ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 104
ಸಾರ
ಬಹುಕಾಲದ ನಂತರ ರಾಜಾ ಭಗೀರಥನು ತನ್ನ ಬಂಧುಗಳ ಕಾರಣದಿಂದ ಸಮುದ್ರಕ್ಕೆ ಅದರ ಪ್ರಾಕೃತಿಕ ಸ್ವರೂಪವನ್ನು ಕೊಡುತ್ತಾನೆಂದು ಬ್ರಹ್ಮನು ಹೇಳುವುದು (1-2). ಯುಧಿಷ್ಠಿರನು ಕೇಳಲು ಲೋಮಶನು ಭಗೀರಥನ ಚರಿತ್ರೆಯನ್ನು ಪ್ರಾರಂಭಿಸಿದುದು (3-5). ಇಕ್ಷ್ವಾಕುವಂಶದ ರಾಜಾ ಸಗರನು ಹರನ ಪ್ರಸಾದದಿಂದ ತನ್ನ ಒಬ್ಬಳು ಪತ್ನಿಯಲ್ಲಿ ೬೦,೦೦೦ ಪುತ್ರರರನ್ನೂ ಇನ್ನೊಬ್ಬಳಲ್ಲಿ ಓರ್ವ ಮಗನನ್ನೂ ಪಡೆದುದು (6-22).
03104001 ಲೋಮಶ ಉವಾಚ।
03104001a ತಾನುವಾಚ ಸಮೇತಾಂಸ್ತು ಬ್ರಹ್ಮಾ ಲೋಕಪಿತಾಮಹಃ।
03104001c ಗಚ್ಚಧ್ವಂ ವಿಬುಧಾಃ ಸರ್ವೇ ಯಥಾಕಾಮಂ ಯಥೇಪ್ಸಿತಂ।।
ಲೋಮಶನು ಹೇಳಿದನು: “ಲೋಕಪಿತಾಮಹ ಬ್ರಹ್ಮನು ಅಲ್ಲಿ ಸೇರಿದ್ದ ದೇವತೆಗಳಿಗೆ ಹೇಳಿದನು: “ವಿಬುಧರೇ! ನೀವೆಲ್ಲರೂ ನಿಮಗಿಷ್ಟವಾದಲ್ಲಿಗೆ ಹೋಗಿ.
03104002a ಮಹತಾ ಕಾಲಯೋಗೇನ ಪ್ರಕೃತಿಂ ಯಾಸ್ಯತೇಽರ್ಣವಃ।
03104002c ಜ್ಞಾತೀನ್ವೈ ಕಾರಣಂ ಕೃತ್ವಾ ಮಹಾರಾಜ್ಞೋ ಭಗೀರಥಾತ್।।
ಮಹಾ ಕಾಲದ ನಂತರ ಮಹಾರಾಜ ಭಗೀರಥನು ತನ್ನ ಬಾಂಧವರ ಕಾರಣದಿಂದ ಸಮುದ್ರವು ತನ್ನ ಪ್ರಾಕೃತಿಕ ಸ್ವರೂಪವನ್ನು ಪಡೆಯುವಂತೆ ಮಾಡುತ್ತಾನೆ.”
03104003 ಯುಧಿಷ್ಠಿರ ಉವಾಚ।
03104003a ಕಥಂ ವೈ ಜ್ಞಾತಯೋ ಬ್ರಹ್ಮನ್ಕಾರಣಂ ಚಾತ್ರ ಕಿಂ ಮುನೇ।
03104003c ಕಥಂ ಸಮುದ್ರಃ ಪೂರ್ಣಶ್ಚ ಭಗೀರಥಪರಿಶ್ರಮಾತ್।।
ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಮುನೇ! ಬಾಂಧವರು ಅದಕ್ಕೆ ಹೇಗೆ ಕಾರಣರಾದರು? ಭಗೀರಥನ ಪರಿಶ್ರಮದಿಂದ ಸಮುದ್ರವು ಹೇಗೆ ತುಂಬಿಕೊಂಡಿತು?
03104004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ತಪೋಧನ।
03104004c ಕಥ್ಯಮಾನಂ ತ್ವಯಾ ವಿಪ್ರ ರಾಜ್ಞಾಂ ಚರಿತಮುತ್ತಮಂ।।
ತಪೋಧನ! ಇದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ವಿಪ್ರ! ಆ ರಾಜನ ಉತ್ತಮ ಚರಿತ್ರೆಯನ್ನು ನೀನು ಹೇಳು.””
03104005 ವೈಶಂಪಾಯನ ಉವಾಚ।
03104005a ಏವಮುಕ್ತಸ್ತು ವಿಪ್ರೇಂದ್ರೋ ಧರ್ಮರಾಜ್ಞಾ ಮಹಾತ್ಮನಾ।
03104005c ಕಥಯಾಮಾಸ ಮಾಹಾತ್ಮ್ಯಂ ಸಗರಸ್ಯ ಮಹಾತ್ಮನಃ।।
ವೈಶಂಪಾಯನನು ಹೇಳಿದನು: “ಧರ್ಮರಾಜ ಮಹಾತ್ಮನು ಹೀಗೆ ಹೇಳಲು ವಿಪ್ರೇಂದ್ರನು ಮಹಾತ್ಮ ಸಗರನ ಮಹಾತ್ಮೆಯನ್ನು ಹೇಳಿದನು.
03104006 ಲೋಮಶ ಉವಾಚ।
03104006a ಇಕ್ಷ್ವಾಕೂಣಾಂ ಕುಲೇ ಜಾತಃ ಸಗರೋ ನಾಮ ಪಾರ್ಥಿವಃ।
03104006c ರೂಪಸತ್ತ್ವಬಲೋಪೇತಃ ಸ ಚಾಪುತ್ರಃ ಪ್ರತಾಪವಾನ್।।
ಲೋಮಶನು ಹೇಳಿದನು: “ಇಕ್ಷ್ವಾಕುಗಳ ಕುಲದಲ್ಲಿ ಸಗರ ಎಂಬ ಹೆಸರಿನ ರೂಪ, ಸಂಪತ್ತು ಮತ್ತು ಬಲಾನ್ವಿತ ರಾಜನು ಜನಿಸಿದನು. ಆ ಪ್ರತಾಪವಂತನಿಗೆ ಪುತ್ರರಿರಲಿಲ್ಲ.
03104007a ಸ ಹೈಹಯಾನ್ಸಮುತ್ಸಾದ್ಯ ತಾಲಜಂಘಾಂಶ್ಚ ಭಾರತ।
03104007c ವಶೇ ಚ ಕೃತ್ವಾ ರಾಜ್ಞೋಽನ್ಯಾನ್ಸ್ವರಾಜ್ಯಮನ್ವಶಾಸತ।।
ಭಾರತ! ಅವನು ಹೈಹಯರನ್ನು ಹೊರಹೊಟ್ಟು, ತಾಲಜಂಘರನ್ನು ಮತ್ತು ಇತರ ರಾಜರನ್ನು ವಶೀಕರಿಸಿ ತನ್ನ ರಾಜ್ಯವನ್ನು ಆಳಿದನು.
03104008a ತಸ್ಯ ಭಾರ್ಯೇ ತ್ವಭವತಾಂ ರೂಪಯೌವನದರ್ಪಿತೇ।
03104008c ವೈದರ್ಭೀ ಭರತಶ್ರೇಷ್ಠ ಶೈಬ್ಯಾ ಚ ಭರತರ್ಷಭ।।
ಭರತಶ್ರೇಷ್ಠ! ಭರತರ್ಷಭ! ಅವನಿಗೆ ರೂಪಯೌವನದರ್ಪಿತರಾದ ಇಬ್ಬರು ಪತ್ನಿಯರಿದ್ದರು - ವಿದರ್ಭರಾಜಕುಮಾರಿ ಮತ್ತು ಶಿಬಿಯ ಮಗಳು.
03104009a ಸ ಪುತ್ರಕಾಮೋ ನೃಪತಿಸ್ತತಾಪ ಸುಮಹತ್ತಪಃ।
03104009c ಪತ್ನೀಭ್ಯಾಂ ಸಹ ರಾಜೇಂದ್ರ ಕೈಲಾಸಂ ಗಿರಿಮಾಶ್ರಿತಃ।।
ರಾಜೇಂದ್ರ! ಪುತ್ರರನ್ನು ಬಯಸಿದ ಆ ನೃಪತಿಯು ತನ್ನ ಇಬ್ಬರೂ ಪತ್ನಿಯರೊಂದಿಗೆ ಕೈಲಾಸ ಗಿರಿಯನ್ನು ಸೇರಿ ಮಹಾ ತಪಸ್ಸನ್ನು ಆಚರಿಸಿದನು.
03104010a ಸ ತಪ್ಯಮಾನಃ ಸುಮಹತ್ತಪೋ ಯೋಗಸಮನ್ವಿತಃ।
03104010c ಆಸಸಾದ ಮಹಾತ್ಮಾನಂ ತ್ರ್ಯಕ್ಷಂ ತ್ರಿಪುರಮರ್ದನಂ।।
03104011a ಶಂಕರಂ ಭವಮೀಶಾನಂ ಶೂಲಪಾನಿಂ ಪಿನಾಕಿನಂ।
03104011c ತ್ರ್ಯಂಬಕಂ ಶಿವಮುಗ್ರೇಶಂ ಬಹುರೂಪಮುಮಾಪತಿಂ।।
ಯೋಗಸಮನ್ವಿತನಾಗಿ ಮಹಾತಪಸ್ಸನ್ನು ಅವನು ತಪಿಸುತ್ತಿರಲು ಅಲ್ಲಿಗೆ ಮಹಾತ್ಮ, ಮುಕ್ಕಣ್ಣ, ತ್ರಿಪುರಮರ್ದನ, ಶಂಕರ, ಭವ, ಈಶ, ಶೂಲಪಾಣಿ, ಪಿನಾಕಿ, ತ್ರ್ಯಂಬಕ, ಉಗ್ರೇಶ, ಬಹುರೂಪಿ, ಉಮಾಪತಿ ಶಿವನು ಬಂದನು.
03104012a ಸ ತಂ ದೃಷ್ಟ್ವೈವ ವರದಂ ಪತ್ನೀಭ್ಯಾಂ ಸಹಿತೋ ನೃಪಃ।
03104012c ಪ್ರಣಿಪತ್ಯ ಮಹಾಬಾಹುಃ ಪುತ್ರಾರ್ಥಂ ಸಮಯಾಚತ।।
ಆ ವರದನನ್ನು ಕಂಡ ತಕ್ಷಣ ಪತ್ನಿಯರ ಸಹಿತ ಆ ಮಹಾಬಾಹು ನೃಪನು ಸಾಷ್ಟಾಂಗ ನಮಸ್ಕರಿಸಿ ಪುತ್ರನನ್ನು ಬೇಡಿದನು.
03104013a ತಂ ಪ್ರೀತಿಮಾನ್ ಹರಃ ಪ್ರಾಹ ಸಭಾರ್ಯಂ ನೃಪಸತ್ತಮಂ।
03104013c ಯಸ್ಮಿನ್ವೃತೋ ಮುಹೂರ್ತೇಽಹಂ ತ್ವಯೇಹ ನೃಪತೇ ವರಂ।।
03104014a ಷಷ್ಟಿಃ ಪುತ್ರಸಹಸ್ರಾಣಿ ಶೂರಾಃ ಸಮರದರ್ಪಿತಾಃ।
03104014c ಏಕಸ್ಯಾಂ ಸಂಭವಿಷ್ಯಂತಿ ಪತ್ನ್ಯಾಂ ತವ ನರೋತ್ತಮ।।
ಅವನಿಂದ ಸಂತೋಷಗೊಂಡ ಹರನು ಭಾರ್ಯೆಯರೊಂದಿಗಿದ್ದ ನೃಪಸತ್ತಮನಿಗೆ ಹೇಳಿದನು: “ನೃಪತೇ! ನರೋತ್ತಮ! ನೀನು ಯಾವ ಮುಹೂರ್ತದಲ್ಲಿ ನನ್ನಲ್ಲಿ ವರವನ್ನು ಕೇಳಿಕೊಂಡಿದ್ದೀಯೋ ಅದರಂತೆ ನಿನಗೆ ಅರವತ್ತು ಸಾವಿರ ಶೂರರಾದ, ಸಮರದರ್ಪಿತ ಪುತ್ರರು ನಿನ್ನ ಪತ್ನಿಯರಲ್ಲಿ ಒಬ್ಬಳಲ್ಲಿ ಹುಟ್ಟುತ್ತಾರೆ.
03104015a ತೇ ಚೈವ ಸರ್ವೇ ಸಹಿತಾಃ ಕ್ಷಯಂ ಯಾಸ್ಯಂತಿ ಪಾರ್ಥಿವ।
03104015c ಏಕೋ ವಂಶಧರಃ ಶೂರ ಏಕಸ್ಯಾಂ ಸಂಭವಿಷ್ಯತಿ।।
03104015e ಏವಮುಕ್ತ್ವಾ ತು ತಂ ರುದ್ರಸ್ತತ್ರೈವಾಂತರಧೀಯತ।।
ಪಾರ್ಥಿವ! ಆದರೆ ಅವರೆಲ್ಲರೂ ಒಟ್ಟಿಗೇ ಕ್ಷಯವನ್ನು ಹೊಂದುವರು. ಇನ್ನೊಬ್ಬ ಪತ್ನಿಯಲ್ಲಿ ವಂಶವನ್ನು ನಡೆಸಿಕೊಂಡು ಹೋಗುವ ಒಬ್ಬನೇ ಶೂರನು ಹುಟ್ಟುತ್ತಾನೆ.” ಹೀಗೆ ಹೇಳಿದ ರುದ್ರ ಶಂಕರನು ಅಲ್ಲಿಯೇ ಅಂತರ್ಧಾನನಾದನು.
03104016a ಸ ಚಾಪಿ ಸಗರೋ ರಾಜಾ ಜಗಾಮ ಸ್ವಂ ನಿವೇಶನಂ।
03104016c ಪತ್ನೀಭ್ಯಾಂ ಸಹಿತಸ್ತಾತ ಸೋಽತಿಹೃಷ್ಟಮನಾಸ್ತದಾ।।
ಅನಂತರ ರಾಜ ಸಗರನು ತನ್ನ ಈರ್ವರು ಪತ್ನಿಯರೊಂದಿಗೆ ಅತೀವ ಸಂತೋಷಗೊಂಡು ತನ್ನ ಅರಮನೆಗೆ ಮರಳಿದನು.
03104017a ತಸ್ಯಾಥ ಮನುಜಶ್ರೇಷ್ಠ ತೇ ಭಾರ್ಯೇ ಕಮಲೇಕ್ಷಣೇ।
03104017c ವೈದರ್ಭೀ ಚೈವ ಶೈಬ್ಯಾ ಚ ಗರ್ಭಿಣ್ಯೌ ಸಂಬಭೂವತುಃ।।
03104018a ತತಃ ಕಾಲೇನ ವೈದರ್ಭೀ ಗರ್ಭಾಲಾಬುಂ ವ್ಯಜಾಯತ।
03104018c ಶೈಬ್ಯಾ ಚ ಸುಷುವೇ ಪುತ್ರಂ ಕುಮಾರಂ ದೇವರೂಪಿಣಂ।।
ಮನುಜಶ್ರೇಷ್ಠ! ಆಗ ಅವನ ಈರ್ವರು ಕಮಲೇಕ್ಷಣೆ ಭಾರ್ಯೆಯರು - ವೈದರ್ಭಿ ಮತ್ತು ಶೈಭ್ಯೆ - ಗರ್ಭಿಣಿಯರಾದರು. ಕಾಲಾಂತರದಲ್ಲಿ ವೈದರ್ಭಿಯ ಗರ್ಭದಿಂದ ಚೀನೀಕಾಯಿಯಂತಹ ಪಿಂಡವು ಹುಟ್ಟಿತು ಮತ್ತು ಶೈಭ್ಯೆಯಲ್ಲಿ ದೇವರೂಪಿ, ಕುಮಾರ ಪುತ್ರನು ಹುಟ್ಟಿದನು.
03104019a ತದಾಲಾಬುಂ ಸಮುತ್ಸ್ರಷ್ಟುಂ ಮನಶ್ಚಕ್ರೇ ಸ ಪಾರ್ಥಿವಃ।
03104019c ಅಥಾಂತರಿಕ್ಷಾಚ್ಛುಶ್ರಾವ ವಾಚಂ ಗಂಭೀರನಿಸ್ವನಾಂ।।
ರಾಜನು ಆ ಚೀನೀಕಾಯಿಯನ್ನು (ಗರ್ಭಪಿಂಡವನ್ನು) ಬಿಸಾಡಲು ಮನಸ್ಸುಮಾಡಿದಾಗ ಅಂತರಿಕ್ಷದಿಂದ ಗಂಭೀರ ಧ್ವನಿಯಲ್ಲಿ ವಾಣಿಯೊಂದು ಕೇಳಿಸಿತು.
03104020a ರಾಜನ್ಮಾ ಸಾಹಸಂ ಕಾರ್ಷೀಃ ಪುತ್ರಾನ್ನ ತ್ಯಕ್ತುಮರ್ಹಸಿ।
03104020c ಅಲಾಬುಮಧ್ಯಾನ್ನಿಷ್ಕೃಷ್ಯ ಬೀಜಂ ಯತ್ನೇನ ಗೋಪ್ಯತಾಂ।।
03104021a ಸೋಪಸ್ವೇದೇಷು ಪಾತ್ರೇಷು ಘೃತಪೂರ್ಣೇಷು ಭಾಗಶಃ।
“ರಾಜನ್! ದುಡಕಬೇಡ! ನಿನ್ನ ಪುತ್ರರನ್ನು ತ್ಯಜಿಸಬೇಡ! ಈ ಚೀನೀಕಾಯಿಯಿಂದ ಬೀಜಗಳನ್ನು ತೆಗೆದು, ಒಂದೊಂದನ್ನೂ ಪ್ರತ್ಯೇಕ ತುಪ್ಪ ತುಂಬಿದ ಕೊಡಗಳಲ್ಲಿ ಇಟ್ಟು ಜಾಗರೂಕತೆಯಿಂದ ಕಾದಿರಿಸು.
03104021c ತತಃ ಪುತ್ರಸಹಸ್ರಾಣಿ ಷಷ್ಟಿಂ ಪ್ರಾಪ್ಸ್ಯಸಿ ಪಾರ್ಥಿವ।।
03104022a ಮಹಾದೇವೇನ ದಿಷ್ಟಂ ತೇ ಪುತ್ರಜನ್ಮ ನರಾಧಿಪ।
03104022c ಅನೇನ ಕ್ರಮಯೋಗೇನ ಮಾ ತೇ ಬುದ್ಧಿರತೋಽನ್ಯಥಾ।।
ಅನಂತರ ಪಾರ್ಥಿವ! ಅರವತ್ತು ಸಾವಿರ ಪುತ್ರರನ್ನು ಪಡೆಯುತ್ತೀಯೆ. ನರಾಧಿಪ! ಹೀಗೆಯೇ ನಿನ್ನ ಪುತ್ರರು ಜನಿಸಬೇಕೆಂದು ಮಹಾದೇವನು ನಿರ್ಧರಿಸಿದ್ದಾನೆ. ಬೇರೆ ಯಾವ ಕೆಲಸ-ಯೋಚನೆಗಳನ್ನೂ ನೀನು ಮಾಡಬಾರದು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಚತುರಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿ ಕಥನದಲ್ಲಿ ನೂರಾನಾಲ್ಕನೆಯ ಅಧ್ಯಾಯವು.