107 ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 107

ಸಾರ

ಗಂಗೆಗಾಗಿ ಭಗೀರಥನ ಘೋರ ತಪಸ್ಸು (1-14). ಗಂಗೆಯು ಪ್ರತ್ಯಕ್ಷಳಾಗಿ ಆಕಾಶದಿಂದ ಭೂಮಿಗೆ ಧುಮುಕುವಾಗ ಅವಳನ್ನು ಶಿರದಲ್ಲಿ ಧರಿಸಲು ಹರನ ಕುರಿತು ತಪಸ್ಸನ್ನಾಚರಿಸಲು ಹೇಳಿದುದು; ಹರನ ಕುರಿತು ಭಗೀರಥನ ತಪಸ್ಸು (15-25).

03107001 ಲೋಮಶ ಉವಾಚ।
03107001a ಸ ತು ರಾಜಾ ಮಹೇಷ್ವಾಸಶ್ಚಕ್ರವರ್ತೀ ಮಹಾರಥಃ।
03107001c ಬಭೂವ ಸರ್ವಲೋಕಸ್ಯ ಮನೋನಯನನಂದನಃ।।

ಲೋಮಶನು ಹೇಳಿದನು: “ಆ ಮಹೇಷ್ವಾಸ, ಚಕ್ರವರ್ತೀ ಮಹಾರಥೀ ರಾಜನಾದರೋ ಸರ್ವಲೋಕದ ಮನೋನಯನ ನಂದನನಾದನು.

03107002a ಸ ಶುಶ್ರಾವ ಮಹಾಬಾಹುಃ ಕಪಿಲೇನ ಮಹಾತ್ಮನಾ।
03107002c ಪಿತೄಣಾಂ ನಿಧನಂ ಘೋರಮಪ್ರಾಪ್ತಿಂ ತ್ರಿದಿವಸ್ಯ ಚ।।

ಆ ಮಹಾಬಾಹುವು ತನ್ನ ಪಿತೃಗಳು ಮಹಾತ್ಮ ಕಪಿಲನಿಂದ ಘೋರಮರಣವನ್ನು ಅನುಭವಿಸಿ ಸ್ವರ್ಗವನ್ನು ಪಡೆಯಲಿಲ್ಲ ಎನ್ನುವುದನ್ನು ಕೇಳಿದನು.

03107003a ಸ ರಾಜ್ಯಂ ಸಚಿವೇ ನ್ಯಸ್ಯ ಹೃದಯೇನ ವಿದೂಯತಾ।
03107003c ಜಗಾಮ ಹಿಮವತ್ಪಾರ್ಶ್ವಂ ತಪಸ್ತಪ್ತುಂ ನರೇಶ್ವರಃ।।
03107004a ಆರಿರಾಧಯಿಷುರ್ಗಂಗಾಂ ತಪಸಾ ದಗ್ಧಕಿಲ್ಬಿಷಃ।

ಆ ರಾಜ್ಯವನ್ನು ಸಚಿವನಲ್ಲಿಟ್ಟು ನರೇಶ್ವರನು ದುಃಖಿತ ಹೃದಯದೊಂದಿಗೆ ತಪಸ್ಸನ್ನು ತಪಿಸಿ, ಕಿಲ್ಬಿಷಗಳನ್ನು ತಪಸ್ಸಿನಿಂದ ಸುಟ್ಟು ಗಂಗೆಯನ್ನು ಆರಾಧಿಸಲು ಹಿಮವತ್ ಪರ್ವತದ ಇಳಿಜಾರಿಗೆ ಹೋದನು.

03107004c ಸೋಽಪಶ್ಯತ ನರಶ್ರೇಷ್ಠ ಹಿಮವಂತಂ ನಗೋತ್ತಮಂ।।
03107005a ಶೃಂಗೈರ್ಬಹುವಿಧಾಕಾರೈರ್ಧಾತುಮದ್ಭಿರಲಂಕೃತಂ।
03107005c ಪವನಾಲಂಬಿಭಿರ್ಮೇಘೈಃ ಪರಿಷ್ವಕ್ತಂ ಸಮಂತತಃ।।
03107006a ನದೀಕುಂಜನಿತಂಬೈಶ್ಚ ಸೋದಕೈರುಪಶೋಭಿತಂ।
03107006c ಗುಹಾಕಂದರಸಂಲೀನೈಃ ಸಿಂಹವ್ಯಾಘ್ರೈರ್ನಿಷೇವಿತಂ।।
03107007a ಶಕುನೈಶ್ಚ ವಿಚಿತ್ರಾಂಗೈಃ ಕೂಜದ್ಭಿರ್ವಿವಿಧಾ ಗಿರಃ।
03107007c ಭೃಂಗರಾಜೈಸ್ತಥಾ ಹಂಸೈರ್ದಾತ್ಯೂಹೈರ್ಜಲಕುಕ್ಕುಟೈಃ।।
03107008a ಮಯೂರೈಃ ಶತಪತ್ರೈಶ್ಚ ಕೋಕಿಲೈರ್ಜೀವಜೀವಕೈಃ।
03107008c ಚಕೋರೈರಸಿತಾಪಾಂಗೈಸ್ತಥಾ ಪುತ್ರಪ್ರಿಯೈರಪಿ।।
03107009a ಜಲಸ್ಥಾನೇಷು ರಮ್ಯೇಷು ಪದ್ಮಿನೀಭಿಶ್ಚ ಸಂಕುಲಂ।
03107009c ಸಾರಸಾನಾಂ ಚ ಮಧುರೈರ್ವ್ಯಾಹೃತೈಃ ಸಮಲಂಕೃತಂ।।
03107010a ಕಿನ್ನರೈರಪ್ಸರೋಭಿಶ್ಚ ನಿಷೇವಿತಶಿಲಾತಲಂ।
03107010c ದಿಶಾಗಜವಿಷಾಣಾಗ್ರೈಃ ಸಮಂತಾದ್ ಘೃಷ್ಟಪಾದಪಂ।।
03107011a ವಿದ್ಯಾಧರಾನುಚರಿತಂ ನಾನಾರತ್ನಸಮಾಕುಲಂ।
03107011c ವಿಷೋಲ್ಬಣೈರ್ಭುಜಂಗೈಶ್ಚ ದೀಪ್ತಜಿಹ್ವೈರ್ನಿಷೇವಿತಂ।।

ಆ ನರಶ್ರೇಷ್ಠನು ನಗೋತ್ತಮ, ಖನಿಜಗಳಿಂದ ಅಲಂಕೃತಗೊಂಡ ಬಹುವಿಧದ ಆಕಾರಗಳುಳ್ಳ ಶಿಖರಗಳನ್ನು ಹೊಂದಿದ, ಎಲ್ಲೆಡೆಗಳಲ್ಲಿ ಗಾಳಿಯಿಂದ ತೇಲಿ ಬರುತ್ತಿರುವ ಮೋಡಗಳಿಂದ ಅಪ್ಪಿಹಿಡಿಯಲ್ಪಟ್ಟ; ಸದಾ ನೀರಿರುವ ನದೀ, ಕೊಳ, ಬಾವಿಗಳಿಂದ ಕಂಗೊಳಿಸುವ; ಗುಹೆ ಕಂದರಗಳಲ್ಲಿ ವಾಸಿಸುವ ಸಿಂಹ ವ್ಯಾಘ್ರಗಳಿಗೆ ಮನೆಯಾದ; ವಿಚಿತ್ರ ಅಂಗಾಂಗಳ ವಿಚಿತ್ರ ಆಕಾರಗಳ, ವಿಚಿತ್ರ ಧ್ವನಿಗಳ, ಕಪ್ಪು ಕಣ್ಣಿನ, ಪುತ್ರಪ್ರಿಯರಾದ ದುಂಬಿ, ಹಂಸ, ಕಾಡುಕೋಳಿ, ನವಿಲು, ಶತಪತ್ರಿ, ಕೋಕಿಲ, ಮರಕುಟುಕ, ಚಕೋರವೇ ಮೊದಲಾದ, ಪಕ್ಷಿಗಳಿಂದ, ಮಧುರವಾಗಿ ಅರಳುತ್ತಿರುವ ಕಮಲದ ರಾಶಿಗಳಿಂದ ಅಲಂಕೃತವಾದ ರಮ್ಯ ಸರೋವರಗಳೇ ಮೊದಲಾದ ಜಲಸ್ಥಾನಗಳಿಂದ ಕೂಡಿದ್ದ; ಕಿನ್ನರ ಅಪ್ಸರೆಯರು ಆಗಾಗ್ಗೆ ಬರುತ್ತಿದ್ದ ಶಿಲಾತಲಗಳು ಆನೆಗಳ ಕೋರೆದಾಡೆಗಳ ತುದಿಗೆ ಸಿಲುಕಿ ಗಾಯಗೊಂಡ ಮರಗಳುಳ್ಳ; ವಿಧ್ಯಾಧರರು ಸಂಚರಿಸುತ್ತಿರುವ, ನಾನಾರತ್ನಸಮಾಕುಲ, ಉರಿನಾಲಿಗೆಯ ತೀವ್ರ ವಿಷದ ಹಾವುಗಳುಳ್ಳ ಹಿಮವಂತನನ್ನು ಕಂಡನು.

03107012a ಕ್ವ ಚಿತ್ಕನಕಸಂಕಾಶಂ ಕ್ವ ಚಿದ್ರಜತಸನ್ನಿಭಂ।
03107012c ಕ್ವ ಚಿದಂಜನಪುಂಜಾಭಂ ಹಿಮವಂತಮುಪಾಗಮತ್।।

ಒಮ್ಮೆ ಬಂಗಾರದಂತೆ ತೋರುವ, ಒಮ್ಮೆ ಬೆಳ್ಳಿಯಂತೆ ತೋರುವ, ಒಮ್ಮೊಮ್ಮೆ ಕಪ್ಪಾಗಿ ಕಾಣುವ ಹಿಮಾಲಯಕ್ಕೆ ಆಗಮಿಸಿದನು.

03107013a ಸ ತು ತತ್ರ ನರಶ್ರೇಷ್ಠಸ್ತಪೋ ಘೋರಂ ಸಮಾಶ್ರಿತಃ।
03107013c ಫಲಮೂಲಾಂಬುಭಕ್ಷೋಽಭೂತ್ಸಹಸ್ರಂ ಪರಿವತ್ಸರಾನ್।।
03107014a ಸಂವತ್ಸರಸಹಸ್ರೇ ತು ಗತೇ ದಿವ್ಯೇ ಮಹಾನದೀ।
03107014c ದರ್ಶಯಾಮಾಸ ತಂ ಗಂಗಾ ತದಾ ಮೂರ್ತಿಮತೀ ಸ್ವಯಂ।।

ಅಲ್ಲಿಯೇ ಆ ನರಶ್ರೇಷ್ಠನು ಫಲಮೂಲ ಮತ್ತು ನೀರನ್ನು ಸೇವಿಸುತ್ತಾ ಒಂದು ಸಾವಿರ ವರ್ಷಗಳ ಘೋರ ತಪಸ್ಸನ್ನಾಚರಿಸಿದನು. ಒಂದು ಸಾವಿರ ವರ್ಷಗಳು ಕಳೆದ ನಂತರ ದಿವ್ಯ ಮಹಾನದಿ ಗಂಗೆಯು ಸ್ವಯಂ ಮೂರ್ತಿಮತ್ತಾಗಿ ಕಾಣಿಸಿಕೊಂಡಳು.

03107015 ಗಂಗೋವಾಚ।
03107015a ಕಿಮಿಚ್ಚಸಿ ಮಹಾರಾಜ ಮತ್ತಃ ಕಿಂ ಚ ದದಾನಿ ತೇ।
03107015c ತದ್ಬ್ರವೀಹಿ ನರಶ್ರೇಷ್ಠ ಕರಿಷ್ಯಾಮಿ ವಚಸ್ತವ।।

ಗಂಗೆಯು ಹೇಳಿದಳು: “ಮಹಾರಾಜ! ಏನನ್ನು ಇಚ್ಛಿಸಿದ್ದೀಯೆ? ನಾನು ನಿನಗೆ ಏನನ್ನು ನೀಡಲಿ? ನರಶ್ರೇಷ್ಠ! ಹೇಳು! ನಿನ್ನ ಮಾತನ್ನು ನಡೆಸಿಕೊಡುತ್ತೇನೆ.””

03107016 ಲೋಮಶ ಉವಾಚ।
03107016a ಏವಮುಕ್ತಃ ಪ್ರತ್ಯುವಾಚ ರಾಜಾ ಹೈಮವತೀಂ ತದಾ।
03107016c ಪಿತಾಮಹಾ ಮೇ ವರದೇ ಕಪಿಲೇನ ಮಹಾನದಿ।।
03107016e ಅನ್ವೇಷಮಾಣಾಸ್ತುರಗಂ ನೀತಾ ವೈವಸ್ವತಕ್ಷಯಂ।।

ಲೋಮಶನು ಹೇಳಿದನು: “ಈ ಮಾತಿಗೆ ರಾಜನು ಹೈಮವತಿಗೆ ಉತ್ತರಿಸಿದನು: “ವರದೇ! ಮಹಾನದೀ! ಯಜ್ಞಾಶ್ವವನ್ನು ಹುಡುಕುತ್ತಿದ್ದ ನನ್ನ ಪಿತಾಮಹರನ್ನು ಕಪಿಲನು ಯಮನಾಲಯಕ್ಕೆ ಕಳುಹಿಸಿದನು.

03107017a ಷಷ್ಟಿಸ್ತಾನಿ ಸಹಸ್ರಾಣಿ ಸಾಗರಾಣಾಂ ಮಹಾತ್ಮನಾಂ।
03107017c ಕಾಪಿಲಂ ತೇಜ ಆಸಾದ್ಯ ಕ್ಷಣೇನ ನಿಧನಂ ಗತಾಃ।।

ಅರವತ್ತು ಸಾವಿರ ಮಹಾತ್ಮ ಸಾಗರರು ಕಪಿಲನ ತೇಜಸ್ಸಿನ ಬಳಿಬಂದು ಕ್ಷಣದಲ್ಲಿಯೇ ನಿಧನಹೊಂದಿದರು.

03107018a ತೇಷಾಮೇವಂ ವಿನಷ್ಟಾನಾಂ ಸ್ವರ್ಗೇ ವಾಸೋ ನ ವಿದ್ಯತೇ।
03107018c ಯಾವತ್ತಾನಿ ಶರೀರಾಣಿ ತ್ವಂ ಜಲೈರ್ನಾಭಿಷಿಂಚಸಿ।।

ವಿನಷ್ಟರಾದ ಅವರ ಶರೀರಗಳನ್ನು ನೀನು ನೀರಿನಿಂದ ತೊಳೆಯದೇ ಆ ನನ್ನವರಿಗೆ ಸ್ವರ್ಗದಲ್ಲಿ ಸ್ಥಾನ ದೊರೆಯುವುದಿಲ್ಲ ಎಂದು ತಿಳಿದಿದೆ.

03107019a ಸ್ವರ್ಗಂ ನಯ ಮಹಾಭಾಗೇ ಮತ್ಪಿತೄನ್ಸಗರಾತ್ಮಜಾನ್।
03107019c ತೇಷಾಮರ್ಥೇಽಭಿಯಾಚಾಮಿ ತ್ವಾಮಹಂ ವೈ ಮಹಾನದಿ।।

ಮಹಾಭಾಗೇ! ಸಗರನ ಮಕ್ಕಳು ನನ್ನ ಪಿತೃಗಳನ್ನು ಸ್ವರ್ಗಕ್ಕೆ ಕರೆದೊಯ್ಯಿ! ಮಹಾನದೀ! ಇದನ್ನೇ ನಾನು ನಿನ್ನಲ್ಲಿ ಬೇಡ ಬಯಸುತ್ತೇನೆ.”

03107020a ಏತಚ್ಛೃತ್ವಾ ವಚೋ ರಾಜ್ಞೋ ಗಂಗಾ ಲೋಕನಮಸ್ಕೃತಾ।
03107020c ಭಗೀರಥಮಿದಂ ವಾಕ್ಯಂ ಸುಪ್ರೀತಾ ಸಮಭಾಷತ।।

ರಾಜನ ಈ ಮಾತುಗಳನ್ನು ಕೇಳಿ, ಲೋಕನಮಸ್ಕೃತೆ ಗಂಗೆಯು ಸುಪ್ರೀತಳಾಗಿ ಭಗೀರಥನಿಗೆ ಈ ಮಾತುಗಳಲ್ಲಿ ಉತ್ತರಿಸಿದಳು:

03107021a ಕರಿಷ್ಯಾಮಿ ಮಹಾರಾಜ ವಚಸ್ತೇ ನಾತ್ರ ಸಂಶಯಃ।
03107021c ವೇಗಂ ತು ಮಮ ದುರ್ಧಾರ್ಯಂ ಪತಂತ್ಯಾ ಗಗನಾಚ್ಚ್ಯುತಂ।।

“ಮಹಾರಾಜ! ನಿನ್ನ ಹೇಳಿಕೆಯಂತೆ ಮಾಡುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದರೆ ನಾನು ಗಗನದಿಂದ ಕಳಚಿ ಬೀಳುವ ವೇಗವನ್ನು ಸಹಿಸಲು ಅಸಾಧ್ಯವಾಗುತ್ತದೆ.

03107022a ನ ಶಕ್ತಸ್ತ್ರಿಷು ಲೋಕೇಷು ಕಶ್ಚಿದ್ಧಾರಯಿತುಂ ನೃಪ।
03107022c ಅನ್ಯತ್ರ ವಿಬುಧಶ್ರೇಷ್ಠಾನ್ನೀಲಕಂಠಾನ್ಮಹೇಶ್ವರಾತ್।।

ನೃಪ! ವಿಬುಧಶ್ರೇಷ್ಠ ನೀಲಕಂಠ ಮಹೇಶ್ವರನ ಹೊರತು ಈ ಮೂರು ಲೋಕಗಳಲ್ಲಿ ಬೇರೆ ಯಾರೂ ಅದನ್ನು ತಡೆದುಕೊಳ್ಳಲು ಶಕ್ತರಿಲ್ಲ.

03107023a ತಂ ತೋಷಯ ಮಹಾಬಾಹೋ ತಪಸಾ ವರದಂ ಹರಂ।
03107023c ಸ ತು ಮಾಂ ಪ್ರಚ್ಯುತಾಂ ದೇವಃ ಶಿರಸಾ ಧಾರಯಿಷ್ಯತಿ।।
03107023e ಕರಿಷ್ಯತಿ ಚ ತೇ ಕಾಮಂ ಪಿತೄಣಾಂ ಹಿತಕಾಮ್ಯಯಾ।।

ಮಹಾಬಾಹೋ! ತಪಸ್ಸಿನಿಂದ ಆ ವರದ ಹರನನ್ನು ಮೆಚ್ಚಿಸು. ನಾನು ಕೆಳಗೆ ಬೀಳುವಾಗ ಆ ದೇವನು ನನ್ನನ್ನು ಶಿರದಲ್ಲಿ ಧರಿಸುತ್ತಾನೆ ಮತ್ತು ನಿನ್ನ ಪಿತೃಗಳಿಗಾಗಿ ನೀನು ಬಯಸಿದುದನ್ನು ನೆರವೇರಿಸಿಕೊಡುತ್ತಾನೆ.”

03107024a ಏತಚ್ಛೃತ್ವಾ ವಚೋ ರಾಜನ್ಮಹಾರಾಜೋ ಭಗೀರಥಃ।
03107024c ಕೈಲಾಸಂ ಪರ್ವತಂ ಗತ್ವಾ ತೋಷಯಾಮಾಸ ಶಂಕರಂ।।

ರಾಜನ್! ಈ ಮಾತುಗಳನ್ನು ಕೇಳಿದ ಮಹಾರಾಜ ಭಗೀರಥನು ಕೈಲಾಸ ಪರ್ವತಕ್ಕೆ ಹೋಗಿ ಶಂಕರನನ್ನು ಮೆಚ್ಚಿಸಿದನು.

03107025a ತತಸ್ತೇನ ಸಮಾಗಮ್ಯ ಕಾಲಯೋಗೇನ ಕೇನ ಚಿತ್।
03107025c ಅಗೃಹ್ಣಾಚ್ಚ ವರಂ ತಸ್ಮಾದ್ಗಂಗಾಯಾ ಧಾರಣಂ ನೃಪ।।
03107025e ಸ್ವರ್ಗವಾಸಂ ಸಮುದ್ದಿಶ್ಯ ಪಿತೄಣಾಂ ಸ ನರೋತ್ತಮಃ।।

ಕೆಲವು ಕಾಲಾಂತರದಲ್ಲಿ ಆ ನರೋತ್ತಮ ನೃಪನು ಅವನನ್ನು ಕಂಡು ಗಂಗೆಯನ್ನು ಧರಿಸಿ ತನ್ನ ಪಿತೃಗಳಿಗೆ ಸ್ವರ್ಗವಾಸವು ದೊರಕಿಸುವ ವರವನ್ನು ಅವನಿಂದ ಕೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಸಪ್ತಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಏಳನೆಯ ಅಧ್ಯಾಯವು.