ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 103
ಸಾರ
ಅಗಸ್ತ್ಯನು ಕುಡಿದು ಸಮುದ್ರವನ್ನು ಬರಿದು ಮಾಡಲು ದೇವತೆಗಳು ಕಾಲೇಯರನ್ನು ಸಂಹರಿಸಿದ್ದುದು (1-12). ಕುಡಿದ ನೀರನ್ನು ಜೀರ್ಣಿಸಿಕೊಂಡಾಗಿರುವುದರಿಂದ ಸಾಗರವನ್ನು ಪುನಃ ತುಂಬಿಸಲು ಸಾಧ್ಯವಿಲ್ಲವೆಂದು ಅಗಸ್ತ್ಯನು ಹೇಳಲು ದೇವತೆಗಳು ಪುನಃ ಪಿತಾಮಹನಲ್ಲಿಗೆ ಹೋದುದು (13-19).
03103001 ಲೋಮಶ ಉವಾಚ।
03103001a ಸಮುದ್ರಂ ಸ ಸಮಾಸಾದ್ಯ ವಾರುಣಿರ್ಭಗವಾನೃಷಿಃ।
03103001c ಉವಾಚ ಸಹಿತಾನ್ದೇವಾನೃಷೀಂಶ್ಚೈವ ಸಮಾಗತಾನ್।।
ಲೋಮಶನು ಹೇಳಿದನು: “ಭಗವಾನ್ ಋಷಿ ವಾರುಣಿಯು ಸಮುದ್ರವನ್ನು ಸೇರಿ ಅಲ್ಲಿ ಕೂಡಿದ್ದ ದೇವತೆಗಳಿಗೆ ಮತ್ತು ಋಷಿಗಳಿಗೆ ಹೇಳಿದನು:
03103002a ಏಷ ಲೋಕಹಿತಾರ್ಥಂ ವೈ ಪಿಬಾಮಿ ವರುಣಾಲಯಂ।
03103002c ಭವದ್ಭಿರ್ಯದನುಷ್ಠೇಯಂ ತಚ್ಶೀಘ್ರಂ ಸಂವಿಧೀಯತಾಂ।।
“ಈಗ ಲೋಕಹಿತಕ್ಕಾಗಿ ನಾನು ಈ ವರುಣಾಲಯವನ್ನು ಕುಡಿಯುತ್ತೇನೆ. ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಶೀಘ್ರದಲ್ಲಿಯೇ ಮಾಡಿ.”
03103003a ಏತಾವದುಕ್ತ್ವಾ ವಚನಂ ಮೈತ್ರಾವರುಣಿರಚ್ಯುತಃ।
03103003c ಸಮುದ್ರಮಪಿಬತ್ಕ್ರುದ್ಧಃ ಸರ್ವಲೋಕಸ್ಯ ಪಶ್ಯತಃ।।
ಈ ಮಾತನ್ನು ಹೇಳಿ ಅಚ್ಯುತ ಮೈತ್ರಾವರುಣಿಯು ಕೃದ್ಧನಾಗಿ ಸರ್ವ ಲೋಕವೂ ನೋಡುತ್ತಿದ್ದಂತೆ ಸಮುದ್ರವನ್ನು ಸಂಪೂರ್ಣವಾಗಿ ಕುಡಿದು ಬರಿದುಮಾಡಿದನು.
03103004a ಪೀಯಮಾನಂ ಸಮುದ್ರಂ ತು ದೃಷ್ಟ್ವಾ ದೇವಾಃ ಸವಾಸವಾಃ।
03103004c ವಿಸ್ಮಯಂ ಪರಮಂ ಜಗ್ಮುಃ ಸ್ತುತಿಭಿಶ್ಚಾಪ್ಯಪೂಜಯನ್।।
ಅವನು ಸಮುದ್ರವನ್ನು ಕುಡಿದಿದ್ದುದನ್ನು ನೋಡಿ ಇಂದ್ರನೂ ಸೇರಿ ದೇವತೆಗಳು ಪರಮ ವಿಸ್ಮಿತರಾದರು ಮತ್ತು ಅವನನ್ನು ಸ್ತುತಿಸಿ ಪೂಜಿಸಿದರು.
03103005a ತ್ವಂ ನಸ್ತ್ರಾತಾ ವಿಧಾತಾ ಚ ಲೋಕಾನಾಂ ಲೋಕಭಾವನಃ।
03103005c ತ್ವತ್ಪ್ರಸಾದಾತ್ಸಮುಚ್ಚೇದಂ ನ ಗಚ್ಚೇತ್ಸಾಮರಂ ಜಗತ್।।
“ಲೋಕಭಾವನ! ನೀನೇ ನಮ್ಮ ಮತ್ತು ಲೋಕಗಳ ತ್ರಾತ, ವಿಧಾತ. ನಿನ್ನ ಪ್ರಸಾದದಿಂದ ಅಮರರು ಮತ್ತು ಜಗತ್ತು ಈ ಕಷ್ಟದಿಂದ ಪಾರುಗೊಂಡಿವೆ.”
03103006a ಸಂಪೂಜ್ಯಮಾನಸ್ತ್ರಿದಶೈರ್ಮಹಾತ್ಮಾ। ಗಂಧರ್ವತೂರ್ಯೇಷು ನದತ್ಸು ಸರ್ವಶಃ।
03103006c ದಿವ್ಯೈಶ್ಚ ಪುಷ್ಪೈರವಕೀರ್ಯಮಾಣೋ। ಮಹಾರ್ಣವಂ ನಿಃಸಲಿಲಂ ಚಕಾರ।।
ಆ ಮಹಾತ್ಮನು ಮಹಾಸಾಗರವನ್ನು ನೀರಿಲ್ಲದೇ ಮಾಡಿದ ನಂತರ ದೇವತೆಗಳಿಂದ ಪೂಜಿಸಲ್ಪಡಲು ಗಂಧರ್ವರು ಎಲ್ಲೆಡೆಯೂ ನಾದವನ್ನು ತುಂಬಿಸಿದರು. ಅವನ ಮೇಲೆ ದಿವ್ಯ ಪುಷ್ಪಗಳನ್ನು ಸುರಿಸಲಾಯಿತು.
03103007a ದೃಷ್ಟ್ವಾ ಕೃತಂ ನಿಃಸಲಿಲಂ ಮಹಾರ್ಣವಂ। ಸುರಾಃ ಸಮಸ್ತಾಃ ಪರಮಪ್ರಹೃಷ್ಟಾಃ।
03103007c ಪ್ರಗೃಹ್ಯಯ ದಿವ್ಯಾನಿ ವರಾಯುಧಾನಿ। ತಾನ್ದಾನವಾಂ ಜಘ್ನುರದೀನಸತ್ತ್ವಾಃ।।
ಆ ಮಹಾಸಾಗರವು ನೀರಿಲ್ಲದೇ ಬತ್ತಿಹೋದದನ್ನು ಕಂಡು ಸುರರೆಲ್ಲರೂ ಪರಮ ಹೃಷ್ಟರಾದರು. ದಿವ್ಯ ಶ್ರೇಷ್ಠ ಆಯುಧಗಳನ್ನು ಹಿಡಿದು ಸಂತೋಷದಿಂದ ಆ ದಾನವರನ್ನು ಸಂಹರಿಸಿದರು.
03103008a ತೇ ವಧ್ಯಮಾನಾಸ್ತ್ರಿದಶೈರ್ಮಹಾತ್ಮಭಿರ್। ಮಹಾಬಲೈರ್ವೇಗಿಭಿರುನ್ನದದ್ಭಿಃ।
03103008c ನ ಸೇಹಿರೇ ವೇಗವತಾಂ ಮಹಾತ್ಮನಾಂ। ವೇಗಂ ತದಾ ಧಾರಯಿತುಂ ದಿವೌಕಸಾಂ।।
ಮಹಾತ್ಮ ದೇವತೆಗಳಿಂದ ಮಹಾವೀರ, ಮಹಾ ವೇಗದಲ್ಲಿ ಹೋಗಬಲ್ಲ ಆ ದಾನವರು ನಿರ್ನಾಮಗೊಂಡರು. ವೇಗಶಾಲಿ ಮಹಾತ್ಮ ದಿವೌಕಸರ ವೇಗದ ಧಾಳಿಯನ್ನು ಅವರು ಸಹಿಸಲಾರದಾದರು.
03103009a ತೇ ವಧ್ಯಮಾನಾಸ್ತ್ರಿದಶೈರ್ದಾನವಾ ಭೀಮನಿಸ್ವನಾಃ।
03103009c ಚಕ್ರುಃ ಸುತುಮುಲಂ ಯುದ್ಧಂ ಮುಹೂರ್ತಮಿವ ಭಾರತ।।
ಭಾರತ! ಭಯಂಕರ ಘರ್ಜನೆಯೊಂದಿಗೆ ನಡೆದ ಆ ಮಹಾ ಯುದ್ಧದಲ್ಲಿ ಒಂದೇ ಕ್ಷಣದಲ್ಲಿ ದೇವತೆಗಳು ದಾನವರನ್ನು ವಧಿಸಿದರು.
03103010a ತೇ ಪೂರ್ವಂ ತಪಸಾ ದಗ್ಧಾ ಮುನಿಭಿರ್ಭಾವಿತಾತ್ಮಭಿಃ।
03103010c ಯತಮಾನಾಃ ಪರಂ ಶಕ್ತ್ಯಾ ತ್ರಿದಶೈರ್ವಿನಿಷೂದಿತಾಃ।।
ಭಾವಿತಾತ್ಮರಾದ ಮುನಿಗಳ ತಪಸ್ಸಿನಿಂದ ಮೊದಲೇ ದಗ್ಧರಾಗಿದ್ದ ಪರಮ ಶಕ್ತಿಯನ್ನುಪಯೋಗಿಸಿ ಹೋರಾಡಿದರೂ ದೇವತೆಗಳಿಂದ ನಾಶಹೊಂದಿದರು.
03103011a ತೇ ಹೇಮನಿಷ್ಕಾಭರಣಾಃ ಕುಂಡಲಾಂಗದಧಾರಿಣಃ।
03103011c ನಿಹತ್ಯ ಬಹ್ವಶೋಭಂತ ಪುಷ್ಪಿತಾ ಇವ ಕಿಂಶುಕಾಃ।।
ಬಂಗಾರದ ಕವಚಾಭರಣಗಳು, ಕುಂಡಲ ಮತ್ತು ಅಂಗಗಳನ್ನು ಧರಿಸಿದ್ದ ಅವರು ವಧಿಸಲ್ಪಟ್ಟು ಹೂಬಿಟ್ಟ ಕಿಂಶುಕಗಳಂತೆ ಶೋಭಿಸಿದರು.
03103012a ಹತಶೇಷಾಸ್ತತಃ ಕೇ ಚಿತ್ಕಾಲೇಯಾ ಮನುಜೋತ್ತಮ।
03103012c ವಿದಾರ್ಯ ವಸುಧಾಂ ದೇವೀಂ ಪಾತಾಲತಲಮಾಶ್ರಿತಾಃ।।
ಮನುಜೋತ್ತಮ! ಸಾಯದೇ ಉಳಿದ ಕೆಲವು ಕಾಲೇಯರು ದೇವಿ ವಸುಧೆಯನ್ನು ಬಗೆದು ಪಾತಾಲತಳವನ್ನು ಆಶ್ರಯಿಸಿದರು.
03103013a ನಿಹತಾನ್ದಾನವಾನ್ದೃಷ್ಟ್ವಾ ತ್ರಿದಶಾ ಮುನಿಪುಂಗವಂ।
03103013c ತುಷ್ಟುವುರ್ವಿವಿಧೈರ್ವಾಕ್ಯೈರಿದಂ ಚೈವಾಬ್ರುವನ್ವಚಃ।।
ದಾನವರು ಹತರಾದುದನ್ನು ನೋಡಿದ ದೇವತೆಗಳು ಮುನಿಪುಂಗವನನ್ನು ವಿವಿಧ ವಾಕ್ಯಗಳಿಂದ ಪ್ರಶಂಸಿಸಿ ಹೇಳಿದರು:
03103014a ತ್ವತ್ಪ್ರಸಾದಾನ್ಮಹಾಭಾಗ ಲೋಕೈಃ ಪ್ರಾಪ್ತಂ ಮಹತ್ಸುಖಂ।
03103014c ತ್ವತ್ತೆಜಸಾ ಚ ನಿಹತಾಃ ಕಾಲೇಯಾಃ ಕ್ರೂರವಿಕ್ರಮಾಃ।।
“ಮಹಾಭಾಗ! ನಿನ್ನ ಪ್ರಸಾದದಿಂದ ಲೋಕಗಳಿಗೆ ಮಹಾ ಸುಖವು ಪ್ರಾಪ್ತವಾಯಿತು. ಮತ್ತು ನಿನ್ನ ತೇಜಸ್ಸಿನಿಂದ ಈ ಕ್ರೂರವಿಕ್ರಮಿ ಕಾಲೇಯರು ಹತರಾದರು.
03103015a ಪೂರಯಸ್ವ ಮಹಾಬಾಹೋ ಸಮುದ್ರಂ ಲೋಕಭಾವನ।
03103015c ಯತ್ತ್ವಯಾ ಸಲಿಲಂ ಪೀತಂ ತದಸ್ಮಿನ್ಪುನರುತ್ಸೃಜ।।
ಲೋಕಭಾವನ! ಮಹಾಬಾಹೋ! ಈಗ ಈ ಸಮುದ್ರವನ್ನು ತುಂಬಿಸು. ನೀನು ಕುಡಿದ ನೀರನ್ನು ಪುನಃ ಇದರಲ್ಲಿ ಬಿಡು.”
03103016a ಏವಮುಕ್ತಃ ಪ್ರತ್ಯುವಾಚ ಭಗವಾನ್ಮುನಿಪುಂಗವಃ।
03103016c ಜೀರ್ಣಂ ತದ್ಧಿ ಮಯಾ ತೋಯಮುಪಾಯೋಽನ್ಯಃ ಪ್ರಚಿಂತ್ಯತಾಂ।।
03103016e ಪೂರಣಾರ್ಥಂ ಸಮುದ್ರಸ್ಯ ಭವದ್ಭಿರ್ಯತ್ನಮಾಸ್ಥಿತೈಃ।।
ಇದನ್ನು ಕೇಳಿದ ಭಗವಾನ್ ಮುನಿಪುಂಗವನು ಉತ್ತರಿಸಿದನು: “ನಾನು ಕುಡಿದ ನೀರನ್ನು ಈಗಾಗಲೇ ಜೀರ್ಣಿಸಿಕೊಂಡಿದ್ದೇನೆ. ಸಮುದ್ರವನ್ನು ತುಂಬಿಸಲು ಬೇರೆ ಯಾವುದಾದರೂ ಉಪಾಯವನ್ನು ಯೋಚಿಸಬೇಕು. ನೀವೇ ಪ್ರಯತ್ನ ಮಾಡಬೇಕು.”
03103017a ಏತಚ್ಛೃತ್ವಾ ತು ವಚನಂ ಮಹರ್ಷೇರ್ಭಾವಿತಾತ್ಮನಃ।
03103017c ವಿಸ್ಮಿತಾಶ್ಚ ವಿಷಣ್ಣಾಶ್ಚ ಬಭೂವುಃ ಸಹಿತಾಃ ಸುರಾಃ।।
ಭಾವಿತಾತ್ಮ ಮಹರ್ಷಿಯ ಈ ಮಾತುಗಳನ್ನು ಕೇಳಿದ ಸುರರು ಒಟ್ಟಿಗೇ ವಿಸ್ಮಿತರೂ ವಿಷಣ್ಣರೂ ಆದರು.
03103018a ಪರಸ್ಪರಮನುಜ್ಞಾಪ್ಯ ಪ್ರಣಮ್ಯ ಮುನಿಪುಂಗವಂ।
03103018c ಪ್ರಜಾಃ ಸರ್ವಾ ಮಹಾರಾಜ ವಿಪ್ರಜಗ್ಮುರ್ಯಥಾಗತಂ।।
ಮಹಾರಾಜ! ಮುನಿಪುಂಗವನಿಗೆ ನಮಸ್ಕರಿಸಿ, ಪರಸ್ಪರರನ್ನು ಬೀಳ್ಕೊಂಡು ಎಲ್ಲರೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
03103019a ತ್ರಿದಶಾ ವಿಷ್ಣುನಾ ಸಾರ್ಧಮುಪಜಗ್ಮುಃ ಪಿತಾಮಹಂ।
03103019c ಪೂರಣಾರ್ಥಂ ಸಮುದ್ರಸ್ಯ ಮಂತ್ರಯಿತ್ವಾ ಪುನಃ ಪುನಃ।।
03103019e ಊಚುಃ ಪ್ರಾಂಜಲಯಃ ಸರ್ವೇ ಸಾಗರಸ್ಯಾಭಿಪೂರಣಂ।।
ಸಮುದ್ರವನ್ನು ಪುನಃ ತುಂಬಿಸುವುದರ ಕುರಿತು ಮತ್ತೆ ಮತ್ತೆ ಮಂತ್ರಾಲೋಚನೆ ಮಾಡಿ ದೇವತೆಗಳು ವಿಷ್ಣುವಿನೊಂದಿಗೆ ಪಿತಾಮಹನಲ್ಲಿಗೆ ಹೋದರು. ಅವರೆಲ್ಲರೂ ಕೈಜೋಡಿಸಿ ಸಾಗರವನ್ನು ತುಂಬಿಸುವುದರ ಕುರಿತು ಹೇಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ತ್ರ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಮೂರನೆಯ ಅಧ್ಯಾಯವು.