡಿದನು.
03114004 ಲೋಮಶ ಉವಾಚ।
03114004a ಏತೇ ಕಲಿಂಗಾಃ ಕೌಂತೇಯ ಯತ್ರ ವೈತರಣೀ ನದೀ।
03114004c ಯತ್ರಾಯಜತ ಧರ್ಮೋಽಪಿ ದೇವಾಂ ಶರಣಮೇತ್ಯ ವೈ।।
ಲೋಮಶನು ಹೇಳಿದನು: “ಕೌಂತೇಯ! ಇದು ವೈತರಣೀ ನದಿಯಿರುವ ಕಲಿಂಗ. ಇಲ್ಲಿ ಧರ್ಮನೂ ಕೂಡ ಯಜ್ಞಮಾಡಿ ದೇವತೆಗಳ ಶರಣು ಹೋದನು.
03114005a ಋಷಿಭಿಃ ಸಮುಪಾಯುಕ್ತಂ ಯಜ್ಞಿಯಂ ಗಿರಿಶೋಭಿತಂ।
03114005c ಉತ್ತರಂ ತೀರಮೇತದ್ಧಿ ಸತತಂ ದ್ವಿಜಸೇವಿತಂ।।
ಸತತವೂ ದ್ವಿಜರು ಸೇವಿಸುವ ಈ ಉತ್ತರ ತೀರದಲ್ಲಿ ಗಿರಿಗಳಿಂದ ಶೋಭಿಸುವ ಯಜ್ಞಭೂಮಿಗೆ ಋಷಿಗಳು ಬರುತ್ತಿರುತ್ತಾರೆ.
03114006a ಸಮೇನ ದೇವಯಾನೇನ ಪಥಾ ಸ್ವರ್ಗಮುಪೇಯುಷಃ।
03114006c ಅತ್ರ ವೈ ಋಷಯೋಽನ್ಯೇಽಪಿ ಪುರಾ ಕ್ರತುಭಿರೀಜಿರೇ।।
ಅಲ್ಲಿ ಹಿಂದೆ ಋಷಿಗಳೂ ಮತ್ತು ಇತರರೂ ಕ್ರತುಗಳನ್ನು ಯಾಜಿಸಿ ದೇವಯಾನಗಳ ಸಮನಾದ ದಾರಿಯಲ್ಲಿ ಸ್ವರ್ಗಕ್ಕೆ ಹೋಗಿದ್ದಾರೆ.
03114007a ಅತ್ರೈವ ರುದ್ರೋ ರಾಜೇಂದ್ರ ಪಶುಮಾದತ್ತವಾನ್ಮಖೇ।
03114007c ರುದ್ರಃ ಪಶುಂ ಮಾನವೇಂದ್ರ ಭಾಗೋಽಯಮಿತಿ ಚಾಬ್ರವೀತ್।।
ರಾಜೇಂದ್ರ! ಮಾನವೇಂದ್ರ! ಅಲ್ಲಿಯೇ ರುದ್ರನು ಯಾಗದಲ್ಲಿ ಈ ಪಶುವು ನನ್ನ ಭಾಗ ಎಂದು ಹೇಳಿ ಪಶುವನ್ನು ತೆಗೆದಕೊಂಡು ಹೋದನು.
03114008a ಹೃತೇ ಪಶೌ ತದಾ ದೇವಾಸ್ತಮೂಚುರ್ಭರತರ್ಷಭ।
03114008c ಮಾ ಪರಸ್ವಮಭಿದ್ರೋಗ್ಧಾ ಮಾ ಧರ್ಮಾನ್ಸಕಲಾನ್ನಶೀಃ।।
ಭರತರ್ಷಭ! ಪಶುವು ಕಳವಾದಾಗ ದೇವತೆಗಳು ಅವನಿಗೆ ಹೇಳಿದರು: “ಬೇರೆಯವರಿಗೆ ಸಲ್ಲಬೇಕಾದುದನ್ನು ತೆಗೆದುಕೊಳ್ಳಬೇಡ! ಸಕಲ ಧರ್ಮವನ್ನೂ ನಾಶಗೊಳಿಸಬೇಡ!”
03114009a ತತಃ ಕಲ್ಯಾಣರೂಪಾಭಿರ್ವಾಗ್ಭಿಸ್ತೇ ರುದ್ರಮಸ್ತುವನ್।
03114009c ಇಷ್ಟ್ಯಾ ಚೈನಂ ತರ್ಪಯಿತ್ವಾ ಮಾನಯಾಂ ಚಕ್ರಿರೇ ತದಾ।।
ಅನಂತರ ಅವರು ರುದ್ರನನ್ನು ಕಲ್ಯಾಣರೂಪಿ ಮಾತುಗಳಿಂದ ಸ್ತುತಿಸಿದರು. ಇಷ್ಟಿಯ ಮೂಲಕ ಅವನನ್ನು ತೃಪ್ತಿಪಡಿಸಿ ಗೌರವಿಸಿದರು.
03114010a ತತಃ ಸ ಪಶುಮುತ್ಸೃಜ್ಯ ದೇವಯಾನೇನ ಜಗ್ಮಿವಾನ್।
03114010c ಅತ್ರಾನುವಂಶೋ ರುದ್ರಸ್ಯ ತಂ ನಿಬೋಧ ಯುಧಿಷ್ಠಿರ।।
ಆಗ ಅವನು ಪಶುವನ್ನು ಬಿಟ್ಟು ದೇವಯಾನದಲ್ಲಿ ಹೊರಟು ಹೋದನು. ಯುಧಿಷ್ಠಿರ! ಅಲ್ಲಿ ರುದ್ರನ ಕುರಿತು ಒಂದು ಅನುವಂಶವಿದೆ. ಕೇಳು!
03114011a ಅಯಾತಯಾಮಂ ಸರ್ವೇಭ್ಯೋ ಭಾಗೇಭ್ಯೋ ಭಾಗಮುತ್ತಮಂ।
03114011c ದೇವಾಃ ಸಂಕಲ್ಪಯಾಮಾಸುರ್ಭಯಾದ್ರುದ್ರಸ್ಯ ಶಾಶ್ವತಂ।।
“ಸರ್ವ ಭೋಗಗಳಲ್ಲಿನ ಉತ್ತಮ ಭಾಗವು ರುದ್ರನಿಗೆ ಸೇರಬೇಕು ಎಂದು ರುದ್ರನ ಮೇಲಿನ ಭಯದಿಂದ ದೇವತೆಗಳು ಶಾಶ್ವತ ಸಂಕಲ್ಪ ಮಾಡಿಕೊಂಡರು.”
03114012a ಇಮಾಂ ಗಾಥಾಮತ್ರ ಗಾಯನ್ನಪಃ ಸ್ಪೃಶತಿ ಯೋ ನರಃ।
03114012c ದೇವಯಾನಸ್ತಸ್ಯ ಪಂಥಾಶ್ಚಕ್ಷುಶ್ಚೈವ ಪ್ರಕಾಶತೇ।।
ನೀರನ್ನು ಮುಟ್ಟಿ ಈ ಶ್ಲೋಕವನ್ನು ಯಾವ ನರನು ಹಾಡುತ್ತಾನೋ ಅವನು ದೇವಯಾನದಲ್ಲಿ ಪ್ರಯಾಣಿಸುತ್ತಾನೆ ಮತ್ತು ಅವನ ಕಣ್ಣುಗಳು ಪ್ರಕಾಶಿಸುತ್ತವೆ.””
03114013 ವೈಶಂಪಾಯನ ಉವಾಚ।
03114013a ತತೋ ವೈತರಣೀಂ ಸರ್ವೇ ಪಾಂಡವಾ ದ್ರೌಪದೀ ತಥಾ।
03114013c ಅವತೀರ್ಯ ಮಹಾಭಾಗಾ ತರ್ಪಯಾಂ ಚಕ್ರಿರೇ ಪಿತೄನ್।।
ವೈಶಂಪಾಯನನು ಹೇಳಿದನು: “ಅನಂತರ ಮಹಾಭಾಗ ಸರ್ವ ಪಾಂಡವರೂ ಮತ್ತು ದ್ರೌಪದಿಯೂ ವೈತರಣಿಯಲ್ಲಿ ಇಳಿದು ಪಿತೃಗಳಿಗೆ ತರ್ಪಣವನ್ನಿತ್ತರು.
03114014 ಯುಧಿಷ್ಠಿರ ಉವಾಚ।
03114014a ಉಪಸ್ಪೃಶ್ಯೈವ ಭಗವನ್ನಸ್ಯಾಂ ನದ್ಯಾಂ ತಪೋಧನ।
03114014c ಮಾನುಷಾದಸ್ಮಿ ವಿಷಯಾದಪೇತಃ ಪಶ್ಯ ಲೋಮಶ।।
ಯುಧಿಷ್ಠಿರನು ಹೇಳಿದನು: “ತಪೋಧನ ಲೋಮಶ! ಭಗವನ್! ನೋಡು! ಈ ನದಿಯ ನೀರನ್ನು ಮುಟ್ಟಿದಕೂಡಲೇ ಮಾನುಷಲೋಕವನ್ನು ದಾಟುತ್ತೇನೆ!
03114015a ಸರ್ವಾಽಲ್ಲೋಕಾನ್ಪ್ರಪಶ್ಯಾಮಿ ಪ್ರಸಾದಾತ್ತವ ಸುವ್ರತ।
03114015c ವೈಖಾನಸಾನಾಂ ಜಪತಾಮೇಷ ಶಬ್ಧೋ ಮಹಾತ್ಮನಾಂ।।
ಸುವ್ರತ! ನಿನ್ನ ಪ್ರಸಾದದಿಂದ ಸರ್ವಲೋಕಗಳನ್ನೂ ಕಾಣುತ್ತಿದ್ದೇನೆ. ಇದು ಮಹಾತ್ಮ ವೈಖಾನಸರ ಜಪದ ಶಬ್ಧ!”
03114016 ಲೋಮಶ ಉವಾಚ।
03114016a ತ್ರಿಶತಂ ವೈ ಸಹಸ್ರಾಣಿ ಯೋಜನಾನಾಂ ಯುಧಿಷ್ಠಿರ।
03114016c ಯತ್ರ ಧ್ವನಿಂ ಶೃಣೋಷ್ಯೇನಂ ತೂಷ್ಣೀಮಾಸ್ಸ್ವ ವಿಶಾಂ ಪತೇ।।
ಲೋಮಶನು ಹೇಳಿದನು: “ಯುಧಿಷ್ಠಿರ! ನೀನು ಕೇಳುತ್ತಿರುವ ಈ ಧ್ವನಿಯು ಮೂರುನೂರು ಸಾವಿರ (ಮೂರು ಲಕ್ಷ) ಯೋಜನೆಯ ದೂರದಿಂದ ಬರುವುದು. ವಿಶಾಂಪತೇ! ನಿಃಶಬ್ಧನಾಗಿರು.
03114017a ಏತತ್ಸ್ವಯಂಭುವೋ ರಾಜನ್ವನಂ ರಮ್ಯಂ ಪ್ರಕಾಶತೇ।
03114017c ಯತ್ರಾಯಜತ ಕೌಂತೇಯ ವಿಶ್ವಕರ್ಮಾ ಪ್ರತಾಪವಾನ್।।
ಕೌಂತೇಯ! ರಾಜನ್! ರಮ್ಯವಾಗಿ ಪ್ರಕಾಶಿಸುತ್ತಿರುವ ಈ ವನವು ಪ್ರತಾಪವಾನ್ ವಿಶ್ವಕರ್ಮನು ಯಜ್ಞಮಾಡಿದ ಪ್ರದೇಶ.
03114018a ಯಸ್ಮಿನ್ಯಜ್ಞೇ ಹಿ ಭೂರ್ದತ್ತಾ ಕಶ್ಯಪಾಯ ಮಹಾತ್ಮನೇ।
03114018c ಸಪರ್ವತವನೋದ್ದೇಶಾ ದಕ್ಷಿಣಾ ವೈ ಸ್ವಯಂಭುವಾ।।
ಈ ಯಜ್ಞದಲ್ಲಿಯೇ ಸ್ವಯಂಭುವು ಪರ್ವತ, ವನ ಪ್ರದೇಶಗಳೊಂದಿಗೆ ಭೂಮಿಯನ್ನು ಮಹಾತ್ಮ ಕಶ್ಯಪನಿಗೆ ದಾನವನ್ನಾಗಿತ್ತನು.
03114019a ಅವಾಸೀದಚ್ಚ ಕೌಂತೇಯ ದತ್ತಮಾತ್ರಾ ಮಹೀ ತದಾ।
03114019c ಉವಾಚ ಚಾಪಿ ಕುಪಿತಾ ಲೋಕೇಶ್ವರಮಿದಂ ಪ್ರಭುಂ।।
ಕೌಂತೇಯ! ದಾನವನ್ನಾಗಿತ್ತ ಕೂಡಲೇ ಭೂಮಿಯು ದುಃಖಿತಳಾಗಿ ಕೋಪದಿಂದ ಲೋಕೇಶ್ವರ ಪ್ರಭುವಿಗೆ ಹೇಳಿದಳು:
03114020a ನ ಮಾಂ ಮರ್ತ್ಯಾಯ ಭಗವನ್ಕಸ್ಮೈ ಚಿದ್ದಾತುಮರ್ಹಸಿ।
03114020c ಪ್ರದಾನಂ ಮೋಘಮೇತತ್ತೇ ಯಾಸ್ಯಾಮ್ಯೇಷಾ ರಸಾತಲಂ।।
“ಭಗವನ್! ನೀನು ನನ್ನನ್ನು ಯಾವ ಮರ್ತ್ಯನಿಗೂ ಕೊಡಬಾರದು. ನಿನ್ನ ದಾನವು ನಿರರ್ಥಕ. ನಾನು ರಸಾತಳಕ್ಕೆ ಹೋಗುತ್ತೇನೆ.”
03114021a ವಿಷೀದಂತೀಂ ತು ತಾಂ ದೃಷ್ಟ್ವಾ ಕಶ್ಯಪೋ ಭಗವಾನೃಷಿಃ।
03114021c ಪ್ರಸಾದಯಾಂ ಬಭೂವಾಥ ತತೋ ಭೂಮಿಂ ವಿಶಾಂ ಪತೇ।।
ವಿಶಾಂಪತೇ! ಅವಳು ವಿಷಾದಗೊಂಡಿದ್ದುದನ್ನು ನೋಡಿದ ಭಗವಾನ್ ಋಷಿ ಕಶ್ಯಪನು ಭೂಮಿಯನ್ನು ಮೆಚ್ಚಿಸಿದನು.
03114022a ತತಃ ಪ್ರಸನ್ನಾ ಪೃಥಿವೀ ತಪಸಾ ತಸ್ಯ ಪಾಂಡವ।
03114022c ಪುನರುನ್ಮಜ್ಜ್ಯ ಸಲಿಲಾದ್ವೇದೀರೂಪಾ ಸ್ಥಿತಾ ಬಭೌ।।
ಪಾಂಡವ! ಅವನ ತಪಸ್ಸಿಗೆ ಪ್ರಸನ್ನಳಾದ ಭೂಮಿಯು ನೀರಿನಿಂದ ಮೇಲೆದ್ದು ವೇದಿರೂಪದಲ್ಲಿ ಬಂದಳು.
03114023a ಸೈಷಾ ಪ್ರಕಾಶತೇ ರಾಜನ್ವೇದೀ ಸಂಸ್ಥಾನಲಕ್ಷಣಾ।
03114023c ಆರುಹ್ಯಾತ್ರ ಮಹಾರಾಜ ವೀರ್ಯವಾನ್ವೈ ಭವಿಷ್ಯಸಿ।।
ರಾಜನ್! ಅವಳೇ ಈ ಸಂಸ್ಥಾನಲಕ್ಷಣಗಳಿಂದ ವೇದಿಯಂತೆ ಪ್ರಕಾಶಿಸುತ್ತಾಳೆ. ಮಹಾರಾಜ! ಈ ವೇದಿಯನ್ನೇರು. ನೀನು ವೀರ್ಯವಂತನಾಗುವೆ.
03114024a ಅಹಂ ಚ ತೇ ಸ್ವಸ್ತ್ಯಯನಂ ಪ್ರಯೋಕ್ಷ್ಯೇ। ಯಥಾ ತ್ವಮೇನಾಮಧಿರೋಕ್ಷ್ಯಸೇಽದ್ಯ।
03114024c ಸ್ಪೃಷ್ಟಾ ಹಿ ಮರ್ತ್ಯೇನ ತತಃ ಸಮುದ್ರಂ। ಏಷಾ ವೇದೀ ಪ್ರವಿಶತ್ಯಾಜಮೀಢ।।
ಅನಘ! ನೀನು ವೇದಿಯನ್ನು ಏರಿದ ತಕ್ಷಣವೇ ನಾನೇ ನಿನಗೆ ಆಶೀರ್ವಚನಗಳನ್ನು ನೀಡುವೆ. ಅಜಮೀಢ! ಮರ್ತ್ಯನು ಈ ವೇದಿಯನ್ನು ಮುಟ್ಟಿದ ಕೂಡಲೇ ಅದು ಸಮುದ್ರವನ್ನು ಪ್ರವೇಶಿಸುತ್ತದೆ.
03114025a ಅಗ್ನಿರ್ಮಿತ್ರೋ ಯೋನಿರಾಪೋಽಥ ದೇವ್ಯೋ। ವಿಷ್ಣೋ ರೇತಸ್ತ್ವಮಮೃತಸ್ಯ ನಾಭಿಃ।
03114025c ಏವಂ ಬ್ರುವನ್ಪಾಂಡವ ಸತ್ಯವಾಕ್ಯಂ। ವೇದೀಮಿಮಾಂ ತ್ವಂ ತರಸಾಧಿರೋಹ।।
ಪಾಂಡವ! “ನೀನು ಅಗ್ನಿ, ಮಿತ್ರ, ಯೋನಿ, ದಿವ್ಯ ಆಪ ಮತ್ತು ವಿಷ್ಣುವಿನ ರೇತ ಹಾಗು ಅಮೃತದ ನಾಭಿ!” ಎಂಬ ಈ ಸತ್ಯವಾಕ್ಯವನ್ನು ಹೇಳುತ್ತಾ ಈಗ ಸಾವಕಾಶವಾಗಿ ಈ ವೇದಿಯನ್ನು ಏರು.””
03114026 ವೈಶಂಪಾಯನ ಉವಾಚ।
03114026a ತತಃ ಕೃತಸ್ವಸ್ತ್ಯಯನೋ ಮಹಾತ್ಮಾ। ಯುಧಿಷ್ಠಿರಃ ಸಾಗರಗಾಮಗಚ್ಚತ್।
03114026c ಕೃತ್ವಾ ಚ ತಚ್ಚಾಸನಮಸ್ಯ ಸರ್ವಂ। ಮಹೇಂದ್ರಮಾಸಾದ್ಯ ನಿಶಾಮುವಾಸ।।
ವೈಶಂಪಾಯನನು ಹೇಳಿದನು: “ಅವನಿಗೆ ಆಶೀರ್ವಚನಗಳನ್ನು ಹೇಳಿದ ನಂತರ ಮಹಾತ್ಮ ಯುಧಿಷ್ಠಿರನು ಸಾಗರವನ್ನು ಪ್ರವೇಶಿಸಿದನು. ಅವನು ಹೇಳಿದಂತೆ ಎಲ್ಲವನ್ನೂ ಮಾಡಿದ ನಂತರ, ಮಹೇಂದ್ರಪರ್ವತಕ್ಕೆ ಹೋಗಿ ರಾತ್ರಿಯನ್ನು ಕಳೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಮಹೇಂದ್ರಾಚಲಗಮನೇ ಚತುರ್ದಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಮಹೇಂದ್ರಾಚಲಗಮನದಲ್ಲಿ ನೂರಾಹದಿನಾಲ್ಕನೆಯ ಅಧ್ಯಾಯವು.