096 ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 96

ಸಾರ

ಧನವನ್ನು ಕೇಳಿಕೊಂಡು ಅಗಸ್ತ್ಯನು ರಾಜ ಶ್ರುತರ್ವಾಣನಲ್ಲಿಗೆ ಹೋದುದು (1-6). ಅವನಲ್ಲಿ ಸಾಕಷ್ಟು ಧನವಿಲ್ಲವೆಂದು ಅವನನ್ನೂ ಕರೆದುಕೊಂಡು ಧನವನ್ನರಸಿ ರಾಜ ವರ್ಧ್ರಶ್ವನಲ್ಲಿಗೆ ಹೋದುದು (7-11). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು, ಶ್ರುತರ್ವಾಣ ಮತ್ತು ವರ್ಧ್ರಶ್ವನನ್ನು ಕರೆದುಕೊಂಡು ಅಗಸ್ತ್ಯನು ರಾಜ ತ್ರಸದಸ್ಯನಲ್ಲಿಗೆ ಹೋದುದು (12-17). ಅವನಲ್ಲಿಯೂ ಸಾಕಷ್ಟು ಧನವಿಲ್ಲವೆಂದು ತಿಳಿದು, ನಾಲ್ವರೂ ಇಲ್ವಲನಲ್ಲಿಗೆ ಹೋದುದು (18-20).

03096001 ಲೋಮಶ ಉವಾಚ।
03096001a ತತೋ ಜಗಾಮ ಕೌರವ್ಯ ಸೋಽಗಸ್ತ್ಯೋ ಭಿಕ್ಷಿತುಂ ವಸು।
03096001c ಶ್ರುತರ್ವಾಣಂ ಮಹೀಪಾಲಂ ಯಂ ವೇದಾಭ್ಯಧಿಕಂ ನೃಪೈಃ।।

ಲೋಮಶನು ಹೇಳಿದನು: “ಕೌರವ್ಯ! ಅನಂತರ ಅಗಸ್ತ್ಯನು ಸಂಪತ್ತನ್ನು ಕೇಳಿಕೊಂಡು ಇವನಲ್ಲಿ ಇತರ ರಾಜರುಗಳಿಗಿಂತ ಹೆಚ್ಚು ಧನವಿದೆ ಎಂದು ತಿಳಿದು, ಮಹೀಪಾಲ ಶ್ರುತರ್ವಾಣನಲ್ಲಿಗೆ ಹೋದನು.

03096002a ಸ ವಿದಿತ್ವಾ ತು ನೃಪತಿಃ ಕುಂಭಯೋನಿಮುಪಾಗಮತ್।
03096002c ವಿಷಯಾಂತೇ ಸಹಾಮಾತ್ಯಃ ಪ್ರತ್ಯಗೃಹ್ಣಾತ್ಸುಸತ್ಕೃತಂ।।

ಕುಂಭಯೋನಿಯಲ್ಲಿ ಹುಟ್ಟಿದ್ದ ಅವನು ಬಂದಿದ್ದಾನೆಂದು ತಿಳಿದ ನೃಪತಿಯು ತನ್ನ ದೇಶದ ಗಡಿಗೆ ಅಮಾತ್ಯರೊಂದಿಗೆ ಬಂದು ಅವನನ್ನು ಚೆನ್ನಾಗಿ ಸತ್ಕರಿಸಿ ಬರಮಾಡಿಕೊಂಡನು.

03096003a ತಸ್ಮೈ ಚಾರ್ಘ್ಯಂ ಯಥಾನ್ಯಾಯಮಾನೀಯ ಪೃಥಿವೀಪತಿಃ।
03096003c ಪ್ರಾಂಜಲಿಃ ಪ್ರಯತೋ ಭೂತ್ವಾ ಪಪ್ರಚ್ಚಾಗಮನೇಽರ್ಥಿತಾಂ।।

ಅವನಿಗೆ ಯಥಾವಿಧಿಯಾಗಿ ಅರ್ಘ್ಯವನ್ನಿತ್ತ ನಂತರ ಪೃಥಿವೀಪತಿಯು ಅಂಜಲೀ ಬದ್ಧನಾಗಿ, ತಲೆಬಾಗಿ, ಅವನ ಆಗಮನದ ಕಾರಣವನ್ನು ಕೇಳಿದನು.

03096004 ಅಗಸ್ತ್ಯ ಉವಾಚ।
03096004a ವಿತ್ತಾರ್ಥಿನಮನುಪ್ರಾಪ್ತಂ ವಿದ್ಧಿ ಮಾಂ ಪೃಥಿವೀಪತೇ।
03096004c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ಮೇ।।

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ವಿತ್ತವನ್ನು ಪಡೆಯಲೋಸುಗ ನಾನು ಬಂದಿದ್ದೇನೆ ಎಂದು ತಿಳಿ. ಇನ್ನೊಬ್ಬರಿಗೆ ಕಡಿಮೆಯಾಗದಂತೆ, ಅದರಲ್ಲಿಯ ಭಾಗವನ್ನು ನನಗೆ ಕೊಡು.””

03096005 ಲೋಮಶ ಉವಾಚ।
03096005a ತತ ಆಯವ್ಯಯೌ ಪೂರ್ಣೌ ತಸ್ಮೈ ರಾಜಾ ನ್ಯವೇದಯತ್।
03096005c ಅತೋ ವಿದ್ವನ್ನುಪಾದತ್ಸ್ವ ಯದತ್ರ ವಸು ಮನ್ಯಸೇ।।

ಲೋಮಶನು ಹೇಳಿದನು: “ಆಗ ರಾಜನು ಅವನಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, ನಿವೇದಿಸಿದನು: “ಈಗ ನಿನಗೆ ತಿಳಿದಿದೆ. ಇದರಲ್ಲಿ ನಿನಗೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೋ!”

03096006a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ।
03096006c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ।।

ಅವನ ಆದಾಯ ವೆಚ್ಛಗಳು ಸರಿಸಮನಾಗಿವೆ ಎಂದು ನೋಡಿದ ಸಮಮತಿ ದ್ವಿಜನು ಏನನ್ನೂ ತೆಗೆದೊಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನೊಡ್ಡಿದ ಹಾಗೆ ಎಂದು ಯೋಚಿಸಿದನು.

03096007a ಸ ಶ್ರುತರ್ವಾಣಮಾದಾಯ ವಧ್ರ್ಯಶ್ವಮಗಮತ್ತತಃ।
03096007c ಸ ಚ ತೌ ವಿಷಯಸ್ಯಾಂತೇ ಪ್ರತ್ಯಗೃಹ್ಣಾದ್ಯಥಾವಿಧಿ।।

ಅವನು ಶ್ರುತರ್ವಾಣನನ್ನೂ ಕರೆದುಕೊಂಡು ವಧ್ರ್ಯಶ್ವನಲ್ಲಿಗೆ ಹೋದನು. ಅವರೀರ್ವರನ್ನೂ ಅವನು ತನ್ನ ದೇಶದ ಗಡಿಯಲ್ಲಿ ಯಥಾವಿಧಿಯಾಗಿ ಸ್ವಾಗತಿಸಿದನು.

03096008a ತಯೋರರ್ಘ್ಯಂ ಚ ಪಾದ್ಯಂ ಚ ವಧ್ರ್ಯಶ್ವಃ ಪ್ರತ್ಯವೇದಯತ್।
03096008c ಅನುಜ್ಞಾಪ್ಯ ಚ ಪಪ್ರಚ್ಚ ಪ್ರಯೋಜನಮುಪಕ್ರಮೇ।।

ವದ್ರ್ಯಶ್ವನು ಅವನಿಗೆ ಅರ್ಘ್ಯ ಪಾದ್ಯಗಳನ್ನು ನೀಡಿದ ನಂತರ ಅವನು “ಬಂದ ಕಾರಣದ ಕುರಿತು ಅಪ್ಪಣೆಯಾಗಬೇಕು!” ಎಂದು ಕೇಳಿಕೊಂಡನು.

03096009 ಅಗಸ್ತ್ಯ ಉವಾಚ।
03096009a ವಿತ್ತಕಾಮಾವಿಹ ಪ್ರಾಪ್ತೌ ವಿದ್ಧ್ಯಾವಾಂ ಪೃಥಿವೀಪತೇ।
03096009c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನೌ।।

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ವಿತ್ತವನ್ನು ಬಯಸಿ ನಾವಿಬ್ಬರೂ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿ. ಇನ್ನೊಬ್ಬರಿಗೆ ಕಷ್ಟವಾಗದ ರೀತಿಯಲ್ಲಿ ನಿನ್ನ ಸಂಪತ್ತಿನ ಭಾಗವನ್ನು ನಮಗೆ ನೀಡು.””

03096010 ಲೋಮಶ ಉವಾಚ।
03096010a ತತ ಆಯವ್ಯಯೌ ಪೂರ್ಣೌ ತಾಭ್ಯಾಂ ರಾಜಾ ನ್ಯವೇದಯತ್।
03096010c ತತೋ ಜ್ಞಾತ್ವಾ ಸಮಾದತ್ತಾಂ ಯದತ್ರ ವ್ಯತಿರಿಚ್ಯತೇ।।

ಲೋಮಶನು ಹೇಳಿದನು: “ಆಗ ರಾಜನು ಇಬ್ಬರಿಗೂ ತನ್ನ ಆದಾಯ ವೆಚ್ಚಗಳ ಕುರಿತು ಹೇಳಿ, “ಇದನ್ನು ತಿಳಿದ ನೀವು ಉಳಿದಿದ್ದನ್ನು ತೆಗೆದುಕೊಂಡು ಹೋಗಿ” ಎಂದನು.

03096011a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ।
03096011c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ।।

ಆಯವ್ಯಯಗಳು ಸಮನಾಗಿವೆ ಎಂದು ನೋಡಿದ ಆ ಸಮಮತಿ ದ್ವಿಜನು ಏನನ್ನು ತೆಗೆದುಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನು ಕೊಟ್ಟಹಾಗೆ ಎಂದು ಯೋಚಿಸಿದನು.

03096012a ಪೌರುಕುತ್ಸಂ ತತೋ ಜಗ್ಮುಸ್ತ್ರಸದಸ್ಯುಂ ಮಹಾಧನಂ।
03096012c ಅಗಸ್ತ್ಯಶ್ಚ ಶ್ರುತರ್ವಾ ಚ ವಧ್ರ್ಯಶ್ವಶ್ಚ ಮಹೀಪತಿಃ।।

ಅನಂತರ ಅಗಸ್ತ್ಯ, ಶ್ರುತರ್ವ ಮತ್ತು ವಧ್ರ್ಯಶ್ವ ಮೂವರೂ ಮಹಾಧನಿ ಮಹೀಪತಿ ಪೌರುಕುತ್ಸ ತ್ರಸದಸ್ಯನಲ್ಲಿಗೆ ಹೋದರು.

03096013a ತ್ರಸದಸ್ಯುಶ್ಚ ತಾನ್ಸರ್ವಾನ್ಪ್ರತ್ಯಗೃಹ್ಣಾದ್ಯಥಾವಿಧಿ।
03096013c ಅಭಿಗಮ್ಯ ಮಹಾರಾಜ ವಿಷಯಾಂತೇ ಸವಾಹನಃ।।

ಮಹಾರಾಜ ತ್ರಸದಸ್ಯುವು ವಾಹನವನ್ನೇರಿ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರೆಲ್ಲರನ್ನೂ ಯಥಾವಿಧಿಯಾಗಿ ಬರಮಾಡಿಕೊಂಡನು.

03096014a ಅರ್ಚಯಿತ್ವಾ ಯಥಾನ್ಯಾಯಮಿಕ್ಷ್ವಾಕೂ ರಾಜಸತ್ತಮಃ।
03096014c ಸಮಾಶ್ವಸ್ತಾಂಸ್ತತೋಽಪೃಚ್ಚತ್ಪ್ರಯೋಜನಮುಪಕ್ರಮೇ।।

ಆ ಇಕ್ಷ್ವಾಕು ರಾಜಸತ್ತಮನು ಯಥಾನ್ಯಾಯವಾಗಿ ಪೂಜಿಸಿದನು. ಅವರೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಅವರ ಬರವಿನ ಕಾರಣವನ್ನು ಕೇಳಿದನು.

03096015 ಅಗಸ್ತ್ಯ ಉವಾಚ।
03096015a ವಿತ್ತಕಾಮಾನಿಹ ಪ್ರಾಪ್ತಾನ್ವಿದ್ಧಿ ನಃ ಪೃಥಿವೀಪತೇ।
03096015c ಯಥಾಶಕ್ತ್ಯವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಚ ನಃ।।

ಅಗಸ್ತ್ಯನು ಹೇಳಿದನು: “ಪೃಥಿವೀಪತೇ! ನಾವು ಇಲ್ಲಿಗೆ ಸಂಪತ್ತನ್ನು ಅರಸಿ ಬಂದಿದ್ದೇವೆ ಎಂದು ತಿಳಿ. ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ನಮಗೆ ನಿನ್ನ ಸಂಪತ್ತಿನ ಭಾಗವನ್ನು ನೀಡು.””

03096016 ಲೋಮಶ ಉವಾಚ।
03096016a ತತ ಆಯವ್ಯಯೌ ಪೂರ್ಣೌ ತೇಷಾಂ ರಾಜಾ ನ್ಯವೇದಯತ್।
03096016c ಅತೋ ಜ್ಞಾತ್ವಾ ಸಮಾದದ್ಧ್ವಂ ಯದತ್ರ ವ್ಯತಿರಿಚ್ಯತೇ।।

ಲೋಮಶನು ಹೇಳಿದನು: “ಅನಂತರ ರಾಜನು ಅವರಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, “ಇದನ್ನು ತಿಳಿದ ನೀವು ಉಳಿದಿದ್ದುದನ್ನು ತೆಗೆದುಕೊಂಡು ಹೋಗಿ” ಎಂದು ನಿವೇದಿಸಿದನು.

03096017a ತತ ಆಯವ್ಯಯೌ ದೃಷ್ಟ್ವಾ ಸಮೌ ಸಮಮತಿರ್ದ್ವಿಜಃ।
03096017c ಸರ್ವಥಾ ಪ್ರಾಣಿನಾಂ ಪೀಡಾಮುಪಾದಾನಾದಮನ್ಯತ।।

ಆದಾಯ-ವೆಚ್ಚಗಳು ಸರಿಸಮವಾಗಿರುವುದನ್ನು ನೋಡಿದ ಆ ಸಮಮತಿ ದ್ವಿಜನು ಏನನ್ನೂ ತೆಗೆದುಕೊಂಡರೂ ಅದು ಇತರರಿಗೆ ಕಷ್ವವನ್ನು ತರುತ್ತದೆ ಎಂದು ತಿಳಿದನು.

03096018a ತತಃ ಸರ್ವೇ ಸಮೇತ್ಯಾಥ ತೇ ನೃಪಾಸ್ತಂ ಮಹಾಮುನಿಂ।
03096018c ಇದಮೂಚುರ್ಮಹಾರಾಜ ಸಮವೇಕ್ಷ್ಯ ಪರಸ್ಪರಂ।।

ಮಹಾರಾಜ! ಆಗ ಎಲ್ಲ ರಾಜರೂ ಪರಸ್ಪರರನ್ನು ನೋಡಿ, ಆ ಮಹಾಮುನಿಗೆ ಹೇಳಿದರು:

03096019a ಅಯಂ ವೈ ದಾನವೋ ಬ್ರಹ್ಮನ್ನಿಲ್ವಲೋ ವಸುಮಾನ್ಭುವಿ।
03096019c ತಮಭಿಕ್ರಮ್ಯ ಸರ್ವೇಽದ್ಯ ವಯಂ ಯಾಚಾಮಹೇ ವಸು।।

“ಬ್ರಹ್ಮನ್! ಈ ಭುವಿಯಲ್ಲಿ ಮಹಾ ಧನವನ್ನು ಹೊಂದಿದ ಇಲ್ವಲ ಎನ್ನುವ ದಾನವನಿದ್ದಾನೆ. ನಾವೆಲ್ಲರೂ ಅವನಲ್ಲಿಗೆ ಹೋಗಿ ಹಣವನ್ನು ಕೇಳೋಣ!”

03096020a ತೇಷಾಂ ತದಾಸೀದ್ರುಚಿತಮಿಲ್ವಲಸ್ಯೋಪಭಿಕ್ಷಣಂ।
03096020c ತತಸ್ತೇ ಸಹಿತಾ ರಾಜನ್ನಿಲ್ವಲಂ ಸಮುಪಾದ್ರವನ್।।

ರಾಜನ್! ಅವರೆಲ್ಲರೂ ಇಲ್ವಲನಲ್ಲಿಗೆ ಹೋಗಿ ಧನವನ್ನು ಕೇಳುವುದು ಸರಿಯೆಂದು ಯೋಚಿಸಿ, ಒಟ್ಟಿಗೇ ಇಲ್ವಲನಲ್ಲಿಗೆ ಪ್ರಯಾಣ ಬೆಳೆಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಷಣ್ಣಾತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ತಾರನೆಯ ಅಧ್ಯಾಯವು.