ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 99
ಸಾರ
ವೃತ್ರಾಸುರವಧೆ (1-15). ಸೋತ ಕಾಲೇಯರು ಸಮುದ್ರದಲ್ಲಿ ಅಡಗಿಕೊಂಡಿದುದು (16-21).
03099001 ಲೋಮಶ ಉವಾಚ।
03099001a ತತಃ ಸ ವಜ್ರೀ ಬಲಿಭಿರ್ದೈವತೈರಭಿರಕ್ಷಿತಃ।
03099001c ಆಸಸಾದ ತತೋ ವೃತ್ರಂ ಸ್ಥಿತಮಾವೃತ್ಯ ರೋದಸೀ।।
03099002a ಕಾಲಕೇಯೈರ್ಮಹಾಕಾಯೈಃ ಸಮಂತಾದಭಿರಕ್ಷಿತಂ।
03099002c ಸಮುದ್ಯತಪ್ರಹರಣೈಃ ಸಶೃಂಗೈರಿವ ಪರ್ವತೈಃ।।
ಲೋಮಶನು ಹೇಳಿದನು: “ಅನಂತರ ಆ ವಜ್ರಿಯು ಬಲಶಾಲಿ ದೇವತೆಗಳ ರಕ್ಷಣೆಯಲ್ಲಿ ಪರ್ವತ ಶೃಂಗಗಳಂತೆ ಮಹಾಕಾಯರಾದ, ಆಯುಧಗಳನ್ನು ಎತ್ತಿಹಿಡಿದ ಕಾಲಕೇಯರ ಒಗ್ಗಟ್ಟಿನ ರಕ್ಷಣೆಯಲ್ಲಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸಿ ಬರುತ್ತಿರುವ ವೃತ್ರನನ್ನು ಎದುರಿಸಿದನು.
03099003a ತತೋ ಯುದ್ಧಂ ಸಮಭವದ್ದೇವಾನಾಂ ಸಹ ದಾನವೈಃ।
03099003c ಮುಹೂರ್ತಂ ಭರತಶ್ರೇಷ್ಠ ಲೋಕತ್ರಾಸಕರಂ ಮಹತ್।।
ಭರತಶ್ರೇಷ್ಠ! ತಕ್ಷಣವೇ ದೇವತೆಗಳೊಂದಿಗೆ ದಾನವರ ಲೋಕಕ್ಕೇ ಮಹಾ ಸಂಕಟವನ್ನು ತಂದ ಯುದ್ಧವು ಪ್ರಾರಂಭವಾಯಿತು.
03099004a ಉದ್ಯತಪ್ರತಿಪಿಷ್ಟಾನಾಂ ಖಡ್ಗಾನಾಂ ವೀರಬಾಹುಭಿಃ।
03099004c ಆಸೀತ್ಸುತುಮುಲಃ ಶಬ್ಧಃ ಶರೀರೇಷ್ವಭಿಪಾತ್ಯತಾಂ।।
ತಮ್ಮ ವೀರಬಾಹುಗಳಿಂದ ಖಡ್ಗಗಳನ್ನು ಮೇಲೆತ್ತಿ, ಗುಂಪಾಗಿ ಯುದ್ಧಕ್ಕೆ ಬಂದು ಎರಗುವಾಗ ಪರಸ್ಪರರ ಶರೀರಗಳು ಒಂದಕ್ಕೊಂದು ತಾಗಿ ಶಬ್ಧದ ತುಮುಲವುಂಟಾಯಿತು.
03099005a ಶಿರೋಭಿಃ ಪ್ರಪತದ್ಭಿಶ್ಚ ಅಂತರಿಕ್ಷಾನ್ಮಹೀತಲಂ।
03099005c ತಾಲೈರಿವ ಮಹೀಪಾಲ ವೃಂತಾದ್ಭ್ರಷ್ಟೈರದೃಶ್ಯತ।।
ಅಂತರಿಕ್ಷದಿಂದ ಭೂಮಿಯ ಮೇಲೆ ಉರುಳುತ್ತಿದ್ದ ಶಿರಗಳು ತಾಲವೃಕ್ಷದಿಂದ ಉದುರಿ ಕೆಳಗೆ ಬೀಳುತ್ತಿದ್ದ ತಾಳೆಕಾಯಿಗಳಂತೆ ಕಂಡವು.
03099006a ತೇ ಹೇಮಕವಚಾ ಭೂತ್ವಾ ಕಾಲೇಯಾಃ ಪರಿಘಾಯುಧಾಃ।
03099006c ತ್ರಿದಶಾನಭ್ಯವರ್ತಂತ ದಾವದಗ್ಧಾ ಇವಾದ್ರಯಃ।।
ಬಂಗಾರದ ಕವಚಗಳನ್ನು ಧರಿಸಿದ್ದ ಕಾಲಕೇಯರು ಪರಿಘಾಯುಧಗಳನ್ನು ಹಿಡಿದು ಬೆಟ್ಟಕ್ಕೆ ತಗುಲಿದ ಕಾಡ್ಗಿಚ್ಚಿನಂತೆ ದೇವತೆಗಳಮೇಲೆ ಎರಗಿದರು.
03099007a ತೇಷಾಂ ವೇಗವತಾಂ ವೇಗಂ ಸಹಿತಾನಾಂ ಪ್ರಧಾವತಾಂ।
03099007c ನ ಶೇಕುಸ್ತ್ರಿದಶಾಃ ಸೋಢುಂ ತೇ ಭಗ್ನಾಃ ಪ್ರಾದ್ರವನ್ಭಯಾತ್।।
ವೇಗದಿಂದ ಓಡಿ ಬರುತ್ತಿರುವ ಅವರ ವೇಗವನ್ನು ಸಹಿಸಲಾರದೇ, ಅವರ ಸೇನೆಯನ್ನು ಒಡೆದು ಮುನ್ನುಗ್ಗಲಾರದೇ ದೇವತೆಗಳ ಸೇನೆಯು ಒಡೆದು ಭಯದಿಂದ ಪಲಾಯನಗೈಯಿತು.
03099008a ತಾನ್ದೃಷ್ಟ್ವಾ ದ್ರವತೋ ಭೀತಾನ್ಸಹಸ್ರಾಕ್ಷಃ ಪುರಂದರಃ।
03099008c ವೃತ್ರೇ ವಿವರ್ಧಮಾನೇ ಚ ಕಶ್ಮಲಂ ಮಹದಾವಿಶತ್।।
ಭಯಭೀತರಾಗಿ ಈ ರೀತಿ ಅವರು ಪಲಾಯನಮಾಡುತ್ತಿರುವುದನ್ನು ಮತ್ತು ವೃತ್ರನು ಇನ್ನೂ ಅಧಿಕವಾಗಿ ಬೆಳೆಯುತ್ತಿರುವುದನ್ನು ಕಂಡ ಸಹಸ್ರಾಕ್ಷ ಪುರಂದರನು ಅತೀವ ದುಃಖಪರನಾದನು.
03099009a ತಂ ಶಕ್ರಂ ಕಶ್ಮಲಾವಿಷ್ಟಂ ದೃಷ್ಟ್ವಾ ವಿಷ್ಣುಃ ಸನಾತನಃ।
03099009c ಸ್ವತೇಜೋ ವ್ಯದಧಾಚ್ಛಕ್ರೇ ಬಲಮಸ್ಯ ವಿವರ್ಧಯನ್।।
ಕುಗ್ಗುತ್ತಿರುವ ಶಕ್ರನನ್ನು ನೋಡಿದ ಸನಾತನ ವಿಷ್ಣುವು ತನ್ನದೇ ತೇಜಸ್ಸನ್ನಿತ್ತು ಶಕ್ರನ ಬಲವನ್ನು ಹೆಚ್ಚಿಸಿದನು.
03099010a ವಿಷ್ಣುನಾಪ್ಯಾಯಿತಂ ಶಕ್ರಂ ದೃಷ್ಟ್ವಾ ದೇವಗಣಾಸ್ತತಃ।
03099010c ಸ್ವಂ ಸ್ವಂ ತೇಜಃ ಸಮಾದಧ್ಯುಸ್ತಥಾ ಬ್ರಹ್ಮರ್ಷಯೋಽಮಲಾಃ।।
ವಿಷ್ಣುವಿನಿಂದ ವೃದ್ಧಿಹೊಂದಿದ ಶಕ್ರನನ್ನು ನೋಡಿ ದೇವಗಣಗಳು ಮತ್ತು ಅಮಲ ಬ್ರಹ್ಮರ್ಷಿಗಳು ತಮ್ಮ ತಮ್ಮ ತೇಜಸ್ಸನ್ನು ಅವನಿಗೆ ನೀಡಿದರು.
03099011a ಸ ಸಮಾಪ್ಯಾಯಿತಃ ಶಕ್ರೋ ವಿಷ್ಣುನಾ ದೈವತೈಃ ಸಹ।
03099011c ಋಷಿಭಿಶ್ಚ ಮಹಾಭಾಗೈರ್ಬಲವಾನ್ಸಮಪದ್ಯತ।।
ವಿಷ್ಣು, ದೇವತೆಗಳು ಮತ್ತು ಮಹಾಭಾಗ ಋಷಿಗಳ ಸಹಾಯದಿಂದ ಶಕ್ರನ ಬಲವು ವೃದ್ಧಿಸಿತು.
03099012a ಜ್ಞಾತ್ವಾ ಬಲಸ್ಥಂ ತ್ರಿದಶಾಧಿಪಂ ತು। ನನಾದ ವೃತ್ರೋ ಮಹತೋ ನಿನಾದಾನ್।
03099012c ತಸ್ಯ ಪ್ರಣಾದೇನ ಧರಾ ದಿಶಶ್ಚ। ಖಂ ದ್ಯೌರ್ನಗಾಶ್ಚಾಪಿ ಚಚಾಲ ಸರ್ವಂ।।
ತ್ರಿದಶಾಧಿಪನು ಬಲಶಾಲಿಯಾದುದನ್ನು ತಿಳಿದ ವೃತ್ರನು ಮಹಾ ಗರ್ಜನೆಯನ್ನು ಗೈದನು. ಅವನ ನಿನಾದದಿಂದ ಭೂಮಿ, ದಿಕ್ಕುಗಳು, ಆಕಾಶ, ಸ್ವರ್ಗ ಮತ್ತು ಪರ್ವತಗಳು ಎಲ್ಲವೂ ತತ್ತರಿಸಿ ನಡುಗಿದವು.
03099013a ತತೋ ಮಹೇಂದ್ರಃ ಪರಮಾಭಿತಪ್ತಃ। ಶ್ರುತ್ವಾ ರವಂ ಘೋರರೂಪಂ ಮಹಾಂತಂ।
03099013c ಭಯೇ ನಿಮಗ್ನಸ್ತ್ವರಿತಂ ಮುಮೋಚ। ವಜ್ರಂ ಮಹತ್ತಸ್ಯ ವಧಾಯ ರಾಜನ್।।
ಆ ಘೋರರೂಪೀ ಮಹಾಕಾಯನ ರವವನ್ನು ಕೇಳಿದ ಪರಮಭೀತಪ್ತ ಮಹೇಂದ್ರನು ಭಯದಿಂದ ಅವಸರದಲ್ಲಿ ಅವನ ವಧೆಗೆಂದು ಮಹಾ ವಜ್ರವನ್ನು ಬಿಟ್ಟನು.
03099014a ಸ ಶಕ್ರವಜ್ರಾಭಿಹತಃ ಪಪಾತ। ಮಹಾಸುರಃ ಕಾಂಚನಮಾಲ್ಯಧಾರೀ।
03099014c ಯಥಾ ಮಹಾಂ ಶೈಲವರಃ ಪುರಸ್ತಾತ್। ಸ ಮಂದರೋ ವಿಷ್ಣುಕರಾತ್ಪ್ರಮುಕ್ತಃ।।
ಆ ಕಾಂಚನಮಾಲಧಾರಿ ಮಹಾಸುರನು ಶಕ್ರನ ವಜ್ರದಿಂದ ಹೊಡೆಯಲ್ಪಟ್ಟು, ಹಿಂದೆ ಪರ್ವತಗಳಲ್ಲಿ ಶ್ರೇಷ್ಠ ಮಹಾ ಪರ್ವತ ಮಂದರವು ವಿಷ್ಣುವಿನ ಕೈಯಿಂದ ಕಳಚಿ ಬಿದ್ದಂತೆ ಕೆಳಗುರುಳಿದನು.
03099015a ತಸ್ಮಿನ್ ಹತೇ ದೈತ್ಯವರೇ ಭಯಾರ್ತಃ। ಶಕ್ರಃ ಪ್ರದುದ್ರಾವ ಸರಃ ಪ್ರವೇಷ್ಟುಂ।
03099015c ವಜ್ರಂ ನ ಮೇನೇ ಸ್ವಕರಾತ್ಪ್ರಮುಕ್ತಂ। ವೃತ್ರಂ ಹತಂ ಚಾಪಿ ಭಯಾನ್ನ ಮೇನೇ।।
ಆ ದೈತ್ರಶ್ರೇಷ್ಠನು ಹತನಾದರೂ ಭಯಾರ್ತನಾದ ಶಕ್ರನು ಸರೋವರಕ್ಕೆ ಧುಮುಕಿ ಮುಳುಗಿದನು. ತನ್ನ ಕೈಯಿಂದಲೇ ಪ್ರಯೋಗಿಸಿದ್ದ ವಜ್ರವು ವೃತ್ರನನ್ನು ಕೊಲ್ಲುತ್ತದೆ ಎನ್ನುವುದರಲ್ಲಿ ನಂಬಿಕೆ ಇಲ್ಲದೆ ಭಯದಲ್ಲಿ ಹಾಗೆ ಮಾಡಿದನು.
03099016a ಸರ್ವೇ ಚ ದೇವಾ ಮುದಿತಾಃ ಪ್ರಹೃಷ್ಟಾ। ಮಹರ್ಷಯಶ್ಚೇಂದ್ರಮಭಿಷ್ಟುವಂತಃ।
03099016c ಸರ್ವಾಂಶ್ಚ ದೈತ್ಯಾಂಸ್ತ್ವರಿತಾಃ ಸಮೇತ್ಯ। ಜಘ್ನುಃ ಸುರಾ ವೃತ್ರವಧಾಭಿತಪ್ತಾನ್।।
ದೇವತೆಗಳೆಲ್ಲರೂ ಸಂತೋಷದಿಂದ ನಲಿದಾಡಿದರು. ಮಹರ್ಷಿಗಳು ಇಂದ್ರನನ್ನು ಕೊಂಡಾಡಿದರು. ಬೇಗನೇ ಎಲ್ಲ ಸುರರೂ ಸೇರಿ ವೃತ್ರನ ವಧೆಯಿಂದ ಪರಿತಪಿಸುತ್ತಿದ್ದ ದೈತ್ಯರನ್ನು ಸಂಹರಿಸಿದರು.
03099017a ತೇ ವಧ್ಯಮಾನಾಸ್ತ್ರಿದಶೈಸ್ತದಾನೀಂ। ಸಮುದ್ರಮೇವಾವಿವಿಶುರ್ಭಯಾರ್ತಾಃ।
03099017c ಪ್ರವಿಶ್ಯ ಚೈವೋದಧಿಮಪ್ರಮೇಯಂ। ಝಷಾಕುಲಂ ರತ್ನಸಮಾಕುಲಂ ಚ।।
ದೇವತೆಗಳಿಂದ ಹತರಾಗುತ್ತಿದ್ದ ಅವರು ಭಯಾರ್ತರಾಗಿ ಸಮುದ್ರವನ್ನು ಪ್ರವೇಶಿಸಿದರು. ರತ್ನದಿಂದೊಡಗೂಡಿದ, ತಿಮಿಂಗಿಲ ಸಂಕುಲಗಳಿಂದೊಡಗೂಡಿದ ಅಳತೆಯೇ ಇಲ್ಲದ ಆಳವನ್ನು ಪ್ರವೇಶಿಸಿದರು.
03099018a ತದಾ ಸ್ಮ ಮಂತ್ರಂ ಸಹಿತಾಃ ಪ್ರಚಕ್ರುಸ್। ತ್ರೈಲೋಕ್ಯನಾಶಾರ್ಥಮಭಿಸ್ಮಯಂತಃ।
03099018c ತತ್ರ ಸ್ಮ ಕೇ ಚಿನ್ಮತಿನಿಶ್ಚಯಜ್ಞಾಸ್। ತಾಂಸ್ತಾನುಪಾಯಾನನುವರ್ಣಯಂತಿ।।
ಅಲ್ಲಿ ಎಲ್ಲರೂ ಒಟ್ಟಿಗೆ ನಸುನಗುತ್ತಾ ಮೂರೂ ಲೋಕಗಳ ವಿನಾಶಾರ್ಥವಾಗಿ ಮಂತ್ರಾಲೋಚನೆ ಮಾಡಿದರು. ಅಲ್ಲಿ ಕೆಲವರು ಯೋಚಿಸಿ ನಿರ್ಧರಿಸುವವರಿದ್ದರೆ ಇತರರು ಆ ಉಪಾಯಗಳನ್ನು ಅನುಸರಿಸಿ ಕಾರ್ಯಗತಗೊಳಿಸುವವರಿದ್ದರು.
03099019a ತೇಷಾಂ ತು ತತ್ರ ಕ್ರಮಕಾಲಯೋಗಾದ್। ಘೋರಾ ಮತಿಶ್ಚಿಂತಯತಾಂ ಬಭೂವ।
03099019c ಯೇ ಸಂತಿ ವಿದ್ಯಾತಪಸೋಪಪನ್ನಾಸ್। ತೇಷಾಂ ವಿನಾಶಃ ಪ್ರಥಮಂ ತು ಕಾರ್ಯಃ।।
ಅಲ್ಲಿ ಚಿಂತಿಸಿದ ವಿಚಾರಗಳು ಕ್ರಮೇಣ ಕಾಲಯೋಗದಂತೆ ಘೋರವಾಯಿತು. ವಿದ್ಯೆ ತಪಸ್ಸಿನಲ್ಲಿ ನಿರತರಾದರ ವಿನಾಶವು ಮೊಟ್ಟ ಮೊದ ಕಾರ್ಯವಾಗಬೇಕೆಂದು ನಿಶ್ಚಯಿಸಿದರು.
03099020a ಲೋಕಾ ಹಿ ಸರ್ವೇ ತಪಸಾ ಧ್ರಿಯಂತೇ। ತಸ್ಮಾತ್ತ್ವರಧ್ವಂ ತಪಸಃ ಕ್ಷಯಾಯ।
03099020c ಯೇ ಸಂತಿ ಕೇ ಚಿದ್ಧಿ ವಸುಂಧರಾಯಾಂ। ತಪಸ್ವಿನೋ ಧರ್ಮವಿದಶ್ಚ ತಜ್ಜ್ಞಾಃ।।
03099020e ತೇಷಾಂ ವಧಃ ಕ್ರಿಯತಾಂ ಕ್ಷಿಪ್ರಮೇವ। ತೇಷು ಪ್ರನಷ್ಟೇಷು ಜಗತ್ಪ್ರನಷ್ಟಂ।
“ತಪಸ್ಸೇ ಈ ಸರ್ವ ಲೋಕಗಳನ್ನು ನಡೆಸುತ್ತಿದೆ. ಆದುದರಿಂದ ತಪಸ್ಸನ್ನು ನಾಶಪಡಿಸಲು ಅವಸರ ಮಾಡಬೇಕು. ಈ ಭೂಮಿಯಲ್ಲಿ ಎಷ್ಟು ಮಂದಿ ಯಾರ್ಯಾರು ಧರ್ಮವಿದುಗಳು, ತಪಸ್ವಿಗಳು, ತಿಳಿದಿರುವವರು ಇದ್ದಾರೋ ಅವರೆಲ್ಲರನ್ನೂ ಕ್ಷಿಪ್ರವಾಗಿ ವಧಿಸಬೇಕು. ಅವರು ನಾಶವಾದರೆ ಜಗತ್ತೇ ನಾಶವಾಗುತ್ತದೆ.”
03099021a ಏವಂ ಹಿ ಸರ್ವೇ ಗತಬುದ್ಧಿಭಾವಾ। ಜಗದ್ವಿನಾಶೇ ಪರಮಪ್ರಹೃಷ್ಟಾಃ।।
03099021c ದುರ್ಗಂ ಸಮಾಶ್ರಿತ್ಯ ಮಹೋರ್ಮಿಮಂತಂ। ರತ್ನಾಕರಂ ವರುಣಸ್ಯಾಲಯಂ ಸ್ಮ।
ಈ ರೀತಿ ಸಂತೋಷದಿಂದ ಜಗತ್ತಿನ ವಿನಾಶವನ್ನು ನಿರ್ಧರಿಸಿದ ಅವರೆಲ್ಲರೂ ರತ್ನಾಕರ ವರುಣಾಲಯವನ್ನು ತಮ್ಮ ಮಹಾ ಕೋಟೆಯನ್ನಾಗಿಸಿ ಆಶ್ರಯ ಹೊಂದಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಏಕೋನಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೊಂಭತ್ತನೆಯ ಅಧ್ಯಾಯವು.