ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 106
ಸಾರ
ಸಂಕೃದ್ಧನಾದ ಕಪಿಲನಿಂದ ಸಗರನ 60,000 ಪುತ್ರರು ಸುಟ್ಟು ಭಸ್ಮವಾಗಲು, ವಿಷಯವನ್ನು ನಾರದನು ಸಗರನಿಗೆ ತಿಳಿಸಿದುದು (1-5). ಸಗರನು ತನ್ನ ಮಗ ಅಸಮಂಜಸನನ್ನು ತ್ಯಜಿಸಿದ್ದುದು (6-17). ಸಗರನು ಯಜ್ಞಾಶ್ವವನ್ನು ಅರಸಲು ಅಸಮಂಜಸನ ಮಗ ಅಂಶುಮಂತನನ್ನು ಕಳುಹಿಸಿದ್ದುದು (18-20). ಕಪಿಲ ಮಹರ್ಷಿಯನ್ನು ಮೆಚ್ಚಿಸಿ ಅಂಶುಮಂತನು ಯಜ್ಞಾಶ್ವವನ್ನು ಪಡೆದುದು; ಚಿಕ್ಕಪ್ಪರನ್ನು ಪಾವನಗೊಳಿಸಲು ತನ್ನ ಮೊಮ್ಮಗನು ಗಂಗೆಯನ್ನು ಭೂಮಿಗೆ ತರುತ್ತಾನೆ ಎಂದು ಕಪಿಲನಿಂದ ತಿಳಿದುಕೊಂಡಿದುದು (21-29). ಯಜ್ಞ ಸಮಾಪ್ತಿ; ಸಗರನ ಮರಣ; ಅಂಶುಮಂತನ ರಾಜ್ಯಭಾರ; ಮಗ ದಿಲೀಪ; ದಿಲೀಪನ ಮಗ ಭಗೀರಥನ ರಾಜ್ಯಭಾರ (30-40).
03106001 ಲೋಮಶ ಉವಾಚ।
03106001a ತೇ ತಂ ದೃಷ್ಟ್ವಾ ಹಯಂ ರಾಜನ್ಸಂಪ್ರಹೃಷ್ಟತನೂರುಹಾಃ।
03106001c ಅನಾದೃತ್ಯ ಮಹಾತ್ಮಾನಂ ಕಪಿಲಂ ಕಾಲಚೋದಿತಾಃ।।
03106001e ಸಂಕ್ರುದ್ಧಾಃ ಸಮಧಾವಂತ ಅಶ್ವಗ್ರಹಣಕಾಂಕ್ಷಿಣಃ।।
ಲೋಮಶನು ಹೇಳಿದನು: “ರಾಜನ್! ಆ ಕುದುರೆಯನ್ನು ಕಂಡ ಅವರ ದೇಹವು ಸಂತೋಷದಿಂದ ಪುಳಕಿತಗೊಂಡಿತು. ಕಾಲಚೋದಿತರಾಗಿ, ಅಲ್ಲಿದ್ದ ಮಹಾತ್ಮ ಕಪಿಲನನ್ನು ಅನಾದರಿಸಿ, ಸಂಕೃದ್ಧರಾಗಿ ಅಶ್ವವನ್ನು ಹಿಡಿಯಲು ಬಯಸಿ ಓಡಿ ಬಂದರು.
03106002a ತತಃ ಕ್ರುದ್ಧೋ ಮಹಾರಾಜ ಕಪಿಲೋ ಮುನಿಸತ್ತಮಃ।
03106002c ವಾಸುದೇವೇತಿ ಯಂ ಪ್ರಾಹುಃ ಕಪಿಲಂ ಮುನಿಸತ್ತಮಂ।।
ಮಹಾರಾಜ! ಆಗ ಯಾವ ಮುನಿಸತ್ತಮ ಕಪಿಲನನ್ನು ವಾಸುದೇವನೆಂದು ಹೇಳುತ್ತಾರೋ1 ಆ ಮುನಿಸತ್ತಮ ಕಪಿಲನು ಕೃದ್ಧನಾದನು.
03106003a ಸ ಚಕ್ಷುರ್ವಿವೃತಂ ಕೃತ್ವಾ ತೇಜಸ್ತೇಷು ಸಮುತ್ಸೃಜನ್।
03106003c ದದಾಹ ಸುಮಹಾತೇಜಾ ಮಂದಬುದ್ಧೀನ್ಸ ಸಾಗರಾನ್।।
ಅವನು ಕಣ್ಣನ್ನು ತೆರೆದು ತನ್ನ ತೇಜಸ್ಸನ್ನು ಅವರ ಮೇಲೆ ಎಸೆದನು. ಆ ಸುಮಹಾತೇಜಸ್ವಿಯು ಮಂದಬುದ್ಧಿ ಸಾಗರರನ್ನು ಸುಟ್ಟುಹಾಕಿದನು.
03106004a ತಾನ್ದೃಷ್ಟ್ವಾ ಭಸ್ಮಸಾದ್ಭೂತಾನ್ನಾರದಃ ಸುಮಹಾತಪಾಃ।
03106004c ಸಗರಾಂತಿಕಮಾಗಚ್ಚತ್ತಚ್ಚ ತಸ್ಮೈ ನ್ಯವೇದಯತ್।।
ಅವರು ಭಸ್ಮೀಭೂತರಾದುದನ್ನು ನೋಡಿದ ಸುಮಹಾತಪ ನಾರದನು ಸಗರನಲ್ಲಿಗೆ ಬಂದು ಅವನಿಗೆ ಅಲ್ಲಿ ನಡೆದುದನ್ನು ನಿವೇದಿಸಿದನು.
03106005a ಸ ತಚ್ಛೃತ್ವಾ ವಚೋ ಘೋರಂ ರಾಜಾ ಮುನಿಮುಖೋದ್ಗತಂ।
03106005c ಮುಹೂರ್ತಂ ವಿಮನಾ ಭೂತ್ವಾ ಸ್ಥಾಣೋರ್ವಾಕ್ಯಮಚಿಂತಯತ್।।
03106005e ಆತ್ಮಾನಮಾತ್ಮನಾಶ್ವಾಸ್ಯ ಹಯಮೇವಾನ್ವಚಿಂತಯತ್।।
ಮುನಿಯ ಬಾಯಿಂದ ಆ ಘೋರ ವಚನವನ್ನು ಕೇಳಿದ ರಾಜನು ಒಂದು ಮುಹೂರ್ತಕಾಲ ಮನಸ್ಸನ್ನೇ ಕಳೆದುಕೊಂಡು ಸ್ಥಾಣುವಿನ ವಾಕ್ಯವನ್ನು ನೆನಪಿಸಿಕೊಂಡನು. ತನಗೆ ತಾನೇ ಆಶ್ವಾಸನೆಯನ್ನಿತ್ತು, ಕುದುರೆಯ ಕುರಿತು ಚಿಂತಿಸಿದನು.
03106006a ಅಂಶುಮಂತಂ ಸಮಾಹೂಯ ಅಸಮಜ್ಞಹ್ಸುತಂ ತದಾ।
03106006c ಪೌತ್ರಂ ಭರತಶಾರ್ದೂಲ ಇದಂ ವಚನಮಬ್ರವೀತ್।।
ಭರತಶಾರ್ದೂಲ! ಆಗ ಅಸಮಂಜಸನ ಮಗ, ತನ್ನ ಮೊಮ್ಮಗ ಅಂಶುಮಂತನನ್ನು ಕರೆದು ಹೇಳಿದನು:
03106007a ಷಷ್ಟಿಸ್ತಾನಿ ಸಹಸ್ರಾಣಿ ಪುತ್ರಾಣಾಮಮಿತೌಜಸಾಂ।
03106007c ಕಾಪಿಲಂ ತೇಜ ಆಸಾದ್ಯ ಮತ್ಕೃತೇ ನಿಧನಂ ಗತಾಃ।।
“ಆ ಅರವತ್ತು ಸಾವಿರ ಅಮಿತೌಜಸ ಪುತ್ರರು ನನಗಾಗಿ ತೇಜಸ್ವಿ ಕಪಿಲನ ತೇಜಸ್ಸಿಗೆ ಸಿಲುಕಿ ನಿಧನಹೊಂದಿದ್ದಾರೆ.
03106008a ತವ ಚಾಪಿ ಪಿತಾ ತಾತ ಪರಿತ್ಯಕ್ತೋ ಮಯಾನಘ।
03106008c ಧರ್ಮಂ ಸಂರಕ್ಷಮಾಣೇನ ಪೌರಾಣಾಂ ಹಿತಮಿಚ್ಚತಾ।।
ಅನಘ! ಮಗೂ! ನಿನ್ನ ತಂದೆಯನ್ನು ನಾನು ಧರ್ಮಸಂರಕ್ಷಣೆ ಮಾಡಲೋಸುಗ ಪೌರರ ಹಿತವನ್ನು ಬಯಸಿ ಪರಿತ್ಯಜಿಸಿದ್ದೇನೆ.””
03106009 ಯುಧಿಷ್ಠಿರ ಉವಾಚ।
03106009a ಕಿಮರ್ಥಂ ರಾಜಶಾರ್ದೂಲಃ ಸಗರಃ ಪುತ್ರಮಾತ್ಮಜಂ।
03106009c ತ್ಯಕ್ತವಾನ್ದುಸ್ತ್ಯಜಂ ವೀರಂ ತನ್ಮೇ ಬ್ರೂಹಿ ತಪೋಧನ।।
ಯುಧಿಷ್ಠಿರನು ಹೇಳಿದನು: “ಆ ರಾಜಶಾರ್ದೂಲ ಸಗರನು ತ್ಯಜಿಸಲು ಕಷ್ಟವಾದ2 ತನ್ನದೇ ಮಗನನ್ನು ಏಕೆ ಪರಿತ್ಯಜಿಸಿದನು? ಅದನ್ನು ನನಗೆ ಹೇಳು ತಪೋಧನ!”
03106010 ಲೋಮಶ ಉವಾಚ।
03106010a ಅಸಮಂಜಾ ಇತಿ ಖ್ಯಾತಃ ಸಗರಸ್ಯ ಸುತೋ ಹ್ಯಭೂತ್।
03106010c ಯಂ ಶೈಬ್ಯಾ ಜನಯಾಮಾಸ ಪೌರಾಣಾಂ ಸ ಹಿ ದಾರಕಾನ್।।
03106010e ಖುರೇಷು ಕ್ರೋಶತೋ ಗೃಹ್ಯ ನದ್ಯಾಂ ಚಿಕ್ಷೇಪ ದುರ್ಬಲಾನ್।।
ಲೋಮಶನು ಹೇಳಿದನು: “ಅಸಮಂಜಸನೆಂದು ಖ್ಯಾತ ಸಗರನ ಮಗನಿದ್ದನು. ಅವನು ಶೈಬ್ಯೆಯಲ್ಲಿ ಜನಿಸಿದ್ದನು. ಅವನು ದುರ್ಬಲ ಪೌರರ ಮಕ್ಕಳನ್ನು ಕಾಲುಗಳಲ್ಲಿ ಹಿಡಿದು ನದಿಯಲ್ಲಿ ಎಸೆಯತ್ತಿದ್ದನು.
03106011a ತತಃ ಪೌರಾಃ ಸಮಾಜಗ್ಮುರ್ಭಯಶೋಕಪರಿಪ್ಲುತಾಃ।
03106011c ಸಗರಂ ಚಾಭ್ಯಯಾಚಂತ ಸರ್ವೇ ಪ್ರಾಂಜಲಯಃ ಸ್ಥಿತಾಃ।।
ಆಗ ಭಯ-ಶೋಕ ಪೀಡಿತ ಪೌರರು ಒಂದಾಗಿ ಸಗರನಲ್ಲಿಗೆ ಹೋಗಿ ಎಲ್ಲರೂ ಕೈಜೋಡಿಸಿ ನಿಂತು ಬೇಡಿಕೊಂಡರು.
03106012a ತ್ವಂ ನಸ್ತ್ರಾತಾ ಮಹಾರಾಜ ಪರಚಕ್ರಾದಿಭಿರ್ಭಯೈಃ।
03106012c ಅಸಮಂಜೋಭಯಾದ್ಘೋರಾತ್ತತೋ ನಸ್ತ್ರಾತುಮರ್ಹಸಿ।।
“ಮಹಾರಾಜ! ಶತ್ರುಗಳ ರಥಗಳ ಚಕ್ರಗಳ ಭಯದಿಂದ ನಮ್ಮನ್ನು ರಕ್ಷಿಸುವ ನೀನು ಈ ಅಸಮಂಜಸನ ಭಯದಿಂದ ನಮ್ಮನ್ನು ರಕ್ಷಿಸಬೇಕು.”
03106013a ಪೌರಾಣಾಂ ವಚನಂ ಶ್ರುತ್ವಾ ಘೋರಂ ನೃಪತಿಸತ್ತಮಃ।
03106013c ಮುಹೂರ್ತಂ ವಿಮನಾ ಭೂತ್ವಾ ಸಚಿವಾನಿದಮಬ್ರವೀತ್।।
ಪೌರರ ಘೋರ ವಚನವನ್ನು ಕೇಳಿದ ನೃಪತಿಸತ್ತಮನು ಒಂದು ಮುಹೂರ್ತ ಮನಸ್ಸನ್ನು ಕಳೆದುಕೊಂಡು ಸಚಿವರಿಗೆ ಹೇಳಿದನು:
03106014a ಅಸಮಂಜಾಃ ಪುರಾದದ್ಯ ಸುತೋ ಮೇ ವಿಪ್ರವಾಸ್ಯತಾಂ।
03106014c ಯದಿ ವೋ ಮತ್ಪ್ರಿಯಂ ಕಾರ್ಯಮೇತಚ್ಛೀಘ್ರಂ ವಿಧೀಯತಾಂ।।
“ಇಂದೇ ನನ್ನ ಮಗ ಅಸಮಂಜಸನನ್ನು ಪುರದಿಂದ ಹೊರಗೆ ಕಳುಹಿಸಿ. ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಇದನ್ನು ಶೀಘ್ರದಲ್ಲಿಯೇ ಮಾಡಬೇಕು.”
03106015a ಏವಮುಕ್ತಾ ನರೇಂದ್ರೇಣ ಸಚಿವಾಸ್ತೇ ನರಾಧಿಪ।
03106015c ಯಥೋಕ್ತಂ ತ್ವರಿತಾಶ್ಚಕ್ರುರ್ಯಥಾಜ್ಞಾಪಿತವಾನ್ನೃಪಃ।।
03106016a ಏತತ್ತೇ ಸರ್ವಮಾಖ್ಯಾತಂ ಯಥಾ ಪುತ್ರೋ ಮಹಾತ್ಮನಾ।
03106016c ಪೌರಾಣಾಂ ಹಿತಕಾಮೇನ ಸಗರೇಣ ವಿವಾಸಿತಃ।।
ನರಾಧಿಪ! ನರೇಂದ್ರನು ಹೀಗೆ ಹೇಳಲು ಅವನ ಸಚಿವರು ತಕ್ಷಣವೇ ನೃಪನು ಹೇಳಿದಂತೆ, ಅವನ ಆಜ್ಞೆಯನ್ನು ನೆರವೇರಿಸಿದರು. ಮಹಾತ್ಮ ಸಗರನು ಪೌರರ ಹಿತವನ್ನು ಬಯಸಿ ತನ್ನ ಪುತ್ರನನ್ನು ಹೊರಗಟ್ಟಿದನು ಎನ್ನುವುದೆಲ್ಲವನ್ನೂ ಹೇಳಿದ್ದೇನೆ.
03106017a ಅಂಶುಮಾಂಸ್ತು ಮಹೇಷ್ವಾಸೋ ಯದುಕ್ತಃ ಸಗರೇಣ ಹ।
03106017c ತತ್ತೇ ಸರ್ವಂ ಪ್ರವಕ್ಷ್ಯಾಮಿ ಕೀರ್ತ್ಯಮಾನಂ ನಿಬೋಧ ಮೇ।।
ಈಗ ಮಹೇಷ್ವಾಸ ಸಗರನು ಅಂಶುಮಂತನಿಗೆ ಏನು ಹೇಳಿದನೆನ್ನುವುದೆಲ್ಲವನ್ನೂ ನಿನಗೆ ಹೇಳುತ್ತೇನೆ. ನಾನು ಹೇಳುವುದನ್ನು ಕೇಳು.
03106018 ಸಗರ ಉವಾಚ।
03106018a ಪಿತುಶ್ಚ ತೇಽಹಂ ತ್ಯಾಗೇನ ಪುತ್ರಾಣಾಂ ನಿಧನೇನ ಚ।
03106018c ಅಲಾಭೇನ ತಥಾಶ್ವಸ್ಯ ಪರಿತಪ್ಯಾಮಿ ಪುತ್ರಕ।।
ಸಗರನು ಹೇಳಿದನು: “ಮಗೂ! ಪುತ್ರಕ! ನಿನ್ನ ತಂದೆಯನ್ನು ತ್ಯಜಿಸಿದುದರಿಂದ, ನನ್ನ ಮಕ್ಕಳ ಸಾವಿನಿಂದ ಮತ್ತು ಕುದುರೆಯು ದೊರೆಯದೇ ಇದ್ದುದರಿಂದ ಪರಿತಪಿಸುತ್ತಿದ್ದೇನೆ.
03106019a ತಸ್ಮಾದ್ದುಃಖಾಭಿಸಂತಪ್ತಂ ಯಜ್ಞವಿಘ್ನಾಚ್ಚ ಮೋಹಿತಂ।
03106019c ಹಯಸ್ಯಾನಯನಾತ್ಪೌತ್ರ ನರಕಾನ್ಮಾಂ ಸಮುದ್ಧರ।।
ಮೊಮ್ಮಗನೇ! ಆ ದುಃಖದಿಂದ ಪರಿತಪಿಸುತ್ತಿರುವ, ಯಜ್ಞದ ವಿಘ್ನವಾಗುವುದೆಂದು ಮೂರ್ಛೆಗೊಂಡಿರುವ ನನ್ನನ್ನು ಆ ಕುದುರೆಯನ್ನು ತರುವುದರ ಮೂಲಕ ಈ ನರಕದಿಂದ ಮೇಲೆತ್ತು.””
03106020 ಲೋಮಶ ಉವಾಚ।
03106020a ಅಂಶುಮಾನೇವಮುಕ್ತಸ್ತು ಸಗರೇಣ ಮಹಾತ್ಮನಾ।
03106020c ಜಗಾಮ ದುಃಖಾತ್ತಂ ದೇಶಂ ಯತ್ರ ವೈ ದಾರಿತಾ ಮಹೀ।।
ಲೋಮಶನು ಹೇಳಿದನು: “ಮಹಾತ್ಮ ಸಗರನ ಈ ಮಾತುಗಳಂತೆ ಅಂಶುಮಂತನು ದುಃಖದಿಂದ ಭೂಮಿಯನ್ನು ಅಗೆದ ಪ್ರದೇಶಕ್ಕೆ ಹೋದನು.
03106021a ಸ ತು ತೇನೈವ ಮಾರ್ಗೇಣ ಸಮುದ್ರಂ ಪ್ರವಿವೇಶ ಹ।
03106021c ಅಪಶ್ಯಚ್ಚ ಮಹಾತ್ಮಾನಂ ಕಪಿಲಂ ತುರಗಂ ಚ ತಂ।।
ಅದೇ ಮಾರ್ಗದಲ್ಲಿ ಸಮುದ್ರವನ್ನು ಪ್ರವೇಶಿಸಿ ಮುಂದುವರೆದು ಮಹಾತ್ಮ ಕಪಿಲನನ್ನೂ ಕುದುರೆಯನ್ನೂ ಕಂಡನು.
03106022a ಸ ದೃಷ್ಟ್ವಾ ತೇಜಸೋ ರಾಶಿಂ ಪುರಾಣಮೃಷಿಸತ್ತಮಂ।
03106022c ಪ್ರಣಮ್ಯ ಶಿರಸಾ ಭೂಮೌ ಕಾರ್ಯಮಸ್ಮೈ ನ್ಯವೇದಯತ್।।
ಆ ತೇಜಸ್ಸಿನ ರಾಶಿ ಪುರಾಣ ಋಷಿಸತ್ತಮನನಿಗೆ ಶಿರಬಾಗಿ ನಮಸ್ಕರಿಸಿ ತಾನು ಬಂದ ಕಾರ್ಯದ ಕುರಿತು ನಿವೇದಿಸಿದನು.
03106023a ತತಃ ಪ್ರೀತೋ ಮಹಾತೇಜಾಃ ಕಲಿಪೋಽಮ್ಶುಮತೋಽಭವತ್।
03106023c ಉವಾಚ ಚೈನಂ ಧರ್ಮಾತ್ಮಾ ವರದೋಽಸ್ಮೀತಿ ಭಾರತ।।
ಭಾರತ! ಆಗ ಮಹಾತೇಜಸ್ವಿ ಧರ್ಮಾತ್ಮನು ಕಪಿಲನು ಅಂಶುಮತನಿಂದ ಪ್ರೀತನಾಗಿ ಅವನಿಗೆ “ವರವನ್ನು ಕೇಳು!” ಎಂದನು.
03106024a ಸ ವವ್ರೇ ತುರಗಂ ತತ್ರ ಪ್ರಥಮಂ ಯಜ್ಞಕಾರಣಾತ್।
03106024c ದ್ವಿತೀಯಮುದಕಂ ವವ್ರೇ ಪಿತೄಣಾಂ ಪಾವನೇಪ್ಸಯಾ।।
ಅವನು ಯಜ್ಞಕಾಗಿ ಕುದುರೆಯನ್ನು ಮೊದಲನೆಯ ವರವಾಗಿ ಕೇಳಿದನು. ಪಿತೃಗಳನ್ನು ಪಾವನಗೊಳಿಸಲು ಇಚ್ಛಿಸಿ ನೀರನ್ನು ಎರಡನೆಯ ವರವಾಗಿ ಕೇಳಿದನು.
03106025a ತಮುವಾಚ ಮಹಾತೇಜಾಃ ಕಪಿಲೋ ಮುನಿಪುಂಗವಃ।
03106025c ದದಾನಿ ತವ ಭದ್ರಂ ತೇ ಯದ್ಯತ್ಪ್ರಾರ್ಥಯಸೇಽನಘ।।
ಮಹಾತೇಜಸ್ವಿ ಮುನಿಪುಂಗವ ಕಪಿಲನು ಅವನಿಗೆ ಹೇಳಿದನು: “ನಿನಗೆ ಮಂಗಳವಾಗಲಿ! ಅನಘ! ನಿನ್ನ ಮೊದಲನೆಯ ವರವನ್ನು ಕೊಡುತ್ತೇನೆ.
03106026a ತ್ವಯಿ ಕ್ಷಮಾ ಚ ಧರ್ಮಶ್ಚ ಸತ್ಯಂ ಚಾಪಿ ಪ್ರತಿಷ್ಠಿತಂ।
03106026c ತ್ವಯಾ ಕೃತಾರ್ಥಃ ಸಗರಃ ಪುತ್ರವಾಂಶ್ಚ ತ್ವಯಾ ಪಿತಾ।।
ನಿನ್ನಲ್ಲಿ ಕ್ಷಮೆ, ಧರ್ಮ ಮತ್ತು ಸತ್ಯವೂ ನೆಲೆಸಿವೆ. ನಿನ್ನಿಂದ ಸಗರನು ಕೃತಾರ್ಥನಾಗುತ್ತಾನೆ ಮತ್ತು ನಿನ್ನ ತಂದೆಯು ಪುತ್ರರನ್ನು ಪಡೆಯುತ್ತಾನೆ.
03106027a ತವ ಚೈವ ಪ್ರಭಾವೇನ ಸ್ವರ್ಗಂ ಯಾಸ್ಯಂತಿ ಸಾಗರಾಃ।
03106027c ಪೌತ್ರಶ್ಚ ತೇ ತ್ರಿಪಥಗಾಂ ತ್ರಿದಿವಾದಾನಯಿಷ್ಯತಿ।।
03106027e ಪಾವನಾರ್ಥಂ ಸಾಗರಾಣಾಂ ತೋಷಯಿತ್ವಾ ಮಹೇಶ್ವರಂ।।
ನಿನ್ನ ಪ್ರಭಾವದಿಂದಲೇ ಸಾಗರರು ಸ್ವರ್ಗವನ್ನು ಸೇರುತ್ತಾರೆ. ನಿನ್ನ ಮೊಮ್ಮಗನು, ಸಾಗರರನ್ನು ಪಾವನಗೊಳಿಸಲು ಮಹೇಶ್ವರನನ್ನು ತೃಪ್ತಿಪಡಿಸಿ ತ್ರಿದಿವದಿಂದ ತ್ರಿಪಥಗೆಯನ್ನು ಬರಿಸುತ್ತಾನೆ.
03106028a ಹಯಂ ನಯಸ್ವ ಭದ್ರಂ ತೇ ಯಜ್ಞಿಯಂ ನರಪುಂಗವ।
03106028c ಯಜ್ಞಃ ಸಮಾಪ್ಯತಾಂ ತಾತ ಸಗರಸ್ಯ ಮಹಾತ್ಮನಃ।।
ನರಪುಂಗವ! ನಿನಗೆ ಮಂಗಳವಾಗಲಿ! ಈ ಯಜ್ಞಕುದುರೆಯನ್ನು ಕೊಂಡೊಯ್ಯಿ! ಮಗೂ! ಮಹಾತ್ಮ ಸಗರನ ಯಜ್ಞವನ್ನು ಸಮಾಪ್ತಿಗೊಳಿಸು!”
03106029a ಅಂಶುಮಾನೇವಮುಕ್ತಸ್ತು ಕಪಿಲೇನ ಮಹಾತ್ಮನಾ।
03106029c ಆಜಗಾಮ ಹಯಂ ಗೃಹ್ಯ ಯಜ್ಞವಾಟಂ ಮಹಾತ್ಮನಃ।।
ಮಹಾತ್ಮ ಕಪಿಲನ ಆ ಮಾತುಗಳನ್ನು ಕೇಳಿ ಅಂಶುಮಂತನು ಕುದುರೆಯನ್ನು ಹಿಡಿದು ಮಹಾತ್ಮನ ಯಜ್ಞಶಾಲೆಗೆ ಬಂದನು.
03106030a ಸೋಽಭಿವಾದ್ಯ ತತಃ ಪಾದೌ ಸಗರಸ್ಯ ಮಹಾತ್ಮನಃ।
03106030c ಮೂರ್ಧ್ನಿ ತೇನಾಪ್ಯುಪಾಘ್ರಾತಸ್ತಸ್ಮೈ ಸರ್ವಂ ನ್ಯವೇದಯತ್।।
ಆಗ ಅವನು ಮಹಾತ್ಮ ಸಗರನಿಗೆ ನಮಸ್ಕರಿಸಿದನು. ಅವನು ಅವನ ನೆತ್ತಿಯನ್ನು ಆಘ್ರಾಣಿಸಲು, ಎಲ್ಲವನ್ನೂ ನಿವೇದಿಸಿದನು.
03106031a ಯಥಾ ದೃಷ್ಟಂ ಶ್ರುತಂ ಚಾಪಿ ಸಾಗರಾಣಾಂ ಕ್ಷಯಂ ತಥಾ।
03106031c ತಂ ಚಾಸ್ಮೈ ಹಯಮಾಚಷ್ಟ ಯಜ್ಞವಾಟಮುಪಾಗತಂ।।
ಸಾಗರರ ನಾಶದ ಕುರಿತು ತಾನು ಕಂಡಿದ್ದುದು ಕೇಳಿದ್ದುದನ್ನು ಮತ್ತು ಯಜ್ಞಶಾಲೆಗೆ ಕುದುರೆಯು ಆಗಮಿಸಿದುದನ್ನು ಹೇಳಿದನು.
03106032a ತಚ್ಛೃತ್ವಾ ಸಗರೋ ರಾಜಾ ಪುತ್ರಜಂ ದುಃಖಮತ್ಯಜತ್।
03106032c ಅಂಶುಮಂತಂ ಚ ಸಂಪೂಜ್ಯ ಸಮಾಪಯತ ತಂ ಕ್ರತುಂ।।
ಅದನ್ನು ಕೇಳಿದ ರಾಜ ಸಗರನು ತನ್ನ ಪುತ್ರರಿಂದಾದ ದುಃಖವನ್ನು ತೊರೆದು, ಅಂಶುಮಂತನನ್ನು ಸತ್ಕರಿಸಿ, ಯಜ್ಞವನ್ನು ಪೂರೈಸಿದನು.
03106033a ಸಮಾಪ್ತಯಜ್ಞಃ ಸಗರೋ ದೇವೈಃ ಸರ್ವೈಃ ಸಭಾಜಿತಃ।
03106033c ಪುತ್ರತ್ವೇ ಕಲ್ಪಯಾಮಾಸ ಸಮುದ್ರಂ ವರುಣಾಲಯಂ।।
ಯಜ್ಞವನ್ನು ಸಮಾಪ್ತಿಗೊಳಿಸಿ ಸಗರನು ಎಲ್ಲ ದೇವತೆಗಳೊಂದಿಗೆ ಸಹಭೋಜನ ಮಾಡಿದನು. ವರುಣಾಲಯ ಸಮುದ್ರವನ್ನು ತನ್ನ ಪುತ್ರನಾಗಿ ಮಾಡಿಕೊಂಡನು3.
03106034a ಪ್ರಶಾಸ್ಯ ಸುಚಿರಂ ಕಾಲಂ ರಾಜ್ಯಂ ರಾಜೀವಲೋಚನಃ।
03106034c ಪೌತ್ರೇ ಭಾರಂ ಸಮಾವೇಶ್ಯ ಜಗಾಮ ತ್ರಿದಿವಂ ತದಾ।।
ಬಹುಕಾಲದ ವರೆಗೆ ರಾಜ್ಯವನ್ನಾಳಿ ಆ ರಾಜೀವಲೋಚನನು ಮೊಮ್ಮಗನಿಗೆ ಪಟ್ಟವನ್ನು ಕಟ್ಟಿ ಸ್ವರ್ಗವನ್ನು ಸೇರಿದನು.
03106035a ಅಂಶುಮಾನಪಿ ಧರ್ಮಾತ್ಮಾ ಮಹೀಂ ಸಾಗರಮೇಖಲಾಂ।
03106035c ಪ್ರಶಶಾಸ ಮಹಾರಾಜ ಯಥೈವಾಸ್ಯ ಪಿತಾಮಹಃ।।
ಮಹಾರಾಜ! ಧರ್ಮಾತ್ಮ ಅಂಶುಮತನಾದರೋ ಸಾಗರ ಮೇಖಲ ಭೂಮಿಯನ್ನು ತನ್ನ ಪಿತಾಮಹನಂತೆ ರಾಜ್ಯವನಾಳಿದನು.
03106036a ತಸ್ಯ ಪುತ್ರಃ ಸಮಭವದ್ದಿಲೀಪೋ ನಾಮ ಧರ್ಮವಿತ್।
03106036c ತಸ್ಮೈ ರಾಜ್ಯಂ ಸಮಾಧಾಯ ಅಂಶುಮಾನಪಿ ಸಂಸ್ಥಿತಃ।।
ಅವನಿಗೆ ದಿಲೀಪ ಎಂಬ ಹೆಸರಿನ ಧರ್ಮವಂತ ಮಗನು ಜನಿಸಿದನು. ಅವನಿಗೆ ರಾಜ್ಯವನ್ನು ಕೊಟ್ಟು ಅಂಶುಮಂತನು ನಿವೃತ್ತನಾದನು.
03106037a ದಿಲೀಪಸ್ತು ತತಃ ಶ್ರುತ್ವಾ ಪಿತೄಣಾಂ ನಿಧನಂ ಮಹತ್।
03106037c ಪರ್ಯತಪ್ಯತ ದುಃಖೇನ ತೇಷಾಂ ಗತಿಮಚಿಂತಯತ್।।
ಆಗ ಪಿತೃಗಳ ಮಹಾನಾಶದ ಕುರಿತು ಕೇಳಿದ ದಿಲೀಪನು ಅವರ ಗತಿಯನ್ನು ಚಿಂತಿಸಿ ದುಃಖದಿಂದ ಪರಿತಪಿಸಿದನು.
03106038a ಗಂಗಾವತರಣೇ ಯತ್ನಂ ಸುಮಹಚ್ಚಾಕರೋನ್ನೃಪಃ।
03106038c ನ ಚಾವತಾರಯಾಮಾಸ ಚೇಷ್ಟಮಾನೋ ಯಥಾಬಲಂ।।
ಆ ನೃಪನು ಗಂಗಾವತರಣಕ್ಕೆ ಬಹಳಷ್ಟು ಪ್ರಯತ್ನಮಾಡಿದನು. ಶಕ್ತಿಯಿದ್ದಷ್ಟು ಪ್ರಯತ್ನಿಸಿದರೂ ಅವನಿಗೆ ಅವಳನ್ನು ಕೆಳತರಲು ಸಾಧ್ಯವಾಗಲಿಲ್ಲ.
03106039a ತಸ್ಯ ಪುತ್ರಃ ಸಮಭವಚ್ಛ್ರೀಮಾನ್ಧರ್ಮಪರಾಯಣಃ।
03106039c ಭಗೀರಥ ಇತಿ ಖ್ಯಾತಃ ಸತ್ಯವಾಗನಸೂಯಕಃ।।
ಅವನ ಮಗ ಶ್ರೀಮಾನ್ ಧರ್ಮಪರಾಯಣ, ಸತ್ಯವಾದಿ, ಅನಸೂಯಕನು ಭಗೀರಥನೆಂದು ಖ್ಯಾತನಾದನು.
03106040a ಅಭಿಷಿಚ್ಯ ತು ತಂ ರಾಜ್ಯೇ ದಿಲೀಪೋ ವನಮಾಶ್ರಿತಃ।
03106040c ತಪಃಸಿದ್ಧಿಸಮಾಯೋಗಾತ್ಸ ರಾಜಾ ಭರತರ್ಷಭ।।
03106040e ವನಾಜ್ಜಗಾಮ ತ್ರಿದಿವಂ ಕಾಲಯೋಗೇನ ಭಾರತ।।
ಅವನಿಗೆ ರಾಜ್ಯಾಭಿಷೇಕವನ್ನು ಮಾಡಿ ದಿಲೀಪನು ವನವನ್ನು ಸೇರಿದನು. ಭರತರ್ಷಭ! ಭಾರತ! ತಪಸ್ಸು ಮತ್ತು ಸಿದ್ಧಿಗಳ ಸಮಾಯೋಗದಿಂದ ಆ ರಾಜನು ಸ್ವರ್ಗದ ಕಾಲಯೋಗದಿಂದ ವನಕ್ಕೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಷಡಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಆರನೆಯ ಅಧ್ಯಾಯವು.
-
ಶ್ರೀಮದ್ಭಾವಗವತದಲ್ಲಿ ಕಪಿಲನನ್ನೂ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ↩︎
-
ತನ್ನದೇ ಮಗನನ್ನು ತ್ಯಜಿಸುವುದು ಕಷ್ಟವಲ್ಲವೇ? ಸೂರ್ಯವಂಶದಲ್ಲಿ ಹುಟ್ಟಿದ ಸಗರನು ತನ್ನ ಮಗನು ಅಧರ್ಮಿಯೆಂದು ತಿಳಿದು ರಾಜ್ಯದ ಹಿತಕಾಗಿ ಅವನನ್ನು ರಾಜ್ಯದಿಂದ ಹೊರಹಾಕಿದನು. ಆದರೆ ದುರ್ಯೋಧನನಂತಹ ಅಧರ್ಮಿ ಮಗನನ್ನು ಚಂದ್ರವಂಶದ ರಾಜರಲ್ಲೊಬ್ಬನಾದ ಕುರುಡ ಧೃತರಾಷ್ಟ್ರನು ಮಾಡಲಿಲ್ಲವಲ್ಲ! ↩︎
-
ಸಗರನು ಸಮುದ್ರನನ್ನು ಮಗನಾಗಿ ದತ್ತು ತೆಗೆದುಕೊಂಡಿದುದರಿಂದಲೇ ಸಮದ್ರಕ್ಕೆ ಸಾಗರವೆಂದೂ ಕರೆಯುವುದಕ್ಕೆ ಕಾರಣ. ↩︎