ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 98
ಸಾರ
ವೃತ್ರನ ಆಶ್ರಯದಲ್ಲಿ ಕಾಲೇಯರೆಂಬ ಅಸುರರ ಬಾಧೆಗೊಳಗಾಗಿ ಸುರರು ಮೊರೆಬರಲು ಬ್ರಹ್ಮನು ಋಷಿ ದಧೀಚಿಯ ಅಸ್ತಿಗಳಿಂದ ತಯಾರಿಸಿದ ವಜ್ರಾಯುಧದಿಂದ ವೃತ್ರನ ವಧೆಯಾಗುವುದೆಂದು ಹೇಳುವುದು (1-11). ವಜ್ರಾಯುಧವನ್ನು ತಯಾರಿಸಿದುದು (12-24).
03098001 ಯುಧಿಷ್ಠಿರ ಉವಾಚ।
03098001a ಭೂಯ ಏವಾಹಮಿಚ್ಚಾಮಿ ಮಹರ್ಷೇಸ್ತಸ್ಯ ಧೀಮತಃ।
03098001c ಕರ್ಮಣಾಂ ವಿಸ್ತರಂ ಶ್ರೋತುಮಗಸ್ತ್ಯಸ್ಯ ದ್ವಿಜೋತ್ತಮ।।
ಯುಧಿಷ್ಠಿರನು ಹೇಳಿದನು: “ದ್ವಿಜೋತ್ತಮ! ಆ ಧೀಮಂತ ಮಹರ್ಷಿ ಅಗಸ್ತ್ಯನ ಇನ್ನೂ ಇತರ ಕರ್ಮಗಳನ್ನು ವಿಸ್ತಾರವಾಗಿ ಕೇಳಬಯಸುತ್ತೇನೆ.”
03098002 ಲೋಮಶ ಉವಾಚ।
03098002a ಶೃಣು ರಾಜನ್ಕಥಾಂ ದಿವ್ಯಾಮದ್ಭುತಾಮತಿಮಾನುಷೀಂ।
03098002c ಅಗಸ್ತ್ಯಸ್ಯ ಮಹಾರಾಜ ಪ್ರಭಾವಮಮಿತಾತ್ಮನಃ।।
ಲೋಮಶನು ಹೇಳಿದನು: “ರಾಜನ್! ಮಹಾರಾಜ! ದಿವ್ಯ, ಅದ್ಭುತ, ಅಮಾನುಷ ಬುದ್ಧಿಯುಳ್ಳ ಅಮಿತಾತ್ಮ ಅಗಸ್ತ್ಯನ ಪ್ರಭಾವದ ಕುರಿತು ಕೇಳು.
03098003a ಆಸನ್ಕೃತಯುಗೇ ಘೋರಾ ದಾನವಾ ಯುದ್ಧದುರ್ಮದಾಃ।
03098003c ಕಾಲೇಯಾ ಇತಿ ವಿಖ್ಯಾತಾ ಗಣಾಃ ಪರಮದಾರುಣಾಃ।।
ಕೃತಯುಗದಲ್ಲಿ ಕಾಲೇಯರೆಂದು ವಿಖ್ಯಾತ ಯುದ್ಧ ದುರ್ಮದ ಘೋರ, ಪರಮ ದಾರುಣ ದಾನವರ ಗಣವಿತ್ತು.
03098004a ತೇ ತು ವೃತ್ರಂ ಸಮಾಶ್ರಿತ್ಯ ನಾನಾಪ್ರಹರಣೋದ್ಯತಾಃ।
03098004c ಸಮಂತಾತ್ಪರ್ಯಧಾವಂತ ಮಹೇಂದ್ರಪ್ರಮುಖಾನ್ಸುರಾನ್।।
ಅವರೆಲ್ಲರೂ ಒಂದಾಗಿ ವೃತ್ರನ ಆಶ್ರಯದಲ್ಲಿ ನಾನಾ ಆಯುಧಗಳೊಂದಿಗೆ ದಂಗೆಯೆದ್ದು ಮಹೇಂದ್ರನ ನೇತೃತ್ವದಲ್ಲಿದ್ದ ಸುರರ ಮೇಲೆ ಧಾಳಿಮಾಡಿದರು.
03098005a ತತೋ ವೃತ್ರವಧೇ ಯತ್ನಮಕುರ್ವಂಸ್ತ್ರಿದಶಾಃ ಪುರಾ।
03098005c ಪುರಂದರಂ ಪುರಸ್ಕೃತ್ಯ ಬ್ರಹ್ಮಾಣಮುಪತಸ್ಥಿರೇ।।
ಆಗ ವೃತ್ರನನ್ನು ಕೊಲ್ಲಲು ಮೊದಲೇ ಪ್ರಯತ್ನಮಾಡಿದ್ದ ಮೂವತ್ತು ದೇವತೆಗಳು ಪುರಂದರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಉಪಸ್ಥಿತಿಗೆ ಬಂದರು.
03098006a ಕೃತಾಂಜಲೀಂಸ್ತು ತಾನ್ಸರ್ವಾನ್ಪರಮೇಷ್ಠೀ ಉವಾಚ ಹ।
03098006c ವಿದಿತಂ ಮೇ ಸುರಾಃ ಸರ್ವಂ ಯದ್ವಃ ಕಾರ್ಯಂ ಚಿಕೀರ್ಷಿತಂ।।
ಕೈಜೋಡಿಸಿದ ಅವರೆಲ್ಲರಿಗೆ ಪರಮೇಷ್ಠಿಯು ಹೇಳಿದನು: “ಸುರರೇ! ನೀವು ಏನು ಮಾಡಬೇಕೆಂದಿರುವಿರೆಂದು ನನಗೆ ತಿಳಿದಿದೆ.
03098007a ತಮುಪಾಯಂ ಪ್ರವಕ್ಷ್ಯಾಮಿ ಯಥಾ ವೃತ್ರಂ ವಧಿಷ್ಯಥ।
03098007c ದಧೀಚ ಇತಿ ವಿಖ್ಯಾತೋ ಮಹಾನೃಷಿರುದಾರಧೀಃ।।
ವೃತ್ರನನ್ನು ಕೊಲ್ಲುವ ಉಪಾಯವನ್ನು ಹೇಳುತ್ತೇನೆ. ದಧೀಚ ಎಂದು ವಿಖ್ಯಾತನಾದ ಉದಾರಬುದ್ಧಿಯ ಮಹಾ ಋಷಿಯಿದ್ದಾನೆ.
03098008a ತಂ ಗತ್ವಾ ಸಹಿತಾಃ ಸರ್ವೇ ವರಂ ವೈ ಸಂಪ್ರಯಾಚತ।
03098008c ಸ ವೋ ದಾಸ್ಯತಿ ಧರ್ಮಾತ್ಮಾ ಸುಪ್ರೀತೇನಾಂತರಾತ್ಮನಾ।।
ನೀವೆಲ್ಲರೂ ಅವನಲ್ಲಿಗೆ ಹೋಗಿ ವರವೊಂದನ್ನು ಕೇಳಿಕೊಳ್ಳಿ. ಆ ಧರ್ಮಾತ್ಮನು ಅಂತರಾತ್ಮದಲ್ಲಿಯ ಸಂತೋಷದಿಂದ ನಿಮಗೆ ಅದನ್ನು ನೀಡುತ್ತಾನೆ.
03098009a ಸ ವಾಚ್ಯಃ ಸಹಿತೈಃ ಸರ್ವೈರ್ಭವದ್ಭಿರ್ಜಯಕಾಂಕ್ಷಿಭಿಃ।
03098009c ಸ್ವಾನ್ಯಸ್ಥೀನಿ ಪ್ರಯಚ್ಚೇತಿ ತ್ರೈಲೋಕ್ಯಸ್ಯ ಹಿತಾಯ ವೈ।
03098009e ಸ ಶರೀರಂ ಸಮುತ್ಸೃಜ್ಯ ಸ್ವಾನ್ಯಸ್ಥೀನಿ ಪ್ರದಾಸ್ಯತಿ।।
ನೀವು ಎಲ್ಲರೂ ಒಟ್ಟಿಗೇ ವಿಜಯಾಕಾಂಕ್ಷಿಗಳಾಗಿ ತ್ರಿಲೋಕಗಳ ಹಿತಕ್ಕಾಗಿ ನಿನ್ನ ಅಸ್ಥಿಯನ್ನು ಕೊಡು ಎಂದು ಕೇಳಿಕೊಂಡರೆ ಅವನು ತನ್ನ ಶರೀರವನ್ನು ತೊರೆದು ನಿಮಗೆ ಅವನ ಅಸ್ತಿಯನ್ನು ನೀಡುತ್ತಾನೆ.
03098010a ತಸ್ಯಾಸ್ಥಿಭಿರ್ಮಹಾಘೋರಂ ವಜ್ರಂ ಸಂಭ್ರಿಯತಾಂ ದೃಢಂ।
03098010c ಮಹಚ್ಛತ್ರುಹಣಂ ತೀಕ್ಷ್ಣಂ ಷಡಶ್ರಂ ಭೀಮನಿಸ್ವನಂ।।
ಅವನ ಅಸ್ತಿಯಿಂದ ಮಹಾಘೋರ, ಧೃಢವಾದ, ತೀಕ್ಷ್ಣವಾದ, ಆರು ಅರಗಳುಳ್ಳ, ಭಯಂಕರ ಶಬ್ಧವನ್ನುಳ್ಳ ಮಹಾಶತ್ರುವನ್ನು ಸಂಹರಿಸಬಲ್ಲ ವಜ್ರಾಯುಧವನ್ನು ತಯಾರಿಸಿರಿ.
03098011a ತೇನ ವಜ್ರೇಣ ವೈ ವೃತ್ರಂ ವಧಿಷ್ಯತಿ ಶತಕ್ರತುಃ।
03098011c ಏತದ್ವಃ ಸರ್ವಮಾಖ್ಯಾತಂ ತಸ್ಮಾಚ್ಶೀಘ್ರಂ ವಿಧೀಯತಾಂ।।
ಈ ವಜ್ರದಿಂದ ಶತಕ್ರತುವು ಆ ವೃತ್ರನನ್ನು ವಧಿಸುತ್ತಾನೆ. ನಿಮಗೆ ಎಲ್ಲವನ್ನೂ ಹೇಳಿ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ಇದನ್ನು ಕಾರ್ಯಗತಗೊಳಿಸಿ.”
03098012a ಏವಮುಕ್ತಾಸ್ತತೋ ದೇವಾ ಅನುಜ್ಞಾಪ್ಯ ಪಿತಾಮಹಂ।
03098012c ನಾರಾಯಣಂ ಪುರಸ್ಕೃತ್ಯ ದಧೀಚಸ್ಯಾಶ್ರಮಂ ಯಯುಃ।।
03098013a ಸರಸ್ವತ್ಯಾಃ ಪರೇ ಪಾರೇ ನಾನಾದ್ರುಮಲತಾವೃತಂ।
ಈ ರೀತಿ ಹೇಳಲು ದೇವತೆಗಳು ಪಿತಾಮಹನಿಂದ ಬೀಳ್ಕೊಂಡು ನಾರಾಯಣನನ್ನು ಮುಂದಿಟ್ಟುಕೊಂಡು ಸರಸ್ವತೀ ನದಿಯ ಆಚೆಯ ದಡದಲ್ಲಿರುವ ನಾನಾ ಮರ ಬಳ್ಳಿಗಳಿಂದ ಆವೃತವಾದ ದಧೀಚಿಯ ಆಶ್ರಮಕ್ಕೆ ಬಂದರು.
03098013c ಷಟ್ಪದೋದ್ಗೀತನಿನದೈರ್ವಿಘುಷ್ಟಂ ಸಾಮಗೈರಿವ।।
03098013e ಪುಂಸ್ಕೋಕಿಲರವೋನ್ಮಿಶ್ರಂ ಜೀವಂಜೀವಕನಾದಿತಂ।।
ಆ ಆಶ್ರಮವು ಸಾಮಗಾನದಂತಿರುವ ದುಂಬಿಗಳ ಗೀತನಾದದಿಂದ ತುಂಬಿತ್ತು. ಗಂಡು ಕೋಕಿಲಗಳ ಕಲರವದಿಂದ ಮಿಶ್ರಿತವಾಗಿತ್ತು ಮತ್ತು ಕೀಟಗಳ ಝೀಂಕಾರದಿಂದ ತುಂಬಿತ್ತು.
03098014a ಮಹಿಷೈಶ್ಚ ವರಾಹೈಶ್ಚ ಸೃಮರೈಶ್ಚಮರೈರಪಿ।
03098014c ತತ್ರ ತತ್ರಾನುಚರಿತಂ ಶಾರ್ದೂಲಭಯವರ್ಜಿತೈಃ।।
ಅಲ್ಲಿ ಎಮ್ಮೆ, ಹಂದಿ, ಜಿಂಕೆಗಳು ಶಾರ್ದೂಲಗಳ ಭಯವನ್ನು ತೊರೆದು ಅಲ್ಲಲ್ಲಿ ಸಂಚರಿಸುತ್ತಿದ್ದವು.
03098015a ಕರೇಣುಭಿರ್ವಾರಣೈಶ್ಚ ಪ್ರಭಿನ್ನಕರಟಾಮುಖೈಃ।
03098015c ಸರೋಽವಗಾಢೈಃ ಕ್ರೀಡದ್ಭಿಃ ಸಮಂತಾದನುನಾದಿತಂ।।
ಕೆನ್ನೆಗಳು ಒಡೆದು ಮದವನ್ನು ಸುರಿಸುತ್ತಿರುವ ಗಂಡು ಆನೆಗಳು ಹೆಣ್ಣು ಆನೆಗಳೊಂದಿಗೆ ಕೆರೆಗಳಲ್ಲಿ ಧುಮುಕಿ ಆಡುತ್ತಾ ಒಟ್ಟಿಗೇ ನಿನಾದಿಸುತ್ತಿದ್ದವು.
03098016a ಸಿಂಹವ್ಯಾಘ್ರೈರ್ಮಹಾನಾದಾನ್ನದದ್ಭಿರನುನಾದಿತಂ।
03098016c ಅಪರೈಶ್ಚಾಪಿ ಸಂಲೀನೈರ್ಗುಹಾಕಂದರವಾಸಿಭಿಃ।।
ಸಿಂಹ, ಹುಲಿ ಮತ್ತು ಗುಹೆಗಳಲ್ಲಿ ವಾಸಿಸುವ ಇತರ ಪ್ರಾಣಿಗಳ ಮಹಾನಾದದಿಂದ ಆ ಆಶ್ರಮವು ಭೋರ್ಗರೆಯುತ್ತಿತ್ತು.
03098017a ತೇಷು ತೇಷ್ವವಕಾಶೇಷು ಶೋಭಿತಂ ಸುಮನೋರಮಂ।
03098017c ತ್ರಿವಿಷ್ಟಪಸಮಪ್ರಖ್ಯಂ ದಧೀಚಾಶ್ರಮಮಾಗಮನ್।।
ಈ ರೀತಿ ಸುಮನೋಹರವಾಗಿ ಶೋಭಿಸುತ್ತಿದ್ದ ದಧೀಚಿಯ ಆಶ್ರಮಕ್ಕೆ ತ್ರಿವಿಷ್ಟಪರು ಆಗಮಿಸಿದರು.
03098018a ತತ್ರಾಪಶ್ಯನ್ದಧೀಚಂ ತೇ ದಿವಾಕರಸಮದ್ಯುತಿಂ।
03098018c ಜಾಜ್ವಲ್ಯಮಾನಂ ವಪುಷಾ ಯಥಾ ಲಕ್ಷ್ಮ್ಯಾ ಪಿತಾಮಹಂ।।
ಅಲ್ಲಿ ದಿವಾಕರನಂತೆ ಬೆಳಗುತ್ತಿದ್ದ, ಲಕ್ಷ್ಮಿಯೊಂದಿಗೆ ಪಿತಾಮಹನಂತೆ ಜಾಜ್ವಲ್ಯಮಾನನಾದ ದಧೀಚಿಯನ್ನು ನೋಡಿದರು.
03098019a ತಸ್ಯ ಪಾದೌ ಸುರಾ ರಾಜನ್ನಭಿವಾದ್ಯ ಪ್ರಣಮ್ಯ ಚ।
03098019c ಅಯಾಚಂತ ವರಂ ಸರ್ವೇ ಯಥೋಕ್ತಂ ಪರಮೇಷ್ಠಿನಾ।।
ರಾಜನ್! ಸುರರು ಅವನ ಪಾದಗಳಿಂದ ತಲೆಬಾಗಿ ವಂದಿಸಿದರು ಮತ್ತು ಅವರೆಲ್ಲರೂ ಪರಮೇಷ್ಠಿಯು ಹೇಳಿದಂತೆ ಅವನಲ್ಲಿ ವರವನ್ನು ಬೇಡಿದರು.
03098020a ತತೋ ದಧೀಚಃ ಪರಮಪ್ರತೀತಃ। ಸುರೋತ್ತಮಾಂಸ್ತಾನಿದಮಭ್ಯುವಾಚ।
03098020c ಕರೋಮಿ ಯದ್ವೋ ಹಿತಮದ್ಯ ದೇವಾಃ। ಸ್ವಂ ಚಾಪಿ ದೇಹಂ ತ್ವಹಮುತ್ಸೃಜಾಮಿ।।
ಆಗ ಪರಮಪ್ರೀತನಾದ ದಧೀಚಿಯು ಆ ಸುರೋತ್ತಮರಿಗೆ ಹೇಳಿದನು: “ನಿಮಗೆ ಹಿತವಾದುದನ್ನು ನಾನು ಇಂದು ಮಾಡುತ್ತೇನೆ. ನಿಮಗೋಸ್ಕರ ನನ್ನ ದೇಹವನ್ನೂ ತ್ಯಜಿಸುತ್ತೇನೆ.”
03098021a ಸ ಏವಮುಕ್ತ್ವಾ ದ್ವಿಪದಾಂ ವರಿಷ್ಠಃ। ಪ್ರಾಣಾನ್ವಶೀ ಸ್ವಾನ್ಸಹಸೋತ್ಸಸರ್ಜ।
03098021c ತತಃ ಸುರಾಸ್ತೇ ಜಗೃಹುಃ ಪರಾಸೋರ್। ಅಸ್ಥೀನಿ ತಸ್ಯಾಥ ಯಥೋಪದೇಶಂ।।
ಹೀಗೆ ಹೇಳಿದ ಆ ಮನುಷ್ಯರಲ್ಲಿಯೇ ಶ್ರೇಷ್ಠ ನಿಯಂತ್ರಕನು ತನ್ನ ಪ್ರಾಣವನ್ನು ತಕ್ಷಣವೇ ತ್ಯಜಿಸಿದನು. ಅನಂತರ ಸುರರು ಸಂತೋಷ ಮತ್ತು ಭರವಸೆಗಳೊಂದಿಗೆ ಅವನ ಅಸ್ತಿಯನ್ನು ಬ್ರಹ್ಮನ ಉಪದೇಶದಂತೆ ತೆಗೆದರು.
03098022a ಪ್ರಹೃಷ್ಟರೂಪಾಶ್ಚ ಜಯಾಯ ದೇವಾಸ್। ತ್ವಷ್ಟಾರಮಾಗಮ್ಯ ತಮರ್ಥಮೂಚುಃ।
03098022c ತ್ವಷ್ಟಾ ತು ತೇಷಾಂ ವಚನಂ ನಿಶಮ್ಯ। ಪ್ರಹೃಷ್ಟರೂಪಃ ಪ್ರಯತಃ ಪ್ರಯತ್ನಾತ್।।
ಜಯವು ದೊರೆಯುವುದೆಂಬ ಸಂತೋಷದಿಂದ ದೇವತೆಗಳು ತ್ವಷ್ಟಾರನಲ್ಲಿಗೆ ಹೋಗಿ ಅವನಿಗೆ ವಿವರಿಸಿ ಹೇಳಿದರು. ಅವರ ವಚನವನ್ನು ಕೇಳಿದ ತ್ವಷ್ಟನು ಸಂತೋಷದಿಂದ, ಪ್ರಯತ್ನದಿಂದ ಕೆಲಸದಲ್ಲಿ ತೊಡಗಿದನು.
03098023a ಚಕಾರ ವಜ್ರಂ ಭೃಶಮುಗ್ರರೂಪಂ। ಕೃತ್ವಾ ಚ ಶಕ್ರಂ ಸ ಉವಾಚ ಹೃಷ್ಟಃ।
03098023c ಅನೇನ ವಜ್ರಪ್ರವರೇಣ ದೇವ। ಭಸ್ಮೀಕುರುಷ್ವಾದ್ಯ ಸುರಾರಿಮುಗ್ರಂ।।
ಹರಿತವಾದ ಉಗ್ರರೂಪದ ಹರಿತ ವಜ್ರವನ್ನು ತಯಾರಿಸಿ ಸಂತೋಷದಿಂದ ಇಂದ್ರನಿಗೆ ಹೇಳಿದನು: “ದೇವ! ಈ ಶ್ರೇಷ್ಠ ವಜ್ರದಿಂದ ಉಗ್ರ ಸುರಾರಿಗಳನ್ನು ಇಂದು ಭಸ್ಮಮಾಡು!
03098024a ತತೋ ಹತಾರಿಃ ಸಗಣಃ ಸುಖಂ ವೈ। ಪ್ರಶಾಧಿ ಕೃತ್ಸ್ನಂ ತ್ರಿದಿವಂ ದಿವಿಷ್ಠಃ।
03098024c ತ್ವಷ್ಟ್ರಾ ತಥೋಕ್ತಃ ಸ ಪುರಂದರಸ್ತು। ವಜ್ರಂ ಪ್ರಹೃಷ್ಟಃ ಪ್ರಯತೋಽಭ್ಯಗೃಹ್ಣಾತ್।।
ಅವರನ್ನು ಸಂಹರಿಸಿ ನೀನು ನಿನ್ನ ಗಣಗಳೊಂದಿಗೆ ತ್ರಿದಿವದಲ್ಲಿ ಸುಖವಾಗಿ ವಿರಾಜಿಸು.” ತ್ವಷ್ಟನು ಹೀಗೆ ಹೇಳಲು ಪುರಂದರನು ಸಂತೋಷದಿಂದ ವಿನೀತನಾಗಿ ವಜ್ರವನ್ನು ಹಿಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಅಷ್ಟನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೆಂಟನೆಯ ಅಧ್ಯಾಯವು.