ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 101
ಸಾರ
ಅಗಸ್ತ್ಯನು ಸಾಗರವನ್ನು ಬತ್ತಿಸಬಲ್ಲನು ಎಂದು ನಾರಾಯಣನು ಸೂಚಿಸಿದ್ದುದು (1-10). ದೇವತೆಗಳು ಅಗಸ್ತ್ಯನನ್ನು ಬೇಡಿಕೊಂಡಿದುದು (11-17).
03101001 ದೇವಾ ಊಚುಃ।
03101001a ಇತಃ ಪ್ರದಾನಾದ್ವರ್ತಂತೇ ಪ್ರಜಾಃ ಸರ್ವಾಶ್ಚತುರ್ವಿಧಾಃ।
03101001c ತಾ ಭಾವಿತಾ ಭಾವಯಂತಿ ಹವ್ಯಕವ್ಯೈರ್ದಿವೌಕಸಃ।।
ದೇವತೆಗಳು ಹೇಳಿದರು: “ಚತುರ್ವಿಧ ಪ್ರಜೆಗಳೆಲ್ಲರೂ ಇಲ್ಲಿಂದ ಬರುವ ಅನುಗ್ರಹದಿಂದಲೇ ಜೀವಿಸುತ್ತವೆ. ಹೀಗೆ ಅಭಿವೃದ್ಧಿಹೊಂದಿದ ಅವರು ಹವ್ಯಕವ್ಯಗಳ ಮೂಲಕ ದೇವತೆಗಳ ಅಭಿವೃದ್ಧಿಗೆ ಕಾರಣರಾಗುತ್ತಾರೆ.
03101002a ಲೋಕಾ ಹ್ಯೇವಂ ವರ್ತಯಂತಿ ಅನ್ಯೋನ್ಯಂ ಸಮುಪಾಶ್ರಿತಾಃ।
03101002c ತ್ವತ್ಪ್ರಸಾದಾನ್ನಿರುದ್ವಿಗ್ನಾಸ್ತ್ವಯೈವ ಪರಿರಕ್ಷಿತಾಃ।।
ಹೀಗೆ ಲೋಕಗಳು ಅನ್ಯೋನ್ಯರನ್ನು ಅವಲಂಬಿಸಿ ನಡೆಯುತ್ತವೆ. ನಿನ್ನ ಪ್ರಸಾದದಿಂದ ಪರಿರಕ್ಷಿತರಾಗಿ ಲೋಕಗಳು ವಿಘ್ನಗಳಿಲ್ಲದೇ ಹೀಗೆಯೇ ನಡೆಯುತ್ತಿವೆ.
03101003a ಇದಂ ಚ ಸಮನುಪ್ರಾಪ್ತಂ ಲೋಕಾನಾಂ ಭಯಮುತ್ತಮಂ।
03101003c ನ ಚ ಜಾನೀಮ ಕೇನೇಮೇ ರಾತ್ರೌ ವಧ್ಯಂತಿ ಬ್ರಾಹ್ಮಣಾಃ।।
ಈಗ ಈ ಅತೀವ ಭಯವು ಲೋಕಗಳಿಗೆ ಬಂದೊದಗಿದೆ. ರಾತ್ರಿಯಲ್ಲಿ ಬ್ರಾಹ್ಮಣರನ್ನು ಯಾರು ಕೊಲ್ಲುತ್ತಿದ್ದಾರೆ ಎಂದು ತಿಳಿಯಲಾರೆವು.
03101004a ಕ್ಷೀಣೇಷು ಚ ಬ್ರಾಹ್ಮಣೇಷು ಪೃಥಿವೀ ಕ್ಷಯಮೇಷ್ಯತಿ।
03101004c ತತಃ ಪೃಥಿವ್ಯಾಂ ಕ್ಷೀಣಾಯಾಂ ತ್ರಿದಿವಂ ಕ್ಷಯಮೇಷ್ಯತಿ।।
ಬ್ರಾಹ್ಮಣರು ನಾಶವಾದರೆ ಭೂಮಿಯೂ ವಿನಾಶ ಹೊಂದುತ್ತದೆ. ಮತ್ತು ಭೂಮಿಯು ಕ್ಷೀಣವಾದರೆ, ದೇವಲೋಕವೂ ನಾಶಗೊಳ್ಳುತ್ತದೆ.
03101005a ತ್ವತ್ಪ್ರಸಾದಾನ್ಮಹಾಬಾಹೋ ಲೋಕಾಃ ಸರ್ವೇ ಜಗತ್ಪತೇ।
03101005c ವಿನಾಶಂ ನಾಧಿಗಚ್ಚೇಯುಸ್ತ್ವಯಾ ವೈ ಪರಿರಕ್ಷಿತಾಃ।।
ಮಹಾಬಾಹೋ! ಜಗತ್ಪತೇ! ನಿನ್ನ ಕರುಣೆಯಿಂದ ಲೋಕಗಳೆಲ್ಲವೂ ನಾಶವಾಗದಿರಲಿ. ಅವೆಲ್ಲವನ್ನೂ ಪರಿರಕ್ಷಿಸು.”
03101006 ವಿಷ್ಣುರುವಾಚ।
03101006a ವಿದಿತಂ ಮೇ ಸುರಾಃ ಸರ್ವಂ ಪ್ರಜಾನಾಂ ಕ್ಷಯಕಾರಣಂ।
03101006c ಭವತಾಂ ಚಾಪಿ ವಕ್ಷ್ಯಾಮಿ ಶೃಣುಧ್ವಂ ವಿಗತಜ್ವರಾಃ।।
ವಿಷ್ಣುವು ಹೇಳಿದನು: “ಸುರರೇ! ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿರುವುದರ ಕಾರಣವನ್ನು ನಾನು ತಿಳಿದಿದ್ದೇನೆ. ನಾನು ಹೇಳುತ್ತೇನೆ - ಭಯವನ್ನು ತೊರೆದು ಕೇಳಿ.
03101007a ಕಾಲೇಯ ಇತಿ ವಿಖ್ಯಾತೋ ಗಣಃ ಪರಮದಾರುಣಃ।
03101007c ತೈಶ್ಚ ವೃತ್ರಂ ಸಮಾಶ್ರಿತ್ಯ ಜಗತ್ಸರ್ವಂ ಪ್ರಬಾಧಿತಂ।।
ಕಾಲೇಯರೆಂದು ವಿಖ್ಯಾತರಾದ ಒಂದು ಪರಮದಾರುಣ ಗುಂಪಿದೆ. ಅವರು ವೃತ್ರನನ್ನು ಆಶ್ರಯಿಸಿ ಜಗತ್ತುಗಳನ್ನೆಲ್ಲವನ್ನೂ ಬಾಧಿಸುತ್ತಿದ್ದರು.
03101008a ತೇ ವೃತ್ರಂ ನಿಹತಂ ದೃಷ್ಟ್ವಾ ಸಹಸ್ರಾಕ್ಷೇಣ ಧೀಮತಾ।
03101008c ಜೀವಿತಂ ಪರಿರಕ್ಷಂತಃ ಪ್ರವಿಷ್ಟಾ ವರುಣಾಲಯಂ।।
ಧೀಮಂತ ಸಹಸ್ರಾಕ್ಷನು ವೃತ್ರನನ್ನು ಸಂಹರಿಸಿದುದನ್ನು ಕಂಡು ಅವರು ವರುಣಾಲಯವನ್ನು ಹೊಕ್ಕಿ ತಮ್ಮ ಜೀವಗಳನ್ನು ರಕ್ಷಿಸಿಕೊಂಡರು.
03101009a ತೇ ಪ್ರವಿಶ್ಯೋದಧಿಂ ಘೋರಂ ನಕ್ರಗ್ರಾಹಸಮಾಕುಲಂ।
03101009c ಉತ್ಸಾದನಾರ್ಥಂ ಲೋಕಾನಾಂ ರಾತ್ರೌ ಘ್ನಂತಿ ಮುನೀನಿಹ।।
ಈಗ ಅವರು ಘೋರ ಮೊಸಳೆ ತಿಮಿಂಗಿಲಗಳು ತುಂಬಿರುವ ಸಮುದ್ರವನ್ನು ಸೇರಿದ್ದಾರೆ. ಲೋಕಗಳ ವಿನಾಶಕ್ಕಾಗಿ ಅವರು ರಾತ್ರಿಯಲ್ಲಿ ಇಲ್ಲಿರುವ ಮುನಿಗಳನ್ನು ಕೊಲ್ಲುತ್ತಿದ್ದಾರೆ.
03101010a ನ ತು ಶಕ್ಯಾಃ ಕ್ಷಯಂ ನೇತುಂ ಸಮುದ್ರಾಶ್ರಯಗಾ ಹಿ ತೇ।
03101010c ಸಮುದ್ರಸ್ಯ ಕ್ಷಯೇ ಬುದ್ಧಿರ್ಭವದ್ಭಿಃ ಸಂಪ್ರಧಾರ್ಯತಾಂ।।
03101010e ಅಗಸ್ತ್ಯೇನ ವಿನಾ ಕೋ ಹಿ ಶಕ್ತೋಽನ್ಯೋಽರ್ಣವಶೋಷಣೇ।।
ಸಮುದ್ರದಲ್ಲಿ ಆಶ್ರಯ ಪಡೆದಿರುವ ಅವರನ್ನು ಕೊಲ್ಲಲು ಶಕ್ಯವಿಲ್ಲ. ಸಮುದ್ರವನ್ನೇ ನಾಶಗೊಳಿಸುವುದರ ಕುರಿತು ನಿಮ್ಮ ಬುದ್ಧಿಯನ್ನು ಓಡಿಸಬೇಕು. ಅಗಸ್ತ್ಯನನ್ನು ಬಿಟ್ಟು ಬೇರೆ ಯಾರು ತಾನೇ ಸಮುದ್ರವನ್ನು ಬತ್ತಿಸಲು ಶಕ್ಯರಿದ್ದಾರೆ?”
03101011a ಏತಚ್ಛೃತ್ವಾ ವಚೋ ದೇವಾ ವಿಷ್ಣುನಾ ಸಮುದಾಹೃತಂ।
03101011c ಪರಮೇಷ್ಠಿನಮಾಜ್ಞಾಪ್ಯ ಅಗಸ್ತ್ಯಸ್ಯಾಶ್ರಮಂ ಯಯುಃ।।
ವಿಷ್ಣುವಿನ ಈ ಮಾತುಗಳನ್ನು ಕೇಳಿ ಸಂತೋಷಗೊಂಡ ದೇವತೆಗಳು ಪರಮೇಷ್ಠಿಯಿಂದ ಬೀಳ್ಕೊಂಡು ಅಗಸ್ತ್ಯನ ಆಶ್ರಮಕ್ಕೆ ಬಂದರು.
03101012a ತತ್ರಾಪಶ್ಯನ್ಮಹಾತ್ಮಾನಂ ವಾರುಣಿಂ ದೀಪ್ತತೇಜಸಂ।
03101012c ಉಪಾಸ್ಯಮಾನಮೃಷಿಭಿರ್ದೇವೈರಿವ ಪಿತಾಮಹಂ।।
ಅಲ್ಲಿ ಅವರು ದೇವತೆಗಳ ಮಧ್ಯೆ ಪಿತಾಮಹನಂತೆ ಋಷಿಗಳ ಮಧ್ಯೆ ಕುಳಿತಿದ್ದ ದೀಪ್ತತೇಜಸ್ವಿ ಮಹಾತ್ಮ ವಾರುಣಿಯನ್ನು ಕಂಡರು.
03101013a ತೇಽಭಿಗಮ್ಯ ಮಹಾತ್ಮಾನಂ ಮೈತ್ರಾವರುಣಿಮಚ್ಯುತಂ।
03101013c ಆಶ್ರಮಸ್ಥಂ ತಪೋರಾಶಿಂ ಕರ್ಮಭಿಃ ಸ್ವೈರಭಿಷ್ಟುವನ್।।
ಆಶ್ರಮದಲ್ಲಿದ್ದ ಆ ಮಹಾತ್ಮ, ಮೈತ್ರಾವರುಣಿ, ಅಚ್ಯುತ, ತಪೋರಾಶಿಯನ್ನು ಅವನ ಕರ್ಮಗಳನ್ನು ಪ್ರಶಿಂಸಿಸುತ್ತಾ ಭೇಟಿಯಾದರು.
03101014 ದೇವಾ ಊಚುಃ।
03101014a ನಹುಷೇಣಾಭಿತಪ್ತಾನಾಂ ತ್ವಂ ಲೋಕಾನಾಂ ಗತಿಃ ಪುರಾ।
03101014c ಭ್ರಂಶಿತಶ್ಚ ಸುರೈಶ್ವರ್ಯಾಲ್ಲೋಕಾರ್ಥಂ ಲೋಕಕಂಟಕಃ।।
ದೇವತೆಗಳು ಹೇಳಿದರು: “ಹಿಂದೆ ನಹುಷನಡಿಯಲ್ಲಿ ಪರಿತಪ್ತ ಲೋಕಗಳಿಗೆ ನೀನೇ ಗತಿಯಾಗಿದ್ದೆ1. ಲೋಕಗಳ ಮೇಲೆ ಸುರರ ಅಧಿಪತ್ಯಕ್ಕಾಗಿ ಆ ಲೋಕಕಂಟಕನನ್ನು ಹೊರಹಾಕಿದ್ದೆ.
03101015a ಕ್ರೋಧಾತ್ಪ್ರವೃದ್ಧಃ ಸಹಸಾ ಭಾಸ್ಕರಸ್ಯ ನಗೋತ್ತಮಃ।
03101015c ವಚಸ್ತವಾನತಿಕ್ರಾಮನ್ವಿಂಧ್ಯಃ ಶೈಲೋ ನ ವರ್ಧತೇ।।
ಭಾಸ್ಕರನ ಮೇಲಿನ ಕೋಪದಿಂದ ಪರ್ವತೋತ್ತಮ ವಿಂಧ್ಯವು ಒಂದೇಸಮನ ಬೆಳೆಯತೊಡಗಿದಾಗ ನಿನ್ನ ಮಾತನ್ನು ಮೀರಲಾಗದೇ ಆ ಶೈಲವು ಬೆಳೆಯುವುದನ್ನು ನಿಲ್ಲಿಸಿತು.
03101016a ತಮಸಾ ಚಾವೃತೇ ಲೋಕೇ ಮೃತ್ಯುನಾಭ್ಯರ್ದಿತಾಃ ಪ್ರಜಾಃ।
03101016c ತ್ವಾಮೇವ ನಾಥಮಾಸಾದ್ಯ ನಿರ್ವೃತಿಂ ಪರಮಾಂ ಗತಾಃ।।
ಲೋಕವು ಕತ್ತಲೆಯಲ್ಲಿ ಮುಳುಗಿದಾಗ ಮತ್ತು ಪ್ರಜೆಗಳು ಮೃತ್ಯುವಿನ ಹಿಂಸೆಗೊಳಗಾಗಿದ್ದಾಗ ನೀನೇ ನಾಥನಾಗಿ ಅವರಿಗೆ ಬಿಡುಗಡೆ ನೀಡಿ ಪರಮ ಗತಿಯನ್ನು ಒದಗಿಸಿದೆ.
03101017a ಅಸ್ಮಾಕಂ ಭಯಭೀತಾನಾಂ ನಿತ್ಯಶೋ ಭಗವಾನ್ಗತಿಃ।
03101017c ತತಸ್ತ್ವಾರ್ತಾಃ ಪ್ರಯಾಚಾಮಸ್ತ್ವಾಂ ವರಂ ವರದೋ ಹ್ಯಸಿ।।
ಭಗವನ್! ಭಯಭೀತರಾದ ನಮಗೆ ನಿತ್ಯವೂ ನೀನು ಗತಿಯಾಗಿದ್ದೀಯೆ. ಆದುದರಿಂದ, ವರದ! ಆರ್ತರಾದ ನಾವು ನಿನ್ನಲ್ಲಿ ವರವೊಂದನ್ನು ಕೇಳುತ್ತಿದ್ದೇವೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕಾಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಒಂದನೆಯ ಅಧ್ಯಾಯವು.
-
ಅಗಸ್ತ್ಯನು ನಹುಷನಿಗೆ ಶಾಪವನ್ನಿತ್ತು ಇಂದ್ರಾಣಿಯನ್ನು ರಕ್ಷಿಸಿದ ಕಥೆಯು ಉದ್ಯೋಗಪರ್ವದಲ್ಲಿ ಬರುತ್ತದೆ. ↩︎