112 ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 112

ಸಾರ

ಋಷ್ಯಶೃಂಗನು ತಂದೆಗೆ ಆ ದಿನ ತಾನು ಭೇಟಿಯಾದ ವ್ಯಕ್ತಿಯ ವರ್ಣನೆಯನ್ನು ಮಾಡಿ ಅವನೊಂದಿಗೆ ಹೋಗಲು ಬಯಸುತ್ತೇನೆಂದು ಹೇಳುವುದು (1-18).

03112001 ಋಶ್ಯಶೃಂಗ ಉವಾಚ।
03112001a ಇಹಾಗತೋ ಜಟಿಲೋ ಬ್ರಹ್ಮಚಾರೀ। ನ ವೈ ಹ್ರಸ್ವೋ ನಾತಿದೀರ್ಘೋ ಮನಸ್ವೀ।
03112001c ಸುವರ್ಣವರ್ಣಃ ಕಮಲಾಯತಾಕ್ಷಃ। ಸುತಃ ಸುರಾಣಾಮಿವ ಶೋಭಮಾನಃ।।

ಋಷ್ಯಶೃಂಗನು ಹೇಳಿದನು: “ಇಲ್ಲಿಗೆ ಒಬ್ಬ ಜಡೆಹಾಕಿದ ಬ್ರಹ್ಮಚಾರಿಯು ಬಂದಿದ್ದ. ಅವನು ಕುಳ್ಳಗೂ ಇರಲಿಲ್ಲ ಮತ್ತು ಅತಿಯಾಗಿ ಎತ್ತರವೂ ಇರಲಿಲ್ಲ. ತುಂಬಾ ಉತ್ಸಾಹಿಯಾಗಿದ್ದ. ಬಂಗಾರದ ಬಣ್ಣವನ್ನು ಹೊಂದಿದ್ದ ಅವನ ಕಣ್ಣುಗಳು ಕಮಲದ ಎಸಳುಗಳಂತಿದ್ದವು. ಸುರರ ಮಗನಂತೆ ಶೋಭಿಸುತ್ತಿದ್ದನು.

03112002a ಸಮೃದ್ಧರೂಪಃ ಸವಿತೇವ ದೀಪ್ತಃ। ಸುಶುಕ್ಲಕೃಷ್ಣಾಕ್ಷತರಶ್ಚಕೋರೈಃ।
03112002c ನೀಲಾಃ ಪ್ರಸನ್ನಾಶ್ಚ ಜಟಾಃ ಸುಗಂಧಾ। ಹಿರಣ್ಯರಜ್ಜುಗ್ರಥಿತಾಃ ಸುದೀರ್ಘಾಃ।।

ಅವನ ಸಮೃದ್ಧ ದೇಹವು ಸೂರ್ಯನಂತೆ ಬೆಳಗುತ್ತಿತ್ತು. ಅವನ ಕಣ್ಣುಗಳು ಚಕೋರಗಳಂತೆ ಬಿಳಿ ಮತ್ತು ಕಪ್ಪಾಗಿದ್ದವು. ಅವನ ಜಡೆಯು ನೀಲವಾಗಿ, ನೋಡಲು ಸುಂದರವಾಗಿ, ಸುಗಂಧಿತವಾಗಿತ್ತು. ಅದು ನೀಳವಾಗಿದ್ದು ಬಂಗಾರದ ದಾರದಿಂದ ಕಟ್ಟಲ್ಪಟ್ಟಿತ್ತು.

03112003a ಆಧಾರರೂಪಾ ಪುನರಸ್ಯ ಕಂಠೇ। ವಿಭ್ರಾಜತೇ ವಿದ್ಯುದಿವಾಂತರಿಕ್ಷೇ।
03112003c ದ್ವೌ ಚಾಸ್ಯ ಪಿಂಡಾವಧರೇಣ ಕಂಠ। ಅಜಾತರೋಮೌ ಸುಮನೋಹರೌ ಚ।।

ಅವನ ಕಂಠದಲ್ಲಿ ಅಂತರಿಕ್ಷದಲ್ಲಿ ಬೆಳಗುವ ಮಿಂಚಿನಂತೆ ಹೊಳೆಯುವ ಲೋಟಗಳಿಂತಿರುವವುಗಳನ್ನು ಧರಿಸಿದ್ದನು. ಅವನ ಕಂಠದ ಕೆಳಗೆ ರೋಮಗಳೇ ಇಲ್ಲದ ಅತಿ ಸುಂದರ ಎರಡು ಗೋಲಗಳಿದ್ದವು.

03112004a ವಿಲಗ್ನಮಧ್ಯಶ್ಚ ಸ ನಾಭಿದೇಶೇ। ಕಟಿಶ್ಚ ತಸ್ಯಾತಿಕೃತಪ್ರಮಾಣಾ।
03112004c ತಥಾಸ್ಯ ಚೀರಾಂತರಿತಾ ಪ್ರಭಾತಿ। ಹಿರಣ್ಮಯೀ ಮೇಖಲಾ ಮೇ ಯಥೇಯಂ।।

ಅವನ ಹೊಕ್ಕಳು ಪ್ರದೇಶದಲ್ಲಿ ಚುಚ್ಚಲಾಗಿತ್ತು. ಅವನ ಸೊಂಟವೂ ದೊಡ್ಡದಾಗಿತ್ತು. ಅವನ ಪೋಷಾಕಿನ ಕೆಳಗಿ ನನಗಿದ್ದಹಾಗೆ ಪಟ್ಟಿಯಿತ್ತು – ಆದರೆ ಅದು ಬಂಗಾರದ್ದಾಗಿತ್ತು.

03112005a ಅನ್ಯಚ್ಚ ತಸ್ಯಾದ್ಭುತದರ್ಶನೀಯಂ। ವಿಕೂಜಿತಂ ಪಾದಯೋಃ ಸಂಪ್ರಭಾತಿ।
03112005c ಪಾಣ್ಯೋಶ್ಚ ತದ್ವತ್ಸ್ವನವನ್ನಿಬದ್ಧೌ। ಕಲಾಪಕಾವಕ್ಷಮಾಲಾ ಯಥೇಯಂ।।

ಇನ್ನೂ ಅನೇಕ ಅದ್ಭುತಗಳು ಅವನಲ್ಲಿ ಕಂಡುಬಂದವು. ಅವನ ಕಾಲುಗಳಲ್ಲಿ ಧ್ವನಿಮಾಡುವ ಗೆಜ್ಜೆಗಳಿದ್ದವು. ಕೈಗಳಲ್ಲಿಯೂ ಕೂಡ ಅಂತಹದೇ, ನನ್ನ ರುದ್ರಾಕ್ಷದಂತಿರುವ ದಾರವನ್ನು ಕಟ್ಟಿದ್ದನು. ಆದರೆ ಅದು ಝಣ ಝಣ ಶಬ್ಧಮಾಡುತ್ತಿತ್ತು.

03112006a ವಿಚೇಷ್ಟಮಾನಸ್ಯ ಚ ತಸ್ಯ ತಾನಿ। ಕೂಜಂತಿ ಹಂಸಾ ಸರಸೀವ ಮತ್ತಾಃ।
03112006c ಚೀರಾಣಿ ತಸ್ಯಾದ್ಭುತದರ್ಶನಾನಿ। ನೇಮಾನಿ ತದ್ವನ್ಮಮ ರೂಪವಂತಿ।।

ಅವನು ಹಂದಾಡಿದಾಗಲೆಲ್ಲ ಅವುಗಳು ಸರೋವರದಲ್ಲಿ ಮತ್ತೇರಿದ ಹಂಸಗಳಂತೆ ಶಬ್ಧಮಾಡುತ್ತಿದ್ದವು. ಅವನ ಉಡುಪು ನೋಡಲು ಅದ್ಭುತವಾಗಿತ್ತು. ಅವು ನನ್ನ ಉಡುಪಿನ ಹಾಗಿರದೇ, ತುಂಬಾ ಸುಂದರವಾಗಿತ್ತು.

03112007a ವಕ್ತ್ರಂ ಚ ತಸ್ಯಾದ್ಭುತದರ್ಶನೀಯಂ ಪ್ರವ್ಯಾಹೃತಂ ಹ್ಲಾದಯತೀವ ಚೇತಃ।
03112007c ಪುಂಸ್ಕೋಕಿಲಸ್ಯೇವ ಚ ತಸ್ಯ ವಾಣೀ। ತಾಂ ಶೃಣ್ವತೋ ಮೇ ವ್ಯಥಿತೋಽಂತರಾತ್ಮಾ।।

ಅವನ ಮುಖವೂ ನೋಡಲು ಅದ್ಭುತವಾಗಿತ್ತು. ಅವನ ಮಾತು ಹೃದಯಕ್ಕೆ ಸಂತಸವನ್ನು ನೀಡುತ್ತಿತ್ತು. ಅವನ ಮಾತು ಕೋಗಿಲೆಯ ಹಾಡಿನಂತಿತ್ತು. ಅವನನ್ನು ಕೇಳಿದಾಗಲೆಲ್ಲ ನನ್ನ ಅಂತರಾತ್ಮವು ವ್ಯಥಿತಗೊಳ್ಳುತ್ತಿತ್ತು.

03112008a ಯಥಾ ವನಂ ಮಾಧವಮಾಸಿ ಮಧ್ಯೇ। ಸಮೀರಿತಂ ಶ್ವಸನೇನಾಭಿವಾತಿ।
03112008c ತಥಾ ಸ ವಾತ್ಯುತ್ತಮಪುಣ್ಯಗಂಧೀ। ನಿಷೇವ್ಯಮಾಣಃ ಪವನೇನ ತಾತ।।

ಮಾಧವ ಮಾಸದ ಮಧ್ಯೆ ವನದಲ್ಲಿ ಗಾಳಿಯು ಪರಿಮಳವನ್ನು ಹೊತ್ತು ತರುವಂತೆ ಅವನೂ ಕೂಡ ಗಾಳಿಯು ಅವನ ಮೇಲೆ ಬಿದ್ದಾಗಲೆಲ್ಲ ಉತ್ತಮ ಪುಣ್ಯ ಸುಗಂಧವನ್ನು ಸೂಸುತ್ತಿದ್ದನು.

03112009a ಸುಸಮ್ಯತಾಶ್ಚಾಪಿ ಜಟಾ ವಿಭಕ್ತಾ। ದ್ವೈಧೀಕೃತಾ ಭಾಂತಿ ಸಮಾ ಲಲಾಟೇ।
03112009c ಕರ್ಣೌ ಚ ಚಿತ್ರೈರಿವ ಚಕ್ರವಾಲೈಃ। ಸಮಾವೃತೌ ತಸ್ಯ ಸುರೂಪವದ್ಭಿಃ।।

ನೆತ್ತಿಯಮೇಲೆ ಸಮನಾಗಿ ಎರಡು ಭಾಗಗಳನ್ನಾಗಿಸಿ ಚೆನ್ನಾಗಿ ಜಡೆಕಟ್ಟಿದ್ದನು. ಸರಿಯಾದ ದುಂಡಾಗಿ ಕೂದಲುಗಳು ಗುಂಗುರಾಗಿ ಅವನ ಕಿವಿಗಳನ್ನು ಸುಂದರವಾಗಿ ಮುಚ್ಚಿದ್ದವು.

03112010a ತಥಾ ಫಲಂ ವೃತ್ತಮಥೋ ವಿಚಿತ್ರಂ। ಸಮಾಹನತ್ಪಾಣಿನಾ ದಕ್ಷಿಣೇನ।
03112010c ತದ್ಭೂಮಿಮಾಸಾದ್ಯ ಪುನಃ ಪುನಶ್ಚ। ಸಮುತ್ಪತತ್ಯದ್ಭುತರೂಪಮುಚ್ಚೈಃ।।

ಅವನ ಬಲಗೈನಲ್ಲಿ ಹಣ್ಣಿನಂತೆ ಗೋಲಾಕಾರದ ಬಣ್ಣಬಣ್ಣದ ವಸ್ತುವೊಂದನ್ನು ಹಿಡಿದಿದ್ದನು. ಅದು ಭೂಮಿಯನ್ನು ಮುಟ್ಟಿದ ಕೂಡಲೆ ಪುನಃ ಪುನಃ ಮೇಲೆ ಅದ್ಭುತವಾಗಿ ಪುಟಿಯುತ್ತಿತ್ತು.

03112011a ತಚ್ಚಾಪಿ ಹತ್ವಾ ಪರಿವರ್ತತೇಽಸೌ। ವಾತೇರಿತೋ ವೃಕ್ಷ ಇವಾವಘೂರ್ಣಃ।
03112011c ತಂ ಪ್ರೇಕ್ಷ್ಯ ಮೇ ಪುತ್ರಮಿವಾಮರಾಣಾಂ। ಪ್ರೀತಿಃ ಪರಾ ತಾತ ರತಿಶ್ಚ ಜಾತಾ।।

ಅದನ್ನು ಹೊಡೆದು ಅವನು ತನ್ನ ದೇಹವನ್ನು ಗಾಳಿಗೆ ಸಿಕ್ಕ ಮರದಂತೆ ತಿರುಗಿಸುತ್ತಿದ್ದನು. ಅಪ್ಪಾ! ಅಮರರ ಮಗನಂತಿರುವ ಅವನನ್ನು ನೋಡಿದಾಗಲೆಲ್ಲ ನನ್ನ ಅತ್ಯಂತ ಪ್ರೀತಿ ಮತ್ತು ಸಂತೋಷವು ಹುಟ್ಟುತ್ತಿತ್ತು.

03112012a ಸ ಮೇ ಸಮಾಶ್ಲಿಷ್ಯ ಪುನಃ ಶರೀರಂ। ಜಟಾಸು ಗೃಹ್ಯಾಭ್ಯವನಾಮ್ಯ ವಕ್ತ್ರಂ।
03112012c ವಕ್ತ್ರೇಣ ವಕ್ತ್ರಂ ಪ್ರಣಿಧಾಯ ಶಬ್ಧಂ। ಚಕಾರ ತನ್ಮೇಽಜನಯತ್ಪ್ರಹರ್ಷಂ।।

ಅವನು ನನ್ನ ಶರೀರವನ್ನು ಪುನಃ ಪುನಃ ಅಪ್ಪಿ ಹಿಡಿದು ನನ್ನ ಕೂದಲನ್ನು ಎಳೆದು ನನ್ನ ಮುಖವನ್ನು ಕೆಳಮಾಡಿ ಬಾಯಿಯ ಮೇಲೆ ಬಾಯಿಯನ್ನಿಟ್ಟು ಶಬ್ಧಮಾಡಿದನು. ಅದರಿಂದ ನನ್ನಲ್ಲಿ ಅತ್ಯಂತ ಸಂತೋಷವು ಹುಟ್ಟಿತು.

03112013a ನ ಚಾಪಿ ಪಾದ್ಯಂ ಬಹು ಮನ್ಯತೇಽಸೌ। ಫಲಾನಿ ಚೇಮಾನಿ ಮಯಾಹೃತಾನಿ।
03112013c ಏವಂವ್ರತೋಽಸ್ಮೀತಿ ಚ ಮಾಮವೋಚತ್। ಫಲಾನಿ ಚಾನ್ಯಾನಿ ನವಾನ್ಯದಾನ್ಮೇ।।

ಅವನು ಪಾದ್ಯಕ್ಕೆ ಹೆಚ್ಚು ಗಮನಕೊಡಲಿಲ್ಲ. ನಾನು ಕೊಟ್ಟ ಹಣ್ಣುಗಳನ್ನೂ ಸ್ವೀಕರಿಸಲಿಲ್ಲ. ಇದೇ ನನ್ನ ವ್ರತ ಎಂದು ನನಗೆ ಹೇಳಿದನು ಮತ್ತು ನನಗೆ ಬೇರೆ ಹೊಸ ಹಣ್ಣುಗಳನ್ನು ಕೊಟ್ಟ.

03112014a ಮಯೋಪಯುಕ್ತಾನಿ ಫಲಾನಿ ತಾನಿ। ನೇಮಾನಿ ತುಲ್ಯಾನಿ ರಸೇನ ತೇಷಾಂ।
03112014c ನ ಚಾಪಿ ತೇಷಾಂ ತ್ವಗಿಯಂ ಯಥೈಷಾಂ। ಸಾರಾಣಿ ನೈಷಾಮಿವ ಸಂತಿ ತೇಷಾಂ।।

ಅವನ ಎಲ್ಲ ಹಣ್ಣುಗಳನ್ನೂ ನಾನು ತಿಂದೆ. ಅವುಗಳ ರುಚಿಯು ಈ ಹಣ್ಣುಗಳಂತೆ ಇರಲೇ ಇಲ್ಲ. ಈ ಹಣ್ಣುಗಳಿಗಿರುವಂತೆ ಅವುಗಳಲ್ಲಿ ತೊಗಟೆಯೂ ಇರಲಿಲ್ಲ ಮತ್ತು ನಮ್ಮ ಹಣ್ಣುಗಳಲ್ಲಿರುವಂತೆ ಅವುಗಳಲ್ಲಿ ಕಲ್ಲುಗಳಿರಲಿಲ್ಲ.

03112015a ತೋಯಾನಿ ಚೈವಾತಿರಸಾನಿ ಮಃಯಂ। ಪ್ರಾದಾತ್ಸ ವೈ ಪಾತುಮುದಾರರೂಪಃ।
03112015c ಪೀತ್ವೈವ ಯಾನ್ಯಭ್ಯಧಿಕಃ ಪ್ರಹರ್ಷೋ। ಮಮಾಭವದ್ಭೂಶ್ಚಲಿತೇವ ಚಾಸೀತ್।।

ಆ ಉದಾರರೂಪಿಯು ನನಗೆ ಈ ಅತಿ ರುಚಿಯಾಗುಳ್ಳ ಪಾನೀಯವನ್ನು ನೀಡಿದನು. ಅದನ್ನು ಕುಡಿಯುತ್ತಲೇ ಅತೀವ ಸಂತಸವು ನನ್ನನ್ನು ಸೆರೆಹಿಡಿಯಿತು ಮತ್ತು ಭೂಮಿಯೇ ಓಲಾಡುವಂತೆ ಆಯಿತು.

03112016a ಇಮಾನಿ ಚಿತ್ರಾಣಿ ಚ ಗಂಧವಂತಿ। ಮಾಲ್ಯಾನಿ ತಸ್ಯೋದ್ಗ್ರಥಿತಾನಿ ಪಟ್ಟೈಃ।
03112016c ಯಾನಿ ಪ್ರಕೀರ್ಯೇಹ ಗತಃ ಸ್ವಮೇವ। ಸ ಆಶ್ರಮಂ ತಪಸಾ ದ್ಯೋತಮಾನಃ।।

ಇವು ರಂಗುರಂಗಿನ ಸುಗಂಧಯುಕ್ತ, ಅವನೇ ಕಟ್ಟಿದ ಮಾಲೆಗಳು. ಈ ಮಾಲೆಗಳನ್ನು ಇಲ್ಲಿ ಚೆಲ್ಲಿ ಅವನು ಬೆಳಗುತ್ತಾ ತನ್ನ ಆಶ್ರಮಕ್ಕೆ ತಪಸ್ಸಿಗೆಂದು ಹೊರಟುಹೋದನು.

03112017a ಗತೇನ ತೇನಾಸ್ಮಿ ಕೃತೋ ವಿಚೇತಾ। ಗಾತ್ರಂ ಚ ಮೇ ಸಂಪರಿತಪ್ಯತೀವ।
03112017c ಇಚ್ಚಾಮಿ ತಸ್ಯಾಂತಿಕಮಾಶು ಗಂತುಂ। ತಂ ಚೇಹ ನಿತ್ಯಂ ಪರಿವರ್ತಮಾನಂ।।

ಅವನು ಬಿಟ್ಟುಹೋದದ್ದು ನನ್ನನ್ನು ಮನಸ್ಸು ಕಳೆದುಕೊಂಡವನಂತೆ ಮಾಡಿದೆ. ನನ್ನ ದೇಹವು ಜ್ವರಬಂದವರಂತೆ ಬಿಸಿಯಾಗಿದೆ. ನೇರವಾಗಿ ಅವನಿರುವಲ್ಲಿಗೆ ಹೋಗ ಬಯಸುತ್ತೇನೆ ಮತ್ತು ಪ್ರತಿದಿನ ಅವನು ಇಲ್ಲಿಗೆ ಬರುವಂತೆ ಮಾಡಬಯಸುತ್ತೇನೆ.

03112018a ಗಚ್ಚಾಮಿ ತಸ್ಯಾಂತಿಕಮೇವ ತಾತ। ಕಾ ನಾಮ ಸಾ ವ್ರತಚರ್ಯಾ ಚ ತಸ್ಯ।
03112018c ಇಚ್ಚಾಮ್ಯಹಂ ಚರಿತುಂ ತೇನ ಸಾರ್ಧಂ। ಯಥಾ ತಪಃ ಸ ಚರತ್ಯುಗ್ರಕರ್ಮಾ।।

ಅಪ್ಪಾ! ಅವನಿರುವಲ್ಲಿ ತಿರುಗಿ ಹೋಗುತ್ತಿದ್ದೇನೆ. ಅವನ ವ್ರತಚರ್ಯದ ಹೆಸರೇನು? ಅವನೊಂದಿಗೆ ಅವನ ಹಾಗೆ ಇರಲು ಮತ್ತು ಆ ಉಗ್ರತಪಸ್ಸನ್ನು ಆಚರಿಸಲು ಬಯಸುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ದ್ವಾದಶಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹನ್ನೆರಡನೆಯ ಅಧ್ಯಾಯವು.