102 ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 102

ಸಾರ

ಅಗಸ್ತ್ಯನು ವಿಂಧ್ಯ ಪರ್ವತವನ್ನು ಬೆಳೆಯದಂತೆ ತಡೆದುದು (1-14). ದೇವತೆಗಳ ಬೇಡಿಕೆಯಂತೆ ಸಮುದ್ರವನ್ನು ಕುಡಿಯಲು ಅಗಸ್ತ್ಯನು ಸಮುದ್ರದ ಬಳಿ ಬಂದುದು (15-23).

03102001 ಯುಧಿಷ್ಠಿರ ಉವಾಚ।
03102001a ಕಿಮರ್ಥಂ ಸಹಸಾ ವಿಂಧ್ಯಃ ಪ್ರವೃದ್ಧಃ ಕ್ರೋಧಮೂರ್ಚಿತಃ।
03102001c ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾಮುನೇ।।

ಯುಧಿಷ್ಠಿರನು ಹೇಳಿದನು: “ಕ್ರೋಧಮೂರ್ಛಿತ ವಿಂಧ್ಯವು ಏಕೆ ತಕ್ಷಣವೇ ಬೆಳೆಯಲು ಪ್ರಾರಂಭಿತು? ಮಹಾಮುನೇ! ಇದರ ಕುರಿತು ವಿಸ್ತಾರವಾಗಿ ತಿಳಿಯ ಬಯಸುತ್ತೇನೆ.”

03102002 ಲೋಮಶ ಉವಾಚ।
03102002a ಅದ್ರಿರಾಜಂ ಮಹಾಶೈಲಂ ಮರುಂ ಕನಕಪರ್ವತಂ।
03102002c ಉದಯಾಸ್ತಮಯೇ ಭಾನುಃ ಪ್ರದಕ್ಷಿಣಮವರ್ತತ।।

ಲೋಮಶನು ಹೇಳಿದನು: “ಭಾನುವು ಉದಯವಾಗುವ ಮತ್ತು ಅಸ್ತನಾಗುವ ಸಮಯಗಳಲ್ಲಿ ಅದ್ರಿರಾಜ, ಮಹಾಶೈಲ ಕನಕಪರ್ವತ ಮೇರುವನ್ನು ಪ್ರದಕ್ಷಿಣೆ ಮಾಡುತ್ತಿದ್ದನು.

03102003a ತಂ ತು ದೃಷ್ಟ್ವಾ ತಥಾ ವಿಂಧ್ಯಃ ಶೈಲಃ ಸೂರ್ಯಮಥಾಬ್ರವೀತ್।
03102003c ಯಥಾ ಹಿ ಮೇರುರ್ಭವತಾ ನಿತ್ಯಶಃ ಪರಿಗಮ್ಯತೇ।।
03102003e ಪ್ರದಕ್ಷಿಣಂ ಚ ಕ್ರಿಯತೇ ಮಾಮೇವಂ ಕುರು ಭಾಸ್ಕರ।।

ಅದನ್ನು ಕಂಡ ವಿಂಧ್ಯ ಪರ್ವತನು ಸೂರ್ಯನಿಗೆ ಹೇಳಿದನು: “ಭಾಸ್ಕರ! ಹೇಗೆ ಮೇರುವನ್ನು ಪ್ರತಿದಿನ ಸುತ್ತುವರೆಯುತ್ತೀಯೋ ಹಾಗೆ ನನ್ನನ್ನೂ ಕೂಡ ಪ್ರದಕ್ಷಿಣೆ ಮಾಡು.”

03102004a ಏವಮುಕ್ತಸ್ತತಃ ಸೂರ್ಯಃ ಶೈಲೇಂದ್ರಂ ಪ್ರತ್ಯಭಾಷತ।
03102004c ನಾಹಮಾತ್ಮೇಚ್ಚಯಾ ಶೈಲ ಕರೋಮ್ಯೇನಂ ಪ್ರದಕ್ಷಿಣಂ।।
03102004e ಏಷ ಮಾರ್ಗಃ ಪ್ರದಿಷ್ಟೋ ಮೇ ಯೇನೇದಂ ನಿರ್ಮಿತಂ ಜಗತ್।।

ಸೂರ್ಯನು ಶೈಲೇಂದ್ರನ ಈ ಮಾತಿಗೆ ಉತ್ತರಿಸಿದನು: “ಶೈಲ! ನನ್ನ ಇಚ್ಛೆಯಿಂದ ನಾನು ಅವನಿಗೆ ಪ್ರದಕ್ಷಿಣೆ ಮಾಡುತ್ತಿಲ್ಲ. ಈ ಜಗತ್ತನ್ನು ಯಾರು ಸೃಷ್ಟಿಸಿದನೋ ಅವನೇ ನನಗೆ ಈ ಮಾರ್ಗವನ್ನು ಹಾಕಿ ಕೊಟ್ಟಿದ್ದಾನೆ.”

03102005a ಏವಮುಕ್ತಸ್ತತಃ ಕ್ರೋಧಾತ್ಪ್ರವೃದ್ಧಃ ಸಹಸಾಚಲಃ।
03102005c ಸೂರ್ಯಾಚಂದ್ರಮಸೋರ್ಮಾರ್ಗಂ ರೋದ್ಧುಮಿಚ್ಚನ್ಪರಂತಪ।।

ಪರಂತಪ! ಇದನ್ನು ಕೇಳಿ ಕೋಪಗೊಂಡ ಆ ಪರ್ವತವು ತಕ್ಷಣವೇ ಬೆಳೆದು ಸೂರ್ಯ ಮತ್ತು ಚಂದ್ರರ ಮಾರ್ಗಗಳನ್ನು ತಡೆಗಟ್ಟಿದನು.

03102006a ತತೋ ದೇವಾಃ ಸಹಿತಾಃ ಸರ್ವ ಏವ। ಸೇಂದ್ರಾಃ ಸಮಾಗಮ್ಯ ಮಹಾದ್ರಿರಾಜಂ।
03102006c ನಿವಾರಯಾಮಾಸುರುಪಾಯತಸ್ತಂ। ನ ಚ ಸ್ಮ ತೇಷಾಂ ವಚನಂ ಚಕಾರ।।

ಆಗ ಇಂದ್ರನೂ ಸೇರಿ ಸರ್ವ ದೇವತೆಗಳೂ ಆ ಮಹಾ ಪರ್ವತರಾಜನಲ್ಲಿಗೆ ಹೋಗಿ ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರು ಹೇಳಿದಂತೆ ಮಾಡಲು ಅವನು ನಿರಾಕರಿಸಿದನು.

03102007a ಅಥಾಭಿಜಗ್ಮುರ್ಮುನಿಮಾಶ್ರಮಸ್ಥಂ। ತಪಸ್ವಿನಂ ಧರ್ಮಭೃತಾಂ ವರಿಷ್ಠಂ।
03102007c ಅಗಸ್ತ್ಯಮತ್ಯದ್ಭುತವೀರ್ಯದೀಪ್ತಂ। ತಂ ಚಾರ್ಥಮೂಚುಃ ಸಹಿತಾಃ ಸುರಾಸ್ತೇ।।

ಅನಂತರ ಆ ಸುರರು ಒಟ್ಟಿಗೇ ಆಶ್ರಮದಲ್ಲಿದ್ದ ತಪಸ್ವಿ, ಧಾರ್ಮಿಕರಲ್ಲಿಯೇ ವರಿಷ್ಠ ಮುನಿ, ಅದ್ಭುತ ವೀರ್ಯದೀಪ್ತ ಅಗಸ್ತ್ಯನಲ್ಲಿಗೆ ಹೋಗಿ ವಿಷಯವನ್ನು ತಿಳಿಸಿದರು.

03102008 ದೇವಾ ಊಚುಃ।
03102008a ಸೂರ್ಯಾಚಂದ್ರಮಸೋರ್ಮಾರ್ಗಂ ನಕ್ಷತ್ರಾಣಾಂ ಗತಿಂ ತಥಾ।
03102008c ಶೈಲರಾಜೋ ವೃಣೋತ್ಯೇಷ ವಿಂಧ್ಯಃ ಕ್ರೋಧವಶಾನುಗಃ।।

ದೇವತೆಗಳು ಹೇಳಿದರು: “ಕ್ರೋಧವಶನಾದ ಶೈಲರಾಜ ವಿಂದ್ಯನು ಸೂರ್ಯ-ಚಂದ್ರರ ಮತ್ತು ನಕ್ಷತ್ರಗಳ ಗತಿಯನ್ನು ನಿಲ್ಲಿಸಿದ್ದಾನೆ.

03102009a ತಂ ನಿವಾರಯಿತುಂ ಶಕ್ತೋ ನಾನ್ಯಃ ಕಶ್ಚಿದ್ದ್ವಿಜೋತ್ತಮ।
03102009c ಋತೇ ತ್ವಾಂ ಹಿ ಮಹಾಭಾಗ ತಸ್ಮಾದೇನಂ ನಿವಾರಯ।।

ದ್ವಿಜೋತ್ತಮ! ಮಹಾಭಾಗ! ನಿನ್ನ ಹೊರತಾಗಿ ಬೇರೆ ಯಾರೂ ಅವನನ್ನು ನಿಲ್ಲಿಸಲು ಶಕ್ಯರಿಲ್ಲ. ಆದುದರಿಂದ ಇದನ್ನು ನಿಲ್ಲಿಸು.””

03102010 ಲೋಮಶ ಉವಾಚ।
03102010a ತಚ್ಛೃತ್ವಾ ವಚನಂ ವಿಪ್ರಃ ಸುರಾಣಾಂ ಶೈಲಮಭ್ಯಗಾತ್।
03102010c ಸೋಽಭಿಗಮ್ಯಾಬ್ರವೀದ್ವಿಂಧ್ಯಂ ಸದಾರಃ ಸಮುಪಸ್ಥಿತಃ।।

ಲೋಮಶನು ಹೇಳಿದನು: “ಸುರರ ಆ ಮಾತುಗಳನ್ನು ಕೇಳಿದ ವಿಪ್ರನು ತನ್ನ ಪತ್ನಿಯೊಡನೆ ವಿಂಧ್ಯಪರ್ವತಕ್ಕೆ ಹೋಗಿ ಅವನಿಗೆ ಹೇಳಿದನು:

03102011a ಮಾರ್ಗಮಿಚ್ಚಾಮ್ಯಹಂ ದತ್ತಂ ಭವತಾ ಪರ್ವತೋತ್ತಮ।
03102011c ದಕ್ಷಿಣಾಮಭಿಗಂತಾಸ್ಮಿ ದಿಶಂ ಕಾರ್ಯೇಣ ಕೇನ ಚಿತ್।।

“ಪರ್ವತೋತ್ತಮ! ನಿನ್ನಿಂದ ನಾನು ದಾರಿಯನ್ನು ಕೇಳುತ್ತಿದ್ದೇನೆ. ನೀಡು. ಯಾವುದೋ ಕಾರ್ಯಕ್ಕಾಗಿ ದಕ್ಷಿಣದಿಕ್ಕಿಗೆ ಹೋಗುತ್ತಿದ್ದೇನೆ.

03102012a ಯಾವದಾಗಮನಂ ಮಹ್ಯಂ ತಾವತ್ತ್ವಂ ಪ್ರತಿಪಾಲಯ।
03102012c ನಿವೃತ್ತೇ ಮಯಿ ಶೈಲೇಂದ್ರ ತತೋ ವರ್ಧಸ್ವ ಕಾಮತಃ।।
03102013a ಏವಂ ಸ ಸಮಯಂ ಕೃತ್ವಾ ವಿಂಧ್ಯೇನಾಮಿತ್ರಕರ್ಶನ।
03102013c ಅದ್ಯಾಪಿ ದಕ್ಷಿಣಾದ್ದೇಶಾದ್ವಾರುಣಿರ್ನ ನಿವರ್ತತೇ।।

ನಾನು ಹಿಂದಿರುಗಿ ಬರುವವರೆಗೆ ನಿನ್ನ ಎತ್ತರವನ್ನೂ ಹೀಗೆಯೇ ಇಟ್ಟಿರು. ಶೈಲೇಂದ್ರ! ನಾನು ಹಿಂದಿರುಗಿದ ನಂತರ ನಿನಗಿಷ್ಟವಾದಷ್ಟು ಬೆಳೆಯಬಹುದು!” ಹೀಗೆ ಆ ಅಮಿತ್ರಕರ್ಷಣನು ವಿಂಧ್ಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಇದೂವರೆಗೂ ವಾರುಣಿಯು ದಕ್ಷಿಣದೇಶದಿಂದ ಹಿಂದಿರುಗಲಿಲ್ಲ!

03102014a ಏತತ್ತೇ ಸರ್ವಮಾಖ್ಯಾತಂ ಯಥಾ ವಿಂಧ್ಯೋ ನ ವರ್ಧತೇ।
03102014c ಅಗಸ್ತ್ಯಸ್ಯ ಪ್ರಭಾವೇನ ಯನ್ಮಾಂ ತ್ವಂ ಪರಿಪೃಚ್ಚಸಿ।।

ನೀನು ನನ್ನನ್ನು ಕೇಳಿಕೊಂಡಂತೆ ಅಗಸ್ತ್ಯನ ಪ್ರಭಾವದಿಂದ ವಿಂಧ್ಯವು ಹೇಗೆ ಬೆಳೆಯುತ್ತಿಲ್ಲ ಎನ್ನುವುದನ್ನೆಲ್ಲವನ್ನೂ ಹೇಳಿದ್ದೇನೆ.

03102015a ಕಾಲೇಯಾಸ್ತು ಯಥಾ ರಾಜನ್ಸುರೈಃ ಸರ್ವೈರ್ನಿಷೂದಿತಾಃ।
03102015c ಅಗಸ್ತ್ಯಾದ್ವರಮಾಸಾದ್ಯ ತನ್ಮೇ ನಿಗದತಃ ಶೃಣು।।

ರಾಜನ್! ಅಗಸ್ತ್ಯನಿಂದ ವರವನ್ನು ಪಡೆದು ಸುರರೆಲ್ಲರೂ ಹೇಗೆ ಕಾಲೇಯರನ್ನು ನಾಶಪಡೆಸಿದರು ಎಂದು ಹೇಳುತ್ತೇನೆ, ಕೇಳು.

03102016a ತ್ರಿದಶಾನಾಂ ವಚಃ ಶ್ರುತ್ವಾ ಮೈತ್ರಾವರುಣಿರಬ್ರವೀತ್।
03102016c ಕಿಮರ್ಥಮಭಿಯಾತಾಃ ಸ್ಥ ವರಂ ಮತ್ತಃ ಕಿಮಿಚ್ಚಥ।।
03102016e ಏವಮುಕ್ತಾಸ್ತತಸ್ತೇನ ದೇವಾಸ್ತಂ ಮುನಿಮಬ್ರುವನ್।।

ಮೂವತ್ತು ದೇವತೆಗಳ ಮಾತುಗಳನ್ನು ಕೇಳಿದ ಆ ಮೈತ್ರಾವರುಣಿಯು ಹೇಳಿದನು: “ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ನನ್ನಿಂದ ಏನು ವರವನ್ನು ಕೇಳುತ್ತಿದ್ದೀರಿ?” ಅವನು ಹೀಗೆ ಹೇಳಲು ದೇವತೆಗಳು ಮುನಿಗೆ ಹೇಳಿದರು:

03102017a ಏವಂ ತ್ವಯೇಚ್ಚಾಮ ಕೃತಂ ಮಹರ್ಷೇ। ಮಹಾರ್ಣವಂ ಪೀಯಮಾನಂ ಮಹಾತ್ಮನ್।
03102017c ತತೋ ವಧಿಷ್ಯಾಮ ಸಹಾನುಬಂಧಾನ್। ಕಾಲೇಯಸಂಜ್ಞಾನ್ಸುರವಿದ್ವಿಷಸ್ತಾನ್।।

“ಮಹರ್ಷೇ! ಮಹಾತ್ಮನ್! ನೀನು ಸಮುದ್ರವನ್ನು ಕುಡಿಯಬೇಕು ಎಂದು ಬಯಸುತ್ತೇವೆ. ಅನಂತರ ನಾವು ಆ ಸುರದ್ವೇಷಿ ಕಾಲೇಯರನ್ನು ಅವರ ಬಾಂಧವರೊಂದಿಗೆ ವಧಿಸುತ್ತೇವೆ.”

03102018a ತ್ರಿದಶಾನಾಂ ವಚಃ ಶ್ರುತ್ವಾ ತಥೇತಿ ಮುನಿರಬ್ರವೀತ್।
03102018c ಕರಿಷ್ಯೇ ಭವತಾಂ ಕಾಮಂ ಲೋಕಾನಾಂ ಚ ಮಹತ್ಸುಖಂ।।

ದೇವತೆಗಳ ಮಾತನ್ನು ಕೇಳಿ ಮುನಿಯು “ಹಾಗೆಯೇ ಆಗಲಿ! ಲೋಕಗಳ ಮಹಾ ಹಿತಕ್ಕಾಗಿ ನಿಮ್ಮ ಆಸೆಯನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.

03102019a ಏವಮುಕ್ತ್ವಾ ತತೋಽಗಚ್ಚತ್ಸಮುದ್ರಂ ಸರಿತಾಂ ಪತಿಂ।
03102019c ಋಷಿಭಿಶ್ಚ ತಪಹ್ಸಿದ್ಧೈಃ ಸಾರ್ಧಂ ದೇವೈಶ್ಚ ಸುವ್ರತಃ।।

ಹೀಗೆ ಹೇಳಿದ ನಂತರ ಅವನು ಋಷಿ, ತಪಃಸಿದ್ಧ, ಸುವ್ರತರು ಮತ್ತು ದೇವತೆಗಳೊಡಗೂಡಿ ಸರಿತಾಪತಿ ಸಮುದ್ರದಬಳಿ ಹೋದನು.

03102020a ಮನುಷ್ಯೋರಗಗಂಧರ್ವಯಕ್ಷಕಿಂಪುರುಷಾಸ್ತಥಾ।
03102020c ಅನುಜಗ್ಮುರ್ಮಹಾತ್ಮಾನಂ ದ್ರಷ್ಟುಕಾಮಾಸ್ತದದ್ಭುತಂ।।

ಮನಷ್ಯ-ಉರಗ-ಗಂಧರ್ವ-ಯಕ್ಷ-ಕಿಂಪುರುಷರು ಆ ಮಹಾತ್ಮನ ಅದ್ಭುತ ಕಾರ್ಯವನ್ನು ನೋಡಲು ಅಲ್ಲಿಗೆ ಬಂದು ಸೇರಿದರು.

03102021a ತತೋಽಭ್ಯಗಚ್ಚನ್ಸಹಿತಾಃ ಸಮುದ್ರಂ ಭೀಮನಿಸ್ವನಂ।
03102021c ನೃತ್ಯಂತಮಿವ ಚೋರ್ಮೀಭಿರ್ವಲ್ಗಂತಮಿವ ವಾಯುನಾ।।
03102022a ಹಸಂತಮಿವ ಫೇನೌಘೈಃ ಸ್ಖಲಂತಂ ಕಂದರೇಷು ಚ।
03102022c ನಾನಾಗ್ರಾಹಸಮಾಕೀರ್ಣಂ ನಾನಾದ್ವಿಜಗಣಾಯುತಂ।।

ಅವರೆಲ್ಲರೂ ಒಟ್ಟಿಗೇ ಭಯಂಕರವಾಗಿ ಭೋರ್ಗರೆಯುತ್ತಿರುವ, ಗಾಳಿಯಿಂದ ಅಲ್ಲೋಲಕಲ್ಲೋಲಗೊಂಡ ಅಲೆಗಳು ನಾಟ್ಯಮಾಡುವಂತೆ ತೋರುತ್ತಿರುವ, ನಗುತ್ತಿರುವಂತಿರುವ ನೊರೆಯ, ಒಡೆದ ಕಂದರಗಳುಳ್ಳ, ನಾನಾ ತರಹದ ಮೀನುಗಳಿಂದ ಮತ್ತು ನಾನಾ ವಿಧದ ಪಕ್ಷಿಗಣಗಳಿಂದ ಕೂಡಿದ ಸಮುದ್ರದ ಬಳಿ ಬಂದರು.

03102023a ಅಗಸ್ತ್ಯಸಹಿತಾ ದೇವಾಃ ಸಗಂಧರ್ವಮಹೋರಗಾಃ।
03102023c ಋಷಯಶ್ಚ ಮಹಾಭಾಗಾಃ ಸಮಾಸೇದುರ್ಮಹೋದಧಿಂ।।

ಅಗಸ್ತ್ಯನೊಂದಿಗೆ ದೇವತೆಗಳು, ಜೊತೆಗೆ ಗಂಧರ್ವರೂ, ಮಹಾ‌ಉರುಗಗಳೂ, ಮಹಾಭಾಗ ಋಷಿಗಳೂ ಸುಮುದ್ರತೀರದಲ್ಲಿ ಬಂದು ಸೇರಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ದ್ವಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಎರಡನೆಯ ಅಧ್ಯಾಯವು.