097 ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 97

ಸಾರ

ತಮ್ಮ ವಾತಾಪಿಯನ್ನು ಜೀರ್ಣಿಸಿಕೊಂಡ ಅಗಸ್ತ್ಯನಲ್ಲಿ ಇಲ್ವಲನು ಬಂದ ಕಾರಣವನ್ನು ಕೇಳಿಕೊಳ್ಳುವುದು (1-8). ಅಗಸ್ತ್ಯನು ಇಲ್ವಲನಿಂದ ತನಗೂ ಮತ್ತು ಜೊತೆಯಲ್ಲಿ ಬಂದಿರುವ ರಾಜರಿಗೂ ಧನವನ್ನು ಪಡೆದು ಲೋಪಾಮುದ್ರೆಯಲ್ಲಿಗೆ ಮರಳಿದುದು (9-16). ಅಗಸ್ತ್ಯನಿಗೆ ಲೋಪಾಮುದ್ರೆಯಲ್ಲಿ ದೃಢಸ್ಯು ಎಂಬ ಮಗನ ಜನನ (17-27).

03097001 ಲೋಮಶ ಉವಾಚ।
03097001a ಇಲ್ವಲಸ್ತಾನ್ವಿದಿತ್ವಾ ತು ಮಹರ್ಷಿಸಹಿತಾನ್ನೃಪಾನ್।
03097001c ಉಪಸ್ಥಿತಾನ್ಸಹಾಮಾತ್ಯೋ ವಿಷಯಾಂತೇಽಭ್ಯಪೂಜಯತ್।।

ಲೋಮಶನು ಹೇಳಿದನು: “ನೃಪರೊಂದಿಗೆ ಮಹರ್ಷಿಯು ಬಂದಿದ್ದಾನೆ ಎಂದು ತಿಳಿದ ಇಲ್ವಲನು ಅಮಾತ್ಯರೊಂದಿಗೆ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರನ್ನು ಪೂಜಿಸಿ ಬರಮಾಡಿಕೊಂಡನು.

03097002a ತೇಷಾಂ ತತೋಽಸುರಶ್ರೇಷ್ಠ ಆತಿಥ್ಯಮಕರೋತ್ತದಾ।
03097002c ಸ ಸಂಸ್ಕೃತೇನ ಕೌರವ್ಯ ಭ್ರಾತ್ರಾ ವಾತಾಪಿನಾ ಕಿಲ।।

ಕೌರವ್ಯ! ಆ ಅಸುರಶ್ರೇಷ್ಠನು ಅವರಿಗೆ ಆತಿಥ್ಯವನ್ನು ನೀಡಿದನು ಮತ್ತು ತನ್ನ ತಮ್ಮ ವಾತಾಪಿಯನ್ನೇ ಅಡುಗೆ ಮಾಡಿ ಅವರಿಗೆ ಬಡಿಸಿದನು.

03097003a ತತೋ ರಾಜರ್ಷಯಃ ಸರ್ವೇ ವಿಷಣ್ಣಾ ಗತಚೇತಸಃ।
03097003c ವಾತಾಪಿಂ ಸಂಸ್ಕೃತಂ ದೃಷ್ಟ್ವಾ ಮೇಷಭೂತಂ ಮಹಾಸುರಂ।।

ಆಗ ಎಲ್ಲ ರಾಜರ್ಷಿಗಳೂ ಮಹಾಸುರ ವಾತಾಪಿಯನ್ನು ಕುರಿಯ ಮಾಂಸದಂತೆ ಅಡುಗೆಮಾಡಿದ್ದುದನ್ನು ನೋಡಿ ವಿಷಣ್ಣರಾಗಿ ಮೂರ್ಛಿತರಾದರು.

03097004a ಅಥಾಬ್ರವೀದಗಸ್ತ್ಯಸ್ತಾನ್ರಾಜರ್ಷೀನೃಷಿಸತ್ತಮಃ।
03097004c ವಿಷಾದೋ ವೋ ನ ಕರ್ತವ್ಯೋ ಅಹಂ ಭೋಕ್ಷ್ಯೇ ಮಹಾಸುರಂ।।

ಋಷಿಸತ್ತಮ ಅಗಸ್ತ್ಯನು ಆ ರಾಜರ್ಷಿಗಳಿಗೆ ಹೇಳಿದನು: “ವಿಷಾದಿಸ ಬೇಡಿ. ಈ ಮಹಾಸುರನನ್ನು ನಾನು ತಿನ್ನುತ್ತೇನೆ!”

03097005a ಧುರ್ಯಾಸನಮಥಾಸಾದ್ಯ ನಿಷಸಾದ ಮಹಾಮುನಿಃ।
03097005c ತಂ ಪರ್ಯವೇಷದ್ದೈತ್ಯೇಂದ್ರ ಇಲ್ವಲಃ ಪ್ರಹಸನ್ನಿವ।।

ಮಹಾಮುನಿಯು ಉತ್ತಮ ಆಸನವನ್ನು ಹಿಡಿದು ಕುಳಿತುಕೊಂಡನಂತರ ದೈತ್ಯೇಂದ್ರ ಇಲ್ವಲನು ನಸುನಗುತ್ತಾ ಬಡಿಸಿದನು.

03097006a ಅಗಸ್ತ್ಯ ಏವ ಕೃತ್ಸ್ನಂ ತು ವಾತಾಪಿಂ ಬುಭುಜೇ ತತಃ।
03097006c ಭುಕ್ತವತ್ಯಸುರೋಽಹ್ವಾನಮಕರೋತ್ತಸ್ಯ ಇಲ್ವಲಃ।।

ಅಗಸ್ತ್ಯನು ವಾತಾಪಿಯನ್ನು ಸಂಪೂರ್ಣವಾಗಿ ಭುಂಜಿಸಿದನು. ಅವನು ಊಟವನ್ನು ಮುಗಿಸಿದ ನಂತರ ಅಸುರ ಇಲ್ವಲನು ತನ್ನ ತಮ್ಮನನ್ನು ಕೂಗಿ ಕರೆದನು.

03097007a ತತೋ ವಾಯುಃ ಪ್ರಾದುರಭೂದಗಸ್ತ್ಯಸ್ಯ ಮಹಾತ್ಮನಃ।
03097007c ಇಲ್ವಲಶ್ಚ ವಿಷಣ್ಣೋಽಭೂದ್ದೃಷ್ಟ್ವಾ ಜೀರ್ಣಂ ಮಹಾಸುರಂ।।

ಆಗ ಮಹಾತ್ಮ ಅಗಸ್ತ್ಯನು ತೇಗು ಬಿಟ್ಟನು. ಆ ಮಹಾಸುರನನ್ನು ಜೀರ್ಣಗೊಳಿಸಿಕೊಂಡಿದುದನ್ನು ಕಂಡು ಇಲ್ವಲನು ವಿಷಣ್ಣನಾದನು.

03097008a ಪ್ರಾಂಜಲಿಶ್ಚ ಸಹಾಮಾತ್ಯೈರಿದಂ ವಚನಮಬ್ರವೀತ್।
03097008c ಕಿಮರ್ಥಮುಪಯಾತಾಃ ಸ್ಥ ಬ್ರೂತ ಕಿಂ ಕರವಾಣಿ ವಃ।।

ಅವನು ಅಮಾತ್ಯರೊಂದಿಗೆ ಕೈಜೋಡಿಸಿ ಹೀಗೆ ಹೇಳಿದನು: “ನೀವು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀರಿ? ನಾನು ನಿಮಗೆ ಏನು ಮಾಡಬೇಕು?”

03097009a ಪ್ರತ್ಯುವಾಚ ತತೋಽಗಸ್ತ್ಯಃ ಪ್ರಹಸನ್ನಿಲ್ವಲಂ ತದಾ।
03097009c ಈಶಂ ಹ್ಯಸುರ ವಿದ್ಮಸ್ತ್ವಾಂ ವಯಂ ಸರ್ವೇ ಧನೇಶ್ವರಂ।।

ಆಗ ಅಗಸ್ತ್ಯನು ನಸುನಗುತ್ತಾ ಉತ್ತರಿಸಿದನು: “ಅಸುರ! ನೀನು ತುಂಬಾ ಧನೇಶ್ವರನೆಂದು ನಾವೆಲ್ಲರೂ ತಿಳಿದಿದ್ದೇವ್ತೆ

03097010a ಇಮೇ ಚ ನಾತಿಧನಿನೋ ಧನಾರ್ಥಶ್ಚ ಮಹಾನ್ಮಮ।
03097010c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ।।

ನನಗೆ ಧನದ ತುಂಬಾ ಅವಶ್ಯಕತೆಯಿದೆ. ಇನ್ನೊಬ್ಬರಿಗೆ ಹಿಂಸೆಯಾಗದ ರೀತಿಯಲ್ಲಿ ನಿನ್ನ ಧನದ ಭಾಗವೊಂದನ್ನು ಯಥಾಶಕ್ತಿಯಾಗಿ ನೀಡು.”

03097011a ತತೋಽಭಿವಾದ್ಯ ತಮೃಷಿಮಿಲ್ವಲೋ ವಾಕ್ಯಮಬ್ರವೀತ್।
03097011c ದಿತ್ಸಿತಂ ಯದಿ ವೇತ್ಸಿ ತ್ವಂ ತತೋ ದಾಸ್ಯಾಮಿ ತೇ ವಸು।।

ಆಗ ಆ ಋಷಿಗೆ ನಮಸ್ಕರಿಸಿ ಇಲ್ವಲನು ಹೇಳಿದನು: “ನಾನು ಏನನ್ನು ಕೊಡಬೇಕೆಂದಿರುವೆನೋ ಅದು ನಿನಗೆ ತಿಳಿದಿದ್ದರೆ ಆ ಸಂಪತ್ತನ್ನು ನಿನಗೆ ನೀಡುತ್ತೇನೆ.”

03097012 ಅಗಸ್ತ್ಯ ಉವಾಚ।
03097012a ಗವಾಂ ದಶ ಸಹಸ್ರಾಣಿ ರಾಜ್ಞಾಮೇಕೈಕಶೋಽಸುರ।
03097012c ತಾವದೇವ ಸುವರ್ಣಸ್ಯ ದಿತ್ಸಿತಂ ತೇ ಮಹಾಸುರ।।

ಅಗಸ್ತ್ಯನು ಹೇಳಿದನು: “ಅಸುರ! ಮಹಾಸುರ! ಪ್ರತಿಯೊಬ್ಬ ರಾಜನಿಗೂ ನೀನು ಹತ್ತು ಸಹಸ್ರ ಗೋವುಗಳನ್ನು ಮತ್ತು ಅಷ್ಟೇ ಸುವರ್ಣಗಳನ್ನು ನೀಡಬೇಕೆಂದು ನೀನು ಬಯಸಿರುವೆ.

03097013a ಮಹ್ಯಂ ತತೋ ವೈ ದ್ವಿಗುಣಂ ರಥಶ್ಚೈವ ಹಿರಣ್ಮಯಃ।
03097013c ಮನೋಜವೌ ವಾಜಿನೌ ಚ ದಿತ್ಸಿತಂ ತೇ ಮಹಾಸುರ।।
03097013e ಜಿಜ್ಞಾಸ್ಯತಾಂ ರಥಃ ಸದ್ಯೋ ವ್ಯಕ್ತಮೇಷ ಹಿರಣ್ಮಯಃ।।

ಮಹಾಸುರ! ನನಗೆ ಇದರ ಎರಡು ಪಟ್ಟು ಮತ್ತು ಬಂಗಾರದ ರಥವನ್ನೂ, ಮನೋವೇಗದಲ್ಲಿ ಹೋಗುವ ಎರಡು ಕುದುರೆಗಳನ್ನೂ ನೀಡಲು ಬಯಸುತ್ತೀಯೆ. ತಕ್ಷಣವೇ ರಥವನ್ನು ಪರೀಕ್ಷಿಸು - ಅದು ಸಂಪೂರ್ಣವಾಗಿ ಬಂಗಾರದಿಂದ ಮಾಡಿರಬೇಕು.””

03097014 ಲೋಮಶ ಉವಾಚ।
03097014a ಜಿಜ್ಞಾಸ್ಯಮಾನಃ ಸ ರಥಃ ಕೌಂತೇಯಾಸೀದ್ಧಿರಣ್ಮಯಃ।
03097014c ತತಃ ಪ್ರವ್ಯಥಿತೋ ದೈತ್ಯೋ ದದಾವಭ್ಯಧಿಕಂ ವಸು।।
03097015a ವಿವಾಜಶ್ಚ ಸುವಾಜಶ್ಚ ತಸ್ಮಿನ್ಯುಕ್ತೌ ರಥೇ ಹಯೌ।

ಲೋಮಶನು ಹೇಳಿದನು: “ಕೌಂತೇಯ! ಆ ರಥವು ಸಂಪೂರ್ಣವಾಗಿ ಬಂಗಾರದಿಂದ ಮಾಡಿದುದೆಂದು ಪರೀಕ್ಷಿಸಲಾಯಿತು. ಅನಂತರ ಆ ದೈತ್ಯನು ಬಹಳ ವ್ಯಥೆಯಿಂದ ಆ ಅಧಿಕ ಸಂಪತ್ತನ್ನು ನೀಡಿದನು. ವಿವಾಜ ಮತ್ತು ಸುವಾಜ ಎಂಬ ಕುದುರೆಗಳನ್ನು ರಥಕ್ಕೆ ಕಟ್ಟಲಾಯಿತು.

03097015c ಊಹತುಸ್ತೌ ವಸೂನ್ಯಾಶು ತಾನ್ಯಗಸ್ತ್ಯಾಶ್ರಮಂ ಪ್ರತಿ।।
03097015e ಸರ್ವಾನ್ರಾಜ್ಞಃ ಸಹಾಗಸ್ತ್ಯಾನ್ನಿಮೇಷಾದಿವ ಭಾರತ।।

ಭಾರತ! ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಸಂಪತ್ತನ್ನು ಅಗಸ್ತ್ಯನ ಆಶ್ರಮಕ್ಕೆ ತರಲಾಯಿತು. ಆಗ ಅಗಸ್ತ್ಯನು ಎಲ್ಲ ರಾಜರನ್ನೂ ಬೀಳ್ಕೊಂಡನು.

03097016a ಅಗಸ್ತ್ಯೇನಾಭ್ಯನುಜ್ಞಾತಾ ಜಗ್ಮೂ ರಾಜರ್ಷಯಸ್ತದಾ।
03097016c ಕೃತವಾಂಶ್ಚ ಮುನಿಃ ಸರ್ವಂ ಲೋಪಾಮುದ್ರಾಚಿಕೀರ್ಷಿತಂ।।

ಅಗಸ್ತ್ಯನಿಂದ ಬೀಳ್ಕೊಂಡ ರಾಜರ್ಷಿಗಳು ತೆರಳಿದರು. ಮತ್ತು ಆ ಮುನಿಯು ಲೋಪಾಮುದ್ರೆಯು ಬಯಸಿದಂತೆ ಎಲ್ಲವನ್ನೂ ಮಾಡಿದನು.

03097017 ಲೋಪಾಮುದ್ರೋವಾಚ।
03097017a ಕೃತವಾನಸಿ ತತ್ಸರ್ವಂ ಭಗವನ್ಮಮ ಕಾಮ್ಕ್ಷಿತಂ।
03097017c ಉತ್ಪಾದಯ ಸಕೃನ್ಮಹ್ಯಮಪತ್ಯಂ ವೀರ್ಯವತ್ತರಂ।।

ಲೋಪಾಮುದ್ರೆಯು ಹೇಳಿದಳು: “ಭಗವನ್! ನನ್ನ ಎಲ್ಲ ಬಯಕೆಗಳನ್ನೂ ಪೂರೈಸಿದ್ದೀಯೆ. ಈಗ ಮಹಾ ವೀರ್ಯಶಾಲಿಯಾದ ಮಗನನ್ನು ನನ್ನಲ್ಲಿ ಹುಟ್ಟಿಸು.”

03097018 ಅಗಸ್ತ್ಯ ಉವಾಚ।
03097018a ತುಷ್ಟೋಽಹಮಸ್ಮಿ ಕಲ್ಯಾಣಿ ತವ ವೃತ್ತೇನ ಶೋಭನೇ।
03097018c ವಿಚಾರಣಾಮಪತ್ಯೇ ತು ತವ ವಕ್ಷ್ಯಾಮಿ ತಾಂ ಶೃಣು।।

ಅಗಸ್ತ್ಯನು ಹೇಳಿದನು: “ಕಲ್ಯಾಣಿ! ಶೋಭನೇ! ನಿನ್ನ ನಡವಳಿಕೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನ ಸಂತಾನದ ಕುರಿತು ನಾನು ಏನನ್ನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಹೇಳುತ್ತೇನೆ. ಕೇಳು.

03097019a ಸಹಸ್ರಂ ತೇಽಸ್ತು ಪುತ್ರಾಣಾಂ ಶತಂ ವಾ ದಶಸಮ್ಮಿತಂ।
03097019c ದಶ ವಾ ಶತತುಲ್ಯಾಃ ಸ್ಯುರೇಕೋ ವಾಪಿ ಸಹಸ್ರವತ್।।

ನೀನು ಒಂದು ಸಾವಿರ ಪುತ್ರರನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ಹತ್ತು ಮಕ್ಕಳಿಗೆ ಸಮರಾದ ನೂರು ಮಕ್ಕಳನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ನೂರು ಮಕ್ಕಳಿಗೆ ಸಮನಾದ ಹತ್ತು ಮಕ್ಕಳನ್ನು ಬಯಸುತ್ತೀಯಾ ಅಥವಾ ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಮಗನನ್ನು ಬಯಸುತ್ತೀಯಾ?”

03097020 ಲೋಪಾಮುದ್ರೋವಾಚ।
03097020a ಸಹಸ್ರಸಮ್ಮಿತಃ ಪುತ್ರ ಏಕೋ ಮೇಽಸ್ತು ತಪೋಧನ।
03097020c ಏಕೋ ಹಿ ಬಹುಭಿಃ ಶ್ರೇಯಾನ್ವಿದ್ವಾನ್ಸಾಧುರಸಾಧುಭಿಃ।।

ಲೋಪಾಮುದ್ರೆಯು ಹೇಳಿದಳು: “ತಪೋಧನ! ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಪುತ್ರನು ಬೇಕು. ಒಳ್ಳೆಯತನವಿರುವ ಸಹಸ್ರಾರು ಮಕ್ಕಳಿಗಿಂತ ವಿದ್ವಾಂಸನೂ ಸಾಧುವೂ ಆದ ಒಬ್ಬನೇ ಮಗನು ಶ್ರೇಯಸ್ಕರ.””

03097021 ಲೋಮಶ ಉವಾಚ।
03097021a ಸ ತಥೇತಿ ಪ್ರತಿಜ್ಞಾಯ ತಯಾ ಸಮಭವನ್ಮುನಿಃ।
03097021c ಸಮಯೇ ಸಮಶೀಲಿನ್ಯಾ ಶ್ರದ್ಧಾವಾಂ ಶ್ರದ್ದಧಾನಯಾ।।

ಲೋಮಶನು ಹೇಳಿದನು: “ಹಾಗೆಯೇ ಆಗಲಿ ಎಂದು ಮಾತುಕೊಟ್ಟ ಮುನಿಯು ಸರಿಯಾದ ಸಮಯದಲ್ಲಿ ಶ್ರದ್ಧಾವಂತನಾಗಿ ಶ್ರದ್ಧಾವಂತ ಸಮಶೀಲೆಯೊಡನೆ ಕೂಡಿದನು.

03097022a ತತ ಆಧಾಯ ಗರ್ಭಂ ತಮಗಮದ್ವನಮೇವ ಸಃ।
03097022c ತಸ್ಮಿನ್ವನಗತೇ ಗರ್ಭೋ ವವೃಧೇ ಸಪ್ತ ಶಾರದಾನ್।।
03097023a ಸಪ್ತಮೇಽಬ್ಧೇ ಗತೇ ಚಾಪಿ ಪ್ರಾಚ್ಯವತ್ಸ ಮಹಾಕವಿಃ।
03097023c ಜ್ವಲನ್ನಿವ ಪ್ರಭಾವೇನ ದೃಢಸ್ಯುರ್ನಾಮ ಭಾರತ।।
03097023e ಸಾಂಗೋಪನಿಷದಾನ್ವೇದಾಂ ಜಪನ್ನೇವ ಮಹಾಯಶಾಃ।
03097024a ತಸ್ಯ ಪುತ್ರೋಽಭವದೃಷೇಃ ಸ ತೇಜಸ್ವೀ ಮಹಾನೃಷಿಃ।।

ಗರ್ಭವನ್ನು ನೀಡಿ ಅವನು ವನವನ್ನು ಸೇರಿದನು. ಅವನು ವನಕ್ಕೆ ಹೋಗಲು, ಗರ್ಭವು ಏಳು ವರ್ಷಗಳ ಪರ್ಯಂತ ಬೆಳೆಯಿತು. ಭಾರತ! ಏಳು ವರ್ಷಗಳು ಕಳೆದ ನಂತರ ದೃಡಸ್ಯು ಎಂಬ ಹೆಸರಿನ ಶಕ್ತಿಯಿಂದ ಉರಿಯುತ್ತಿರುವ ಮಹಾಕವಿಯು, ಉಪನಿಷತ್ತುಗಳ ಜೊತೆ ಮಹಾಯಶ ವೇದಗಳನ್ನು ಜಪಿಸುತ್ತಾ ಜನಿಸಿದನು. ಆ ತೇಜಸ್ವಿ ಮಹಾನೃಷಿಯು ಅಗಸ್ತ್ಯನ ಮಗನಾದನು.

03097024c ಸ ಬಾಲ ಏವ ತೇಜಸ್ವೀ ಪಿತುಸ್ತಸ್ಯ ನಿವೇಶನೇ।
03097024e ಇಧ್ಮಾನಾಂ ಭಾರಮಾಜಹ್ರೇ ಇಧ್ಮವಾಹಸ್ತತೋಽಭವತ್।।

ಬಾಲಕನಾಗಿದ್ದಾಗಲೇ ಆ ತೇಜಸ್ವಿಯು ತನ್ನ ತಂದೆಯ ಮನೆಯಲ್ಲಿ ಭಾರವಾದ ಇಂಧನಗಳನ್ನು ಹೊತ್ತು ತರುತ್ತಿರುವುದರಿಂದ ಅವನು ಇಧ್ಮವಾಹನೆಂದು ಕರೆಯಲ್ಪಟ್ಟನು.

03097025a ತಥಾಯುಕ್ತಂ ಚ ತಂ ದೃಷ್ಟ್ವಾ ಮುಮುದೇ ಸ ಮುನಿಸ್ತದಾ।
03097025c ಲೇಭಿರೇ ಪಿತರಶ್ಚಾಸ್ಯ ಲೋಕಾನ್ರಾಜನ್ಯಥೇಪ್ಸಿತಾನ್।।

ಈ ರೀತಿ ಸಮರ್ಥನಾಗಿರುವ ಮಗನನ್ನು ನೋಡಿ ಮುನಿಯು ಸಂತೋಷಗೊಂಡನು. ರಾಜನ್! ಹೀಗೆ ಅವನ ಪಿತೃಗಳು ಅವರು ಬಯಸಿದ ಲೋಕಗಳನ್ನು ಪಡೆದರು.

03097026a ಅಗಸ್ತ್ಯಸ್ಯಾಶ್ರಮಃ ಖ್ಯಾತಃ ಸರ್ವರ್ತುಕುಸುಮಾನ್ವಿತಃ।
03097026c ಪ್ರಾಹ್ರಾದಿರೇವಂ ವಾತಾಪಿರಗಸ್ತ್ಯೇನ ವಿನಾಶಿತಃ।।

ಇದು ಖ್ಯಾತ ಅಗಸ್ತನ ಆಶ್ರಮ. ಇಲ್ಲಿ ಸರ್ವ ಋತುಗಳಲ್ಲಿ ಹೂವುಗಳು ಅರಳುತ್ತವೆ. ಈ ರೀತಿಯಲ್ಲಿ ಅಗಸ್ತನಿಂದ ವಾತಾಪಿಯು ನಾಶಗೊಂಡನು ಎಂದು ಹೇಳುತ್ತಾರೆ.

03097027a ತಸ್ಯಾಯಮಾಶ್ರಮೋ ರಾಜನ್ರಮಣೀಯೋ ಗುಣೈರ್ಯುತಃ।
03097027c ಏಷಾ ಭಾಗೀರಥೀ ಪುಣ್ಯಾ ಯಥೇಷ್ಟಮವಗಾಹ್ಯತಾಂ।।

ರಾಜನ್! ಅವನ ಆಶ್ರಮವು ರಮಣೀಯವೂ, ವಿಶಿಷ್ಠವೂ ಆಗಿದೆ. ಇದೇ ಪುಣ್ಯ ಭಾಗೀರಥೀ ನದಿ. ಇಲ್ಲಿ ನಿನಗಿಷ್ಟವಾದಷ್ಟು ಸ್ನಾನಮಾಡಬಹುದು1.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಸಪ್ತನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತೇಳನೆಯ ಅಧ್ಯಾಯವು.


  1. ಈ ಶ್ಲೋಕದ ನಂತರ ಗೋರಖಪುರ ಸಂಪುಟದಲ್ಲಿ 40 ಶ್ಲೋಕಗಳಲ್ಲಿ ಜಾಮದಗ್ನಿ ರಾಮನ ತೇಜೋವಧೆಯ ಕುರಿತಾದ ಕಥೆಯಿದೆ. ಪುಣೆಯ ಸಂಪುಟದಲ್ಲಿ ಸೇರಿಸಿಲ್ಲದಿರುವ ಈ ಶ್ಲೋಕಗಳನ್ನು ಅನುಬಂಧ 3ರಲ್ಲಿ ನೀಡಲಾಗಿದೆ. ↩︎